ಮಣಿಪುರದಲ್ಲಿ ಎಡಿಟರ್ಸ್ ಗಿಲ್ಡ್ ವಿರುದ್ಧ ಎಫ್ಐಆರ್-ಡಿಯುಜೆ ಖಂಡನೆ

ಮಣಿಪುರದಲ್ಲಿ ನಡೆದಿರುವ ಹಿಂಸಾತ್ಮಕ ಸಂಘರ್ಷದ ಸತ್ಯಶೋಧನಾ ವರದಿಗಾಗಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ (ಇಜಿಐ) ವಿರುದ್ಧ ಇಂಫಾಲ್ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿರುವುದನ್ನು ದೆಹಲಿ ಪತ್ರಕರ್ತರ ಸಂಘ (ಡಿಯುಜೆ) ತೀವ್ರವಾಗಿ ಖಂಡಿಸಿದೆ. ಗಿಲ್ಡ್ ಕೂಡ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುತ್ತ ಇವನ್ನು ವಾಪಾಸು ಪಡೆಯಬೇಕು ಎಂದು ಮಣಿಪುರ ಸರಕಾರವನ್ನು ಆಗ್ರಹಿಸಿದೆ, ಜತೆಗೆ ಸೂಕ್ಷ್ಮ ಸನ್ನಿವೇಶಗಳಲ್ಲಿ ಮಾಧ್ಯಮದ ವರ್ತನೆಯ ಬಗ್ಗೆ ಒಂದು ರಚನಾತ್ಮಕ ಸಂವಾದವನ್ನು ಪೋಷಿಸುವುದಕ್ಕೆ ತಾನು ಬದ್ಧ ಎಂದು ಒತ್ತಿ ಹೇಳಿದೆ. ಈ ನಡುವೆ ಅದು ಈ ಎಫ್‍ಐಆರ್‌ಗಳ ವಿರುದ್ಧ ಸುಪ್ರಿಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದು, ಸುಪ್ರಿಂಕೋರ್ಟ್ ಸೆಪ್ಟಂಬರ್‌ 11ರಂದು ಈಬಗ್ಗೆ ವಿಚಾರಣೆಯನ್ನು ಕೈಗೆತ್ತಿಕೊಳ್ಳುವವರೆಗೆ ಈ ಪತ್ರಕರ್ತರಿಗೆ ರಕ್ಷಣೆ ನೀಡಿದೆ.

ಇ.ಜಿ.ಐ. ಭಾರತದ ಹಿರಿಯ ಪತ್ರಕರ್ತರನ್ನು ಒಳಗೊಂಡಿರುವ ಒಂದು ಪ್ರತಿಷ್ಠಿತ ಸಂಸ್ಥೆ. ನಾಗರಿಕ ಸಮಾಜದ ಅನೇಕ ಸಂಸ್ಥೆಗಳು ಮತ್ತು ಭಾರತೀಯ ಸೇನೆ ಕೂಡ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದಲ್ಲಿ ಮಾಧ್ಯಮಗಳು ಒಂದು ಪಕ್ಷಪಾತದ ಪಾತ್ರವನ್ನು ವಹಿಸುತ್ತಿವೆ ಎಂದು ಕಳವಳಗಳನ್ನು ಎತ್ತಿದ ಹಿನ್ನೆಲೆಯಲ್ಲಿ, ಮಾಧ್ಯಮ ಸಂಸ್ಥೆಗಳು ಹೇಗೆ ವರದಿ ಮಾಡುತ್ತಿವೆ ಎಂಬುದನ್ನು ಮತ್ತು ಅಲ್ಲಿ ಇಂಟರ್ನೆಟ್‍ ಸಂಪರ್ಕ ಕಡಿದಿರುವುದರ ಪರಿಣಾಮವನ್ನು ಪರಿಶೀಲಿಸಲು ಮೂವರು ಹಿರಿಯ ಪತ್ರಕರ್ತರ ತಂಡವನ್ನು ಅದು ಇತ್ತೀಚೆಗೆ ಮಣಿಪುರಕ್ಕೆ ಕಳಿಸಿತ್ತು. ತಂಡ ಮಣಿಪುರದಲ್ಲಿ ವರದಿಗಾರರು,ಸಂಪಾದಕರುಗಳು, ಮಣಿಪುರದ ಸಂಪಾದಕರ ಗಿಲ್ಡ್, ಕಾರ್ಯನಿರತ ಪತ್ರಕರ್ತರ ಸಂಘ,ನಾಗರಿಕ ಸಮಾಜದ ಕರ್ಯಕರ್ತರು, ಸಾರ್ವಜನಿಕ ಚಿಂತಕರು, ಹಿಂಸಾಚಾರದಿಂದ ಪೀಡಿತರಾದ ಮಹಿಳೆಯರು, ಬುಡಕಟ್ಟು ವಕ್ತಾರರು ಮತ್ತು ಮಣಿಪುರದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಭದ್ರತಾ ಪಡೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ತಯಾರಿಸಿದ ವರದಿಯನ್ನು ಸೆಪ್ಟಂಬರ್ 3ರಂದು ಪ್ರಕಟಿಸಿತು.

ಅದರಲ್ಲಿ ಎತ್ತಿದ ಕಳವಳಗಳಿಗೆ ಅರ್ಥಪೂರ್ಣವಾಗಿ ಸ್ಪಂದಿಸುವ ಬದಲು ಮಣಿಪುರ ರಾಜ್ಯ ಸರಕಾರ ತಂಡದ ಸದಸ್ಯರಾದ ಸೀಮಾ ಗುಹಾ, ಸಂಜಯ್ ಕಪೂರ್ ಮತ್ತು ಭರತ್ ಭೂಷಣ್ ಹಾಗೂ ಗಿಲ್ಡ್ ಅಧ್ಯಕ್ಷೆ ಸೀಮಾ ಮುಸ್ತಫಾ ವಿರುದ್ಧ ಎಫ್‌ಐಆರ್‌ಗಗಳನ್ನು ದಾಖಲಿಸಿದೆ. ಇವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಡಿಯುಜೆ ಒತ್ತಾಯಿಸಿದೆ.

ಪಕ್ಷಪಾತದ ಆರೋಪ ಅಸಂಬದ್ಧ ಮಣಿಪುರ

ಸ್ಥಳೀಯ “ಸಾಮಾಜಿಕ ಕಾರ್ಯಕರ್ತ” ಎಂದು ಹೇಳಿಕೊಂಡವರೊಬ್ಬರ ದೂರಿನ ಮೇಲೆ ಈ ಎಫ್ಐಆರ್‌ಗಳನ್ನು ದಾಖಲಿಸಿರುವುದಾಗಿ ಹೇಳಲಾಗಿದೆ. ಆ ದೂರುದಾರರು ಗಿಲ್ಡ್‌ನ ವರದಿ ಪಕ್ಷಪಾತದಿಂದ ಕೂಡಿದೆ ಎನ್ನುತ್ತ ವರದಿಯಲ್ಲಿನ ಹಲವು ಹೇಳಿಕೆಗಳನ್ನು ಪ್ರಶ್ನಿಸಿದ್ದಾರೆ. ಸತ್ಯಶೋಧನಾ ತಂಡ ಮತ್ತು ಗಿಲ್ಡ್ ಮುಖ್ಯಸ್ಥರಿಗೆ ಕಿರುಕುಳ ಕೊಡುವ, ಅವರನ್ನು ಬೆದರಿಸುವ ಮತ್ತು ಬಹುಶಃ ಶಿಕ್ಷಿಸುವ ಉದ್ದೇಶದಿಂದ ಐಪಿಸಿ ಯ ಹಲವು ಸೆಕ್ಷನ್‍ಗಳನ್ನು ಹರಿಯ ಬಿಡಲಾಗಿದೆ ಎಂದು ಡಿಯುಜೆ ತನ್ನ ಖಂಡನಾ ಹೇಳಿಕೆಯಲ್ಲಿ ಅಭಿಪ್ರಾಯ ಪಟ್ಟಿದೆ. ಐಟಿ ಕಾಯ್ದೆಯ ಸೆಕ್ಷನ್ 66 ಎ ಅನ್ನು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದ್ದರೂ, ಅದನ್ನು ಸಹ ಅನ್ವಯಿಸಲಾಗಿದೆ ಎಂದು ಅದು ಹೇಳಿದೆ.

ಆ ದೂರು ಇಜಿಐ ವರದಿಯನ್ನು “ಸುಳ್ಳು, ಹೆಣೆದಿರುವಂತದ್ದು ಮತ್ತು ದುರುದ್ದೇಶಪೂರಿತ” ಎಂದು ಕರೆಯುತ್ತದೆ. ಒಂದು ಫೋಟೋ ಶೀರ್ಷಿಕೆ ತಪ್ಪಾಗಿತ್ತು. ಅದನ್ನು ಉಲ್ಲೇಖಿಸುತ್ತದೆ, ಗಿಲ್ಡ್ ಅದನ್ನು ತಕ್ಷಣವೇ ಸರಿಪಡಿಸಿದೆ. ಮಾದಕವಸ್ತುಗಳು, ಕಳ್ಳಸಾಗಣೆದಾರರು ಮತ್ತು ಮುಖ್ಯಮಂತ್ರಿಯ ನಡುವಿನ ಸಂಪರ್ಕಗಳ ಕುರಿತು ಮಾಜಿ ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆಯ ಬಗ್ಗೆ ಗಿಲ್ಡ್‌ನ ವರದಿ ಉಲ್ಲೇಖಿಸಿರುವುದನ್ನು ಇದು ಪ್ರಶ್ನಿಸುತ್ತದೆ. ಮಾದಕ ಪದಾರ್ಥಗಳು, ಅರಣ್ಯಗಾರಿಕೆ, ಮ್ಯಾನ್ಮಾರ್‌ನಿಂದ ವಲಸೆ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನೀತಿಗಳನ್ನು ಈ ದೂರು ಸಮರ್ಥಿಸುತ್ತದೆ. ಗಿಲ್ಡ್ ವರದಿಯು ಸಮುದಾಯಗಳ ನಡುವಿನ ಹಗೆತನವನ್ನು ಉಲ್ಬಣಗೊಳಿಸಲು ಮತ್ತು ಚುನಾಯಿತ ಸರ್ಕಾರವನ್ನು ಉರುಳಿಸಲು ಸತ್ಯಗಳನ್ನು ತಪ್ಪಾಗಿ ನಿರೂಪಿಸುತ್ತಿದೆ ಎಂದೂ ದೂರು ಆರೋಪಿಸಿದೆ ಎಂದಿರುವ ಡಿಯುಜೆ, ಇವನ್ನೆಲ್ಲ ಹಾಳತವಿಲ್ಲದ ಭಾಷೆಯಲ್ಲಿ ಬರೆಯಲಾಗಿದೆ ಎಂಬ ಸಂಗತಿಯತ್ತ ಗಮನ ಸೆಳೆದಿದೆ.

ದೇಶದ ಅನೇಕ ಪ್ರಮುಖ ಪತ್ರಕರ್ತರನ್ನು ಒಳಗೊಂಡಿರುವ ಪ್ರತಿಷ್ಠಿತ ಸಂಸ್ಥೆಯಾಗಿರುವ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ದೆಹಲಿಯಿಂದ ಕಳುಹಿಸಿದ ತಂಡವು ದೇಶದ ತಟಸ್ಥ ವೀಕ್ಷಕರನ್ನು ಒಳಗೊಂಡಿತ್ತು. ಇಂತಹ ವಿಚಾರದಲ್ಲಿ ಪಕ್ಷಪಾತದ ಆರೋಪ ಮಾಡುವುದು ಅಸಂಬದ್ಧ ಎಂದು ಡಿಯುಜೆ ಅಭಿಪ್ರಾಯ ಪಟ್ಟಿದೆ.

