ಕೋವಿಡ್-19 ಸೋಂಕಿನ ಪ್ರಸ್ತುತ ಬಿಕ್ಕಟ್ಟು ಯುದ್ಧದಂತಹ ಪರಿಸ್ಥಿತಿಗೆ ಹೋಲುತ್ತದೆ. ಯುದ್ಧವನ್ನು ಗೆಲ್ಲಲು ಅಗತ್ಯವಿರುವ ದೂರಗಾಮಿ ಕ್ರಮಗಳನ್ನು ಕೈಗೊಳ್ಳುವುದಕ್ಕಿಂತ ಯಾವ ರೀತಿಯಲ್ಲಿಯೂ ಕಡಿಮೆ ಇಲ್ಲದ ಕ್ರಮಗಳ ಮೂಲಕ ಕೋವಿಡ್ ಬಿಕ್ಕಟ್ಟನ್ನು ನಿಭಾಯಿಸಬೇಕಾಗಿದೆ. ಆದರೆ ಹಾಗೆ ಮಾಡುವ ಬದಲು, ಲಸಿಕೆಗಳ ಕೊರತೆಯ ಜೊತೆಗೆ ಸಾಂಕ್ರಾಮಿಕವು ರಭಸವಾಗಿ ಹರಡುತ್ತಿರುವ ಸನ್ನಿವೇಶದಲ್ಲೂ ಮೋದಿ ಸರಕಾರ ಲಸಿಕೆಗಳ ಮಾರಾಟವನ್ನು ಉದಾರೀಕರಿಸುವ ಅತ್ಯಂತ ಬುದ್ದಿಗೇಡಿ ಕ್ರಮ ಕೈಗೊಂಡಿದೆ. ಈ ಮೂಲಕ ಅದು ಜಾಗತಿಕ ಹಣಕಾಸು ಬಂಡವಾಳದ ಪ್ರತಿಕ್ರಿಯೆಯ ಬಗ್ಗೆ ಮಾತ್ರ ತಲೆ ಕೆಡಿಸಿಕೊಂಡಿರುವಂತೆ ಕಾಣುತ್ತದೆ. ಇದು ಸಂಪೂರ್ಣ ಅಮಾನವೀಯತೆಯನ್ನು ತೋರುತ್ತದೆ. ಲಕ್ಷ ಲಕ್ಷ ಜನರ ಜೀವನವೇ ಅಪಾಯದಲ್ಲಿರುವಾಗ, ಜಾಗತಿಕ ಹಣಕಾಸು ಬಂಡವಾಳದ ಪ್ರತಿಕ್ರಿಯೆಗಳ ಬಗ್ಗೆ ಚಿಂತಿಸುವುದೇ ಅಪರಾಧ ಎಂದು ಆರ್ಥಿಕ ತಜ್ಞ ಪ್ರೊ. ಪ್ರಭಾತ್ ಪಟ್ನಾಯಕ್ ಅವರ ಬರೆದಿದ್ದಾರೆ.
ಮೋದಿ ಸರ್ಕಾರವು ತೆಗೆದುಕೊಂಡಿರುವ ನಿರ್ಣಯಗಳ ಪೈಕಿ, ಅತ್ಯಂತ ಬುದ್ಧಿಹೀನವಾದದ್ದೆಂದು ಹೇಳಬಹುದಾದ ನಿರ್ಧಾರವೆಂದರೆ, ಲಸಿಕೆಗಳ ವಿತರಣೆಗೆ ಸಂಬಂಧಿಸಿದ ಉದಾರೀಕರಣವೇ. ಆರಂಭದಲ್ಲಿ, ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಗಳನ್ನು ಉತ್ಪಾದಿಸುವ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಮತ್ತು ಭಾರತ್ ಬಯೋಟೆಕ್ ಈ ಎರಡೂ ಸಂಸ್ಥೆಗಳು ಉತ್ಪಾದಿಸುವ ಎಲ್ಲಾ ಲಸಿಕೆಗಳನ್ನೂ ಪ್ರತಿ ಡೋಸ್ಗೆ 150 ರೂ ಗಳಂತೆ ತಾನೇ ಕೊಳ್ಳುವುದಾಗಿ ಮತ್ತು ಅವುಗಳನ್ನು ರಾಜ್ಯಗಳ ಮೂಲಕ ಜನರಿಗೆ ಉಚಿತವಾಗಿ ಒದಗಿಸುವ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳಿಗೂ ಸಹ ಒದಗಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಈ ಖಾಸಗಿ ಆಸ್ಪತ್ರೆಗಳು ಲಸಿಕೆಗಳನ್ನು ಪಡೆಯಲು ಕೇಂದ್ರ ಸರ್ಕಾರಕ್ಕೆ ಹಣ ಪಾವತಿಸುವ ಕಾರಣದ ಮೇಲೆ ಪ್ರತಿ ಡೋಸ್ಗೆ 250 ರೂ ಶುಲ್ಕ ವಿಧಿಸುತ್ತಿದ್ದವು. ಆದರೆ, ಇದ್ದಕ್ಕಿದ್ದಂತೆಯೇ, ಕೇಂದ್ರ ಸರ್ಕಾರವು ಲಸಿಕೆಗಳ ಮಾರಾಟವನ್ನು ಉದಾರಗೊಳಿಸಿದೆ. ಹಾಗಾಗಿ, ಕೇಂದ್ರ ಸರ್ಕಾರವು ನಿಗದಿಪಡಿಸಿದ ದರಗಳಲ್ಲಿ, ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳು, ತಯಾರಿಕಾ ಸಂಸ್ಥೆಗಳಿಂದಲೇ ನೇರವಾಗಿ ಲಸಿಕೆಗಳನ್ನು ಖರೀದಿ ಮಾಡಬೇಕಿದೆ.
