ಸರ್ಕಾರದ ವಿತ್ತ ನೀತಿಯು ಅತ್ಯಂತ ಸರಳವಾಗಿದೆ: ಪೆಟ್ರೋ ಉತ್ಪನ್ನಗಳ ಮೇಲೆ ತೆರಿಗೆಗಳನ್ನು ಹೆಚ್ಚಿಸಿ ಆದಾಯವನ್ನು ಹೆಚ್ಚಿಸಿಕೊಳ್ಳುವುದು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಮಾರಾಟ ಮಾಡಿ ಆದಾಯವನ್ನು ಹೆಚ್ಚಿಸಿಕೊಳ್ಳುವುದು. ಈ ರೀತಿಯಲ್ಲಿ ಸಂಗ್ರಹಿಸಿದ ಎಲ್ಲ ಹಣವನ್ನೂ ಖರ್ಚು ಮಾಡಿ, ವಿತ್ತೀಯ ಕೊರತೆಯನ್ನು ಒಂದು ಮಿತಿಯೊಳಗೆ ಇಟ್ಟುಕೊಳ್ಳಲಾಗಿದೆ ಎಂದು ಬಿಂಬಿಸಿ ಜಾಗತಿಕ ಹಣಕಾಸು ಬಂಡವಾಳವನ್ನು ಓಲೈಸುವುದು. ಆದರೆ ಖಾಸಗೀಕರಣದ ಮಾರ್ಗವಾಗಿ ಈ ತನಕ ಹೆಚ್ಚಿನ ಹಣ ಬಂದಿಲ್ಲ. ಏಕೆಂದರೆ, ಕಾರ್ಪೊರೇಟ್‌ಗಳು ಇಂತಹ ಉದ್ದಿಮೆಗಳನ್ನು ಮಾರಾಟಕ್ಕಿಟ್ಟ ತಕ್ಷಣದಲ್ಲೇ ಖರೀದಿಸುವ ಆತುರ ತೋರಿಸುತ್ತಿಲ್ಲ. ಆದ್ದರಿಂದ ಪೆಟ್ರೋ ಉತ್ಪನ್ನಗಳ ಮೇಲಿನ ತೆರಿಗೆಗಳನ್ನು ಏರಿಸುವುದೇ ಸರಕಾರದ ಅತ್ಯಂತ ಸಾಮಾನ್ಯ ವಿಧಾನವಾಗಿದೆ. ಇವುಗಳು ಸರಕಾರ ಹೇಳುವಂತೆ ಕೇವಲ ಶ್ರೀಮಂತರ ಖಾಸಗಿ ಬಳಕೆಯ ಉತ್ಪನ್ನಗಳಷ್ಟೇ ಅಲ್ಲ. ಅವುಗಳನ್ನು ಅನೇಕಾನೇಕ ಸಾರ್ವಜನಿಕ ಉಪಯೋಗಳಿಗೆ ಬಳಸಲಾಗುತ್ತದೆ. ಆದ್ದರಿಂದ ಇಂತಹ ಏರಿಕೆಗಳಿಂದ ಕಿರು ಉತ್ಪಾದಕರು ಹಿಂಡಿ ಹಿಪ್ಪೆಯಾಗುತ್ತಾರೆ. ಬಡಜನರಿಗೆ ತೊಂದರೆಗಳು ಮತ್ತಷ್ಟು ಹೆಚ್ಚುತ್ತವೆ. ಇವೀಗ ಸರಕಾರದ ವಿತ್ತ ಫಜೀತಿಗಳು- ಇವು ಭಾರತದ ಅರ್ಥವ್ಯವಸ್ಥೆಗೆ ಭಾರಿ ಹಾನಿಯನ್ನು ಉಂಟುಮಾಡುತ್ತವೆ ಎಂದು ಪ್ರೊ. ಪ್ರಭಾತ್ ಪಟ್ನಾಯಕ್ ತಿಳಿಸುತ್ತಾರೆ.
ಅಧಿಕ ವೆಚ್ಚಗಳನ್ನು ಕೈಗೊಳ್ಳುವ ಮೂಲಕ ಅರ್ಥವ್ಯವಸ್ಥೆಯನ್ನು ಉತ್ತೇಜಿಸುವಂಥಹ ಒಂದು ವಿತ್ತ ನೀತಿಯನ್ನು ಬಿಜೆಪಿ ಸರ್ಕಾರವು ಹೊಂದಲು ಬಯಸುತ್ತದೆ. ಆದರೆ, ಈ ನಿಟ್ಟಿನಲ್ಲಿ ಹಣ ಹೊಂದಿಸಿಕೊಳ್ಳುವ ಬಗೆ ಯಾವುದು ಎಂಬುದು ಅದಕ್ಕೆ ಅರ್ಥವಾಗುತ್ತಿಲ್ಲ. ಏಕೆಂದರೆ, ಅತ್ತಿತ್ತ ದೃಷ್ಟಿ ಹರಿಸದಂತೆ ಕುದುರೆಯ ಕಣ್ಣಿಗೆ ಕಟ್ಟುವ ಕಣ್ತಡೆಯನ್ನು ಬಿಜೆಪಿ ಸರ್ಕಾರವು ಕಟ್ಟಿಕೊಂಡಿದೆ. ಸಾಲ ಮಾಡಿ ಹೆಚ್ಚು ಹೆಚ್ಚು ಹಣ ಖರ್ಚು ಮಾಡುವುದನ್ನು, ಅಂದರೆ ವಿತ್ತೀಯ ಕೊರತೆಯನ್ನು ಹೆಚ್ಚಿಸಿಕೊಳ್ಳುವ ಕ್ರಮವನ್ನು, ಅಂತಾರಾಷ್ಟ್ರೀಯ ಹಣಕಾಸು ಬಂಡವಾಳವು ಸುತರಾಂ ಒಪ್ಪುವುದಿಲ್ಲ. ತನ್ನ ಅತಿರೇಕದ-ರಾಷ್ಟ್ರವಾದದ ಬಗ್ಗೆ ಎಷ್ಟೇ ಜೋರಾಗಿ ಪ್ರಚುರಪಡಿಸಿಕೊಂಡರೂ ಸಹ, ಜಾಗತೀಕರಣಗೊಂಡ ಹಣಕಾಸು ಬಂಡವಾಳವು ಆಜ್ಞಾಪಿಸಿದ ನಿಯಮಗಳನ್ನು ಉಲ್ಲಂಘಿಸುವ ಪೌರುಷವನ್ನು ಅದು ಹೊಂದಿಲ್ಲ. ಹಾಗಾಗಿ, ಸಾಲ ಮಾಡುವ ಮೂಲಕ ಸರ್ಕಾರಿ ವೆಚ್ಚಗಳನ್ನು ಹೆಚ್ಚಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಅದೇ ಸಮಯದಲ್ಲಿ, ಬಂಡವಾಳಿಗರ ಮೇಲೆ ಸಂಪತ್ತಿನ ತೆರಿಗೆಯನ್ನಾಗಲಿ ಅಥವಾ ಅವರ ಲಾಭದ ಮೇಲೆ ಹೆಚ್ಚಿನ ತೆರಿಗೆಯನ್ನಾಗಲಿ ವಿಧಿಸುವ ಮನಸ್ಸೂ ಇಲ್ಲ. ಬಂಡವಾಳಿಗರಿಗೆ ಸಂಪೂರ್ಣ ತೆರಿಗೆ ರಿಯಾಯಿತಿ ಒದಗಿಸುವುದೇ ಅದರ ಪರಮ ಗುರಿ. ಅದು ಇದಕ್ಕೆ ಪ್ರತಿಯಾಗಿ, ಪಕ್ಷಕ್ಕೆ ಅಪಾರ “ನಿಧಿ” ಪಡೆಯುತ್ತದೆ. ಹೆಚ್ಚು ಹೆಚ್ಚು ಸಂಪನ್ಮೂಲಗಳನ್ನು ಬಂಡವಾಳಿಗರಿಗೆ ಸಮರ್ಪಿಸುವುದರಿಂದ ಅವರು ಹೂಡಿಕೆಯನ್ನು ಹೆಚ್ಚಿಸುತ್ತಾರೆ ಎಂಬುದು ಅದರ ನಂಬಿಕೆ.
ಈ ನಂಬಿಕೆಯು ಎರಡು ಸ್ಪಷ್ಟ ಕಾರಣಗಳಿಂದಾಗಿ ತಪ್ಪಾಗಿದೆ. ಮೊದಲನೆಯದು, ಬಂಡವಾಳಿಗರಿಗೆ ತೆರಿಗೆ ರಿಯಾಯಿತಿ ಕೊಡುವುದರಿಂದ, ತೆರಿಗೆ ಲೆಕ್ಕ ಹಾಕಿದ ನಂತರದ ಅವರಿಗೆ ಸಿಗುವ ಒಟ್ಟು ಲಾಭವೇನೂ ಹೆಚ್ಚುವುದಿಲ್ಲ. ಏಕೆಂದರೆ, ದುಡಿಮೆಗಾರರು ತಮ್ಮ ಆದಾಯದ ಅತಿ ಹೆಚ್ಚು ಭಾಗವನ್ನು ಖರ್ಚು ಮಾಡುತ್ತಾರೆ. ಆದರೆ, ವಿತ್ತೀಯ ಕೊರತೆಯನ್ನು ಹೆಚ್ಚಿಸಿಕೊಳ್ಳದೆ ಬಂಡವಾಳಿಗರಿಗೆ ತೆರಿಗೆ ರಿಯಾಯಿತಿಗಳನ್ನು ಕೊಡುವ ಸಮಯದಲ್ಲೇ ಸರ್ಕಾರಿ ವೆಚ್ಚವನ್ನು ಅಷ್ಟೇ ಪ್ರಮಾಣದಲ್ಲಿ ಕಡಿತಗೊಳಿಸುವುದರಿಂದ, ಬಂಡವಾಳಿಗರಿಗೆ ತೆರಿಗೆ-ನಂತರದ ಲಾಭವು ಹೆಚ್ಚುವುದಿಲ್ಲ. ಅಂದರೆ, ಸರ್ಕಾರದ ವೆಚ್ಚಗಳ ಕಡಿತವು ಬೇಡಿಕೆಯ ಇಳಿಕೆಯಲ್ಲಿ ಪರಿಣಮಿಸಿ, ಬಂಡವಾಳಿಗರ ಲಾಭವೂ ಇಳಿಯುತ್ತದೆ. ಅಂದರೆ, ಬಂಡವಾಳಿಗರಿಗೆ ಕೊಟ್ಟ ತೆರಿಗೆ ರಿಯಾಯಿತಿಯು ಅವರ ತೆರಿಗೆ ನಂತರದ ಲಾಭಗಳನ್ನು ಪ್ರತಿತೋಲನ ಮಾಡುತ್ತದೆ. ಅಂದರೆ, ತೆರಿಗೆ ರಿಯಾಯ್ತಿ ಪಡೆದಷ್ಟು ಮೊತ್ತಕ್ಕೆ ಸಮನಾಗಿ ಅವರ ಲಾಭಗಳು ಇಳಿಕೆಯಾಗುತ್ತವೆ.
ಇಲ್ಲಿ ಒಂದು ಸರಳ ಸೂತ್ರವಿದೆ: ದುಡಿಯುವ ಜನರು ತಮ್ಮ ಇಡೀ ಆದಾಯವನ್ನು ಬಳಕೆ ಮಾಡಿದಾಗ, ಬಂಡವಾಳಗಾರರ ತೆರಿಗೆ-ನಂತರದ ಲಾಭಗಳು, ಅವರು ಹೂಡಿಕೆ ಮಾಡಿದ ಬಂಡವಾಳದ ಮೊತ್ತ, ಅವರ ಉಪಭೋಗದ ಬಳಕೆ ಮತ್ತು ವಿತ್ತೀಯ ಕೊರತೆಗಳ ಮೊತ್ತಕ್ಕೆ ಸಮಾನವಾಗಿರುತ್ತದೆ ಎಂಬುದನ್ನು ವಿದೇಶ ವ್ಯಾಪಾರದ ಲೆಕ್ಕದಿಂದ ಪಡೆಯಬಹುದು. ಬಂಡವಾಳಗಾರರ ಹೂಡಿಕೆಯು ಮೊದಲೇ ನಿರ್ಧರಿತವಾಗಿರುತ್ತದೆ. ಇದ್ದಕ್ಕಿದ್ದಂತೆ ಅದು ಬದಲಾಗುವುದಿಲ್ಲ. ಅವರ ಬಳಕೆಯೂ ಸಹ ಇದ್ದಕ್ಕಿದ್ದಂತೆ ಬದಲಾಗುವುದಿಲ್ಲ. ಹಾಗಾಗಿ, ವಿತ್ತೀಯ ಕೊರತೆಯು ಹೆಚ್ಚಾದಾಗ ಮಾತ್ರ ತೆರಿಗೆ-ನಂತರದ ಲಾಭಗಳು ಹೆಚ್ಚಾಗುತ್ತವೆ. ಆದ್ದರಿಂದ, ತೆರಿಗೆ ರಿಯಾಯಿತಿಗಳು ಮತ್ತು ಅದಕ್ಕೆ ಸಮಾನವಾದ ವೆಚ್ಚಗಳ ಇಳಿಕೆಗಳು ತೆರಿಗೆ-ನಂತರದ ಲಾಭಗಳನ್ನು ಒಟ್ಟಾರೆಯಾಗಿ ಹೆಚ್ಚಿಸುವುದಿಲ್ಲ.
ನಿಜ, ಬಂಡವಾಳಗಾರರ ಪೈಕಿ ಸರ್ಕಾರದ ಕೃಪೆಗೆ ಪಾತ್ರರಾದ ಕೆಲವು ಕಾರ್ಪೊರೇಟ್‌ಗಳ ತೆರಿಗೆ-ನಂತರದ ಲಾಭಗಳು ಹೆಚ್ಚಾಗಬಹುದು. ಆದರೆ, ಉಳಿದ ಕಾರ್ಪೊರೇಟ್‌ಗಳ ಲಾಭಗಳು ಕಡಿಮೆಯಾಗಲೇ ಬೇಕಾಗುತ್ತದೆ. ಒಂದು ವೇಳೆ ತೆರಿಗೆ-ನಂತರ ಹೆಚ್ಚು ಲಾಭ ಪಡೆದ ಬಂಡವಾಳಗಾರರು ಹೆಚ್ಚು ಬಂಡವಾಳ ಹೂಡುತ್ತಾರೆ ಎಂದು ಭಾವಿಸಿದರೂ ಸಹ, ಒಟ್ಟಾರೆ ಹೂಡಿಕೆಯು ಹೆಚ್ಚಾಗುವುದಿಲ್ಲ.
ಎರಡನೆಯದು, ತೆರಿಗೆ-ನಂತರ ಹೆಚ್ಚು ಲಾಭ ಪಡೆದ ಬಂಡವಾಳಗಾರರು ಹೆಚ್ಚು ಬಂಡವಾಳ ಹೂಡುತ್ತಾರೆ ಎಂದು ನಾವು ಈಗ ತಾನೇ ಮಾಡಿದ ಊಹೆಯು ಆಧಾರವಿಲ್ಲದ್ದು. ಹೆಚ್ಚು ಲಾಭಗಳಿಸಿದ ಕಾರಣದಿಂದ ಬಂಡವಾಳಗಾರರು ಹೆಚ್ಚು ಹೂಡಿಕೆ ಮಾಡುವುದಿಲ್ಲ. ಬೇಡಿಕೆ ಹೆಚ್ಚಾದಾಗ ಮಾತ್ರ, ಸ್ಥಾಪಿತ ಸಾಮರ್ಥ್ಯವನ್ನು ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಅವರು ಹೆಚ್ಚು ಬಂಡವಾಳ ಹೂಡುತ್ತಾರೆ. ಹಾಗಾಗಿ, ಎಷ್ಟೇ ತೆರಿಗೆ ರಿಯಾಯಿತಿಗಳನ್ನು ಕೊಟ್ಟರೂ ಸಹ, ಬೇಡಿಕೆ ಹೆಚ್ಚದಿದ್ದರೆ, ಹೂಡಿಕೆ ಮಾಡುವ ಪ್ರಲೋಭನೆಗೆ ಅವರು ಒಳಗಾಗುವುದಿಲ್ಲ. ತೆರಿಗೆ ರಿಯಾಯಿತಿಗಳು ನಿರ್ದಿಷ್ಟ ಕಾರ್ಪೊರೇಟ್‌ಗಳಿಗೆ ಬಹಳ ಅನುಕೂಲವಾಗುತ್ತವೆ, ನಿಜ. ಆದರೆ, ಅವರು ತೆರಿಗೆ ರಿಯಾಯಿತಿಗಳನ್ನು ಸುಮ್ಮನೇ ಜೇಬಿಗಿಳಿಸುತ್ತಾರೆಯೇ ವಿನಃ, ಸಾಮರ್ಥ್ಯ ವೃದ್ಧಿಸುವ ಗೋಜಿಗೆ ಹೋಗುವುದೇ ಇಲ್ಲ.
ಆದರೆ, ತೆರಿಗೆ ರಿಯಾಯಿತಿಗಳು ಬಂಡವಾಳ ಹೂಡಿಕೆಯನ್ನು ಉತ್ತೇಜಿಸುತ್ತವೆ ಎಂಬ ಈ ತಪ್ಪು ಹೇಳಿಕೆಯನ್ನು ಬಂಡವಾಳಗಾರರಿಗೆ ಕೊಡುವ ರಿಯಾಯಿತಿಗಳನ್ನು ಸಮರ್ಥಿಸಿ ಕೊಳ್ಳುವ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತದೆ. ಬಂಡವಾಳಗಾರರ ಮೇಲೆ ಹೆಚ್ಚಿನ ತೆರಿಗೆಗಳನ್ನು ವಿಧಿಸಲಾಗದ ಮತ್ತು ವಿತ್ತೀಯ ಕೊರತೆಯನ್ನು ಹಿಗ್ಗಿಸಲು ಅಸಮರ್ಥವಾಗಿರುವ ಬಿಜೆಪಿ ಸರ್ಕಾರವು ಪರೋಕ್ಷ ತೆರಿಗೆಗಳನ್ನು ಹೆಚ್ಚಿಸುವ ಮೂಲಕ ಸರ್ಕಾರದ ವೆಚ್ಚಗಳನ್ನು ಹೆಚ್ಚಿಸುವ ಕ್ರಮ ಕೈಗೊಂಡಿದೆ. ದುಡಿಯುವ ಜನರ ಮೇಲೆ ನೇರ ತೆರಿಗೆಗಳನ್ನು ವಿಧಿಸುವುದು ಕಷ್ಟವಾಗುತ್ತದೆ (ಏಕೆಂದರೆ ಅವರ ಸಂಖ್ಯೆಯು ಬಹಳ ದೊಡ್ಡದಿದೆ) ಮತ್ತು ಆ ಮೂಲಕ ಬಂದ ಆದಾಯವನ್ನು ಸರ್ಕಾರದ ವೆಚ್ಚಗಳಿಗೆ ಒದಗಿಸಿಕೊಂಡರೆ, ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸಲು ಸಹಾಯವಾಗುವುದಿಲ್ಲ: ಬೇಡಿಕೆಯನ್ನು ಉತ್ತೇಜಿಸುವ ಸಲುವಾಗಿ ಸರ್ಕಾರದ ವೆಚ್ಚಗಳನ್ನು ಈ ರೀತಿಯಲ್ಲಿ ಹೆಚ್ಚಿಸಿಕೊಂಡಾಗ, ದುಡಿಯುವ ಜನರ ಬಳಕೆಯ ಪ್ರಮಾಣವು ಇಳಿಕೆಯಾಗಿ ಬೇಡಿಕೆಯನ್ನು ಕುಗ್ಗಿಸುತ್ತದೆ ಎಂಬುದನ್ನು ಬಿಜೆಪಿ ಸರ್ಕಾರವು ಬಹುಶಃ ಅರ್ಥಮಾಡಿಕೊಂಡಿದೆ ಎಂದು ತೋರುತ್ತದೆ. ಆದ್ದರಿಂದ, ಸರ್ಕಾರವು ಪರೋಕ್ಷ ತೆರಿಗೆಯನ್ನು ಇನ್ನಷ್ಟು ಹೆಚ್ಚಾಗಿ ಅವಲಂಬಿಸಿದೆ.
ಅರ್ಥ ವ್ಯವಸ್ಥೆಯಲ್ಲಿ ಬೇಡಿಕೆಗಳು ತೀವ್ರ ಮಿತಿಗಳಿಗೆ ಒಳಗಾಗಿದ್ದರೂ ಸಹ, ಇತ್ತೀಚಿನ ದಿನಗಳಲ್ಲಿ ಸರಕು-ಸಾಮಗ್ರಿಗಳ ಬೆಲೆಗಳ ಏರಿಕೆಗೆ ಇರುವ ಒಂದು ಮುಖ್ಯ ಕಾರಣವೆಂದರೆ, ಪೆಟ್ರೋ-ಬೆಲೆಗಳ ಏರಿಕೆಯ ಕಾರಣದಿಂದ ಅವುಗಳ ಮೂಲ ಬೆಲೆ/ವೆಚ್ಚಗಳಿಗೆ ಸೇರ್ಪಡೆಯಾದ ಹೆಚ್ಚುವರಿ ವೆಚ್ಚಗಳು. ಆದ್ದರಿಂದ, ಇತ್ತೀಚಿನ ದಿನಗಳಲ್ಲಿ ಉಂಟಾಗಿರುವ ಹಣದುಬ್ಬರಕ್ಕೆ ಸರ್ಕಾರದ ನೀತಿಯೇ ನೇರ ಹೊಣೆ. ಈ ಪರಿಸ್ಥಿತಿಯಲ್ಲಿ, ರಿಸರ್ವ್ ಬ್ಯಾಂಕ್ ಅನುಸರಿಸುವ ತಂತ್ರವೆಂದರೆ, ಬಡ್ಡಿ ದರದ ಏರಿಕೆ. ಪರಿಣಾಮವಾಗಿ, ಬ್ಯಾಂಕ್ ಸಾಲಗಳು ತುಟ್ಟಿಯಾಗುತ್ತವೆ. ದುಬಾರಿ ಸಾಲಗಳ ಕಾರಣದಿಂದಾಗಿ, ಕಿರು ಉತ್ಪಾದನಾ ವಲಯದ ಉತ್ಪನ್ನಗಳ ಬೆಲೆಗಳು ಏರಿಕೆಯಾಗುತ್ತವೆ. ಅವುಗಳನ್ನು ಕೊಳ್ಳುವಷ್ಟು ಹಣ ಜನರ ಬಳಿ ಇಲ್ಲ. ಹಾಗಾಗಿ, ಕಿರು ಉತ್ಪಾದನಾ ವಲಯವು ನೆಲಕಚ್ಚುತ್ತದೆ. ರೈತರೂ ಸೇರಿದಂತೆ ಕಿರು ಉತ್ಪಾದಕರು ಹಿಂಡಿ ಹಿಪ್ಪೆಯಾಗುತ್ತಾರೆ.
ಸರಕು ಮತ್ತು ಸೇವಾ ತೆರಿಗೆ ಪದ್ಧತಿಗೆ ಹೊರಳಿದ ನಂತರ, ಬಹುತೇಕ ಸರಕುಗಳ ಮೇಲಿನ ಪರೋಕ್ಷ ತೆರಿಗೆ ದರಗಳನ್ನು ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸುತ್ತದೆ. ಹಾಗಾಗಿ, ಕೇಂದ್ರ ಸರ್ಕಾರದ ಕೈಗಳು, ಸ್ವಲ್ಪ ಮಟ್ಟಿಗೆ, ಕಟ್ಟಿಹಾಕಲ್ಪಟ್ಟಿವೆ. ಆದರೆ, ಪೆಟ್ರೋ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಹಾಗಾಗಿ, ಹಾಲು ಕರೆಯುವ ಈ ಹಸುವಿನ (ಪೆಟ್ರೋ ಉತ್ಪನ್ನಗಳು) ಹಾಲನ್ನು ಕೇಂದ್ರ ಸರ್ಕಾರವು ಬೇಕಾದಾಗ ಹಿಂಡುತ್ತದೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಪರೋಕ್ಷ ತೆರಿಗೆ ದರಗಳನ್ನು ಪದೇ ಪದೇ ಹೆಚ್ಚಿಸಿ, ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿದೆ.
ಸರ್ಕಾರದ ವಿತ್ತ ನೀತಿಯು ಅತ್ಯಂತ ಸರಳವಾಗಿದೆ: ಪೆಟ್ರೋ ಉತ್ಪನ್ನಗಳ ಮೇಲೆ ತೆರಿಗೆಗಳನ್ನು ಹೆಚ್ಚಿಸಿ ಆದಾಯವನ್ನು ಹೆಚ್ಚಿಸಿಕೊಳ್ಳುವುದು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಮಾರಾಟ ಮಾಡಿ ಆದಾಯವನ್ನು ಹೆಚ್ಚಿಸಿಕೊಳ್ಳುವುದು. (ಈ ಕ್ರಮವನ್ನು ಕುಟುಂಬದ ಬೆಳ್ಳಿ-ಬಂಗಾರದ ಮಾರಾಟ ಎಂದು ಕೆಲವರು ಕರೆಯುತ್ತಾರೆ). ಈ ರೀತಿಯಲ್ಲಿ ಸಂಗ್ರಹಿಸಿದ ಎಲ್ಲ ಹಣವನ್ನೂ ಖರ್ಚು ಮಾಡಿ, ವಿತ್ತೀಯ ಕೊರತೆಯನ್ನು ಒಂದು ಮಿತಿಯೊಳಗೆ ಇಟ್ಟುಕೊಳ್ಳಲಾಗಿದೆ ಎಂದು ಬಿಂಬಿಸಿ ಜಾಗತಿಕ ಹಣಕಾಸು ಬಂಡವಾಳವನ್ನು ಓಲೈಸುವ ಕೆಲಸ ನಡೆಯುತ್ತಿದೆ. ಆದರೆ, ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣದ ಮಾರ್ಗವಾಗಿ ಈ ತನಕ ಹೆಚ್ಚಿನ ಹಣ ಬಂದಿಲ್ಲ. ಏಕೆಂದರೆ, ಕಾರ್ಪೊರೇಟ್‌ಗಳು ಇಂತಹ ಉದ್ದಿಮೆಗಳನ್ನು ಮಾರಾಟಕ್ಕಿಟ್ಟ ತಕ್ಷಣದಲ್ಲೇ ಖರೀದಿಸುವ ಆತುರ ತೋರಿಸುತ್ತಿಲ್ಲ. ಏಕೆಂದರೆ, ಸ್ವಲ್ಪ ಸಮಯ ತಡೆದರೆ ಇನ್ನೂ ಒಳ್ಳೆಯ ಚೌಕಾಸಿ ವ್ಯವಹಾರ ಕುದುರಿಸಬಹುದು ಮತ್ತು ಅತಿ ಕಡಿಮೆ ಬೆಲೆಯಲ್ಲಿ ಒಳ್ಳೆಯ ಬೆಲೆಬಾಳುವ ಉದ್ದಿಮೆಯನ್ನೇ ಎತ್ತಿ ಬುಟ್ಟಿಗೆ ಹಾಕಿಕೊಳ್ಳಬಹುದು ಎಂಬುದು ಕಾರ್ಪೊರೇಟ್‌ಗಳ ಲೆಕ್ಕಾಚಾರ. ಹಾಗಾಗಿ, ಪೆಟ್ರೋ ಉತ್ಪನ್ನಗಳ ಮೇಲಿನ ತೆರಿಗೆಗಳೇ ಈವರೆಗೆ ಆದಾಯವನ್ನು ಕ್ರೋಢೀಕರಿಸಿಕೊಳ್ಳುವ ಅತ್ಯಂತ ಸಾಮಾನ್ಯ ವಿಧಾನವಾಗಿದೆ ಮತ್ತು ಈ ಮೂಲಕ ಗಳಿಸಿದ ಆದಾಯವನ್ನು ಬಳಸಿ ಹೆಚ್ಚಿನ ವೆಚ್ಚಗಳನ್ನು ಕೈಗೊಂಡು ಅರ್ಥವ್ಯವಸ್ಥೆಯನ್ನು ಪುನಶ್ಚೇತನಗೊಳಿಸಬಹುದು ಎಂದು ಸರ್ಕಾರ ಭಾವಿಸಿದೆ.
