ಹಾವೇರಿ: ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದ ಪಟಾಕಿ ಅವಘಡದಲ್ಲಿ ಮೃತರಾದ ಕುಟುಂಬದವರಿಗೆ ಪರಿಹಾರ ಹೆಚ್ಚಳ ಮಾಡಲು ಹಾಗೂ ತಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ, ನಗರದ ಹೊಸಮನಿ ವೃತ್ತದಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆ ಉದ್ದೇಶಿಸಿ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಆಲದಕಟ್ಟಿಯ ಪಟಾಕಿ ಗೋದಾಮಿನಲ್ಲಿ ಮಂಗಳವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ನಾಲ್ವರು ಕಾರ್ಮಿಕರು ಸಜೀವ ದಹನಗೊಂಡು ದುರ್ಮರಣ ಹೊಂದಿದ್ದು ತುಂಬಾ ನೋವಿನ ವಿಷಯ. ಹಾಗೂ ಈ ಅವಘಡದಲ್ಲಿ ಕೆಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ರಾಜ್ಯ ಸರಕಾರದ ವತಿಯಿಂದ ಮೃತ ಕಾರ್ಮಿಕರ ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿರುವ ಕ್ರಮ ಸ್ವಾಗತಾರ್ಹವಾದರೂ, ಸರಕಾರ ಘೋಷಿಸಿರುವ ಪರಿಹಾರ ಹಣ ಪ್ರಸಕ್ತ ಬೆಲೆ ಏರಿಕೆಯ ದಿನಗಳಲ್ಲಿ ಅತ್ಯಂತ ಕಡಿಮೆಯಾಗಿದೆ. ಆದ್ದರಿಂದ ಮಾನವೀಯ ದೃಷ್ಟಿಯಿಂದ ರಾಜ್ಯ ಸರಕಾರ ಮೃತ ಕಾರ್ಮಿಕರ ಕುಟುಂಬಕ್ಕೆ ಕನಿಷ್ಠ ರೂ. 25 ಲಕ್ಷ ಹೆಚ್ಚಿಸಿ ಪರಿಹಾರ ಕೊಡಬೇಕು. ಒಂದು ವೇಳೆ ಮೃತ ಕಾರ್ಮಿಕರಿಗೆ ಮಕ್ಕಳಿದ್ದರೆ ಅವರ ಸಂಪೂರ್ಣ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಸರಕಾರ ವಹಿಸಿಕೊಳ್ಳಬೇಕು. ಮತ್ತು ಈ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ಸಂಪೂರ್ಣ ಚಿಕಿತ್ಸೆ ವೆಚ್ಚವನ್ನು ಸರಕಾರ ಭರಿಸುವ ಜೊತೆಗೆ, ಅವರಿಗೂ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಮೂರು ತಿಂಗಳ ಸಂಬಳ ಕೇಳಿದಕ್ಕೆ ಕಾರ್ಮಿಕರ ಮೇಲೆ ಹಲ್ಲೆ: ಕ್ರಮಕ್ಕೆ ಸಿಐಟಿಯು ಒತ್ತಾಯ
ಈ ಅವಘಡದ ಸಂಪೂರ್ಣ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮವನ್ನು ನಿರ್ದಾಕ್ಷಿಣ್ಯವಾಗಿ ಕೈಗೊಳ್ಳಬೇಕು. ಅಗ್ನಿ ಅವಘಡ ಸಂಭವಿಸಿದಾಗ ಬೆಂಕಿ ನಂದಿಸಲು ಬೇಕಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಬೇಕಿರುವ ಅತ್ಯಗತ್ಯ ಉಪಕರಣಗಳು, ಸಾಮಾಗ್ರಿಗಳನ್ನು ಇಡಬೇಕು. ಅಲ್ಲದೇ ಜನವಸತಿ ಪ್ರದೇಶದಲ್ಲಿ ಪಟಾಕಿ ದಾಸ್ತಾನು ಇಟ್ಟುಕೊಳ್ಳಲು ಮತ್ತು ಮಾರಾಟ ಮಾಡಲು ಅಧಿಕಾರಿಗಳು ಪರವಾನಿಗೆ ಕೊಟ್ಟಿರುವುದು ಕೂಡ ಸರಿಯಲ್ಲ. ಘಟನೆ ಸಂಭವಿಸಿದ ಮೇಲೆ ಅಧಿಕಾರಿಗಳು ಎಚ್ಚೆತ್ತಿರುವುದು ದುರಂತ. ಜಿಲ್ಲಾಡಳಿತ ಮೊದಲೇ ಸರಿಯಾದ ಕ್ರಮಗಳನ್ನು ಕೈಗೊಳ್ಳಕಬೇಕಿತ್ತು ಎಂದರು.
ಡಿವೈಎಫ್ಐ ಜಿಲ್ಲಾ ಸಂಚಾಲಕ ನಾರಾಯಣ ಕಾಳೆ ಮಾತನಾಡಿ, ಮುಖ್ಯವಾಗಿ ಈ ದುರಂತ ಸಂಭಿವಿಸಲು ವೆಲ್ಡಿಂಗ್ ಮಾಡಿರುವುದು ಕಾರಣವೆಂಬುದು ವರದಿಯಾಗಿದೆ. ಸ್ಪೋಟಕ ವಸ್ತುಗಳಿದ್ಯಾಗ್ಯೂ ವೆಲ್ಡಿಂಗ್ ಮಾಡಿರುವುದು ಮಾಲೀಕರು ಮಾಡಿರುವ ತಪ್ಪು. ಇದರಲ್ಲಿ ಕಾರ್ಮಿಕರು ದುಡಿಮೆಯಾಸೆಗೆ ಬಿದ್ದು ಜೀವ ಕಳೆದುಕೊಂಡಿದ್ದಾರೆ. ಈ ದುರಂತಕ್ಕೆ ಕಾರಣರಾದ ತಪಿತಸ್ಥರನ್ನು ತ್ವರಿತವಾಗಿ ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೇ ಮುಂದಿನ ದಿನಗಳಲ್ಲಿ ಈ ರೀತಿ ಘಟನೆಗಳು ನಡೆಯದಂತೆ ಸರಕಾರ ಹಾಗೂ ಅಧಿಕಾರ ವರ್ಗ ಮುನ್ನೆಚ್ಚರಿಕೆ ವಹಿಸಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಹಾವೇರಿ ಜಿಲ್ಲಾ ಸಮಿತಿಯು ಒತ್ತಾಯಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಎಸ್, ಖಲಂದರ್ ಅಲ್ಲಿಗೌಡ್ರ, ವಿವೇಕ್ ಫನಸೆ, ಅಭಿಷೇಕ ಗುದಗಿ, ಚಂದ್ರು ಕೆ, ರವಿ ನಾಗಮ್ಮನವರ, ದಿಳ್ಳೆಪ್ಪ ಗೋಣೆಪ್ಪನವರ, ಸುಭಾಷ್ ನದಾಫ್, ಶಣ್ಮುಕ ನಡುವಿನಮನಿ, ಮನೋಜ್ ಎಮ್ ಜಿ, ಫಯಾಜ್ ಮಾರನಬಿಡ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು