ನವಂಬರ್ 28, 2020 ಫ್ರೆಡೆರಿಕ್ ಏಂಗೆಲ್ಸ್ ಅವರ 200ನೇ ಜನ್ಮ ದಿನಾಚರಣೆಯ ದಿನ. ಈ ಸಂದರ್ಭದಲ್ಲಿ ಮಾನವ ಚಟುವಟಿಕೆಯ ಮತ್ತು ಪ್ರಯತ್ನದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅವರು ಸ್ವತಂತ್ರವಾಗಿ ಹಾಗೂ ಕಾರ್ಲ್ ಮಾರ್ಕ್ಸ್ ಅವರ ಜತೆಗೂಡಿ, ಮಾನವ-ನಿಸರ್ಗ ತತ್ವಮೀಮಾಂಸೆಯನ್ನು ವಿವರಿಸುವುದರಿಂದ ಹಿಡಿದು ನೈಸರ್ಗಿಕ ವಿಜ್ಞಾನಗಳು, ಮಾನವಶಾಸ್ತ್ರ, ಚರಿತ್ರೆ, ರಾಜಕೀಯ ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರದವರೆಗೂ ನೀಡಿರುವ ಕೊಡುಗೆಗಳ ಒಂದು ಅವಲೋಕನ.
- ಸೀತಾರಾಂ ಯೆಚುರಿ
ಮಾರ್ಕ್ಸ್ ವಾದಿ ಜಾಗತಿಕ ದೃಷ್ಟಿಕೋನದ ವಿಕಸನ ಮತ್ತು ವಿಸ್ತೃತ ವಿವರಣೆಯಲ್ಲಿ ಏಂಗೆಲ್ಸ್ ಅವರ ಸೈದ್ಧಾಂತಿಕ ಕೊಡುಗೆಗಳು ಬಹಳ ಮಹತ್ವದ್ದಾಗಿವೆ, ದ್ವಂದ್ವಮಾನ ವಿಧಾನದ ಅರಳುವಿಕೆಯನ್ನು ಹಾಗೂ ಜಗತ್ತಿನ ಭೌತಿಕ ಬೆಳವಣಿಗೆ ಮತ್ತು ಜೀವ, ಅವುಗಳ ಉಗಮ, ವಿಕಸನ ಮತ್ತು ಮಾನವ ಸಮಾಜದ ಬೆಳವಣಿಗೆಯ ಪ್ರತಿಯೊಂದು ನಿಯಮದಲ್ಲಿನ ದ್ವಂದ್ವಮಾನತೆಯ ಆವಿಷ್ಕಾರವನ್ನು ಅರಿತುಕೊಳ್ಳಲು ಸಮೃದ್ಧ ಆಕರವಾಗಿವೆ.
ಒಂದು ವಿಚಾರಪಂಥವಾಗಿ ಮಾರ್ಕ್ಸ್ ವಾದವು ಸಿದ್ಧಾಂತ ಹಾಗೂ ಪ್ರಯೋಗಗಳನ್ನು ದ್ವಂದ್ವಾತ್ಮಕವಾಗಿ ಒಂದುಗೂಡಿಸುತ್ತದೆ, ಇದಕ್ಕೆ ಕಾರ್ಲ್ ಮಾರ್ಕ್ಸ್ ರಿಂದ ಆ ಹೆಸರು ಬಂದಿದೆ. ಕೆಲವೊಮ್ಮೆ ಏಂಗೆಲ್ಸ್ ಹೆಸರನ್ನು ಅವರು ಎರಡನೆಯ ಪಾತ್ರ ವಹಿಸಿದವರೆಂಬಂತೆ ತೆಗೆದುಕೊಳ್ಳಲಾಗುತ್ತದೆ. ಇದು ದುರದೃಷ್ಟಕರ. ಇಂತಹ ತೀರ್ಮಾನಕ್ಕೆ ಬರುವುದು ಬಹಳ ತಪ್ಪಾಗುತ್ತದೆ. ಇದಕ್ಕೆ ಏಂಗೆಲ್ಸ್ ತನ್ನ ಕೃತಿಗಳಲ್ಲಿ ಭೌತಿಕ ಹಾಗೂ ಸಾಮಾಜಿಕ ಬದುಕಿನ ಎಲ್ಲಾ ಅಂಶಗಳಲ್ಲಿ ದ್ವಂದ್ವಮಾನದ ಅರಳಿಕೆಯನ್ನು ವಿಸ್ತರಿಸಿದ ರೀತಿಯೇ ಸಾಕ್ಷಿ. ಇವುಗಳಲ್ಲಿ ಪ್ರತಿಯೊಂದೂ ಮಾನವ ನಾಗರೀಕತೆಯ ಮುನ್ನಡೆ ಹಾಗೂ ಅಸಾಧಾರಣವಾದ ಹೊಸ ಹೊಸ ವೈಜ್ಞಾನಿಕ ಆವಿಷ್ಕಾರಗಳ ಇಂದಿನ ಸಂದರ್ಭದಲ್ಲಿ ಮತ್ತೊಮ್ಮೆ ಸರಿಯಾಗಿ ಅಭ್ಯಾಸ ಮಾಡಲು ಯೋಗ್ಯವಾದವುಗಳು.
ಜಂಟಿಯಾಗಿ ಮಾರ್ಕ್ಸ್ ವಾದದ ವಿಕಸನ
ಫ್ರೆಡೆರಿಕ್ ಏಂಗೆಲ್ಸ್ ಅವರನ್ನು ಅನೇಕ ವೇಳೆ ಜಗತ್ತಿನ ಮೊದಲ ಮಾರ್ಕ್ಸ್ ವಾದಿ ಎಂದು ಕರೆಯಲಾಗುತ್ತದೆ. ತನ್ನನ್ನು ತಾನೇ ಮರೆಯಲ್ಲಿಟ್ಟುಕೊಳ್ಳುವ ತನ್ನ ವಿನಮ್ರ ಸ್ವಭಾವದಿಂದಾಗಿ ಏಂಗೆಲ್ಸ್ ಈ ಸ್ಥಾನವನ್ನು ಹೆಮ್ಮೆಯಿಂದ ಒಪ್ಪಿಕೊಂಡಿರಬಹುದು.
“ಮಾರ್ಕ್ಸ್ ಪೂರ್ಣ ಮಾಡಿದ್ದನ್ನು, ನಾನು ಸಾಧಿಸಲು ಆಗುತ್ತಿರಲಿಲ್ಲ. ಮಾರ್ಕ್ಸ್ ಎತ್ತರದಲ್ಲಿದ್ದರು, ಮುಂಗಾಣುತ್ತಿದ್ದರು, ಮತ್ತು ನಮ್ಮೆಲ್ಲರಿಗಿಂತ ವಿಶಾಲವಾದ ಹಾಗೂ ತ್ವರಿತವಾದ ದೃಷ್ಟಿಯನ್ನು ಹೊಂದಿದ್ದರು. ಮಾರ್ಕ್ಸ್ ಮಹಾಮೇಧಾವಿ; ನಾವು ಉಳಿದವರು ಹೆಚ್ಚೆಂದರೆ ಪ್ರತಿಭಾವಂತರಷ್ಟೆ. ಅವರಿಲ್ಲದೇ, ಸಿದ್ಧಾಂತವು ಇವತ್ತು ಇರುವುದಕ್ಕಿಂತ ಬಹಳ ದೂರದಲ್ಲೇ ಇರುತ್ತಿತ್ತು. ಆದ್ದರಿಂದ ಅದು ಅವರ ಹೆಸರನ್ನು ಹೊಂದಿರುವುದು ಸರಿಯಾಗಿಯೇ ಇದೆ” ಎಂದು ಒಮ್ಮೆ ಏಂಗೆಲ್ಸ್ ಹೇಳಿದ್ದರು.
ಇವೆಲ್ಲವುದರ ಹೊರತಾಗಿಯೂ, ಏಂಗೆಲ್ಸ್ ಕುರಿತ ಮಾರ್ಕ್ಸ್ ಅವರ ಅಭಿಪ್ರಾಯ ಹಾಗೂ ಮಾರ್ಕ್ಸ್ ವಾದಿ ವಿಶ್ವದೃಷ್ಟಿಕೋನದ ಸೈದ್ಧಾಂತಿಕ ಬುನಾದಿಯ ಅರಳುವಿಕೆಯಲ್ಲಿ ಅವರು ಏಂಗೆಲ್ಸ್ ಗೆ ನೀಡಿದ ವಿಶೇಷ ಸ್ಥಾನಮಾನವನ್ನು ಅವಶ್ಯವಾಗಿ ಮೆಚ್ಚಲೇಬೇಕು.
ಮಾರ್ಕ್ಸ್-ಏಂಗೆಲ್ಸ್ ಸಹಯೋಗ
ಮಾರ್ಕ್ಸ್ ಅವರು ‘ರೈನಿಷೆ ಜೈಟುಂಗ್’ ಪತ್ರಿಕೆಯನ್ನು ಸಂಪಾದಿಸುತ್ತಿದ್ದರು, ಅದನ್ನು ಪ್ರತಿಗಾಮಿ ಪ್ರಶ್ಯನ್ ಪ್ರಭುತ್ವವು ಮಾರ್ಚ್ 1843 ರಲ್ಲಿ ನಿಷೇಧಿಸಿತು, 1844 ರ ಆರಂಭದಲ್ಲಿ ಮಾರ್ಕ್ಸ್ ಪ್ಯಾರಿಸ್ಸಿಗೆ ಹೋದರು. ಅಲ್ಲಿ ಅವರು ‘ಡೊಯಿಟ್ಶ್-ಫ್ರಾಂಸೋಸಿಶೆ ಯಾಹ್ರ್ ಬುಖೆರ್’ ನಿಯತಕಾಲಿಕ ಪತ್ರಿಕೆಯನ್ನು ಪ್ರಾರಂಭಿಸಿದರು. ಏಂಗೆಲ್ಸ್ ಯುವ ಬರಹಗಾರನಾಗಿ ಮತ್ತು ನಂತರ ಆ ಪ್ರಕಾಶನದ ಸಹೋದ್ಯಮಿಯಾದರು. 1844 ರಲ್ಲಿ ಏಂಗೆಲ್ಸ್ ‘ಔಟ್‌ಲೈನ್ ಆಫ್ ಎ ಕ್ರಿಟಿಕ್ ಆಫ್ ಪೊಲಿಟಿಕಲ್ ಎಕಾನಮಿ’(ರಾಜಕೀಯ ಅರ್ಥಶಾಸ್ತ್ರದ ಒಂದು ವಿಮರ್ಶೆಯ ರೂಪುರೇಷೆ) ಎಂಬ ಲೇಖನ ಬರೆದರು. ಅದರಲ್ಲಿ, ಬಂಡವಾಳಶಾಹಿ ರಾಜಕೀಯ ಅರ್ಥಶಾಸ್ತ್ರದ ವಿಮರ್ಶೆಗೆ ಬುನಾದಿ ತತ್ವಗಳನ್ನು ಏಂಗೆಲ್ಸ್ ಮಂಡಿಸಿದರು. ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಉತ್ಪಾದನಾ ಸಾಧನಗಳ ಖಾಸಗಿ ಒಡೆತನದ ನಿಯಮಗಳಿಂದಾಗಿ ಎಲ್ಲಾ ಪ್ರಮುಖ ವಿದ್ಯಮಾನಗಳು ಅನಿವಾರ್ಯವಾಗಿ ಮೇಲೇಳುತ್ತವೆ ಮತ್ತು ಇಂತಹ ಖಾಸಗಿ ಒಡೆತನವಿಲ್ಲದ ಸಮಾಜದಲ್ಲಿ ಮಾತ್ರವೇ ಬಡತನವಿಲ್ಲದ ಸಮಾಜವೊಂದು ಸಾಧ್ಯವಾಗಬಹುದು ಎಂಬುದನ್ನು ಏಂಗೆಲ್ಸ್ ತೋರಿಸಿಕೊಟ್ಟರು. ಇದು ಮಾರ್ಕ್ಸ್ ರನ್ನು ಬಹಳವಾಗಿ ಆಕರ್ಷಿಸಿತು. ತಾನು ತನ್ನ ಹೆಗೆಲಿಯನ್ ತತ್ವಶಾಸ್ತ್ರದ ವಿಮರ್ಶಾತ್ಮಕ ಲೇಖನದಲ್ಲಿ ಬಂದಿದ್ದ ಅದೇ ತೀರ್ಮಾನಕ್ಕೆ ಬಂಡವಾಳಶಾಹಿ ರಾಜಕೀಯ ಅರ್ಥಶಾಸ್ತ್ರದ ವಿಮರ್ಶೆಯ ಮೂಲಕ, ಮತ್ತೊಬ್ಬ ಚಿಂತಕ, ಸ್ವತಂತ್ರವಾಗಿ ಬಂದಿದ್ದಾನೆ ಎಂಬ ತೀರ್ಮಾನಕ್ಕೆ ಮಾರ್ಕ್ಸ್ ಬಂದರು. ಇದು ಅವರಿಬ್ಬರ ನಡುವಿನ ಆಜೀವ ಪರ್ಯಂತ ಸಹಯೋಗಕ್ಕೆ, ಸ್ನೇಹಕ್ಕೆ, ಒಡನಾಟಕ್ಕೆ ಮತ್ತು ಮಾರ್ಕ್ಸ್ ವಾದಿ ವಿಶ್ವ ದೃಷ್ಟಿಕೋನದ ವಿಕಸನದಲ್ಲಿ ಜಂಟೀ ಕೊಡುಗೆಗಳಿಗೆ ಭದ್ರಬುನಾದಿಯನ್ನು ಹಾಕಿತು.
ಏಂಗೆಲ್ಸ್ ಅವರ ಪಥಪ್ರದರ್ಶಕ ಕೃತಿ, ‘ಇಂಗ್ಲೆಂಡಿನಲ್ಲಿನ ಕಾರ್ಮಿಕ ವರ್ಗದ ಪರಿಸ್ಥಿತಿ’ ಕೈಗಾರಿಕಾ ಕ್ರಾಂತಿಯ ಆರಂಭದಲ್ಲಿ ಇಂಗ್ಲೆಂಡಿನಲ್ಲಿ ಉಂಟಾಗುತ್ತಿದ್ದುದರ ಕುರಿತ ಮಾರ್ಕ್ಸ್ ಅವರ ಆಲೋಚನಾ ನಿಲುವಿನ ಮೇಲೆ ಬಹಳ ಪರಿಣಾಮ ಬೀರಿತು. ಆಗಸ್ಟ್ 1844 ರಲ್ಲಿ ಆ ಹತ್ತು ದಿನಗಳ ವಿನಿಮಯಗಳ ಸಮಯದಲ್ಲಿ, ಏಂಗೆಲ್ಸ್ ಬಗೆಗಿನ ಮಾರ್ಕ್ಸ್ ಅವರ ಅಭಿಮಾನ ಬಹಳವಾಗಿ ಹೆಚ್ಚಿತು. ಏಂಗೆಲ್ಸ್ ಅವರ ಧೈರ್ಯ, ಕಾರ್ಯತತ್ಪರತೆ, ಏಕಚಿತ್ತತೆಯನ್ನು ಅವರು ಮೆಚ್ಚಿದರು ಮತ್ತು ಅಂದಿನ ಎಲ್ಲಾ ಸೈದ್ಧಾಂತಿಕ ಪ್ರಶ್ನೆಗಳ ವಿಚಾರದಲ್ಲಿ ಇಬ್ಬರೂ ಪರಸ್ಪರ ಸಮ್ಮತಿಯನ್ನು ಹೊಂದಿದ್ದೇವೆ ಎಂಬುದನ್ನು ಗಮನಿಸಿದರು.
ತತ್ವಜ್ಞಾನ ಮತ್ತು ರಾಜಕೀಯ ಅರ್ಥಶಾಸ್ತ್ರದ ಮೇಲಿನ ಭಾವನಾವಾದದ ಪ್ರಭಾವದ ವಿರುದ್ಧ ಹೋರಾಡುತ್ತಾ, 1844 ರಲ್ಲಿ ಅವರ ಮೊದಲ ಜಂಟೀ ಕೃತಿ ‘ದಿ ಹೋಲಿ ಫ್ಯಾಮಿಲಿ ಆರ್ ಕ್ರಿಟೀಕ್ ಆಫ್ ಕ್ರಿಟಿಕಲ್ ಕ್ರಿಟಿಸಿಸಂ’(ಪವಿತ್ರ ಕುಟುಂಬ ಅಥವ ವಿಮರ್ಶೆಯ ವಿಮರ್ಶಾತ್ಮಕ ವಿಮರ್ಶಾ ಲೇಖನ)ವನ್ನು ಪರಸ್ಪರ ಸಹಯೋಗದಲ್ಲಿ ಬರೆದರು.
ಅದರಲ್ಲಿ, ಅತಿ ಮಾನುಷ ಶಕ್ತಿಗಳಾಗಲೀ, ಮಾನವ ಪ್ರಜ್ಞೆಯಾಗಲೀ ಅಥವಾ ನಾಯಕರುಗಳಾಗಲೀ ಇತಿಹಾಸವನ್ನು ಮಾಡಲಿಲ್ಲ ಎಂದು ಮಾರ್ಕ್ಸ್ ಮತ್ತು ಏಂಗೆಲ್ಸ್ ಒಟ್ಟಿಗೇ ಸಾಬೀತು ಮಾಡಿದರು. ದುಡಿಯುವ ಜನರು ಮಾತ್ರವೇ ತಮ್ಮ ಶ್ರಮ ಮತ್ತು ರಾಜಕೀಯ ಹೋರಾಟಗಳ ಮೂಲಕ ಸಮಾಜವನ್ನು ಮುಂದಕ್ಕೆ ಕೊಂಡೊಯ್ದರು. ತಮ್ಮ ಬದುಕುವ ಸ್ಥಿತಿಯನ್ನು ಅಂತ್ಯಗೊಳಿಸದೇ, ಅಂದರೆ ಸಮಕಾಲೀನ ಬಂಡವಾಳಶಾಹಿ ಸಮಾಜವನ್ನು ಬದಲಾಯಿಸದೇ ಶ್ರಮಿಕರು ತಮ್ಮ ವಿಮೋಚನೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಇದು ತೋರಿಸುತ್ತದೆ. ಒಂದು ವರ್ಗವಾಗಿ ಶ್ರಮಜೀವಿ ವರ್ಗದ ಐತಿಹಾಸಿಕ ವಿಮೋಚನಾ ಗುರಿಯನ್ನು ಅದರಲ್ಲಿ ವಿವರಿಸಲಾಗಿದೆ.
ಒಟ್ಟಿಗೇ ಪ್ರಾಥಮಿಕ ಪಾತ್ರ
ಆದಾಗ್ಯೂ, ತಾತ್ವಿಕ ಮಟ್ಟದಲ್ಲಿ, ಭಾವನಾವಾದದ ಪ್ರಾಬಲ್ಯವನ್ನು ಎದುರಿಸಬೇಕು ಮತ್ತು ಭೌತಿಕವಾದಿ ಬುನಾದಿಯನ್ನು ಸ್ಥಾಪಿಸಬೇಕು. ಇದನ್ನು, ಮಾರ್ಕ್ಸ್ ಮತ್ತು ಏಂಗೆಲ್ಸ್ ಇಬ್ಬರೂ ಒಟ್ಟಿಗೇ 1845-46 ರಲ್ಲಿ ತಮ್ಮ ‘ಜರ್ಮನ್ ಐಡಿಯಾಲಜಿ’(ಜರ್ಮನ್ ಸಿದ್ಧಾಂತ)ಯಲ್ಲಿ ಪ್ರತಿಪಾದಿಸಿದರು. ಮೊಟ್ಟ ಮೊದಲ ಬಾರಿಗೆ, ಕಾರ್ಮಿಕ ವರ್ಗದ ಜಾಗತಿಕ ದೃಷ್ಟಿಕೋನದ -ದ್ವಂದ್ವಾತ್ಮಕ ಹಾಗೂ ಐತಿಹಾಸಿಕ ಭೌತಿಕವಾದದ – ಮೂಲಾಧಾರವನ್ನು ಸಮಗ್ರವಾಗಿ ಮತ್ತು ವ್ಯವಸ್ಥಿತವಾಗಿ ಸ್ಪಷ್ಟಪಡಿಸಿದರು.
ನಿಜ ಹೇಳಬೇಕೆಂದರೆ, 1843-1845 ರ ಅವಧಿಯು ಮಾರ್ಕ್ಸ್ ವಾದಿ ಜಾಗತಿಕ ದೃಷ್ಟಿಕೋನದ ವಿಕಸನದಲ್ಲಿ ಒಂದು ಪರ್ವಕಾಲ: ಕ್ರಾಂತಿಕಾರಿ ಪ್ರಜಾಪ್ರಭುತ್ವದಿಂದ ಶ್ರಮಿಕರ ಕ್ರಾಂತಿಯ ಕಡೆಗೆ, ಹೆಗೆಲ್‌ನ ಪ್ರಭಾವದಿಂದ ಚಾರಿತ್ರಿಕ ಭೌತಿಕವಾದದೆಡೆಗೆ ಹಾಗೂ ತತ್ವಶಾಸ್ತ್ರದಿಂದ ರಾಜಕೀಯ ಅರ್ಥಶಾಸ್ತ್ರದತ್ತ ಪರಿವರ್ತನೆಯ ಕಾಲವಾಗಿತ್ತು. ಇದರಲ್ಲಿ, ಮಾರ್ಕ್ಸ್ ಮತ್ತು ಏಂಗೆಲ್ಸ್ ಇಬ್ಬರೂ ಒಟ್ಟಿಗೇ ಪ್ರಾಥಮಿಕ ಪಾತ್ರ ವಹಿಸಿದರು.
ಕಾನೂನನ್ನು ಕುರಿತ ಹೆಗೆಲ್ ತತ್ವಶಾಸ್ತ್ರವನ್ನು ವಿಮರ್ಶಾತ್ಮಕವಾಗಿ ಪರಿಶೀಲನೆ ಮಾಡಿದ ನಂತರ ಮಾರ್ಕ್ಸ್, ಕಾನೂನುಬದ್ಧ ಸಂಬಂಧಗಳನ್ನಾಗಲೀ, ರಾಜಕೀಯ ರೂಪಗಳನ್ನಾಗಲೀ, ಅವುಗಳಿಂದಲೇ, ಅಥವಾ ಮಾನವ ಮನಸ್ಸಿನ ಅಥವಾ ಪ್ರಜ್ಞೆಯ ಬೆಳವಣಿಗೆಯ ಆಧಾರದಿಂದಾಗಲೀ ಗ್ರಹಿಸಲಾಗದು, ಬದಲಿಗೆ ಬದುಕಿನ ಭೌತಿಕ ಸ್ಥಿತಿಗತಿಗಳ ಆಧಾರದಲ್ಲಿ ಕಂಡುಕೊಳ್ಳಬೇಕು ಎಂಬ ತೀರ್ಮಾನಕ್ಕೆ ಬಂದರು.
