ಫ್ರಾನ್ಸ್: 2ನೇ ಸುತ್ತಿನಲ್ಲಿ ನವ-ಫ್ಯಾಸಿಸ್ಟರಿಗೆ ಸೋಲು, ಎಡ ಪ್ರಗತಿಪರ ಸರಕಾರಕ್ಕೆ ಜನಾದೇಶಕ್ಕೆ ಮಾಕ್ರಾನ್ ತಡೆ ಪ್ರಯತ್ನ

– ವಸಂತರಾಜ ಎನ್.ಕೆ

ಜುಲೈ 7 ರಂದು ಫ್ರಾನ್ಸಿನ ಪಾರ್ಲಿಮೆಂಟಿಗೆ ನಡೆದ 2ನೇ ಸುತ್ತಿನ ಚುನಾವಣೆಯಲ್ಲಿ ನ್ಯೂ ಪಾಪ್ಯುಲರ್ ಫ್ರಂಟ್  (ನವ ಜನಪ್ರಿಯ ರಂಗ – NFP) ಅತ್ಯಂತ ಹೆಚ್ಚು ಸೀಟು ಪಡೆದು ಮೊದಲ ಸ್ಥಾನದಲ್ಲಿದೆ. ಎಡಪಂಥೀಯ “ನ್ಯೂ ಪಾಪ್ಯುಲರ್ ಫ್ರಂಟ್” ಒಕ್ಕೂಟವು ‘ಎಕ್ಸಿಟ್ ಪೋಲ್’ ನ್ನು ಧಿಕ್ಕರಿಸಿ ಮರೀನ್ ಲೆ ಪೆನ್ ಮತ್ತು ಜೋರ್ಡಾನ್ ಬಾರ್ಡೆಲ್ಲಾ ಅವರ ನಾಯಕತ್ವದ ನವ-ಫ್ಯಾಸಿಸ್ಟ್ “ರಾಷ್ಟ್ರೀಯ ರ್ಯಾಲಿ” ಪಕ್ಷದ ನಾಯಕತ್ವದ ಉಗ್ರ ಬಲಪಂಥೀಯ ರಂಗವನ್ನು,  ಮೊದಲ ಸುತ್ತಿನಲ್ಲಿ ಗಳಿಸಿದ್ದ ಮೊದಲ ಸ್ಥಾನದಿಂದ ಹೊರಹಾಕಿ, ಮೂರನೇ ಸ್ಥಾನಕ್ಕೆ ತಳ್ಳಿದೆ. ಫ್ರಾನ್ಸ್

ಎಡಒಕ್ಕೂಟ NFP ಫ್ರಾನ್ಸಿನ 577 ಸದಸ್ಯರ ಪಾರ್ಲಿಮೆಂಟಿನಲ್ಲಿ 180 ಸ್ಥಾನಗಳನ್ನು ಗೆದ್ದಿದೆ.  ಆದರೆ ಸಂಪೂರ್ಣ ಬಹುಮತಪಡೆದಿಲ್ಲ. ಎರಡನೇ ಸ್ಥಾನದಲ್ಲಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ನಡು-ಬಲಪಂಥೀಯ ಎನ್ಸೆಂಬಲ್ ಗುಂಪು, 159 ಸೀಟು ಗಳಿಸಿದೆ.  ರಾಷ್ಟ್ರೀಯ ರ್ಯಾಲಿ ಯ ನಾಯಕತ್ವದ ಉಗ್ರ ಬಲಪಂಥೀಯ ರಂಗ ಕೇವಲ 142 ಸ್ಥಾನಗಳನ್ನು ಗೆದ್ದಿದೆ. ಬಲಪಂಥೀಯ ‘ರಿಪಬ್ಲಿಕನ್’ ರಂಗ 39 ಸ್ತಾನಗಳನ್ನು ಗಳಿಸಿ 4ನೇ ಸ್ತಾನದಲ್ಲಿದೆ. ಫ್ರಾನ್ಸ್

ನ್ಯೂ ಪಾಪ್ಯುಲರ್ ಫ್ರಂಟ್ NFP ಎಂಬುದು, ಫ್ರೆಂಚ್ ಕಮ್ಯುನಿಸ್ಟ್ ಪಾರ್ಟಿ (ಪಿಸಿಎಫ್), ಫ್ರಾನ್ಸ್ ಇನ್ಸೌಮಿಸ್ (ಫ್ರಾನ್ಸ್ ಅನ್ ಬೌಂಡ್, ಜೀನ್-ಲುಕ್ ಮೆಲೆನ್ಚಾನ್ ಪಕ್ಷ), ನಡು-ಎಡಪಂಥೀಯ ಸಮಾಜವಾದಿ ಪಕ್ಷ (ಪಿಎಸ್) ಮತ್ತು ಲೆಸ್ ಎಕಾಲಜಿಸ್ಟ್ಸ್ (ಗ್ರೀನ್ – ಪರಿಸರವಾದಿ ಪಕ್ಷ) ಗಳ ಒಕ್ಕೂಟ ಎಂದು ಇಲ್ಲಿ ನೆನಪಿಸಿಕೊಳ್ಳಬಹುದು.

ಇದನ್ನೂ ಓದಿ: 3 ಹೊಸ ಕ್ರಿಮಿನಲ್ ಕಾನೂನುಗಳು ನೋಟು ರದ್ಧತಿಯಂತಹ ಮತ್ತೊಂದು ಮೂರ್ಖಕ್ರಮ: ಹಿಂತೆಗೆದುಕೊಳ್ಳುವಂತೆ ಕೇಂದ್ರ ಕಾರ್ಮಿಕ ಸಂಘಗಳ ಆಗ್ರಹ

ಎಡ ಒಕ್ಕೂಟ ತಂತ್ರಗಾರಿಕೆ

ಫ್ರೆಂಚ್ ಚುನಾವಣಾ ಪದ್ಧತಿಯ ಪ್ರಕಾರ ಮೊದಲನೆಯ ಸುತ್ತಿನ ಮೊದಲ ಎರಡು ಸ್ಥಾನ ಪಡೆದ ಅಭ್ಯರ್ಥಿಗಳು ಮತ್ತು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯ ಶೇ.12.5 ರಷ್ಟು ಮತ ಪಡೆದ ಅಭ್ಯರ್ಥಿಗಳು ಸಹ ಎರಡನೆಯ ಸುತ್ತಿನ ಸ್ಪರ್ಧೆಯಲ್ಲಿ ಇರುತ್ತಾರೆ. ಫ್ರಾನ್ಸ್

ಎರಡನೆಯ ಸುತ್ತಿನ ಚುನಾವಣೆಗಳಲ್ಲಿ ನವ-ಫ್ಯಾಸಿಸ್ಟ್ ಸರಕಾರ ರಚನೆಯನ್ನು ತಡೆಯಲು, ಉಗ್ರ ಬಲಪಂಥೀಯ ಅಭ್ಯರ್ಥಿಗಳನ್ನು ಸೋಲಿಸಲು ಚುನಾವಣಾ ಹೊಂದಾಣಿಕೆಗೆ ಎಡ ಒಕ್ಕೂಟ NFP ಕರೆ ನೀಡಿತು. ಮ್ಯಾಕ್ರಾನ್ ಅವರ ಎನ್ ಸೆಂಬಲ್ ರಂಗದ ಜತೆ ಮಾತುಕತೆ ನಡೆಸಿತು., ಎರಡೂ ರಂಗಗಳು (ಎಡ ಮತ್ತು ಮ್ಯಾಕ್ರಾನ್ ರಂಗ) ಸ್ಪರ್ಧಿಸಿದರೆ ಉಗ್ರ ಬಲಪಂಥೀಯ ರಂಗದ ಅಭ್ಯರ್ಥಿ ಗೆಲ್ಲುವ ಸಾಧ್ಯತೆಯಿದ್ದಲ್ಲಿ (ವಿಶೇಷವಾಗಿ ಮೊದಲ ಸುತ್ತಿನಲ್ಲಿ ಅದು ಮೊದಲನೇ ಸ್ಥಾನದಲ್ಲಿದ್ದ ಕ್ಷೇತ್ರಗಳಲ್ಲಿ) ಗೆಲ್ಲುವ ಸಾಧ್ಯತೆ  ಇಲ್ಲದಿರುವ ಮೂರನೇ ಸ್ಥಾನದಲ್ಲಿರುವ ರಂಗದ ಅಭ್ಯರ್ಥಿಗಳನ್ನು ಹಿಂತೆಗೆಯಬೇಕು ಎಂದು ಕರೆ ನೀಡಿತು. ಇದಕ್ಕೆ ತ್ವರಿತ ಸಹಕಾರ ನೀಡದೆ ಮ್ಯಾಕ್ರಾನ್ ರಂಗ ವಿಳಂಭಿಸಿತು. ಫ್ರಾನ್ಸ್

NFP ಮ್ಯಾಕ್ರಾನ್ ರಂಗ ಗೆಲ್ಲುವ ಸಾಧ್ಯತೆಯಿರುವ ಕ್ಷೇತ್ರಗಳಲ್ಲಿ ಏಕಪಕ್ಷೀಯವಾಗಿ ತನ್ನ ಅಭ್ಯರ್ಥಿಗಳನ್ನು ಹಿಂತೆಗೆದು ಅದರ ಮೇಲೆ ಅಂತಹುದೇ ನಿರ್ಣಯ ಕೈಗೊಳ್ಳುವಂತೆ ಪ್ರಚಾರ ಮಾಡಿ ಒತ್ತಡ ಹಾಕಿತು. ಇದರಿಂದಾಗಿ ತಾನೂ ಹಾಗೆ ಮಾಡದಿದ್ದರೆ ತನ್ನ ಬೆಂಬಲ 2ನೇ ಸುತ್ತಿನಲ್ಲಿ ಇನ್ನಷ್ಟು ಕಡಿಮೆಯಾಗಬಹುದು ಎಂಬ ಭೀತಿಯಿಂದ ಹಲವು ಕ್ಷೇತ್ರಗಳಲ್ಲಿ ಹಿಂತೆಗೆಯಿತು. ಆದರೆ  ಇನ್ನೂ ಹಲವು ಕ್ಷೇತ್ರಗಳಲ್ಲಿ ಹಿಂತೆಗೆಯದೆ ರಾಷ್ಟ್ರೀಯ ರ್ಯಾಲಿಗೆ ಸ್ಥಾನವನ್ನು ಕೊಟ್ಟಿತು. ಎಡ ಒಕ್ಕೂಟ NFP 138 ಕ್ಷೇತ್ರಗಳಲ್ಲಿ ಮೂರನೇ ಸ್ಥಾನದಲ್ಲಿದ್ದ ಕಡೆ ಹಿಂತೆಗೆದರೆ ಮ್ಯಾಕ್ರಾನ್ ಒಕ್ಕೂಟ 82 ಕಡೆ ಮಾತ್ರ ಹಿಂತೆಗೆಯಿತು. ಫ್ರಾನ್ಸ್

ಎರಡನೆ ಸುತ್ತಿನಲ್ಲಿ ಒಟ್ಟು 501 ಸೀಟುಗಳಿಗೆ ಮತದಾನ ನಡೆದು, ಅವುಗಳಲ್ಲಿ ಒಟ್ಟು 306 ಕ್ಷೇತ್ರಗಳಲ್ಲಿ ಮೂರು ಅಭ್ಯರ್ಥಿಗಳಿದ್ದರು. , ಎಲ್ಲ ಹಿಂತೆಗೆತಗಳು ಮುಗಿದ ಮೇಲೂ 89 ಕ್ಷೇತ್ರಗಳಲ್ಲಿ ತ್ರಿಕೋಣ ಸ್ಪರ್ಧೆ ತಡೆಯಲು ಆಗಲಿಲ್ಲ. ಅವುಗಳಲ್ಲಿ 70 ಕ್ಷೇತ್ರಗಳಲ್ಲಿ ಮ್ಯಾಕ್ರಾನ್ ರಂಗ ಮೂರನೇ ಸ್ತಾನದಲ್ಲಿದ್ದರೂ ಸಹ ಸ್ಪರ್ಧಿಸಿತು. ಈ ಕ್ಷೇತ್ರಗಳಲ್ಲಿ ಅದು ಹಿಂತೆಗೆದಿದ್ದರೆ ನವ-ಫ್ಯಾಸಿಸ್ಟ್ ಇನ್ನಷ್ಟು ಕಡಿಮೆ ಸೀಟು ಪಡೆಯುತ್ತಿತ್ತು. ಆದರೆ ಈ ಹೆಚ್ಚಿನ ಸೀಟುಗಳೂ ಎಡ  ಒಕ್ಕೂಟಕ್ಕೆ ಹೋಗುತ್ತಿದ್ದು, ಅದು ಬಹುಮತಕ್ಕೆ ಹತ್ತಿರ ಬರುತ್ತಿತ್ತು. ಅದು ಮ್ಯಾಕ್ರಾನ್ ಗೆ ಬೇಕಾಗಿರಲಿಲ್ಲ. ಫ್ರಾನ್ಸ್

ಫ್ರಾನ್ಸ್ ಪಾರ್ಲಿಮೆಂಟರಿ ಚುನಾವಣೆಗಳು 2024 ಫಲಿತಾಂಶಗಳು

ಮೂಲ : ವಿಕಿಪಿಡಿಯಾ

(ಎರಡನೇ ಸುತ್ತಿನಲ್ಲಿ ಈ ರಂಗಗಳು ಹೊಂದಾಣಿಕೆ ಮಾಡಿದ್ದವು, # ಈ ರಂಗ ಅರ್ಹವಾದ ಎಲ್ಲ ಕ್ಷೇ್ತ್ರಗಳಲ್ಲಿ ಸ್ಪರ್ಧಿಸಿತ್ತು)

ಮ್ಯಾಕ್ರಾನ್ ತಂತ್ರಗಾರಿಕೆ

ಮ್ಯಾಕ್ರಾನ್ ಅವರು ಮಾಜಿ ಹೂಡಿಕೆ ಬ್ಯಾಂಕರ್ ಆಗಿದ್ದು, ಅವರು ಹತ್ತು ವರ್ಷಗಳ ಹಿಂದೆ ಹಣಕಾಸು ಮಂತ್ರಿಯಾಗಲು ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಅವರನ್ನು ಆರಿಸುವ ಮೊದಲು ರಾಥ್ ಶೀಲ್ಡ್  ಮತ್ತು ಸಿ (Rothschild & Cie) ಬ್ಯಾಂಕ್ ನಲ್ಲಿ ಹಿರಿಯ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಆ ಪಾತ್ರದಲ್ಲಿ ಮತ್ತು ನಂತರ ಅಧ್ಯಕ್ಷರಾಗಿ, ಅವರು ಫ್ರೆಂಚ್ ಆರ್ಥಿಕತೆಯ ಪ್ರಮುಖ ವಿಭಾಗಗಳನ್ನು ಖಾಸಗೀಕರಣಗೊಳಿಸುವ ಅಥವಾ ಅನಿಯಂತ್ರಿತಗೊಳಿಸುವ ನೀತಿಗಳನ್ನು ಅನುಸರಿಸಿದರು, ಕಾರ್ಮಿಕರ ನಿವೃತ್ತಿ ವಯಸ್ಸನ್ನು ಹೆಚ್ಚಿಸಿದರು, ಅವರ ವಜಾಗೊಳಿಸುವಿಕೆಯನ್ನು ಸುಲಭಗೊಳಿಸಿದರು,  ಮತ್ತು ಇತರ ಬಂಡವಾಳಶಾಹಿ ವರ್ಗದ ಆದ್ಯತೆಗಳನ್ನು ಅನುಸರಿಸಿದರು. ಫ್ರಾನ್ಸ್

ಜೂನ್ ಆರಂಭದಲ್ಲಿ ನಡೆದ ಯುರೋಕೂಟ ಸಂಸತ್ತಿನ ಚುನಾವಣೆಯಲ್ಲಿ “ರಾಷ್ಟ್ರೀಯ ರ್ಯಾಲಿ”ಯ ಭಾರೀ ಗೆಲುವಿಗೆ ಅವರ ಅತ್ಯಂತ  ಜನ ವಿರೋಧಿ ಕಟುನೀತಿಗಳೇ ಕಾರಣವಾಗಿದ್ದವು. ಅದರಲ್ಲೂ ಫ್ರಾನ್ಸ್ ಸೇರಿದಂತೆ ನಾಟೋ ಧೋರಣೆಗಳಿಂದ  ಆರಂಭವಾದ ಉಕ್ರೇನ್ ಯುದ್ಧ ಹಾಗೂ ರಶ್ಯದ ಮೇಲಿನ ಆರ್ಥಿಕ ದಿಗ್ಬಂಧನದ ನೀತಿಗಳು ಮತ್ತು ಅದರಿಂದಾಗಿ  ಜನರ ಜೀವನವೆಚ್ಚದ ವಿಪರೀತ ಏರಿಕೆಯ ಮತ್ತು ಆರ್ಥಿಕತೆಯ ಮೇಲೆ ಆದ ಪರಿಣಾಮಗಳ ವಿರುದ್ಧ ತೀವ್ರ ಆಕ್ರೋಶವಿತ್ತ. ಅದರ  ನಂತರ ಮ್ಯಾಕ್ರಾನ್ ದೇಶವನ್ನು, ಅದೂ ಕೆಲವೇ ವಾರಗಳಲ್ಲಿ ಜಾಗತಿಕ ಒಲಿಂಪಿಕ್ಸ್ ಪ್ಯಾರಿಸಿನಲ್ಲಿ ನಡೆಯಲಿರುವಾಗ ಅನಿರೀಕ್ಷಿತ ಕ್ಷಿಪ್ರ ಚುನಾವಣೆಯಲ್ಲಿ ಮುಳುಗಿಸಿದರು. ಫ್ಯಾಸಿಸ್ಟರ  ಜಯದ ಭಯವು ಮತದಾರರನ್ನು ತಮ್ಮ ಪಕ್ಷದತ್ತ ದೂಡುತ್ತದೆ, ಐಕ್ಯತೆ ಇಲ್ಲದ ಎಡ ಪಕ್ಷಗಳು ಚುನಾವಣೆಗಳಿಗೆ ಸಿದ್ಧರಿಲ್ಲದಿರುವಾಗ  ತಮ್ಮ ಪಕ್ಕಕ್ಕೆ ಸಂಸತ್ತಿನ ನಿಯಂತ್ರಣವನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಅವರ ಲೆಕ್ಕಾಚಾರವಾಗಿತ್ತು. ಇದು ಅಪಾಯಕಾರಿ ಜೂಜಾಟವೆಂದು ಪ್ರಧಾನಿ ಗೇಬ್ರಿಯಲ್ ಅಟ್ಟಲ್  ಸೇರಿದಂತೆ ಅವರದೇ ಪಕ್ಷದ ನಾಯಕರು ಟೀಕಿಸಿದರು. ಆದರೆ ಎಡ ಪಕ್ಷಗಳು ತ್ವರಿತವಾಗಿ “ನವ ಜನಪ್ರಿಯ ರಂಗ” ಕಟ್ಟಿ ಜನರ ಸಮಸ್ಯೆಗಳಿಗೆ ಪರಿಹಾರವಿರುವ ಪ್ರಣಾಳಿಕೆ ಹೊರಡಿಸಿ ಮ್ಯಾಕ್ರಾನ್ ಮತ್ತು ನವ-ಫ್ಯಾಸಿಸ್ಟ್ ರಂಗ ಎರಡಕ್ಕೂ ಸವಾಲು ಎಸೆದರು. ಫ್ರಾನ್ಸ್

ಚುನಾವಣಾ ಪ್ರಚಾರದ ಉದ್ದಕ್ಕೂ ಅವರು ಎಲ್ಲಾ ಕಡೆಯಿಂದ ಕ್ರೂರ ಟೀಕೆಗಳನ್ನು ಎದುರಿಸಿದರು. ಅನಿರೀಕ್ಷಿತ ಕ್ಷಿಪ್ರ ಚುನಾವಣೆಗೆ ಕರೆ ನೀಡುವ ಜೂಜಾಟದ ಮೂಲಕ ನವ-ಫ್ಯಾಸಿಸ್ಟರು ದೇಶವನ್ನು ಸ್ವಾಧೀನ ಪಡಿಸಿಕೊಂಡರೂ ಪರವಾಗಿಲ್ಲವೆಂಬ ಅವರ ಧೋರಣೆ ತೀವ್ರ ಟೀಕೆಗೊಳಗಾಯಿತು. ಮ್ಯಾಕ್ರಾನ್ ಮತ್ತು ನವ-ಫ್ಯಾಸಿಸ್ಟರಿಗೆ ಬಿಟ್ಟರೆ ಯಾರಿಗೂ ಚುನಾವಣೆ ಬೇಕಾಗಿರಲಿಲ್ಲ.  ಚುನಾವಣಾ ಪ್ರಚಾರದ ಉದ್ದಕ್ಕೂಅವರು ಎಡ ಒಕ್ಕೂಟ ಮತ್ತು ನವ-ಫ್ಯಾಸಿಸ್ಟ್ ಎರಡೂ ಸಮಾನವಾಗಿ ಅಪಾಯಕಾರಿಯೆಂದು ಬಿಂಬಿಸಿದರು.

ಮೊದಲನೇ ಸುತ್ತಿನಲ್ಲಿ ಮೊದಲ ಸ್ಥಾನ ಪಡೆದ ನವ-ಫ್ಯಾಸಿಸ್ಟ್  ನ ಅಪಾಯ ಮತ್ತು ಎರಡನೇ ಸುತ್ತಿನಲ್ಲಿ ಅವರು ನಿಚ್ಚಳ ಬಹುಮತ ಪಡೆಯುವ ಅಪಾಯದ ಎದುರಲ್ಲೂ ಅವರು ಎಡ ಒಕ್ಕೂಟ ದ ಜತೆ ಸಹಕಾರಕ್ಕೆ ಸಿದ್ಧವಿರಲಿಲ್ಲ. ಮೂರನೇ ಸ್ಥಾನದಲ್ಲಿರುವ ಪಕ್ಷ (ಅದು ಎಡ ಒಕ್ಕೂಟವಿರಲಿ ಅಥವಾ ಮ್ಯಾಕ್ರಾನ್ ಕೂಟವಿರಲಿ) ಎರಡನೇ ಸುತ್ತಿನಲ್ಲಿ ಹಿಂತೆಗೆಯಬೇಕೆಂಬ ತಂತ್ರಗಾರಿಕೆಗೆ ಅವರ ವಿರೋಧವಿತ್ತು. ಆದರೆ ಮ್ಯಾಕ್ರಾನ್  ಇದಕ್ಕಾಗಿ ತಮ್ಮನ್ನು ಸಾರ್ವಜನಿಕವಾಗಿ ಟೀಕಿಸಿದರೂ ಲೆಕ್ಕಿಸದೆ, ಪ್ರಧಾನಿ ಅಟ್ಟಲ್ ಎಡ ಒಕ್ಕೂಟದ ತಂತ್ರಗಾರಿಕೆಯನ್ನು ಬೆಂಬಲಿಸಿ ಅದರ ಜಾರಿಗೆ ಪ್ರಯತ್ನಿಸಿದರು. ಆದರೂ ನವ-ಫ್ಯಾಸಿಸ್ಟ್ ರಿಗಿಂತ ಎಡಪಂಥೀಯರು ಹೆಚ್ಚು ಅಪಾಯಕಾರಿಯೆಂದು ಭಾವಿಸುವ ಕೆಲವು ಮ್ಯಾಕ್ರಾನ್ ಬೆಂಬಲಿಗ ಅಭ್ಯರ್ಥಿಗಳು ಹಿಂತೆಗೆಯಲಿಲ್ಲ. ಮಾತ್ರವಲ್ಲ, ಅವರಲ್ಲಿ ಹಲವರು ಎಡ ಅಭ್ಯರ್ಥಿಗಳನ್ನು ಸೋಲಿಸಲು ನ್ಯಾಶನಲ್ ರ್ಯಾಲಿ ಅಥವಾ ರಿಪಬ್ಲಿಕನ್ ಅಭ್ಯರ್ಥಿಗಳು ಹಿಂತೆಗೆಯುವಂತೆ ಡೀಲ್ ಮಾಡುವ ವಿಫಲ ಪ್ರಯತ್ನವನ್ನೂ ಮಾಡಿದರು.

ಎಡ ಒಕ್ಕೂಟಕ್ಕೆ ಜನಾದೇಶ, ಸರಕಾರ ರಚನೆಗೆ ಮಾಕ್ರಾನ್ ತಡೆ

ಈ ಫಲಿತಾಂಶಗಳ ಪ್ರಕಾರ ಅಧ್ಯಕ್ಷ ಮ್ಯಾಕ್ರಾನ್ ಅವರ ನಡು-ಬಲಪಂಥೀಯ ರಂಗ ಕಳೆದ ಚುನಾವಣೆಗೆ (2022) ಹೋಲಿಸಿದರೆ 86 ಸೀಟು ಕಳೆದುಕೊಂಡು ಜನಾದೇಶ ಕಳೆದುಕೊಂಡಿದೆ. ಮೊದಲ ಸುತ್ತಿನಲ್ಲಿ ಶೇ.4.5 ಮತ್ತು ಎರಡನೇ ಸುತ್ತಿನಲ್ಲಿ ಶೇ.14 ಮತ ಕಳೆದುಕೊಂಡಿದ್ದು ಇದನ್ನು ಸಿದ್ಧ ಪಡಿಸುತ್ತವೆ.  ಮೊದಲ ಸುತ್ತಿನಲ್ಲಿ ಶೇ. 21.3 ಮತ ಗಳಿಸಿದ ಮ್ಯಾಕ್ರಾನ್ ಪಕ್ಷ  ಎರಡನೇ ಸುತ್ತಿನಲ್ಲಿ ಎಡ ಒಕ್ಕೂಟ (3ನೇ ಪಕ್ಷವಾಗಿದ್ದಲ್ಲಿ ಪೂರ್ಣವಾಗಿ ಹಿಂತೆಗೆದುಕೊಂಡದ್ದರಿಂದ, ಮತ್ತು ಮ್ಯಾಕ್ರಾನ್ ಕೂಟ ಭಾಗಶಃ ಮಾತ್ರ ಹಿಂತೆಗೆದುಕೊಂಡದ್ದರಿಂದ) ಶೇ.24.5 ಮತ ಗಳಿಸಿತು. ಅದೇ ಕಾರಣಕ್ಕೆ ಎಡ ಒಕ್ಕೂಟ 49 ಸೀಟು ಹೆಚ್ಚಳ ಗಳಿಸಿದರೂ ಮೊದಲ ಸುತ್ತಿನಲ್ಲಿ ಶೇ.28.2 ಮತ (ಶೇ. 2.6 ಹೆಚ್ಚಳ) ಗಳಿಸಿದರೂ, ಎರಡನೇ ಸುತ್ತಿನಲ್ಲಿ ಶೇ. 25.8 (ಶೇ.5.8 ಕಡಿತ) ಮತ ಗಳಿಸಿತು.

ಎಡ ಒಕ್ಕೂಟ ಮತ್ತು ಮ್ಯಾಕ್ರಾನ್ ಕೂಟ ಒಟ್ಟಾಗಿ ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಅನುಕ್ರಮವಾಗಿ ಶೇ. 49.5 ಮತ್ತು ಶೇ. 50.3 ಮತಗಳಿಕೆ ಹಾಗೂ 339 ಸೀಟು ಗಳಿಕೆ ಮೂಲಕ ಮತಗಳಿಕೆ/ಸೀಟು ಎರಡರಲ್ಲೂ ನಿಚ್ಚಳ ಬಹುಮತ ಗಳಿಸಿದೆ. ಆದರೆ ಅದೇ ಸಮಯದಲ್ಲಿ ಹಿಂದೆ ಬಹುಮತ ಹೊಂದಿದ್ದ ಮ್ಯಾಕ್ರಾನ್ ರಂಗವನ್ನು ಮೊದಲ ಸುತ್ತಿನಲ್ಲಿ ಮೂರನೇ ಸ್ತಾನಕ್ಕೆ ಮತ್ತು ಎರಡನೇ ಸುತ್ತಿನಲ್ಲಿ ಎರಡನೇ ಸ್ಥಾನಕ್ಕೆ ನೂಕುವ ಮೂಲಕ ಅದರ ನೀತಿಗಳನ್ನು ತಿರಸ್ಕರಿಸಿದ್ದಾರೆ.  ಅದು ಮತಗಳಿಕೆ/ಸೀಟು ಗಳಿಕೆಯಲ್ಲಿ ಎರಡನೇ ಸ್ಥಾನ ಬಂದಿರುವುದು ಎಡ ಒಕ್ಕೂಟ ಅದರ ಜತೆ ಪೂರ್ಣ ಸೀಟು ಹೊಂದಾಣಿಕೆ ಮಾಡಿದ್ದರಿಂದ ಮಾತ್ರವೆಂಬುದು ಸ್ಪಷ್ಟ

ಹಾಗಾಗಿ ಎಡ ಒಕ್ಕೂಟದ ನಾಯಕತ್ವದಲ್ಲಿ ಸರಕಾರ ರಚಿಸಲು ಜನಾದೇಶವಿದೆ ಎಂದು ಅದರ ನಾಯಕರು ಒತ್ತಾಯಿಸಿದ್ದಾರೆ.  ಎಡ ಒಕ್ಕೂಟ ಪಾರ್ಲಿಮೆಂಟರಿ ರಂಗ ತನ್ನ ನಾಯಕನನ್ನು ಆರಿಸಲಿದ್ದು ಅವರನ್ನು ಪ್ರಧಾನಿಯಾಗಿ ನೇಮಿಸಿ ಸರಕಾರ ರಚನೆಗೆ ಅಧ್ಯಕ್ಷ ಮ್ಯಾಕ್ರಾನ್ ರನ್ನು ಒತ್ತಾಯಿಸಿದ್ದಾರೆ.  ಮ್ಯಾಕ್ರಾನ್ ರಂಗಕ್ಕೆ ಜನಾದೇಶವಿಲ್ಲ ಎಂದು ಮನಗಂಡಿರುವ ಪ್ರಧಾನಿ ಅಟ್ಟಲ್ ರಾಜೀನಾಮೆ ಕೊಟ್ಟಿದ್ದಾರೆ. ಆದರೂ ಮ್ಯಾಕ್ರಾನ್ ಅವರು ನಾಟೋ 75 ನೇ ವಾರ್ಷಿಕೋತ್ಸವ ಶೃಂಗಸಭೆಗೆ ಯು.ಎಸ್ ತೆರಳುವಾಗ ಪ್ರಧಾನಿಗೆ ಸದ್ಯಕ್ಕೆ ತಮ್ಮ ಸ್ಥಾನದಲ್ಲಿ ಮುಂದುವರೆಯುವಂತೆ ಕೇಳಿದ್ದಾರೆ. ಎಡ ಮತ್ತು ಕಾರ್ಮಿಕ ವರ್ಗದ ಬೆಂಬಲಿತ ಪಕ್ಷಗಳನ್ನು ಅಧಿಕಾರ ವಹಿಸಿಕೊಳ್ಳದಂತೆ ತಡೆಯಲು ಮ್ಯಾಕ್ರಾನ್ ಇನ್ನೂ ಪ್ರಯತ್ನ ಪಡುತ್ತಿದ್ದಾರೆ ಎಂಭುದು ಸ್ಪಷ್ಟ.

ದೊಡ್ಡ ಉದ್ಯಮಿಗಳ ಮತ್ತು ದೈತ್ಯ ಮಾಧ್ಯಮಗಳ ಬೆಂಬಲದೊಂದಿಗೆ, ಅವರು ಚುನಾವಣೆಯಲ್ಲಿ ಮಾಡಿದಂತೆ ಎಡ ಪಂಥೀಯರ ವಿರುದ್ಧ ಭಯವನ್ನು ಹುಟ್ಟು ಹಾಕುವುದನ್ನು ಮುಂದುವರೆಸಿದ್ದಾರೆ. ಅವರು ಎಡ ಒಕ್ಕೂಟವನ್ನು ಅಧಿಕಾರದಿಂದ ಹೊರಗಿಡಲು ಒಂದು ಮಾರ್ಗವನ್ನು ಹುಡುಕುತ್ತಿದ್ದಾರೆಂದು ಹೇಳಲಾಗಿದೆ. ಫ್ರೆಂಚ್ ಸಂವಿಧಾನದ ಪ್ರಕಾರ ಅಧ್ಯಕ್ಷರು ಬಹುಮತ ಪಡೆದ ಅಥವಾ ಅತಿದೊಡ್ಡ ಪಕ್ಷದ ನಾಯಕರನ್ನೇ ಪ್ರಧಾನಿಯಾಗಿ ನೇಮಿಸಬೇಕೆಂಬ ಕಟ್ಟುಪಾಡು ಇಲ್ಲ. ಆದರೆ ಪ್ರಧಾನಿ ಮತ್ತು ಅವರ ಸಚಿವ ಸಂಪುಟಕ್ಕೆ ಪಾರ್ಲಿಮೆಂಟ್ ಅನುಮೋದನೆ ನೀಡಬೇಕು.  ಎಲ್ಲ ಪಕ್ಷಗಳ “ರಾಷ್ಟ್ರೀಯ ಸರಕಾರ” ಅಥವಾ “ಯಾವುದೇ ಪಕ್ಷಕ್ಕೆ ಸೇರದ “ಟೆಕ್ನೋ ಕ್ರಾಟ್ಪರಿಣ ತರ ಸರಕಾರ” ಅಥವಾ “ಎಡ ಒಕ್ಕೂಟ-ಎನ್ಸೆಂಬಲ್ – ರಿಪಬ್ಲಿಕನ್ ಒಕ್ಕೂಟ ಸರಕಾರ” ಗಳ ನೆಪದಲ್ಲಿ, ಎಡ ಒಕ್ಕೂಟದ ಪ್ರಣಾಳಿಕೆ ಮತ್ತು ನಾಯಕತ್ವದ ಸರಕಾರವನ್ನು ತಡೆಯುವ ಪ್ರಯತ್ನವನ್ನು ಮ್ಯಾಕ್ರಾನ್ ಮತ್ತು ಫ್ರೆಂಚ್ ಮಾತ್ರವಲ್ಲ ಯುರೋ-ಅಮೆರಿಕನ್ ಆಳುವ ವಲಯಗಳು ನಡೆಸುತ್ತಿವೆ.

ಆದರೆ ದುಡಿಯುವ ಮತ್ತು ಕಾರ್ಮಿಕ ವರ್ಗ, ನಾಗರಿಕ ಸಮಾಜ ಸುಮ್ಮನೆ ಕುಳಿತಿಲ್ಲ.  ಎರಡು ಸುತ್ತಿನ ಚುನಾವಣೆಗಳಲ್ಲಿ ಪ್ರಚಾರ ಸಂಘಟಿತ ಪ್ರಯತ್ನಗಳ ಮೂಲಕ ಎಡ ಒಕ್ಕೂಟವನ್ನು ಬೆಂಬಲಿಸಿದ್ದ ಟ್ರೇಡ್ ಯೂನಿಯನ್ಗಳು, ಸಾಮೂಹಿಕ ಸಂಘಟನೆಗಳು, ಪರಿಸರವಾದಿಗಳು ಮತ್ತು ಇತರ ನಾಗರಿಕ ಗುಂಪುಗಳು, ದುಡಿಯುವ ಜನರ ದೊಡ್ಡ ಸಂಘಟನೆಯಾದ ಸಿ.ಜಿ.ಟಿ ಮತ್ತು ಎಡ ಪಕ್ಷಗಳ ಕಾರ್ಯಕರ್ತರು ಎಡ ಒಕ್ಕೂಟದ ನಾಯಕತ್ವದಲ್ಲಿ ಅದರ ಪ್ರಣಾಳಿಕೆ ಜಾರಿ ಮಾಡುವ ಸರಕಾರ ರಚನೆಯಾಗದಿದ್ದರೆ ಬೀದಿಗಿಳಿದು ಕಾರ್ಯಾಚರಣೆ ನಡೆಸುವುದುದಾಗಿ ಹೇಳಿದ್ದಾರೆ. ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಬೀದಿಗಿಳಿದು ಕುಣಿದಾಡಿದ್ದು ಮಾತ್ರವಲ್ಲ ಫ್ರಾನ್ಸಿನ ಪ್ರಜಾಪ್ರಭುತ್ವ ಬೆಂಬಲಿಸುವ ಮತ್ತು ನವ-ಫ್ಯಾಸಿಸ್ಟರನ್ನು ಬಲವಾಗಿ ವಿರೋಧಿಸುವ ನಡು-ಎಡಪಂಥೀಯ ಎನ್ ಸೆಂಬಲ್ ಮತ್ತು ಬಲ ಪಂಥೀಯ ರಿಪಬ್ಲಿಕನ್ ಪಕ್ಷದ ಬೆಂಭಲಿಗರೂ ಅವರಲ್ಲಿದ್ದರು ಎಂಬುದು ಮ್ಯಾಕ್ರಾನ್ ಗೆ ಗಾಬರಿ ತರುತ್ತಿದೆ.

ನವ-ಫ್ಯಾಸಿಸ್ಟರನ್ನುಸೋಲಿಸುವಉತ್ತಮಮಾದರಿ

ಫ್ರಾನ್ಸಿನ ಚುನಾವಣಾ ಫಲಿತಾಂಶಗಳು ಜಗತ್ತಿನಾದ್ಯಂತ ಗಮನ ಸೆಳೆದಿವೆ. ಜನ ವಿರೋಧಿ ಕಠೋರ ಬಂಡವಾಳ ಶಾಹಿ ನೀತಿಗಳಿಂದ ಜನರ ಜೀವನ ದುರ್ಭರವಾಗುತ್ತಿದ್ದಂತೆ, ಆ ವ್ಯವಸ್ಥೆಯ ವಿರುದ್ಧ ಇದ್ದೇವೆಂದು ಪೋಸು ಕೊಡುವ ನವ-ಫ್ಯಾಸಿಸ್ಟ್ ಮತ್ತು ವಿವಿಧ ಉಗ್ರ ಬಲಪಂಥೀಯ ಶಕ್ತಿಗಳು, ಪಕ್ಷಗಳು ಆಘಾತಕಾರಿಯಾಗಿ ಬಲಗೊಳ್ಳುತ್ತಿವೆ.  ಜನವಿ ಭಾಗಗಳ ನಡುವೆ, ವಲಸೆಗಾರರ ವಿರುದ್ಧ ದ್ವೇಷ ಹಬ್ಬಿಸುತ್ತಿವೆ. ಚುನಾವಣೆಗಳ ಮೂಲಕ ಅಧಿಕಾರಕ್ಕೆ ಬರುತ್ತಿವೆ. ಈ ನವ-ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸುವ ಬಗೆ ಹೇಗೆ ಎಂಬುದು ಎಡ ಪ್ರಜಾಸತ್ತಾತ್ಮಕ ಪ್ರಗತಿ ಪರಶಕ್ತಿಗಳಿಗೆ ಸವಾಲಾಗಿರುವಾಗ ಫ್ರಾನ್ಸಿನ “ನ್ಯೂ ಪಾಪ್ಯುಲರ್ ಫ್ರಂಟ್” (ನವ ಜನಪ್ರಿಯ ರಂಗ- NFP) ಒಂದು ಉತ್ತಮ ಪ್ರಾಯೋಗಿಕ ಮಾದರಿಯನ್ನು ತೋರಿಸಿದೆ.

