ಪ್ರೊ. ಪ್ರಭಾತ್ ಪಟ್ನಾಯಕ್
ಬ್ಯಾಂಕುಗಳ ಪ್ರಭುತ್ವ–ಒಡೆತನವು, ಕೇವಲ ಸಾಂಸ್ಥಿಕ ಸಾಲಗಳು ವ್ಯಾಪಕವಾಗಿ ತಲುಪುವ ಉದ್ದೇಶಕ್ಕೆ ಮಾತ್ರವಲ್ಲ, ಬಂಡವಾಳಶಾಹಿ ಹಣಕಾಸು ವ್ಯವಸ್ಥೆಯ ಸ್ಥಿರತೆಗೂ ಅನುಕೂಲಕರವಾಗಿದೆ. ಆದರೂ ಸಹ ಬ್ಯಾಂಕುಗಳ ಸರಕಾರೀ ಒಡೆತನವನ್ನು ಬಂಡವಾಳಗಾರರು ವಿರೋಧಿಸುತ್ತಾರೆ. ಏಕೆಂದರೆ, ಹೆಚ್ಚಿನ ಲಾಭಾಪೇಕ್ಷಿಗಳಾಗಿರುವ ಬಂಡವಾಳಗಾರರಿಗೆ ವ್ಯವಸ್ಥೆಯ ಸ್ಥಿರತೆಯ ಬಗ್ಗೆ ತಿಳುವಳಿಕೆಯೂ ಇಲ್ಲ; ಕಾಳಜಿಯೂ ಇಲ್ಲ. ನವ–ಉದಾರವಾದವು ಬ್ಯಾಂಕಿಂಗ್ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸಲು ಸರ್ಕಾರದ ಮನವೊಲಿಸುತ್ತಿದೆ. ಅದನ್ನು ಇಲ್ಲಿಯವರೆಗೂ ಪ್ರತಿರೋಧಿಸಲಾಗಿದೆ. ದೇಶದಲ್ಲಿ ಈಗಿರುವ ಸರ್ಕಾರದ ಆರ್ಥಿಕ ವಿಷಯಗಳ ತಿಳುವಳಿಕೆ ಎಷ್ಟು ಅತ್ಯಲ್ಪವಾಗಿದೆ ಎಂದರೆ, ಅಂತಿಮವಾಗಿ ಅವರು ಹೇಳಿದ್ದನ್ನು ಕೇಳುವಂತೆ ಅದರ ಮನವೊಲಿಸಬಹುದು.
ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಒಂದೊಂದು ತೆರನಾದ ಆರ್ಥಿಕ ವ್ಯವಹಾರಗಳಿಗೂ ಒಂದೊಂದು ಪ್ರತ್ಯೇಕ ಮಾರುಕಟ್ಟೆಯನ್ನು ಹೊಂದಿರುವ ಹಣಕಾಸು ಮಾರುಕಟ್ಟೆಗಳು (ಅಂದರೆ, ಸ್ಟಾಕ್ ಮಾರ್ಕೆಟ್, ಬಾಂಡ್ ಮಾರ್ಕೆಟ್, ಫಾರೆಕ್ಸ್ ಮಾರ್ಕೆಟ್, ಡೆರಿವೆಟೀವ್ಸ್ ಮಾರ್ಕೆಟ್, ಸರಕು ಮಾರ್ಕೆಟ್ ಮುಂತಾದವು) ಕಾರ್ಯ ವಿಧಾನವು ದೋಷಪೂರಿತವಾಗಿದೆ ಎಂಬುದಾಗಿ ಹೆಸರಾಂತ ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೀನ್ಸ್ ಹೇಳಿದ್ದರು. ದೋಷಪೂರಿತವಾಗಿದೆ ಏಕೆಂದರೆ, ಈ ಮಾರುಕಟ್ಟೆಗಳು “ಉದ್ಯಮ” (enterprise) ಮತ್ತು “ಸಟ್ಟಾಬಾಜಿ’ (speculation) ಇವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವಲ್ಲಿ ಮೂಲತಃ ಅಸಮರ್ಥವಾಗಿವೆ. ಉದ್ಯಮದ ವಿಷಯದಲ್ಲಿ ಹೇಳುವುದಾದರೆ, ಒಂದು ಆಸ್ತಿಯ ಒಡೆತನವು ಕಾಲಾನಂತರದಲ್ಲಿ ಸತತ ಆದಾಯವನ್ನು ನೀಡುತ್ತದೆ. ಸಟ್ಟಾ ಉದ್ಯಮದ ಆಸ್ತಿಯ ವಿಷಯಕ್ಕೆ ಬಂದರೆ, ಈ ಪಂಗಡದ ಆಸ್ತಿಯು ನೀಡುವ ಇಳುವರಿಯು ಉದ್ಯಮದ ರೀತಿಯಲ್ಲಿ ಇರುವುದಿಲ್ಲ. ಆದರೆ, ಸಟ್ಟಾ ಉದ್ಯಮದ ಆಸ್ತಿಯನ್ನು ನಾಳೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು ಎಂಬ ನೆಲೆಯಲ್ಲಿ ಅದನ್ನು (ಷೇರು, ಇತ್ಯಾದಿ) ಕೊಳ್ಳಲಾಗುತ್ತದೆ. ಈ ಆಸ್ತಿಯನ್ನು ಕೊಂಡಾತನು ಅದನ್ನು ಮರುದಿನ ಇನ್ನೂ ಹೆಚ್ಚಿನ ಬೆಲೆಯಲ್ಲಿ ಮತ್ತೊಬ್ಬನಿಗೆ ಮಾರಾಟ ಮಾಡಬಹುದು ಎಂದು ನಂಬುತ್ತಾನೆ.
ಸಟ್ಟಾ ವ್ಯಾಪಾರಿಗಳು(speculators) ಆಸ್ತಿ ಮಾರುಕಟ್ಟೆಗಳಲ್ಲಿ ಈ ರೀತಿಯ ಅಸ್ತಿತ್ವ ಹೊಂದಿರುವ ವರೆಗೂ ಇಂತಹ ಆಸ್ತಿಯ ಬೆಲೆಯು ಅದರ “ನಿಜವಾದ ಮೌಲ್ಯ”ವನ್ನು ಬಿಂಬಿಸುವುದಿಲ್ಲ. ಅಂದರೆ, ಅದರ ಇಂದಿನ ಬೆಲೆಯು ಅದು ಭವಿಷ್ಯದಲ್ಲಿ ಕೊಡಬಹುದಾದ ಆದಾಯವನ್ನು ಮುಂಗಡವಾಗಿ ಕೊಟ್ಟದ್ದಕ್ಕಾಗಿ ದೊರಕುವ ಒಂದು ರಿಯಾಯ್ತಿಯ ಬೆಲೆಯಾಗುತ್ತದೆ. ಈ ರೀತಿಯ ಗುಣಲಕ್ಷಣಗಳ ವ್ಯತ್ಯಾಸದಿಂದಾಗಿ, ಈ ಸಂಪನ್ಮೂಲಗಳನ್ನು ಹೂಡಿಕೆಗಾಗಿ ಪಡೆಯುವ ಹಣಕಾಸು ಮಾರುಕಟ್ಟೆಗಳು ಈ ಸಂಬಂಧವಾಗಿ ಮಾಡುವ ಲೆಕ್ಕಾಚಾರಗಳು ಯಾವತ್ತೂ ತಪ್ಪಾಗಿಯೇ ಇರುತ್ತವೆ. ಈ ಸಂಪನ್ಮೂಲಗಳನ್ನು ಯಾವ ಯಾವ ಪ್ರಮಾಣದಲ್ಲಿ ವಿತರಿಸಿ ಅವುಗಳನ್ನು ಬೇರೆ ಬೇರೆ ಸ್ವತ್ತುಗಳ ಮೇಲೆ ಹೂಡಿಕೆ ಮಾಡಬಹುದು ಎಂಬ ತರ್ಕದ-ತೀರ್ಮಾನಗಳ ಹೊರತಾಗಿಯೂ, ಒಟ್ಟು ಹೂಡಿಕೆಯಾದ ಸಂಪನ್ಮೂಲಗಳನ್ನು ಹೂಡಿಕೆಗೆ ಲಭ್ಯವಿರುವ ಸಂಪನ್ಮೂಲಗಳಿಗೆ ಹೋಲಿಸಿದರೆ, ಹೂಡಿಕೆಯಾದ ಒಟ್ಟು ಮೊತ್ತವು ಹಲವು ಬಾರಿ ಅತಿ ಕೆಳ ಮಟ್ಟದಲ್ಲಿಯೂ ಮತ್ತು ಕೆಲವೊಮ್ಮೆ ಅತಿ ಹೆಚ್ಚಿನ ಮಟ್ಟದಲ್ಲಿಯೂ ಇರುತ್ತದೆ. ಅತಿ ಹೆಚ್ಚಿನ ಮಟ್ಟದ ಹೂಡಿಕೆ ಸಂಭವಿಸಿದಾಗ ಹಣದುಬ್ಬರದ ಪರಿಸ್ಥಿತಿ ಉಂಟಾಗುತ್ತದೆ ಮತ್ತು ಅತಿ ಕೆಳ ಮಟ್ಟದ ಹೂಡಿಕೆಯಾದಾಗ, ಸಾಮಾನ್ಯವಾಗಿ ಘಟಿಸುವುದು ಇದುವೇ, ನಿರುದ್ಯೋಗದ ಪ್ರಮಾಣ ಹೆಚ್ಚುತ್ತದೆ (ಇದನ್ನು “ಅತಿಉತ್ಪಾದನೆ” ಬಿಕ್ಕಟ್ಟು ಎಂದು ಮಾರ್ಕ್ಸ್ ಕರೆದಿದ್ದರು).
ಹಾಗಾಗಿ, ಸಂಪನ್ಮೂಲಗಳ ಹೂಡಿಕೆಯ ಪ್ರಮಾಣ, ಯಾವ ಯಾವ ರೀತಿಯ ಆಸ್ತಿಗಳ ಮೇಲೆ ಎಷ್ಟೆಷ್ಟು ಹೂಡಿಕೆಯಾಗಬೇಕು ಮತ್ತು ಹೂಡಿಕೆಯಾದ ಹಣ ಯಾವಾಗ “ಕೈಗೂಡುತ್ತದೆ” ಎಂಬ ವಿತರಣೆಯ ಅಂಶಗಳನ್ನು ಹಣಕಾಸು ಮಾರುಕಟ್ಟೆಗಳ ವಿವೇಚನೆಗೆ ಬಿಡಲಾಗದು. ಏಕೆಂದರೆ, ಅದರಿಂದ ಉದ್ಭವವಾಗುವ ನಿರುದ್ಯೋಗದ ಪ್ರಮಾಣವನ್ನು ಜನರು ಸಹಿಸುವುದಿಲ್ಲ. ಆಗ ಈ ಬಂಡವಾಳಶಾಹಿ ವ್ಯವಸ್ಥೆಯ ಉಳಿವಿಗೇ ಸಂಚಕಾರ ಬರುತ್ತದೆ (ವ್ಯವಸ್ಥೆಯ ಉಳಿವನ್ನು ಖಚಿತಪಡಿಸಿಕೊಳ್ಳಲು ಸ್ವತಃ ಕೀನ್ಸ್ ಉತ್ಸುಕರಾಗಿದ್ದರು). ಆದ್ದರಿಂದ, ಈ ವಿವೇಚನಾ ಜವಾಬ್ದಾರಿಯನ್ನು ಪ್ರಭುತ್ವವೇ ವಹಿಸಿಕೊಳ್ಳಬೇಕು ಎಂದು ಕೀನ್ಸ್ ವಾದಿಸಿದರು ಮತ್ತು ಈ ಪ್ರಕ್ರಿಯೆಯನ್ನು ಅವರು “ಹೂಡಿಕೆಯ ಸಮಾಜೀಕರಣ” ಎಂದು ಕರೆದರು. ಸಂಕ್ಷಿಪ್ತವಾಗಿ ಹೇಳುವುದಾದರೆ, ಬಂಡವಾಳಶಾಹಿಯು ತನ್ನ ಉಳಿವಿಗಾಗಿ ಹೂಡಿಕೆಯ ಸಮಾಜೀಕರಣದ ಮೊರೆ ಹೊಕ್ಕಿತು. ಅಂದರೆ, ವ್ಯವಸ್ಥೆಯನ್ನು ಯಾವಾಗಲೂ ಪೂರ್ಣ ಉದ್ಯೋಗ ಸ್ಥಿತಿಗೆ ಹತ್ತಿರವಾಗಿರಿಸುವ ನೀತಿಗಳನ್ನು ಪ್ರಭುತ್ವವು ಅನ್ವೇಷಿಸಬೇಕಾಗುತ್ತದೆ.
ಹಾಗಾಗಿ, ನಿರುದ್ಯೋಗ ತಲೆದೋರಿದಾಗ ಮಾತ್ರ ಪ್ರಭುತ್ವವು ಹಣಕಾಸು ಮಾರುಕಟ್ಟೆಗಳಲ್ಲಿ ಕಾಲಿಡಬೇಕು ಎಂದಲ್ಲ. ಸಟ್ಟಾ-ಬಾಜಿ ಸಂವೃದ್ಧಿಯ ಕಾಲದಲ್ಲಿ ವ್ಯವಸ್ಥೆಯು ಉನ್ನತ ಮಟ್ಟದ ಉದ್ಯೋಗ ಪರಿಸ್ಥಿತಿಯನ್ನು ತಲುಪಿದ ಸುಖಭ್ರಾಂತಿಯಲ್ಲಿದ್ದಾಗ ಪ್ರಭುತ್ವವು ಹಣಕಾಸು ಮಾರುಕಟ್ಟೆಗಳಲ್ಲಿ ಕಾಲಿಡಬಾರದು ಮತ್ತು ಅಂತಹ ಸುಖಭ್ರಾಂತಿ ಕುಸಿದಾಗ ಮಾತ್ರ ಹಸ್ತಕ್ಷೇಪದ ಅಗತ್ಯವಿರುತ್ತದೆ ಎನ್ನುವಂತಿಲ್ಲ. ಅಂದರೆ, ಹಣಕಾಸು ಮಾರುಕಟ್ಟೆಗಳಲ್ಲಿ ಪ್ರಭುತ್ವವು ಮಾರುಕಟ್ಟೆಗಳ ಏರಿಳಿತಗಳಿಗೆ ತಕ್ಕಂತೆ ಕುಣಿಯುವುದನ್ನು ಬಿಟ್ಟು, ಪೂರ್ಣ ಉದ್ಯೋಗವನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಒಂದು ಶಾಶ್ವತ ಅಥವಾ ತಾಳಿಕೆ-ಬಾಳಿಕೆಯ ಪಾತ್ರವನ್ನು ನಿರ್ವಹಿಸಬೇಕು. ಅಂದರೆ, ಪ್ರಭುತ್ವವು ಹಣಕಾಸು ಮಾರುಕಟ್ಟೆಗಳನ್ನು ನಿಯಂತ್ರಿಸಬೇಕು.
ಹಣಕಾಸು ಮಾರುಕಟ್ಟೆಗಳನ್ನು ನಿಯಂತ್ರಿಸುವ ಅತ್ಯಂತ ಸ್ಪಷ್ಟ ಮಾರ್ಗವೆಂದರೆ ಅದರಲ್ಲಿ ಭಾಗವಹಿಸುವವರ ಕಾರ್ಯ-ವಿಧಾನಗಳ ಮೇಲೆ ಕೆಲವು ನಿರ್ಬಂಧಗಳನ್ನು ವಿಧಿಸುವುದು. ಉದಾಹರಣೆಗೆ, ಹಣಕಾಸು ಸಂಸ್ಥೆಗಳು ಸಟ್ಟಾ-ಬಾಜಿ ವ್ಯವಹಾರಗಳಲ್ಲಿ ಭಾಗವಹಿಸಬಹುದೇ ಅಥವಾ ಇಲ್ಲವೇ, ಅಥವಾ ಹಣಕಾಸು ಸಂಸ್ಥೆಗಳು ಸಟ್ಟಾ-ಬಾಜಿ ವ್ಯವಹಾರಗಳಿಗೆ ಸಾಲ ಕೊಡಬಹುದೇ ಅಥವಾ ಇಲ್ಲವೇ ಎಂಬುದನ್ನು ನಿಯಂತ್ರಿಸುವುದು. ಅಂತೆಯೇ, ಫ್ರಾಂಕ್ಲಿನ್ ಡಿ ರೂಸ್‌ವೆಲ್ಟ್ ಅವರ ‘ನ್ಯೂ ಡೀಲ್’’ ಯೋಜನೆಯ ಸಮಯದಲ್ಲಿ ಅಮೆರಿಕದಲ್ಲಿ, ಗ್ಲಾಸ್-ಸ್ಟೀಗಲ್ ಕಾಯ್ದೆಯನ್ನು ಅಂಗೀಕರಿಸಲಾಯಿತು. ಈ ಕಾಯ್ದೆಯು ವಾಣಿಜ್ಯ ಬ್ಯಾಂಕಿಂಗ್ ಮತ್ತು ಹೂಡಿಕೆ ಬ್ಯಾಂಕಿಂಗ್ ಇವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿತು ಮತ್ತು ಸಾರ್ವಜನಿಕರಿಂದ ಠೇವಣಿಗಳನ್ನು ಸ್ವೀಕರಿಸುವ ವಾಣಿಜ್ಯ ಬ್ಯಾಂಕುಗಳು ಸಟ್ಟಾ-ಬಾಜಿ ವ್ಯವಹಾರಗಳಲ್ಲಿ ತೊಡಗದಂತೆ ನಿರ್ಬಂಧಿಸಿತು. ಬಿಲ್ ಕ್ಲಿಂಟನ್ ಆಡಳಿತದ ಅವಧಿಯಲ್ಲಿ ಈ ಶಾಸನವನ್ನು ಹಿಂತೆಗೆದುಕೊಳ್ಳಲಾಯಿತು. ವಾಣಿಜ್ಯ ಬ್ಯಾಂಕಿಂಗ್ ಮತ್ತು ಹೂಡಿಕೆ ಬ್ಯಾಂಕಿಂಗ್ ಇವುಗಳ ನಡುವೆ ಇದ್ದ ವ್ಯತ್ಯಾಸವನ್ನು ಮತ್ತೊಮ್ಮೆ ಅಳಿಸಿಹಾಕಲಾಯಿತು. ಈ ಕ್ರಮದ ಮೂಲಕ ಅಮೆರಿಕದಲ್ಲಿ ದೊಡ್ಡ ಆಸ್ತಿ-ಬೆಲೆ ಗುಳ್ಳೆಗಳನ್ನು ಎಬ್ಬಿಸಿ ಅರ್ಥವ್ಯವಸ್ಥೆಯ ಉತ್ಕರ್ಷವನ್ನು ಉಳಿಸಿಕೊಳ್ಳಲಾಯಿತು ಮತ್ತು ಈ ವಿದ್ಯಮಾನವು ವಿಶ್ವದ ಅರ್ಥವ್ಯವಸ್ಥೆಯನ್ನೇ ಆವರಿಸಿತು. ಆದರೆ, ಅದೇ ರೀತಿಯಲ್ಲಿ, ಅಮೆರಿಕದಲ್ಲಿ ವಸತಿ “ಗುಳ್ಳೆ”ಯ ಸಿಡಿತವು ಅಮೆರಿಕದ ಮತ್ತು ವಿಶ್ವದ ಅರ್ಥವ್ಯವಸ್ಥೆಯನ್ನು ಹೆಚ್ಚಿನ ಮಟ್ಟದ ನಿರುದ್ಯೋಗಕ್ಕೆ ತಳ್ಳಿತು. ಈ ವಿದ್ಯಮಾನವೂ ಸಹ, ಕೊರೊನಾ ಸಾಂಕ್ರಾಮಿಕವು ಹರಡುವ ಮೊದಲೇ ಘಟಿಸಿತು.
ಸಟ್ಟಾ-ಬಾಜಿ ಹೂಡಿಕೆ ಉದ್ದೀಪಿತ ಆರ್ಥಿಕ ಉತ್ಕರ್ಷದ ಅಂತ್ಯಕ್ಕೆ ಕಾರಣವಾದ ಸಮಸ್ಯೆಯಿಂದಾಗಿ ಕುಸಿತಕ್ಕೊಳಗಾದದ್ದು ಅಮೆರಿಕದ ನಿಜ ಅರ್ಥವ್ಯವಸ್ಥೆ (ಉತ್ಪಾದನೆ, ಸೇವೆಗಳು ಇತ್ಯಾದಿ) ಮಾತ್ರವಲ್ಲ, ಅದಕ್ಕಿಂತಲೂ ಅಗಾಧವಾಗಿ ಹಣಕಾಸು ಅರ್ಥವ್ಯವಸ್ಥೆಯು ಕುಸಿದು ಬಿತ್ತು. ವಸತಿ ಗುಳ್ಳೆಯ ಅಂತ್ಯದ ನಂತರದ ಕುಸಿತದಿಂದ ಅಮೆರಿಕದ $13 ಟ್ರಿಲಿಯನ್ ಅರ್ಥವ್ಯವಸ್ಥೆಯನ್ನು ಅಧ್ಯಕ್ಷ ಒಬಾಮಾ ಆಡಳಿತವು ರಕ್ಷಿಸಬೇಕಾಗಿ ಬಂತು. ವಾಸ್ತವವಾಗಿ, ಬಂಡವಾಳಶಾಹಿಯ ಅಡಿಯಲ್ಲಿ ಹಣಕಾಸು ಮಾರುಕಟ್ಟೆಗಳ ದೋಷಗಳಲ್ಲಿ ಒಂದೆಂದರೆ, ಉದ್ಯೋಗದ ಮಟ್ಟವು ಸಟ್ಟಾ-ಬಾಜಿದಾರ ಗುಂಪಿನ ತಿಕ್ಕಲುತನದ ಭಾವನೆಗಳ ಮೇಲೆ ನಿರ್ಧರಿಸಲ್ಪಡುತ್ತದೆ ಮಾತ್ರವಲ್ಲ, ಹಣಕಾಸು ಸಂಸ್ಥೆಗಳ ಬದುಕುಳಿಯುವ ಶಕ್ತಿಯೇ ಅಂತಹ ತಿಕ್ಕಲುತನದ ಭಾವನೆಗಳ ಮೇಲೆ ನಿಂತಿರುತ್ತದೆ. ಹಾಗಾಗಿ, ಪ್ರಭುತ್ವದ ನೇರ ಹಸ್ತಕ್ಷೇಪದ ಮೂಲಕ ಪ್ರಮುಖ ಹಣಕಾಸು ಸಂಸ್ಥೆಗಳು ಸಟ್ಟಾ-ಬಾಜಿ ವ್ಯವಹಾರ/ಚಟುವಟಿಕೆಗಳಲ್ಲಿ ತೊಡಗದಂತೆ ತಡೆಯುವುದು ಅತ್ಯವಶ್ಯವಾಗುತ್ತದೆ.
ಸಟ್ಟಾ-ಬಾಜಿ ಚಟುವಟಿಕೆಗಳಲ್ಲಿ ತೊಡಗದಂತೆ ಖಚಿತಪಡಿಸಿಕೊಳ್ಳುವ ಉತ್ತಮ ಮಾರ್ಗವೆಂದರೆ ಈ ಹಣಕಾಸು ಸಂಸ್ಥೆಗಳನ್ನು ಪ್ರಭುತ್ವದ ಒಡೆತನಕ್ಕೆ ಒಳಪಡಿಸುವುದು. ಒಂದು ವಾಸ್ತವಾಂಶವಾಗಿ ಹೇಳುವುದಾದರೆ, ವ್ಯಾಪಕ ಸಟ್ಟಾ-ಬಾಜಿ ವ್ಯವಹಾರಗಳಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತೊಡಗಿಕೊಂಡು ಬಿಕ್ಕಟ್ಟಿಗೆ ಸಿಲುಕಿದ ಹಣಕಾಸು ಸಂಸ್ಥೆಗಳನ್ನು ಮುಂದುವರಿದ ಬಂಡವಾಳಶಾಹಿ ಸರ್ಕಾರಗಳು ಸಾರ್ವಜನಿಕ ಹಣವನ್ನು ಬಳಸಿಕೊಂಡು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ, ಈ ಸಂಸ್ಥೆಗಳನ್ನು ಅವುಗಳ ಹಳೆಯ ಆಡಳಿತ ಮಂಡಳಿಗಳಿಗೆ ಹಿಂತಿರುಗಿಸಬಾರದು ಮತ್ತು ಅವುಗಳನ್ನು ಪ್ರಭುತ್ವದ ಒಡೆತನಕ್ಕೆ ತೆಗೆದುಕೊಳ್ಳಬೇಕು ಎಂಬ ಸಾರ್ವಜನಿಕ ಬೇಡಿಕೆಯು ಬಲವಾಗಿತ್ತು. ಮುಳುಗಲಿದ್ದ ಹಣಕಾಸು ಸಂಸ್ಥೆಗಳಿಗೆ ಅಮೆರಿಕದ ಸರ್ಕಾರವು ಪಾರು-ಯೋಜನೆಯಡಿಯಲ್ಲಿ ನೀಡಿದ ನೆರವಿನ ದೊಡ್ಡ ಭಾಗವನ್ನು ಈ ಸಂಸ್ಥೆಗಳ ವ್ಯವಸ್ಥಾಪಕರುಗಳು ತಮ್ಮ ಸಂಬಳ, ಬೋನಸ್ ಮತ್ತು ಕೆಲವು ಅನುಕೂಲಗಳ ರೂಪದಲ್ಲಿ ನುಂಗಿ ನೀರು ಕುಡಿದರು. ಕಾನೂನಿನ ಅಡೆತಡೆಗಳು ಎಷ್ಟೇ ಪ್ರಬಲವಾಗಿರಲಿ, ಈ ಸಂಸ್ಥೆಗಳು ಒಂದಲ್ಲಾ ಒಂದು ರೀತಿಯ ಸಟ್ಟಾ-ಬಾಜಿ ಚಟುವಟಿಕೆಗಳಲ್ಲಿ ತೊಡಗುತ್ತವೆ. ಹಾಗಾಗಿ, ಪ್ರಭುತ್ವದ ಒಡೆತನವು ಈ ಹಣಕಾಸು ಸಂಸ್ಥೆಗಳ ಕಾರ್ಯಾಚರಣೆಯು ಕೇವಲ ಗರಿಷ್ಠ ಲಾಭ ಗಳಿಕೆಯನ್ನಷ್ಟೇ ಅಲ್ಲ, ಆರ್ಥಿಕ ಸಂಪನ್ಮೂಲಗಳ ವಿವೇಕಯುತ ಮತ್ತು ಸುರಕ್ಷಿತ ಹೂಡಿಕೆಯನ್ನೂ ಖಾತ್ರಿಪಡಿಸುತ್ತದೆ. ಮುಖ್ಯವಾಗಿ ಹೇಳಲೇಬೇಕಾದ ವಿಷಯವೆಂದರೆ, ಅಮೆರಿಕದಲ್ಲಿ ವಸತಿ ಗುಳ್ಳೆ ಒಡೆದಾಗ, ಭಾರತದಂತಹ ದೇಶದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಯಾವುದೇ ಡೆರಿವೆಟೀವ್ಸ್ ಗಳನ್ನು(“ನಂಜಿನ” ಸ್ವತ್ತುಗಳನ್ನು) ಕೊಂಡಿರಲಿಲ್ಲ ಎಂಬುದು ಒಂದು ಆಕಸ್ಮಿಕವಲ್ಲ. ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್ ಮಾತ್ರ ಅಲ್ಪ ಪ್ರಮಾಣದ ಈ “ನಂಜಿನ” ಸ್ವತ್ತುಗಳನ್ನು ಹೊಂದಿತ್ತು.
ಬಂಡವಾಳಶಾಹಿ ವ್ಯವಸ್ಥೆಯ ಅಡಿಯಲ್ಲಿ, ನಿಜ ಅರ್ಥವ್ಯವಸ್ಥೆಯ (ಉತ್ಪಾದನೆ, ಸೇವೆಗಳು ಇತ್ಯಾದಿ) ಮತ್ತು ಹಣಕಾಸು ಅರ್ಥವ್ಯವಸ್ಥೆಯ ಕುಸಿತವನ್ನು ತಡೆಯುವುದು ಬ್ಯಾಂಕುಗಳ ಒಡೆತನವು ಪ್ರಭುತ್ವದ ಬಳಿ ಇದ್ದಾಗ ಮಾತ್ರ ಸಾಧ್ಯ ಎಂಬುದು ಗೊತ್ತಿದ್ದರೂ ಸಹ ಬ್ಯಾಂಕುಗಳ ಪ್ರಭುತ್ವ-ಒಡೆತನವನ್ನು ಬಂಡವಾಳಗಾರರು ವಿರೋಧಿಸುತ್ತಾರೆ. ಏಕೆಂದರೆ, ಬಂಡವಾಳಶಾಹಿಯು ಒಂದು ಯೋಜಿತವಲ್ಲದ ವ್ಯವಸ್ಥೆಯಾಗಿದ್ದು, ಸ್ವತಃ ಹೆಚ್ಚಿನ ಲಾಭಾಪೇಕ್ಷಿಗಳಾಗಿರುವ ಬಂಡವಾಳಗಾರರಿಗೆ ವ್ಯವಸ್ಥೆಯ ಸ್ಥಿರತೆಯ ಬಗ್ಗೆ ತಿಳುವಳಿಕೆಯೂ ಇಲ್ಲ; ಕಾಳಜಿಯೂ ಇಲ್ಲ. ಒಂದು ವೇಳೆ ಬಂಡವಾಳಶಾಹಿಯು ಅಂತಹ ಯೋಜಿತವಲ್ಲದ ವ್ಯವಸ್ಥೆಯಾಗದಿದ್ದರೆ, ಅದು ಐತಿಹಾಸಿಕವಾಗಿ ಶಾಶ್ವತವಲ್ಲದ ಸ್ಥಿತಿಯಲ್ಲೇ ಇರುತ್ತಿರಲಿಲ್ಲ. ಬಂಡವಾಳಶಾಹಿ ವ್ಯವಸ್ಥೆಯ ಬಗ್ಗೆ ಸಹಾನುಭೂತಿ ಹೊಂದಿರುವ ಸರ್ಕಾರವೂ ಸಹ, ಬ್ಯಾಂಕುಗಳ ಪ್ರಭುತ್ವ-ಒಡೆತನಕ್ಕೆ ಬಂಡವಾಳಗಾರರ ಪ್ರತಿರೋಧವನ್ನು ಜಯಿಸಲು ಸಾಧ್ಯವಿಲ್ಲ.