ಲಸಿಕೆಗಳ ಕೊರತೆ ಕಾಡುತ್ತಿರುವ ಸಮಯದಲ್ಲಿ ಮತ್ತು ಸಾಂಕ್ರಾಮಿಕವು ಭೀಕರವಾಗಿ ಹರಡುತ್ತಿರುವ ಸನ್ನಿವೇಶದಲ್ಲಿ, ಕೇಂದ್ರ ಸರ್ಕಾರವು ಲಸಿಕೆಗಳ ಮಾರಾಟವನ್ನು ಉದಾರಗೊಳಿಸಿದೆ. ಈ ಕ್ರಮವನ್ನು ಲಸಿಕೆ ತಯಾರಿಕಾ ಸಂಸ್ಥೆಗಳು ಹಿಗ್ಗಿನಿಂದ ಸ್ವಾಗತಿಸಿವೆ. ಲಸಿಕೆಗಳ ಬೆಲೆಗಳನ್ನು ಉತ್ಪಾದನೆಯ ವೆಚ್ಚಕ್ಕೆ ಸಂಬಂಧವಿಲ್ಲದೆ ಮತ್ತು ಮನಸ್ಸಿಗೆ ತೋಚಿದಂತೆ ನಿಗದಿಪಡಿಸಿವೆ. ನಂತರ, ರಾಜ್ಯ ಸರ್ಕಾರಗಳಿಗೆ ಮಾರುವ ಲಸಿಕೆಗಳ ದರ ಇಳಿಸಿರುವುದಾಗಿ ಹೇಳಿವೆ.
ಅನೇಕ ರಾಜ್ಯ ಸರ್ಕಾರಗಳು ಜನರಿಗೆ ಉಚಿತವಾಗಿ ಲಸಿಕೆಯನ್ನು ಹಾಕುವ ಬಯಕೆಯನ್ನು ಘೋಷಿಸಿವೆ. ಆದರೆ, ಹಣದ ಕೊರತೆಯನ್ನು ತೀವ್ರವಾಗಿ ಎದುರಿಸುತ್ತಿರುವ ವಿಷಮ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರಗಳ ಈ ಬಯಕೆ ಈಡೇರುತ್ತದೆಯೇ? ಖಾಸಗಿ ಆಸ್ಪತ್ರೆಗಳು ಲಸಿಕೆಗಳನ್ನು ದುಬಾರಿ ಬೆಲೆಯಲ್ಲಿ ಕೊಂಡರೂ ಸಹ, ಅದಕ್ಕಿಂತಲೂ ಹೆಚ್ಚಿನ ಶುಲ್ಕವನ್ನು ಲಸಿಕೆ ಚುಚ್ಚಿಸಿಕೊಂಡವರಿಂದ ವಸೂಲು ಮಾಡುವುದರಿಂದ ಅವರಿಗೆ ಸಮಸ್ಯೆ ಇಲ್ಲ. ಆದರೆ, ಒಂದು ಬಹುದೊಡ್ಡ ಸಂಖ್ಯೆಯ ಜನರು ಲಸಿಕೆ ಪಡೆಯಲು ದೊಡ್ಡ ಮೊತ್ತದ ಹಣವನ್ನು ತೆರಬೇಕಾಗುತ್ತದೆ.
ಈ ಸಂಬಂಧವಾಗಿ ಅನೇಕರು ಕೇಳುವ ಪ್ರಶ್ನೆ ಎಂದರೆ, ಖಾಸಗಿ ಆಸ್ಪತ್ರೆಗಳನ್ನು ಪೋಷಿಸುವ ಕೆಲವು ಅನುಕೂಲಸ್ತರು ಲಸಿಕೆ ಪಡೆಯಲು ಹೆಚ್ಚು ಹಣ ತೆತ್ತರೆ ತಪ್ಪೇನು? ಅವರು ಪಡೆಯುವ ಲಸಿಕೆಗೆ ಸರ್ಕಾರ ಏಕೆ ಸಹಾಯ ಧನ ಕೊಡಬೇಕು? ಈ ಪ್ರಶ್ನೆಗಳಿಗೆ ಎರಡು ಸ್ತರಗಳಲ್ಲಿ ಉತ್ತರ ಕೊಡಬಹುದು.
ಮೊದಲನೆಯದಾಗಿ, ಉತ್ಪಾದನೆಯ ಅರ್ಧಭಾಗವನ್ನು ಇತರರಿಗೆ ಅವಕಾಶ ಸಿಗುವ ಮೊದಲು ಕೊಳ್ಳುವ ಹಕ್ಕನ್ನು ಕೇಂದ್ರ ಸರ್ಕಾರ ಹೊಂದಿದೆ. ಆದ್ದರಿಂದ, ಉಳಿದ ಅರ್ಧ ಭಾಗ ಲಸಿಕೆಗಳನ್ನು ಕೊಳ್ಳಲು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳ ನಡುವೆ ಪೈಪೋಟಿ ಆರಂಭವಾಗುತ್ತದೆ. ಆಗ, ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಿನ ದರ ನಿಗದಿಪಡಿಸಿರುವುದರಿಂದ ಮತ್ತು ಈ ಮಾರಾಟದಿಂದ ಹೆಚ್ಚು ಲಾಭ ಸಿಗುವುದರಿಂದ ಹಾಗೂ ತಕ್ಷಣದಲ್ಲಿ ಲಸಿಕೆಗಳ ಕೊರತೆ ಇರುವುದರಿಂದ, ಲಸಿಕೆಗಳ ಹೆಚ್ಚಿನ ಭಾಗವನ್ನು ಖಾಸಗಿ ಆಸ್ಪತ್ರೆಗಳತ್ತ ತಿರುಗಿಸಲಾಗುತ್ತದೆ. ರಾಜ್ಯ ಸರ್ಕಾರಗಳಿಗೆ ಲಸಿಕೆಗಳ ಅಭಾವ ಎದುರಾಗುತ್ತದೆ. ಈ ಪರಿಸ್ಥಿತಿಯಲ್ಲಿ, ಸಾಕಷ್ಟು ಮಂದಿ ಬಡವರೂ ಸಹ ಲಸಿಕೆ ಪಡೆಯಲು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೇ ಹೋಗುತ್ತಾರೆ. ಹಾಗಾಗಿ, ಲಸಿಕೆಯ ದುಬಾರಿ ಬೆಲೆಯ ಹೊರೆ ಕೇವಲ ಶ್ರೀಮಂತರ ಮೇಲೆ ಮಾತ್ರವಲ್ಲ, ಬಡ ಜನರ ಮೇಲೂ ಬೀಳುತ್ತದೆ. ರಾಜ್ಯ ಸರ್ಕಾರಗಳಿಗೆ ಎಷ್ಟು ಲಸಿಕೆಗಳು ಪೂರೈಕೆಯಾಗಲಿವೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಎಷ್ಟು ಲಸಿಕೆಗಳು ಪೂರೈಕೆಯಾಗಲಿವೆ ಎಂಬುದನ್ನು ನಿಗದಿಪಡಿಸುವ ಮೊದಲೇ ಎರಡು ಬಗೆಯ ದರಗಳನ್ನು ನಿಗದಿಪಡಿಸಿ ಪೈಪೋಟಿ ಏರ್ಪಡಿಸಿರುವುದು ಒಂದು ಸಂಪೂರ್ಣ ಬುದ್ಧಿಹೀನ ಕ್ರಮವೇ. ಮೋದಿ ಸರ್ಕಾರವು ಮಾಡಿರುವುದು ಇದನ್ನೇ.
ಎರಡನೆಯದಾಗಿ, ಮತ್ತು ಇನ್ನೂ ಮೂಲಭೂತವಾಗಿ, ಲಸಿಕೆಯನ್ನು ಉಚಿತವಾಗಿ ಒದಗಿಸಿದಾಗ ಪ್ರಭುತ್ವವು ಪ್ರತಿಯೊಬ್ಬ ವ್ಯಕ್ತಿಯ ಜೀವಿಸುವ ಹಕ್ಕನ್ನು ಮಾನ್ಯ ಮಾಡಿದಂತಾಗುತ್ತದೆ. ಜೀವಿಸುವ ಹಕ್ಕು ಒಂದು ಸಾರ್ವತ್ರಿಕ ಹಕ್ಕು. ಅದರ ಸಾರ್ವತ್ರಿಕತೆಯನ್ನು ಏಕರೂಪದ ಬೆಲೆಯ ಮೂಲಕವೇ ವ್ಯಕ್ತಪಡಿಸಬೇಕಾಗುತ್ತದೆ. ಈ ಏಕರೂಪದ ಬೆಲೆಯು ಸೊನ್ನೆಯೇ ಆಗಿರಬೇಕಾಗುತ್ತದೆ. ವಿಧಿವತ್ತಾಗಿ ನಿಗದಿಪಡಿಸಿದ ಬೆಲೆಯು, ಏಕರೂಪದ್ದೇ ಇರಲಿ ಅಥವಾ ನಾನಾ ರೂಪದ್ದೇ ಇರಲಿ, ವಿಭಿನ್ನ ವ್ಯಕ್ತಿಗಳ ಮೇಲೆ, ಅವರವರ ವರಮಾನವನ್ನು ಆಧರಿಸಿ, ವಿಭಿನ್ನ ಪರಿಣಾಮವನ್ನು ಬೀರುವುದರಿಂದ ಪ್ರಭುತ್ವವು ವಿಭಿನ್ನ ವ್ಯಕ್ತಿಗಳ ಜೀವಿಸುವ ಹಕ್ಕನ್ನು ವಿಭಿನ್ನ ಮೌಲ್ಯಗಳ ಮೂಲಕ ಗುರುತಿಸಿದಂತಾಗುತ್ತದೆ. ಆದ್ದರಿಂದ, ಪ್ರಭುತ್ವದ ದೃಷ್ಟಿಯಲ್ಲಿ ಎಲ್ಲ ಜೀವಗಳೂ ಸಮಾನ ಮೌಲ್ಯ ಹೊಂದಿವೆ ಎಂಬ ಪ್ರತಿಪಾದನೆಯನ್ನು ಅಭಿವ್ಯಕ್ತಿಗೊಳಿಸುವ ಏಕೈಕ ಮಾರ್ಗವೆಂದರೆ, ಲಸಿಕೆಗಳನ್ನು ಎಲ್ಲರಿಗೂ ಉಚಿತವಾಗಿ ಒದಗಿಸುವುದೇ.
