ಅನು: ಸಂಧ್ಯಾ ಸೊರಬ
ಅದೆಷ್ಟೋ ದೃಷ್ಟಿಹೀನರು ಸಂಗೀತಗಾರರು, ಹಾಡುಗಾರರು ಅಲ್ಲಲ್ಲಿ ಆಗಿರುವುದನ್ನು ನಾವು ಬಹುತೇಕ ಕಾಣುತ್ತೇವೆ. ಇನ್ನೂ ಕೆಲವೆಡೆ ಸಂಗೀತದ ಶಿಕ್ಷಕರೂ ಇವರಾಗಿದ್ದಾರೆ. ಇತ್ತೀಚೆಗೆ ಹಿಂದಿಯ ಇಂಡಿಯನ್ ಐಡಿಯಲ್‌ನಲ್ಲಿ “ ಮೆನುಕಾ” ಕೂಡ ತನಗೆ ದೃಷ್ಟಿಯೇ ಇಲ್ಲ ಎನ್ನುವುದನ್ನು ಕೊರತೆಯನ್ನಾಗಿ ಭಾವಿಸದೇ ಎಲ್ಲಾ ಜಡ್ಜಸ್, ಜ್ಯೂರಿಗಳ ಮನವನ್ನಲ್ಲದೇ, ದೇಶದ ಬಹುತೇಕ ಸಂಗೀತಪ್ರಿಯರ ಫೇವರೇಟ್ ಗಾಯಕಿಯಾಗಿದ್ದಳು. ಬಾಲಿವುಡ್‌ನಲ್ಲಿ ಅಲ್ಲಲ್ಲಿ ಈಗ ಆಕೆಯ ಹಾಡುಗಳ ರಿಕಾರ್ಡಿಂಗ್‌ಗೂ ಕೆಲವರೂ ಅವಕಾಶ ಕಲ್ಪಿಸಿದ್ದು ಇದೆ.ಬ್ರೇನ್ ಲಿಪಿಯ ಮೂಲಕ ಕೆಲವರೂ ಸಾಧಕರೂ ಆಗಿದ್ದಾರೆ. ಎಲ್ಲರ ಶಹಬ್ಬಾಸ್‌ಗಿರಿಗೂ ಕಾರಣರಾಗಿ ಸ್ಫೂರ್ತಿದಾಯಕರಾಗಿದ್ದಾರೆಂಬುದಿಲ್ಲಿ ಗಮನಾರ್ಹ.ಅಂಧರಿಕೆಗೆ ಸಮಾಜದಲ್ಲಿ ಸಮಾನ ಅವಕಾಶ ಬೇಕೇ ವಿನಃ ಅನುಕಂಪವಲ್ಲ. ಸಾಮಾಜಿಕ ವಿಷಯದ ಬಗ್ಗೆ ಅತ್ಯಂತ ಗಂಭೀರತೆ ಮತ್ತು ಸಭ್ಯತೆಯಿಂದ ನಿರ್ಮಿಸಲಾದ ಈ ಚಿತ್ರ ನಿಜಕ್ಕೂ ಸ್ಫೂರ್ತಿಯನ್ನು ನೀಡುತ್ತದೆ ಎಂದರೆ ಬಹುಶಃ ತಪ್ಪಾಗಲಾರದು.
ಅದೀರಲೀ, ಇಲ್ಲಿ ನಾವು ಹೇಳ ಹೊರಟಿರೋದು ಇಂತಹದ್ದೇ ಅಂಧರೊಬ್ಬರ ಸಂಘರ್ಷದ ಕಥೆಯಿದು. 2007ರ ಮೊದಲು ಆಂಧ್ರಪ್ರದೇಶದಲ್ಲಿ ಅಂಧರಿಗೆ ವಿಜ್ಞಾನ ಮತ್ತು ಗಣಿತವನ್ನು ಅಧ್ಯಯನ ಮಾಡಲು ಅವಕಾಶವಿರಲಿಲ್ಲ. ಈ ವಿದ್ಯಾರ್ಥಿಗಳು ಕಲೆ, ಭಾಷೆ, ಸಾಹಿತ್ಯ ಮತ್ತು ಸಮಾಜ ವಿಜ್ಞಾನಗಳನ್ನು ಮಾತ್ರ ಅಧ್ಯಯನ ಮಾಡಬಹುದಾಗಿತ್ತು. ಆದರೆ ಇದರ ವಿರುದ್ಧ ಶ್ರೀಕಾಂತ್ ಬೊಳ್ಳಾ ಎಂಬುವರು ಆಂಧ್ರಪ್ರದೇಶದ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಸತತ ಆರು ತಿಂಗಳ ಕಾಲ ಈ ಕಾನೂನಿನ ಹೋರಾಟ ನಡೆದು, ಅಂತಿಮವಾಗಿ ನ್ಯಾಯಾಲಯವು ಆಂಧ್ರಪ್ರದೇಶ ರಾಜ್ಯ ಮಂಡಳಿಯ ಎಲ್ಲಾ ಶಾಲೆಗಳಲ್ಲಿ ಅಂಧ ವಿದ್ಯಾರ್ಥಿಗಳು ವಿಜ್ಞಾನ ಮತ್ತು ಗಣಿತವನ್ನು ಅಧ್ಯಯನ ಮಾಡಬಹುದು ಎಂದು ತೀರ್ಪು ನೀಡಿತು.
ಕಳೆದ ಮೇ 10 ರ ಶುಕ್ರವಾರ ಥಿಯೇಟರ್‌ಗೆ ಅಪ್ಪಳಿಸಿರುವ ನಟ ರಾಜ್‌ಕುಮಾರ್ ರಾವ್ ಅವರ ಹೊಸ ಚಿತ್ರ ‘ಶ್ರೀಕಾಂತ್’ ವಾಸ್ತವವಾಗಿ ಕೈಗಾರಿಕೋದ್ಯಮಿ ಶ್ರೀಕಾಂತ್ ಬೊಳ್ಳ ಅವರ ಕಥೆಯಾಗಿದೆ. ತಮ್ಮ ಕಣ್ಣುಗಳಿಂದ ಜಗತ್ತನ್ನು ನೋಡಲು ಸಾಧ್ಯವಾಗದ ಅವರು, ಕಣ್ಣಿಲ್ಲದೆಯೋ ದೊಡ್ಡದೊಡ್ಡ ಕನಸುಗಳನ್ನು ಕಂಡವರು. ಕನಸು ಕಾಣುವುದಷ್ಟೇ ಅಲ್ಲ, ಅದನ್ನು ನನಸನ್ನಾಗಿಸಿಕೊಂಡವರು. 90ರ ದಶಕದಲ್ಲಿ ಆಂಧ್ರಪ್ರದೇಶದ ಮಚಲಿಪಟ್ಟಣಂನಲ್ಲಿ ಬಡ ಮತ್ತು ಅವಿದ್ಯಾವಂತ ಕುಟುಂಬದಲ್ಲಿ ಜನಿಸಿದ ಶ್ರೀಕಾಂತ್ ಬೊಳ್ಳ, ಅಂಧತ್ವದ ಸವಾಲುಗಳನ್ನು ಎದುರಿಸಿ ಸುಮಾರು 500 ಕೋಟಿ ರೂ. ಈ ಕಂಪನಿಯ ಮೂಲಕ, ಶ್ರೀಕಾಂತ್ ಅಂಗವಿಕಲರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದವರು. ಶ್ರೀಕಾಂತರ ಈ ಪ್ರಯಾಣವು ಕಷ್ಟಕರವಾಗಿದ್ದರೂ ಯಾವುದಕ್ಕೂ ಜಗ್ಗದೇ ಬಗ್ಗದೇ ನೊಂದದೇ ಎದೆಗಟ್ಟಿಮಾಡಿಕೊಂಡು ಅದೆಷ್ಟೋ ಜನರಿಗೆ ಸ್ಪೂರ್ತಿದಾಯಕ ಮತ್ತು ಹೆಮ್ಮೆದಾಯಕರಾದವರು.
ಶ್ರೀಕಾಂತ್ ಹುಟ್ಟಿನಿಂದಲೇ ಚಿತ್ರದ ಕಥೆ ಆರಂಭವಾಗುವ ಈ ಕಥೆ, ಮಗ ಹುಟ್ಟಿದ ಸಂತಸಕ್ಕಾಗಿ ತಂದೆ ಕ್ರಿಕೇಟಿಗ ಶ್ರೀಕಾಂತ್ ಹೆಸರನ್ನ ಇಡುತ್ತಾರೆ. ಆದ್ರೆ, ಮಗನಿಗೆ ಕಣ್ಣು ಕಾಣಿಸದು ಎಂದು ತಿಳಿದ ಕ್ಷಣ ಅವರ ಹೃದಯವೇ ಒಡೆದುಹೋಗುತ್ತದೆ. ಹುಟ್ಟುಗುರುಡ ಶ್ರೀಕಾಂತ್‌ನನ್ನ ಕೊಂದುಬಿಡಿ ಎಂದು ತಂದೆಗೆ ಬಹಳಷ್ಟು ಜನ ಸಲಹೆ ನೀಡ್ತಾರಾದರೂ ತಾಯಿ ಹೃದಯ ಶ್ರೀಕಾಂತನ ರಕ್ಷಣೆ ಮಾಡುತ್ತದೆ.
ನಾನು ಓಡಿಹೋಗೋದಿಲ್ಲ, ಹೋರಾಡುತ್ತೇನೆ :-
ನಾನು ಈ ಸಮಾಜಕ್ಕೆ ಅಂಜಿ, ಅವರಾಡು ಮಾತು ಕೇಳಿ ಎಲ್ಲಿಯೂ ಓಡಿಹೋಗೋದಿಲ್ಲ, ಇದರ ವಿರುದ್ಧವೇ ಹೋರಾಡುತ್ತೇನೆ ಅನ್ನುವ ಶ್ರೀಕಾಂತ್‌ನಿಗೆ ಬಾಲ್ಯದಿಂದಲೂ ಓದಿನ ಮೇಲೆ ಶ್ರದ್ಧೆ ಮತ್ತು ಪ್ರೀತಿ. ಆದರೆ, ಆಗಾಗ್ಗೆ ಸಹಪಾಠಿಗಳಿಂದ ಅಪಾಹಸ್ಯಕ್ಕೆ ಬಲಿಯಾಗುವ ಶ್ರೀಕಾಂತ್, ಅವರ ಮಾತುಗಳಿಗೆ ಟೀಕೆ ಟಿಪ್ಪಣಿಗಳಿಗೆ ಕಿವಿಗೊಡದೇ ಓಡಿ ಹೋಗದೇ ಎಲ್ಲವನ್ನೂ ಕಷ್ಟಗಳನ್ನೂ ಧೈರ್ಯವಾಗಿಯೇ ಎದುರಿಸುತ್ತಾರೆ. “ಓಡಿ ಹೋಗಲ್ಲ, ಬರೀ ಜಗಳ ಮಾತ್ರ” ಅನ್ನೋ ಡೈಲಾಗ್ ಈ ಚಿತ್ರದಲ್ಲಿದೆ,
ಆಗ ಶ್ರೀಕಾಂತನ ವಯಸು 8 ವರ್ಷ. ತನ್ನ ಮನೆಯಿಂದ 400 ಕಿಲೋಮೀಟರ್ ದೂರದ ಹೈದರಾಬಾದ್ ನಗರದಲ್ಲಿರೋ ಅಂಧರಿಗಾಗಿರೋ ಬೋರ್ಡಿಂಗ್ ಶಾಲೆಗೆ ಸೇರಲ್ಪಟ್ಟು, ಓದಷ್ಟೇ ಅಲ್ಲ, ಆಟಗಳಲ್ಲಿಯೂ ಮನಸು ಮಾಡುವ ಹುಡುಗನಾಗುತ್ತಾರೆ. ಈಜು, ಚೆಸ್, ಕ್ರಿಕೇಟ್‌ನಲ್ಲಿ ಸೈ ಎನಿಸಿಕೊಳ್ಳುತ್ತಾರೆ. ಕ್ರೀಡೆಗಳತ್ತ ಇಚ್ಛೆಯಿದ್ದರೂ ಆಧ್ಯತೆ ಮಾತ್ರ ಓದಾಗಿರುತ್ತದೆ. ಹೀಗಾಗಿ ತಮ್ಮ ವೃತ್ತಿಜೀವನದ ಮೇಲೆ ಮನಸನ್ನ ಕೇಂದ್ರೀಕರಿಸಲು ಕ್ರೀಡೆಯನ್ನು ಮಧ್ಯದಲ್ಲಿಯೇ ಶ್ರೀಕಾಂತ್ ಬಿಡಬೇಕಾಗುತ್ತದೆ. ಆದರೆ, 10ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ್ದರೂ ವಿಜ್ಞಾನಕ್ಕೆ ಪ್ರವೇಶ ಪಡೆಯದೇ ಇದ್ದಾಗ ಶ್ರೀಕಾಂತ್ ಕನಸಿಗೆ ನಿಜವಾದ ಹೊಡೆತ ಬೀಳುತ್ತೆ.
ಈ ಅಂಧ ಶ್ರೀಕಾಂತ್, ವಿಜ್ಞಾನ ಮತ್ತು ಗಣಿತವನ್ನು ಓದೋಕೆ ಕೆಲ ಶಾಲೆಗಳು ಅನರ್ಹ ಎಂದು ಘೋಷಿಸಿಬಿಡುತ್ತವೆ. ಹಿಂಜರಿಯದ ಶ್ರೀಕಾಂತ್ ಹೋರಾಟವನ್ನ ಮಾಡಲು ಮುಂದಾಗುತ್ತಾರೆ. ಅದೂ ಇಡೀ ಶಿಕ್ಷಣ ವ್ಯವಸ್ಥೆಯ ವಿರುದ್ಧ
ತನ್ನ ಶಿಕ್ಷಕರ ಸಹಾಯದಿಂದ, ಶ್ರೀಕಾಂತ್ ಆಂಧ್ರಪ್ರದೇಶದ ಹೈಕೋರ್ಟ್‌ನಲ್ಲಿ ಅಂಧ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನವನ್ನು ಅಧ್ಯಯನ ಮಾಡೋಕೆ ಶಿಕ್ಷಣ ಕಾನೂನನ್ನು ಬದಲಾಯಿಸಬೇಕಂತ ಮೊಕದ್ದಮೆ ಹೂಡುತ್ತಾನೆ. ಆರು ತಿಂಗಳ ಬಳಿಕ ಗೆಲುವು ಶ್ರೀಕಾಂತನದ್ದಾಗುತ್ತದೆ ,
ತನಗಾಗಿ ಮಾತ್ರವಲ್ಲದೆ ಎಲ್ಲಾ ದೃಷ್ಟಿಹೀನ ಮಕ್ಕಳಿಗಾಗಿ.ಆದರೆ, ಈ ಗೆಲವು ಬರೀ ಶ್ರೀಕಾಂತನದ್ದಷ್ಟೇ ಆಗಿರದೇ ತನ್ನಂತೆಯೇ ಇರುವ ವಿದ್ಯಾರ್ಥಿಗಳ ಹೋರಾಟವಾಗಿರುತ್ತೆ. ಈ ಹೋರಾಟ ಬರೀ ಇಷ್ಟಕ್ಕೆ ಮುಗಿಯೋದಿಲ್ಲ. 12ನೇ ತರಗತಿ ನಂತರ ದೇಶದ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಐಐಟಿ) ಪ್ರವೇಶಕ್ಕೆ ನಿರಾಸೆಯ ಅನುಭವವಾಗುತ್ತೆ. ಇಲ್ಲಿಯೂ ಅದೇ ಮಾತು ದೃಷ್ಟಿಹೀನರಿಗಿಲ್ಲಿ ಅವಕಾಶವಿಲ್ಲ ಅನ್ನೋದು. ಆಗ ಇಂತಹ ವ್ಯವಸ್ಥೆಯ ವಿರುದ್ಧ ಹೋರಾಡಲ್ಲ ಎಂದು ಮನಸು ಮಾಡಿ, ವ್ಯವಸ್ಥೆಯನ್ನು ಸುಧಾರಿಸುವುದು ತನ್ನ ಕೆಲಸವಲ್ಲ, ಐಐಟಿಗೆ ನನ್ನ ಅಗತ್ಯವಿಲ್ಲವೆಂದಮೇಲೆ ನನಗೂ ಐಐಟಿ ಬೇಕಾಗಿಲ್ಲ ಎಂದು ಶಿಕ್ಷಕರಿಗೆ ಹೇಳೋ ಮಾತಿದೆಯಲ್ಲ ನಿಜಕ್ಕೂ ಛಲದಂಕಮಲ್ಲನ ಮಾತಾಗಿರುತ್ತವೆ.
ಅಂದಹಾಗೆ, ಶೇ.98 ಅಂಕ ಗಳಿಸಿದ್ದರೂ ಶೈಕ್ಷಣಿಕ ಗುಣಮಟ್ಟ ಹೊಂದದ ಕಾರಣ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗದ ಶ್ರೀಕಾಂತ್‌ಗೆ ಅಮೆರಿಕದ ಮಸಾಚುಸೆಟ್ಸ್‌ನ ಕೇಂಬ್ರಿಡ್ಜ್‌ನ ಎಂಐಟಿ ಸೇರಿದಂತೆ ಇನ್ನೂ ಮೂರು ವಿಶ್ವವಿದ್ಯಾಲಯಗಳು ಪ್ರವೇಶ ನೀಡಿರೋದು ಒಂದು ವಿಪರ್ಯಾಸವೇ ಸರಿ. ಆಗ ಶ್ರೀಕಾಂತರ ಸಂಘರ್ಷದ ಹಾದಿಗೆ ಮತ್ತೊಂದು ಸಾಧನೆಯೊಂದು ಸೇರ್ಪಡೆಯಾಗುತ್ತೆ. ಅದು ಎಂಐಟಿಯ ಮೊದಲ ಅಂಧ ಅಂತಾರಾಷ್ಟ್ರೀಯ ವಿದ್ಯಾರ್ಥಿ ಶ್ರೀಕಾಂತ್ ಅನ್ನೋದು. ಆದರೆ, ಶ್ರೀಕಾಂತ್ ಅಮೆರಿಕದಲ್ಲಿ ಕೆಲಸ ಮತ್ತು ಐಷಾರಾಮಿ ಜೀವನವನ್ನು ತೊರೆದು ಸ್ವದೇಶಕ್ಕೆ ಮರಳೋದೇ ಬದುಕಿನ ಮತ್ತೊಂದು ಸಂಘರ್ಷದ ಹಾದಿಯ ಮಹತ್ತರ ತಿರುವು.
2012 ರಲ್ಲಿ ಹೈದರಾಬಾದ್‌ಗೆ ಶ್ರೀಕಾಂತ್ ಹಿಂದಿರುಗಿ ತನ್ನ ಶಿಕ್ಷಕರಿಗೆ ವಿಕಲಚೇತನರಿಗೆ ಉದ್ಯೋಗಸೃಷ್ಟಿಸುವ ಯೋಜನೆಯನ್ನ ಸಿದ್ಧಪಡಿಸುತ್ತಾರೆ. ಆಗ ‘ಬೋಲೆಂಟ್ ಇಂಡಸ್ಟ್ರೀಸ್’ ಹುಟ್ಟಿಕೊಳ್ಳತ್ತೆ. ಇದು ಪರಿಸರ ಸ್ನೇಹಿ ಪ್ಯಾಕೇಜಿಂಗ್ ಕಂಪನಿ/. ಚಿತ್ರದ ಪ್ರಕಾರ, ಅದರ ಮೊದಲ ಹೂಡಿಕೆದಾರರು ಬೇರೆ ಯಾರೂ ಅಲ್ಲ, ದೇಶದ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ. ಆದರೆ, ಇದರಲ್ಲಿ ಎಷ್ಟು ಸತ್ಯವಿದೆ ಎಂಬ ಮಾಹಿತಿ ಸಾರ್ವಜನಿಕವಾಗಿ ಲಭ್ಯವಾಗಿಲ್ಲ.
ಶ್ರೀಕಾಂತ್ ಮತ್ತು ಕಲಾಂ ಸಾಹೇಬ್ ನಡುವೆ ಖಂಡಿತವಾಗಿಯೂ ಸಂಪರ್ಕವಿತ್ತು ಅನ್ನೋದು ನಿಜ. ಶ್ರೀಕಾಂತ\ತ್, 2005 ರಲ್ಲಿ ಎಪಿಜೆ ಅಬ್ದುಲ್ ಕಲಾಂ ಅವರ ‘ಲೀಡ್ ಇಂಡಿಯಾ ಮೂವ್‌ಮೆಂಟ್’ ಕಾರ್ಯಕ್ರಮದ ಭಾಗವಾಗಿದ್ದರು, ಅಲ್ಲಿ ಅವರು ದೇಶದ ಮೊದಲ ದೃಷ್ಟಿಹೀನ ರಾಷ್ಟ್ರಪತಿಯಾಗುವ ಬಗ್ಗೆ ಕಲಾಂ ಸಾಹೇಬ್‌ರೊಂದಿಗೆ ಮಾತನಾಡಿದ್ದರು. ಇಲ್ಲಿ ನೀವು ನಿಜವಾದ ಕಲಾಂ ಸಾಹೇಬ್ ಅವರ ತುಣುಕುಗಳು ನೋಡಸಿಗುತ್ತವೆ. ಈ ದೃಶ್ಯಗಳು ಮನಸಲ್ಲಿ ಭಾವನೆಗಳಿಗಿಂತ ಹೆಚ್ಚಿನ ಉತ್ಸಾಹವನ್ನು ತುಂಬುತ್ವೆ.
ಸುಮಾರು 2 ಗಂಟೆ 2 ನಿಮಿಷಗಳ ಈ ಬಯೋಪಿಕ್‌ನಲ್ಲಿ ಸಮಾಜದ ಕೆಲವು ಭಾಗಗಳ ವಿರೋಧ ಅಪಹಾಸ್ಯವನ್ನು ಕಾಣಬಹುದು. ಸರ್ಕಾರಿ ವ್ಯವಸ್ಥೆಯಿಂದ ಹಿಡಿದು ಸಾಮಾನ್ಯ ಜನರ ಅಭಿಪ್ರಾಯಗಳವರೆಗೆ ಎಲ್ಲೆಲ್ಲೂ ವಿಕಲಚೇತನರು ಎದುರಿಸಬೇಕಾದ ಸವಾಲುಗಳನ್ನು ಚಿತ್ರ ಅದ್ಭುತವಾಗಿ ಹಿಡಿದಿಟ್ಟಿದೆ.
ನಿರ್ದೇಶಕ ತುಷಾರ್ ಹಿರಾನಂದಾನಿ, ಸಾಮಾಜಿಕ ಸಮಸ್ಯೆಯನ್ನು ಅತ್ಯಂತ ಗಂಭೀರತೆ ಮತ್ತು ಸಭ್ಯತೆಯನ್ನು ಚಿತ್ರದಲ್ಲಿ ಎತ್ತಿಹಿಡಿದಿದ್ದಾರೆ . ಚಿತ್ರ ನೋಡಿದ ನಂತರ, ದೃಷ್ಟಿಹೀನರ ವಿಕಲಚೇತನರ ಬಗ್ಗೆ ಅನುಕಂಪ ಮೂಡೋದಕ್ಕಿಂತ ಸ್ಫೂರ್ತಿ, ಛಲ ಮೂಡುತ್ತದೆ ಎಂದರೆ ತಪ್ಪಾಗಲಾರದು.
ಇದಲ್ಲದೇ ರಾಜಕುಮಾರ್ ರಾವ್ ನಟನೆ ಮನ ಗೆಲ್ಲದೇ ಇರದು. ದೇವಿಕಾ ಟೀಚರ್ ಪಾತ್ರದಲ್ಲಿ ಜ್ಯೋತಿಕಾ, ಅವರ ಸಂಗಾತಿಯಾಗಿ ಅಲೆಯ ಎಫ್ ಮತ್ತು ಸ್ನೇಹಿತ ಮತ್ತು ಹೂಡಿಕೆದಾರನ ಪಾತ್ರದಲ್ಲಿ ಶರದ್ ಕೇಳ್ಕರ್ ಕೂಡ ಅದ್ಭುತವಾಗಿ ಕಾಣಸಿಗುತ್ತಾರೆ.
ಚಿತ್ರದ ದ್ವಿತೀಯಾರ್ಧದಲ್ಲಿ ಸ್ವಲ್ಪ ಸಡಿಲವಾಗಿ ಮತ್ತು ಎಳೆಯಲ್ಪಟ್ಟಂತೆ ಕಾಣುತ್ತದೆಯಾದರೂ ಚಿತ್ರದ ಕೊನೆಯಲ್ಲಿ ಆಹ್ಲಾದಕರ ಭಾವನೆಯನ್ನು ಸೃಷ್ಟಿಸಿಬಿಡುತ್ತೆ. ಇನ್ನು ಹಾಡುಗಳ ಬಗ್ಗೆ ಹೇಳುವುದಾದರೆ, ‘ಕಯಾಮತ್ ಸೇ ಖಯಾಮತ್’ ಚಿತ್ರದ ‘ಪಾಪಾ ಕೆಹತೇ ಹೇ ಬಡಾ ನಾಮ್ ಕರೇಗಾ’ ಹಾಡುಗಳ ಮರುಸೃಷ್ಟಿ ಇಡೀ ಚಿತ್ರಕ್ಕೆ ಸಂಪೂರ್ಣವಾಗಿ ಹೊಂದಿಕೆಯಾತ್ತೆ.