ಬೆಂಗಳೂರು: ಹಳೆಯ ಪ್ರಕರಣವೊಂದರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೆ ಮತ್ತೆ ಸಂಕಷ್ಟ ಎದುರಾಗಿದೆ. 2019ರಲ್ಲಿ ಆಪರೇಷನ್ ಕಮಲದ ಮೂಲಕ ಸಿಎಂ ಪಟ್ಟ ಪಡೆದಿದ್ದ ಯಡಿಯೂರಪ್ಪ ಹಾಗೂ ಬಿಜೆಪಿಗೆ ಹಾರಿದ್ದ 17 ಅನರ್ಹ ಶಾಸಕರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದಾಖಲಾಗಿರುವ ಭ್ರಷ್ಟಾಚಾರದ ಆರೋಪಗಳ ಕುರಿತು ತನಿಖೆ ಆರಂಭಿಸಲು ಅಭಿಯೋಜನಾ ಮಂಜೂರಾತಿ ನೀಡುವಂತೆ ಜನಾಧಿಕಾರ ಸಂಘರ್ಷ ಪರಿಷತ್ತು ವಿಧಾನಸಭೆಯ ಸಭಾಪತಿಗಳಿಗೆ ಅರ್ಜಿ ಸಲ್ಲಿಸಿದೆ.
ಅಭಿಯೋಜನಾ ಮಂಜೂರಾತಿ ಪಡೆಯಬೇಕೆಂಬ ಆದೇಶದ ಮೇರೆಗೆ, ಜನಪ್ರತಿನಿಧಿಗಳ ಸ್ಪೆಷಲ್ ಕೋರ್ಟಿನ ನ್ಯಾಯಾಧೀಶರು, 2019ರ ಆಪರೇಶನ್ ಕಮಲದಲ್ಲಿ ಭಾಗಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಪದವಿಯ ಲಾಭವನ್ನು ಪಡೆದ ಬಿ ಎಸ್ ಯಡಿಯೂರಪ್ಪ ಹಾಗೂ ಇನ್ನಿತರ 17 ಶಾಸಕರ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ತನಿಖೆ ಆರಂಭಿಸುವ ಸಲುವಾಗಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಕಲಂ 17ಎ ಅಡಿಯಲ್ಲಿ ಅನುಮತಿ ಕೋರುವ ಅರ್ಜಿಯನ್ನು ವಿಧಾನಸಭೆಯ ಸಭಾಪತಿಗಳಿಗೆ ಸೆ.11ರಂದು ಸಲ್ಲಿಸಲಾಗಿದೆ ಎಂದು ಜನಾಧಿಕಾರ ಸಂಘರ್ಷ ಪರಿಷತ್ತಿನ ಪದಾಧಿಕಾರಿ ಆದರ್ಶ್ ಆರ್ ಅಯ್ಯರ್ ತಿಳಿಸಿದ್ದಾರೆ.
“ಆರೋಪಿತ 17 ಶಾಸಕರು ತಮ್ಮ ರಾಜಕೀಯ ಪಕ್ಷದ ಅಧಿಕೃತ ವಿಪ್ ಅನ್ನು ಉಲ್ಲಂಘಸಿ ಅಂದು ವಿಶ್ವಾಸಮತ ಯಾಚನೆ ಕಾರ್ಯದಲ್ಲಿ ಹಾಜರಾಗದೆ ತಮ್ಮ ಆದ್ಯ ಕರ್ತವ್ಯವಾದ ಮತ ಚಲಾವಣೆಯನ್ನು ಕ್ರಮಬಾಹಿರವಾಗಿ ಅನುಸರಿಸದೆ ಅನ್ಯ ಪಕ್ಷದ ಯಡಿಯೂರಪ್ಪನವರಿಗೆ ಅನುಚಿತ ಅನುಕೂಲ ಕಲ್ಪಿಸಿದ್ದಾರೆ ಎಂಬ ಆರೋಪವನ್ನು ಭ್ರಷ್ಟಾಚಾರ ನಿಗ್ರಹ (ತಿದ್ದುಪಡಿ) ಕಾಯ್ದೆ, 2018ರ ಕಲಂ 7ರ ಅಡಿಯಲ್ಲಿ ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ನ್ಯಾಯಾಧೀಶರು ತಮ್ಮ ತೀರ್ಪಿನ ಪ್ಯಾರಾ 27ರಲ್ಲಿ ಉಲ್ಲೇಖಿಸಿರುವುದು ಗಮನಾರ್ಹ ವಿಚಾರ.”