- ಕೇಂದ್ರ ಸರ್ಕಾರವು ಕೋವಿಶೀಲ್ಡ್ ನ ಉತ್ಪಾದಕ ಎಸ್ಐಐಗೆ 3,000 ಕೋಟಿ ರೂ.ಗಳನ್ನು ಮತ್ತು ಕೊವಾಕ್ಸಿನ್ನ ಉತ್ಪಾದಕ ಭಾರತ್ ಬಯೋಟೆಕ್ಗೆ 1,500 ಕೋಟಿ ರೂ.ಗಳನ್ನು ಕೊಟ್ಟಿದೆ.
- ಸಾರ್ವಜನಿಕ ಹಣವನ್ನು ಸ್ವೀಕರಿಸಿರುವ ಎಸ್ಐಐ ಮತ್ತು ಭಾರತ್ ಬಯೋಟೆಕ್ ಸಂಸ್ಥೆಗಳು ಲಾಭಕೋರತನವನ್ನೇ ದಂಧೆಯಾಗಿ ಮಾಡಿಕೊಳ್ಳದಂತೆ ನೋಡಿಕೊಳ್ಳಲು, ಕೇಂದ್ರ ಸರ್ಕಾರಕ್ಕೆ ಪ್ರತಿ ಡೋಸ್ಗೆ 150 ರೂಗಳಂತೆ ಮಾರುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಪೂರೈಕೆ ವೇಳಾ-ಪಟ್ಟಿಯ ಪ್ರಕಾರ ಲಸಿಕೆ ಒದಗಿಸುವಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಈ ಕಂಪನಿಗಳ ಉನ್ನತ ಹುದ್ದೆಗಳಲ್ಲಿ ಭಾರತ ಸರಕಾರದ ಪ್ರಾತಿನಿಧ್ಯವಿರಬೇಕು.
- ಎರಡನೆಯದಾಗಿ, ಲಸಿಕೆಯ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರವು ಈ ಎರಡು ಸಂಸ್ಥೆಗಳ ಆಚೆಗೂ ಹೋಗಬೇಕು. ಪ್ರತಿ ಡೋಸ್ ಲಸಿಕೆಯನ್ನು 150 ರೂ.ಗಳಲ್ಲಿ ಕೊಳ್ಳಲು ಅನುವಾಗುವಂತೆ ಲೈಸೆನ್ಸ್ ಕಡ್ಡಾಯವನ್ನು ಬಳಸಿ ಹೊಸ ಉತ್ಪಾದನಾ ಸೌಲಭ್ಯಗಳನ್ನು ಸಾಧ್ಯವಾದ ಮಟ್ಟಿಗೆ ಸಾರ್ವಜನಿಕ ವಲಯದಲ್ಲಿಯೇ ಪ್ರಾರಂಭಿಸಬೇಕು.
ಒಂದು ನಿರ್ದಿಷ್ಟ ವಯಸ್ಸಿನ ಎಲ್ಲ ನಾಗರಿಕರೂ ಮತದಾನದ ಹಕ್ಕನ್ನು ಹೊಂದಿರುವ ರೀತಿಯಲ್ಲಿ, ಸಾರ್ವತ್ರಿಕ ಹಕ್ಕಾಗಿರುವ ಮತದಾನದ ಹಕ್ಕನ್ನು ಯಾವುದೇ ಪಾವತಿಯೊಂದಿಗೆ ಷರತ್ತುಬದ್ಧಗೊಳಿಸಲು ಸಾಧ್ಯವಿಲ್ಲವೋ (ಅಂತಹ ಪಾವತಿಯು ಸಮಾನತೆಯನ್ನು ಉಲ್ಲಂಘಿಸುತ್ತದೆ, ಮತ್ತು, ಮತದಾನದ ಹಕ್ಕಿನ ಸಾರ್ವತ್ರಿಕತೆಯನ್ನೂ ಉಲ್ಲಂಘಿಸುತ್ತದೆ), ಅದೇ ರೀತಿಯಲ್ಲಿ ಮತ್ತು ಪ್ರಸಕ್ತ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬರ ಜೀವಿಸುವ ಹಕ್ಕು ಲಸಿಕೆಯನ್ನು ಆಧರಿಸಿರುವುದರಿಂದ, ಅದನ್ನು ಉಚಿತವಾಗಿಯೇ ಪಡೆಯುವ ಹಕ್ಕನ್ನು ಎಲ್ಲರೂ ಹೊಂದಿದ್ದಾರೆ.
ಎಲ್ಲರಿಗೂ ಲಸಿಕೆಯನ್ನು ಉಚಿತವಾಗಿ ಒದಗಿಸಲು ಬೇಕಾಗುವಷ್ಟು ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳಲು ಸರ್ಕಾರವು ಭಿನ್ನ ಭಿನ್ನ ಜನರಿಗೆ ಭಿನ್ನ ಭಿನ್ನ ತೆರಿಗೆ ವಿಧಿಸಬೇಕಾಗುತ್ತದೆ. ಅದು ಸರಿಯೂ ಹೌದು, ಅವಶ್ಯವೂ ಹೌದು. ಆದರೆ, ಲಸಿಕೆ ಪಡೆಯುವುದಕ್ಕೂ ಮತ್ತು ತೆರಿಗೆಯ ವಿಷಯಕ್ಕೂ ಯಾವುದೇ ಸಂಬಂಧವಿರಬಾರದು. ಅಂದರೆ, ಲಸಿಕೆ ಪಡೆಯುವ ಅವಕಾಶ ಸಾರ್ವತ್ರಿಕವಾಗಿರಬೇಕು ಮತ್ತು ತೆರಿಗೆಯ ವಿಷಯವನ್ನು ಪ್ರತ್ಯೇಕವಾಗಿಯೇ ನೋಡಬೇಕು. ಎಲ್ಲರಿಗೂ ಲಸಿಕೆಯನ್ನು ಉಚಿತವಾಗಿ ಒದಗಿಸಬೇಕಾದರೆ, ಅಗತ್ಯ ಪ್ರಮಾಣದ ಲಸಿಕೆಗಳನ್ನು ಕೇಂದ್ರ ಸರ್ಕಾರವೇ ಇಡಿಯಾಗಿ ಸಂಗ್ರಹಿಸಿಕೊಂಡು ಅವುಗಳನ್ನು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ವಿವಿಧ ಸಂಸ್ಥೆಗಳ ಮೂಲಕ ಜನರಿಗೆ ಒದಗಿಸಬೇಕು. ಲಸಿಕೆ ಹಾಕಲು ಖಾಸಗಿ ಆಸ್ಪತ್ರೆಗಳು ಈ ಹಿಂದೆ ವಸೂಲು ಮಾಡುತ್ತಿದ್ದ 250 ರೂ ಶುಲ್ಕವನ್ನು ನಿಲ್ಲಿಸಿ, ಇನ್ನು ಮುಂದೆ ಉಚಿತವಾಗಿ ಲಸಿಕೆಯನ್ನು ಹಾಕಬೇಕು.
ಲಸಿಕೆಗಳನ್ನು ಕೊಳ್ಳಲು ಕೇಂದ್ರ ಸರ್ಕಾರಕ್ಕೆ, ರಾಜ್ಯಗಳಿಗೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಮೂರು ಪ್ರತ್ಯೇಕ ಬೆಲೆಗಳನ್ನು ನಿಗದಿಪಡಿಸಲಾಗಿದೆ. ಅದಕ್ಕೂ ಮೊದಲು, ಕೇಂದ್ರ ಸರ್ಕಾರವು ಪ್ರತಿ ಡೋಸ್ಗೆ 150 ರೂ ಗಳಂತೆ ಲಸಿಕೆಗಳನ್ನು ಸಂಗ್ರಹಿಸಿತ್ತು. ಅಂದಿನಿಂದ ಇಂದಿನವರೆಗೆ ಉತ್ಪಾದನಾ ವೆಚ್ಚದಲ್ಲಿ ಯಾವ ಏರಿಕೆಯೂ ಆಗಿಲ್ಲ. ಆದ್ದರಿಂದ, ಕೇಂದ್ರ ಸರ್ಕಾರವು ಏಕೈಕ ಖರೀದಿದಾರನಾಗಿ ಅದೇ 150 ರೂ ಬೆಲೆಯಲ್ಲಿ ಲಸಿಕೆಗಳನ್ನು ಖರೀದಿಸಬೇಕು. 120 ಕೋಟಿ ಜನರಿಗೆ ಲಸಿಕೆ ಹಾಕಬೇಕಾಗುತ್ತದೆ ಎಂದು ಭಾವಿಸಿಕೊಂಡರೆ, ಪ್ರತಿಯೊಬ್ಬರಿಗೂ ಎರಡು ಡೋಸ್ ಲೆಕ್ಕದಲ್ಲಿ ತಗಲುವ ಒಟ್ಟು ವೆಚ್ಚವು 36,000 ಕೋಟಿ ರೂ. ಗಳಾಗುತ್ತದೆ.
