ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಸುಮಾರು 50- 60 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ರೈತರ ಜಮೀನುಗಳ ಮೇಲೆ ಅರಣ್ಯ ಇಲಾಖೆ ಅಕ್ರಮವಾಗಿ ಏಕಾಏಕಿ ಮಧ್ಯೆ ಪ್ರವೇಶಿಸಿ ತೆರವುಗೊಳಿಸಿದ್ದು ಖಂಡನೀಯವಾಗಿದ್ದು ಕೂಡಲೇ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ ಆಗ್ರಹಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸೆ-2 ರಂದು ಸಿಪಿಐಎಂ ಜಿಲ್ಲಾ ಸಮಿತಿ ವತಿಯಿಂದ ನಡೆದ ಪತ್ರಿಕಾಗೋಷ್ಠಿ ನಡಸಿ ಮಾತನಾಡಿದ ಅವರು, ಅರಣ್ಯ ಇಲಾಖೆಯು ವಶಪಡಿಸಿಕೊಂಡಿರುವ ಜಮೀನುಗಳಿಗೆ ರೈತರು ತಾಲ್ಲೂಕು ಭೂ-ಮಂಜೂರಾತಿ ಸಮಿತಿಯಿಂದ ಕಾನೂನುಬದ್ದವಾಗಿ ಸಾಗುವಳಿ ಚೀಟಿಗಳನ್ನು ಪಡೆದಿದ್ದು, ಈ ಜಮೀನನ್ನು ಹತ್ತಾರು ವರ್ಷಗಳಿಂದ ಅಭಿವೃದ್ಧಿ ಪಡಿಸಿ ಸಾಗುವಳಿ ಮಾಡುತ್ತಿದ್ದಾರೆ. ಈ ಜಮೀನನ್ನು ನಂಬಿ ನೂರಾರು ಕುಟುಂಬಗಳು ಜೀವನ ನಡೆಸುತ್ತಿದ್ದು, ಅವರ ಬದುಕನ್ನು ಅರಣ್ಯ ಇಲಾಖೆ ನಾಶ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ:ಉತ್ತಮ ಆಡಳಿತ ವ್ಯವಸ್ಥೆಗಾಗಿ, ಪಾರದರ್ಶಕ ವರ್ಗಾವಣೆ ಮತ್ತು ನೇಮಕಾತಿ ನೀತಿಗಾಗಿ:ಸಿಪಿಐಎಂ ಒತ್ತಾಯ
ಮೈಸೂರು ಸರ್ಕಾರವು 26 ಜುಲೈ 1910 ರಲ್ಲಿ 13 ಗ್ರಾಮಗಳ ಸುಮಾರು 34 ಸರ್ವೆ ನಂಬರ್‌ಗಳ ಪೈಕಿ 3500 ಎಕರೆ ಅಧಿಕ ಜಮೀನನ್ನು ಅರಣ್ಯ ಇಲಾಖೆಗೆ ನೀಡಿತ್ತು. ಅರಣ್ಯ ಇಲಾಖೆಯು ಸಕಾಲದಲ್ಲಿ ಈ ಜಮೀನನ್ನು ತಮ್ಮ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಂಡಿಲ್ಲ. ಕಂದಾಯ ಇಲಾಖೆಯ ದಾಖಲೆಗಳಲ್ಲಿ ಗೋಮಾಳ, ಸರ್ಕಾರಿ ಖರಾಬು, ಹುಲ್ಲು ಬನ್ನಿ ಮತ್ತಿತರರ ಹೆಸರಿನಲ್ಲಿ ನಮೂದಾಗಿದೆ. ಇದನ್ನು ಮನಗಂಡ ರೈತರು ರಾಜ್ಯದಲ್ಲಿ ಜಾರಿಯಲ್ಲಿರುವ ಕಾನೂನಿನಂತೆ 50-60 ವರ್ಷಗಳಿಂದ ಉಳುಮೆ ಮಾಡುತ್ತಿದ್ದಾರೆ. ಇದರಲ್ಲಿ ಬಹುಪಾಲು ರೈತರಿಗೆ ಸಾಗುವಳಿಯನ್ನು ಪಡೆದು ತಮ್ಮ ಹೆಸರಿಗೆ ಪಕ್ಕ ದಾಖಲೆಗಳನ್ನು ಮಾಡಿಕೊಂಡಿದ್ದಾರೆ. ಇನ್ನು ಕೆಲವು ರೈತರ ಸಾಗುವಳಿ ಚೀಟಿಗಾಗಿ ಸಲ್ಲಿಸಿರುವ ಅರ್ಜಿಗಳು ವಿಲೇವಾರಿ ಆಗಿಲ್ಲ ಅದರೆ ಅರಣ್ಯ ಇಲಾಖೆ ರೈತರ ಜಮೀನುಗಳನ್ನು ವಶಪಡಿಸಿಕೊಳ್ಳಲು ಹೊರಟಿದ್ದಾರೆ ಎಂದರು.
