ಹಾಸನ : ರಾಜ್ಯದಲ್ಲಿ ವಿವಿಧ ರೀತಿಯ ಶೀತ ಜ್ವರ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನೆಲೆ ಇದೀಗ ಹಾಸನ ಜಿಲ್ಲೆಯಲ್ಲಿ H3N2ಗೆ ಮೊದಲ ಬಲಿ ಆಗಿರುವ ಪ್ರಕರಣ ದಾಖಲಾಗಿದೆ.
ಈ ಸೋಂಕಿನಿಂದ ಹಾಸನ ಜಿಲ್ಲೆಯ ಆಲೂರಿನಲ್ಲಿ 78 ವರ್ಷದ ವೃದ್ಧ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಾರ್ಚ್ 1 ರಂದು ಇವರು ಮೃತಪಟ್ಟಿದ್ದು, ಇವರಿಗೆ ಎಚ್3 ಎನ್2 ವೈರಸ್ ದೃಢ ಆಗಿರುವ ಬಗ್ಗೆ ವೈದ್ಯರು ಇಂದು ಮಾಹಿತಿ ನೀಡಿದ್ದಾರೆ. ಗಂಟಲು ನೋವು, ಕೆಮ್ಮಿನಿಂದ ಬಳಲುತ್ತಿದ್ದರಿಂದ ವೃದ್ಧ ಆಸ್ಪತ್ರೆಗೆ ಸೇರಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಆಲೂರಿನಲ್ಲಿ ಎಲ್ಲರ ಅರೋಗ್ಯ ತಪಾಸಣೆ ನಡೆಸಿ ಪರೀಕ್ಷೆಗಾಗಿ ಗಂಟಲು ದ್ರವವನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆ ತಪಾಸಣೆ ನಡೆಸಲು ಮುಂದಾಗಿದೆ. ಅನಾರೋಗ್ಯ ಪೀಡಿತ ಜನರು ಹಾಗೂ ವೃದ್ಧರನ್ನ ಕೂಡ ಪರೀಕ್ಷೆ ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆಯ ತಿಳಿಸಿದೆ.
ಇದನ್ನೂ ಓದಿ : ರಾಜ್ಯದ 26 ಜನರಲ್ಲಿ ಹೆಚ್3ಎನ್2 ಸೋಂಕು; ಮಾಸ್ಕ್ ಕಡ್ಡಾಯ-ಎಚ್ಚರಿಕೆ ವಹಿಸಿ: ಸಚಿವ ಡಾ ಸುಧಾಕರ್
ಎಚ್3 ಎನ್2 ವೈರಸ್ ನ ಲಕ್ಷಣಗಳೇನು ?
ಎಚ್3 ಎನ್2 ವೈರಸ್ ಸೋಂಕು ತಗುಲಿದ ಜನರಲ್ಲಿ ಶೀತ, ನೆಗಡಿಯ ಜತೆಗೆ ಕೆಮ್ಮು ಕಾಣಿಸಿಕೊಳ್ಳುತ್ತದೆ. ತೀವ್ರವಾದ ಮೈ ಕೈ ನೋವು, ಮತ್ತು 102-103 ಡಿಗ್ರಿಯಷ್ಟು ಜ್ವರ ಕೂಡ ಕಾಣಿಸಿಕೊಳ್ಳಬಹುದು. ಬೆಳಗ್ಗೆ ಹಾಸಿಗೆಯಿಂದ ಮೇಲೇಳಲಾರದಷ್ಟು ಮೈ ಕೈ ನೋವಿನ ತೀವ್ರತೆ ಇರುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಆ್ಯಂಟಿ ಬಯೋಟಿಕ್ ಮಾತ್ರೆಗಳಿಂದ ಎಚ್2 ಎನ್3 ಸೋಂಕು ನಿಯಂತ್ರಿಸಲು ಸಾಧ್ಯವಿಲ್ಲಎಂಬುದು ಪರೀಕ್ಷೆಯಿಂದ ಖಚಿತಪಟ್ಟಿದೆ. ಹಾಗಾಗಿ ಟಾಮಿಫ್ಲೂಎಂಬ ವೈರಸ್ ನಿರೋಧಕ ಮಾತ್ರೆಗಳನ್ನು ಎಚ್2 ಎನ್3 ಸೋಂಕಿನ ಚಿಕಿತ್ಸೆಗೆ ಸದ್ಯ ಬಳಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ದೇಶದಲ್ಲಿ ಕೆಮ್ಮು, ಜ್ವರ ಹೆಚ್ಚಳಕ್ಕೆ ಹೆಚ್3ಎನ್2 ಕಾರಣ; ಅವೈಜ್ಞಾನಿಕ ರೋಗನಿರೋಧಕಗಳ ಬಳಕೆ ಬೇಡ-ಐಸಿಎಂಆರ್
ಮಕ್ಕಳು ಮತ್ತು ವಯೋವೃದ್ಧರಿಗೆ ಈ ಸೋಂಕು ಅಪಾಯಕಾರಿ :
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ವಿಜ್ಞಾನಿಗಳ ಪ್ರಕಾರ ಇನ್‌ಫ್ಲುಯೆಂಜಾ ವೈರಸ್‌ಗಳಲ್ಲಿ ಪ್ರಮುಖವಾಗಿ ಎ,ಬಿ, ಸಿ,ಡಿ ಈ ನಾಲ್ಕು ವಿಧಗಳಿವೆ. ಈ ಪೈಕಿ ಇನ್‌ಫ್ಲುಯೆಂಜಾ ಎ ವೈರಸ್‌ನಲ್ಲಿ ಹೆಮಾಗ್ಲುಟಿನಿನ್ (ಎಚ್) ಮತ್ತು ನ್ಯುರಾಮಿನಿಡೇಸ್ (ಎನ್)ನ ಎಂಬ ರಾಸಾಯನಿಕಗಳ ಸಂಯೋಜನೆಯ ಆಧಾರದಲ್ಲಿ ಹಲವು ರೂಪಾಂತರಿ ತಳಿಗಳಿದ್ದು ಇದರಲ್ಲಿಎಚ್3 ಎನ್2 ವೈರಸ್ ತೀವ್ರ ಪ್ರಸರಣ ಹೊಂದುತ್ತಿದ್ದು ಜನರಲ್ಲಿಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ವಿಪರೀತ ನೆಗಡಿ, ಕೆಮ್ಮು ಉಂಟಾಗುವುದರಿಂದ ಉಸಿರಾಟ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಬಲ್ಲದು. ಹಾಗಾಗಿ 5 ವರ್ಷದೊಳಗಿನ ಮಕ್ಕಳು ಮತ್ತು ವಯೋವೃದ್ಧರಿಗೆ ಈ ಸೋಂಕು ಹೆಚ್ಚು ಅಪಾಯಕಾರಿ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.