ನರೇಂದ್ರ ಮೋದಿ ಅವರಿಗೆ ಬೇರೆ ಬೇರೆ ರಾಜಕೀಯ ಪಕ್ಷಗಳ ಹದಿಮೂರು ನಾಯಕರು ಇತ್ತೀಚೆಗೆ ಬರೆದಿರುವ ಒಂದು ಪತ್ರದಲ್ಲಿ, ಸರ್ಕಾರದ ಬಜೆಟ್ಟಿನಲ್ಲಿ ಲಸಿಕೆ ಹಾಕುವ ಉದ್ದೇಶಕ್ಕಾಗಿ ಮೀಸಲಿಟ್ಟ ಹಣವನ್ನು ಜನರಿಗೆ ಕೋವಿಡ್ ವಿರುದ್ಧ ಲಸಿಕೆ ಹಾಕುವ ಉದ್ದೇಶಕ್ಕಾಗಿಯೇ ಖರ್ಚು ಮಾಡಬೇಕು ಎಂದು ಸಲಹೆ ಮಾಡಿದ್ದಾರೆ. ಸರ್ಕಾರವು ಒಂದು ವೇಳೆ ಅದನ್ನು ಮಾಡದಿದ್ದರೆ ಮತ್ತು ಅದಕ್ಕೆ ಬದಲಾಗಿ ಹೆಚ್ಚುವರಿ ಸಂಪನ್ಮೂಲಗಳನ್ನು ಸಂಗ್ರಹಿಸಲು ಬಯಸಿದರೆ ಅದೂ ಉತ್ತಮವೇ, ವಿತ್ತೀಯ ಕೊರತೆಯನ್ನು ವಿಸ್ತರಿಸುವ ಮೂಲಕವಾದರೂ ಸರಿಯೇ, ಲಸಿಕೆ ಕಾರ್ಯಕ್ರಮವನ್ನು ತಕ್ಷಣವೇ ಕೈಗೊಳ್ಳಬೇಕು. ವಿತ್ತೀಯ ಕೊರತೆಯನ್ನು ನಿವಾರಿಸಿಕೊಳ್ಳಲು ಸಂಪನ್ಮೂಲಗಳನ್ನು ಕಾಲಾನಂತರ ಸಂಗ್ರಹಿಸಲು ಬಯಸುವುದಾದರೆ, ಅದೂ ಆಗಬಹುದು. ಅದಾಗದಿದ್ದರೆ, 36,000 ಕೋಟಿ ರೂ.ಗಳ ವಿತ್ತೀಯ ಕೊರತೆಗೆ ಅಧಿಕವಾಗಿ ಸೇರ್ಪಡೆಯಾಗುವ ಜಿಡಿಪಿಯ ಶೇಕಡಾ 0.2 ಕ್ಕಿಂತಲೂ ಕಡಿಮೆಯ ಕ್ಷುಲ್ಲಕ ಮೊತ್ತದ ಬಗ್ಗೆ ಆತಂಕಪಡುವಂತಿಲ್ಲ. ವಿತ್ತೀಯ ಕೊರತೆಯ ಸಂಬಂಧವಾಗಿ ಹಣಕಾಸು ಮಾರುಕಟ್ಟೆಗಳ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಳ್ಳುವುದು ಅನವಶ್ಯಕ. ಏಕೆಂದರೆ, ಈ ಹೆಚ್ಚಳವು ಅದೆಷ್ಟು ಸಣ್ಣದೆಂದರೆ, ಅವರ ಗಮನವನ್ನು ಆಕರ್ಷಿಸದಷ್ಟು ಸಣ್ಣದು. ಜೊತೆಗೆ, ಲಕ್ಷ ಲಕ್ಷ ಜನರ ಜೀವನವೇ ಅಪಾಯದಲ್ಲಿರುವಾಗ, ಜಾಗತಿಕ ಹಣಕಾಸು ಬಂಡವಾಳದ ಪ್ರತಿಕ್ರಿಯೆಗಳ ಬಗ್ಗೆ ಚಿಂತಿಸುವುದೇ ಅಪರಾಧ.
ಲಸಿಕೆಗಳ ಕೊರತೆಯ ಜೊತೆಗೆ ಸಾಂಕ್ರಾಮಿಕವು ರಭಸವಾಗಿ ಹರಡುತ್ತಿರುವ ಸನ್ನಿವೇಶದಲ್ಲಿ ಲಸಿಕೆಗಳ ಮಾರಾಟವನ್ನು ಉದಾರಗೊಳಿಸಿದ ಕೇಂದ್ರ ಸರ್ಕಾರ ಕ್ರಮದ ಬಗ್ಗೆ, ಅದರ ಹಿಂದಿರುವ ಸಂಪೂರ್ಣ ಅಮಾನವೀಯತೆಯನ್ನು ಹೊರತುಪಡಿಸಿ, ಒಂದು ವಿವರಣೆಯನ್ನು ಕೊಡುವುದಾದರೆ, ಜಾಗತಿಕ ಹಣಕಾಸು ಬಂಡವಾಳದ ಪ್ರತಿಕ್ರಿಯೆಯ ಬಗ್ಗೆ ಮಾತ್ರ ಅದು ತಲೆ ಕೆಡಿಸಿಕೊಂಡಿದೆ ಎಂದು ಹೇಳಬಹುದಷ್ಟೇ. ಕೋವಿಡ್ ಎರಡನೇ ಅಲೆಯು, ಮೊದಲ ಅಲೆಯು ವಯಸ್ಸಾದವರನ್ನೇ ಗುರಿಯಾಗಿಸಿಕೊಂಡಿದ್ದಕ್ಕಿಂತ ಭಿನ್ನವಾಗಿ, ವಯಸ್ಸಾದವರ ಮೇಲೆ ಅಪ್ಪಳಿಸಿದಷ್ಟೇ ಕಠಿಣವಾಗಿ ಯುವಕರ ಮೇಲೂ ಅಪ್ಪಳಿಸಿರುವುದರಿಂದ, ಲಸಿಕೆ ಹಾಕುವುದನ್ನು ಯುವಕರಿಗೂ ವಿಸ್ತರಿಸಬೇಕಾಗಿತ್ತು. ಆದರೆ, ಹಿಂದಿನ ಅಂದಾಜಿನಂತೆ ಲಸಿಕೆ ಹಾಕುವುದನ್ನು ದೊಡ್ಡ ಪ್ರಮಾಣದಲ್ಲಿ ಮುಂದುವರಿಸಿದ್ದೇ ಆಗಿದ್ದರೆ ವಿತ್ತೀಯ ಕೊರತೆಯು ಹೆಚ್ಚುತ್ತಿತ್ತು ಮತ್ತು ಅದರಿಂದಾಗಿ ಜಾಗತಿಕ ಹಣಕಾಸು ಬಂಡವಾಳವು ಮುಖ ತಿರುಗಿಸಿಕೊಳ್ಳುತ್ತಿತ್ತು ಎಂದು ಸರ್ಕಾರ ಭಯಪಟ್ಟಿದೆ ಎಂದೇ ಹೇಳಬಹುದು. ಆದರೆ, ಯಾವುದೇ ಸರ್ಕಾರವು, ಜಾಗತಿಕ ಹಣಕಾಸು ಬಂಡವಾಳದ ಪ್ರತಿಕ್ರಿಯೆಗಳಿಗೆ ಜನರ ಜೀವನಕ್ಕಿಂತಲೂ ಹೆಚ್ಚಿನ ಮಹತ್ವ ಕೊಟ್ಟರೆ, ಅದು ರಾಷ್ಟ್ರಕ್ಕೆ ಬಗೆದ ವಿಶ್ವಾಸಘಾತದ ಕೃತ್ಯವಾಗುತ್ತದೆ.