ಇದನ್ನೂ ಓದಿ: ಸಿಜೆಐ ನಿವಾಸಕ್ಕೆ ಪ್ರಧಾನಿ ಖಾಸಗಿ ಭೇಟಿಗೆ ಅವಕಾಶ ಮಾಡಿಕೊಟ್ಟಿರುವುದು ನಿಜಕ್ಕೂ ಆಘಾತಕಾರಿ: ವಕೀಲ ಪ್ರಶಾಂತ್ ಭೂಷಣ್
“ಅಕ್ರಮವಾಗಿ ಪಕ್ಷಾಂತರಗೊಳ್ಳುವ ಶಾಸಕರುಗಳನ್ನು ಕೇವಲ ಅನರ್ಹಗೊಳಿಸುವುದಷ್ಟೇ ಸಾಲದು ಪಕ್ಷಾಂತರದ ಕುಕೃತ್ಯದ ಹಿಂದೆ ನಡೆಯುವ ಭ್ರಷ್ಟ ಕ್ರಮಗಳು ವಿರುದ್ಧವೂ ತನಿಖೆ ಆಗದಿದ್ದರೆ ಕಾನೂನಿನ ಮೂಲ ಉದ್ದೇಶ ಪೂರೈಸುವುದಿಲ್ಲ ಮತ್ತು ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಹಾಗಾಗಿ ಸಂಬಂಧಿತ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ಆರೋಪಿತ 17 ಜನ ಜನಪ್ರತಿನಿಧಿಗಳ ವಿರುದ್ಧ ಹಾಗೂ ಇದಕ್ಕೆ ಸಹಯೋಗ ನೀಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ತನಿಖೆ ನಡೆಸಲು ಅವಕಾಶ ನೀಡಬೇಕು” ಎಂದು ಅರ್ಜಿಯಲ್ಲಿ ಕೋರಿದ್ದಾಗಿ ಹೇಳಿದ್ದಾರೆ.
ವಿಶೇಷ ನ್ಯಾಯಾಲಯದ ಜನವರಿ 2020ರ ಆದೇಶದ ನಂತರ ಕೋವಿಡ್ ಲಾಕ್ ಡೌನ್ ಆರಂಭವಾಗಿ ಸುಮಾರು 2 ವರ್ಷಗಳವರೆಗೆ ಜನಜೀವನ ಅಸ್ತವ್ಯಸ್ತವಾಗಿತ್ತು. ನಂತರದ ಹಲವಾರು ಹಗರಣಗಳ ಮಧ್ಯೆ ಹಾಗೂ ರಾಜ್ಯ ಮತ್ತು ಕೇಂದ್ರದ ಚುನಾವಣೆಗಳ ಭರದಲ್ಲಿ ಈ ಪ್ರಕರಣವು ಮರೆತೇ ಹೋಯಿತು. ಪ್ರಸ್ತುತದಲ್ಲಿ ಪುನಃ ಆಪರೇಷನ್ ಕಮಲ ನಡೆಯುವ ಬಗ್ಗೆ ಹೇಳಿಕೆಗಳು ಕೇಳಿಬರುತ್ತಿರುವ ಹಿನ್ನಲೆಯಲ್ಲಿ, ಹಾಗೂ ರಾಜ್ಯದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಸರ್ಕಾರ 5 ವರ್ಷಗಳ ಕಾಲ ಪೂರ್ಣವಾಗಿ ಆಡಳಿತ ನಡೆಸಿ ಆ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಲು 2019ರಲ್ಲಿ ನಡೆದ ಆಪರೇಷನ್ ಕಮಲ ಪ್ರಕರಣದಲ್ಲಿ ಯಡಿಯೂರಪ್ಪ ಹಾಗೂ ಬಿಜೆಪಿಗೆ ಹಾರಿದ್ದ 17 ಅನರ್ಹ ಶಾಸಕರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದಾಖಲಾಗಿರುವ ಭ್ರಷ್ಟಾಚಾರದ ಆರೋಪಗಳ ಕುರಿತು ತನಿಖೆ ಆರಂಭಿಸಲು ಅಭಿಯೋಜನಾ ಮಂಜೂರಾತಿ ನೀಡುವಂತೆ ಅರ್ಜಿಯಲ್ಲಿ ಕೋರಿದ್ದಾಗಿ ಆದರ್ಶ್ ಅಯ್ಯರ್ ತಿಳಿಸಿದ್ದಾರೆ.
ಇದನ್ನೂ ನೋಡಿ: ಸಂವಿಧಾನದ ಸಂರಕ್ಷಣೆಗಾಗಿ ಹೋರಾಡಬೇಕಿದೆ – ಡಾ. ಜಿ. ರಾಮಕೃಷ್ಣJanashakthi Media