ತೀವ್ರ ಹಸಿವಿನ ನಡುವೆಯೂ ತುಳುಕುವ ಎಫ್‌ಸಿಐ ಗೋದಾಮುಗಳು ಮತ್ತು ಎಥೆನಾಲ್ ಉತ್ಪಾದನೆಗೆ ಉತ್ತೇಜನೆ

ಪ್ರೊ. ಪ್ರಭಾತ್ ಪಟ್ನಾಯಕ್

ನಾವು ಒಂದಕ್ಕೊಂದು ಹೊಂದಾಣಿಕೆಯೇ ಇರದಂತೆ ಕಾಣುವ ಮೂರು ವಿದ್ಯಮಾನಗಳ, ಅಂದರೆ, ತೀವ್ರ ಹಸಿವು, ಆಹಾರ ಧಾನ್ಯಗಳ ಹೆಚ್ಚುವರಿ ದಾಸ್ತಾನು ಮತ್ತು ಈ ಪರಿಸ್ಥಿತಿಯಲ್ಲೂ ಮಿತಿಮೀರಿದ ಹಣದುಬ್ಬರ- ಈ ಮೂರು ವಿದ್ಯಮಾನಗಳ ಸಂಯೋಜನೆಯನ್ನು ಕಾಣುತ್ತಿದ್ದೇವೆ. ಇದನ್ನು ಗ್ರಹಿಸಲಾರದ ಸರ್ಕಾರ ತೀವ್ರ ಹಸಿವಿನ ಇರವನ್ನೇ ನಿರಾಕರಿಸುತ್ತದೆ ಮತ್ತು ಎಥೆನಾಲ್ ಉತ್ಪಾದನೆಯನ್ನು ಪ್ರೋತ್ಸಾಹಿಸುತ್ತದೆ. ಈ ನಿರಾಕರಣೆಯ ಹಿಂದೆ ಇರುವುದು ಬಿಜೆಪಿಗಷ್ಟೇ ವಿಶಿಷ್ಟವಾದ ಒಂದು ಭ್ರಮೆ ಮಾತ್ರವಲ್ಲ (“ಮಹಾನ್ ಉದ್ಧಾರಕನು ಚುಕ್ಕಾಣಿ ಹಿಡಿದಿರುವಾಗ ತೀವ್ರ ಹಸಿವು ಇರಲು ಸಾಧ್ಯವಿಲ್ಲ”); ಅದರ ಜೊತೆಗೆ ನಿಜವಾದ ಅರ್ಥದಲ್ಲಿ ಸರಳ ಅರ್ಥಶಾಸ್ತ್ರವನ್ನೂ ಗ್ರಹಿಸಲಾರದ ಸಂಪೂರ್ಣ ಅರಿವಿನ ಕೊರತೆಯೂ ಇದೆ.

ವಿಶ್ವ ಹಸಿವಿನ 2020ರ ಸೂಚ್ಯಂಕದಲ್ಲಿ 94ನೇ ಸ್ಥಾನದಲ್ಲಿದ್ದ ಭಾರತವು 2021ರ ಸೂಚ್ಯಂಕದಲ್ಲಿ 101ನೇ ಸ್ಥಾನಕ್ಕೆ ಇಳಿದಿದೆ. ನೆರೆಯ ದೇಶಗಳಾದ ಪಾಕಿಸ್ತಾನ, ನೇಪಾಳ ಅಥವಾ ಬಾಂಗ್ಲಾದೇಶಕ್ಕಿಂತಲೂ ಕೆಳಗಿನ ಸ್ಥಾನಕ್ಕೆ ಇಳಿದಿರುವ ದುಃಸ್ಥಿತಿಯನ್ನು “ವಿವರಿಸಲು” ಮೋದಿ ಸರ್ಕಾರವು ಸೂಚ್ಯಂಕದ “ವಿಧಾನ”ವನ್ನೇ ಪ್ರಶ್ನಿಸುವ ಮೂಲಕ ಮಾಡಿದ ಪ್ರಯತ್ನಗಳು ಬಾಲಿಶವಾಗಿವೆ. ಜೊತೆಗೆ, ದೇಶದಲ್ಲಿ ತೀವ್ರ ಹಸಿವಿನ ಬಾಧೆಯಿಂದ ಜನರು ನರಳುತ್ತಿರುವ ಪರಿಸ್ಥಿತಿಯ ಹಿಂದಿರುವ ಕಾರಣವನ್ನು ಮನಗಾಣಲಾಗದ ಅದರ ಅಸಾಮರ್ಥ್ಯ ಮತ್ತು ಅನಾದರಗಳೂ ಸಹ ಆಘಾತಕಾರಿಯಾಗಿವೆ.

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು ಕೆಳದರ್ಜೆಗೆ ಇಳಿಯುತ್ತಿರುವ ಹೊತ್ತಿನಲ್ಲೇ, ಸರ್ಕಾರದ “ರೀತಿ ರಿವಾಜು”ಗಳ ಪ್ರಕಾರ ದೇಶವು ಅಗತ್ಯವಾಗಿ ಹೊಂದಿರಬೇಕಿದ್ದ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದ ಆಹಾರ ಧಾನ್ಯಗಳ ದಾಸ್ತಾನುಗಳನ್ನು ಹೊಂದಿದೆ. ವಾಸ್ತವವಾಗಿ, ಸೆಪ್ಟೆಂಬರ್ 1, 2021 ರಂದು ಎಫ್‌ಸಿಐ(ಭಾರತ ಆಹಾರ ನಿಗಮ), ರೂಢಿಗೆ ಅನುಗುಣವಾಗಿ ಹೊಂದಿರಬೇಕಿದ್ದ 26.2 ದಶಲಕ್ಷ ಟನ್‌ಗಳ ದಾಸ್ತಾನಿಗೆ ಬದಲಾಗಿ 50.2 ದಶಲಕ್ಷ ಟನ್‌ಗಳ ಆಹಾರ ಧಾನ್ಯಗಳ ದಾಸ್ತಾನು ಹೊಂದಿತ್ತು. ಈ ಸಂಗತಿಯಿಂದ ಸ್ಪಷ್ಟವಾಗಿ ಊಹಿಸಬಹುದಾದ ಅಂಶವೆಂದರೆ, ಜನರ ಕೈಯಲ್ಲಿ ಕೊಳ್ಳುವ ಶಕ್ತಿ ಕುಂದಿದ ಕಾರಣದಿಂದಾಗಿ ಅವರು ಸಾಕಷ್ಟು ಪ್ರಮಾಣದ ಆಹಾರ ಧಾನ್ಯಗಳನ್ನು ಖರೀದಿಸುವ ಪರಿಸ್ಥಿತಿಯಲ್ಲಿಲ್ಲ ಎಂಬುದು. ಅಷ್ಟೇ ಅಲ್ಲ, ಈ ಅಂಶವು ಜನರು ತೀವ್ರ ಹಸಿವಿನ ಬಾಧೆಯಿಂದ ನರಳುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯೂ ಆಗುತ್ತದೆ. ಆದರೆ, ಈ ಸಂಗತಿಯನ್ನು ಸರ್ಕಾರವು ಊಹಿಸಿಕೊಂಡಿರುವ ಬಗೆಯೇ ಬೇರೆ. ಎಫ್‌ಸಿಐ ಬಳಿ ಆಹಾರ ಧಾನ್ಯಗಳ ದಾಸ್ತಾನು ದೊಡ್ಡ ಪ್ರಮಾಣದಲ್ಲಿ ಉಳಿದಿದೆ ಎಂದಾದರೆ, ಜನರು ಹಸಿವೆಯಲ್ಲಿರುವುದು ಸಾಧ್ಯವೇ ಇಲ್ಲ ಎಂಬುದು ಸರ್ಕಾರದ ತರ್ಕ. ಆದ್ದರಿಂದ ಹಸಿವಿನ ಸೂಚ್ಯಂಕವು ಸುಳ್ಳಿನಿಂದ ಕೂಡಿದೆ ಎಂಬುದು ಸರ್ಕಾರದ ಅಂಬೋಣ.

“ಅಕ್ಕಿ ತುಂಬಿರುವ ಚೀಲಗಳು ನಮ್ಮ ತಲೆಯ ಮೇಲೆ ಬೀಳದಂತೆ ‘ಸಾಮಾಜಿಕ ಅಂತರ’ ಆಚರಿಸಬೇಕು..” ವ್ಯಂಗ್ಯಚಿತ್ರ: ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್

ಆಹಾರ ಧಾನ್ಯಗಳ ದಾಸ್ತಾನಿನ ಹೆಚ್ಚುವರಿ ಎಂದಾಗ ಅದು ಒಂದು ನಿರ್ದಿಷ್ಟ ಮಟ್ಟದ ಬೆಲೆಗಳಿಗೆ ಸಂಬಂಧಿಸಿದಂತೆ ಮತ್ತು ಜನರ ಕೈಯಲ್ಲಿರುವ ಖರೀದಿಸುವ ಶಕ್ತಿಗೆ (ಹಣದ ಪರಿಭಾಷೆಯಲ್ಲಿ) ಸಂಬಂಧಿಸಿದಂತೆ ಮಾತ್ರ “ಹೆಚ್ಚುವರಿ”ಯಾಗುತ್ತದೆ. ಧಾನ್ಯಗಳ ದಾಸ್ತಾನಿನ ಪ್ರಮಾಣವು “ಹೆಚ್ಚುವರಿ”ಯ ಮಟ್ಟದಲ್ಲಿ ಇದ್ದಾಗಲೂ ಜನರು ಹಸಿವಿನಿಂದ ಬಳಲುತ್ತಿರಬಹುದು. ಇದಕ್ಕೆ ಪರಿಹಾರವೆಂದರೆ, ಧಾನ್ಯಗಳ ಬೆಲೆಗಳನ್ನು ಕಡಿಮೆ ಮಾಡುವುದು ಅಥವಾ ಜನರ ಕೈಯಲ್ಲಿ ಕೊಳ್ಳುವ ಶಕ್ತಿಯನ್ನು ಬಲಪಡಿಸುವುದು. ಹಲವಾರು ಅರ್ಥಶಾಸ್ತ್ರಜ್ಞರು ಮತ್ತು ನಾಗರಿಕ ಸಮಾಜ ಸಂಘಟನೆಗಳು, ಎಡಪಂಥೀಯರು ಮತ್ತು ಇತರ ರಾಜಕೀಯ ಪಕ್ಷಗಳ ಬಗ್ಗೆ ಹೇಳಬೇಕಾಗಿಲ್ಲ, ಜನರ ಕೈಗೆ ಹಣ ವರ್ಗಾವಣೆ ಮಾಡುವ ಮೂಲಕ ಜನರ ಕೊಳ್ಳುವ ಶಕ್ತಿಯನ್ನು ಬಲಪಡಿಸುವಂತೆ ಮತ್ತು ಅಗತ್ಯವಿದ್ದರೆ ವಿತ್ತೀಯ ಕೊರತೆಯ ಹೆಚ್ಚಳದ ಮೂಲಕವಾದರೂ ಸರಿ, ಅಂತಹ ವರ್ಗಾವಣೆಗಳಿಗೆ ಹಣ ಒದಗಿಸಿಕೊಳ್ಳುವಂತೆ ಸರ್ಕಾರವನ್ನು ಅವು ಒತ್ತಾಯಿಸಿವೆ. ಮೇಲಾಗಿ, ಹಣ ವರ್ಗಾವಣೆಯು, ಆಹಾರ ಧಾನ್ಯಗಳ ದಾಸ್ತಾನು “ಹೆಚ್ಚುವರಿ” ಮಟ್ಟದಲ್ಲಿರುವ ಮತ್ತು ಬಳಕೆಯಾಗದ ಕೈಗಾರಿಕಾ ಸಾಮರ್ಥ್ಯವು ವ್ಯಾಪಕವಾಗಿರುವ ಪರಿಸ್ಥಿತಿಯಲ್ಲಿ, ಹಣದುಬ್ಬರವನ್ನು ಹೆಚ್ಚಿಸುವುದು ಸಾಧ್ಯವಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಪ್ರಸ್ತುತ ಹಣದುಬ್ಬರವು ಮೂಲತಃ ಪರೋಕ್ಷ ತೆರಿಗೆಗಳ ಮೂಲಕವೇ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುವ ಸರ್ಕಾರದ ಕ್ರಮಗಳಿಂದಾಗಿ ಘಟಿಸುತ್ತಿದೆಯೇ ಹೊರತು ಹೆಚ್ಚುವರಿ ಬೇಡಿಕೆಯಿಂದಾಗಿ ಅಲ್ಲ. ಆದ್ದರಿಂದ, ಪರೋಕ್ಷ ತೆರಿಗೆ ಹೆಚ್ಚಳಗಳನ್ನು ಹಿಂಪಡೆದು, ವಿತ್ತೀಯ ಕೊರತೆಯನ್ನು ವಿಸ್ತರಿಸಿಕೊಳ್ಳುವ ಮೂಲಕ ಹಣದುಬ್ಬರವನ್ನು ಹೆಚ್ಚಿಸುವ ಬದಲು ಕಡಿಮೆ ಮಾಡಬಹುದು.

ತನ್ನ ಮುಖ್ಯೋಪಾಧ್ಯಾಯರ ಸೂಚನೆಗಳನ್ನು ವಿಧೇಯತೆಯಿಂದ ಅನುಸರಿಸುವ ಒಬ್ಬ ಮುಗ್ಧ ಶಾಲಾ ಬಾಲಕನಂತೆ, ಮೋದಿ ಸರ್ಕಾರವು ವಿತ್ತೀಯ ಕೊರತೆಯನ್ನು ಅಂತರರಾಷ್ಟ್ರೀಯ ಹಣಕಾಸು ಬಂಡವಾಳಕ್ಕೆ “ಸ್ವೀಕಾರಾರ್ಹ” ಎನಿಸಿರುವ ಮಟ್ಟಕ್ಕೆ ಇಳಿಸುವ ಮೂಲಕ ಅದನ್ನು ಮೆಚ್ಚಿಸಲು ಹೆಣಗುತ್ತಿದೆ. ಆದ್ದರಿಂದ, ಜನರಿಗೆ ಹಣ ವರ್ಗಾವಣೆ ಮಾಡಲು ಅದು ಹಿಂಜರಿಯುತ್ತದೆ. ಜನರ ಕೈಯಲ್ಲಿ ಕೊಳ್ಳುವ ಶಕ್ತಿಯು ಕ್ಷೀಣಿಸಿರುವ ಪರಿಣಾಮವಾಗಿ, ನಾವು ಒಂದಕ್ಕೊಂದು ಹೊಂದಾಣಿಕೆಯೇ ಇರದಂತೆ ಕಾಣುವ ಮೂರು ವಿದ್ಯಮಾನಗಳ, ಅಂದರೆ, ತೀವ್ರ ಹಸಿವು, ಆಹಾರ ಧಾನ್ಯಗಳ ಹೆಚ್ಚುವರಿ ದಾಸ್ತಾನು ಮತ್ತು ಈ ಪರಿಸ್ಥಿತಿಯಲ್ಲೂ ಮಿತಿಮೀರಿದ ಹಣದುಬ್ಬರ- ಈ ಮೂರು ವಿದ್ಯಮಾನಗಳ ಸಂಯೋಜನೆಯನ್ನು ಕಾಣುತ್ತಿದ್ದೇವೆ. ಇದನ್ನು ಗ್ರಹಿಸಲಾರದ ಸರ್ಕಾರಕ್ಕೆ ಈ ಸಂಯೋಜನೆಯು ಅದೆಷ್ಟು ಅಸಾಧ್ಯವೆಂದು ತೋರುತ್ತದೆ ಎಂದರೆ, ಅದು ಸಂಭವಿಸುವ ಸಾಧ್ಯತೆಯನ್ನೂ ಸಹ ಒಪ್ಪಿಕೊಳ್ಳಲು ಅದು ಸಿದ್ಧವಿಲ್ಲ. ಆದ್ದರಿಂದ, ಅದು ತೀವ್ರ ಹಸಿವಿನ ಇರವನ್ನೇ ನಿರಾಕರಿಸುತ್ತದೆ. ಈ ನಿರಾಕರಣೆಯ ಹಿಂದೆ ಇರುವುದು ಬಿಜೆಪಿಗಷ್ಟೇ ವಿಶಿಷ್ಟವಾದ ಒಂದು ಭ್ರಮೆ ಮಾತ್ರವಲ್ಲ (“ಮಹಾನ್ ಉದ್ಧಾರಕನು ಚುಕ್ಕಾಣಿ ಹಿಡಿದಿರುವಾಗ ತೀವ್ರ ಹಸಿವು ಇರಲು ಸಾಧ್ಯವಿಲ್ಲ”); ಅದರ ಜೊತೆಗೆ ನಿಜವಾದ ಅರ್ಥದಲ್ಲಿ ಸರಳ ಅರ್ಥಶಾಸ್ತ್ರವನ್ನೂ ಗ್ರಹಿಸಲಾರದ ಸಂಪೂರ್ಣ ಅರಿವಿನ ಕೊರತೆಯೂ ಇದೆ.

ಹಸಿವಿನ ಅಗಾಧ ಹರಡಿಕೆಯನ್ನು ಗುರುತಿಸುವ ಗೋಜಿಗೆ ಹೋಗದ ಸರ್ಕಾರವು, ದೊಡ್ಡ ಪ್ರಮಾಣದ ರಫ್ತುಗಳ ಹೊರತಾಗಿಯೂ, ಅನೇಕ ವರ್ಷಗಳಿಂದಲೂ ಹೆಚ್ಚುವರಿಯಾಗಿ ಮುಂದುವರಿಯುತ್ತಿರುವ ಆಹಾರ ಧಾನ್ಯಗಳ ದಾಸ್ತಾನು ಮಟ್ಟವನ್ನು ಕೆಳಕ್ಕೆ ತರಲು ಎಲ್ಲಾ ರೀತಿಯ ಪ್ರಯತ್ನಗಳನ್ನೂ ಮಾಡಿದೆ. ಈ ಪ್ರಯತ್ನಗಳ ಪೈಕಿ ಇತ್ತೀಚಿನದೆಂದರೆ, ಜೈವಿಕ ಇಂಧನಗಳ ಉತ್ಪಾದನೆಯನ್ನು ಪ್ರೋತ್ಸಾಹಿಸುವುದು. ಭೂಮಿಯಿಂದ ಅಗೆದು ತೆಗೆದ ಇಂಧನಗಳಿಗೆ ಬದಲಿಯಾಗಿ “ಶುದ್ಧ” ಎಂದು ಭಾವಿಸಲಾದ ಎಥೆನಾಲನ್ನು ಬಳಸುವ ಪ್ರವೃತ್ತಿಯು ಪ್ರಪಂಚದಾದ್ಯಂತವೂ ಇದೆ. ಕಬ್ಬಿನ ಸಿಪ್ಪೆಯಿಂದ ಹಿಡಿದು ಧಾನ್ಯಗಳ ವರೆಗಿನ ಮೂಲಗಳಿಂದ ಎಥೆನಾಲ್‌ಅನ್ನು ಉತ್ಪಾದಿಸಲಾಗುತ್ತದೆ. ದಿನೇ ದಿನೇ ಎಥೆನಾಲ್ ಉತ್ಪಾದನೆ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದ ಧಾನ್ಯಗಳನ್ನು ಎಥೆನಾಲ್ ಉತ್ಪಾದನೆಯತ್ತ ತಿರುಗಿಸಲಾಗುತ್ತಿದೆ. ಅಮೇರಿಕಾದಲ್ಲಿ, ಎಥೆನಾಲ್ ಉತ್ಪಾದನೆಗೆ ಮೆಕ್ಕೆಜೋಳವನ್ನು ಬಳಸಲಾಗುತ್ತಿದೆ. ಮೆಕ್ಕೆಜೋಳವನ್ನು ಈ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳುವ ಬಗ್ಗೆ ಅಮೆರಿಕಾ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಏಕೆಂದರೆ, ಅಲ್ಲಿ ಸಾಮೂಹಿಕ ಹಸಿವಿನ ಸಮಸ್ಯೆ ಇಲ್ಲ. ವಿಶ್ವ ಹಸಿವಿನ ಸೂಚ್ಯಂಕದಲ್ಲಿ ಅಮೇರಿಕಾದ ಹೆಸರು ಕಾಣಿಸಿಕೊಳ್ಳುವ ಸಂಭವವೂ ಇಲ್ಲ. ಆದರೆ, ಮೋದಿ ಸರ್ಕಾರವು, ಬೇರೆಯವರಿಗಿಂತ ನಾವೇನೂ ಕಡಿಮೆ ಇಲ್ಲ ಎಂಬಂತೆ, ಒಂದು ಮಹತ್ವಾಕಾಂಕ್ಷೆಯ ಎಥೆನಾಲ್ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯ ಪ್ರಕಾರವಾಗಿ, ಗ್ಯಾಸೋಲಿನ್(ಅಥವಾ ಪೆಟ್ರೋಲ್) ಮತ್ತು ಎಥೆನಾಲ್‌ಗಳನ್ನು 80:20 ಅನುಪಾತದಲ್ಲಿ ಬೆರೆಸಿದ ಮಿಶ್ರ ಇಂಧನದ ಬಳಕೆಯನ್ನು ಉತ್ತೇಜಿಸಲಾಗುತ್ತದೆ ಮತ್ತು ಈ ಉದ್ದೇಶಕ್ಕಾಗಿ ಉತ್ಪಾದನೆಯಾಗುವ ಎಥೆನಾಲ್‌ಗಾಗಿ ಅಕ್ಕಿಯನ್ನು ಮತ್ತು ಕಬ್ಬನ್ನು ಬಳಸಲಾಗುತ್ತದೆ.

“ಅವರು ಹೇಳುವುದು ತಪ್ಪು. ನಮ್ಮ ವೈಜ್ಞಾನಿಕ ಅಧ್ಯಯನಗಳ ಪ್ರಕಾರ ನೀನು ಹಸಿದಿಲ್ಲ!”   ವ್ಯಂಗ್ಯಚಿತ್ರ: ಸತೀಶ್ ಆಚಾರ್ಯ

ಸರ್ಕಾರವು ನಡೆಸುತ್ತಿರುವ ಭಾರತೀಯ ಆಹಾರ ನಿಗಮ(ಎಫ್.ಸಿ.ಐ.)ದ ಗೋದಾಮುಗಳಲ್ಲಿ ಆಹಾರ ಧಾನ್ಯಗಳ ಸಂಗ್ರಹವು ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದ, ಭಾರತದ ಆಹಾರ ಭದ್ರತೆಗೆ ಯಾವುದೇ ಧಕ್ಕೆ ಇಲ್ಲ ಎಂಬುದಾಗಿ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಅಧಿಕಾರಿಯ ಹೇಳಿಕೆಯು, ಸರ್ಕಾರದ ಇತರ ಅನೇಕ ಹೇಳಿಕೆಗಳ ಧಾಟಿಯಲ್ಲಿ, ಪ್ರಾಥಮಿಕ ಅರ್ಥಶಾಸ್ತ್ರದ ಅಜ್ಞಾನವನ್ನು ಪ್ರದರ್ಶಿಸುತ್ತದೆ. ಮಾರುಕಟ್ಟೆಯಲ್ಲಿ ಧಾನ್ಯಗಳ ಬೆಲೆಗಳು ಯಾವ ಮಟ್ಟದಲ್ಲಿವೆ ಮತ್ತು ಜನರು ಎಷ್ಟರ ಮಟ್ಟಿನ ಕೊಳ್ಳುವ ಶಕ್ತಿಯನ್ನು ಹೊಂದಿದ್ದಾರೆ ಎಂಬುದಕ್ಕೂ ಮತ್ತು ಆಹಾರ ಧಾನ್ಯಗಳ ಹೆಚ್ಚುವರಿ ದಾಸ್ತಾನಿಗೂ ಸಂಬಂಧವಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಪರಿಸ್ಥಿತಿಯನ್ನು ನೋಡುವ ಬದಲು, ಹೆಚ್ಚುವರಿ ದಾಸ್ತಾನಿನ ಪರಿಸ್ಥಿತಿಯು ಸಮೃದ್ಧಿಯ ಒಂದು ಪುರಾವೆ ಎಂದು ಹೇಳಲಾಗುತ್ತಿದೆ. ಈ ತರ್ಕದ ಪ್ರಕಾರ ದೇಶದಲ್ಲಿ ಕ್ಷಾಮದ ಪರಿಸ್ಥಿತಿ ಇದ್ದರೂ ಸಹ, ಎಫ್‌ಸಿಐ ಗೋದಾಮುಗಳಲ್ಲಿ ಆಹಾರ ಧಾನ್ಯಗಳ ಸಂಗ್ರಹವು ಸಾಕಷ್ಟು ಪ್ರಮಾಣದಲ್ಲಿರುವ ಕಾರಣದಿಂದ ಕ್ಷಾಮದ ಪರಿಸ್ಥಿತಿ ಇದೆ ಎಂಬ ಸಂಗತಿಯನ್ನು ಒಪ್ಪಿಕೊಳ್ಳಲಾಗುವುದಿಲ್ಲ.