“ಪರತತ್ವದ ಅನಾವರಣದ” ಪ್ರಭಾವದ ಅಡಿಯಲ್ಲಿ ವಿಕಸನಗೊಳ್ಳುವ ಆದರ್ಶ ಸಮಾಜ ವ್ಯವಸ್ಥೆಯ ಪ್ರತಿಫಲನವಾಗಿ “ನಾಗರಿಕ ಸಮಾಜ”(ಸಿವಿಲ್ ಸೊಸೈಟಿ) ಎಂಬ ಪದವನ್ನು ಹೆಗೆಲ್ ಸೃಷ್ಟಿಸಿದರು; ಆದರೆ, ಈ ನಾಗರಿಕ ಸಮಾಜದ ಅಂಗರಚನೆಯನ್ನು ರಾಜಕೀಯ ಅರ್ಥಶಾಸ್ತ್ರದಲ್ಲಿ ಕಂಡುಕೊಳ್ಳಬೇಕೆಂಬ ತೀರ್ಮಾನಕ್ಕೆ ಮಾರ್ಕ್ಸ್ ಅವರು ಬರುತ್ತಾರೆ. ಇದರಿಂದ ಮುಂದಕ್ಕೆ ಸಾಗಿದ ಮಾರ್ಕ್ಸ್ ಅವರು ದ್ವಂದ್ವಮಾನ ಭೌತಿಕವಾದದ ಮೂಲ ತತ್ವಕ್ಕೆ ಬರುತ್ತಾರೆ: “ಮನುಷ್ಯರ ಅಸ್ತಿತ್ವವನ್ನು ಅವರ ಪ್ರಜ್ಞೆಯು ನಿರ್ಧರಿಸುವುದಿಲ್ಲ, ಬದಲಿಗೆ ಅವರ ಸಾಮಾಜಿಕ ಅಸ್ತಿತ್ವವು ಅವರ ಪ್ರಜ್ಞೆಯನ್ನು ನಿರ್ಧರಿಸುತ್ತದೆ.”
ತತ್ವಶಾಸ್ತ್ರ ಮತ್ತು ರಾಜಕೀಯ ಆರ್ಥಶಾಸ್ತ್ರದ ವಿಮರ್ಶೆಗಳನ್ನು ಒಟ್ಟುಗೂಡಿಸಿ, ಮಾರ್ಕ್ಸ್ ಮತ್ತು ಏಂಗೆಲ್ಸ್ ಅವರು ಈ ಕ್ರಾಂತಿಕಾರಿ ಸಿದ್ಧಾಂತವನ್ನು ಬೆಳೆಸಿದರು: ಅದರ ಅಭಿವ್ಯಕ್ತಿಯು 1848ರಲ್ಲಿ ಅವರ ಜಂಟೀ ರಚನೆಯಾದ ‘ಕಮ್ಯುನಿಸ್ಟ್ ಮ್ಯಾನಿಫೆಸ್ಟೋ’(ಕಮ್ಯುನಿಸ್ಟ್ ಪ್ರಣಾಳಿಕೆ)ದಲ್ಲಿ ಮತ್ತು ಮೊದಲ ಅಂತರಾಷ್ಟ್ರೀಯದ ಸ್ಥಾಪನೆಯಲ್ಲಿ ಕಾಣುತ್ತದೆ.
ನಿಸರ್ಗ ಮತ್ತು ಮಾನವನ ಸಾಮಾಜಿಕ ಬದುಕಿನ ತತ್ವಮೀಮಾಂಸೆ
ಬಂಡವಾಳವಾದಿ ವ್ಯವಸ್ಥೆಯ ಚಾಲನೆಯನ್ನು ಬಗೆದು ನೋಡುವ ಕೆಲಸದಲ್ಲಿ ಮಾರ್ಕ್ಸ್ ಅವರು ನಿರತರಾಗಿದ್ದಾಗ, ಏಂಗೆಲ್ಸ್ ಅವರು ಈ ಮೇಲೆ ತಿಳಿಸಿದಂತೆ ವಿವಿಧ ಕ್ಷೇತ್ರಗಳಿಗೆ ದ್ವಂದ್ವಾತ್ಮಕತೆಯ ಅರಳುವಿಕೆಯನ್ನು ವಿಸ್ತರಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು. ಮಾರ್ಕ್ಸ್ ಅವರ ಕೆಲಸವು ‘ದಾಸ್ ಕ್ಯಾಪಿಟಲ್’ ಕೃತಿ ಹೊರಬರುವಂತೆ ಮಾಡಿತು: ಅದರಲ್ಲಿ, ಮಾನವನ ಶೋಷಣೆಯು ಬಂಡವಾಳಶಾಹಿಯ ಉತ್ಪಾದನಾ ಪ್ರಕ್ರಿಯೆಯಲ್ಲಿಯೇ ನಡೆಯುತ್ತದೆ ಮತ್ತು, ಆದಕಾರಣ, ಆ ವ್ಯವಸ್ಥೆಯನ್ನು ಕಿತ್ತೊಗೆಯುವುದು ಕೇವಲ ನೈತಿಕ ಪ್ರಶ್ನೆ ಮಾತ್ರವಾಗಿರದೆ ಅದು ಮಾನವನ ವಿಮೋಚನೆಗೆ ಒಂದು ವೈಜ್ಞಾನಿಕ ಅಗತ್ಯವೂ ಆಗಿದೆ ಎಂದು ಸಾಬೀತು ಮಾಡಿತು.
ಮಾನವ – ನಿಸರ್ಗ ತತ್ವಮೀಮಾಂಸೆ : ನಿರಂತರವಾದ ಮಾನವ ನಿಸರ್ಗ ದ್ವಂದ್ವಮಾನತೆ, ಅಂದರೆ ಉತ್ತಮ ಮಾನವ ಬದುಕಿಗೆ ಮತ್ತು ಬದುಕಿನ ಪರಿಸ್ಥಿತಿಗಳಿಗೆ ನಿಸರ್ಗವನ್ನು ವಿನಿಯೋಗಿಸಿಕೊಳ್ಳಲು ಮಾಡುವ ಯತ್ನಗಳು, ದ್ವಂದ್ವಾತ್ಮಕ ಮತ್ತು ಚಾರಿತ್ರಿಕ ಭೌತಿಕವಾದದ ಆಧಾರ. ಈ ದ್ವಂದ್ವಾತ್ಮಕ ಪ್ರಕ್ರಿಯೆಯಲ್ಲಿ, ಮನುಷ್ಯರು ನಿಸರ್ಗವನ್ನು ಬಳಸುತ್ತಾ ಅದನ್ನು ಮಾರ್ಪಾಟು ಮಾಡುತ್ತಿರುವಾಗಲೇ, ನಿಸರ್ಗವೂ ಕೂಡ ಮನುಷ್ಯನನ್ನು ರೂಪಾಂತರಿಸುತ್ತಿರುತ್ತದೆ ಮತ್ತು ಮನುಷ್ಯನ ವಿಕಸನದ ಮೇಲೆ ಪರಿಣಾಮ ಬೀರುತ್ತಿರುತ್ತದೆ. ಏಂಗೆಲ್ಸ್ ಅವರು ತಮ್ಮ ಪ್ರಬಂಧ ‘ದಿ ಪಾರ್ಟ್ ಪ್ಲೇಡ್ ಬೈ ಲೇಬರ್ ಇನ್ ದಿ ಟ್ರಾನ್ಸಿಷನ್ ಫ್ರಮ್ ಎಪ್ ಟು ಮ್ಯಾನ್’(ಮಂಗನಿಂದ ಮಾನವನ ಪರಿವರ್ತನೆಯಲ್ಲಿ ಶ್ರಮವು ವಹಿಸಿದ ಪಾತ್ರ)ದಲ್ಲಿ ಹೇಗೆ ಮಾನವ ನಿಸರ್ಗ ದ್ವಂದ್ವಮಾನತೆಯು ವಿಕಾಸವಾಗಿದೆ ಎನ್ನುವುದನ್ನು ತೋರಿಸಿದ್ದಾರೆ. ಮನುಷ್ಯನ ಕೈ, ಇಂದ್ರಿಯ ಜ್ಞಾನಗಳು, ಮಾತು ಮುಂತಾದವುಗಳ ಬೆಳವಣಿಗೆಯಲ್ಲಿ ಶ್ರಮವು ಹೇಗೆ ಪಾತ್ರ ವಹಿಸಿದೆ ಎನ್ನುವುದನ್ನು ಏಂಗೆಲ್ಸ್ ತೋರಿಸಿಕೊಟ್ಟಿದ್ದಾರೆ. ಇವಾವುದೂ ಯಾವುದೋ ದೈವಶಕ್ತಿಗಳ ಕೈವಾಡಗಳಲ್ಲ, ಬದಲಿಗೆ ಅವುಗಳ ಮೂಲವಿರುವುದು ಬದುಕಿನ ಭೌತಿಕ ಆಧಾರದಲ್ಲಿ.
ನಿಸರ್ಗದ ದ್ವಂದ್ವಾತ್ಮಕತೆ: ಏಂಗೆಲ್ಸ್ ಅವರು ದ್ವಂದ್ವಾತ್ಮಕ ಭೌತಿಕವಾದವನ್ನು ಇನ್ನೂ ಮುಂದುವರಿಸಿ ನಿಸರ್ಗ ಮತ್ತು ವೈಜ್ಞಾನಿಕ ಬೆಳವಣಿಗೆಗೆಗಳಿಗೂ ವಿಸ್ತರಿಸಿ ಪರಿಶೋಧಿಸಿದರು. “ದ್ವಂದ್ವಾತ್ಮಕತೆಯು ಬೇರೇನೂ ಅಲ್ಲ, ಅದು ನಿಸರ್ಗ, ಮಾನವ ಸಮಾಜ ಮತ್ತು ಚಿಂತನೆಯ ಚಲನೆ ಹಾಗೂ ಬೆಳವಣಿಗೆಯ ಸಾಮಾನ್ಯ ನಿಯಮಗಳ ವಿಜ್ಞಾನ”ಎಂಬ ನಿರ್ಧಾರಕ್ಕೆ ಅವರು ಬಂದರು.
ದ್ವಂದ್ವಾತ್ಮಕತೆ ಮತ್ತು ಮಾನವಶಾಸ್ತ್ರ : ಏಂಗೆಲ್ಸ್ ಅವರು ಚಾರಿತ್ರಿಕ ಭೌತಿಕವಾದದ ನಿಯಮಗಳನ್ನು ಅವರ ಕಾಲದಲ್ಲಿ ಲಭ್ಯವಿದ್ದ ಪ್ರಾಚೀನ ಮಾನವ ಸಮಾಜಗಳ ಮಾನವಶಾಸ್ತ್ರದ ಸಾಕ್ಷ್ಯಗಳಿಗೆ ಅನ್ವಯಿಸಿದರು. ತಮ್ಮ ‘ಆರಿಜಿನ್ಸ್ ಆಫ್ ಫ್ಯಾಮಿಲಿ, ಪ್ರೈವೇಟ್ ಪ್ರಾಪರ್ಟಿ ಅಂಡ್ ದಿ ಸ್ಟೇಟ್’(ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವದ ಉಗಮ) ಪುಸ್ತಕದಲ್ಲಿ ಏಂಗೆಲ್ಸ್ ಅವರು ಆಧುನಿಕ ವರ್ಗ ಸಮಾಜದ ಸುತ್ತ ಇರುವ ಮಿಥ್ಯೆಗಳನ್ನು ನಗ್ನಗೊಳಿಸುತ್ತಾರೆ ಮತ್ತು ಹೇಗೆ ಆಸ್ತಿ-ಆಧಾರಿತ ವರ್ಗ ಸಂಬಂಧಗಳು ಕುಟುಂಬದ ಮೂಲಗಳನ್ನು ರೂಪಿಸುತ್ತವೆ,’ಸ್ತ್ರೀಕುಲ’ದ ಚಾರಿತ್ರಿಕ ಸೋಲನ್ನು -ಏಕಪತಿತ್ವ ಅಥವಾ ಏಕಪತ್ನಿತ್ವ, ಪುರುಷಪ್ರಾಧಾನ್ಯತೆ ಮತ್ತು ಮಹಿಳೆಯರ ಮೇಲಿನ ದಬ್ಬಾಳಿಕೆಯ ವ್ಯವಸ್ಥೆಯನ್ನು – ಎತ್ತಿ ತೋರಿಸುತ್ತದೆ ಎಂದು ಪ್ರಮಾಣೀಕರಿಸುತ್ತಾರೆ.
