ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರ ಆವರಣದ ಕಸದ ತೊಟ್ಟಿಯಲ್ಲಿ ಹೆಣ್ಣು ಭ್ರೂಣ ಪತ್ತೆಯಾದ ಹಿನ್ನೆಲೆಯಲ್ಲಿ ಆಸ್ಪತ್ರೆ ಸೀಲ್ ಮಾಡಲಾಗಿದ್ದು, ನಾಲ್ವರು ನೌಕರರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿಯ ಆಸ್ಪತ್ರೆಯಲ್ಲಿ ನಡೆದ ಘಟನೆಯ ಬೆನ್ನಲ್ಲೇ ಅದರ ಮಾಲೀಕರೂ ಆದ ವೈದ್ಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತರಲ್ಲಿ ಮಹಿಳಾ ನರ್ಸ್‌ಗಳೂ ಸೇರಿದ್ದು, ಅವರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಎಸ್‌ಪಿಜಿ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದ ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಹಿಂದೆ ವ್ಯವಸ್ಥಿತ ದಂಧೆ ನಡೆಯುತ್ತಿದೆ ಎಂದು ಶಂಕಿಸಿರುವ ಪೊಲೀಸರಿಗೆ ಆಸ್ಪತ್ರೆಯ ತಪಾಸಣೆ ವೇಳೆ ಪೋರ್ಟಬಲ್ ಸ್ಕ್ಯಾನಿಂಗ್ ಯಂತ್ರ ಪತ್ತೆಯಾಗಿದೆ, ಆ ಯಂತ್ರದಲ್ಲಿ ಸ್ಕ್ಯಾನಿಂಗ್ ಮಾಡಿದ ಬಗ್ಗೆ ಯಾವ ದಾಖಲೆ ಪುಸ್ತಕದಲ್ಲೂ ಉಲ್ಲೇಖಿಸಿಲ್ಲ ಎನ್ನಲಾಗಿದೆ. ಜತೆಗೆ .ಆಸ್ಪತ್ರೆಯಲ್ಲಿ 1 ಸ್ಕ್ಯಾನಿಗ್ ಯಂತ್ರಕ್ಕೆ ಆರೋಗ್ಯ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. ಮತ್ತೊಂದಕ್ಕೆ ಅನುಮತಿ ಪಡೆದಿಲ್ಲ ಈ ಹಿನ್ನೆಲೆಯಲ್ಲಿ ಈ ಯಂತ್ರವನ್ನು ಅಕ್ರಮಕ್ಕಾಗಿಯೇ ಬಳಸಲಾಗುತ್ತಿದೆ ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಎಂಬುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬೀಗ ಜಡಿಯಲಾಗಿದೆ. ಒಳರೋಗಿಗಳನ್ನು ಸಾರ್ವಜನಿಕ ಆಸ್ಪತ್ರೆ ಹಾಗೂ ಇನ್ನಿತರ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಏತನ್ಮಧ್ಯೆ ಆಸ್ಪತ್ರೆ ಮುಖ್ಯಸ್ಥ ಡಾ.ಶ್ರೀನಿವಾಸ್ ನಾಪತ್ತೆಯಾಗಿದ್ದು, ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಹೆಣ್ಣು ಭ್ರೂಣಹತ್ಯೆ ದಂಧೆ| ಗರ್ಭಿಣಿ ಮಹಿಳೆಯರ ನೋಂದಣಿ, ನಿರಂತರ ಪರಿಶೀಲನೆಗೆ ಕ್ರಮ; ಸಚಿವ ದಿನೇಶ್ ಗುಂಡೂರಾವ್
ಸ್ಕ್ಯಾನಿಂಗ್ ವಿಭಾಗದ ಕಸದ ಬುಟ್ಟಿಯಲ್ಲಿ 16 ವಾರದ ಹೆಣ್ಣು ಭ್ರೂಣ ಪತ್ತೆಯಾಗಿತ್ತು. ಆ ಭ್ರೂಣದ ಬಗ್ಗೆ ಯಾವುದೇ ಪುಸ್ತಕದಲ್ಲಿ ದಾಖಲೆ ಇಲ್ಲದಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ದೊರೆತ ಹೆಣ್ಣು ಭ್ರೂಣದ ಪಾಲಕರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಲಾಗಿದೆ. ನನಗೆ 9 ತಿಂಗಳ ಮಗುವಿದ್ದು ಕೆಲ ದಿನಗಳಿಂದ ಆರೋಗ್ಯ ಸಮಸ್ಯೆ ಎದುರಾಗಿತ್ತು ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡಿದ್ದೆ. ಆದರೆ ಮತ್ತೆ ನಾನು ಗರ್ಭ ಧರಿಸಿರುವುದು ಖಾತರಿಯಾಗಿತ್ತು ಎಂದು ಅತ್ತ ಕಡೆಯಿಂದ ಮಾತನಾಡಿದ ಮಹಿಳೆಯೊಬ್ಬರು ಕರೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿ ಸ್ವಿಚ್‌ಆಫ್ ಮಾಡಿಕೊಂಡಿದ್ದಾರೆ. ಪಾಲಕರ ಪತ್ತೆಗೆ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯ ಆರೋಗ್ಯ ಆಯುಕ್ತರು ಇತ್ತೀಚೆಗೆ ಹೊರಡಿಸಿದ ಸುತ್ತೋಲೆಯಲ್ಲಿ ಕ್ಲಿನಿಕ್‌ಗಳು, ಡಯಾಗ್ನೋಸ್ಟಿಕ್ ಲ್ಯಾಬೋರೇಟರಿಗಳು ಸೇರಿದಂತೆ ಎಲ್ಲಾ ವೈದ್ಯಕೀಯ ಸೌಲಭ್ಯಗಳನ್ನು ಪರಿಶೀಲಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಅನಧಿಕೃತ ಹಾಗೂ ನಕಲಿ ವೈದ್ಯರು ನಡೆಸುತ್ತಿರುವುದು ಕಂಡುಬಂದಲ್ಲಿ ಸೀಲ್ ಮಾಡುವಂತೆ ಸೂಚಿಸಿದ್ದಾರೆ.
ಈ ವಿಡಿಯೋ ನೋಡಿ : ವಾರದ ಕವಿತೆ ಸಂಚಿಕೆ- 51 ಕವಿತೆ – ನಾ ಬರಿ ಭ್ರೂಣವಲ್ಲ ವಿಶ್ಲೇಷಣೆ – ಪ್ರಜ್ಞಾ ಮತ್ತಿಹಳ್ಳಿ