ಪುಸ್ತಕ ಬಿಡುಗಡೆ | ಆರ್.ಬಿ.ಮೋರೆ – ಮೊದಲ ದಲಿತ ಕಮ್ಯುನಿಸ್ಟ್‌

 ಆರ್. ಬಿ ಮೋರೆ ಪುಸ್ತಕವು ನವೆಂಬರ್‌ 16 ರಂದು ಮಿಷನ್ ರಸ್ತೆಯಲ್ಲಿರುವ ಸೌಹಾರ್ದ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ. ಹಿರಿಯ ಚಿಂತಕ ಮೂಡ್ನಾಕೂಡು ಚಿನ್ನಸ್ವಾಮಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಚಿಂತಕ ಬಂಜಗೆರೆ ಜಯಪ್ರಕಾಶ ಪುಸ್ತಕದ ಬಗ್ಗೆ ಮಾತನಾಡಲಿದ್ದಾರೆ.  ಅಖಿಲ ಭಾರತ ಕಿಸಾನ್‌ ಸಭಾದ ರಾಷ್ಟ್ರಾಧ್ಯಕ್ಷ ಅಶೋಕ ಧವಳೆ ಆಶಯ ಭಾಷಣ ಮಾಡಲಿದ್ದಾರೆ. ಅನುವಾದಕ ಅಬ್ದುಲ್ ರೆಹಮಾನ್ ಪಾಷಾ, ಇಂದಿರಾ ಕೃಷ್ಣಪ್ಪ, ಗೋಪಾಲಕೃಷ್ಣ ಹರಳಹಳ್ಳಿ,  ಮಾವಳ್ಳಿ ಶಂಕರ್‌, ಡಾ. ಆರ್.‌ ಮೋಹನರಾಜ್‌, ಸುಬ್ಬು ಹೊಲೆಯಾರ್‌ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಪುಸ್ತಕದ ಕೆಲವು ಆಯ್ದ ಭಾಗಗಳು

ಪ್ರಕಾಶಕರ ನುಡಿಯಿಂದ

ಎರಡು ರೀತಿಗಳಲ್ಲಿ ಇದು ಒಂದು ವಿಶಿಷ್ಟ ಕೃತಿ. ತಂದೆಯ ಅಪೂರ್ಣ ಸ್ವಚರಿತ್ರೆಯನ್ನು ಮಗ ಜೀವನಚರಿತ್ರೆಯಾಗಿ ಪೂರ್ಣಗೊಳಿಸಿರುವುದು ಒಂದು ವೈಶಿಷ್ಟ, ಪ್ರಸಕ್ತ ಸಂದರ್ಭದಲ್ಲಿ ಇನ್ನಷ್ಟು ಮಹತ್ವದ ಸಂಗತಿಯೆಂದರೆ, ಇದು ಬ್ರಿಟಿಷ್ ವಸಾಹತುಶಾಹೀ ಆಳ್ವಿಕೆಯ ಅಡಿಯಲ್ಲಿ ಭಾರತದಲ್ಲಿ ವರ್ಗ ದಮನ ಮತ್ತು ಜಾತಿದಮನದ ವಿರುದ್ಧ ಮೂಡಿಬಂದ ಎರಡು ಜನಾಂದೋಲನಗಳ ನಡುವಿನ ಸಂಬಂಧದ ಬಗ್ಗೆ ಸಾಮಾನ್ಯವಾಗಿ ಇರುವ ಕಲ್ಪನೆಗಳನ್ನು ಮರುವಿಮರ್ಶೆಗೆ ಒಳಪಡಿಸಲು ಪ್ರೇರೇಪಿಸುವ ಕೃತಿ.

ರಾಮಚಂದ್ರ ಬಾಬಾಜಿ ಮೋರೆ, ಡಾ.ಅಂಬೇಡ್ಕರರ ಆರಂಭದ ಮತ್ತು ಅತ್ಯಂತ ಪ್ರಖರ ಅನುಯಾಯಿಗಳಲ್ಲಿ ಒಬ್ಬರು. ಡಾ.ಅಂಬೇಡ್ಕರ್‌ರವರ ನೇತೃತ್ವದ 1927ರ ಐತಿಹಾಸಿಕ ಚವ್ದಾರ್ ಕೆರೆ ಸತ್ಯಾಗ್ರಹಕ್ಕೆ ದಾರಿ ಮಾಡಿಕೊಟ್ಟ ಅವರ ಮೊದಲ ಮಹಾಡ್ ಭೇಟಿಗೆ ಕಾರಣೀಭೂತರಾದವರು, ಅದನ್ನನುಸರಿಸಿ ನಡೆದ ಮನುಸ್ಮೃತಿ ದಹನದ ನಂತರ ಡಾ.ಅಂಬೇಡ್ಕರ್‌ರವರ ಅತ್ಯಂತ ವಿಶ್ವಾಸಾರ್ಹ ಸಹಯೋಗಿಯಾಗಿ ಹೊಮ್ಮಿದರು. ಅದಾದ ಮೂರು ವರ್ಷಗಳಲ್ಲೇ ಅವರು ಕಮುನಿಸ್ಟ್ ಪಕ್ಷ ಸೇರಿ ಅಚ್ಚರಿ ಮೂಡಿಸಿದರು.

ಗಮನಿಸಬೇಕಾದ ಸಂಗತಿಯೆಂದರೆ, ಇದಕ್ಕೆ ಕಾರಣವಾದ ನಡುವಣ ಮೂರು ವರ್ಷಗಳ ಮೂರು ಘಟನೆಗಳಲ್ಲಿ ಒಂದು, ಮುಂಬೈಯಲ್ಲಿ 1928ರಲ್ಲಿ ನಡೆದ ಗಿರಣಿ ಕಾರ್ಮಿಕರ ಐತಿಹಾಸಿಕ ಹರತಾಳ. ಆರು ತಿಂಗಳ ಕಾಲ ನಡೆದ ಈ ಹರತಾಳಕ್ಕೆ ಮೋರೆ ಸ್ವತಃ ಸಾಕ್ಷಿಯಾಗಿದ್ದರು. ಈ ಹರತಾಳದ 18 ಬೇಡಿಕೆಗಳ ಪ್ರಣಾಳಿಕೆಯಲ್ಲಿ ದಲಿತರ ಕುರಿತು ಒಂದು ಉಲ್ಲೇಖವಿತ್ತು; ಅದರಲ್ಲಿ, ಬಟ್ಟೆ ನೇಯ್ಗೆಯ ವಿಭಾಗದಲ್ಲಿ, ದಾರವನ್ನು ಶಟಲ್‌ಗೆ ಸುತ್ತುವಾಗ ಅದಕ್ಕೆ ಕೆಲಸಗಾರರ ಉಗುಳಿನಿಂದ ಒದ್ದೆ ಮಾಡಬೇಕಾಗಿತ್ತು; ಆ ವಿಭಾಗದಲ್ಲಿ ದಲಿತ ಕಾರ್ಮಿಕರನ್ನೂ ನೇಮಿಸಬೇಕು ಎಂದು ಈ ಬೇಡಿಕೆಯಾಗಿತ್ತು.

ಸ್ವತಃ ಮೋರೆಯವರೇ ತಾವು ಕಮುನಿಸ್ಟ್ ಪಕ್ಷವನ್ನು ಸೇರುವ ಬಗ್ಗೆ ಬಾಬಾಸಾಹೇಬರಿಗೆ ಹೇಳಿದಾಗ ಅವರು ಕೋಪಿಸಿಕೊಳ್ಳಬಹುದೇನೋ ಎಂದು ಆತಂಕಿತರಾಗಿದ್ದರಂತೆ. ಆದರೆ ಹಾಗಾಗಲಿಲ್ಲ. ಅವರು, ದಲಿತರನ್ನೂ ಒಳಗೊಂಡ ಹಾಗೆ ಇಡೀ ಮಾನವ ಕುಲದ ವಿಮೋಚನೆಗಾಗಿ ಹೋರಾಡಲು ನಿರ್ಧರಿಸಿದ್ದಕ್ಕೆ ನನಗೆ ಸಂತೊಷವೇ ಆಗಿದೆ ಎಂದರಂತೆ. ಇತ್ತ ಮೋರೆಯವರೂ ಕೂಡ “ಮಾನವ ಜನಾಂಗವನ್ನು ಎಲ್ಲಾ ಬಗೆಯ ಶೋಷಣೆಯಿಂದ ಮುಕ್ತಗೊಳಿಸುವ ಕಾರ್ಯದಲ್ಲಿ ತೊಡಗಲು ಹೊರಡುತ್ತಿರುವೆನಾದರೂ, ಬಂಡವಾಳಶಾಹಿ ಭೂಮಾಲೀಕತ್ವದ ಪ್ರಸ್ತುತ ವ್ಯವಸ್ಥೆಯಲ್ಲಿ ನೀವು ಆರಂಭಿಸಿರುವ, ದಲಿತರ ಸಾಮಾಜಿಕ ಮತ್ತು ರಾಜಕೀಯ ಹಕ್ಕುಗಳ ಹೋರಾಟವೂ ಅಷ್ಟೇ ಮುಖ್ಯವಾದುದು, .. .. .. ದಲಿತರ ವಿಮೋಚನೆಯ ಪ್ರಶ್ನೆ ಬಂದಾಗ ನನ್ನ ಸ್ವಭಾವ ಮತ್ತು ವರ್ತನೆಯಲ್ಲಿ ನಾನು
ನಿಮ್ಮ ಅನುಯಾಯಿಯೇ ಆಗಿರುತ್ತೇನೆ, ನಾನು ನಿಮ್ಮನ್ನು ಬಿಟ್ಟುಹೋಗುವುದಿಲ್ಲ. ದಲಿತರ ಸ್ವತಂತ್ರವಾದ ಹೋರಾಟ ಮತ್ತು ಆಮೂಲಾಗ್ರ ಕ್ರಾಂತಿಗಾಗಿ ಕಾರ್ಮಿಕರ ಹೋರಾಟವು ಜೊತೆಜೊತೆಗೇ ಸಾಗಬಹುದು ಎಂಬುದು ನನ್ನ ವಿಶ್ವಾಸವಾಗಿದೆ” ಎಂದರಂತೆ.

ಇದರಂತೆಯೇ ನಡೆದ ಆರ್.ಬಿ.ಮೋರೆಯವರು ತಮ್ಮ ಜೀವನ ವೃತ್ತಾಂತವನ್ನು ಬರೆಯಲು ಆರಂಭಿಸಿದ್ದರು, ಆದರೆ ಅದನ್ನು ಪೂರ್ಣಗೊಳಿಸಲಾಗಲಿಲ್ಲ. 1972ರಲ್ಲಿ ಅವರು ನಿಧನರಾದರು. ನಂತರ ಅವರ ಮಗ ಸತ್ಯೇಂದ್ರ ಮೋರೆಯವರು ಇದನ್ನು ಮುಂದೊಯ್ದರು. ಇದರಿಂದಾಗಿ, ಕುಟುಂಬದ ಇತಿಹಾಸದೊಂದಿಗೇ, ರಾಜಕೀಯ ಚಿಂತನೆ, ಮತ್ತು ಹಳ್ಳಿಗಳಿಂದ ಬಂದು ಮುಂಬೈಯಂತಹ ನಗರಗಳನ್ನು ಕಟ್ಟುವ ಕೆಲಸದಲ್ಲಿ ತಮ್ಮ ಪಾತ್ರವಹಿಸಿದ ನಗರಪ್ರದೇಶದ ಕಾರ್ಮಿಕರ, ಅದರಲ್ಲೂ ದಲಿತ ಕಾರ್ಮಿಕರ ಬದುಕಿನ ಸಾಮಾಜಿಕ ಅನುಭವಗಳು ಮುಪ್ಪುರಿಗೊಂಡ ಈ ಕೃತಿ ಮರಾಠಿ ಭಾಷೆಯಲ್ಲಿ 2003ರಲ್ಲಿ “ದಲಿತ್ ವ ಕಮ್ಯುನಿಸ್ಟ್ ಚಳವಳೀಚಾ ಸಶಕ್ತ ದುವಾ: ಕಾಮ್ರೇಡ್ ಆರ್.ಬಿ.ಮೋರೆ” (ದಲಿತ ಮತ್ತು ಕಮ್ಯುನಿಸ್ಟ್ ಚಳುವಳಿಯ ಒಂದು ಬಲಿಷ್ಟ ಕೊಂಡಿ) ಎಂಬ ಶಿರೋನಾಮೆಯೊಂದಿಗೆ ಪ್ರಕಟವಾಯಿತು.

2020ರಲ್ಲಿ ದಿಲ್ಲಿಯ ‘ಲೆಫ್ಟ್ವರ್ಡ್’ ಪ್ರಕಾಶನ ಸಂಸ್ಥೆ ಇದನ್ನು ಅನುಪಮ ರಾವ್ ಸಂಪಾದಕತ್ವದಲ್ಲಿ ಇಂಗ್ಲೀಷಿನಲ್ಲಿ ಪ್ರಕಟಿಸಿತು. ಅನುವಾದ ಮಾಡಿದವರು ವಂದನಾ ಸೋನಾಲ್ಕರ್. ಈ ಅನುವಾದದ ಆಧಾರದ ಮೇಲೆ ಇದನ್ನು ‘ಕ್ರಿಯಾ ಮಾಧ್ಯಮ’ಕ್ಕಾಗಿ ಪ್ರೊ. ಎಂ.ಅಬ್ದುಲ್ ಪಾಷ ಕನ್ನಡಕ್ಕೆ ತಂದು ಕೊಟ್ಟಿದ್ದಾರೆ. ನಮ್ಮ ನಾಡಿನ ಒಬ್ಬ ಪ್ರಮುಖ ಸಾರ್ವಜನಿಕ ಚಿಂತಕರಾಗಿ ಮೂಡಿ ಬಂದಿರುವ ಪ್ರೊ.ರಾಜೇಂದ್ರ ಚೆನ್ನಿಯವರು ಈ ಕೃತಿಯ ಒಂದು ವಿಮರ್ಶಕ ವಿಹಂಗಮ ನೋಟವನ್ನು ನೀಡಿ ಇದರ ಮೌಲ್ಯವನ್ನು ಹೆಚ್ಚಿಸಿದ್ದಾರೆ. ಅವರಿಗೆ ಮತ್ತು ಅವರೇ ಮುನ್ನುಡಿಯಲ್ಲಿ ಹೇಳಿರುವಂತೆ ಎರಡು ಭಾಷೆಗಳನ್ನು ದಾಟಿ ಬಂದರೂ ಕನ್ನಡದ ಮೂಲ ಕೃತಿಯಂತೆ ಇದನ್ನು ನಮಗೆ ಒದಗಿಸಿರುವ ಪ್ರೊ. ಪಾಷ ಅವರಿಗೆ ನಮ್ಮ ಹಾರ್ದಿಕ ಕೃತಜ್ಞತೆಗಳು.

ಪುಸ್ತಕದ ಬ್ಲರ್ಬಿನಿಂದ

ಈ ವಿಶಿಷ್ಟವಾದ ಕೃತಿಯಲ್ಲಿ ಮೋರೆ ಅವರೇ ಬರೆದ ಆತ್ಮಕಥೆಯು 1924ರ ಸುಮಾರಿಗೆ ಬಂದು ನಿಲ್ಲುತ್ತದೆ. ಅಪೂರ್ಣವಾಗಿ ಉಳಿಯುತ್ತದೆ. ಆದರೆ ಆರ್.ಬಿ.ಮೋರೆಯವರ ಮಗನಾದ ಸತ್ಯೇಂದ್ರ ಮೋರೆ ತಮ್ಮ ತಂದೆಯ ಜೀವನದ ಕತೆಯನ್ನು ಅಲ್ಲಿಂದ ಮುಂದುವರೆಸುತ್ತಾರೆ. ಆರ್.ಬಿ.ಮೋರೆಯವರ ಆತ್ಮಕಥನವು (ಇದು ಕಾಕತಾಳೀಯವಾದರೂ) ಮೋರೆಯವರು ಅಂಬೇಡ್ಕರ್ ಅವರನ್ನು ಮಹಾಡ್ ಸಮಾವೇಶಕ್ಕೆ ಕರೆಯಲು ಬಂದಿದ್ದರೊಂದಿಗೆ ಈ ಕೃತಿಯ ಮೊದಲ ಭಾಗ ಮುಗಿಯುವುದು ಸಾಂಕೇತಿಕವಾಗಿದೆ. ಇನ್ನೊಂದು ರೀತಿಯಲ್ಲಿ ಮೋರೆಯವರ ರಾಜಕೀಯ ಕ್ರಿಯಾಶೀಲತೆ ನಿಜವಾಗಿ ಆರಂಭವಾಗುವುದು ಇಲ್ಲಿಂದಲೇ. ಮೊದಲ 

ಇದಕ್ಕೆ ಪೂರಕವಾಗಿ ನಿರೂಪಣೆ, ಶೈಲಿ ಇವುಗಳೂ ಕೂಡ ಬದಲಾಗುತ್ತವೆ. ಮೊದಲ ಭಾಗವು ದಲಿತ ಆತ್ಮಕಥೆಗಳ ಸಂಪ್ರದಾಯಕ್ಕೆ ಒಂದು ಉಜ್ವಲ ಸೇರ್ಪಡೆಯಾಗಿದೆ. ಎರಡನೇ ಭಾಗವು ಬಹುಮುಖ್ಯ ಕಾಲಮಾನವೊಂದರ ಚರಿತ್ರೆಯಾಗಿದೆ. ಸಹಜವಾಗಿಯೇ ಆತ್ಮಕಥೆಯ ಭಾಗವು ತನ್ನ ತೀವ್ರತೆ, ಅನಿರೀಕ್ಷಿತ ಘಟನೆಗಳು, ತಿರುವುಗಳು ಹಾಗೂ ಬರಹಗಾರನ ಅಪೂರ್ವವಾದ ಪ್ರಾಮಾಣಿಕತೆಯಿಂದ ಹೆಚ್ಚು ಪ್ರಭಾವಿಯಾಗಿದೆ. ದಲಿತ ಆತ್ಮಕಥೆಗಳಲ್ಲಿಯೇ ವಿಶಿಷ್ಟವಾಗಿದೆ. ನಮ್ಮ ಅನೇಕ ಪೂರ್ವಕಲ್ಪಿತ ನಿರೀಕ್ಷೆಗಳನ್ನು ಬುಡಮೇಲು ಮಾಡುವಷ್ಟು ಸಶಕ್ತವಾಗಿದೆ.

-ಪ್ರೊ. ರಾಜೆಂದ್ರ ಚೆನ್ನಿಮೊದಲ 

ದಲಿತರು ಮತ್ತು ಕಮ್ಯುನಿಸ್ಟರ ನಡುವೆ ಚಾರಿತ್ರಿಕವಾಗಿ ವಿಕಾಸಗೊಂಡಿರುವ ಸಕಾರಾತ್ಮಕ ಸಂಬಂಧಗಳನ್ನು ಭಾರತೀಯ ಎಡಪಂಥೀಯರು ಮತ್ತು ನಿರ್ಲಕ್ಷಿಸಿದ್ದಾರೆ, ಮತ್ತು ಕೆಲವು ದಲಿತರು ಉದ್ದೇಶಪೂರ್ವಕವಾಗಿ ಬದಿಗೆ ತಳ್ಳಿದ್ದಾರೆ ಎಂಬ ಕಾರಣಕ್ಕೆ ಈ ಕೃತಿ ಅರ್ಥಪೂರ್ಣ ಮಹತ್ವವನ್ನು ಪಡೆಯುತ್ತದೆ. ಇಪ್ಪತ್ತನೇ ಶತಮಾನದ ಮಹಾರಾಷ್ಟ್ರದಲ್ಲಿ ದಲಿತರು ಮತ್ತು ಕಮ್ಯುನಿಸ್ಟರ ನಡುವಿನ ಸಂಬಂಧಗಳು ವಿಷಮಗೊಂಡಿರುವ ಪ್ರಶ್ನೆಯ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುವ ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಕ್ರಿಯೆಗಳನ್ನು ಕುರಿತಂತೆ ಬಹು ಅಗತ್ಯವಾದ ಒಳನೋಟಗಳನ್ನು ಈ ಕೃತಿ ಕೊಡುತ್ತದೆ. ಮೊದಲ

-ಪ್ರೊ. ಗೋಪಾಲ ಗುರು

ಇದನ್ನೂ ಓದಿ: ಸಹಕಾರಿ ಸಾಲದ ಕಡಿತ ಮತ್ತು ಬಡ್ಡಿ ಹೆಚ್ಚಳ, ರೈತಾಪಿ ಕೃಷಿ ನಾಶದ ಮತ್ತೊಂದು ಹೆಜ್ಜೆ – ಸಿಪಿಐಎಂ

ಇದನ್ನೂ ನೋಡಿ: ಟ್ರಂಪ್ ಮತ್ತೆ ಅಧ್ಯಕ್ಷ : ಅಮೆರಿಕನ್ನರು ‘ಮಗ’ನಿಗೆ ಮಣೆ ಹಾಕಿ, ಮಗಳನ್ನು ಮನೆಗೆ ಕಳಿಸಿದ್ದು ಯಾಕೆ?Janashakthi Media

Donate Janashakthi Media

Leave a Reply

Your email address will not be published. Required fields are marked *