‘ದ್ವೇಷ ಭಾಷಣ’ದ ದೆಹಲಿ ಪೊಲೀಸರ ವರದಿಗೆ ಸುಪ್ರೀಂ ಅಸಮಾಧಾನ; ಹೊಸ ವರದಿ ಸಲ್ಲಿಕೆಗೆ ಸೂಚನೆ

ನವದೆಹಲಿ: ಕಳೆದ ಡಿಸೆಂಬರ್‌ನಲ್ಲಿ ಧರ್ಮ ಸಂಸದ್‌ ಕಾರ್ಯಕ್ರಮದ ಭಾಷಣವು ʻʻದ್ವೇಷ ಭಾಷಣʼʼ ವಲ್ಲ ಎಂದು ದೆಹಲಿ ಪೊಲೀಸರು ಸಲ್ಲಿಸಿದ್ದ ಅಫಿಡವಿಟ್‌ ಬಗ್ಗೆ ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

ದೆಹಲಿಯಲ್ಲಿ ನಡೆದ ಹಿಂದೂ ಯುವ ವಾಹಿನಿ ಕಾರ್ಯಕ್ರಮವೊಂದರಲ್ಲಿ ಹಿಂದೂ ರಾಷ್ಟ್ರಕ್ಕಾಗಿ ಕರೆ ನೀಡಿದ ಭಾಷಣವು ʻʻದ್ವೇಷ ಭಾಷಣವಲ್ಲʼʼ ಎಂದು ದೆಹಲಿ ಪೊಲೀಸರು ಕಳೆದ ವಾರ ಸುಪ್ರೀಂ ಕೋರ್ಟಿಗೆ ತಿಳಿಸಿದ್ದರು. ದೆಹಲಿ ಪೊಲೀಸರ ಹೇಳಿಕೆಗೆ ಸುಪ್ರೀಂ ಕೋರ್ಟ್‌ ಇಂದು ಅಸಮಧಾನ ವ್ಯಕ್ತಪಡಿಸಿದ್ದು, ಹೊಸ ವರದಿ ಸಲ್ಲಿಸಲು ಮೇ 4ರ ಗಡುವು ನೀಡಿದೆ.

2021ರ ಡಿಸೆಂಬರ್‌ 19ರಂದು ರಾಷ್ಟ್ರ ರಾಜಧಾನಿಯಲ್ಲಿ ನಡೆದ ʻʻಧರ್ಮ ಸಂಸದ್‌ʼʼ ನಲ್ಲಿ ಯಾವುದೇ ದ್ವೇಷದ ಭಾಷಣ ಮಾಡಲಾಗಿಲ್ಲ ಎಂದು ಹೇಳುವ ದೆಹಲಿ ಪೊಲೀಸರು ಅಫಿಡವಿಟ್‌ ಅನ್ನು ಮರುಪರಿಶೀಲಿಸುವುದಾಗಿ ವಕೀಲರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದು, ಹೊಸ ಅಫಿಡವಿಟ್‌ ಸಲ್ಲಿಸುವುದಾಗಿ ತಿಳಿಸಿದ್ದಾರೆ.

“ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಾವುದೇ ಧರ್ಮ, ಗುಂಪು ಅಥವಾ ಜನಾಂಗದ ವಿರುದ್ಧ ದ್ವೇಷದ ಮಾತುಗಳನ್ನು ಆಡಲಾಗಿಲ್ಲ, ಭಾಷಣವು ಒಬ್ಬರ ಧರ್ಮವನ್ನು ಸಬಲೀಕರಣಗೊಳಿಸುವ ಹಾಗೂ ಅದರ ಅಸ್ತಿತ್ವಕ್ಕೆ ಅಪಾಯವುಂಟು ಮಾಡುವ ಶಕ್ತಿಗಳ ವಿರುದ್ಧ ಹೋರಾಡುವ ಕುರಿತಾಗಿತ್ತು ಹಾಗೂ ಯಾವುದೇ ಧರ್ಮದ ಕುರಿತಾಗಿ ನರಮೇಧದ ಕರೆಗೆ ಕಿಂಚಿತ್ತೂ ಸಂಬಂಧವಿಲ್ಲ” ಎಂದು ಅಫಿಡವಿಟ್‍ನಲ್ಲಿ ಹೇಳಲಾಗಿತ್ತು.

ಧರ್ಮ ಸಂಸದ್‌ ಸಮಾರಂಭದಲ್ಲಿ ಸುದರ್ಶನ ಸುದ್ದಿ ಟಿವಿ ಮುಖ್ಯ ಸಂಪಾದಕ ಸುರೇಶ್‌ ಚವ್ಹಾಂಕೆ ಅವರು ಒಂದು ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿದ್ದಾರೆಂದು ಕ್ರಮಕ್ಕೆ ಒತ್ತಾಯಿಸಿ ಹಿರಿಯ ವಕೀಲರಾದ ಅಂಜನಾ ಪ್ರಕಾಶ್‌ ಮತ್ತು ಪತ್ರಕರ್ತೆ ಕುರ್ಬಾನ್‌ ಅಲಿ ಸುಪ್ರೀಂ ಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ಅಫಿಡವಿಟ್‌ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ನ್ಯಾಯಾಲಯವು ʻʻಈ ಅಫಿಡವಿಟ್‌ ಅನ್ನು ಉಪ ಪೊಲೀಸ್ ಆಯುಕ್ತರು ಸಲ್ಲಿಸಿದ್ದಾರೆ. ಅವರು ಈ ನಿಲುವನ್ನು ಅನುಮೋದಿಸುತ್ತಾರೆಯೇ? ಅಥವಾ ಅವರು ಸಬ್‌ ಇನ್ಸ್‌ಪೆಕ್ಟರ್‌ ಮಟ್ಟದ ತನಿಖಾ ವರದಿಯನ್ನು ಬಟ್ಟಿ ಇಳಿಸಿದ್ದಾರೆಯೇ?ʼʼ ಎಂದು ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್‌ ಅಸಮಾಧಾನಗೊಂಡರು.

Donate Janashakthi Media

Leave a Reply

Your email address will not be published. Required fields are marked *