ದ್ವಂದ್ವಾತ್ಮಕತೆ ಮತ್ತು ಚರಿತ್ರೆ: ‘ದಿ ಪೆಸೆಂಟ್ ವಾರ್ ಇನ್ ಜರ್ಮನಿ’(1849-50)(ಜರ್ಮನಿಯಲ್ಲಿ ರೈತರ ಯುದ್ಧ) ಲೇಖನ ಏಂಗೆಲ್ಸ್ ಅವರು ದ್ವಂದ್ವಾತ್ಮಕ ಭೌತಿಕವಾದವನ್ನು ಚರಿತ್ರೆಗೆ ಅನ್ವಯಿಸಿದ ಮೊಟ್ಟ ಮೊದಲ ನೇರ ಪ್ರಯತ್ನವಾಗಿದೆ.
ದ್ವಂದ್ವಾತ್ಮಕತೆ ಮತ್ತು ತತ್ವಶಾಸ್ತ್ರ: ಮಾರ್ಕ್ಸ್ ವಾದವನ್ನು ಖಂಡಿಸಲು ಯೂಜಿನ್ ಡ್ಯೂರಿಂಗ್ ಮುಂದಿಟ್ಟ ‘ಗ್ರಾಂಡ್ ಥಿಯರಿ’(ಮಹಾ ಸಿದ್ಧಾಂತ)ಯ ಮುಸುಕನ್ನು ಬಯಲು ಮಾಡುತ್ತ ಏಂಗೆಲ್ಸ್ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ‘ಯಾಂಟಿ-ಡ್ಯೂರಿಂಗ್’ ಕೃತಿಯು ಮಾರ್ಕ್ಸ್ ವಾದ, ದ್ವಂದ್ವಾತ್ಮಕ ಹಾಗೂ ಚಾರಿತ್ರಿಕ ಭೌತಿಕವಾದದ ಸಿಂಧುತ್ವವನ್ನು ಸಾಬೀತುಗೊಳಿಸುವಲ್ಲಿ ಪರಿಣಾಮಕಾರಿಯಾದ ಪ್ರಭಾವವನ್ನು ಬೀರಿದೆ.
ಆದ್ದರಿಂದ ಮಾನವ ಚಟುವಟಿಕೆಯ ಮತ್ತು ಪ್ರಯತ್ನದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಏಂಗೆಲ್ಸ್ ಅವರು ಸ್ವತಂತ್ರವಾಗಿ ಹಾಗೂ ಮಾರ್ಕ್ಸ್ ಅವರ ಜತೆ ಜಂಟಿಯಾಗಿ ಎರಡು ರೀತಿಯಲ್ಲೂ ಅತ್ಯುತ್ತಮವಾದ ಕೊಡುಗೆ ನೀಡಿರುವುದು ಸ್ಪಷ್ಟವಾಗಿದೆ. ಮಾನವ-ನಿಸರ್ಗ ತತ್ವಮೀಮಾಂಸೆಯನ್ನು ವಿವರಿಸುವುದರಿಂದ ಹಿಡಿದು ನೈಸರ್ಗಿಕ ವಿಜ್ಞಾನಗಳು, ಮಾನವಶಾಸ್ತ್ರ, ಚರಿತ್ರೆ, ರಾಜಕೀಯ ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರದವರೆಗೂ ಏಂಗೆಲ್ಸ್ ಅವರು ಈ ಕ್ರಾಂತಿಕಾರಿ ಚಳುವಳಿ ಹಾಗೂ ಅದರ ಸೈದ್ಧಾಂತಿಕ ತಳಪಾಯ ಹಾಕುವಲ್ಲಿನ ಬೆಳವಣಿಗೆಗೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಆದಾಗ್ಯೂ, ಅವರು ಸ್ವತಂತ್ರವಾಗಿ ಅಥವಾ ಜಂಟಿಯಾಗಿ ಇಬ್ಬರೂ ಹೊರತಂದ ಎಲ್ಲಾ ಕೃತಿಗಳೂ ಪರಸ್ಪರ ಚರ್ಚೆಗಳ ಮೂಲಕ ಶ್ರೀಮಂತವಾಗಿವೆ ಎಂಬ ಸಂಗತಿಯನ್ನು ಒತ್ತಿಹೇಳಬೇಕು.
ರಾಜಕೀಯ ಚಟುವಟಿಕೆ
ಅಂತರಾಷ್ಟ್ರೀಯ ಕಾರ್ಮಿಕ ವರ್ಗ ಚಳುವಳಿಯ ಈ ಇಬ್ಬರು ಮಹಾನ್ ನೇತಾರರು ಇಂತಹ ಪಥಪ್ರದರ್ಶಕ ಸೈದ್ಧಾಂತಿಕ ತಳಹದಿಯನ್ನು ಬೆಳೆಸುತ್ತಿದ್ದರೂ, ಕೇವಲ ಅಕಡೆಮಿಕ್ ಸಿದ್ಧಾಂತಿಗಳಷ್ಟೇ ಆಗಿರದೆ, ಅವರ ಕಾಲದ ಕಾರ್ಮಿಕ ಚಳುವಳಿಯಲ್ಲಿ ಹಲವಾರು ಬಾರಿ ಸಕ್ರಿಯವಾಗಿ ಪಾಲ್ಗೊಂಡರು, ಅನೇಕ ವೇಳೆ ಮುಂದಾಳತ್ವ ವಹಿಸಿ ಮಾರ್ಗದರ್ಶನ ನೀಡಿದರು ಕೂಡ. ಕಾರ್ಮಿಕ ವರ್ಗವನ್ನು ವಿಜಯದತ್ತ ಕೊಂಡೊಯ್ಯಲು ಸಮರ್ಥವಾದ ಕ್ರಾಂತಿಕಾರಿ ಸಂಘಟನೆಯನ್ನು ಕಟ್ಟುವುದಕ್ಕಾಗಿ ಮಾರ್ಕ್ಸ್ ವಾದದ ಈ ಇಬ್ಬರು ಮಹಾನ್ ಸ್ಥಾಪಕ ನೇತಾರರು ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದರು. 1864 ರಲ್ಲಿ, ‘ಮೊದಲ ಅಂತರ್ರಾಷ್ಟ್ರೀಯ’(ಫಸ್ಟ್ ಇಂಟರ್ ನ್ಯಾಷನಲ್) ಎಂದು ಜನಪ್ರಿಯವಾಗಿ ಕರೆಯಲ್ಪಟ್ಟ ಇಂಟರ್ ನ್ಯಾಷನಲ್ ವರ್ಕಿಂಗ್ ಮೆನ್ಸ್ ಅಸೋಶಿಯೇಷನ್ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಹಲವಾರು ಎಡಪಂಥೀಯ ಗುಂಪುಗಳನ್ನು ಒಂದು ಸರ್ವಸಾಮಾನ್ಯ ಸಂಘಟನೆಯಾಗಿ ಒಟ್ಟುಗೂಡಿಸುವಲ್ಲಿ ಇದು ಮೊಟ್ಟ ಮೊದಲ ಪ್ರಯತ್ನವಾಗಿತ್ತು ಮತ್ತು ಅಂತರ್ರಾಷ್ಟ್ರೀಯ ಕಾರ್ಮಿಕ ವರ್ಗದ ಚಳುವಳಿಯನ್ನು ಮುಂದೆ ಕೊಂಡೊಯ್ಯುವಲ್ಲಿ ಪ್ರಮುಖ ಹೆಜ್ಜೆಯಾಗಿತ್ತು.
ವೈಜ್ಞಾನಿಕ ಮತ್ತು ಕ್ರಾಂತಿಕಾರಕ
ಮಾರ್ಕ್ಸ್ ಅವರ ಮರಣಾನಂತರ, ಮಾರ್ಕ್ಸ್ ವಾದಿ ದೃಷ್ಟಿಕೋನದ ಅಮೂಲ್ಯ ಕೃತಿಗಳು ಹಾಗೂ ಸೈದ್ಧಾಂತಿಕ ಮೂಲಾಧಾರಗಳನ್ನು ಪ್ರಮುಖವಾಗಿ ಏಂಗೆಲ್ಸ್ ಅವರ ಮೂಲಕವೇ ಅಂತರ್ರಾಷ್ಟ್ರೀಯ ಕಾರ್ಮಿಕ ವರ್ಗ ಮತ್ತು ಜಗತ್ತು ತಿಳಿದುಕೊಂಡಿತು. ಮಾರ್ಕ್ಸ್ ಅವರು ಬಿಟ್ಟುಹೋಗಿದ್ದ ಅಪಾರ ಟಿಪ್ಪಣಿಗಳನ್ನು ಜೋಡಿಸಿದ್ದು ಮತ್ತು ಸಂಪಾದಿಸಿದ್ದು ಏಂಗೆಲ್ಸ್ ಅವರು. ‘ಕ್ಯಾಪಿಟಲ್’(ಸಂಪುಟ 2 ಮತ್ತು 3) ಕೃತಿಯನ್ನು ಆ ಟಿಪ್ಪಣಿಗಳನ್ನು ಜೋಡಿಸಿ ಸಂಪಾದಿಸುವ ಮೂಲಕ ಏಂಗೆಲ್ಸ್ ಹೊರತಂದರು. ‘ಕಮ್ಯುನಿಸ್ಟ್ ಪ್ರಣಾಳಿಕೆಯ ಹಲವಾರು ಆವೃತ್ತಿಗಳಿಗೆ ಮುನ್ನುಡಿ ಬರೆದವರು ಏಂಗೆಲ್ಸ್ ಮತ್ತು ಮಾರ್ಕ್ಸ್ ಕೃತಿಗಳ ಹೊಸ ಆವೃತ್ತಿಗಳಿಗೆ ಆ ನಂತರದ ಸಮಕಾಲೀನ ಬೆಳವಣಿಗೆಗಳ ಆಧಾರದಲ್ಲಿ ಮುನ್ನುಡಿಗಳನ್ನು ಬರೆಯುವುದರ ಮೂಲಕ ಅಂತರ್ರಾಷ್ಟ್ರೀಯ ಕಾರ್ಮಿಕ ವರ್ಗದ ಚಳುವಳಿಯನ್ನು ಶ್ರೀಮಂತಗೊಳಿಸಿದರು ಹಾಗೂ ಚಳುವಳಿಯನ್ನು ಮುಂದುವರಿಸಲು ಪ್ರೋತ್ಸಾಹ ನೀಡಿದರು.
ಲೆನಿನ್ ಹೇಳುವಂತೆ, ಏಂಗೆಲ್ಸ್ “ಕಾರ್ಮಿಕ ವರ್ಗಕ್ಕೆ ತನ್ನನ್ನು ತಾನು ಅರಿತುಕೊಳ್ಳಲು ಮತ್ತು ತನ್ನ ಬಗ್ಗೆ ಪ್ರಜ್ಞಾಶೀಲವಾಗಲು ಕಲಿಸಿದರು, ಮತ್ತು ಅವರ ಕನಸುಗಳಿಗೆ ವಿಜ್ಞಾನವನ್ನು ಬದಲಿಯಾಗಿಸಿದರು”
ಅನುವಾದ: ಟಿ. ಸುರೇಂದ್ರ ರಾವ್