– ಅರುಣ್ ಜೋಳದಕೂಡ್ಲಿಗಿ
ಕೆಳಜಾತಿಗಳಿಗೆ ಅಕ್ಷರ ಕಲಿಸುವುದು ಧರ್ಮವಿರೋಧಿ ಎಂದು ಮೇಲ್ಜಾತಿಗಳು ವ್ಯಾಪಾರಿ ಗೋವಿಂದರಾವ್ ಜತೆ ಜಗಳ ತೆಗೆದಿದ್ದಾರೆ. ಇದರಿಂದಾಗಿ ಮಗ ಜ್ಯೋತಿಬಾ ಸೊಸೆ ಸಾವಿತ್ರಿಬಾಯಿ ಅವರು ಅಕ್ಷರ ಕಲಿಸುವುದನ್ನು ನಿಲ್ಲಿಸದ್ದಕ್ಕೆ ಉಟ್ಟ ಬಟ್ಟೆಯಲ್ಲಿಯೇ ಮನೆಯಿಂದ ಹೊರಹಾಕುತ್ತಾರೆ. ಗೋವಿಂದರಾವ್ ತಂಗಿ ಸುಗುಣಬಾಯಿ ಪರ್ಷಿಯನ್ ಶಿಕ್ಷಕ ಮುನ್ಷಿ ಗಫರ್ ಖಾನ್ ಅವರ ಬಳಿ ವಿಷಯ ತಿಳಿಸುತ್ತಾಳೆ. ಗಫರ್ ಖಾನ್ ಫುಲೆ ದಂಪತಿಗಳನ್ನು ಉಸ್ಮಾನ್ ಶೇಕ್ ಅವರ ಮನೆಗೆ ಕರೆದೊಯ್ಯುತ್ತಾರೆ. ನಡೆದ ಘಟನೆಯನ್ನು ವಿವರಿಸುತ್ತಾರೆ. ಉಸ್ಮಾನ್ ಶೇಕ್ ತನ್ನ ಮನೆಯ ಎರಡು ಕೋಣೆಗಳನ್ನು ಬಿಟ್ಟುಕೊಡುತ್ತಾರೆ. ಮನೆಯ ಒಳಗಿಂದ ಒಂದು ಹುಡುಗಿ ಬಂದು ಸಾವಿತ್ರಿಬಾಯಿಯನ್ನು ಪರಿಚಯ ಮಾಡಿಕೊಳ್ಳುತ್ತಾಳೆ. ಆ ಹುಡುಗಿಯೇ ಉಸ್ಮಾನ್ ಶೇಕ್ ಅವರ ತಂಗಿ ಫಾತೀಮಾ ಶೇಕ್. ಫಾತೀಮಾ ಶೇಖ್
ಉಸ್ಮಾನ್ ಶೇಕ್ ಅವರ ಮನೆಯಲ್ಲಿ ಫುಲೆ ದಂಪತಿಗಳಿಂದ (1848) ಶಾಲೆಯೊಂದು ಆರಂಭವಾಗುತ್ತದೆ. ಇದೇ ಶಾಲೆಯಲ್ಲಿ ಸಾವಿತ್ರಿಬಾಯಿ ಮತ್ತು ಫಾತೀಮಾ ಶಿಕ್ಷಕಿಯರಾಗುತ್ತಾರೆ. ಆದರೆ ಸಾವಿತ್ರಿಬಾಯಿ ಅವರನ್ನು ಜನವರಿ 3 ರಂದು ದೇಶವ್ಯಾಪಿ ನೆನೆದು ಫುಲೆ ದಂಪತಿಗಳ ಅಕ್ಷರಕ್ರಾಂತಿಯ ಭಾಗವಾಗಿದ್ದ ಫಾತೀಮಾ ಶೇಕ್ ಹುಟ್ಟಿದ ಜನವರಿ 9 ನ್ನು ಚಾರಿತ್ರಿಕವಾಗಿ ನೆನೆಯುವುದಿಲ್ಲ. ಫಾತೀಮಾ ಶೇಖ್
ಹಾಗೆ ನೋಡಿದರೆ, ಫುಲೆ ದಂಪತಿಗಳ ಜತೆ ಮುನ್ಷಿ ಗಫರ್ ಖಾನ್, ಸುಗುಣಬಾಯಿ, ಉಸ್ಮಾನ್ ಶೇಖ್, ಮತ್ತು ಫಾತೀಮಾ ಶೇಖ್ ಆಧುನಿಕ ಭಾರತದಲ್ಲಿ ದಮನಿತರಿಗೆ ಅಕ್ಷರದ ಬೆಳಕು ಬೀರಲು ಸಾಲುದೀಪದಂತೆ ಉರಿದವರು. ಹಾಗಾಗಿ ಈ ಕಾರ್ಯಾಚರಣೆಯ ಭಾಗವಾದ ಎಲ್ಲರನ್ನೂ ನೆನೆಯಬೇಕಿದೆ. ಈ ಶಿಕ್ಷಣ ಕ್ರಾಂತಿಗೆ `ದಲಿತ-ದಮನಿತ-ಮಹಿಳೆ-ಮುಸ್ಲೀಂ’ ಸಂಯುಕ್ತ ಅರಿವಿನ ಹೋರಾಟದ ಒಂದು ದೊಡ್ಡ ಮಾದರಿಯನ್ನು ಈ ಮೂಲಕ ತೋರಿಸಿದ್ದಾರೆ. ಫಾತೀಮಾ ಶೇಖ್
ಇದನ್ನು ಓದಿ : ದೈನಿಕ್ ಜಾಗರಣ್, ಇಂಡಿಯಾ ಟುಡೇ ಮತ್ತು ರಿಪಬ್ಲಿಕ್ ಟಿವಿಗೆ ನೋಟಿಸ್ ಕಳುಹಿಸಿದ ಜೆಡಿಯು ನಾಯಕ ಲಲನ್ ಸಿಂಗ್!
