– ಎಚ್.ಆರ್. ನವೀನ್ ಕುಮಾರ್.ಹಾಸನ.
ಭಾರತದಲ್ಲಿ ಮಹಿಳೆಯರನ್ನ ಮತ್ತು ಮುಸ್ಲಿಮರನ್ನ ಅವಮಾನಿಸುವ ಮತ್ತು ಅನುಮಾನಿಸುವ ಕಾರ್ಯ ನಿರಂತರವಾಗಿ ನಡೆದು ಬಂದಿದೆ. ಈ ಸಂದರ್ಭದಲ್ಲಿ ಭಾರತದ ಘನತೆಯನ್ನ ಹೆಚ್ಚಿಸಿದ, ನಾವೆಲ್ಲರೂ ಭಾರತೀಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಮಾಡಿರುವ ಸೋಫಿಯಾ ಖುರೇಷಿ, ಬಾನು ಮುಷ್ತಾಕ್, ವ್ಯೋಮಿಕಾ ಸಿಂಗ್, ದೀಪ ಭಾಸ್ತಿ ಈ ನಾಲ್ವರು ಮಹಿಳೆಯರು ಅದರಲ್ಲೂ ಇಬ್ಬರು ಮುಸ್ಲಿಂ ಮಹಿಳೆಯರು ಮಾಡಿರುವ ಸಾಧ್ಯ ಕಡಿಮೆ ಅಂದಾಜಿನದ್ದಲ್ಲ.
ಭಾರತಕ್ಕೆ ಭವ್ಯ ಪರಂಪರೆಯಿದೆ. ಈ ದೇಶವನ್ನ ಸನಾತನ ಹಿಂದೂ ಸಂಸ್ಕೃತಿಯ ಆಧಾರದಲ್ಲಿ ಕಟ್ಟಬೇಕು ಎಂದು ಪ್ರತಿಪಾದಿಸುವ, ಅದಕ್ಕಾಗಿಯೇ ಹುಟ್ಟಿ ನೂರು ವರ್ಷಗಳನ್ನು ಪೂರೈಸುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ RSS ಈ ಕ್ಷಣಗಳನ್ನ ಹೇಗೆ ವಿಶ್ಲೇಷಿಸುತ್ತದೆ.
ಇದನ್ನು ಓದಿ:ರಾಜ್ಯಾದ್ಯಂತ ಭಾರಿ ಮಳೆ : ರಾಜ್ಯ ಸರ್ಕಾರದಿಂದ ಗ್ರಾಮೀಣ ಭಾಗದ ಜನರಿಗೆ ಮಹತ್ವದ ಪ್ರಕಟಣೆ
ಭಾರತದ ಮುಸ್ಲಿಂ ಸಾಧಕರ ಹಾದಿ ಮತ್ತು ಪಟ್ಟಿ ದೊಡ್ಡದಿದೆ. ಇದನ್ನ RSS ಮಾತ್ರವಲ್ಲ… ಪ್ರತಿಯೊಬ್ಬ ಭಾರತೀಯರೂ ಅರ್ಥಮಾಡಿಕೊಳ್ಳಬೇಕು ಮತ್ತು ಅದಕ್ಕಾಗಿ ಎಲ್ಲರೂ ಹೆಮ್ಮೆಪಡಬೇಕು. ಕುವೆಂಪು ಹೇಳಿದಂತೆ ಇದು ಸರ್ವಜನಾಂಗದ ಶಾಂತಿಯ ತೋಟ… ಈ ತೋಟಕ್ಕೆ ಕೊಳ್ಳಿಯಿಡುವವರ ಬಗ್ಗೆ ನಾವೆಲ್ಲರೂ ಸದಾ ಜಾಗೃತರಾಗಿರಬೇಕು.
ಹಿಂದೂ ಧರ್ಮ ಪ್ರತಿಪಾದಕರಾದ ಸನಾತನಿಗಳು ಒಪ್ಪಿ ಅಪ್ಪಿಕೊಂಡಿರುವ ಮನುಸ್ಮೃತಿಯಲ್ಲಿ ಮಹಿಳೆಗೆ ಯಾವ ಸ್ಥಾನವನ್ನ ಕೊಡಲಾಗಿದೆ ಎಂಬ ಹರಿವು ನಮಗಿರಬೇಕು. ಮಹಿಳೆ ಸ್ವತಂತ್ರಕ್ಕೆ ಅರ್ಹಳಲ್ಲ ಎಂಬ ಬಲವಾದ ಪ್ರತಿಪಾದನೆಯೊಂದಿಗೆ ಆಕೆಯನ್ನ ಪುರುಷನ ಅಡಿಯಾಳಾಗಿಸಲಾಗಿದೆ..
ಸಾಹಿತಿ ಬಾನು ಮುಷ್ತಾಕ್ ಕೂಡ ಮುಸ್ಲಿಂ ಧರ್ಮದಲ್ಲಿ ಮಹಿಳೆಗೆ ಸಿಗದ ಸ್ವಾತಂತ್ರ್ಯಕ್ಕಾಗಿ ದನಿ ಎತ್ತಿ ಆ ಧರ್ಮದಿಂದ ಫತ್ವಾ ಹೊರಡಿಸಿಕೊಂಡಿದ್ದರು. ಮತ್ತು ಧಾರ್ಮಿಕ ಮೂಲಭೂತವಾದಿಗಳ ವಿರುದ್ಧ ನಿರಂತರವಾಗಿ ಹೋರಾಡುತ್ತಿರುವವರು.
ಯಾವುದೇ ಧರ್ಮ ಮೂಲಭೂತವಾದಿಯಾದರೆ ಅದು ಮನುಷ್ಯ ವಿರೋಧಿಯಾಗುತ್ತದೆ. ಯಾವ ಧರ್ಮ ವಿಜ್ಞಾನವನ್ನ ನಂಬುವುದಿಲ್ಲ ಆ ಧರ್ಮ ಮನುಷ್ಯ ವಿರೋಧಿಯಾಗಿರುತ್ತದೆ, ಯಾವ ಧರ್ಮ ಮಹಿಳೆಗೆ ಪುರುಷನಂತೆ ಎಲ್ಲಾ ರೀತಿಯ ಸ್ವಾತಂತ್ರ್ಯ ಕೊಡುವುದಿಲ್ಲವೂ ಅದು ಮನುಷ್ಯ ವಿರೋಧಿಯಾಗಿರುತ್ತದೆ.
ಇದನ್ನು ಓದಿ:ಕ್ಯಾಬ್ ಸೇವೆಗೂ ಮುನ್ನ ಟಿಪ್ಸ್ ಪಡೆದರೆ ಕಟ್ಟುನಿಟ್ಟಿನ ಕ್ರಮ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಚ್ಚರಿಕೆ
ಸಾಧನೆಗೈದ ಈ ತಾಯಂದಿರನ್ನ ನೋಡಿದರೆ ಇವರು ಧಾರ್ಮಿಕ ಮೂಲಭೂತವಾದಿಗಳಿಗೆ ತಮ್ಮ ಕೆಲಸದ ಮೂಲಕ ಸರಿಯಾದ ಪ್ರತ್ಯುತ್ತರ ನೀಡಿದ್ದಾರೆ ಎಂದೆನಿಸುತ್ತದೆ.
ನಾವು ನಮ್ಮ ದೇಶವನ್ನ ತಾಯ್ನಾಡು ಎನ್ನುತ್ತೇವೆಯೇ ಹೊರತು ತಂದೆಯ ನಾಡು ಎನ್ನುವುದಿಲ್ಲ. ಎಲ್ಲರಲ್ಲೂ ತಾಯ್ತನ ಬೇರೂರಿ ಹೆಮ್ಮರವಾಗಿ ಬೆಳೆಯಲಿ. ಮರವೊಂದು ಯಾವುದೇ ತಾರತಮ್ಯವಿಲ್ಲದೆ ಹಸಿದವರಿಗೆ ಹಣ್ಣು, ದಣಿದು ಬಂದವರಿಗೆ ನೆರಳು ನೀಡುವಂತೆ.. ತಾಯ್ತನ ಮೈಗೂಡಿಸಿಕೊಂಡರೆ ನಾವೆಲ್ಲಾ ಮನುಷ್ಯರಾಗುತ್ತೇವೆ.. ಅದೇ ಅಂತಿಮ…ಅದೇ ಸತ್ಯ…