ಬುದ್ಧಿ ನೆಟ್ಟಗಿರುವ ಎಲ್ಲ ವ್ಯಕ್ತಿಗಳೂ ವಿರೋಧಿಸಬೇಕಾಗಿರುವುದು ದೇಶದಲ್ಲಿ ಎಥೆನಾಲ್ ಉತ್ಪಾದನೆಗಾಗಿ ಆಹಾರ ಧಾನ್ಯಗಳನ್ನು ತಿರುಗಿಸುವುದೊಂದನ್ನೇ ಮಾತ್ರವಲ್ಲ, ಲಭ್ಯವಿರುವ ಧಾನ್ಯಗಳನ್ನು ಜನರು ತಮ್ಮ ಹಸಿವೆಯನ್ನು ಇಂಗಿಸಿಕೊಳ್ಳಲು ಸಹಾಯವಾಗುವಂತೆ ಅವರ ಕೈಯಲ್ಲಿ ಕೊಳ್ಳುವ ಶಕ್ತಿಯನ್ನು ತುಂಬುವ ಮೂಲಕ ಜನರಿಗೆ ಹಂಚಿಕೆಯಾಗುವಂತೆ ಒತ್ತಾಯಿಸಬೇಕು. ಎಥೆನಾಲ್ ಉತ್ಪಾದನೆಗೆ ಕಬ್ಬಿನ ಬಳಕೆಯು, ಅದು ಆಹಾರ ಧಾನ್ಯಗಳನ್ನು ಬೆಳೆಯುವ ಭೂಮಿಯನ್ನು ಬೇರೆ ಉದ್ದೇಶಗಳಿಗೆ ತಿರುಗಿಸಿದ ಕಾರಣದಿಂದ, ಆಹಾರ ಧಾನ್ಯಗಳ ತಲಾ ಲಭ್ಯತೆಯಲ್ಲಿ ಇಲ್ಲಿಯವರೆಗೆ ಸಂಭವಿಸಿದ್ದುದಕ್ಕಿಂತಲೂ ಹೆಚ್ಚಿನ ಕುಸಿತಕ್ಕೆ ಕಾರಣವಾಗುತ್ತದೆ.

ಆಹಾರ ಧಾನ್ಯಗಳ ತಲಾ ಲಭ್ಯತೆಯಲ್ಲಿ ಕುಸಿತವಿದ್ದರೂ ಸಹ, ಆಹಾರ ಧಾನ್ಯಗಳ ದಾಸ್ತಾನು ಹೆಚ್ಚುವರಿಯಾಗಿ ಉಳಿಯುತ್ತದೆ. ಹೀಗಾಗುತ್ತದೆ ಏಕೆಂದರೆ, ಆಹಾರ ಧಾನ್ಯಗಳ ತಲಾ ಲಭ್ಯತೆಯು ಎಷ್ಟು ಕಡಿಮೆಯೇ ಇರಲಿ, ಆಹಾರ ಧಾನ್ಯಗಳ ದಾಸ್ತಾನು ಸದಾ ಕಾಲವೂ ಹೆಚ್ಚುವರಿಯಾಗಿ ಉಳಿಯುವಂತೆ ನವ-ಉದಾರವಾದಿ ಆರ್ಥಿಕ ಆಳ್ವಿಕೆಯ ಕಾರ್ಯವಿಧಾನವೇ ನೋಡಿಕೊಳ್ಳುತ್ತದೆ.

ಅದಕ್ಕೆ ಕಾರಣವೂ ಸರಳವೇ. ಆಹಾರ ಧಾನ್ಯಗಳ ದಾಸ್ತಾನು “ರೂಢಿ”ಯ ಮಟ್ಟಕ್ಕಿಂತ ಕೆಳಗಿಳಿದಾಗಲೆಲ್ಲಾ ಹಣದುಬ್ಬರದ ಭಯ ಎದುರಾಗುತ್ತದೆ. ಆದ್ದರಿಂದ, ಆರ್ಥಿಕ ಸ್ವತ್ತುಗಳ ನಿಜ ಮೌಲ್ಯವು ಹಣದುಬ್ಬರದ ಮೂಲಕ ನಷ್ಟಕ್ಕೊಳಗಾಗುವ ಬಗ್ಗೆ ಚಿಂತೆಗೊಳಗಾದ ಹಣಕಾಸು ಬಂಡವಾಳವು ತಕ್ಷಣವೇ, ಹಣದುಬ್ಬರದ ವಿರುದ್ಧ ಕ್ರಮಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತದೆ. ಸರ್ಕಾರವು ತನ್ನ ಖರ್ಚುವೆಚ್ಚಗಳನ್ನು ಕಡಿತಗೊಳಿಸಿಕೊಳ್ಳುವ ಮೂಲಕ ಮತ್ತು ಬಿಗಿ ಹಣಕಾಸು ನೀತಿಯನ್ನು ಅನುಸರಿಸುವ (ಬಡ್ಡಿ ದರ ಏರಿಕೆ) ಮೂಲಕ ಅಂತಹ ಹಣದುಬ್ಬರವನ್ನು ತಡೆಗಟ್ಟುತ್ತದೆ. ಆದರೆ, ದಾಸ್ತಾನು ಮಿತಿಮೀರಿ ಹೆಚ್ಚಾದ ಸಂದರ್ಭದಲ್ಲಿ, ದಾಸ್ತಾನು ಮಟ್ಟವನ್ನು ಕೆಳಗೆ ತರುವ ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ. ಅಂದರೆ, ಆಹಾರ ಧಾನ್ಯಗಳ ದಾಸ್ತಾನುಗಳ ಮಟ್ಟವು ಕುಸಿದಾಗ ಮಾತ್ರ ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಲಾಗುತ್ತದೆ; ಮತ್ತು ಮಿತಿಮೀರಿ ಏರಿದ ಸಂದರ್ಭದಲ್ಲಿ ಯಾವ ಕ್ರಮವೂ ಇರುವುದಿಲ್ಲ. ಈ ಅಸಮ ವರ್ತನೆಯಿಂದಾಗಿ ಸಾಮಾನ್ಯವಾಗಿ “ಹೆಚ್ಚುವರಿ” ದಾಸ್ತಾನುಗಳ ಸ್ಥಿತಿ ಇದ್ದೇ ಇರುತ್ತದೆ.

ಇದರ ಜೊತೆಗೆ ಮತ್ತೊಂದು ಅಸಮ ವರ್ತನೆಯೂ ಇದೆ. ಸಮರ್ಪಕವೆಂದು ಭಾವಿಸಿದ “ರೂಢಿ”ಯ ಮಟ್ಟಕ್ಕಿಂತ ಕೆಳಗಿಳಿದ ದಾಸ್ತಾನಿನ ಕೊರತೆಯನ್ನು ತೊಡೆದುಹಾಕಲು ಎರಡು ಮಾರ್ಗಗಳಿವೆ. ಒಂದು, ಉತ್ಪಾದನೆಯ ಹೆಚ್ಚಳ – ಆಗ ಪೂರೈಕೆಯ ಖಾತ್ರಿಯೂ ಇರುತ್ತದೆ. ಇನ್ನೊಂದು, ಬೇಡಿಕೆಯ ಕಡಿತ – ಸಾರ್ವಜನಿಕ ವೆಚ್ಚಗಳ ಕಡಿತ ಮತ್ತು ಬಿಗಿ ಹಣಕಾಸು ನೀತಿಯ ಅನುಸರಣೆ (ಬಿಗಿ ಹಣಕಾಸು ನೀತಿಯು ಮೂಲತಃ ಜನರ ಕೊಳ್ಳುವ ಶಕ್ತಿಯನ್ನು ಕುಂದಿಸುತ್ತದೆ) ಇವು ಬೇಡಿಕೆಯನ್ನು ಕಡಿತಗೊಳಿಸುತ್ತವೆ. ಈ ಎರಡು ಕ್ರಮಗಳಲ್ಲಿ, ಸರ್ಕಾರಕ್ಕೆ ಹೆಚ್ಚು ಸುಲಭವಾದ ಮಾರ್ಗವೆಂದರೆ ಬೇಡಿಕೆಯನ್ನು ಕಡಿತಗೊಳಿಸುವ ಕ್ರಮವೇ. ಏಕೆಂದರೆ, ಅತಿ ಕಡಿಮೆ ಸಮಯದಲ್ಲಿ ಅದರ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ, ಮತ್ತು, ಸಾರ್ವಜನಿಕ ವೆಚ್ಚಗಳನ್ನು ಕಡಿತಗೊಳಿಸಿದಾಗ, ಆಹಾರ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಲು ಅಗತ್ಯವಾದ ಸರ್ಕಾರಿ ಹೂಡಿಕೆಗಳು ವಿರಳವಾಗುತ್ತವೆ. ಆದ್ದರಿಂದ ಕಾಲಕ್ರಮೇಣ ಜನರ ಕೊಳ್ಳುವ ಶಕ್ತಿಯು ಕುಂದುತ್ತಾ ಹೋಗುತ್ತದೆ. ಪರಿಣಾಮವಾಗಿ, ಆಹಾರ ಧಾನ್ಯಗಳ ತಲಾ ಉತ್ಪಾದನೆ ಮತ್ತು ಅದರ ಪರಿಣಾಮವಾಗಿ, ಆಹಾರ ಧಾನ್ಯಗಳ ತಲಾ ಲಭ್ಯತೆ ಕುಸಿಯುತ್ತಾ ಹೋಗುತ್ತವೆ. ಅಂದರೆ, ಹಸಿವಿನ ಪ್ರಮಾಣವು ಹೆಚ್ಚುತ್ತಾ ಹೋಗುತ್ತದೆ. ವರ್ತಮಾನ ಭಾರತದಲ್ಲಿ ನಡೆಯುತ್ತಿರುವ ವಿದ್ಯಮಾನವು ಇದೇ.

