ಮಹಿಳೆಯರ ಸ್ವಾವಲಂಬನೆಯಡೆಗೆ ಉಚಿತ ಬಸ್ ಪ್ರಯಾಣ

ಮಂಜುನಾಥ ದಾಸನಪುರ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಮಹಿಳಾ ಸಮುದಾಯಕ್ಕೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. ಈ ಬಗ್ಗೆ ಮಹಿಳಾ ಸಮುದಾಯ, ಪ್ರಗತಿಪರ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು ಇದೊಂದು ಕ್ರಾಂತಿಕಾರಕ ನಡೆಯೆಂದು ಮೆಚ್ಚುಗೆ, ಶ್ಲಾಘನೆ ವ್ಯಕ್ತಪಡಿಸಿವೆ. ಉಚಿತ ಪ್ರಯಾಣದಿಂದ ಮಹಿಳೆಯರಲ್ಲಿ ಉದ್ಯೋಗದ ಸಾಮರ್ಥ್ಯ ಹಾಗೂ ಉದ್ಯೋಗ ಹೆಚ್ಚಳಕ್ಕೂ ದಾರಿಯಾಗಲಿದೆ ಎಂಬುದರ ಬಗ್ಗೆ ವಿಶ್ಲೇಷಣೆಗಳು ನಡೆಯುತ್ತಿವೆ.

ಹೌದು, ನಮ್ಮ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಎರಡನೆ ದರ್ಜೆಯಾಗಿರುವ ಮಹಿಳಾ ಸಮುದಾಯವನ್ನು ಮನೆ ಅದರಲ್ಲೂ ಹೆಚ್ಚಿನ ಭಾಗ ಅಡುಗೆ ಮನೆಯ ಚೌಕಟ್ಟಿನಲ್ಲಿಯೇ ಬಂಧಿಸಿಡಲಾಗಿದೆ. ಆದರೆ, ಆಧುನಿಕ, ನಗರೀಕರಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರೂಪಿಸಿದ ಸಂವಿಧಾನದ ಆಶಯಗಳ ಪ್ರತಿಫಲವಾಗಿ ಮಹಿಳಾ ಸಮುದಾಯ ಚೌಕಟ್ಟುಗಳನ್ನು ಮೀರಿ ಸ್ವಾಭಿಮಾನಿಯೆಡೆಗೆ ದಾಪುಗಾಲು ಇಡುತ್ತಿದ್ದಾಳೆ. ಈಗ ಎಲ್ಲ ಕ್ಷೇತ್ರಗಳಲ್ಲಿ ಮಹಿಳಾ ಸಮುದಾಯದ ಪಾಲ್ಗೊಳ್ಳುವಿಕೆ ನಿಧಾನ ಗತಿಯಲ್ಲಾದರು ನಿರಂತರವಾಗಿ ನಡೆಯುತ್ತಿದೆ ಎಂಬುದು ಆಶಾದಾಯಕ ಬೆಳವಣಿಗೆಯಾಗಿದೆ.

ಇದನ್ನೂ ಓದಿ:ಜೂನ್‌ 01 ರಿಂದ ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ – ರಾಮಲಿಂಗಾರೆಡ್ಡಿ ಭರವಸೆ

ಸಮಾಜದಲ್ಲಿ ಮಹಿಳಾ ಸಮುದಾಯದ ಮೇಲ್ಮುಖ ಚಲನೆಯು ಸಂತಸದ ತರುವ ವಿಷಯವಾದರೂ ಇದರಲ್ಲಿ ದಲಿತ, ಗ್ರಾಮೀಣ ಮಹಿಳೆಯರ ಪಾಲ್ಗೊಳ್ಳುವಿಕೆ ಎಷ್ಟರ ಮಟ್ಟಿಗೆ ಇದೆ ಎಂಬುದು ಪ್ರಶ್ನಾರ್ಹವಾಗಿದೆ. ಇವತ್ತು ನಮ್ಮ ನಡುವೆ ಅತ್ಯಂತ ಶ್ರಮಧಾಯಕ ಕೆಲಸದಲ್ಲಿ ತೊಡಗಿರುವವರು ದಲಿತ, ಗ್ರಾಮೀಣ ಮಹಿಳೆಯರೇ ಆಗಿದ್ದಾರೆ. ಅದು ಕಟ್ಟಡ ನಿರ್ಮಾಣ ಇರಬಹುದು, ಪೌರಕಾರ್ಮಿಕ ಮಹಿಳೆಯಾಗಿ, ಗಾರ್ಮೆಂಟ್ಸ್ ಮಹಿಳೆಯಾಗಿ, ಮನೆ ಕೆಲಸ, ಅಡಿಗೆ ಕೆಲಸದಾಕೆಯಾಗಿ ಅಪಾರವಾದ ದೈಹಿಕ ಹಾಗೂ ಮಾನಸಿಕ ಶ್ರಮವನ್ನು ಬೇಡುವ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಶ್ರಮದಾಯಕ ಮಹಿಳೆಯರ ಸಾಮರ್ಥ್ಯ ಹೆಚ್ಚಳ

ನಮ್ಮ ಸಮಾಜದಲ್ಲಿ ಮಹಿಳಾ ಸಮುದಾಯ ಮಾಡುವ ಶ್ರಮದಾಯಕ ಕೆಲಸಗಳಿಗೆ ವೇತನ ಕಡಿಮೆಯಿದೆ. ಉದಾಹರಣೆ ಕೊಡುವುದಾದರೆ ಮನೆ ಹಾಗೂ ಅಡಿಗೆ ಕೆಲಸದಲ್ಲಿ ತೊಡಗಿರುವ ಬೆಂಗಳೂರಿನ ಗಾಯತ್ರಿನಗರದ ನಿವಾಸಿ ಮಂಜುಳಾ ಅವರು, ತನ್ನ ಮನೆಯಿಂದ ಮಲ್ಲೇಶ್ವರಂ ೧೮ನೇ ರಸ್ತೆಯಲ್ಲಿರುವ ಮನೆಯೊಂದಕ್ಕೆ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ನಡೆದುಕೊಂಡು ಹೋಗಿ ಅಡುಗೆ ಮಾಡಿಕೊಟ್ಟು ಬರುತ್ತಾರೆ. ಅವರಿಗೆ ಕೊಡುವ ವೇತನ ತಿಂಗಳಿಗೆ ಆರು ಸಾವಿರ. ಈಗ ರಾಜ್ಯ ಸರ್ಕಾರ ಜಾರಿ ಮಾಡಿರುವ ಉಚಿತ ಬಸ್ ಪ್ರಯಾಣದ ಕಾರ್ಯಕ್ರಮವು ಇವರಿಗೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ.
ಉಚಿತ ಬಸ್ ಪ್ರಯಾಣದ ಯೋಜನೆಯ ಕುರಿತು ಮಂಜುಳಾ ಅವರನ್ನು ಮಾತನಾಡಿಸಿದಾಗ, ಉಚಿತ ಬಸ್ ಪ್ರಯಾಣದಿಂದ ನನ್ನಂತೆ ಮನೆಕೆಲಸ, ಅಡುಗೆ ಕೆಲಸದಲ್ಲಿ ತೊಡಗಿರುವವರಿಗೆ ಸಾಕಷ್ಟು ಅನುಕೂಲವಾಗಲಿದೆ. ಈಗ ಗಾಯತ್ರಿನಗರದಿಂದ ನಾನು ಕೆಲಸ ಮಾಡುವ ಮಲ್ಲೇಶ್ವರಂ ೧೮ನೇ ಕ್ರಾಸ್‌ನಲ್ಲಿರುವ ಮನೆಗೆ ಬಸ್‌ನಲ್ಲಿ ಹೋಗುತ್ತೇನೆ. ಇದರಿಂದ ಸಮಯ ಹಾಗೂ ಆಯಾಸ ತಪ್ಪುತ್ತದೆ. ಆ ಮನೆಯಲ್ಲಿ ಚಕ ಚಕನೆ ಅಡುಗೆ ಮಾಡಿ ಮುಗಿಸಲು ಸಾಧ್ಯವಾಗುತ್ತದೆ. ಇದರಿಂದ ನಾನು ಮತ್ತೊಂದು ಮನೆಯಲ್ಲಿ ಅಡುಗೆ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದೇನೆ. ಇದರಿಂದ ನನಗೆ ತಿಂಗಳ ಸಂಪಾದನೆಯು ಹೆಚ್ಚುತ್ತದೆ ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ಇವರಂತೆಯೇ ಪೌರಕಾರ್ಮಿಕ ಮಹಿಳೆಯರು ಬಹುತೇಕವಾಗಿ ತಮ್ಮ ಮನೆಗಳಿಂದ ತಾವು ಕೆಲಸ ಮಾಡುವ ಸ್ಥಳಗಳಿಗೆ ನಡೆದುಕೊಂಡೇ ಹೋಗಿ ಕೆಲಸ ಮಾಡಿ ಬರುತ್ತಾರೆ. ಇದರಿಂದಾಗಿ ಅವರು ತಮ್ಮ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಊಟ ಉಪಚಾರ ಮಾಡಿಕೊಡದೆ ಬೆಳ್ಳಂಬೆಳಗೆಯೇ ಬಹುಬೇಗನೆ ಮನೆ ಬೀಡಬೇಕಾಗುತ್ತಿತ್ತು. ಹಾಗೂ ಕೆಲಸ ಮುಗಿಸಿ ಮನೆ ತಲುಪಲು ಸಹ ವಿಳಂಬವಾಗುತ್ತಿತ್ತು. ಉಚಿತ ಬಸ್ ಪ್ರಯಾಣದಿಂದ ಬೆಳಗ್ಗೆ ತಮ್ಮ ಮನೆಯ ಕೆಲಸಗಳನ್ನು ಮುಗಿಸಿಕೊಂಡು ನಿರಾಳವಾಗಿ ಬರಬಹುದು. ಹಾಗೂ ಕೆಲಸ ಮುಗಿಸಿದ ತಕ್ಷಣ ಬೇಗನೆ ಮನೆಗೆ ತಲುಪಬಹುದಾಗಿದೆ. ಪೌರಕಾರ್ಮಿಕ ಮಹಿಳೆಯರು ತಮ್ಮ ಉಳಿದ ಸಮಯವನ್ನು ಮತ್ತೊಂದು ಕೆಲಸದಲ್ಲಿ ತೊಡಗಿ ಆದಾಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ಇನ್ನು ಗಾರ್ಮೆಂಟ್ಸ್ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಾರ್ಯಕ್ರಮ ಸಾಕಷ್ಟು ಅನುಕೂಲಕರವಾಗಲಿದೆ. ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಶೇ.80ಕ್ಕಿಂತಲೂ ಹೆಚ್ಚು ಮಂದಿ ಹೊರ ಜಿಲ್ಲೆ, ಹೊರ ರಾಜ್ಯಗಳ ಮಹಿಳೆಯರೇ ಆಗಿದ್ದಾರೆ. ಅವ್ರು ಸಾಕಷ್ಟು ಕನಸುಗಳನ್ನು ಹೊತ್ತು ಕಾರ್ಖಾನೆಗಳಲ್ಲಿ ದುಡಿಯುತ್ತಿರುತ್ತಾರೆ. ಅವರಿಗೆ ಒಂದೊಂದು ರೂಪಾಯಿ ಸಹ ಅಮೂಲ್ಯವಾಗಿರುತ್ತದೆ. ಹಾಗಾಗಿಯೇ ಅವರು ತಮ್ಮ ಕಾರ್ಖಾನೆಗಳಿಂದ ಒಂದೆರಡು ಕಿಮೀ ಆಸುಪಾಸಿನಲ್ಲಿಯೇ ಮನೆ ಮಾಡಿಕೊಂಡು ಪ್ರತಿದಿನ ನಡೆದುಕೊಂಡೇ ಕೆಲಸಕ್ಕೆ ಬಂದು ಹೋಗುತ್ತಾರೆ.
ಗಾರ್ಮೆಂಟ್ಸ್ ಕಂಪೆನಿಗಳ ಸುತ್ತಮುತ್ತಲ ಪ್ರದೇಶದಲ್ಲಿ ಪ್ರತಿದಿನ ಬೆಳಗ್ಗೆ ೯ಗಂಟೆಯ ಸುಮಾರಿಗೆ ಕಣ್ಣಾಡಿಸಿದರೆ, ಮಹಿಳೆಯರು ಬಿರ ಬಿರನೆ ಹೆಜ್ಜೆ ಹಾಕುತ್ತಾ, ಓಡುತ್ತಾ ತಮ್ಮ ಕಂಪೆನಿಗಳ ಒಳಗೆ ನುಸುಳಿಕೊಳ್ಳುಯವಂತಹ ಪ್ರಯತ್ನ ಮಾಡುತ್ತಿರುತ್ತಾರೆ. ಇಂತಹ ಮಹಿಳೆಯರಿಗೆ ಉಚಿತ ಬಸ್‌ಪಾಸ್ ಒಂದಷ್ಟು ನಿರಾಳೆತೆಯನ್ನು ಕೊಡುತ್ತದೆ. ಹಾಗೂ ಸೂಕ್ತ ಪ್ರದೇಶದಲ್ಲಿ ಮನೆ ಮಾಡಿಕೊಂಡು ಬಸ್‌ನಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ.

ಸ್ವಾಭಿಮಾನಿಯಡೆಗೆ ಮಹಿಳೆಯರ ಪ್ರಯಾಣ

ಈಗ ನೌಕರಿಯಿಲ್ಲದ ಮನೆಯಲ್ಲಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದಾಗಿ ಸಣ್ಣ ಪುಟ್ಟ ಕೆಲಸ ಕಾರ್ಯದಲ್ಲಿ ತೊಡಗಲು ಸಾಧ್ಯವಾಗುತ್ತದೆ. ಮಾರ್ಕೆಟ್‌ಗಳಿಗೆ ಹೋಗಿ ಹೂ ತಂದು ಹೂಕಟ್ಟುವ ವ್ಯಾಪಾರ, ನಗರ ಕಡೆಗೆ ಪ್ರಯಾಣಿಸಿ ರಿಯಾಯಿತಿ ದರದಲ್ಲಿ ವಸ್ತುಗಳನ್ನು ಕೊಂಡು ತಮ್ಮ ಊರುಗಳಲ್ಲಿ ಸಣ್ಣ ವ್ಯವಹಾರ ನಡೆಸಲು ಸ್ವಾಭಿಮಾನ ಮೂಡಲು ಉಚಿತ ಬಸ್ ಪ್ರಯಾಣ ದಾರಿ ಮಾಡಿಕೊಟ್ಟಿದೆಯೆಂದರೆ ತಪ್ಪಾಗಲಾರದು.
ಭಾರತದಂತಹ ಜಾತಿ ವ್ಯವಸ್ಥೆಯಲ್ಲಿ ದಲಿತ, ಮಹಿಳಾ ಸಮುದಾಯವನ್ನು ಸಾವಿರಾರು ವರ್ಷಗಳಿಂದಲೂ ವಂಚಿಸುತ್ತಾ ಬರಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ಆ ಸಮುದಾಯಗಳಿಗೆ ಶೋಷಣೆ ಎಂಬುದು ಬೆಂಬಿಡದೆ ಕಾಡುತ್ತಿದೆ. ಹಾಗಾಗಿ ಶೋಷಿತ ಸಮುದಾಯಗಳಿಗೆ ಕಲ್ಯಾಣ ಯೋಜನೆಗಳ ಮೂಲಕ ಸ್ವಾಭಿಮಾನಿ, ಸ್ವಾವಲಂಬನೆಯಡೆಗೆ ಸಾಗಲು ಅನುಕೂಲ ಕಲ್ಪಿಸುವುದು ಯಾವುದೇ ಸರ್ಕಾರದ ಕರ್ತವ್ಯ, ಜವಾಬ್ದಾರಿ ಆಗಿರುತ್ತದೆ.

Donate Janashakthi Media

Leave a Reply

Your email address will not be published. Required fields are marked *