ಇದನ್ನೂ ಓದಿ:ಮಣಿಪುರ ಹಿಂಸಾಚಾರದ ಆಘಾತಕಾರಿ ವೀಡಿಯೋ-ಮಹಿಳಾ ಸಂಘಟನೆಗಳ ಖಂಡನೆ-ಮಣಿಪುರ ಮುಖ್ಯಮಂತ್ರಿಯ ರಾಜೀನಾಮೆಗೆ ಆಗ್ರಹ

ಉಪಯುಕ್ತ ಒಳನೋಟಗಳ ವರದಿ

ಗಿಲ್ಡ್‌ನ 24 ಪುಟಗಳ ವರದಿಯ ಬಗ್ಗೆ ಹೇಳುತ್ತ ದಿಲ್ಲಿ ಪತ್ರಕರ್ತರ ಸಂಘದ ಹೇಳಿಕೆ, ಇದು ಮಣಿಪುರದಲ್ಲಿ ನಡೆಯುತ್ತಿರುವ ಸಂಘರ್ಷದ ಅವಲೋಕನವನ್ನು ಒದಗಿಸುವುದರ ಜೊತೆಗೆ, ಸಂಘರ್ಷವನ್ನು ವರದಿ ಮಾಡುವಲ್ಲಿ ಮಣಿಪುರ ಮಾಧ್ಯಮದ ಪಾತ್ರದ ಬಗ್ಗೆ ಉಪಯುಕ್ತ ಒಳನೋಟಗಳನ್ನು ಒದಗಿಸುತ್ತದೆ ಎಂದು ಹೇಳಿದೆ. ಇಂಫಾಲ್ ನೆಲೆಯ ಮಾಧ್ಯಮಗಳು ಬಹಳ ಪ್ರಬಲವಾಗಿದ್ದರೆ, ಬೆಟ್ಟಪ್ರದೇಶದ ನೆಲೆಯ ಮಾಧ್ಯಮಗಳು ಸುಮಾರಾಗಿ ಏನೂ ಪ್ರಭಾವ ಹೊಂದಿಲ್ಲ ಎನ್ನುವುದನ್ನು ಗಮನಿಸುತ್ತ, ಪ್ರಬಲ ಮಾಧ್ಯಮಗಳು ಬಹುಮಟ್ಟಿಗೆ ಮೈತೇಯಿ ದೃಷ್ಟಿಕೋನವನ್ನು ಬಿಂಬಿಸುತ್ತಿವೆ ಮತ್ತು ಬೆಟ್ಟಪ್ರದೇಶದ ಮಾಧ್ಯಮಗಳು ಕುಕಿ ಜೊ ಮತ್ತು ನಾಗಾ ದೃಷ್ಟಿಕೋನವನ್ನು ಬಿಂಬಿಸುವಂತವು ಎಂದು ವಿಶ್ಲೇಷಿಸಿದೆ. ಇಜಿಐ ತಂಡದ ವರದಿಯ ಪ್ರಕಾರ ಇಂಫಾಲ್ ಮಾಧ್ಯಮವು ಮೈತೇಯಿ ದೃಷ್ಟಿಕೋನವನ್ನು ಮಾತ್ರ ವರದಿ ಮಾಡಬೇಕೆಂಬ ಭಾರಿ ಸಾಮಾಜಿಕ ಒತ್ತಡಕ್ಕೆ ಒಳಗಾಗಿದೆ, ಸಂಘರ್ಷದ ಸಮಯದಲ್ಲಿ ಸಂಪಾದಕರು ಪರಸ್ಪರ ಸಮಾಲೋಚಿಸಿ ಬಳಸಬೇಕಾದ ಭಾಷೆ, ಘಟನೆಗಳ ವರದಿ ಇತ್ಯಾದಿಗಳ ಬಗ್ಗೆ ಒಮ್ಮತಕ್ಕೆ ಬಂದರು ಎಂದು ಅದು ಸೂಚಿಸುತ್ತದೆ. ಭದ್ರತಾ ಪಡೆಗಳ, ವಿಶೇಷವಾಗಿ ಸಂಘರ್ಷವನ್ನು ನಿಯಂತ್ರಿಸುವ ಕಾರ್ಯ ನಿರ್ವಹಿಸಬೇಕಾದ ಮತ್ತು ಅನೇಕ ಜನರನ್ನು ರಕ್ಷಿಸಿರುವ ಅಸ್ಸಾಂ ರೈಫಲ್ಸ್ ನ ನಿಂದನೆಯನ್ನು
ಎದುರಿಸಬೇಕಾದ ತಮ್ಮ ಕರ್ತವ್ಯದಲ್ಲಿ ಮಾಧ್ಯಮಗಳು ವಿಫಲವಾಗಿವೆ ಎಂದು ಎಂದು ಡಿಯುಜೆ ಹೇಳಿಕೆ ಗಮನಿಸಿದೆ.

ತಮಗೆ ಅನನುಕೂಲಕರವಾದ ಮಾಹಿತಿಯನ್ನು ಬಯಲಿಗೆ ತರುವವರ ವಿರುದ್ಧ ಎಫ್‌ಐಆರ್ ದಾಖಲಿಸುವ ಪ್ರವೃತ್ತಿ ರಾಜ್ಯ ಸರ್ಕಾರಗಳು ಮತ್ತು ಪೋಲೀಸರಲ್ಲಿ ಕಾಣಬರುತ್ತಿದ್ದು, ಇದು ಅತ್ಯಂತ ಖಂಡನಾರ್ಹ ಎಂದು ದಿಲ್ಲಿ ಪತ್ರಕರ್ತರ ಸಂಘ ಪ್ರತಿಭಟಿಸಿದೆ. ಮಣಿಪುರ ಪೊಲೀಸರು ಇತ್ತೀಚೆಗೆ ಸಂಘರ್ಷದ ವರದಿಯನ್ನು ಪ್ರಕಟಿಸಿದ ಎನ್‍ ಎಫ್‍ ಐ ಡಬ್ಲ್ಯು ಸತ್ಯಶೋಧನಾ ತಂಡದ ವಿರುದ್ಧವೂ ಎಫ್‌ಐಆರ್ ದಾಖಲಿಸಿದ್ದರು. ಗಿಲ್ಡ್ ವಿರುದ್ಧದ ಎಫ್‌ಐಆರ್ ಸಂದೇಶವಾಹಕರ
ಮೇಲೆಯೇ ಗುಂಡು ಹಾರಿಸುವ ಇನ್ನೊಂದು ಪ್ರಕರಣವಾಗಿದೆ ಎಂದು ಡಿಯುಜೆ ಹೇಳಿದೆ.

ಎಫ್‍ಐಆರ್ ವಿರುದ್ಧ ಸುಪ್ರಿಂ ಕೋರ್ಟಿಗೆ ಗಿಲ್ಡ್ ಅರ್ಜಿ

ಎಡಿಟರ್ಸ್‍ ಗಿಲ್ಡ್ ಆಫ್‍ ಇಂಡಿಯಾದ ಕಾರ್ಯಕಾರಿ ಸಮಿತಿ ಸಪ್ಟಂಬರ್ 5ರಂದು ಮಣಿಪುರ ಪೋಲೀಸರ ಎಫ್‍ಐಆರ್‌ನ್ನು ಖಂಡಿಸಿದೆ, ಮರುದಿನ ಇದರ ವಿರು‍ಧ ಇಜಿಐ ಸುಪ್ರಿಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದೆ.