ಸೂಸಿ ತಾರು ಮತ್ತು ಲಲಿತ ಕೆ ಅವರು 1991 ರಲ್ಲಿ ಸಂಪಾದಿಸಿದ `ವುಮನ್ ರೈಟಿಂಗ್ ಇನ್ ಇಂಡಿಯಾ’ ಮೊದಲ ಸಂಪುಟದಲ್ಲಿ ಸಾವಿತ್ರಿಬಾಯಿ 1956 ರಲ್ಲಿ ಬರೆದ ಪತ್ರವೊಂದು ಪ್ರಕಟವಾಗುತ್ತದೆ. ಈ ಪತ್ರದಲ್ಲಿ ಫಾತೀಮಾ ಶೇಕ್ ಅವರ ಉಲ್ಲೇಖ ಗಮನ ಸೆಳೆಯುತ್ತದೆ. ನಂತರ ಫಾತೀಮಾಳ ಬಗ್ಗೆ ಕುತೂಹಲ ಮೂಡುತ್ತದೆ. 1831 ರ ಜನವರಿ 9 ರಂದು ಫಾತೀಮಾ ಶೇಕ್ ಪುಣೆಯಲ್ಲಿ ಜನಿಸುತ್ತಾಳೆ. ಅಣ್ಣ ಉಸ್ಮಾನ್ ಶೇಕ್ ಜತೆ ಫುಣೆಯ ಭಿಡೆವಾಡೆಯಲ್ಲಿ ಬೆಳೆಯುತ್ತಾಳೆ. ಉಸ್ಮಾನ್ ತಂಗಿಗೆ ಉರ್ದು ಶಿಕ್ಷಣ ಕೊಡಿಸುತ್ತಾರೆ. ಮುಸ್ಲೀಮರ ವಿರೋಧದ ನಡುವೆಯೂ ಫಾತಿಮಾಗೆ ಮರಾಠಿ ಶಿಕ್ಷಣ ಕೊಡಿಸುತ್ತಾರೆ. ಹಾಗಾಗಿ ಮರಾಠಿ ಕಲಿತ ಮೊದಲ ಮುಸ್ಲಿಂ ಮಹಿಳೆ. ಫಾತೀಮಾ ಶೇಖ್
ಅಮೇರಿಕನ್ ಮಿಷನರಿ ಸಿಂಥಿಯಾ ಫರಾರ್ ನಡೆಸುತ್ತಿದ್ದ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಸಾವಿತ್ರಿಬಾಯಿ ಮತ್ತು ಫಾತೀಮಾ ತರಬೇತಿ ಪಡೆಯುತ್ತಾರೆ. ಸಾವಿತ್ರಿಬಾಯಿ ಶಾಲೆಗಳಲ್ಲಿ ಕಲಿಸುತ್ತಿದ್ದರೆ ಫಾತೀಮಾ ಮನೆ ಮನೆಗೆ ತೆರಳಿ ಶಿಕ್ಷಣದ ಮಹತ್ವವನ್ನು ತಿಳಿಸಿ ಮಕ್ಕಳನ್ನು ಶಾಲೆಗೆ ಕರೆತರುತ್ತಿದ್ದಳು. ಮುಸ್ಲಿಂ ಬಾಲಕಿಯರನ್ನು ಶಾಲೆಗೆ ಪ್ರೇರೇಪಿಸಿದ್ದಕ್ಕೆ ಮುಸ್ಲೀಂ ಗಂಡಸರಿಂದ ಕಷ್ಟಗಳನ್ನು ಎದುರಿಸುತ್ತಾಳೆ. ಮುಂದೆ ಮಹಿಳೆಯರಿಗಾಗಿ ಫುಲೆ ದಂಪತಿಗಳು ಆರಂಭಿಸಿದ ಹದಿನೆಂಟು ಶಾಲೆಗಳ ವ್ಯವಹಾರವನ್ನು ನಿರ್ವಹಿಸಿದಳು. ಮುಂಬೈನಲ್ಲಿ 1851 ರಲ್ಲಿ ಸ್ವತಃ ಹುಡುಗಿಯರಿಗಾಗಿ ಎರಡು ಶಾಲೆಗಳನ್ನು ತೆರೆದಳು. ಫುಲೆ ದಂಪತಿಗಳಂತೆ ಫಾತೀಮಾ ಸಾಹಿತ್ಯ ರಚಿಸದಿದ್ದ ಕಾರಣ ಬಹುಕಾಲ ತೆರೆಮರೆಯಲ್ಲೆ ಉಳಿದರು. ಫಾತೀಮಾ ಶೇಖ್
ಅಂಬೇಡ್ಕರ್ 1946 ರಲ್ಲಿ `ಶೂದ್ರರು ಯಾರಾಗಿದ್ದರು? ಕೃತಿಯನ್ನು ಜೋತಿಬಾ ಪುಲೆ ಅವರಿಗೆ ಅರ್ಪಿಸಿ ಅವರು ನನ್ನ ಗುರು ಎನ್ನುತ್ತಾರೆ. ಹೀಗಾಗಿ ಅಂಬೇಡ್ಕರ್ ಕುರಿತ ಅಧ್ಯಯನದ ಜತೆಜತೆಗೆ ದಲಿತ-ಬಹುಜನ ಪಕ್ಷವು ಜ್ಯೋತಿಬಾ ಮತ್ತು ಸಾವಿತ್ರಿಬಾಯಿ ಅವರನ್ನು ಮುನ್ನಲೆಗೆ ತಂದಿತು. ಭಾರತದಲ್ಲಿ ಮುಸ್ಲಿಂ ಚಿಂತಕರು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಸ್ಥಾಪನೆಗೆ ಕಾರಣರಾದ ಸರ್ ಸೈಯದ್ ಅಹ್ಮದ್ ಖಾನ್ ಮೂಲಕ ಆಧುನಿಕ ಭಾರತದ ಮುಸ್ಲಿಂ ಶಿಕ್ಷಣವನ್ನು ಗುರುತಿಸುತ್ತಾರೆ. ವಿರ್ಯಾಸವೆಂದರೆ, 1848 ರಲ್ಲಿಯೇ ಶಿಕ್ಷಕಿಯಾಗಿ ಅಕ್ಷರದ ಬೆಳಕಿಂಡಿ ತೆರೆದ ಫಾತೀಮಾ ಶೇಕ್ ಬಗ್ಗೆ ಮುಸ್ಲಿಂ ಚಿಂತಕರು ಚರಿತ್ರೆಯಲ್ಲಿ ಗುರುತಿಸುವುದಿಲ್ಲ. ಫಾತೀಮಾ ಶೇಖ್
ಫಾತೀಮಾ ಶೇಕ್ ಅವರ ಪರಿಚಯವನ್ನು 2016 ರಲ್ಲಿ ಮಹಾರಾಷ್ಟ್ರದ ಬಾಲಭಾರತಿಯ ಉರ್ದು ಪಠ್ಯದಲ್ಲಿಯೂ, 2022 ರಲ್ಲಿ ಆಂದ್ರದ 8 ನೇ ತರಗತಿಯ ಪಠ್ಯದಲ್ಲಿಯೂ ಸೇರಿಸಲಾಗಿದೆ. 2022 ರಲ್ಲಿ ಫಾತಿಮಾಳ 191 ನೇ ಜನ್ಮದಿನಾಚರಣೆಗೆ ಗೂಗಲ್ ಡೂಡಲ್ ಮೂಲಕ ಗೌರವಿಸಿ ಗಮನಸೆಳೆಯಿತು. ಸೈಯದ್ ನಸೀರ್ ಅಹಮದ್ ಅವರು ತೆಲುಗಿನಲ್ಲಿ ಬರೆದ ಫಾತೀಮಾ ಶೇಕ್ ಜೀವನ ಚರಿತ್ರೆಯ ಕೃತಿಯನ್ನು ಲೇಖಕ ಕಾ.ಹು.ಚಾನ್ ಪಾಷ ಅವರು ಕನ್ನಡಕ್ಕೂ ತಂದಿದ್ದಾರೆ. ಭಾರತದ ಚರಿತ್ರೆಯಲ್ಲಿ ಮರೆಯಬಾರದ ಫಾತೀಮಾ ಶೇಕ್ ಅವರನ್ನು ಇನ್ನಾದರೂ ನೆನೆಯೋಣ. ಫಾತೀಮಾ ಶೇಖ್
ಇದನ್ನು ನೋಡಿ : ಬಿಲ್ಕಿಸ್ ಬಾನು ಪ್ರಕರಣ : ಗುಜರಾತ್ ಸರಕಾರದ ಆದೇಶ ರದ್ದು ಮಾಡಿದ ಸುಪ್ರೀಂ ಕೋರ್ಟ್