ಕೋಲಾರ ಜಿಲ್ಲೆಯ ಅರಣ್ಯಾಧಿಕಾರಿಯವರು ಕಳೆದ 2020ರ ನವೆಂಬರ್ ನಲ್ಲಿ ಜಿಲ್ಲಾಧಿಕಾರಿಗೆ ಪತ್ರ ಬರೆದು ಸದರಿ ಜಮೀನುಗಳನ್ನು ಅರಣ್ಯ ಇಲಾಖೆಯ ಹೆಸರಿಗೆ ಪಹಣಿ ಮತ್ತು ಮ್ಯೂಟೇಷನ್ ಇಂಡೀಕರಣ ಮಾಡುವಂತೆ ಮನವಿ ಮಾಡಿದ್ದಾರೆ ಅವರ ಮನವಿಯಂತೆ ಜಿಲ್ಲಾಧಿಕಾರಿ ಡಿಸೆಂಬರ್ 2020 ರಂದು ಜರೂರು ಆದೇಶ ಮಾಡಿದ್ದಾರೆ. ತಹಶೀಲ್ದಾರ್ 2021ರ ಅಗಸ್ಟ್ ನಲ್ಲಿ ಸದರಿ ಎಲ್ಲಾ ಜಮೀನುಗಳನ್ನು ಅರಣ್ಯ ಇಲಾಖೆಗೆ ಪಹಣಿ ಮತ್ತು ಮ್ಯೂಟೇಷನ್ ಇಂಡೀಕರಣ ಮಾಡಿದ್ದಾರೆ. ಅರಣ್ಯ ಇಲಾಖೆಯ ಮನವಿಯನ್ನು ಜಿಲ್ಲಾಧಿಕಾರಿ ಮತ್ತು ತಹಶಿಲ್ದಾರ್ ಸ್ಥಳ ಪರಿಶೀಲನೆ ನಡೆಸಿ ಕುಲಂಕೂಶವಾಗಿ ತನಿಖೆ ನಡೆಸದೇ ಆದೇಶ ಮಾಡಿರುವುದು ಸರಿಯಾದ ಕ್ರಮವಲ್ಲ ಸ್ಥಳ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದ್ದರೆ ಇವತ್ತು ಸಮಸ್ಯೆಯು ಇಷ್ಟು ಜಟಿಲವಾಗುತ್ತಿರಲಿಲ್ಲ ಎಂದು ಆರೋಪಿಸಿದರು.
ಶ್ರೀನಿವಾಸಪುರ ತಾಲ್ಲೂಕಿನ 84 ಗ್ರಾಮಗಳಿಗೆ ಸೇರಿದ 132 ಸರ್ವೆ ನಂಬರ್‌ಗಳ ಜಮೀನನ್ನು ಅರಣ್ಯ ಇಲಾಖೆಯ ಹೆಸರಿಗೆ ದಾಖಲೆಗಳನ್ನು ಬದಲಾವಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಭೂಮಿಯಲ್ಲಿರುವ ರೈತರನ್ನು ತೆರವುಗೊಳಿಸುವ ಸಾಧ್ಯತೆಗಳು ಇವೆ. ಇದೇ ರೀತಿಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಕಾರ್ಯಾಚರಣೆ ಮಾಡುವ ಅವಕಾಶಗಳು ಇವೆ. ಸಾವಿರಾರು ಪೊಲೀಸರ ರಕ್ಷಣೆಯಲ್ಲಿ ಅರಣ್ಯ ಇಲಾಖೆಯು ಯುದ್ದೋಪಾದಿಯಲ್ಲಿ ತೆರವು ಮಾಡಿರುವುದು ಅತ್ಯಂತ ಖಂಡನೀಯ. ರೈತರು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಅವಕಾಶ ನೀಡಿಲ್ಲ. ಪ್ರಶ್ನೆ ಮಾಡಲು ಹೋದ ರೈತರ ಮೇಲೆ ಸುಳ್ಳು ಕೇಸುಗಳನ್ನು ಹಾಕಿದ್ದಾರೆ. ಜಿಲ್ಲಾ ಅರಣ್ಯಾಧಿಕಾರಿ ಸರ್ವಾಧಿಕಾರಿಯಾಗಿ ವರ್ತಿಸುತ್ತಿರುವುದು ಖಂಡನೀಯ. ಜಿಲ್ಲಾಡಳಿತ, ರಾಜ್ಯ ಸರ್ಕಾರ ಹಾಗೂ ಜನಪ್ರತಿನಿಧಿಗಳು ಕೂಡಲೇ ಮಧ್ಯೆ ಪ್ರವೇಶ ಮಾಡಿ ತೆರವು ಕಾರ್ಯಾಚರಣೆಯನ್ನು ತಕ್ಷಣ ನಿಲ್ಲಿಸಬೇಕು. ಜಮೀನನ್ನು ರೈತರಿಗೆ ವಾಪಸು ನೀಡಬೇಕು. ಹಿಂದೆ ಇದ್ದಂತೆ ಸದರಿ ಜಮೀನಿನ ದಾಖಲೆಗಳನ್ನು ರೈತರ ಹೆಸರಿಗೆ ಬದಲಾವಣೆ ಮಾಡಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಪಿ.ಆರ್ ಸೂರ್ಯನಾರಾಯಣ ಮಾತನಾಡಿ ಸುಮಾರು 112 ವರ್ಷಗಳಿಂದ ಸುಮ್ಮನೆ ಇದ್ದು ಅರಣ್ಯ ಇಲಾಖೆ ಇವತ್ತು ಏಕಾಏಕಿ ಕಾರ್ಯಾಚರಣೆ ಮಾಡಿದ್ದಾರೆ ಸ್ವಂತ ಜಮೀನಿನಲ್ಲಿ ಮರ ತೆರವು ಗೊಳಿಸಲು ಅನುಮತಿ ಬೇಕಾದ ಸಂದರ್ಭದಲ್ಲಿ ಅರಣ್ಯ ಇಲಾಖೆಯೇ ಲಕ್ಷಾಂತರ ಮರಗಳನ್ನು ನಾಶ ಮಾಡಿದ್ದಾರೆ ಕೂಡಲೇ ಸರಕಾರ ಮಧ್ಯೆ ಪ್ರವೇಶ ಮಾಡಿ ಮರು ಪರಿಶೀಲನೆ ನಡೆಸಬೇಕು ಪರಿಹಾರಕ್ಕಾಗಿ ಅರಣ್ಯ ಇಲಾಖೆಯ ದೌರ್ಜನ್ಯದಿಂದ ಭೂಮಿ ಬೆಳೆಗಳನ್ನು ಕಳೆದುಕೊಂಡ ರೈತರ ಸಮಾವೇಶವನ್ನು ಶ್ರೀನಿವಾಸಪುರ ತಾಲೂಕಿನ ಸರಕಾರಿ ನೌಕರರ ಭವನದಲ್ಲಿ ಸೆ 5ರಂದು ನಡೆಯಲಿದೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಎಇದರು ಈ ಸಂದರ್ಭದಲ್ಲಿ ಮುಖಂಡರಾದ ಟಿ.ಎಂ ವೆಂಕಟೇಶ್, ವಿಜಯಕೃಷ್ಣ ಇದ್ದರು.