ಮಣಿಪುರದಲ್ಲಿ ಮಾಧ್ಯಮಗಳ ವರ್ತನೆಯ ಬಗ್ಗೆ ಪರಿಶಳಿಸುವಂತೆ ಮನವಿಗಳು ಬಂದಿದ್ದ ರಿಂದ ಗಿಲ್ಡ್ ಈ ಸತ್ಯಶೋಧನಾ ತಂಡವನ್ನು ಕಳಿಸಿತ್ತು, ಮಣಿಪುರ ಸರಕಾರ ಅದರ ವರದಿಯ ಅಂಶಗಳ ಮೇಲೆ ಅರ್ಥಪೂರ್ಣವಾಗಿ ಸ್ಪಂದಿಸುವ ಬದಲು ಎಫ್‍ಐಆರ್ ಹಾಕಿರುವುದಷ್ಟೇ ಅಲ್ಲ, ಸ್ವತಃ ಮುಖ್ಯಮಂತ್ರಿಗಳ ಬೆದರಿಸುವ ಹೇಳಿಕೆಗಳು ಆಘಾತವನ್ನುಂಟುಮಾಡಿವೆ ಎಂದು ಇಜಿಐ ಹೇಳಿಕೆ ತಿಳಿಸಿದೆ. ಇಜಿಐ ಸಿಬ್ಬಂದಿ ಮಣಿಪುರದಲ್ಲಿ ಇನ್ನಷ್ಟು ಸಂಘರ್ಷಗಳನ್ನು ಸೃಷ್ಟಿಸಲು ಪ್ರತ್ನಿಸುತ್ತಿದ್ದಾರೆಯಾದ್ದರಿಂದ ಎಫ್‍ಐಆರ್‌ಗಳನ್ನು ಹಾಕಲಾಗಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿರುವುದಾಗಿ ವರದಿಯಾಗಿದೆ. ಮಣಿಪುರದ ಮುಖ್ಯಮಂತ್ರಿಗಳು ಮೈತೇಯಿ ಸಮುದಾಯದ ಪರವಾಗಿ ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ ಎಂದು ಬಹಳಷ್ಟು ಜನರಿಗೆ ಅನಿಸುತ್ತಿದ್ದು, ಗಿಲ್ಡ್‍ನ ವರದಿ ಅದನ್ನು ಬಿಂಬಿಸಿದೆ. “ರಾಜ್ಯದ ಮುಖಂಡತ್ವ ಸಂಘರ್ಷದ ಸಮಯದಲ್ಲಿ ಪಕ್ಷಪಾತಿಯಾಗಿರುವ ಸ್ಪಷ್ಟ ಸೂಚನೆಗಳಿವೆ. ಜನಾಂಗೀಯ ಸಂಘರ್ಷದಲ್ಲಿ ಅದು ಯಾರದೇ ಪಕ್ಷ ವಹಿಸಬಾರದಾಗಿತ್ತು. ಒಂದು ಪ್ರಜಾಸತ್ತಾತ್ಮಕ ಸರಕಾರವಾಗಿ ಅದು ಇಡೀ ರಾಜ್ಯವನ್ನು ಪ್ರತಿನಿಧಿಸುವ ತನ್ನ ಕರ್ತವ್ಯದಲ್ಲಿ ವಿಫಲವಾಗಿದೆ” ಎಂದು ವರದಿ ಹೇಳಿದೆ.

ಇಂಟರ್ನೆಟ್‍ ಸೇವೆಗಳ ಮೇಲೆ ನಿಷೇಧದಿಂದಾಗಿ ಮಾಧ್ಯಮಗಳು ಸಂಘರ್ಷದ ಬಗ್ಗೆ ಸರಕಾರದ ಕಥನವನ್ನೇ ಅವಲಂಬಿಸುವಂತಾಗಿದೆ, ಮತ್ತು ಬಿರೇನ್ ಸಿಂಗ್‍ ಆಡಳಿತದಲ್ಲಿ ಈ ಕಥನ ಬಹುಸಂಖ್ಯಾತ ಮೈತೇಯಿ ಸಮುದಾಯದ ಪೂರ್ವಾಗ್ರಹಗಳಿಗೇ ಮಣೆ ಹಾಕುವ ಒಂದು ಸಂಕುಚಿತ ಜನಾಂಗೀಯ ಕಥನವಾಯಿತು ಎಂದು ವರದಿ ಹೇಳುತ್ತದೆ.

“.. ಮುಖ್ಯಮಂತ್ರಿಗಳು ಪತ್ರಕರ್ತರ ಸಂಸ್ಥೆಗೆ ‘ರಾಜ್ಯ-ವಿರೋಧಿ’, ‘ರಾಷ್ಟ್ರ-ವಿರೋಧಿ’ ಎಂದೆಲ್ಲ ಹಣೆಪಟ್ಟಿ ಹಚ್ಚಿರುವುದು, ವಿಶೇಷವಾಗಿ ಒಕ್ಕೂಟ ಸರಕಾರ ಮುಂಬರುವ ಜಿ-20 ಶೃಂಗಸಭೆಯ ಜಾಗತಿಕ ವೇದಿಕೆಯಲ್ಲಿ ದೇಶದ ಪ್ರಜಾಸತ್ತಾತ್ಮಕ ಸ್ವರೂಪವನ್ನು ಮತ್ತು ವಾಕ್ ಸ್ವಾತಂತ್ರ್ಯದ ಭಾವನೆಯನ್ನು ಒತ್ತಿ ಹೇಳುತ್ತಿರುವಾಗ, ಅತ್ಯಂತ ಕಳವಳಕಾರಿ” ಎಂದು ಎಡಿಟರ್ಸ್‍ ಗಿಲ್ಡ್ ಆಫ್‍ ಇಂಡಿಯಾದ ಕಾರ್ಯಕಾರಿ ಸಮಿತಿಯ ಹೇಳಿಕೆ ಖೇದ ವ್ಯಕ್ತಪಡಿಸಿದೆ. ಇವನ್ನು ವಾಪಾಸು ಪಡೆಯಬೇಕು ಎಂದು ಮಣಿಪುರ ಸರಕಾರವನ್ನು ಆಗ್ರಹಿಸಿಸುತ್ತಲೇ ಗಿಲ್ಡ್ ಸೂಕ್ಷ್ಮ ಸನ್ನಿವೇಶಗಳಲ್ಲಿ ಮಾಧ್ಯಮದ ವರ್ತನೆಯ ಬಗ್ಗೆ ಒಂದು ರಚನಾತ್ಮಕ ಸಂವಾದವನ್ನು ಪೋಷಿಸುವುದಕ್ಕೆ ತಾನು ಬದ್ಧ ಎಂದು ಒತ್ತಿ ಹೇಳಿದೆ. ಮಣಿಪುರ

ಈ ನಡುವೆ ಸುಪ್ರಿಂ ಕೋರ್ಟ್ ಸೆಪ್ಟಂಬರ್ 11ರಂದು ಈ ಬಗ್ಗೆ ವಿಚಾರಣೆಯನ್ನು ಕೈಗೆತ್ತಿಕೊಳ್ಳುವ ವರೆಗೆ ಈ ಪತ್ರಕರ್ತರಿಗೆ ನಿರ್ಬಂಧಕ ಕ್ರಮಗಳಿಂದ ರಕ್ಷಣೆ ನೀಡಿದೆ.

 

Donate Janashakthi Media

Leave a Reply

Your email address will not be published. Required fields are marked *