ಬರ್ಮಿಂಗ್ ಹ್ಯಾಮ್: ಕಾಮನ್‌ವೆಲ್ತ್-2022ರ ಕ್ರೀಡಾ ಕೂಟದಲ್ಲಿ ಭಾರತದ ಕ್ರೀಡಾಪಟುಗಳು ಪದಕಗಳ ಬೇಟೆ ಮುಂದುವರೆಸಿದ್ದು, 6ನೇ ದಿನದ ಅಂತ್ಯಕ್ಕೆ 5 ಪದಕಗಳನ್ನು ಗೆದ್ದುಕೊಂಡಿದ್ದಾರೆ. ಇದುವರೆಗೆ ಐದು ಚಿನ್ನ, ಆರು ಬೆಳ್ಳಿ ಹಾಗೂ ಏಳು ಕಂಚು ಪಡೆದುಕೊಳ್ಳುವ ಮೂಲಕ ಒಟ್ಟಾರೆ 18 ಪದಕ ಗೆಲ್ಲುವಲ್ಲಿ ಅಥ್ಲೇಟ್‌ಗಳು ಯಶಸ್ವಿಯಾಗಿದ್ದಾರೆ.
ಜುಲೈ 29ರಿಂದ ಆರಂಭವಾದ ಕಾಮನ್‌ವೆಲ್ತ್ ಕ್ರೀಡಾ ಕೂಟವು ಆಗಸ್ಟ್ 08ರಂದು ಮುಕ್ತಾಯವಾಗಲಿದೆ.
ಭಾರತದ ಅಥ್ಲೀಟ್ ತೇಜಸ್ವಿನ್ ಶಂಕರ್ ಪುರುಷರ ಹೈಜಂಪ್ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಅವರು, ಹೈಜಂಪ್ ವಿಭಾಗದಲ್ಲಿ 2.22 ಮೀಟರ್ ಜಿಗಿದು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮೊದಲ ಪದಕ ತಂದುಕೊಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ವಿಶೇಷ ಎಂದರೆ ಕಾಮನ್‌ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಪುರುಷರ ಹೈ ಜಂಪ್ನಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕ ಇದಾಗಿದೆ.
Will be one of the top moments of #B2022 for India. Tejaswin Shankar's first clearance at 2.22m proved to be the bronze-medal clincher. First Indian athlete in CWG history to win high jump medal. pic.twitter.com/n6KNfgYlim
— Vinayakk (@vinayakkm) August 4, 2022
109 ಕೆಜಿ ವಿಭಾಗದ ಪುರುಷರ ಭಾರ ಎತ್ತುವ ಸ್ಪರ್ಧೆಯಲ್ಲಿ ಗುರುದೀಪ್ ಸಿಂಗ್ ಕಂಚಿನ ಪದಕ ಗೆದ್ದಿದ್ದಾರೆ.
ಭಾರತಕ್ಕೆ ಲಭಿಸಿದ 18 ಪದಕಗಳ ಪೈಕಿ 10 ಪದಕಗಳು ವೇಟ್ ಲಿಫ್ಟಿಂಗ್ ಸ್ಪರ್ಧೆಯಿಂದ ಲಭಿಸಿದೆ. ಮೀರಾಬಾಯಿ ಚಾನು ಮೊದಲ ಚಿನ್ನದ ಪದಕವನ್ನು ತಂದುಕೊಟ್ಟರು. ವೇಟ್ ಲಿಫ್ಟರ್ ಹರ್ಜಿಂದರ್ ಕೌರ್ ಅವರು ಕಂಚಿನ ಪದಕ ಗೆದ್ದು ಬೀಗಿದರು.
ಯುವ ವೇಟ್ ಲಿಫ್ಟರ್ ಅಚಿಂತಾ ಶೆಯುಲಿ ಅವರು ಚಿನ್ನದ ಪದಕ ಬಾಜಿಕೊಂಡರು. ಜೆರೆಮಿ ಲಾಲ್ರಿನ್ನುಂಗಾ ಭಾರತಕ್ಕೆ ಎರಡನೇ ಚಿನ್ನದ ಪದಕವನ್ನು ಗೆದ್ದುಕೊಟ್ಟರು. ಸಂಕೇತ್ ಮಹಾದೇವ್ ಸಾಗರ್ ಕೂಡ ಪುರುಷರ ವೇಟ್ ಲಿಫ್ಟಿಂಗ್ ನಲ್ಲಿ ಭಾರತಕ್ಕೆ ಚೊಚ್ಚಲ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾದರು.
ಕರ್ನಾಟಕದ ವೇಟ್ ಲಿಫ್ಟರ್ ಗುರುರಾಜ್ ಪೂಜಾರಿ ಕಂಚಿನ ಪದಕವನ್ನು ಗೆದ್ದು ಮಿಂಚಿದ್ದಾರೆ. ಬಿಂದ್ಯಾರಾಣಿ ದೇವಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಪುರುಷರ ವಿಭಾಗದಲ್ಲಿ ಲವ್‌ಪ್ರೀತ್ ಸಿಂಗ್ ಭಾರತಕ್ಕೆ ಕಂಚಿನ ಪದಕ ಗೆದ್ದರು. ವೇಟ್‌ಲಿಫ್ಟರ್ ಗುರ್ದೀಪ್ ಸಿಂಗ್ ಅವರು ಕೂಡ ಬೆಳ್ಳಿ ಪದಕ ಗೆದ್ದು ಬೀಗಿದರು.
ಸೌರವ್ ಘೋಷಾಲ್ ಅವರು ಸ್ಕ್ವಾಷ್ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಕೂಟದ ಇತಿಹಾಸದಲ್ಲಿ ಈ ವಿಭಾಗದಲ್ಲಿ ಭಾರತಕ್ಕೆ ಒಲಿದ ಮೊದಲ ಪದಕ ಇದಾಗಿದೆ. ಪುರುಷರ 96 ಕೆಜಿ ಭಾರ ಎತ್ತುವ ಸ್ಪರ್ಧಾ ವಿಭಾಗದಲ್ಲಿ ವಿಕಾಸ್ ಠಾಕೂರ್ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ.
ತೂಲಿಕಾ ಮಾನ್ ಅವರು ಮಹಿಳಾ ಜೂಡೊ ಸ್ಪರ್ಧೆಯ 78 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರು.