ಮೋದಿ ಮಾಡಬೇಕಾದ ಮೊದಲ ಕೆಲಸ ಮಣಿಪುರ ಸಿಎಂ ಅವರನ್ನು ವಜಾ ಮಾಡುವುದು: ಖರ್ಗೆ ಆಗ್ರಹ

ನವದೆಹಲಿ: ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವನ್ನು ಪ್ರಶ್ನಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ರಾಜ್ಯದ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರನ್ನು ವಜಾಗೊಳಿಸುವುದು ಮೊದಲ ಕೆಲಸ” ಎಂದು ಸೋಮವಾರ ಹೇಳಿದ್ದಾರೆ.

ಮಣಿಪುರದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಬಿಜೆಪಿ ಸರ್ಕಾರವು ಅನುಭವಿಸಿದ ಹೀನಾಯ ವೈಫಲ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ಖರ್ಗೆ ಹೇಳಿದ್ದಾರೆ. “ಕಳೆದ 55 ದಿನಗಳಿಂದ ಮೋದಿ ಅವರು ಮಣಿಪುರದ ಬಗ್ಗೆ ಒಂದು ಮಾತನ್ನೂ ಹೇಳಲಿಲ್ಲ. ಪ್ರತಿಯೊಬ್ಬ ಭಾರತೀಯರು ಅವರು ಮಾತನಾಡಲು ಕಾಯುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮಣಿಪುರ ಬಿಕ್ಕಟ್ಟು -ಕೇಂದ್ರ ಸರ್ಕಾರ ಈಗಲಾದರೂ ಕಣ್ತೆರೆಯಬೇಕಿದೆ

“ಮೋದಿ ಅವರಿಗೆ ಮಣಿಪುರದ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ, ಅವರು ಮಾಡಬೇಕಾದ ಮೊದಲ ಕೆಲಸವೆಂದರೆ ಅವರ ಮುಖ್ಯಮಂತ್ರಿಯನ್ನು ವಜಾಗೊಳಿಸುವುದು” ಎಂದು ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.

ಮಣಿಪುರದಲ್ಲಿ ಇದುವರೆಗೆ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 100 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. “ಉಗ್ರಗಾಮಿ ಸಂಘಟನೆಗಳು ಮತ್ತು ಸಮಾಜ ವಿರೋಧಿ ಶಕ್ತಿಗಳು ಕದ್ದ ಶಸ್ತ್ರಾಸ್ತ್ರಗಳನ್ನು ಸರ್ಕಾರವು ಮುಟ್ಟುಗೋಲು ಹಾಕಿಕೊಳ್ಳಬೇಕು” ಎಂದು ಕಾಂಗ್ರೆಸ್ ಅಧ್ಯಕ್ಷರು ಒತ್ತಾಯಿಸಿದ್ದಾರೆ.

ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಶಾಂತಿ ನೆಲೆಸಲು ಹಲವು ಕ್ರಮಗಳನ್ನು ಸೂಚಿಸಿದ ಖರ್ಗೆ ಅವರು, ಸರ್ಕಾರವು ಎಲ್ಲಾ ಪಕ್ಷಗಳೊಂದಿಗೆ ಮಾತುಕತೆ ಆರಂಭಿಸಬೇಕು ಮತ್ತು ಸಾಮಾನ ರಾಜಕೀಯ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಿಲ್ಲದ ಮಣಿಪುರ ಹಿಂಸಾಚಾರ : ಬಹುಸಂಖ್ಯಾಕವಾದ – ಧ್ರುವೀಕರಣದ ರಾಜಕೀಯದ ದುಷ್ಫಲ?

“ಭದ್ರತಾ ಪಡೆಗಳ ಸಹಾಯದಿಂದ ದಿಗ್ಬಂಧನವನ್ನು ಅಂತ್ಯಗೊಳಿಸಬೇಕಾಗಿದ್ದು, ರಾಷ್ಟ್ರೀಯ ಹೆದ್ದಾರಿಗಳನ್ನು ತೆರೆಯುವ ಮತ್ತು ಸುರಕ್ಷಿತವಾಗಿರಿಸುವ ಮೂಲಕ ಅಗತ್ಯ ವಸ್ತುಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು. ಯಾವುದೆ ವಿಳಂಬವಿಲ್ಲದೆ ಸಂತ್ರಸ್ತರಿಗೆ ಪರಿಹಾರ, ಪುನರ್ವಸತಿ ಮತ್ತು ಜೀವನೋಪಾಯದ ಪ್ಯಾಕೇಜ್ ಅನ್ನು ಸಿದ್ಧಪಡಿಸಬೇಕು. ಈಗಾಗಲೆ ಘೋಷಿಸಿದ ಪರಿಹಾರ ಪ್ಯಾಕೇಜ್ ಅಸಮರ್ಪಕವಾಗಿದೆ ಎಂದು ಖರ್ಗೆ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *