ಜಮ್ಮು-ಕಾಶ್ಮೀರದಲ್ಲಿ ಚುನಾಯಿತ ಆಡಳಿತವಿಲ್ಲದ ಐದು ವರ್ಷಗಳು

ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ವೇದಿಕೆ ಆಗಸ್ಟ್ 3ರಂದು ದಿಲ್ಲಿಯಲ್ಲಿ ತನ್ನ ನಾಲ್ಕನೇ ವರದಿಯನ್ನು ಬಿಡುಗಡೆ ಮಾಡಿತು. ‘ಒಂದು ಚುನಾಯಿತ ಆಡಳಿತವಿಲ್ಲದ ಐದು ವರ್ಷಗಳು’ ಎಂಬುದು ಈ ವರದಿಯ ಶಿರೋನಾಮೆ. ಇದರ ಬಿಡುಗಡೆಯ ಸಭೆಯನ್ನುದ್ದೇಶಿಸಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ, ಕೇಂದ್ರ ಸಮಿತಿ ಸದಸ್ಯ ಯುಸುಫ್ ತರಿಗಾಮಿ, ಆರ್‌ಜೆಡಿಯ ಮನೋಜ್ ಝಾ, ಡಿಎಂಕೆಯ ಕನ್ನಿಮೋಳಿ, ಎನ್‌ಸಿಪಿಯ ಸುಪ್ರಿಯಾ ಸುಳೆ, ಕಾಂಗ್ರೆಸಿನ ಶಶಿ ತರೂರ್, ನ್ಯಾಷನಲ್ ಕಾನ್ಫರೆನ್ಸಿನ ಡಾ. ಫಾರೂಕ್ ಅಬ್ದುಲ್ಲ ಮತ್ತು ಮಾಜಿ ಕೇಂದ್ರ ಮಂತ್ರಿ ಯಶವಂತ ಸಿನ್ಹಾ ಮಾತಾಡಿದರು.

ಕೇಂದ್ರವು ಸುಪ್ರಿಂ ಕೋರ್ಟಿಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಹೇಳಿದ್ದಕ್ಕೆ ವ್ಯತಿರಿಕ್ತವಾಗಿ ಇಲ್ಲಿಯ ಜನ ಹೆಚ್ಚುತ್ತಿರುವ ಹಿಂಸಾಚಾರದ ಸುರುಳಿಯಲ್ಲಿ ನಲುಗುತ್ತಿದ್ದಾರೆ ಎಂದು ಈ ವರದಿ ಸಾರ್ವಜನಿಕರಿಗೆ ಮತ್ತು ಸರಕಾರಕ್ಕೆ ನೆನಪಿಸಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಸಂಸತ್ತು ವಿಸರ್ಜಿಸಿ 4 ವರ್ಷಗಳಾಗಿವೆ. ಎಲ್ಲವೂ ಸಾಮಾನ್ಯವಾಗಿದೆ, ಶಾಂತಿ ನೆಲೆಸಿದೆ, ಆರ್ಥಿಕ ಸಮೃದ್ಧಿಯಿದೆ ಎಂದೆಲ್ಲ ಮೋದಿ ಸರಕಾರ ಹೇಳಿಕೊಳ್ಳುತ್ತಿದೆ. ಹಾಗಿದ್ದರೆ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಕಿನಲ್ಲಿ ಚುನಾವಣೆಗಳು ನಡೆದಿಲ್ಲ ಏಕೆ? ಮೋದಿಯವರು ‘ಪ್ರಜಾಪ್ರಭುತ್ವದ ಮಾತೆ’ ಎಂದೆಲ್ಲ ಹೇಳುತ್ತಾರೆ, ಆದರೆ ಚುನಾವಣೆಗಳನ್ನು ನಡೆಸಲು ನಿರಾಕರಿಸುತ್ತಾರೆ ಎಂದು ಸೀತಾರಾಂ ಯೆಚುರಿ ಈ ಸಂದರ್ಭದಲ್ಲಿ ಟಿಪ್ಪಣಿ ಮಾಡಿದ್ದಾರೆ.

ಇದನ್ನೂ ಓದಿ:ಮಣಿಪುರ ಹಿಂಸಾಚಾರ:ತನಿಖೆ ಮೇಲ್ವಿಚಾರಣೆಗೆ ತ್ರಿಸದಸ್ಯ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್‌

‘ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ವೇದಿಕೆ’ ಯ ಸದಸ್ಯರಾಗಿರುವ ಮತ್ತು ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಆಳವಾದ ಅಧ್ಯಯನ ಮಾಡಿರುವ ಪ್ರೊ. ರಾಧಾ ಕುಮಾರ್ ವೇದಿಕೆಯ ವರದಿಯನ್ನು ಸಭೆಯಲ್ಲಿ ಪ್ರಸ್ತುತ ಪಡಿಸಿದರು. ಈ ಬಗ್ಗೆ ‘ನ್ಯೂಸ್‌ಕ್ಲಿಕ್’ ವೆಬ್ ಪತ್ರಿಕೆಯೊಂದಿಗೆ ಮಾತಾಡುತ್ತ ಅವರು ಕೇಂದ್ರದ ಧೋರಣೆಗಳು ಜನಗಳ ಮೇಲಿನ ಮಾನಸಿಕ ಮತ್ತು ದೈಹಿಕ ಹಿಂಸಾಚಾರವನ್ನು ಶಮನಗೊಳಿಸುವ ಬದಲು, ಅವನ್ನು ಹೆಚ್ಚಿಸುತ್ತಿವೆ ಎಂದಿದ್ದಾರೆ. ಗಮನಾರ್ಹ ಸಂಗತಿಯೆಂದರೆ, ಹದಿಹರೆಯದವರ ಅಪರಾಧಗಳು ಹೆಚ್ಚುತ್ತಿವೆ, ಇದಕ್ಕೂ ನಿರುದ್ಯೋಗಕ್ಕೂ ನೇರ ಸಂಬಂಧವಿದೆ. ಖಾಲಿ ಹುದ್ದೆಗಳನ್ನು ತುಂಬಲು ಕೂಡ ಉಪರಾಜ್ಯಪಾಲರು ಏನೂ ಮಾಡುತ್ತಿಲ್ಲ. ಬಹುಶಃ ಕೇಂದ್ರ ಗೃಹಮಂತ್ರಾಲಯ ಕಠಿಣ ಷರತ್ತುಗಳನ್ನು ಹೇರಿರುವುದರಿಂದಾಗಿ ಸ್ಥಳೀಯ ಆಡಳಿತ ಸೇವೆಗಳಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ನೌಕರರನ್ನು ತೆಗೆದು ಹಾಕಲಾಗಿದೆ ಎಂದು ಅವರು ಹೇಳಿದರು.

ಕಾಶ್ಮೀರ ಕಣಿವೆಯ ಜನರು ಕಲಮು 370ರ ರದ್ದತಿಯನ್ನು ವಿರೋಧಿಸಿದರೂ ಜಮ್ಮು ಪ್ರದೇಶದ ಜನರು ಅದನ್ನು ಸ್ವಾಗತಿಸಿದರು, ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆಯಿಂದಾಗಿ ಅದರ ಸ್ಥಾನಗಳು ಹೆಚ್ಚಾದುದನ್ನೂ ಸ್ವಾಗತಿಸಿದರು ಎಂದು ಹೇಳಲಾಗಿದೆ. ಆದರೆ ಈಗ ಅಲ್ಲಿನ ನಿವಾಸಿಗಳೂ ಈ ಪ್ರಕ್ರಿಯೆಯನ್ನು ಟೀಕಿಸುತ್ತಿದ್ದಾರೇಕೆ ಎಂಬ ಪ್ರಶ್ನೆಗೆ ಉತ್ತರಿಸುತ್ತ ರಾಧಾ ಕುಮಾರ್ ಉಪರಾಜ್ಯಪಾಲರ ಆಳ್ವಿಕೆಯಲ್ಲಿ ಬಂದಿರುವ ನಿವಾಸಿ ಮತ್ತು ಭೂಮಿ ನಿಯಮಗಳಲ್ಲಿ ಬದಲಾವಣೆ ಕಾಶ್ಮೀರ ಕಣಿವೆಗಿಂತ ಜಮ್ಮುವಿನ ಜನರನ್ನೇ ಹೆಚ್ಚು ಬಾಧಿಸಿದೆ ಎಂದು ಹೇಳಿದರು. ಸಂಸತ್ತಿನಲ್ಲಿ ಪ್ರಸಕ್ತ ಅಧಿವೇಶನದಲ್ಲಿ ಕೇಂದ್ರ ಸರಕಾರ ಪಾಸುಮಾಡಿಸಿಕೊಳ್ಳಬೇಕೆಂದಿರುವ ಹೊಸ ಮಸೂದೆಗಳು, ಸಂವಿಧಾನ(ಜಮ್ಮು ಮತ್ತು ಕಾಶ್ಮೀರ) ಪರಿಶಿಷ್ಟ
ಬುಡಕಟ್ಟುಗಳು ಆದೇಶ(ತಿದ್ದುಪಡಿ) ಮಸೂದೆ ಪಹಾಡಿ ಬುಡಕಟ್ಟಿನವರನ್ನು ಗುಜ್ಜರ್‌ಗಳು ಮತ್ತು ಬಕರ್‌ವಾಲ್‌ಗಳ ವಿರುದ್ಧ ಎತ್ತಿ ಕಟ್ಟುತ್ತದೆ ಎಂದು ಅವರು ಹೇಳಿದರು.

 

Donate Janashakthi Media

Leave a Reply

Your email address will not be published. Required fields are marked *