ಆದರೆ, ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಖಾಸಗಿ ಬಂಡವಾಳಶಾಹಿಗಳಿಗೆ ಹಸ್ತಾಂತರಿಸಲು ಯೋಜಿಸುತ್ತಿರುವ ಸರ್ಕಾರದ ಬುದ್ಧಿಹೀನತೆಯನ್ನು ಊಹಿಸಿಕೊಳ್ಳಿ. ಇದು ಹಣಕಾಸು ವ್ಯವಸ್ಥೆಯನ್ನು ಕುಸಿತದ ಅಪಾಯಕ್ಕೆ ಒಡ್ಡುವ ಕ್ರಮವಾಗುತ್ತದೆ. ಅಯ್ಯೋ! ಭಾರತ ಸರ್ಕಾರವೇ! ನಮ್ಮ ಹಣಕಾಸು ವ್ಯವಸ್ಥೆಯ ಸ್ಥಿರತೆಯು ಬಹುತೇಕ ಬ್ಯಾಂಕುಗಳ ಪ್ರಭುತ್ವ-ಒಡೆತನ ಕಾರಣದ ಮೇಲೆ ನಿಂತಿದೆ. ಈ ಬ್ಯಾಂಕುಗಳ ಠೇವಣಿದಾರರು ತಮ್ಮ ಠೇವಣಿಯ ಸುರಕ್ಷತೆಯ ಬಗ್ಗೆ ನಿಶ್ಚಿಂತರಾಗಿದ್ದಾರೆ. ಸರ್ಕಾರಿ ಸ್ವಾಮ್ಯದಲ್ಲಿರುವ ಕಾರಣದಿಂದಾಗಿಯೇ ಈ ಬ್ಯಾಂಕುಗಳು ಮುಳುಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹಾಗಾಗಿ, ಠೇವಣಿದಾರರು ನಿಶ್ಚಿಂತರಾಗಿದ್ದಾರೆ. ಈ ಪರಿಸ್ಥಿತಿಯು ವಸಾಹತುಶಾಹಿ ಅವಧಿಗೂ ಮತ್ತು ಸ್ವತಂತ್ರ ಭಾರತದ ರಾಷ್ಟ್ರೀಕರಣ-ಪೂರ್ವ ಅವಧಿಗೂ ವ್ಯತಿರಿಕ್ತವಾಗಿದೆ. ಆಗ, ಬ್ಯಾಂಕ್ ವೈಫಲ್ಯದ/ಮುಳುಗಡೆಯ ಭಯ ಎಷ್ಟು ವ್ಯಾಪಕವಾಗಿತ್ತು ಎಂದರೆ ಜನರು ತಮ್ಮ ಹಣವನ್ನು ಕರೆನ್ಸಿ ನೋಟುಗಳ ರೂಪದಲ್ಲಿ ಹಾಸಿಗೆಗಳ ಕೆಳಗೆ ಅಡಗಿಸಿಟ್ಟುಕೊಳ್ಳುತ್ತಿದ್ದರು ಅಥವಾ ಚಿನ್ನದ ಆಭರಣಗಳ ರೂಪದಲ್ಲಿ ಅಥವಾ ಭೂಮಿಯ ರೂಪದಲ್ಲಿ ಹಿಡಿದಿಟ್ಟುಕೊಳ್ಳಲು ಆದ್ಯತೆ ನೀಡುತ್ತಿದ್ದರು. ರಾಷ್ಟ್ರೀಕರಣದ ನಂತರವೇ ಅವರ ಆಸ್ತಿ ಹಿಡಿದಿಟ್ಟುಕೊಳ್ಳುವ ಆದ್ಯತೆಯು ಅಂತಿಮವಾಗಿ ಬ್ಯಾಂಕ್ ಠೇವಣಿಗಳ ಪರವಾಗಿ ಬದಲಾವಣೆಯಾಯ್ತು. ಅಗಾಧ ಪ್ರಮಾಣದ ಈ ಬ್ಯಾಂಕ್ ಠೇವಣಿಗಳು ನೇರ ಅಥವಾ ಪರೋಕ್ಷ ಮಧ್ಯಸ್ಥಿಕೆಯ ಮೂಲಕ ಹೂಡಿಕೆಯ ಸಂಪನ್ಮೂಲಗಳಾಗಿ ದೇಶದ ಅಭಿವೃದ್ಧಿಯಲ್ಲಿ ನೆರವಾಗಿವೆ.
ಭಾರತ ಸರ್ಕಾರವು ಗಡಿಯಾರದ ಮುಳ್ಳನ್ನು ಆ ಹಿಂದಿನ ಕಾಲಕ್ಕೆ ತಳ್ಳಲು ಬಯಸುತ್ತದೆ. ಇಂದಿನ ಹಣಕಾಸು ವ್ಯವಸ್ಥೆಯು ವಸಾಹತುಶಾಹಿ ಅವಧಿಗಿಂತ ಭಿನ್ನವಾಗಿದೆ ಎಂದು ಸೋಗುಹಾಕುವುದರಿಂದ ಯಾವ ಪ್ರಯೋಜನವೂ ಇಲ್ಲ. “ಉದ್ಯಮ” ಮತ್ತು “ಸಟ್ಟಾ ಬಾಜಿ” ಇವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಕಾನೂನುಬದ್ಧವಾಗಿ ಒತ್ತಾಯಿಸದ ಎಲ್ಲಾ ಲಾಭ-ಅರಸುವ ಹಣಕಾಸು ವ್ಯವಸ್ಥೆಗಳೂ ಸಮಾನವಾಗಿ ಹಾನಿಗೀಡಾಗುತ್ತವೆ. ಅದನ್ನು ತಪ್ಪಿಸಲು ಕಾನೂನು ಬಲವೂ ಸಾಕಾಗುವುದಿಲ್ಲ.
ಭಾರತದಲ್ಲಿ ಬ್ಯಾಂಕ್ ರಾಷ್ಟ್ರೀಕರಣವು ಒಂದು ವಿಭಿನ್ನವಾದ ಮತ್ತು ತಕ್ಷಣದ ಒತ್ತಡವನ್ನು ಎದುರಿಸುವ ಉದ್ದೇಶವನ್ನು ಹೊಂದಿತ್ತು. ಅರ್ಥವ್ಯವಸ್ಥೆಯ ಬೆಳವಣಿಗೆ ಅತ್ಯಗತ್ಯವಾಗಿದ್ದ ವಲಯಗಳಿಗೆ ಮತ್ತು ಅಲ್ಲಿಯವರೆಗೆ ನಿರ್ಲಕ್ಷಿಸಲ್ಪಟ್ಟಿದ್ದ ರೈತ ಕೃಷಿಯಂತಹ ವಲಯಗಳಿಗೆ ಸಾಂಸ್ಥಿಕ ಸಾಲವನ್ನು ಹರಿಸುವುದು ಬ್ಯಾಂಕ್ ರಾಷ್ಟ್ರೀಕರಣದ ಉದ್ದೇಶವಾಗಿತ್ತು. ಈ ವಲಯಗಳಿಗೆ ಕೊಡುವ ಸಾಲಗಳ ಮೇಲೆ ವಿಧಿಸುವ ಬಡ್ಡಿದರಗಳನ್ನು ಕೆಳ ಮಟ್ಟದಲ್ಲಿ ಇಡಲಾಗಿತ್ತು. ಒಟ್ಟು ಸಾಲದ ಒಂದು ನಿರ್ದಿಷ್ಟ ಪಾಲನ್ನು ಈ ವಲಯಗಳು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು “ಆದ್ಯತಾ ವಲಯದ ನಿಯಮಗಳು” ಇದ್ದವು. ವಿವಿಧ ರೈತ ವರ್ಗಗಳ ನಡುವೆ ಸಾಂಸ್ಥಿಕ ಸಾಲಗಳ ಹಂಚಿಕೆಯು ಅಸಮಾನವಾಗಿದ್ದರೂ ಸಹ, ಬ್ಯಾಂಕ್ ರಾಷ್ಟ್ರೀಕರಣವಿಲ್ಲದೆ ಹಸಿರು ಕ್ರಾಂತಿ ಸಂಭವಿಸುವುದು ಸಾಧ್ಯವಿರಲಿಲ್ಲ. ಹಸಿರು ಕ್ರಾಂತಿಯು ಪರಿಸರದ ಮೇಲೆ ಬೀರಿದ ಪರಿಣಾಮದ ಬಗ್ಗೆ ಎಷ್ಟೇ ವಿಮರ್ಶಾತ್ಮಕವಾಗಿ ನೋಡಿದರೂ ಸಹ, ಅದು ದೇಶವನ್ನು ಮೆಟ್ರೊಪಾಲಿಟನ್ ದೇಶಗಳ “ಆಹಾರ ಸಾಮ್ರಾಜ್ಯಶಾಹಿ”ಯಿಂದ ಮುಕ್ತಗೊಳಿಸಿತು ಎಂಬದನ್ನು ನಿರಾಕರಿಸುವಂತಿಲ್ಲ. ನವ-ಉದಾರವಾದವು ರಾಷ್ಟ್ರೀಕರಣವನ್ನು ರದ್ದುಪಡಿಸುವಂತೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸಲು ಸರ್ಕಾರದ ಮನವೊಲಿಸುತ್ತಿದೆ. ಅದನ್ನು ಇಲ್ಲಿಯವರೆಗೂ ಪ್ರತಿರೋಧಿಸಲಾಗಿದೆ. ದೇಶದಲ್ಲಿ ಈಗಿರುವ ಸರ್ಕಾರದ ಆರ್ಥಿಕ ವಿಷಯಗಳ ತಿಳುವಳಿಕೆ ಎಷ್ಟು ಅತ್ಯಲ್ಪವಾಗಿದೆ ಎಂದರೆ, ಅಂತಿಮವಾಗಿ ಅವರು ಹೇಳಿದ್ದನ್ನು ಕೇಳುವಂತೆ ಅದರ ಮನವೊಲಿಸಬಹುದು.
ಆದಾಗ್ಯೂ, ವಿಷಯವೆಂದರೆ: ಬ್ಯಾಂಕುಗಳ ಪ್ರಭುತ್ವ-ಒಡೆತನವು, ಕೇವಲ ಸಾಂಸ್ಥಿಕ ಸಾಲಗಳು ವ್ಯಾಪಕವಾಗಿ ತಲುಪುವ ಉದ್ದೇಶಕ್ಕೆ ಮಾತ್ರವಲ್ಲ, ಬಂಡವಾಳಶಾಹಿ ಹಣಕಾಸು ವ್ಯವಸ್ಥೆಯ ಸ್ಥಿರತೆಗೂ ಅನುಕೂಲಕರವಾಗಿದೆ.
ಅನು: ಕೆ.ಎಂ.ನಾಗರಾಜ್