ಇಳಿದಿದೆ, ಅದು ಏಕಸ್ವಾಮ್ಯ ಬಂಡವಳಿಗರ ಪ್ರಯೋಜನದತ್ತ ತಿರುಗಿದೆ
ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ರಾಜ್ಯಗಳಿಗೆ ಸಂಪನ್ಮೂಲಗಳ ವರ್ಗಾವಣೆಯ ಪ್ರಮಾಣವನ್ನು ತೀವ್ರವಾಗಿ ಹೆಚ್ಚಿಸಲಾಗಿದೆ ಎಂದು ಹಣಕಾಸು ಮಂತ್ರಿಗಳು ಹೇಳಿದ್ದಾರೆ. ಇದು ದಾರಿತಪ್ಪಿಸುವ ಹೇಳಿಕೆ. ಏಕೆಂದರೆ ತೆರಿಗೆ ಆದಾಯಗಳ ಅನುಪಾತವಾಗಿ ಮಾತ್ರವಲ್ಲ, ನಿಜ ಜಿಡಿಪಿಯ ಅನುಪಾತದಲ್ಲೂ ವರ್ಗಾವಣೆ ಹೆಚ್ಚಿಲ್ಲ, ಬದಲಿಗೆ ಇಳಿದಿದೆ, ಸಂಪನ್ಮೂಲಗಳ ಕೇಂದ್ರೀಕರಣ ಮತ್ತಷ್ಟು ಮುಂದಕ್ಕೆ ಹೋಗಿದೆ. ಮೋದಿ ಸರ್ಕಾರದ ಅಡಿಯಲ್ಲಿ ಇದು ಕೇವಲ ಒಂದು ಆಕಸ್ಮಿಕ ವಿದ್ಯಮಾನವೇನಲ್ಲ. ಸಾರ್ವಜನಿಕ ಸಂಪನ್ಮೂಲಗಳನ್ನು ದುಡಿಯುವ ಜನರಿಗೆ ಪರಿಹಾರ ನೀಡಲು “ವ್ಯರ್ಥ” ಮಾಡುವ ಬದಲು ತಮಗೆ ಮಾರುಕಟ್ಟೆಯನ್ನು ಒದಗಿಸಲು ಬಳಸಬೇಕು ಎಂದು ಏಕಸ್ವಾಮ್ಯ ಬಂಡವಾಳಶಾಹಿ ಹೇಳುತ್ತದೆ. ಫ್ಯಾಸಿಸ್ಟ್ ಆಳ್ವಿಕೆಯಲ್ಲಿ ಈ ಪ್ರವೃತ್ತಿಯು ಹೆಚ್ಚು ಬಲಗೊಳ್ಳುತ್ತದೆ. ಸಂಪನ್ಮೂಲಗಳನ್ನು ಏಕಸ್ವಾಮ್ಯ ಗುಂಪಿಗೆ ಪ್ರಯೋಜನವಾಗುವ ರೀತಿಯಲ್ಲಿ ತಿರುಗಿಸುವುದಕ್ಕೆ ಈ ವರ್ಷದ ಬಜೆಟ್ ಒಂದು ಒಳ್ಳೇ ಉದಾಹರಣೆ. ಮೋದಿ ಆಡಳಿತವು ಈ ರೀತಿಯಲ್ಲಿ ಅಧಿಕಾರಗಳ ಮತ್ತು ಸಂಪನ್ಮೂಲಗಳ ಕೇಂದ್ರೀಕರಣವನ್ನು ಅದರ ತುತ್ತತುದಿಗೆ ಕೊಂಡೊಯ್ದಿರುವುದು ಆಶ್ಚರ್ಯವೇನಲ್ಲ.
ಜವಾಬ್ದಾರಿಯುತ ಕೇಂದ್ರ ಸಚಿವ ಸಂಪುಟದ ಒಬ್ಬ ಸದಸ್ಯರು ತಪ್ಪುದಾರಿಗೆಳೆಯುವ ಉದ್ದೇಶದಿಂದ ಕೂಡಿದ ಒಂದು ಹೇಳಿಕೆಯನ್ನು ಕೊಡುತ್ತಾರೆ ಎಂಬುದನ್ನು ನಿರೀಕ್ಷಿಸಲಾಗದು. ಆದರೆ, ಕೆಲವು ದಿನಗಳ ಹಿಂದೆ ಅಂತಹ ಒಂದು ಹೇಳಿಕೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನೀಡಿದ್ದಾರೆ. ಇತ್ತೀಚಿನ ಬಜೆಟ್‌ನಲ್ಲಿ ರಾಜ್ಯಗಳಿಗೆ ವರ್ಗಾವಣೆ ಮಾಡುವ ಸಂಪನ್ಮೂಲಗಳ ಬಗ್ಗೆ ಮಾತನಾಡಿದ ಅವರು, ವರ್ಗಾವಣೆಯ ಪ್ರಮಾಣವನ್ನು “ತೀವ್ರವಾಗಿ” ಹೆಚ್ಚಿಸಲಾಗಿದೆ (ದಿ ಹಿಂದೂ ಫೆಬ್ರವರಿ 11) ಎಂದು ಹೇಳಿದ್ದಾರೆ. ಈ ಹೇಳಿಕೆಯು, ಕೇಂದ್ರವು “ದೊಡ್ಡ ಮನಸ್ಸು” ಹೊಂದಿದೆ ಎಂಬ ಭಾವನೆಯನ್ನು ಸೃಷ್ಟಿಸುತ್ತದೆಯಾದರೂ, ಕೇಂದ್ರದಿಂದ ರಾಜ್ಯಗಳಿಗೆ ವರ್ಗಾವಣೆಯಾದ ಮೊತ್ತದಲ್ಲಿ ನಿಜಕ್ಕೂ ಹೆಚ್ಚಳವಾಗಿದೆ ಎಂಬುದನ್ನು ಸಮರ್ಥಿಸುವ ಯಾವುದೇ ಅಂಕಿಅಂಶಗಳನ್ನೂ ಅವರು ನೀಡಿಲ್ಲ. ಬಜೆಟ್‌ನಲ್ಲಿ ರಾಜ್ಯಗಳಿಗೆಂದು ನಿಗದಿಪಡಿಸಿದ ವರ್ಗಾವಣೆಗಳ ಪೈಕಿ ಯಾವ ವರ್ಗದ ವರ್ಗಾವಣೆಯನ್ನು ಪರಿಗಣಿಸಿದರೂ, ಜಿಡಿಪಿಯ ಅನುಪಾತದಲ್ಲಿ, ವರ್ಗಾವಣೆಯ ಪ್ರಮಾಣದಲ್ಲಿ ಕುಸಿತ ಕಂಡುಬರುತ್ತದೆ. ವಿಷಯವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ಮೋದಿ ಸರ್ಕಾರವು ತತ್ಪರತೆಯಿಂದ ಪ್ರೋತ್ಸಾಹಿಸಿದ ಸಂಪನ್ಮೂಲಗಳ ಕೇಂದ್ರೀಕರಣದ ಪ್ರಕ್ರಿಯೆಯನ್ನು ಬಜೆಟ್ ಮತ್ತಷ್ಟು ಮುಂದಕ್ಕೆ ಕೊಂಡೊಯ್ಯುತ್ತದೆ.
ಇದನ್ನು ಓದಿ: ಆಹಾರ ವಸ್ತುಗಳ ಮೇಲೆ ಐಷಾರಾಮಿ ಸರಕುಗಳಿಗಿಂತ ಹೆಚ್ಚಿನ ಜಿಎಸ್‍ಟಿ!
ಕೇಂದ್ರಕ್ಕೆ ಬರುವ ಒಟ್ಟು ತೆರಿಗೆ ಆದಾಯದಲ್ಲಿ ರಾಜ್ಯ ಸರ್ಕಾರಗಳಿಗೆ ಪ್ರಾಪ್ತವಾಗುವ ತೆರಿಗೆ ಆದಾಯದ ಪಾಲಿನ ಹಂಚಿಕೆಯನ್ನೇ ತೆಗೆದುಕೊಳ್ಳೋಣ. ಹದಿನಾಲ್ಕನೇ ಹಣಕಾಸು ಆಯೋಗವು ಕೇಂದ್ರದ ಒಟ್ಟು ತೆರಿಗೆ ಆದಾಯದಲ್ಲಿ ರಾಜ್ಯಗಳ ಪಾಲನ್ನು ಶೇ. 42ಕ್ಕೆ ಏರಿಸಿತ್ತು. ಆಯೋಗದ ಶಿಫಾರಸನ್ನು ಕೇಂದ್ರವು ಯಾವುದೇ ಆಕ್ಷೇಪಣೆಯಿಲ್ಲದೆ ಸ್ವೀಕರಿಸುತ್ತಿದೆ ಎಂಬ ಅಂಶವನ್ನು ಒತ್ತಿಹೇಳಿದ ಸಮಯದಲ್ಲೇ, ಕೇಂದ್ರದಿಂದ ರಾಜ್ಯಗಳಿಗೆ ಮಾಡುವ ಒಟ್ಟು ವರ್ಗಾವಣೆಗಳು ಜಿಡಿಪಿಯ ಅನುಪಾತದಲ್ಲಿ ಹೆಚ್ಚುವ ಬದಲು ಕಡಿಮೆಯಾಗುವುದನ್ನು ಖಚಿತಪಡಿಸಿಕೊಳ್ಳಲು, ಹಣಕಾಸು ಆಯೋಗದ ವ್ಯಾಪ್ತಿಯಿಂದ ಹೊರಗುಳಿದ ಬೇರೆ ಕೆಲವು ಆದಾಯಗಳ ವರ್ಗಾವಣೆಗಳನ್ನು ಕಡಿತಗೊಳಿಸಲಾಗಿತ್ತು. ಅಂದಿನಿಂದಲೂ ರಾಜ್ಯಗಳಿಗೆ ಹಂಚಿಕೆಯಾಗುವ ಒಟ್ಟು ತೆರಿಗೆ ಆದಾಯದ ಪಾಲು ಕುಸಿಯುತ್ತಲೇ ಇದೆ. 2018-19ರಲ್ಲಿ ಶೇ. 36.6ರಷ್ಟಿದ್ದ ರಾಜ್ಯಗಳ ಪಾಲನ್ನು 2021-22ರಲ್ಲಿ ಶೇ. 33.2ಕ್ಕೆ ಮತ್ತು 2022-23ರ ಪರಿಷ್ಕೃತ ಅಂದಾಜಿನ ಶೇ.31.2ರಿಂದ 2023-24ರ ಬಜೆಟ್ ಅಂದಾಜಿನಲ್ಲಿ ಕೇವಲ ಶೇ. 30.4ಕ್ಕೆ ಇಳಿಸಲಾಗಿದೆ. ಈ ಮೋಸವನ್ನು ಎಸಗಿದ ವಿಧಾನವೆಂದರೆ, ರಾಜ್ಯಗಳೊಂದಿಗೆ ಹಂಚಿಕೆಯಾಗದ ಸೆಸ್ ಮತ್ತು ಸರ್ಚಾರ್ಜ್ ರೂಪದ ವಿಶೇಷ ತೆರಿಗೆಗಳೇ. ತನಗೆ ಮಾತ್ರ ದೊರಕುವ ಅಧಿಕ ಸಂಪನ್ಮೂಲಗಳನ್ನು ಸಂಗ್ರಹಿಸಿಕೊಳ್ಳಲು ಕೇಂದ್ರವು ಈ ವಿಧಾನವನ್ನು ಹೆಚ್ಚು ಹೆಚ್ಚಾಗಿ ಬಳಸಿಕೊಳ್ಳುತ್ತಿದೆ. ಒಟ್ಟು ತೆರಿಗೆ ಆದಾಯದಲ್ಲಿ ಇಂತಹ ತೆರಿಗೆಗಳ (ಸೆಸ್ ಮತ್ತು ಸರ್ಚಾರ್ಜ್) ಪಾಲು 2011-12ರಲ್ಲಿದ್ದ ಹತ್ತನೇ ಒಂದು ಭಾಗದಿಂದ 2021-22ರ ವೇಳೆಗೆ ಐದನೇ ಒಂದು ಭಾಗಕ್ಕೆ ದ್ವಿಗುಣಗೊಂಡಿದೆ (ಜಯತಿ ಘೋಷ್ ಅವರ ಲೇಖನ – ದಿ ಟೆಲಿಗ್ರಾಫ್, ಫೆಬ್ರವರಿ 2).
ಇದನ್ನು ಓದಿ: ತೆರಿಗೆ-ಜಿಡಿಪಿ ಅನುಪಾತ ಹೆಚ್ಚದೆ ಕಲ್ಯಾಣ ಪ್ರಭುತ್ವ ಅಸಾಧ್ಯ
ಜಿಡಿಪಿ ಅನುಪಾತದಲ್ಲೂ ಇಳಿಕೆ
ರಾಜ್ಯಗಳಿಗೆ ಹಂಚಿಕೆಯಾಗುತ್ತಿರುವ ತೆರಿಗೆಗಳ ಅನುಪಾತದ ಕುಸಿತವು ಕೇಂದ್ರದ ಒಟ್ಟು ತೆರಿಗೆ ಆದಾಯಕ್ಕೆ ಹೋಲಿಸಿದಾಗ ಮಾತ್ರವಲ್ಲ; ಜಿಡಿಪಿಯೊಂದಿಗೆ ಹೋಲಿಸಿದಾಗಲೂ ಕುಸಿದಿರುವುದನ್ನು ಕಾಣಬಹುದು. ಇದೇ ಪ್ರವೃತ್ತಿಯು ಇತ್ತೀಚಿನ ಬಜೆಟ್‌ನಲ್ಲೂ ಮುಂದುವರಿದಿದೆ. ಈ ಬಜೆಟ್, 2022-23ಕ್ಕೆ ಹೋಲಿಸಿದರೆ 2023-24ರಲ್ಲಿ ಜಿಡಿಪಿಯು ಪ್ರಸಕ್ತ ಬೆಲೆಗಳಲ್ಲಿ ಪರಿಭಾಷೆಯಲ್ಲಿ ಶೇ. 10.5ರಷ್ಟು ವೃದ್ಧಿಸುತ್ತದೆ ಎಂಬ ಊಹೆಯನ್ನು ಆಧರಿಸಿದೆ. ಕೇಂದ್ರದಿಂದ ರಾಜ್ಯಗಳಿಗೆ ಆಗುವ ತೆರಿಗೆ ಹಂಚಿಕೆಯು 948,406 ಕೋಟಿ ರೂ.ಗಳಿಂದ 1021,448 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಅಂದರೆ, ಏರಿಕೆಯು ಕೇವಲ ಶೇ. 7.7ರಷ್ಟಾಗುತ್ತದೆ. ಇದು ಜಿಡಿಪಿಯ ಬೆಳವಣಿಗೆಯ ದರಕ್ಕಿಂತ ಕಡಿಮೆ ಇದೆ. ಜಿಡಿಪಿಯೊಂದಿಗೆ ಹೋಲಿಸಿದಾಗ ರಾಜ್ಯಗಳಿಗೆ ಮಾಡಿದ ಹಂಚಿಕೆಯ ಪ್ರಮಾಣವು ಶೇ. 3.47ರಿಂದ ಶೇ. 3.38ಕ್ಕೆ ಇಳಿಯುತ್ತದೆ. ಆದ್ದರಿಂದ, ತೆರಿಗೆ-ಹಂಚಿಕೆಯ ಭಾಗವನ್ನು ಪರಿಶೀಲಿಸಿದಾಗ ವರ್ಗಾವಣೆಯು “ತೀವ್ರವಾಗಿ” ಏರಿದೆ ಎಂಬ ಹಣಕಾಸು ಸಚಿವರ ಹೇಳಿಕೆಯು ನಿಜವಲ್ಲ. ವಾಸ್ತವವಾಗಿ, ಕೇಂದ್ರಕ್ಕೆ ದೊರಕುವ ಒಟ್ಟು ತೆರಿಗೆಗಳ ಅನುಪಾತದಲ್ಲಿ ಮತ್ತು ಜಿಡಿಪಿಯ ಅನುಪಾತದಲ್ಲಿ ರಾಜ್ಯಗಳ ಪಾಲು ಕುಸಿದಿದೆ.
ಈಗ ಒಟ್ಟು ವರ್ಗಾವಣೆಯನ್ನು ನೋಡೋಣ. ಇದು ನಾಲ್ಕು ರೀತಿಯ ವರ್ಗಾವಣೆಯನ್ನು ಒಳಗೊಂಡಿದೆ: ಕೇಂದ್ರವು ಸಂಗ್ರಹಿಸಿದ ಒಟ್ಟು ತೆರಿಗೆಗಳಲ್ಲಿ ರಾಜ್ಯಗಳ ಪಾಲು (ಇದನ್ನು ನಾವು “ಹಂಚಿಕೆ” ಎಂದು ಈ ಮೊದಲು ಕರೆದಿದ್ದೇವೆ); ಬಂಡವಾಳ ವೆಚ್ಚಗಳಿಗಾಗಿ ರಾಜ್ಯಗಳಿಗೆ ಒದಗಿಸುವ ವಿಶೇಷ ನೆರವು, ಈಶಾನ್ಯ ರಾಜ್ಯಗಳಿಗೆ ಒದಗಿಸುವ ವಿಶೇಷ ನೆರವು ಮುಂತಾದ ನಿರ್ದಿಷ್ಟ ಶೀರ್ಷಿಕೆಗಳ ಅಡಿಯಲ್ಲಿ ವರ್ಗಾವಣೆ; ಕೇಂದ್ರ ಪ್ರಾಯೋಜಿತ ಯೋಜನೆಗಳು ಮತ್ತು ಕೇಂದ್ರದ ಇತರ ಯೋಜನೆಗಳ ಕಾರಣದಿಂದಾಗಿ ವರ್ಗಾವಣೆ; ಮತ್ತು ಆರೋಗ್ಯ ಮುಂತಾದ ವಲಯಗಳ ನಿರ್ದಿಷ್ಟ ಉದ್ದೇಶಗಳಿಗಾಗಿ ಅಥವಾ ಸ್ಥಳೀಯ ಸಂಸ್ಥೆಗಳಿಗೆ ಹಣಕಾಸು ಆಯೋಗವು ಶಿಫಾರಸು ಮಾಡಿದ ಅನುದಾನಗಳು. ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡಾಗ ಒಟ್ಟು ವರ್ಗಾವಣೆಗಳು 2022-23ರ ಪರಿಷ್ಕೃತ ಅಂದಾಜುಗಳ ಪ್ರಕಾರ 17.11 ಲಕ್ಷ ಕೋಟಿ ರೂ.ಗೆ ಬರುತ್ತವೆ ಮತ್ತು 2023-24ರ ಬಜೆಟ್ ಅಂದಾಜಿನ ಪ್ರಕಾರ 18.63 ಲಕ್ಷ ಕೋಟಿ ರೂ.ಗೆ ಏರಲಿವೆ. ಅಂದರೆ, ಶೇ. 8.8ರಷ್ಟು ಏರಿಕೆಯಾಗಲಿವೆ. ಆದರೆ, ಈ ಹೆಚ್ಚಳವೂ ಸಹ, ಪ್ರಸಕ್ತ ಬೆಲೆಗಳಲ್ಲಿ ಜಿಡಿಪಿಐ ಶೇ. 10.5ಕ್ಕಿಂತ ಕಡಿಮೆಯೇ ಇದೆ. ಆದ್ದರಿಂದ, ಜಿಡಿಪಿಯ ಅನುಪಾತವಾಗಿ ಕೇಂದ್ರದಿಂದ ರಾಜ್ಯಗಳಿಗೆ ವರ್ಗಾವಣೆಯಾಗುವ ಒಟ್ಟು ಪಾಲು 2022-23ರ ಶೇ. 6.267ರಿಂದ 2023-24ರಲ್ಲಿ ಶೇ. 6.174ಕ್ಕೆ ಇಳಿಯುತ್ತದೆ.
ಇದನ್ನು ಓದಿ: 20 ಲಕ್ಷ ಕೊಟಿ ರೂ. ಅಥವ 10ಶೇ. ಜಿಡಿಪಿ ಪ್ಯಾಕೇಜ್ – ಮಾತಿನ, ಅಂಕೆ-ಸಂಖ್ಯೆಗಳ ಮಾಯಾಜಾಲದ ಹಿಂದೆ
ಫ್ಯಾಸಿಸ್ಟ್ ಕೇಂದ್ರೀಕರಣದ ಭಾಗ
ಮೋದಿ ಸರ್ಕಾರದ ಅಡಿಯಲ್ಲಿ ನಡೆಯುತ್ತಿರುವ ಸಂಪನ್ಮೂಲಗಳ ಕೇಂದ್ರೀಕರಣವು ಕೇವಲ ಒಂದು ಆಕಸ್ಮಿಕ ವಿದ್ಯಮಾನವೇನಲ್ಲ. ಅಥವಾ, ಲಭ್ಯವಿರುವ ಅತ್ಯಲ್ಪ (ಶ್ರೀಮಂತರ ಮೇಲೆ ಸಾಕಷ್ಟು ತೆರಿಗೆ ವಿಧಿಸದ ಕಾರಣದಿಂದಾಗಿ ಅತ್ಯಲ್ಪ) ಸಂಪನ್ಮೂಲಗಳ ಹೆಚ್ಚಿನ ಪಾಲನ್ನು ತನಗಾಗಿ ಇಟ್ಟುಕೊಳ್ಳಲು ಕೇಂದ್ರವು ಮೋಸದ ವಿಧಾನಗಳ ಮೂಲಕ ಪ್ರಯತ್ನಿಸುವ ಕೇವಲ ಹತೋಟಿಗಾಗಿ ನಡೆಯುವ ಒಂದು ಕಿತ್ತಾಟದ ಫಲಿತಾಂಶವೂ ಅಲ್ಲ. ಈ ಕ್ರಮವು ವಿಶ್ವದ ಇತಿಹಾಸದಲ್ಲಿ ಕಂಡುಬಂದ ಪ್ರತಿಯೊಂದೂ ಫ್ಯಾಸಿಸ್ಟ್ ಆಳ್ವಿಕೆಯ ಮೂಲ ಸಿದ್ಧಾಂತಕ್ಕೇ ಅನುಗುಣವಾಗಿದೆ. ಆದರೆ, ಭಾರತದ ನಿರ್ದಿಷ್ಟ ಪ್ರಕರಣದಲ್ಲಿ, ಸಂಪನ್ಮೂಲಗಳ ಕೇಂದ್ರೀಕರಣದ ಈ ಸಂಗತಿಯನ್ನು “ಸಹಕಾರಿ ಒಕ್ಕೂಟ ತತ್ವ” ಎಂಬ ಒಂದು ಆಕರ್ಷಕ ಪದಪುಂಜದ ಅಡಿಯಲ್ಲಿ ಮರೆಮಾಚುವ ಪ್ರಯತ್ನವನ್ನು ಮಾಡಲಾಗಿದೆ. ಕೇಂದ್ರೀಕರಣವು ಸಾಂಸ್ಥಿಕ ಏರ್ಪಾಟಾಗಿ ಒಂದು ಫ್ಯಾಸಿಸ್ಟ್ ಸಂಘಟನೆಯ ಸಾಮಾನ್ಯ ಲಕ್ಷಣವಾಗಿರುತ್ತದೆ ಮಾತ್ರವಲ್ಲ, ಅದರ ಅಡಿಯಲ್ಲಿ ನಡೆಯುವ ಸರ್ಕಾರಿ ವ್ಯವಸ್ಥೆಯ ಲಕ್ಷಣವೂ ಆಗಿರುತ್ತದೆ. ಏಕೆಂದರೆ, ಇಂತಹ ಆಳ್ವಿಕೆಯು ತನಗೆ ಅಧಿಕಾರ ಚಲಾಯಿಸುವ ಜವಾಬ್ದಾರಿಯನ್ನು ನೀಡಿದ ಜನರ ಚಿಂತನಶೀಲ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ನಂಬಿರುವಂತದ್ದು ಅಲ್ಲ. ಬದಲಿಗೆ, ಅಧಿಕಾರ ಪಡೆದ ನಂತರ, ಅದು ಜನರ ಭಾವನೆಗಳನ್ನು ಕೆರಳಿಸಿ ಅವರನ್ನು ಪದೇ ಪದೇ ಧಾರ್ಮಿಕ-ಕೋಮು ಉನ್ಮಾದದತ್ತ ತಿರುಗಿಸಿ ಲಾಭ ಪಡೆಯುವ ವಿಧಾನದಲ್ಲಿ ನಂಬಿಕೆ ಇಟ್ಟಿದೆ ಮತ್ತು ಅದಕ್ಕಾಗಿಯೇ ಕೆಲವು ಅಲ್ಪಸಂಖ್ಯಾತ ಗುಂಪುಗಳ ಬಗ್ಗೆ ದ್ವೇಷವನ್ನು ಹುಟ್ಟಿಹಾಕುತ್ತದೆ. ಹಾಗಾಗಿ, ಒಂದು ಫ್ಯಾಸಿಸ್ಟ್ ಆಳ್ವಿಕೆಯು ಯಾವಾಗಲೂ ಅಧಿಕಾರ-ಸಂಬಂಧಗಳನ್ನು ತಲೆಕೆಳಗಾಗಿಸುತ್ತದೆ. ಜನಸಾಮಾನ್ಯರಿಗೆ ಉತ್ತರಿಸಬೇಕಾದ ತನ್ನ ಕರ್ತವ್ಯವನ್ನು ನಿರ್ಲಕ್ಷಿಸುತ್ತದೆ ಮತ್ತು “ನಾಯಕ”ನನ್ನು ದೇವತ್ವಕ್ಕೇರಿಸುತ್ತದೆ. ಇದುವೇ ಕಾರಣ, ಫ್ಯಾಸಿಸ್ಟ್ ಆಳ್ವಿಕೆಯಲ್ಲಿ ಸಾಮೂಹಿಕ ನಾಯಕತ್ವವೇ ಇಲ್ಲದಿರಲು. ದೇವತ್ವಕ್ಕೇರಿದ “ನಾಯಕ”ನ ಸಾರ್ವಜನಿಕ ಭಾಷಣಗಳಲ್ಲಿ ಜನರ ಬುದ್ಧಿಮತ್ತೆಯನ್ನು ಗೌರವಿಸುವ ತರ್ಕವಿರುವುದಿಲ್ಲ. ಬದಲಿಗೆ, ಜನರ ಭಾವನೆಗಳನ್ನು ಬಡಿದೆಬ್ಬಿಸುವ ತಂತ್ರಗಾರಿಕೆ ಮತ್ತು ಅದಕ್ಕೆ ತಕ್ಕ ಹಾವ-ಭಾವಗಳಿರುತ್ತವೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಸಂಪನ್ಮೂಲಗಳ ಮೇಲೆ ಕೇಂದ್ರ ಮತ್ತು ರಾಜ್ಯಗಳು ಹೊಂದಿರುವ ಹಕ್ಕುಗಳ ಸಂಘರ್ಷವನ್ನು ತರ್ಕಬದ್ಧವಾಗಿ ಇತ್ಯರ್ಥಪಡಿಸುವುದು ಸಾಮಾನ್ಯವಾಗಿ ಫ್ಯಾಸಿಸ್ಟ್ ಆಡಳಿತದ ರೀತಿ-ನೀತಿಯಲ್ಲ. ಬದಲಿಗೆ, ಅದು ಒಂದಲ್ಲಾ ಒಂದು ನೆಪದ ಮೇಲೆ ಸಂಪನ್ಮೂಲಗಳನ್ನು ಕೇಂದ್ರೀಕರಿಸುತ್ತದೆ. ಮತ್ತು, ಕೇಂದ್ರ ಸರ್ಕಾರವನ್ನು ಒಂದು ಫ್ಯಾಸಿಸ್ಟ್ ಸಂಘಟನೆಯು ನಡೆಸುತ್ತಿರುವಾಗ, ಅದರ ಸಿದ್ಧಾಂತವನ್ನು ಒಪ್ಪದ ವಿರೋಧ ಪಕ್ಷಗಳು ರಾಜ್ಯಗಳಲ್ಲಿ ಸರ್ಕಾರಗಳನ್ನು ನಡೆಸುತ್ತಿರುವಾಗ, ಸಂಪನ್ಮೂಲಗಳ (ಮತ್ತು ಅಧಿಕಾರದ) ಕೇಂದ್ರೀಕರಣದ ಈ ಸ್ವಾಭಾವಿಕ ಪ್ರವೃತ್ತಿಯು ಪ್ರತಿಪಕ್ಷಗಳ ಆಡಳಿತದ ರಾಜ್ಯಗಳನ್ನು ಹಿಂಡುವ ಕೇಂದ್ರದ ಬಯಕೆಗೆ ಮತ್ತಷ್ಟು ಪೂರಕವಾಗಿದೆ.
ಇದನ್ನು ಓದಿ: ಅರ್ಥವ್ಯವಸ್ಥೆಯ ಮೂಲ ಸಮಸ್ಯೆಯನ್ನೇ ನಿರ್ಲಕ್ಷಿಸಿದ 2023-24ರ ಬಜೆಟ್ – ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವಲ್ಲಿ ವಿಫಲತೆ
ಏಕಸ್ವಾಮ್ಯಗಳತ್ತ ತಿರುಗಿಸಲಿಕ್ಕಾಗಿ
ಸಂಪನ್ಮೂಲಗಳ ಮತ್ತು ಅಧಿಕಾರದ ಈ ರೀತಿಯ ಕೇಂದ್ರೀಕರಣಕ್ಕೆ ಮತ್ತೊಂದು ಪ್ರಬಲ ಕಾರಣವೂ ಇದೆ. ಫ್ಯಾಸಿಸ್ಟ್ ಆಳ್ವಿಕೆಯು, ಆಡಳಿತ ಮತ್ತು ಆಡಳಿತದ ಅನುಗ್ರಹಕ್ಕೆ ಪಾತ್ರವಾದ ಕೆಲವು ಏಕಸ್ವಾಮ್ಯ ಗುಂಪುಗಳ ನಡುವೆ ನಿಕಟ ಸಂಬಂಧವನ್ನು ಒಳಗೊಂಡಿರುತ್ತದೆ. ಭಾರತದ ಮಟ್ಟಿಗೆ ಇದು ನಿಜ ಎಂಬುದನ್ನು ಇತ್ತೀಚೆಗೆ ಬಯಲಾದ ಸರ್ಕಾರದ ನೆಚ್ಚಿನ ಏಕಸ್ವಾಮ್ಯ ಸಮೂಹವಾದ ಅದಾನಿ ಕಂಪೆನಿಗಳ ಆರ್ಥಿಕ-ದುಷ್ಕೃತ್ಯಗಳ ಬಗ್ಗೆ ಸರ್ಕಾರದ ಸಂಪೂರ್ಣ ಮೌನ ಮತ್ತು ಯಾವುದೇ ಕ್ರಮ ಕೈಗೊಳ್ಳಲು ಅದರ ನಿರಾಕರಣೆ ಇವು ಸಾಬೀತುಪಡಿಸುತ್ತವೆ. ಸಂಪನ್ಮೂಲಗಳ ಕೇಂದ್ರೀಕರಣವು ಸಂಪನ್ಮೂಲಗಳನ್ನು ಜನರ ಅಗತ್ಯಗಳಿಗಾಗಿ ಬಳಸುವುದರ ಬದಲು ನೇರವಾಗಿ ಅಥವಾ ಪರೋಕ್ಷವಾಗಿ ಏಕಸ್ವಾಮ್ಯ ಗುಂಪಿಗೆ/ಗುಂಪುಗಳಿಗೆ ಪ್ರಯೋಜನವಾಗುವ ರೀತಿಯಲ್ಲಿ ತಿರುಗಿಸುವ ಒಂದು ಮಾರ್ಗವೂ ಆಗಿದೆ.
ಸಂಪನ್ಮೂಲಗಳನ್ನು ಏಕಸ್ವಾಮ್ಯ ಗುಂಪಿಗೆ ಪ್ರಯೋಜನವಾಗುವ ರೀತಿಯಲ್ಲಿ ತಿರುಗಿಸುವುದಕ್ಕೆ ಈ ವರ್ಷದ ಬಜೆಟ್ ಒಂದು ಉತ್ತಮ ಉದಾಹರಣೆಯಾಗಿದೆ. ಕೋವಿಡ್ ಸಾಂಕ್ರಾಮಿಕದಿಂದ “ಚೇತರಿಕೆ” ಹೊಂದಿದೆ ಎಂದು ಹೇಳಲಾದ ಅರ್ಥವ್ಯವಸ್ಥೆಯಲ್ಲಿ ಖಾಸಗಿ ಬಳಕೆಯು ತುಲನಾತ್ಮಕವಾಗಿ ನಿಗ್ರಹಿಸಲ್ಪಟ್ಟಿದೆ ಮತ್ತು ಜನರ ಸಂಕಷ್ಟಗಳನ್ನು ಶಾಶ್ವತಗೊಳಿಸಲಾಗಿದೆ. ಈ ಸಂಕಷ್ಟಗಳನ್ನು ನಿವಾರಿಸುವ ಯಾವ ಸೂಚನೆಯೂ ಈ ಬಜೆಟ್‌ನಲ್ಲಿ ದೊರಕುವುದಿಲ್ಲ. ಆದರೆ ಇನ್ನೊಂದು ಕಡೆಯಲ್ಲಿ, ಕೇಂದ್ರ ಸರ್ಕಾರವು ತನ್ನ ಒಟ್ಟಾರೆ ವೆಚ್ಚಗಳನ್ನು ಪ್ರಸಕ್ತ ಬೆಲೆಗಳಲ್ಲಿ ಜಿಡಿಪಿಯ ಬೆಳವಣಿಗೆಯ ದರಕ್ಕಿಂತಲೂ ಕೆಳಗೆ ಇರಿಸಿಕೊಂಡು, ಮೂಲಸೌಕರ್ಯ ಯೋಜನೆಗಳ ಮೇಲೆ ತನ್ನ ಬಂಡವಾಳ ವೆಚ್ಚಗಳನ್ನು ಹೆಚ್ಚಿಸಿದೆ. ಈ ಮೂಲಸೌಕರ್ಯ ಯೋಜನೆಗಳಲ್ಲಿ ಹೆಚ್ಚಿನವು ಅದಾನಿ ಉದ್ದಿಮೆ-ಸಮೂಹದ ಹಿತ ಹೊಂದಿವೆ. ಹಾಗಾಗಿ, ಅದಾನಿ ಉದ್ದಿಮೆ-ಸಮೂಹವು ಈ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಸರ್ಕಾರದೊಂದಿಗೆ ಸಹಯೋಗ ಹೊಂದಿರುತ್ತವೆ ಅಥವಾ ಈ ಯೋಜನೆಗಳಿಗೆ ಬೇಕಾಗುವ ನಾನಾ ರೀತಿಯ ಸರಕು-ಸಾಮಗ್ರಿಗಳನ್ನು ಒದಗಿಸುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಕೇಂದ್ರವು ತನ್ನ ಬಂಡವಾಳ ವೆಚ್ಚಗಳನ್ನು ಹೆಚ್ಚಿಸುವ ಆಲೋಚನೆಯ ಹಿಂದಿರುವ ಉದ್ದೇಶವು ಅದಾನಿ ಉದ್ದಿಮೆ-ಸಮೂಹಕ್ಕೆ ಮಾರುಕಟ್ಟೆಯನ್ನು ಒದಗಿಸುವುದೇ ಆಗಿದೆ.
ಇದನ್ನು ಓದಿ: ಹಿಂಡನ್ ಬರ್ಗ್ ವರದಿ : ಅದಾನಿ ಸಮೂಹದ ಅಕ್ರಮ, ವಂಚನೆಗಳ ಚಿತ್ರ
ಸಾರ್ವಜನಿಕ ಸಂಪನ್ಮೂಲಗಳ ಕೇಂದ್ರೀಕರಣದ ಪ್ರವೃತ್ತಿಯು ಫ್ಯಾಸಿಸ್ಟ್ ಆಳ್ವಿಕೆಗೆ ಮಾತ್ರ ಸೀಮಿತವಲ್ಲ. ಈ ವಿದ್ಯಮಾನವು, ನಾವು ಮೇಲೆ ಚರ್ಚಿಸಿದ ಅದೇ ಕಾರಣಗಳಿಗಾಗಿ ಏಕಸ್ವಾಮ್ಯ ಬಂಡವಾಳಶಾಹಿಯ ಸ್ವರೂಪವನ್ನು ಬಹುವಾಗಿ ನಿರೂಪಿಸುತ್ತದೆ. ಅಂದರೆ, ಸಾರ್ವಜನಿಕ ಸಂಪನ್ಮೂಲಗಳನ್ನು ದುಡಿಯುವ ಜನರಿಗೆ ಪರಿಹಾರ ನೀಡಲು “ವ್ಯರ್ಥ” ಮಾಡುವ ಬದಲು ಏಕಸ್ವಾಮ್ಯ ಉದ್ದಿಮೆಗಳಿಗೆ ಮಾರುಕಟ್ಟೆಯನ್ನು ಒದಗಿಸಲು ಬಳಸಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳುವ ಬಯಕೆ! ಫ್ಯಾಸಿಸ್ಟ್ ಆಳ್ವಿಕೆಯಲ್ಲಿ ಈ ಪ್ರವೃತ್ತಿಯು ಹೆಚ್ಚು ಬಲಗೊಳ್ಳುತ್ತದೆ: ಜನರ ಲೌಕಿಕ ಜೀವನ ಮಟ್ಟವನ್ನು ಸುಧಾರಿಸುವ ಅಗತ್ಯವಿಲ್ಲ ಎಂದು ಪರಿಗಣಿಸಿ ಅವರನ್ನು ಮತೀಯ ಕೋಮುವಾದದಲ್ಲಿ ತೊಡಗಿಸಿ, ಸಂಪನ್ಮೂಲಗಳನ್ನು ಜೋಪಾನವಾಗಿ ಆರಿಸಿದ ಕೆಲವು ಏಕಸ್ವಾಮ್ಯ ಉದ್ದಿಮೆಗಳಿಗೆ ಪ್ರಯೋಜನವಾಗುವ ರೀತಿಯಲ್ಲಿ ಬಳಸಲಾಗುತ್ತದೆ. ಮೋದಿ ಆಡಳಿತವು ಈ ರೀತಿಯ ಕೇಂದ್ರೀಕರಣವನ್ನು ಅದರ ತುತ್ತತುದಿಗೆ ಕೊಂಡೊಯ್ದಿರುವುದು ಆಶ್ಚರ್ಯವೇನಲ್ಲ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