ಕಾಲ್ಚಂಡಿನಾಟ ಫಿಫಾ ವಿಶ್ವಕಪ್-2022ರ ಕೊನೆಯ ಪಂದ್ಯ ಆರಂಭವಾಗಿ ಬಿಸಿ ಏರುವುದರೊಳಗೇ ಮೆಸ್ಸಿ ಮೊದಲ ಗೋಲು ಹೊಡೆದ. ನೇರ ಶೂಟೌಟ್ ನಲ್ಲಿ ಈ ಪುಣ್ಯಾತ್ಮ ದೇಹವನ್ನು ಯಾವ ಕಡೆಗೆ ಬಾಗಿಸುತ್ತಾನೆಂದು ಫ್ರಾನ್ಸ್ ನ ಗೋಲ್ ಕೀಪರ್ ಅರ್ಥ ಮಾಡಿಕೊಳ್ಳುವ ಮುನ್ನವೇ ಮೆಸ್ಸಿ ಚೆಂಡನ್ನು ಗೋಲ್ ಪೋಸ್ಟ್ ನೊಳಗೆ ತಳ್ಳಿಯಾಗಿತ್ತು.
ಇವನು ಬರೀ ಮೆಸ್ಸಿ ಅಲ್ಲ ಕಣಯ್ಯಾ LIONಅಲ್ ಮೆಸ್ಸಿ ಅಂತ. ಆದರೆ ಎದೆಯೊಳಗೆ ಪುಕುಪುಕು ಇದ್ದೇ ಇತ್ತು. ಫ್ರಾನ್ಸ್ ತಂಡವನ್ಬು ಮಣಿಸುವುದು ಅಷ್ಟು ಸುಲಭವಲ್ಲ..!
ಡಿಫೆನ್ಸ್ ನ ಮೂವರು ನಾಲ್ವರು ಎದುರಾಳಿಗಳ ಮಧ್ಯೆ ನುಗ್ಗಿ ಚೆಂಡನ್ನು ಡ್ರಿಬ್ಲಿಂಗ್ ಮಾಡುತ್ತಾ ಒಬ್ಬಂಟಿಯಾಗಿ ಗೋಲ್ ಪೋಸ್ಟಿನತ್ತ ಮೆಸ್ಸಿ ಓಡುವುದನ್ನು ನೋಡುವುದೇ ಒಂದು ಚೆಂದ. ಆದರೆ ಫೈನಲ್ ನಲ್ಲಿ ಮೆಸ್ಸಿ ಕಾಲಿಗೆ ಚೆಂಡು ಸಿಕ್ಕ ತಕ್ಷಣ ಪಾಸಿಂಗ್ ಕೊಟ್ಟು ಮುಂದಕ್ಕೆ ಓಡುತ್ತಾ ಮರಳಿ ಚೆಂಡನ್ನು ಪಡೆಯುವುದರತ್ತ ಹೆಚ್ಚು ಗಮನ ಕೊಟ್ಟಿದ್ದ.
ಇದನ್ನೂ ಓದಿ : ಮೆಸ್ಸಿ ಮ್ಯಾಜಿಕ್, ಆರ್ಜೆಂಟೀನಾಕ್ಕೆ ಕಪ್ – ವಿಶ್ವದ ಹೃದಯ ಗೆದ್ದ ಎಂಬಪ್ಪೆ..!
ಪಂದ್ಯ ಆರಂಭವಾಗುವುದಕ್ಕೆ ಮುನ್ನವೇ ಹೃದಯ ಅರ್ಜೆಂಟೈನಾ ಜೊತೆಗಿತ್ತು. ಆದರೆ ಮೆದುಳು ಫ್ರಾನ್ಸ್ ಜೊತೆಗಿತ್ತು.
ಮೆಸ್ಸಿಯ ಮೊದಲ ಗೋಲನ್ನು ಹೃದಯ ಸಂಭ್ರಮಿಸುತ್ತಿದ್ದರೂ ನನ್ನ ತಲೆಯಲ್ಲಿ ಫ್ರಾನ್ಸ್ ನ ಎಂಬಾಪ್ಪೆಯೇ ತುಂಬಿಕೊಂಡಿದ್ದ. ಮೊದಲಾರ್ಧದಲ್ಲಿ ಚೆಂಡು ಬಹುತೇಕ ಅರ್ಜೆಂಟೈನಾ ಆಟಗಾರರ ಕಾಲಲ್ಲೇ ಇತ್ತು. “ಈ ಬಡ್ಡಿಮಗ ಎಂಬಾಪ್ಪೆ ಯಾಕೆ ಇವತ್ತು ಇಷ್ಟೊಂದು ಚಪ್ಪೆ ಆಗಿದ್ದಾನೆ” ಎಂದು ಯೋಚಿಸುತ್ತಲೇ ಇದ್ದೆ. ಮಧ್ಯಂತರದ ವೇಳೆಗೆ ಅರ್ಜೆಂಟೈನಾ 2-0 ಗೋಲು ಹೊಡೆದು ಮುಂದಿದ್ದು ನನ್ನ ಉತ್ಸಾಹ ಮೇರೆ ಮೀರಿತ್ತು.
ಮಧ್ಯಂತರದ ಬಳಿಕ ಇನ್ನೇನು ಆಟ ಕೊನೆಗೊಳ್ಳುತ್ತದೆ ಎನ್ನುವ ಹಂತದಲ್ಲಿ ಬಡ್ಡಿಮಗ ಎಂಬಾಪ್ಪೆ ಸುನಾಮಿಯಂತೆ ಮುನ್ನುಗ್ಗಿದ ನೋಡಿ.. ! ಏನಾಗುತ್ತಿದೆ ಎಂದು ಅರಿವಾಗುವುದರೊಳಗೇ ಎರಡು ಬಾರಿ ಚೀಟಾದಂತೆ ನುಗ್ಗಿ ಬಂದ ಆತ ಬಾರಿಸಿದ ಗೋಲುಗಳನ್ನು ಮುಂದಿನ ವಿಶ್ವಕಪ್ ವರೆಗೆ ಮರೆಯುವುದು ಕಷ್ಟ.
ಟಿವಿ ಮುಂದೆ ಕುಳಿತು ಫುಟ್ಬಾಲ್ ನೋಡುವಾಗ ನಾನು ಕಿರುಚುವುದು ಬಿಟ್ಟು ಎಷ್ಟೋ ವರ್ಷಗಳಾಗಿದ್ದವು. ಆದರೆ ನಿನ್ನೆ ನಿಜಕ್ಕೂ ತಡೆಯಲಾಗಲಿಲ್ಲ. ಕಮಾನ್… ಹೊಡಿ… ಬ್ಯೂಟಿಫುಲ್… ವೋವ್… ಎಂದು ಕೂಗಾಡುತ್ತಾ, ಕುರ್ಚಿಯಿಂದ ಎಗರುತ್ತಾ ಒಬ್ಬನೇ ಟಿವಿ ಮುಂದೆ ಕುಳಿತಿದ್ದೆ. ನನ್ನ ಗಲಾಟೆ ನೋಡಿ ಮಗಳೂ ಕೆಳಗಿಳಿದು ಬಂದು ಜೊತೆ ಸೇರಿದಳು.
ಎಂಬಾಪ್ಪೆಯ ಎರಡು ಗೋಲುಗಳು ಬಿದ್ದ ಬಳಿಕ ಟೆನ್ಶನ್ ಮುಗಿಲಿಗೇರಿತು. ಆ ಕರಿಯ ಎಂತಹ ಬಲಶಾಲಿಯೆಂದರೆ ಆತನ ನೇರ ಹಿಟ್ ಗಳನ್ನು ಕೈಯಲ್ಲಿ ತಡೆದರೆ ಗೋಲಿಯ ಕೈಯೇ ಫ್ರಾಕ್ಚರ್ ಆಗಬಹುದು ಎಂದನ್ನಿಸುತ್ತಿತ್ತು. ಅಷ್ಟೊಂದು ವೇಗ ಮತ್ತು ಬಲಶಾಲಿ ಹೊಡೆತಗಳವು. ಟೆನ್ಶನ್ ತಡೆಯಲಾಗದೆ ಐದಾರು ಸಲ ಬಾತ್ ರೂಮಿಗೆ ಹೋದದ್ದು ಬಹುಶಃ ಇದೇ ಮೊದಲ ಸಲ ಇರಬೇಕು. (ಮನಸ್ಸಿನೊಳಗೇ “ಬಡ್ಡಿಮಗಂದು ಶುಗರ್ ಚೆಕ್ ಮಾಡಬೇಕು” ಅಂತನ್ನಿಸಿದ್ದೂ ಸುಳ್ಳಲ್ಲ.)
ಪಂದ್ಯದ ನಿಗದಿತ ಹಾಗೂ ವಿಸ್ತರಿತ ಅವಧಿ ಮುಗಿದು 3-3 ಸಮಬಲವಾದ ಬಳಿಕ ನನ್ನ ಟೆನ್ಶನ್ ಆಕಾಶಕ್ಕೇರಿತ್ತು. ಶೂಟೌಟ್ ನಲ್ಲಿ ಮೆಸ್ಸಿ ಮತ್ತು ಎಂಬಾಪೆ ಇಬ್ಬರ ಹೊಡೆತಗಳನ್ನು ಯಾವ ಗೋಲಿಯೂ ತಡೆಯಲು ಸಾಧ್ಯವಿಲ್ಲ ಎನ್ನುವುದು ಖಚಿತವಾಗಿತ್ತು. ಅಲ್ಲಿಗೆ 1-1 ಸಮಬಲವಾಗುತ್ತೆ. ಆಮೇಲಿನ ಕಥೆಯೇನು… ಎಂದು ಚಿಂತಿಸುತ್ತಿದ್ದೆ.
ಅರ್ಜೆಂಟೈನಾದ ಗೋಲಿ ಫ್ರಾನ್ಸ್ ಆಟಗಾರನ ಎರಡನೆ ಹೊಡೆತವನ್ನು ತಡೆದು ನಿಲ್ಲಿಸಿ, ಬಳಿಕ ಅರ್ಜೆಂಟೈನಾದ ಎರಡನೆ ಹೊಡೆತ ಗೋಲಾದಾಗಲೇ ನನಗೆ ಮೆಸ್ಸಿಯ ತಂಡ ಗೆಲ್ಲುವುದು ಖಚಿತವಾಗಿತ್ತು. ಕೊನೆಗೂ 4-2 ಗೆಲುವು. ಸಂಭ್ರಮ ಮುಗಿಲಿಗೇರುತ್ತಿದ್ದಂತೆಯೇ ಮೆಸ್ಸಿ “ಮಕ್ಕಳನ್ನು ಮೈದಾನಕ್ಕೆ ಕಳಿಸಿ…” ಎಂದು ಪೆವಿಲಿಯನ್ ಕಡೆಗೆ ಕೈಮಾಡಿ ಹೇಳುತ್ತಿದ್ದ. ಬಳಿಗೆ ಬಂದ ಮಕ್ಕಳನ್ನು ತಬ್ಬಿಕೊಂಡು ಸಂಭ್ರಮದ ತುತ್ತ ತುದಿಗೇರಿದ್ದ.
ಈ ವಿಶ್ವಕಪ್ ಫುಟ್ಬಾಲಿನ ಸಿದ್ಧತೆಗಳು ಭರದಿಂದ ನಡೆಯುತ್ತಿರುವಾಗಲೇ ನಾನು ಕತಾರ್ ಗೆ ಹೋಗಿದ್ದೆ. ದಕ್ಷಿಣ ಭಾರತದ ಚಲನಚಿತ್ರ ಪ್ರಶಸ್ತಿ (ಸೈಮಾ) ಸಮಾರಂಭದ ವರದಿ ಮಾಡಲು ಪತ್ರಕರ್ತನಾಗಿ ಹೋದದ್ದು. ಆಗ ಈ ಸ್ಟೇಡಿಯಂ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿತ್ತು. ಎಲ್ಲಿ ನೋಡಿದರೂ ಕಾಮಗಾರಿಯ ಧಾವಂತ. ಅಲ್ಲಲ್ಲಿ ಕತಾರ್ ದೊರೆಯ ಚಿತ್ರಗಳು ರಾರಾಜಿಸುತ್ತಿದ್ದವು.
ಇಡೀ ವಿಶ್ವದ ಗಮನ ಸೆಳೆಯುವ ಇಂತಹದ್ದೊಂದು ಕ್ರೀಡಾಕೂಟವನ್ನು ಕತಾರ್ ಹೇಗೆ ನಿರ್ವಹಿಸಬಹುದು ಎನ್ನುವ ಅನುಮಾನಗಳಿದ್ದವು ಆಗ. ಕೊಲ್ಲಿ ದೇಶವೊಂದು ಈ ಕೂಟವನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವೇ ಎಂದು ನನಗೂ ಅನ್ನಿಸಿತ್ತು. ದುಬೈಯಂತೆ ಇಡೀ ಜಗತ್ತಿಗೆ ತೆರೆದುಕೊಂಡ ದೇಶವಾಗಿರಲಿಲ್ಲ ಕತಾರ್. ಅಲ್ಲಿ ವಿಶ್ವಮಟ್ಟದ ಸುಸಜ್ಜಿತ ಸ್ಟೇಡಿಯಂಗಳಿರಲಿಲ್ಲ. ಕೋಟ್ಯಂತರ ಜನ ಹರಿದು ಬಂದರೆ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆಯೂ ಇರಲಿಲ್ಲ.
ಅದಕ್ಕೆ ತಕ್ಕಂತೆ ನೆರೆಯ ಸೌದಿ ಅರೇಬಿಯಾ ಕ್ಯಾತೆ ತೆಗೆದು ಕತಾರ್ ಹೆದ್ದಾರಿಯನ್ನು ಬಂದ್ ಮಾಡಿತ್ತು. ಹಾಲು, ಹಣ್ಣು, ಮೊಸರು, ಬೇಕರಿ ಉತ್ಪನ್ನಗಳೆಲ್ಲ ಆಗ ಸೌದಿಯಿಂದಲೇ ಕತಾರ್ ಗೆ ಸಪ್ಲೈ ಆಗುತ್ತಿತ್ತು. ಅದೆಲ್ಲವನ್ನೂ ಸೌದಿ ಬಂದ್ ಮಾಡಿತ್ತು.
ಕತಾರ್ ನ ದೊರೆ ಈ ಬಹಿಷ್ಕಾರಕ್ಕೆ ಅಂಜಲಿಲ್ಲ. ಆಸ್ಟ್ರೇಲಿಯಾದಿಂದ ಜರ್ಸಿ ಹಸುಗಳನ್ನು ವಿಮಾನಗಳಲ್ಲಿ ತರಿಸಿಕೊಂಡ. ಬೇಕರಿ ಮತ್ತಿತರ ಉತ್ಪನ್ನಗಳ ಮಳಿಗೆಗಳಿಗೆ ಪ್ರೋತ್ಸಾಹ ಕೊಟ್ಟ. ಹೋಟೆಲುಗಳನ್ನು ಕಟ್ಟಿಸಿದ. ಐದು ಬೃಹತ್ ಸ್ಟೇಡಿಯಂಗಳ ನಿರ್ಮಾಣಕ್ಕೆ ಚೀನಾದ ಕಂಪೆನಿಗಳನ್ನು ಕರೆತಂದ.
ನನ್ನ ತಂಗಿಯ ಮೈದುನನ ಮಾವ ದೋಹಾದಲ್ಲಿಯೇ ಬೇಕರಿಯೊಂದನ್ನು ನಡೆಸುತ್ತಿದ್ದರು. (ಸೈಮಾ ಸಮಾರಂಭಕ್ಕೆ ಚಿರಂಜೀವಿ, ಯಶ್ ಮುಂತಾದ ತಾರೆಯರ ದಂಡೇ ಬಂದಿತ್ತು. ) ಸಮಾರಂಭ ಮುಗಿಸಿ ಬೆಂಗಳೂರಿಗೆ ಮರಳುವ ಮುನ್ನಾ ದಿನ ರಾತ್ರಿ ಅವರನ್ನು ಭೇಟಿಯಾಗಿದ್ದೆ. ಎರಡು ದೊಡ್ಡ ಪ್ಲಾಸ್ಟಿಕ್ ಬ್ಯಾಗುಗಳಲ್ಲಿ ಬೇಕರಿ ತಿಂಡಿ ತಿನಿಸುಗಳನ್ನು ಹೊತ್ತು ತಂದಿದ್ದರು. ಅವರು ತಂದು ಕೊಟ್ಟಿದ್ದ ಒಂದು ದೊಡ್ಡ ಪಿಜ್ಜಾವನ್ನು ಬೆಂಗಳೂರಿಗೆ ತರಲು ಏರ್ ಪೋರ್ಟಿನ ಭದ್ರತಾ ಸಿಬ್ಬಂದಿಯನ್ನು ಪರಿಪರಿಯಾಗಿ ಮನ ಒಲಿಸಿದ್ದೆ. ಡಸ್ಟ್ ಬಿನ್ ಗೆ ಒಗೀರಿ ಅಂತ ಅವನು ಹಠ ಹಿಡಿದು ಕೂತಿದ್ದ. ನಾನು ಒಪ್ಪಿರಲಿಲ್ಲ. ಕೊನೆಗೂ ನನ್ನ ವಿನಂತಿ, ಕಿರಿಕಿರಿಗೆ ಆತ ಮನಸೋತಿದ್ದ.
ರಾತ್ರಿ ಟಿವಿಯಲ್ಲಿ ಫಿಫಾ ಪ್ರಶಸ್ತಿ ಸಮಾರಂಭವನ್ನು ನೋಡುತ್ತಿದ್ದರೆ ಎಲ್ಲ ನೆನಪಾಯಿತು. ಫಿಫಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕತಾರ್ ನ ದೊರೆಯನ್ನು ನೋಡಿ ಖುಷಿಯಾಯಿತು. ಜಗತ್ತಿನ ಫುಟ್ಬಾಲ್ ಇತಿಹಾಸದಲ್ಲೇ ಇಷ್ಟೊಂದು ಅದ್ದೂರಿಯಾಗಿ ವಿಶ್ವಕಪ್ ಟೂರ್ನಿ ಸಂಘಟಿಸಿದ್ದು ಇದೇ ಮೊದಲು ಎಂದು ಮಾಧ್ಯಮಲೋಕ ಹಾಡಿ ಹೊಗಳುತ್ತಿದೆ. ಇತರ ಕೊಲ್ಲಿ ದೇಶಗಳಿಗೆ ಹೋಲಿಸಿದರೆ ಕತಾರ್ ಅತ್ಯಂತ ಶ್ರೀಮಂತ ದೇಶವೇನಲ್ಲ. ಆದರೆ ಇಡೀ ಜಗತ್ತೇ ಬೆರಗಾಗುವಂತೆ ಅಪಾರ ಹಣದ ಹೊಳೆ ಹರಿಸಿ ಲಕ್ಷಾಂತರ ಜನರಿಗೆ ವಸತಿ, ಊಟ, ತಿರುಗಾಟ, ಮನರಂಜನೆಯ ಹೆಬ್ಬಾಗಿಲನ್ನು ತೆರೆದು ಕತಾರ್ ಈ ಟೂರ್ನಿಯನ್ನು ಯಶಸ್ವಿಯಾಗಿ ಮುಗಿಸಿದೆ. ಕತಾರ್ ನ ದೊರೆಯ ನಗುಮುಖದಲ್ಲಿ ಸಂಭ್ರಮ ತುಂಬಿ ತುಳುಕುತ್ತಿತ್ತು. ಫ್ರಾನ್ಸ್ ಸೋತ ಬೇಸರದಲ್ಲಿದ್ದ ಎಂಬಾಪ್ಪೆ ಅತ್ಯಧಿಕ ಗೋಲು ಹೊಡೆದದ್ದಕ್ಕಾಗಿ ಗೋಲ್ಡನ್ ಬೂಟ್ ಪ್ರಶಸ್ತಿ ಪಡೆಯಲು ವೇದಿಕೆಗೆ ಬಂದಾಗ ಕತಾರ್ ದೊರೆ ಆತನನ್ನು ಸಂತೈಸುತ್ತಿದ್ದ ದೃಶ್ಯ ಈ ಟೂರ್ನಿಯ ನೆನಪಿಡಬಹುದಾದ ದೃಶ್ಯಗಳಲ್ಲಿ ಒಂದು ಎಂದನ್ನಿಸುತ್ತಿದೆ.
ಅರ್ಜೆಂಟೈನಾ ಮತ್ತು ಕತಾರ್ ಎರಡೂ ಇತಿಹಾಸ ಸೃಷ್ಟಿಸಿವೆ. ಹಾಗೆಯೇ ಮೆಸ್ಸಿ ಮತ್ತು ಎಂಬಾಪ್ಪೆ ಕೂಡಾ. ಮೆಸ್ಸಿ ಇನ್ನು ನೆಮ್ಮದಿಯಾಗಿ ರಿಟೈರ್ಡ್ ಆಗಬಹುದು. ಎಂಬಾಪ್ಪೆ ಮುಂದಿನ ವರ್ಷಗಳಲ್ಲಿ ಮತ್ತೊಬ್ಬ ಮೆರಡೋನಾನಂತೆ ವಿಜೃಂಭಿಸಬಹುದು. ಬಹುದು ಏನು? ಖಂಡಿತಾ ವಿಜೃಂಭಿಸಲಿದ್ದಾನೆ!