ಕೊಟ್ಟಿಗೆಹಾರ: ಫೆಬ್ರವರಿ 3ರಂದು ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾದ ಚಾರ್ಮಾಡಿ ಘಾಟಿ ವ್ಯಾಪ್ತಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಭಾರೀ ಪ್ರಮಾಣದ ಕಾಡ್ಗಿಚ್ಚು ಸಂಭವಿಸಿದೆ. ಈ ಅಗ್ನಿ ಅವಘಡದಿಂದಾಗಿ ಪಶ್ಚಿಮ ಘಟ್ಟಗಳ ಸಾಲಿನ ಅಪಾರ ವನಸಂಪತ್ತು ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದುಬಂದಿದೆ.
ಮೂಡಿಗೆರೆ ಅರಣ್ಯ ವಲಯದ ವ್ಯಾಪ್ತಿಗೆ ಸೇರಿರುವ ಪ್ರದೇಶದೊಳಗೆ ಸಂಭವಿಸಿರುವ ಈ ಅಗ್ನಿ ಅವಘಡದಲ್ಲಿ, ಹತ್ತಾರು ಎಕರೆ ಹುಲ್ಲುಗಾವಲು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಎರಡು ಗಂಟೆಗೂ ಹೆಚ್ಚು ಕಾಲ ಬೆಂಕಿಯ ಜ್ವಾಲೆ ಧಗಧಗಿಸುತ್ತಿತ್ತು.
ಇದನ್ನೂ ಓದಿ: ದಾವಣಗೆರೆ | ಮಣ್ಣಿನ pH ಅರಿವು ಮೂಲಕ ಕೃಷಿಗೆ ಹೊಸ ದಾರಿ: ಗ್ರಾಮೀಣ ಪ್ರತಿಭೆಗೆ ರಾಷ್ಟ್ರ ಪ್ರಶಸ್ತಿಯ ಗರಿ!
ಗಾಳಿಯ ವೇಗ ಹೆಚ್ಚಿರುವುದರಿಂದ ಬೆಂಕಿ ಕ್ಷಿಪ್ರವಾಗಿ ಹರಡುತ್ತಿದ್ದು, ಅರಣ್ಯ ಸಂಪತ್ತಿಗೆ ಭಾರಿ ಹಾನಿಯಾಗುವ ಸಾಧ್ಯತೆಯಿದೆ. ರಸ್ತೆಯ ಪಕ್ಕದಲ್ಲೇ ಬೆಂಕಿ ಕಾಣಿಸಿಕೊಂಡಿರುವುದರಿಂದ ಚಾರ್ಮಾಡಿ ಘಾಟಿಯಲ್ಲಿ ಸಂಚರಿಸುವ ವಾಹನ ಸವಾರರಲ್ಲಿ ಆತಂಕ ಮೂಡಿದೆ.
ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಬೆಂಕಿ ರೇಖೆ ಮಾಡದೆ ನಿರ್ಲಕ್ಷ ವಹಿಸಿದ್ದರಿಂದ ಈ ಅನಾಹುತಕ್ಕೆ ಕಾರಣವಾಗಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.
ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪರಿಸ್ಥಿತಿಯನ್ನು ನಿರಂತರವಾಗಿ ನಿಗಾ ವಹಿಸಲಾಗುತ್ತಿದ್ದು, ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲು ತೀವ್ರ ಪ್ರಯತ್ನಗಳು ಮುಂದುವರಿದಿವೆ. ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಚಾರ್ಮಾಡಿ ಘಾಟಿಯ ರಸ್ತೆ ಉದ್ದಕ್ಕೂ ಬೆಂಕಿ ರೇಖೆಗಳನ್ನು ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ನೋಡಿ: ಗಾಂಧೀಜಿಯವರ ವಿಚಾರಗಳೊಂದಿಗೆ ಮುಖಾಮುಖಿ ಆಗಬೇಕಿದೆ – ಬರಗೂರು ರಾಮಚಂದ್ರಪ್ಪ Janashakthi Media