ಈ ರೀತಿಯಲ್ಲಿ ಸುದೀರ್ಘಕಾಲ ಕುಸಿಯುತ್ತಾ ಹೋಗುವ ಆಹಾರ ಧಾನ್ಯಗಳ ತಲಾ ಉತ್ಪಾದನೆ, ಮತ್ತು ತಲಾ ಲಭ್ಯತೆ, ಮತ್ತು ಸುದೀರ್ಘಕಾಲ ಹಸಿವಿನ ಹೆಚ್ಚಳ, ಇವೆಲ್ಲವುಗಳ ಜೊತೆಯಲ್ಲಿ ಧಾನ್ಯಗಳ ದಾಸ್ತಾನುಗಳೂ ಸಹ ಹೆಚ್ಚುವರಿಯಾಗಿರುತ್ತವೆ. ಹೆಚ್ಚುವರಿ ದಾಸ್ತಾನುಗಳು ಸುದೀರ್ಘಕಾಲ ಇರುತ್ತವೆ ಎಂದ ಕೂಡಲೇ ಹಸಿವೆ ಇರುವುದಿಲ್ಲ ಎಂದೇನೂ ಅಲ್ಲ. ನವ-ಉದಾರವಾದಿ ಆಳ್ವಿಕೆಯ ಒಂದು ವಿಶಿಷ್ಟ ಪ್ರವೃತ್ತಿಯೆಂದರೆ, ಹೆಚ್ಚುತ್ತಿರುವ ಹಸಿವಿನ ಜೊತೆಯಲ್ಲೇ ಧಾನ್ಯಗಳ ದಾಸ್ತಾನುಗಳೂ ಸಹ ಹೆಚ್ಚುವರಿಯಾಗಿರುತ್ತವೆ. ಈ ಪ್ರವೃತ್ತಿಯು, ಆಹಾರ ಧಾನ್ಯಗಳನ್ನು ಅಥವಾ ಕಬ್ಬನ್ನು (ಆಹಾರ ಧಾನ್ಯ ಬೆಳೆಯುವ ಭೂಮಿಯನ್ನು ಕಬ್ಬು ಬೆಳೆಯಲು ತಿರುಗಿಸುವ ಮೂಲಕ) ಎಥೆನಾಲ್ ಉತ್ಪಾದನೆಗಾಗಿ ತಿರುಗಿಸುವ ಮೂಲಕ ಉಲ್ಬಣಗೊಳ್ಳುತ್ತದೆ ಮತ್ತು ಅದನ್ನು ಖಚಿತಪಡಿಸುತ್ತದೆ ಕೂಡ.

ಕಬ್ಬು ಮತ್ತು ಧಾನ್ಯಗಳನ್ನು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಎಥೆನಾಲ್ ಉತ್ಪಾದನೆಗಾಗಿ ತಿರುಗಿಸುವ ಮೋದಿ ಸರ್ಕಾರದ ನಿರ್ಧಾರವು ಧಾನ್ಯಗಳ ತಲಾ ಲಭ್ಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ಹಸಿವಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ಶತಸಿದ್ಧ. ಏಕೆಂದರೆ, ಧಾನ್ಯಗಳ ದಾಸ್ತಾನಿನ ಸಮರ್ಪಕ “ರೂಢಿ”ಯ ಮಟ್ಟವು ಕೆಳಗಿಳಿಯುವ ಸೂಚನೆಗಳು ಕಾಣಿಸಿಕೊಳ್ಳುತ್ತಿದ್ದಂತೆಯೇ ಜನರ ಕೊಳ್ಳುವ ಶಕ್ತಿಯನ್ನು ಹಿಂಡುವ ಕೆಲಸ ಆರಂಭವಾಗುತ್ತದೆ. ಈ ರೀತಿಯಲ್ಲಿ, ಹಸಿವಿನ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ಮೂಲಕ, ಧಾನ್ಯಗಳ ಕೊರತೆಯ ಸಮಸ್ಯೆಯನ್ನು “ಪರಿಹರಿಸಲಾಗುತ್ತದೆ” (ಧಾನ್ಯಗಳ ದಾಸ್ತಾನುಗಳು “ರೂಢಿ”ಯ ಮಟ್ಟಕ್ಕಿಂತ ಕೆಳಗಿಳಿವೆ ಎಂಬ ಅಂಶವು ಪ್ರಕಟಗೊಂಡಾಗ).

ಜೈವಿಕ ಇಂಧನಗಳನ್ನು ಒಳಗೊಂಡ “ಹಸಿರು ಶಕ್ತಿ”ಯ ಬಗ್ಗೆ ಪಾಶ್ಚ್ಯಾತ್ಯ ದೇಶಗಳ ಪ್ರಗತಿಪರ ವಲಯಗಳಲ್ಲಿ ಹೆಚ್ಚಿನ ಉತ್ಸಾಹವಿದೆ. ಜೈವಿಕ ಇಂಧನಗಳ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಧಾನ್ಯಗಳ ಹೆಚ್ಚಿಸಿದ ಉತ್ಪಾದನೆಯನ್ನು ಎಥನಾಲ್ ಉತ್ಪಾದನೆಯತ್ತ ತಿರುಗಿಸುವಂತೆ ಶಿಫಾರಸು ಮಾಡಲಾಗಿದೆ. ಮುಂದುವರಿದ ದೇಶಗಳ ಸಂದರ್ಭದಲ್ಲಿ ಈ ಸಲಹೆಯು ಎಷ್ಟೇ ಪ್ರಸ್ತುತವಿರಲಿ, ಭಾರತದಂತಹ ಮೂರನೇ ಜಗತ್ತಿನ ದೇಶಗಳಲ್ಲಿ ಅದರ ಅನುಸರಣೆಯು ಹಸಿವಿನ ಪ್ರಮಾಣವನ್ನು ಹೆಚ್ಚಿಸುವುದು ಖಚಿತ.

ಅನು: ಕೆ.ಎಂ. ನಾಗರಾಜ್

Donate Janashakthi Media

Leave a Reply

Your email address will not be published. Required fields are marked *