ಇಂತಹ ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಎರಡು ಮಿತಿಗಳು ಎದುರಾಗುತ್ತವೆ. ಮೊದಲನೆಯದು, ಜನರ ಮೇಲೆ ಹೇರಲಾಗುವ ಭಾರಿ ಹೊರೆಯ ಅಂಶದ ಹೊರತಾಗಿಯೂ, ಸರ್ಕಾರದ ವೆಚ್ಚವನ್ನು ಹಿಗ್ಗಿಸಲು ಈ ಏಕಮಾತ್ರ ಮೂಲದಿಂದ ಬರುವ ಆದಾಯವು ಸಾಕಾಗುವುದಿಲ್ಲ. ಉದಾಹರಣೆಗೆ, ಪ್ರಸಕ್ತ ವರ್ಷದ ಬಜೆಟ್‌ನಲ್ಲಿ, ಸಾಂಕ್ರಾಮಿಕ ಪೀಡಿತ 2020-21ರ ವರ್ಷದ (ಪರಿಷ್ಕೃತ ಅಂದಾಜಿನ ಪ್ರಕಾರ) ಸರ್ಕಾರದ ಒಟ್ಟು ಸಂಖ್ಯಾತ್ಮಕ ವೆಚ್ಚಗಳು ಶೇ. ಒಂದಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಏರಿಕೆಯಾಗುತ್ತವೆ ಎಂದು ನಿರೀಕ್ಷಿಸಲಾಗಿದೆ. ಅಂದರೆ, ನೈಜ ಅರ್ಥದಲ್ಲಿ ಅಂದರೆ, ಹಣದುಬ್ಬರಕ್ಕೆ ಹೊಂದಿಸಿದ ಲೆಕ್ಕದಲ್ಲಿ, ಸರ್ಕಾರದ ವೆಚ್ಚಗಳು ಕುಸಿದಿವೆ ಎಂದಾಗುತ್ತದೆ. ಸರ್ಕಾರಿ ವೆಚ್ಚಗಳು ಕಡಿಮೆಯಾಗುವ ನಿರೀಕ್ಷೆ ಇರುವಾಗ, ಅದರಲ್ಲೂ ವಿಶೇಷವಾಗಿ ಬೇಡಿಕೆಯ ಅಭಾವದ ಕಾರಣದಿಂದ ಬಂಡವಾಳಗಾರರು ಹೂಡಿಕೆಯನ್ನು ಹೆಚ್ಚಿಸಲೊಲ್ಲದಿರುವಾಗ, ಒಟ್ಟು ಬಳಕೆಯು ಕುಗ್ಗಿ, ಸರ್ಕಾರದ ಆದಾಯವೂ ಇಳಿಯುತ್ತದೆ. ಹಾಗಾಗಿ, ಅರ್ಥವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ಸಾಧ್ಯತೆಗಳು ಕ್ಷೀಣಿಸುತ್ತವೆ ಎಂಬುದು ಸ್ಪಷ್ಟವಾಗುತ್ತದೆ.
ಎರಡನೆಯ ಅಂಶವು ಇನ್ನೂ ಹೆಚ್ಚು ಮಹತ್ವದ್ದು. ಪರೋಕ್ಷ ತೆರಿಗೆ ಆದಾಯವನ್ನು ಎಷ್ಟು ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳಲಾಗಿದೆಯೋ ಅಷ್ಟೇ ಪ್ರಮಾಣದಲ್ಲಿ ಸರ್ಕಾರದ ವೆಚ್ಚಗಳನ್ನು ಹೆಚ್ಚಿಸಿಕೊಂಡರೆ ಒಟ್ಟಾರೆ ಬೇಡಿಕೆ ಹೆಚ್ಚುತ್ತದೆ ಮತ್ತು ಬೇಡಿಕೆಯ ಹೆಚ್ಚಳದಿಂದ ಉತ್ಪಾದನೆ ಮತ್ತು ಉದ್ಯೋಗಗಳೂ ಹೆಚ್ಚುತ್ತವೆ ಎಂಬುದೂ ಸಹ ಒಂದು ತಪ್ಪು ನಂಬಿಕೆ. ಏಕೆಂದರೆ, ವೇತನದಾರರು ಕೊಳ್ಳಬಹುದಾದ ವಸ್ತುಗಳ(wage goods) ಮೇಲೆ ಪರೋಕ್ಷ ತೆರಿಗೆ ಹೇರುವ ಕ್ರಮವೂ ಸಹ ವೇತನದ ಮೇಲೆ ನೇರ ತೆರಿಗೆ ಹೇರುವುದಕ್ಕೆ ಸಮಾನವೇ ಆಗುತ್ತದೆ ಮತ್ತು ಬೇಡಿಕೆಯನ್ನೂ ಸಹ ಕುಗ್ಗಿಸುತ್ತದೆ. ಮತ್ತು, ಸರ್ಕಾರದ ವೆಚ್ಚಗಳ ಹೆಚ್ಚಳದ ಪರಿಣಾಮವನ್ನು ಪ್ರತಿತೋಲನ ಮಾಡುತ್ತದೆ. ಅಂದರೆ, ಸರ್ಕಾರದ ಹೆಚ್ಚಿಸಿಕೊಂಡ ವೆಚ್ಚಗಳು ಒಟ್ಟಾರೆ ಬೇಡಿಕೆಯನ್ನು ಕುಗ್ಗಿಸುವಂತಾಗುತ್ತದೆ. ಮತ್ತೊಂದೆಡೆ, ಹೂಡಿಕೆಯ ಸರಕುಗಳು(investment goods) ಮತ್ತು ಬಂಡವಾಳಗಾರರು ಬಳಸುವ ವಸ್ತುಗಳ ಮೇಲೆ ಪರೋಕ್ಷ ತೆರಿಗೆ ಹೇರಿದರೆ, ಒಟ್ಟಾರೆ ಬೇಡಿಕೆಯನ್ನು ವಿಸ್ತರಿಸಬಹುದು. ಏಕೆಂದರೆ, ಬಂಡವಾಳಗಾರರು ಅಂಥಹ ಸರಕು/ವಸ್ತುಗಳನ್ನು ತಮ್ಮ ಬಳಿ ಇರುವ ಹಣದಿಂದ ಅಥವಾ ಬ್ಯಾಂಕುಗಳಿಂದ ಸಾಲ ಪಡೆಯುವ ಮೂಲಕ ಕೊಳ್ಳುತ್ತಾರೆ. ಅದೇ ಸಮಯದಲ್ಲಿ, ಸರ್ಕಾರದ ವೆಚ್ಚಗಳು ಬೇಡಿಕೆಯನ್ನು ಮತ್ತು ಉತ್ಪಾದನೆಯನ್ನು ಹೆಚ್ಚಿಸುತ್ತವೆ.
ಈಗ ಪ್ರಶ್ನೆ ಏನೆಂದರೆ: ಪೆಟ್ರೋ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕದ ಹೆಚ್ಚಳವನ್ನು ವೇತನದಾರರು ಕೊಳ್ಳುವ ವಸ್ತುಗಳ ಮೇಲಿನ ಪರೋಕ್ಷ ತೆರಿಗೆಯ ಹೆಚ್ಚಳವೆಂದು ವರ್ಗೀಕರಿಸಬೇಕೆ? ಅಥವಾ, ಐಷಾರಾಮಿ ಸರಕುಗಳ ಮೇಲಿನ ತೆರಿಗೆಯ ಹೆಚ್ಚಳವೆಂದು ವರ್ಗೀಕರಿಸಬೇಕೆ? ಪೆಟ್ರೋಲ್ ಮತ್ತು ಡೀಸೆಲ್‌ಅನ್ನು ಕಾರು ಮತ್ತು ಇತರ ಮೋಟಾರು ವಾಹನಗಳನ್ನು ಹೊಂದಿರುವವರು ಬಳಸುತ್ತಾರೆ. ಆದ್ದರಿಂದ, ಅವುಗಳ ಬೆಲೆ ಏರಿಕೆಯು ಬಡವರಿಗೆ ನೋವುಂಟು ಮಾಡಲಾರದು ಎಂಬುದಾಗಿ ಸರ್ಕಾರವು ಸೋಗುಹಾಕುತ್ತದೆ.
ಆದರೆ, ಸರ್ಕಾರದ ಈ ಧೋರಣೆಯು ಸಂಪೂರ್ಣವಾಗಿ ತಪ್ಪು. ಏಕೆಂದರೆ, ವಿದ್ಯುತ್ ಮತ್ತು ಕಲ್ಲಿದ್ದಲು ರೀತಿಯ ಇಂಧನವೇ ಆಗಿರುವ ಪೆಟ್ರೋ ಉತ್ಪನ್ನಗಳು “ಸಾರ್ವತ್ರಿಕ ಮಧ್ಯವರ್ತಿಗಳು”. ಅವುಗಳನ್ನು ಕೇವಲ ಖಾಸಗಿ ಬಳಕೆಗಾಗಿ ಮಾತ್ರವಲ್ಲ, ಅನೇಕಾನೇಕ ಉಪಯೋಗಳಿಗೆ ಬಳಸಲಾಗುತ್ತದೆ: ಸಾರ್ವಜನಿಕ ಸಾರಿಗೆ, ಸರಕು ಸಾಗಣೆ, ಮತ್ತು ಮನುಷ್ಯನ ಮೂಲಭೂತ ಅವಶ್ಯಕತೆಯಾದ ಆಹಾರಧಾನ್ಯಗಳ ಉತ್ಪಾದನೆಗೆ ಒಂದು ಲಾಗುವಾಡಾಗಿ ಪೆಟ್ರೋ ಉತ್ಪನ್ನಗಳು ಬಳಕೆಯಾಗುತ್ತವೆ. ಸರಕು-ಸಾಮಗ್ರಿಗಳ ಉತ್ಪಾದನೆಯ ಯಾವುದೇ ಹಂತದಲ್ಲಿ ಲಾಗುವಾಡುಗಳ ವೆಚ್ಚದ ಹೆಚ್ಚಳವು ಸರಕು-ಸಾಮಗ್ರಿಗಳ ಅಂತಿಮ ಬೆಲೆಗಳ ಹೆಚ್ಚಳದಲ್ಲಿ ಕಾಣಿಸಿಕೊಳ್ಳಲೇಬೇಕು. ಪೆಟ್ರೋ-ಉತ್ಪನ್ನಗಳ ಬೆಲೆ ಏರಿಕೆಯಿಂದಾಗಿ, ಬಡಜನರ ಬಳಕೆಯ ವಸ್ತುಗಳೂ ಸೇರಿದಂತೆ ಎಲ್ಲಾ ರೀತಿಯ ಸರಕು-ಸಾಮಗ್ರಿಗಳ ಅಂತಿಮ ಬೆಲೆಗಳು ಅನಿವಾರ್ಯವಾಗಿ ಏರುತ್ತವೆ. ಒಂದು ವೇಳೆ ಅಂತಿಮ ಬೆಲೆಗಳಲ್ಲಿ ಏರಿಕೆ ಕಂಡುಬಂದಿಲ್ಲ ಎಂದರೆ, ರೈತರು ಮತ್ತು ಇತರ ಕಿರು ಉತ್ಪಾದಕರು ಲಾಗುವಾಡುಗಳ ವೆಚ್ಚದ ಹೆಚ್ಚಳವನ್ನು ತಮ್ಮ ಲಾಭದಲ್ಲಿ ಕೊರೆ ಮಾಡಿಕೊಂಡಿರುತ್ತಾರೆ ಎಂದರ್ಥ. ಅಂದರೆ, ರೈತರು ಮತ್ತು ಇತರ ಕಿರು ಉತ್ಪಾದಕರು ಹಿಂಡಿ ಹಿಪ್ಪೆಯಾಗುತ್ತಾರೆ. ಈ ರೀತಿಯಲ್ಲಿ, ಸಾರ್ವತ್ರಿಕ ಮಧ್ಯವರ್ತಿ ಸರಕು-ಸಾಮಗ್ರಿಗಳ ಬೆಲೆ ಏರಿಕೆಯು ಬಡವರನ್ನು ಒಂದಲ್ಲ ಒಂದು ರೀತಿಯಲ್ಲಿ ಘಾಸಿಗೊಳಿಸುತ್ತದೆ.
ಇಲ್ಲಿ ಇನ್ನೂ ಒಂದು ಅಂಶವಿದೆ. ಅರ್ಥ ವ್ಯವಸ್ಥೆಯಲ್ಲಿ ಬೇಡಿಕೆಗಳು ತೀವ್ರ ಮಿತಿಗಳಿಗೆ ಒಳಗಾಗಿದ್ದರೂ ಸಹ, ಇತ್ತೀಚಿನ ದಿನಗಳಲ್ಲಿ ಸರಕು-ಸಾಮಗ್ರಿಗಳ ಬೆಲೆಗಳ ಏರಿಕೆಗೆ ಇರುವ ಒಂದು ಮುಖ್ಯ ಕಾರಣವೆಂದರೆ, ಪೆಟ್ರೋ-ಬೆಲೆಗಳ ಏರಿಕೆಯ ಕಾರಣದಿಂದ ಅವುಗಳ ಮೂಲ ಬೆಲೆ/ವೆಚ್ಚಗಳಿಗೆ ಸೇರ್ಪಡೆಯಾದ ಒಂದು ನಿರ್ದಿಷ್ಟ ಲಾಭಾಂಶದ ಪರಿಣಾಮಗಳು (cost-plus effects). ಆದ್ದರಿಂದ, ಇತ್ತೀಚಿನ ದಿನಗಳಲ್ಲಿ ಉಂಟಾಗಿರುವ ಹಣದುಬ್ಬರಕ್ಕೆ ಸರ್ಕಾರದ ನೀತಿಯೇ ನೇರ ಹೊಣೆ. ಈ ಪರಿಸ್ಥಿತಿಯಲ್ಲಿ, ರಿಸರ್ವ್ ಬ್ಯಾಂಕ್ ಅನುಸರಿಸುವ ತಂತ್ರವೆಂದರೆ, ಬಡ್ಡಿ ದರದ ಏರಿಕೆ. ಪರಿಣಾಮವಾಗಿ, ಬ್ಯಾಂಕ್ ಸಾಲಗಳು ತುಟ್ಟಿಯಾಗುತ್ತವೆ. ದುಬಾರಿ ಸಾಲಗಳ ಕಾರಣದಿಂದಾಗಿ, ಕಿರು ಉತ್ಪಾದನಾ ವಲಯದ ಉತ್ಪನ್ನಗಳ ಬೆಲೆಗಳು ಏರಿಕೆಯಾಗುತ್ತವೆ. ಅವುಗಳನ್ನು ಕೊಳ್ಳುವಷ್ಟು ಹಣ ಜನರ ಬಳಿ ಇಲ್ಲ. ಹಾಗಾಗಿ, ಕಿರು ಉತ್ಪಾದನಾ ವಲಯವು ನೆಲಕಚ್ಚುತ್ತದೆ. ಉತ್ಪಾದಕರು ಹಿಂಡಿ ಹಿಪ್ಪೆಯಾಗುತ್ತಾರೆ. ಬಡಜನರಿಗೆ ತೊಂದರೆಗಳು ಮತ್ತಷ್ಟು ಹೆಚ್ಚುತ್ತವೆ. ಈ ರೀತಿಯಲ್ಲಿ ಸರಕಾರದ ವಿತ್ತ ಫಜೀತಿಗಳು ಭಾರತದ ಅರ್ಥವ್ಯವಸ್ಥೆಗೆ ಭಾರಿ ಹಾನಿಯನ್ನು ಉಂಟುಮಾಡುತ್ತವೆ.
ಅನು: ಕೆ.ಎಂ.ನಾಗರಾಜ್