ನವದೆಹಲಿ: ಇಂದು (ಜೂನ್ 10) ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದ್ದು, ಖಗೋಳ ಲೋಕದ ಕೌತುಕವನ್ನು ನೋಡಲು ಜಗತ್ತು ಕಾತರದಿಂದ ಕಾದಿದೆ. ಉತ್ತರಗೋಳಾರ್ಧದ ಜನರಿಗೆ ಗ್ರಹಣವನ್ನು ವೀಕ್ಷಿಸುವ ಅವಕಾಶವಿದ್ದು, ಭಾರತದಲ್ಲಿ ಕೆಲವು ಪ್ರದೇಶಗಳಲ್ಲಿ ಮಾತ್ರ ಗೋಚರವಾಗಲಿದೆ.
ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಚಲಿಸುವಾಗ ಗ್ರಹಣ ಸಂಭವಿಸುತ್ತದೆ. ಇದರ ನೆರಳು ಆವರಿಸುವುದರಿಂದ ಕೆಲ ಪ್ರದೇಶಕ್ಕೆ ಸೂರ್ಯನ ಕಿರಣಗಳು ಸ್ಪರ್ಶಿಸುವುದಿಲ್ಲವೆಂದು ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.
ಸೂರ್ಯಗ್ರಹಣವು ಉಂಗುರಾಕಾರದವಾಗಿ ಸಂಭವಿಸಲಿದೆ. ಚಂದ್ರ ಭೂಮಿಯಿಂದ ಅನತಿ ದೂರದಲ್ಲಿದೆ ಹಾಗೂ ಆಗಸದಲ್ಲಿ ಸೂರ್ಯನಿಗಿಂತ ತೀರಾ ಕಡಿಮೆ ಚಿಕ್ಕದಿದೆ. ಇಡೀ ಸೂರ್ಯಕಿರಣಗಳನ್ನು ಚಂದ್ರ ತಡೆಯುವುದು ಸಾಧ್ಯವಿಲ್ಲವಾದ್ದರಿಂದ, ಖಗೋಳ ಉತ್ಸಾಹಿಗಳು ದೊಡ್ಡ ಪ್ರಖರ ಚಕ್ರಾಕಾರದ ತುದಿಯಲ್ಲಿ ಕಡುಗಪ್ಪು ಚುಕ್ಕೆಯನ್ನು ಕಾಣಬಹುದಾಗಿದೆ.
ಇದನ್ನು ಓದಿ: ನಾಳೆ ಪೂರ್ಣ ಚಂದ್ರಗ್ರಹಣ: ಭಾರತದ ಕೆಲವೆಡೆ ಮಾತ್ರ ಗೋಚರ
ವಿಜ್ಞಾನಿಗಳು ಸೌರಮಂಡಲದಲ್ಲಿ ನಡೆಯುವ ಸಹಜ ಪ್ರಕ್ರಿಯೆ ಎಂದು ವಿಶ್ಲೇಷಿಸಿದರೆ, ಗ್ರಹಣವನ್ನೇ ಲಾಭಕ್ಕೆ ಬಳಸಿಕೊಳ್ಳುವ ಕೆಲವು ಜ್ಯೋತಿಷಿಗಳು ಗ್ರಹಣ ದೋಷಗಳು ಎದುರಾಗಲಿವೆ ಎಂದು ಅಪನಂಬಿಕೆಯನ್ನು ಸೃಷ್ಠಿಸುತ್ತಾರೆ. ತಮ್ಮ ಸ್ವಾರ್ಥ ಸಾಧನೆಗಾಗಿ ಜನರನ್ನು ಎದುರಿಸುವ ಕಾರ್ಯಕ್ಕೆ ಇಳಿಯುತ್ತಾರೆ. ಆದರೆ, ವೈಜ್ಞಾನಿಕವಾಗಿ ಗಮನಹರಿಸಿದರೆ, ಅತ್ಯಂತ ಕೌತುಕವನ್ನು ಕಣ್ತುಂಬಿಕೊಳ್ಳಬಹುದು. ಯಾವುದೇ ತೊಂದರೆಗಳು ಎದುರಾಗುವುದಿಲ್ಲ.
ಸೂರ್ಯಗ್ರಹಣವು ಪೂರ್ವ ಯುನೈಟೆಡ್ ಸ್ಟೇಟ್ಸ್ ಮತ್ತು ಉತ್ತರ ಅಲಾಸ್ಕಾದ ಕೆಲವು ಭಾಗಗಳ ಜೊತೆಗೆ ಕೆನಡಾ ಮತ್ತು ಕೆರಿಬಿಯನ್, ಯುರೋಪ್, ಏಷ್ಯಾ ಮತ್ತು ಉತ್ತರ ಆಫ್ರಿಕಾದ ಕೆಲವು ಭಾಗಗಳಲ್ಲಿ ಮತ್ತು ರಶ್ಯ, ಗ್ರೀನ್‌ಲ್ಯಾಂಡ್ ಮತ್ತು ಕೆನಡಾದಲ್ಲಿ ‘ಬೆಂಕಿಯ ಉಂಗುರ’ ಗೋಚರಿಸಲಿದೆ ಎಂದು ಅಮೆರಿಕಾದ ನಾಸಾ ಹೇಳಿದೆ. ಭಾರತದಲ್ಲಿ ಭಾಗಶಃ ಸೂರ್ಯಗ್ರಹಣವನ್ನು ಮಾತ್ರ ಕಾಣಬಹುದು.
ಭಾರತದಲ್ಲಿ ಲಡಾಖ್ ಮತ್ತು ಅರುಣಾಚಲ ಪ್ರದೇಶದಲ್ಲಷ್ಟೇ ಗ್ರಹಣ ಗೋಚರವಾಗಲಿದೆ. ಮಧ್ಯಾಹ್ನ 1:42ಕ್ಕೆ ಗ್ರಹಣ ಆರಂಭವಾಗಿ, ಸಂಜೆ 6:41ಕ್ಕೆ ಅಂತ್ಯಗೊಳ್ಳಲಿದೆ. ಚಂದ್ರ ಹಾಗೂ ಸೂರ್ಯ 25 ಡಿಗ್ರಿಯಲ್ಲಿಗೆ ತಲುಪಿದಾಗ ಅಂದರೆ, ಮಧ್ಯಾಹ್ನ 4 ಗಂಟೆ 23 ನಿಮಿಷಕ್ಕೆ ಹಾಗೂ ಗ್ರಹಣದ ಅಂತ್ಯವಾದ ಸಂಜೆ 6 ಗಂಟೆ 40 ನಿಮಿಷಕ್ಕೆ, ಗ್ರಹಣದ ಉತ್ತುಂಗ ಅಂದರೆ ಸೂರ್ಯ ಕಂಕಣ ಬಳೆ ತೊಟ್ಟಂತೆ ಕಾಣುತ್ತಾನೆ.
ನಾಸಾ ತನ್ನ ವೆಬ್‌ಸೈಟ್: www.nasa.gov/live ನಲ್ಲಿ ಗ್ರಹಣದ ನೇರಪ್ರಸಾರ ಮಾಡಲಿದೆ.