“ನವ ಜನಪ್ರಿಯ ರಂಗ”(NFP) ದ ಗೆಲುವು ಫ್ರಾನ್ಸಿನಲ್ಲಿ ಪ್ರಜಾಪ್ರಭುತ್ವ ಮತ್ತು ಕಾರ್ಮಿಕ ವರ್ಗಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ, ವಿಶಾಲವಾದ ಏಕತೆ, ಸಂಘಟನೆ ಮತ್ತು ಸಾಮೂಹಿಕ ಸಜ್ಜುಗೊಳಿಸುವಿಕೆಯು ಮುಂದಿನ ದಾರಿಯನ್ನು ತೋರಿಸಿದೆ. 1930 ರ ದಶಕದಲ್ಲಿ ಫ್ಯಾಸಿಸಂ ಅನ್ನು ತಡೆಯಲು ಬಲ್ಗೇರಿಯನ್ ಕಮ್ಯುನಿಸ್ಟ್ ಪಕ್ಷ ನಾಯಕ ಜಾರ್ಜಿ ಡಿಮಿಟ್ರಾವ್ ಪರಿಚಯಿಸಿದ ಕಾರ್ಮಿಕ, ಎಡ, ಪ್ರಗತಿ ಪರ ಮತ್ತು ನಡು ಪಂಥೀಯ ಶಕ್ತಿಗಳನ್ನು ಒಗ್ಗೂಡಿಸುವ “ಜನಪ್ರಿಯ ರಂಗ” (ಪಾಪ್ಯುಲರ್ ಫ್ರಂಟ್) ದ ತಂತ್ರಗಾರಿಕೆಯ ಹೊಸ ಅವತಾರವಿದು.

ಫ್ರಾನ್ಸ್ ಸುಮಾರು 90 ವರ್ಷಗಳ ಹಿಂದೆ 1935ರಲ್ಲಿ “ಜನಪ್ರಿಯ ರಂಗ” ದ ಸರ್ಕಾರವನ್ನು ಆಯ್ಕೆಮಾಡಿದ ಮೊದಲ ದೇಶವಾಗಿದ್ದು, 21ನೇ ಶತಮಾನದ ಇಂದಿನ ಸಂದರ್ಭದಲ್ಲಿ ಮತ್ತೆ ಮೊದಲ ದೇಶವಾಗಿದೆ ಯೆಂಬುದು ಗಮನಾರ್ಹ.

ಅನೇಕ ನವ-ಫ್ಯಾಸಿಸ್ಟ್ ಪಕ್ಷಗಳಂತೆ, ಫ್ರಾನ್ಸಿನ “ರಾಷ್ಟ್ರೀಯ ರ್ಯಾಲಿ”ಯು ಬಂಡವಾಳ ಶಾಹಿ ಆಳುವ ವರ್ಗಗಳ ನವ ಉದಾರವಾದಿ ಸಿದ್ಧಾಂತದ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಕ್ರಮಗಳನ್ನು ತೆಗೆದು ಕೊಂಡಿದೆ, ಯೂರೋ ಕರೆನ್ಸಿಯನ್ನು ಸ್ವೀಕರಿಸುತ್ತದೆ ಮತ್ತು ದೊಡ್ಡ ಬ್ಯಾಂಕ್ಗಳ ಬಜೆಟ್ ಬೇಡಿಕೆಗಳನ್ನು ಅನುಸರಿಸುವುದಾಗಿ ಭರವಸೆ ನೀಡಿದೆ. ನವ-ಫ್ಯಾಸಿಸ್ಟ್ ಪಕ್ಷ ಇಟಲಿಯಲ್ಲಿ ಅಧಿಕಾರಕ್ಕೆ ಬಂದು, ಈಗ  “ವ್ಯವಸ್ಥೆ”ಯ ಬಾಗವಾಗಿದೆ. ಉಕ್ರೇನ್ ಯುದ್ಧವನ್ನಾಗಲಿ, ನಾಟೋದ ಮತ್ತು ಯುರೋ ಕೂಟದ ಅಧಿಪತ್ಯವನ್ನಾಗಲಿ, ವಿರೋಧಿಸದೆ ಜನ-ವಿರೋಧಿ ಆರ್ಥಿಕ ನೀತಿಗಳನ್ನು ಅನುಸರಿಸುತ್ತಿದೆ. ಎಡ ಪ್ರಜಾಸತ್ತಾತ್ಮಕ ಪ್ರಗತಿಪರ ಬದಲಿ ಇಲ್ಲದಿದ್ದಾಗ ಇಂತಹ ನವ-ಫ್ಯಾಸಿಸ್ಟ್ ಪಕ್ಷಗಳತ್ತ ಜನ ನೋಡುತ್ತಾರೆ.

ಇದನ್ನೂ ನೋಡಿ: ನೇಹಾ ಕೊಲೆ ಪ್ರಕರಣ | ಲವ್ ಜಿಹಾದ್ : ಬಿಜೆಪಿಯ ದುರುದ್ದೇಶ ಬಯಲು

Donate Janashakthi Media

Leave a Reply

Your email address will not be published. Required fields are marked *