ಯಾದಗಿರಿ: ಯಾದಗಿರಿ ತಾಲೂಕಿನ ಜೀನಕೇರ ತಾಂಡಾ ಬಳಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬೆಳಿಗ್ಗೆಯಿಂದ ಜಮೀನಿನಲ್ಲಿ ಕೃಷಿ ಕೆಲಸದಲ್ಲಿ ತೊಡಗಿದ್ದ ಕುಟುಂಬಸ್ಥರು ಸೋಮವಾರ ಮಧ್ಯಾಹ್ನ ವೇಳೆಗೆ ಆರಂಭವಾದ ಮಳೆಯಿಂದ ರಕ್ಷಿಸಿಕೊಳ್ಳಲು ಜಮೀನಿನಲ್ಲಿರುವ ಹುಣಸೆ, ಬೇವಿನ ಮರ, ಚಿಕ್ಕ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದಾಗ ಸಿಡಿಲು ಬಡಿದಿದ್ದು, ಘಟನೆಯಲ್ಲಿ ಕಿಶನ್ ನಾಮಣ್ಣ ಜಾಧವ (25), ಚನ್ನಪ್ಪ ನಾಮಣ್ಣ ಜಾಧವ (24), ನೇನು ನಿಂಗಪ್ಪ ಜಾಧವ (15), ಸುಮಾಬಾಯಿ ರಾಠೋಡ (27) ಉಸಿರು ನಿಲ್ಲಿಸಿದ್ದಾರೆ.
ಇದನ್ನೂ ಓದಿ: ಅಕ್ಟೋಬರ್ ಅಂತ್ಯದೊಳಗೆ ಚನ್ನರಾಯಪಟ್ಟಣ ರೈತರ ಸಮಸ್ಯೆ ಬಗೆಹರಿಸುತ್ತೇವೆ- ಸಿಎಂ ಸಿದ್ದರಾಮಯ್ಯ
ಗುಡುಗು, ಸಿಡಿಲಿನೊಂದಿಗೆ ಮಳೆ ಅರಂಭವಾದಾಗ ಜಮೀನಿನ ಕೆಲಸ ಬಿಟ್ಟು ಮರ ಮತ್ತು ದುರುಗಮ್ಮ ದೇವಿ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದಾರೆ. ಆಗ ಆರ್ಭಟಿಸಿದ ಸಿಡಿಲು ಮರ, ದೇವಸ್ಥಾನದ ಬಳಿ ಆಶ್ರಯ ಪಡೆದಿದ್ದ ಮೂವರನ್ನು ಸ್ಥಳದಲ್ಲೇ ಆಹುತಿ ಪಡೆದಿದೆ. ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವಾಗ ಉಸಿರು ಚೆಲ್ಲಿದ್ದಾರೆ. ಮೋನಪ್ಪ, ಗಣೇಶ್, ಲಕ್ಷ್ಮಿ, ದರ್ಶನ್, ಗುಬ್ಬಿಬಾಯಿ, ಸೇಬಿಬಾಯಿ, ನೀಲಿಬಾಯಿ, ನಾಮಣ್ಣ ಸಿಡಿಲಿನ ಆಘಾತದಲ್ಲಿ ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎಂದು ತಿಳಿದು ಬಂದಿದೆ.
ಇದನ್ನೂ ನೋಡಿ: ಶ್ರೀಲಂಕಾ ನೂತನ ಅಧ್ಯಕ್ಷ ದಿಸ್ಸನಾಯಕೆ | ಕಾರ್ಮಿಕನ ಮಗ ಈಗ ಅಧ್ಯಕ್ಷ Janashakthi Media