ಸಿ. ಸಿದ್ದಯ್ಯ
ಬೆಂಗಳೂರಿನ ತಿಲಕ್ ನಗರದ ಪೊಲೀಸರು ‘ಚುನಾವಣಾ ಬಾಂಡ್ ಗಳ ಸುಲಿಗೆ ಪ್ರಕರಣ’ದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕರ್ನಾಟಕ ಬಿಜೆಪಿ ಮಾಜಿ ಮುಖ್ಯಸ್ಥ ನಳಿನ್ ಕುಮಾರ್ ಕಟೀಲ್, ಬಿಜೆಪಿಯ ಕೇಂದ್ರ ಮತ್ತು ರಾಜ್ಯದ ನಾಯಕರ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ. ಇದರಿಂದಾಗಿ ಬಿಜೆಪಿಯ ಸಂಘಟಿತ ಭ್ರಷ್ಟಾಚಾರ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಚುನಾವಣಾ ಬಾಂಡ್‌ಗಳು ಅಸಾಂವಿಧಾನಿಕ, ಮಾಹಿತಿ ಹಕ್ಕು ಕಾಯಿದೆಯ ಉಲ್ಲಂಘನೆ ಮತ್ತು ಕ್ವಿಡ್ ಪ್ರೊ ಕ್ವೋಗೆ ಕಾರಣವಾಗುತ್ತದೆ ಎಂದು ಪರಿಗಣಿಸಿ ಸುಪ್ರೀಂ ಕೋರ್ಟ್ ಈ ವರ್ಷ ಫೆಬ್ರವರಿ 15 ರಂದು ಈ ಯೋಜನೆಯನ್ನೇ ರದ್ದುಗೊಳಿಸಿತು. ಈಗಲಾದರೂ ಇದರ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ಸತ್ಯಾಂಶಗಳನ್ನು ಬಯಲಿಗೆಳೆದು ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾದರೆ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ.
ಬೆಂಗಳೂರಿನ ತಿಲಕ್ ನಗರದ ಪೊಲೀಸರು ದಾಖಲಿಸಿರುವ ‘ಚುನಾವಣಾ ಬಾಂಡ್ ಗಳ ಸುಲಿಗೆ ಪ್ರಕರಣ’ದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕರ್ನಾಟಕ ಬಿಜೆಪಿ ಮಾಜಿ ಮುಖ್ಯಸ್ಥ ನಳಿನ್ ಕುಮಾರ್ ಕಟೀಲ್, ಬಿಜೆಪಿಯ ಕೇಂದ್ರ ಮತ್ತು ರಾಜ್ಯದ ನಾಯಕರು ಹಾಗೂ ಹೆಸರಿಸದ ಇಡಿ ಅಧಿಕಾರಿಗಳನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 384 ಮತ್ತು 120 ಬಿ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರಕರಣದ ಮೊದಲ ಆರೋಪಿ (ಎ1) ನಿರ್ಮಲಾ ಸೀತಾರಾಮನ್, ಎ2 ಜಾರಿ ನಿರ್ದೇಶನಾಲ, ಎ3 ಬಿಜೆಪಿ ಕೇಂದ್ರ ಪದಾಧಿಕಾರಿಗಳು, ಎ4 ಬಿಜೆಪಿ ಕರ್ನಾಟಕ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಎ5 ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಎ6 ರಾಜ್ಯ ಬಿಜೆಪಿ ಪದಾಧಿಕಾರಿಗಳು. ಆರೋಪಿಗಳ ಪಟ್ಟಿಯಲ್ಲಿ ಕೇಂದ್ರ ಸಚಿವ ಜೆಪಿ ನಡ್ಡಾ ಅವರ ಹೆಸರೂ ಇದೆ.
ಪ್ರಕರಣದ ತನಿಖೆ ಮತ್ತು ಮುಂದಿನ ಪ್ರಕ್ರಿಯೆಗೆ ತಡೆ ನೀಡುವಂತೆ ಕಟೀಲ್ ಕರ್ನಾಟಕ ಹೈಕೋರ್ಟ್‌ನ ಮೊರೆ ಹೋಗಿದ್ದರು ಮತ್ತು ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ನ ಏಕಸದಸ್ಯ ಪೀಠ ಸೆಪ್ಟೆಂಬರ್ 30ರಂದು ತಡೆ ನೀಡಿದೆ.
ಇದನ್ನೂ ಓದಿ: ಡೆತ್ ನೋಟ್ ಬರೆದಿಟ್ಟು ಮಹಿಳಾ ಸಾಫ್ಟ್‌ವೇರ್ ಎಂಜಿನಿಯರ್ ಆತ್ಮಹತ್ಯೆ
ಕಟೀಲ್ ಸಲ್ಲಿಸಿದ ಅರ್ಜಿಯಲ್ಲಿ ಹಿರಿಯ ವಕೀಲ ಕೆ ಜಿ ರಾಘವನ್ ಅವರು ‘ದೂರಿನಲ್ಲಿ ಯಾವುದೇ ಸುಲಿಗೆ ಪ್ರಕರಣ ದಾಖಲಾಗಿಲ್ಲ ಎಂದು ವಾದ ಮಂಡಿಸಿದರು. ಖಾಸಗಿ ದೂರುದಾರರ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು, ಚುನಾವಣಾ ಬಾಂಡ್‌ಗಳ ಯೋಜನೆಯು ಸುಲಿಗೆಯ ಒಂದು ಉತ್ತಮ ಪ್ರಕರಣವನ್ನು ಒಳಗೊಂಡಿದ್ದು, ಜಾರಿ ನಿರ್ದೇಶನಾಲಯವು (ಇಡಿ) ಕೆಲವು ಕಂಪನಿಗಳಲ್ಲಿ ಚುನಾವಣಾ ಬಾಂಡ್‌ಗಳನ್ನು ಖರೀದಿಸಲು ಭಯವನ್ನು ಉಂಟುಮಾಡಿದೆ ಎಂದು ವಾದಿಸಿದರು.
ಭೂಷಣ್ ಮತ್ತು ಇತರರು ಮಂಡಿಸಿದ ಎಲ್ಲಾ ವಿಷಯಗಳನ್ನು ಹೈಕೋರ್ಟ್‌ನ ದಸರಾ ರಜೆಯ ನಂತರದ ವಿಚಾರಣೆಯ ಸಮಯದಲ್ಲಿ ಪರಿಗಣಿಸಲಾಗುವುದು ಎಂದು ಏಕಸದಸ್ಯ ಪೀಠ ಸೂಚಿಸಿದೆ. ಹೆಚ್ಚಿನ ವಿಚಾರಣೆಗಾಗಿ ಅಕ್ಕೋಬರ್ 22ರಂದು ನ್ಯಾಯಾಲಯ ಪಟ್ಟಿ ಮಾಡಿದೆ. ಈ ಪ್ರಕರಣದಿಂದ ಬಿಜೆಪಿಯ ಸಂಘಟಿತ ಭ್ರಷ್ಟಾಚಾರ ಮತ್ತೊಮ್ಮೆ ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ಬಂದಿದೆ. ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ವಾದಿ) ಚುನಾವಣಾ ಬಾಂಡ್ ಯೋಜನೆಯ ವಿರುದ್ದ ಕಾನೂನು ಹೋರಾಟದ ಜೊತೆಗೆ, ಸಂಸತ್ತಿನ ಒಳಗೆ ಹಾಗೂ ಹೊರಗೆ ಹೋರಾಟ ನಡೆಸಿ, ಚುನಾವಣಾ ಬಾಂಡ್ ಯೋಜನೆಯನ್ನೇ ರದ್ದುಗೊಳಿಸುವಂತೆ ಮಾಡುವಲ್ಲಿ ಯಶಸ್ವಿಯಾದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಸಂಘಟಿತ ಭ್ರಷ್ಟಾಚಾರ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಹಲವಾರು ಹಿರಿಯ ಬಿಜೆಪಿ ರಾಷ್ಟ್ರೀಯ ಮತ್ತು ಕರ್ನಾಟಕ ರಾಜ್ಯ ನಾಯಕರ ವಿರುದ್ಧ ಚುನಾವಣಾ ಬಾಂಡ್ ಪ್ರಕರಣದಲ್ಲಿ ಬೆಂಗಳೂರಿನಲ್ಲಿ ದಾಖಲಾಗಿರುವ ಈ ಪ್ರಕರಣವು ಬಿಜೆಪಿಯ ಸಂಘಟಿತ ಭ್ರಷ್ಟಾಚಾರದ ಸೂಚನೆಯಾಗಿದೆ. ನಿರ್ಮಲಾ ಅವರು ಜಾರಿ ನಿರ್ದೇಶನಾಲಯದ (ಇಡಿ) ಮೂಲಕ ಕೈಗಾರಿಕೋದ್ಯಮಿಗಳನ್ನು ಬೆದರಿಸಿ, ಅವರಿಂದ ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ ಹಣ ಪಡೆದು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪವನ್ನು ಇದರಲ್ಲಿ ಹೊರಿಸಲಾಗಿದೆ.
ದೇಶಾದ್ಯಂತ ಸಂಚಲನ ಮೂಡಿಸಿದ್ದ ಈ ಪ್ರಕರಣದ ದಾಖಲಾತಿಯ ಹಿಂದೆ ಜನಾಧಿಕಾರ ಸಂಘರ್ಷ ಪರಿಷತ್ತಿನ ಆದರ್ಶ್ ಆರ್ ಅಯ್ಯರ್ ಅವರ ನಿರಂತರ ಹೋರಾಟ ಗಮನಾರ್ಹವಾಗಿದೆ. ಆರು ತಿಂಗಳ ಹಿಂದೆ ಅಂದರೆ, 2024ರ ಮಾರ್ಚ್ 30 ರಂದು ಅವರು ಬೆಂಗಳೂರಿನ ತಿಲಕ್ ನಗರ ಪೊಲೀಸರನ್ನು ಸಂಪರ್ಕಿಸಿ ದೂರು ಕೊಡಲು ಮುಂದಾದರು. ಆದರೆ, ಪೊಲೀಸರು ಅವರನ್ನು ನಿರ್ಲಕ್ಷಿಸಿದ್ದರು. ನಂತರ ಈ ಕುರಿತು ಬೆಂಗಳೂರು ದಕ್ಷಿಣ ಡಿಸಿಪಿಯವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳಿಗಾಗಿ ಕರ್ನಾಟಕದಲ್ಲಿ ಸ್ಥಾಪಿಸಲಾದ ವಿಶೇಷ ನ್ಯಾಯಾಲಯದಲ್ಲಿ ಏಪ್ರಿಲ್‌ನಲ್ಲಿ ದೂರು ದಾಖಲಿಸಿದ ನಂತರ, ನ್ಯಾಯಾಲಯವು ಸೆಪ್ಟೆಂಬರ್ 27ರಂದು ಎಫ್‌ಐಆರ್ ದಾಖಲಿಸಲು ಆದೇಶಿಸಿತು. ಈ ಆದೇಶದ ನಂತರ ಅದೇ ತಿಲಕನಗರ ಪೊಲೀಸರು ಮರುದಿನವೇ ಪ್ರಕರಣ ದಾಖಲಿಸಬೇಕಾಯಿತು.
ಇಡಿ ಬೆದರಿಕೆಗೆ ಹೆದರಿ ಬಾಂಡ್ ಖರೀದಿ
ನಿರ್ಮಲಾ ಸೀತಾರಾಮನ್ ಹಾಗೂ ಜಾರಿ ನಿರ್ದೇನಾಲಯದ ಅಧಿಕಾರಿಗಳು 2019 ರಿಂದ 2023 ರ ನವೆಂಬರ್ ಅವಧಿಯಲ್ಲಿ ಸಾಂವಿಧಾನಿಕ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಇತರೆ ಆರೋಪಿಗಳ ಜತೆ ಒಳಸಂಚು ನಡೆಸಿ ಬಹುರಾಷ್ಟ್ರೀಯ ಕಂಪನಿಗಳು ಹಾಗೂ ದೇಶೀಯ ಕಾರ್ಪೋರೇಟ್ ಕಂಪೆನಿಗಳ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರನ್ನು ಹೆದರಿಸಿ ಚುನಾವಣಾ ಬಾಂಡ್ ಹೆಸರಿನಲ್ಲಿ 8,000 ಕೋಟಿ ರೂ.ಗಳನ್ನು ಬಲವಂತವಾಗಿ ಸುಲಿಗೆ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಸೂಚನೆಯಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕಾರ್ಪೊರೇಟ್ ಕಂಪೆನಿಗಳ ಮೇಲೆ ದಾಳಿ ನಡೆಸಿ ಹಲವರನ್ನು ಬಂಧಿಸಿದ್ದರು. ಈ ದಾಳಿಗಳಿಗೆ ಹೆದರಿದ ಕಂಪನಿಗಳ ಸಿಇಒಗಳು, ವ್ಯವಸ್ಥಾಪಕ ನಿರ್ದೇಶಕರುಗಳು ನೂರಾರು ಕೋಟಿ ರೂ.ಗಳ ಚುನಾವಣಾ ಬಾಂಡ್ ಗಳನ್ನು ಖರೀದಿ ಮಾಡಿದ್ದರು. ಇದರಿಂದ ಬಿಜೆಪಿ ರಾಷ್ಟ್ರ ಘಟಕ ಹಾಗೂ ರಾಜ್ಯ ಘಟಕವು ಲಾಭ ಪಡೆದಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ನೋಡಿ: ಪ್ರತಿಪಕ್ಷಗಳು ಸರ್ಕಾರ ಉರುಳಿಸುವ ಕೆಲಸಕ್ಕೆ ಮುಂದಾಗಬಾರದು – ಡಾ ಹಂಪ ನಾಗರಾಜಯ್ಯ Janashakthi Media
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕೇಂದ್ರ ತನಿಖಾ ಸಂಸ್ಥೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ. ಸಿಬಿಐ, ಇಡಿ ಬಳಸಿ ವಿರೋಧ ಪಕ್ಷಗಳ ಪ್ರಮುಖ ನಾಯಕರನ್ನು ಬೆದರಿಸಿ ಬಗ್ಗುಬಡಿಯಲು ಯತ್ನಿಸುವುದು, ತಮ್ಮ ಹಾದಿಗೆ ಬರದಿದ್ದರೆ ಕಿರುಕುಳ ನೀಡುವುದು, ಅಕ್ರಮ ಪ್ರಕರಣಗಳು, ಬಂಧನಗಳನ್ನು ಮಾಡುವುದು ಮೋದಿ ಸರಕಾರಕ್ಕೆ ಮಾಮೂಲಿಯಾಗಿಬಿಟ್ಟಿದೆ. ಇಂತಹ ಅನೈತಿಕ ಕ್ರಮಗಳ ಮೂಲಕ ಪಕ್ಷದ ನಿಧಿ ಸಂಗ್ರಹಿಸಬಹುದು ಎಂಬುದನ್ನು ಇತ್ತೀಚಿನ ಬೆಂಗಳೂರು ಪೊಲೀಸರ ಎಫ್ ಐ ಆರ್ ಪ್ರಕರಣ ದೃಢಪಡಿಸಿದೆ.
ಕೈಗಾರಿಕೋದ್ಯಮಿಗಳು, ಕಾರ್ಪೊರೇಟ್ ಕಂಪನಿಗಳ ಮುಖ್ಯಸ್ಥರು, ಸಿಇಒಗಳು, ವ್ಯವಸ್ಥಾಪಕ ನಿರ್ದೇಶಕರು ಮತ್ತು ಉನ್ನತ ಅಧಿಕಾರಿಗಳ ಮೇಲೆ ಇಡಿ ದಾಳಿ ನಡೆಸಿ ಆಸ್ತಿ ವಶಪಡಿಸಿಕೊಂಡು ವಿವಿಧ ರೀತಿಯಲ್ಲಿ ಬೆದರಿಕೆ ಹಾಕಿದ್ದಾರೆ, ಪಕ್ಷದ ಹೆಸರಿನಲ್ಲಿ ಎಲೆಕ್ಟೋರಲ್ ಬಾಂಡ್ ಖರೀದಿಸಿದ್ದಾರೆ ಮತ್ತು ಹೆಚ್ಚು ಲೂಟಿ ಮಾಡಿದ್ದಾರೆ ಎಂಬ ದೂರುದಾರರ ಆರೋಪಗಳನ್ನು ನೋಡಿದರೆ. ರೂ. 8,000 ಕೋಟಿಗಿಂತ ಹೆಚ್ಚು ಹಣವನ್ನು ಲೂಟಿ ಮಾಡಲು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಇಡಿಯನ್ನು ಸಾಧನವಾಗಿ ಬಳಸಿಕೊಂಡರು. ಇದು ಅಧಿಕಾರ ದುರುಪಯೋಗ, ಕ್ವಿಡ್ ಪ್ರೋಕೋ, ರಾಜಕೀಯ ಭ್ರಷ್ಟಾಚಾರವಲ್ಲದೆ ಮತ್ತೇನೂ ಅಲ್ಲ.
ಚುನಾವಣಾ ಬಾಂಡ್ ಗಳು ಅಸಾಂವಿಧಾನಿಕ
2017 ರಲ್ಲಿ ಬಿಜೆಪಿ ಸರ್ಕಾರವು ಎಲೆಕ್ಟೋರಲ್ ಬಾಂಡ್ ಯೋಜನೆಯನ್ನು ಪರಿಚಯಿಸಿದಾಗ, ಪ್ರತಿಪಕ್ಷಗಳು ಈ ಯೋಜನೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದವು. ಸಿಪಿಐ(ಎಂ) ಮತ್ತು ಇತರ ಕೆಲವು ಪ್ರತಿಪಕ್ಷಗಳು ಬಲವಾಗಿ ವಿರೋಧಿಸಿದವು. ಚುನಾವಣಾ ಬಾಂಡ್‌ಗಳು ಅಸಾಂವಿಧಾನಿಕ, ಮಾಹಿತಿ ಹಕ್ಕು ಕಾಯಿದೆಯ ಉಲ್ಲಂಘನೆ ಮತ್ತು ಕ್ವಿಡ್ ಪ್ರೊ ಕ್ವೋಗೆ ಕಾರಣವಾಗುತ್ತದೆ ಎಂದು ಪರಿಗಣಿಸಿ ಸುಪ್ರೀಂ ಕೋರ್ಟ್ ಈ ವರ್ಷ ಫೆಬ್ರವರಿ 15 ರಂದು ಈ ಯೋಜನೆಯನ್ನೇ ರದ್ದುಗೊಳಿಸಿತು. ಚುನಾವಣಾ ಬಾಂಡ್ ಗಳ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಸಾರ್ವಜನಿಕರಿಗೆ ಬಹಿರಂಗಪಡಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತು.
ಆದರೆ, ಸಾರ್ವತ್ರಿಕ ಚುನಾವಣೆ ಮುಗಿಯುವವರೆಗೆ ವಿವರಗಳನ್ನು ಬಹಿರಂಗಪಡಿಸದಂತೆ ಮೋದಿ ಸರ್ಕಾರ ಎಸ್ ಬಿಐ ಮತ್ತು ಚುನಾವಣಾ ಆಯೋಗದ ಮೇಲೆ ಎಷ್ಟು ಪ್ರಭಾವ ಬೀರಿದೆ ಎಂಬುದನ್ನು ಇಡೀ ದೇಶ ಗಮನಿಸಿದೆ. ಚುನಾವಣಾ ಬಾಂಡ್‌ಗಳ ಬಗ್ಗೆ ಸುಪ್ರೀಂ ಕೋರ್ಟ್ ಮತ್ತು ವಿರೋಧ ವ್ಯಕ್ತಪಡಿಸಿರುವ ಆತಂಕಗಳು ನಿಜವೆಂದು ಬೆಂಗಳೂರು ಪ್ರಕರಣದೊಂದಿಗೆ ಮತ್ತಷ್ಟು ಸ್ಪಷ್ಟವಾಗಿದೆ. ಎಸ್‌ಬಿಐ ಮತ್ತು ಚುನಾವಣಾ ಆಯೋಗದ ವಿವರಗಳ ಪ್ರಕಾರ, ಚುನಾವಣಾ ಬಾಂಡ್‌ಗಳ ಮಾರಾಟದ ಮೂಲಕ ರಾಜಕೀಯ ಪಕ್ಷಗಳು ಪಡೆದ 16 ಸಾವಿರ ಕೋಟಿ ರೂ. ದೇಣಿಗೆಗಳಲ್ಲಿ, ಸಿಂಹಪಾಲು ಬಿಜೆಪಿಗೆ ಸೇರಿದೆ.
ಎಲೆಕ್ಟೋರಲ್ ಬಾಂಡ್ ಗಳು ಯಾರಿಗೆ ಉಪಯುಕ್ತವಾಗಿವೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ. ತಮ್ಮದು ಸ್ವಚ್ಛ, ಭ್ರಷ್ಟಾಚಾರ ರಹಿತ ಪಕ್ಷ ಮತ್ತು ಸರ್ಕಾರ ಎಂದು ಹೇಳಿಕೊಳ್ಳುವ ಬಿಜೆಪಿ ನಾಯಕರು ಮತ್ತು ಮೋದಿಗೆ ಬೆಂಗಳೂರು ಪ್ರಕರಣವು ಹಿಂಪಡೆಯಲಾಗದ ಸವಾಲಾಗಿದೆ. ಎಫ್‌ಐಆರ್ ನೊಂದಿಗೆ ಎಲ್ಲವೂ ಮುಗಿದಿಲ್ಲ. ನಿಷ್ಪಕ್ಷಪಾತ ತನಿಖೆ ನಡೆಸಿ, ಸತ್ಯಾಂಶಗಳನ್ನು ಬಯಲಿಗೆಳೆದು ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾದರೆ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ.
ಇದನ್ನೂ ಓದಿ: ದೆಹಲಿ| ಇಂದು ತಮ್ಮ ನಿವಾಸವನ್ನು ತೊರೆದ ಅರವಿಂದ ಕೇಜಿವಾಲ್