ಅಂತಿಮವಾಗಿ ಹೇಳುವುದಾದರೆ, ಲಸಿಕೆಗಳ ಪೂರೈಕೆಯ ಬಗ್ಗೆ ಪೂರಾ ನಿಗಾ ಇಡಬೇಕಾಗುತ್ತದೆ. ಲಸಿಕೆಗಳ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲು ಕೇಂದ್ರ ಸರ್ಕಾರವು ಕೋವಿಶೀಲ್ಡ್ನ ಉತ್ಪಾದಕ ಎಸ್ಐಐಗೆ 3,000 ಕೋಟಿ ರೂ.ಗಳನ್ನು ಮತ್ತು ಕೊವಾಕ್ಸಿನ್ನ ಉತ್ಪಾದಕ ಭಾರತ್ ಬಯೋಟೆಕ್ಗೆ 1,500 ಕೋಟಿ ರೂ.ಗಳನ್ನು ಕೊಟ್ಟಿದೆ. ಆದರೆ, ಈ ಸಂಸ್ಥೆಗಳು ಎಷ್ಡು ಸಮಯದಲ್ಲಿ ಎಷ್ಟು ಲಸಿಕೆಗಳನ್ನು ಉತ್ಪಾದಿಸುತ್ತವೆ ಎಂಬುದು ಇನ್ನೂ ಸ್ಪಷ್ಟವಿಲ್ಲ. ಇಂತಹ ಒಂದು ಮಹತ್ವದ ಮತ್ತು ನಿರ್ಣಾಯಕ ವಿಷಯದ ಬಗ್ಗೆ ಸರ್ಕಾರವು ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ.
ಇದಲ್ಲದೆ, ಇನ್ನೂ ಎರಡು ಸಮಸ್ಯೆಗಳಿವೆ. ಒಂದು, ಬ್ರಿಟನ್ನಲ್ಲಿ ಲಸಿಕೆಗಳನ್ನು ಉತ್ಪಾದಿಸಲು 240 ಮಿಲಿಯನ್ ಹೂಡಿಕೆಯ ಒಪ್ಪಂದವನ್ನು ಬ್ರಿಟಿಷ್ ಸರ್ಕಾರದೊಂದಿಗೆ ಎಸ್ಐಐ ಮಾಡಿಕೊಂಡಿದೆ. ಭಾರತದ ಕೋವಿಡ್-19 ಸೋಂಕಿನ ಪ್ರಸ್ತುತ ಪರಿಸ್ಥಿತಿಯು ವಿಶ್ವದಲ್ಲೇ ಅತ್ಯಂತ ಕೆಟ್ಟದಾಗಿದೆ ಎಂದು ಪರಿಗಣಿತವಾಗಿರುವಾಗ, ಭಾರತದಲ್ಲಿ ಲಸಿಕೆ ಉತ್ಪಾದನೆಯನ್ನು ಮುಂದೂಡುವುದನ್ನು ಮತ್ತು ಶ್ರಮ ಹಾಗೂ ಸಂಪನ್ಮೂಲಗಳನ್ನು ಇತರ ಮಾರುಕಟ್ಟೆಗಳತ್ತ ತಿರುಗಿಸುವುದನ್ನು ತಡೆಯಲೇಬೇಕು. ಅದಕ್ಕಾಗಿ, ಎಸ್ಐಐನ ಚಟುವಟಿಕೆಗಳ ಮೇಲೆ ಸರ್ಕಾರದ ಮೇಲ್ವಿಚಾರಣೆ ಅವಶ್ಯವಾಗುತ್ತದೆ ಮತ್ತು ಅದನ್ನು ಎಸ್ಐಐ ಆಡಳಿತದ ನಿರ್ವಹಣೆಯಲ್ಲಿ ಸರ್ಕಾರದ ಪ್ರಾತಿನಿಧ್ಯದ ಮೂಲಕ ಖಚಿತಪಡಿಸಿಕೊಳ್ಳಬಹುದು. ಇದು ಅಗತ್ಯವೂ ಹೌದು ಏಕೆಂದರೆ, ಸರ್ಕಾರವು ಎಸ್ಐಐಗೆ 3,000 ಕೋಟಿ ರೂ.ಗಳನ್ನು ಕೊಟ್ಟಿದೆ. ಹಾಗಾಗಿ, ಈ ಹಣವನ್ನು ಹೇಗೆ ಬಳಕೆ ಮಾಡಿಕೊಳ್ಳುತ್ತದೆ ಎಂಬುದರ ಮೇಲೆ ಸರ್ಕಾರವು ಕಣ್ಗಾವಲಿಡಬೇಕಾಗುತ್ತದೆ. ಇದೇ ರೀತಿಯ ವ್ಯವಸ್ಥೆಯನ್ನು ಭಾರತ್ ಬಯೋಟೆಕ್ನೊಂದಿಗೂ ಸಹ ಮಾಡಬೇಕಾಗಿದೆ.
ಕೇಂಬ್ರಿಜ್ನಲ್ಲಿ ತನ್ನ ಪ್ರಧಾನ ಕಾರ್ಯಾಲಯವನ್ನು ಹೊಂದಿರುವ ಆಸ್ಟ್ರಾಜೆನೆಕಾ ಎಂಬ ಸ್ವೀಡನ್-ಬ್ರಿಟನ್ ದೇಶಗಳ ಔಷದ ತಯಾರಿಸುವ ಬಹು ದೊಡ್ಡ ಮತ್ತು ಪ್ರತಿಷ್ಠಿತ ಸಂಸ್ಥೆಯೇ ಯುರೋಪಿಯನ್ ಒಕ್ಕೂಟ ದೇಶಗಳಿಗೆ ಒಪ್ಪಂದದ ಪ್ರಕಾರ ಲಸಿಕೆ ಪೂರೈಕೆಯಲ್ಲಿ ಕರ್ತವ್ಯಲೋಪ ಎಸಗಿರುವಾಗ, ಸಾರ್ವಜನಿಕ ಹಣವನ್ನು ಸ್ವೀಕರಿಸಿರುವ ಎಸ್ಐಐ ಮತ್ತು ಭಾರತ್ ಬಯೋಟೆಕ್ ಸಂಸ್ಥೆಗಳು ಪೂರೈಕೆ ವೇಳಾ-ಪಟ್ಟಿಯ ಪ್ರಕಾರ ಲಸಿಕೆ ಒದಗಿಸುವುದು ಅನುಮಾನವೇ. ಹಾಗಾಗಿ, ಈ ಕಂಪೆನಿಗಳು ಲಾಭಕೋರತನವನ್ನೇ ದಂಧೆಯಾಗಿ ಮಾಡಿಕೊಳ್ಳದಂತೆ ನೋಡಿಕೊಳ್ಳಲು, ಕೇಂದ್ರ ಸರ್ಕಾರಕ್ಕೆ ಪ್ರತಿ ಡೋಸ್ಗೆ 150 ರೂಗಳಂತೆ ಮಾರುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಪೂರೈಕೆ ವೇಳಾ-ಪಟ್ಟಿಯ ಪ್ರಕಾರ ಲಸಿಕೆ ಒದಗಿಸುವಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಈ ಕಂಪನಿಗಳ ಉನ್ನತ ಹುದ್ದೆಗಳಿಗೆ ಸರ್ಕಾರಿ ಅಧಿಕಾರಿಗಳನ್ನು ನೇಮಿಸುವ ಅಗತ್ಯವಿದೆ.
ಎರಡನೆಯದಾಗಿ, ಲಸಿಕೆಯ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರವು ಈ ಎರಡು ಸಂಸ್ಥೆಗಳ ಆಚೆಗೂ ಹೋಗಬೇಕು. ಪ್ರತಿ ಡೋಸ್ ಲಸಿಕೆಯನ್ನು 150ರೂಗಳಲ್ಲಿ ಕೊಳ್ಳಲು ಅನುವಾಗುವಂತೆ ಲೈಸೆನ್ಸ್ ಕಡ್ಡಾಯವನ್ನು ಬಳಸಿ ಹೊಸ ಉತ್ಪಾದನಾ ಸೌಲಭ್ಯಗಳನ್ನು ಸಾಧ್ಯವಾದ ಮಟ್ಟಿಗೆ ಸಾರ್ವಜನಿಕ ವಲಯದಲ್ಲಿಯೇ ಪ್ರಾರಂಭಿಸಬೇಕು.
ಕೋವಿಡ್-19 ಸೋಂಕಿನ ಪ್ರಸ್ತುತ ಬಿಕ್ಕಟ್ಟು ಯುದ್ಧದಂತಹ ಪರಿಸ್ಥಿತಿಗೆ ಹೋಲುತ್ತದೆ. ಯುದ್ಧವನ್ನು ಗೆಲ್ಲಲು ಅಗತ್ಯವಿರುವ ದೂರಗಾಮಿ ಕ್ರಮಗಳನ್ನು ಕೈಗೊಳ್ಳುವುದಕ್ಕಿಂತ ಯಾವ ರೀತಿಯಲ್ಲಿಯೂ ಕಡಿಮೆ ಇಲ್ಲದ ಕ್ರಮಗಳ ಮೂಲಕ ಕೋವಿಡ್ ಬಿಕ್ಕಟ್ಟನ್ನು ನಿಭಾಯಿಸಬೇಕಾಗಿದೆ.
ಅನುವಾದ: ಕೆ.ಎಂ. ನಾಗರಾಜ್