ಒಕ್ಕೂಟ ತತ್ವ ಮತ್ತು ಸುಪ್ರಿಂ ಕೋರ್ಟಿಗೆ ರಾಷ್ಟ್ರಪತಿಗಳ ಉಲ್ಲೇಖ

ರಾಜ್ಯಪಾಲರು ಮತ್ತು ರಾಷ್ಟ್ರಪತಿಯವರು ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕುವುದಕ್ಕೆ ಕಾಲಮಿತಿ ನಿಗದಿಪಡಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಸಂಬಂಧಿಸಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂವಿಧಾನದ 143 (1)ನೇ ವಿಧಿಯಡಿ ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದು 14 ಪ್ರಶ್ನೆಗಳನ್ನು ಕೇಳಿದ್ದಾರೆ. ಸುಪ್ರೀಂ ಕೋರ್ಟ್ ಮುಂದೆ ವಕ್ಫ್ ಕಾಯ್ದೆ, ಪ್ರಾರ್ಥನಾ ಸ್ಥಳಗಳ ಕಾಯ್ದೆಯಂತಹ ಪ್ರಮುಖ ಪ್ರಕರಣಗಳಿರುವ ಸಂದರ್ಭದಲ್ಲಿ ಇದೆಲ್ಲಾ ನಡೆಯುತ್ತಿದೆ ಎಂಬುದನ್ನು ಗಮನಿಸಬೇಕು. ಒಕ್ಕೂಟ

ಸಿ. ಸಿದ್ದಯ್ಯ

ಸಾಂವಿಧಾನಿಕ ಅನಿಶ್ಚಿತತೆಯ ಪರಿಸ್ಥಿತಿಗೆ ಕಾರಣವಾಗುತ್ತಿರುವ ಒಂದು ದೀರ್ಘಕಾಲದ ಸಮಸ್ಯೆಯ ಬಗ್ಗೆ ದೇಶದ ಸರ್ವೋಚ್ಚ ನ್ಯಾಯಾಲಯ ಒಂದು ಸ್ಪಷ್ಟವಾದ ನಿರ್ದೇಶನ ನೀಡಿದರೆ, ಅದನ್ನು ಜಾರಿಗೆ ತರಲು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಬೇಕು. ರಾಜ್ಯಪಾಲರು ಮತ್ತು ರಾಷ್ಟ್ರಪತಿಯವರು ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕುವುದಕ್ಕೆ ಕಾಲಮಿತಿ ನಿಗದಿಪಡಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದರೆ, ನರೇಂದ್ರ ಮೋದಿ ಸರ್ಕಾರ ಇದಕ್ಕೆ ವಿರುದ್ದವಾಗಿ ವ್ಯವಹರಿಸುತ್ತಿದೆ. ರಾಜ್ಯಪಾಲರ ಪಾತ್ರದ ಕುರಿತು ಸುಪ್ರೀಂ ಕೋರ್ಟ್‌ ನ ಆದೇಶಗಳನ್ನು ಜಾರಿಗೊಳಿಸುವ ಬದಲು, ಅಂತಹ ತೀರ್ಪು ನೀಡುವ ಅಧಿಕಾರ ಸುಪ್ರೀಂ ಕೋರ್ಟ್ ಗೆ ಇದೆಯೋ, ಇಲ್ಲವೋ ಎಂದು ನಿರ್ಧರಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮೂಲಕ ಹದಿನಾಲ್ಕು ಪ್ರಶ್ನೆಗಳನ್ನು ವ್ಯವಸ್ಥೆ ಮಾಡಲಾಯಿತು. ಹೆಸರಿಗೆ ರಾಷ್ಟ್ರಪತಿಗಳೇ ಬರೆದಿರುವ ಈ ಇಡೀ ಪ್ರಕರಣ ಕೇಂದ್ರದ ಕಣ್ಗಾವಲಿನಲ್ಲಿಯೇ ನಡೆದಿದೆ ಎಂಬುದು ಸ್ವಯಂವೇದ್ತ. ಏಕೆಂದರೆ ಸಾಂವಿಧಾನಿಕವಾಗಿಯೂ, ಭಾರತದ ರಾಷ್ಟ್ರಪತಿಗಳು ಪ್ರಧಾನವಾಗಿ ಅಲಂಕಾರಿಕ ಮುಖ್ಯಸ್ಥರಾಗಿದ್ದಾರೆ. ಒಕ್ಕೂಟ

ಏಪ್ರಿಲ್ 8 ರಂದು ರಾಜ್ಯಪಾಲರ ವಿಷಯಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದಾಗ, ಮರುದಿನವೇ ಕೇಂದ್ರವು ಅದನ್ನು ಹೇಗೆ ಎದುರಿಸುವುದು ಎಂಬುದರ ಕುರಿತು ಚರ್ಚೆಗಳನ್ನು ಪ್ರಾರಂಭಿಸಿತು. ಅಟಾರ್ನಿ ಜನರಲ್ ಆರ್. ವೆಂಕಟರಮಣಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಕಾನೂನು ಸಚಿವಾಲಯದ ಪ್ರತಿನಿಧಿಗಳೊಂದಿಗೆ ವ್ಯಾಪಕ ಚರ್ಚೆಗಳು ನಡೆದವು. ಅಂತಿಮವಾಗಿ, ಮೇ ಏಳನೇ ತಾರೀಖಿನೊಳಗೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕಾದ ಪ್ರಶ್ನಾವಳಿಯ ರಾಷ್ಟ್ರಪತಿಗಳು ಪತ್ರವನ್ನು ಅಂತಿಮಗೊಳಿಸಲಾಯಿತು. ಒಕ್ಕೂಟ

ಇದನ್ನೂ ಓದಿ: ಕಿವಿ ಕೇಳಿಸದ ಬಾಲಕಿ ಹತ್ಯೆ: ಇನ್ಸ್‌ ಪೆಕ್ಟರ್ ಶಂಕರ್ ನಾಯ್ಕ್ ವಿರುದ್ಧ ದೂರು ಸಲ್ಲಿಕೆ

ಆರಂಭದಲ್ಲಿ, ಈ ತೀರ್ಪಿನ ಪುನರ್ ಪರಿಶೀಲನೆ ಕೋರಬೇಕೇ ಅಥವಾ ವಿಸ್ತೃತ ಪೀಠವನ್ನು ಕೋರಬೇಕೇ ಎಂಬ ಬಗ್ಗೆ ಚರ್ಚೆ ನಡೆಯಿತು ಎನ್ನಲಾಗಿದೆ. ಸಂವಿಧಾನದ 143(1) ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಗಳ ಹೆಸರಿನಲ್ಲಿ ಸಲಹೆ ಕೋರುವುದೇ  ಅನುಕೂಲಕರ ಎಂದು ನಿರ್ಧರಿಸಲಾಯಿತು. ಏಕೆಂದರೆ ರಾಷ್ಟ್ರಪತಿಗಳು ಕೋರಿದ ಅಂಶವನ್ನು ಪರಿಶೀಲಿಸಲು ಐವರು ಸದಸ್ಯರ ಪೀಠವನ್ನು ರಚಿಸುವುದು ಪರಿಪಾಟ. ಆದರೆ, ಈ ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಬೇಕೆ ಅಥವಾ ಬೇಡವೇ ಎಂಬುದನ್ನು ಸುಪ್ರೀಂ ಕೋರ್ಟ್ ಸ್ವತಃ ನಿರ್ಧಾರಕ್ಕೆ ಬರಬಹುದು. ಉದಾಹರಣೆಗೆ, ಬಾಬರಿ ಮಸೀದಿ/ರಾಮ ಜನ್ಮಭೂಮಿ ವಿವಾದದಲ್ಲಿ ಮಸೀದಿ ಧ್ವಂಸದ ನಂತರ, ಪಿ.ವಿ.ನರಸಿಂಹ ರಾವ್ ಸರ್ಕಾರವು ಸುಪ್ರೀಂ ಕೋರ್ಟ್‌ನ ಅಭಿಪ್ರಾಯ ಕೇಳಿತು. ಆದರೆ, ಈ ವಿಷಯದಲ್ಲಿ ತಮಗೆ ಯಾವುದೇ ಅಭಿಪ್ರಾಯ ಹೇಳುವುದೇನಿಲ್ಲ, ರಾಜಕೀಯ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಪೀಠವು ನಿರ್ಧರಿಸಿತು. ಒಕ್ಕೂಟ

ಹಿಂದಿನ ಉದಾಹರಣೆಗಳು

1960 ರಲ್ಲಿ, ಕೇಂದ್ರವು ಸಿ ಪಟ್ಟಿಯಲ್ಲಿರುವ ರಾಜ್ಯಗಳ ಸ್ಥಾನಮಾನದ ಬಗ್ಗೆ ಸುಪ್ರೀಂ ಕೋರ್ಟ್ ನ ಸಲಹೆ ಕೇಳಿತು. 1978 ರಲ್ಲಿ, ತುರ್ತು ಪರಿಸ್ಥಿತಿಯ ನಂತರ, ಅತ್ಯಾಚಾರ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬಹುದೇ ಎಂಬುದರ ಕುರಿತು ಅಭಿಪ್ರಾಯಗಳನ್ನು ಕೇಳಲಾಯಿತು. ಈ ಕುರಿತು ಸುಪ್ರೀಂ ಕೋರ್ಟ್ ತನ್ನ ಅಭಿಪ್ರಾಯ ಹೇಳಿದೆ ಅಥವಾ ಒಂದೆರಡು ಬಾರಿ ಅಭಿಪ್ರಾಯ ಹೇಳಲು ನಿರಾಕರಿಸುವುದು ನಡೆದಿದೆ. ಸಂವಿಧಾನದ 142ನೇ ವಿಧಿಯ ಪ್ರಕಾರ, ಸಂವಿಧಾನದ ನಿಬಂಧನೆಗಳ ಸಿಂಧುತ್ವದ ಬಗ್ಗೆ ಸುಪ್ರೀಂ ಕೋರ್ಟ್ ಮಾತ್ರ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಹೊಂದಿದೆ. ಸಂವಿಧಾನದ ಮೂಲಭೂತ ಸ್ವರೂಪದ ಕುರಿತಾದ ತೀರ್ಪಿನ ನಂತರ ಇದು ಮತ್ತಷ್ಟು ಬಲಗೊಂಡಿತು. ಅದೇ ಸಮಯದಲ್ಲಿ 143(1) ವಿಧಿಯು ಸುಪ್ರೀಂ ಕೋರ್ಟ್‌ ನ ಅಭಿಪ್ರಾಯವನ್ನು ಕೋರುವ ಅಧಿಕಾರವನ್ನು ರಾಷ್ಟ್ರಪತಿಗಳಿಗೆ ನೀಡುತ್ತದೆ. ಪ್ರಸ್ತುತ ದ್ರೌಪದಿ ಮುರ್ಮು ಅವರು ಕಳುಹಿಸಿರುವ ಪ್ರಶ್ನೆಗಳು ಕೇವಲ ಸಾಂವಿಧಾನಿಕ ನಿಬಂಧನೆಗಳ ಅನ್ವಯಕ್ಕೆ ಮಾತ್ರವಲ್ಲದೆ ರಾಜಕೀಯ ಸಂಘರ್ಷಕ್ಕೂ ಮತ್ತು ಸಾಂವಿಧಾನಿಕ ಬಿಕ್ಕಟ್ಟಿಗೂ ಕಾರಣವಾಗುವ ಅಪಾಯವಿದೆ. ಒಕ್ಕೂಟ

ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಆ ರಾಜ್ಯ ವಿಧಾನಸಭೆ ಅಂಗೀಕರಿಸಿದ ಹತ್ತು ಮಸೂದೆಗಳಿಗೆ ಅಂಕಿತ ಹಾಕುವಲ್ಲಿ ಅನಿರ್ಧಿಷ್ಟಕಾಲ ವಿಳಂಬವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. ತಮ್ಮ ಮುಂದೆ ಬಂದ ಮಸೂದೆಗಳಿಗೆ ಮೂರು ತಿಂಗಳೊಳಗೆ ಅಂಕಿತ ಹಾಕಬೇಕು ಅಥವಾ ತಿರಸ್ಕರಿಸಬೇಕು ಎಂದು ಅದು ಹೇಳಿತ್ತು. ಒಂದುವೇಳೆ ರಾಷ್ಟ್ರಪತಿಗಳ ಪರಿಶೀಲನೆಗೆ ಕಳುಹಿಸಿದರೂ, ಆಗಲೂ ಮೂರು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕೋರ್ಟ್ ನಿರ್ದೇಶಿಸಿತ್ತು..

ಇದರೊಂದಿಗೆ, ಸುಪ್ರೀಂ ಕೋರ್ಟ್ ರಾಷ್ಟ್ರಪತಿಗಳಿಗೆ ಹೇಗೆ ತಾನೇ ಆದೇಶಿಸಲು ಸಾಧ್ಯ ಎಂಬುದರ ಬಗ್ಗೆ ಅನೇಕರು ತಮ್ಮ ಆಕ್ಷೇಪಣೆಗಳನ್ನು ಎತ್ತಿದ್ದಾರೆ. ಇದೀಗ ರಾಷ್ಟ್ರಪತಿಗಳು ಕಳುಹಿಸಿರುವ 143(1)ರ ಉಲ್ಲೇಖವೂ ಇಂತದೇ ಪ್ರಶ್ನೆಗಳನ್ನು ಮುಂದೆ ತಂದಿದೆ. ಸಂವಿಧಾನದ 200ನೇ ವಿಧಿಯು ರಾಜ್ಯಪಾಲರ ಅಧಿಕಾರ ವ್ಯಾಪ್ತಿಯನ್ನು ವ್ಯಾಖ್ಯಾನಿಸುತ್ತದೆ. ಶಾಸಕಾಂಗವು ಅನುಮೋದಿಸಿದ ಮಸೂದೆಗಳ ಅಂಗೀಕಾರದ ಮುದ್ರೆಯ ಕುರಿತು 21 ನೇ ವಿಧಿಯು ಹೇಳುತ್ತದೆ. ಇದಕ್ಕೆ ಸಂಬಂಧಿಸಿ ಬೇರೆ ಯಾವುದೇ ವಿಧವಾದ ನಿರ್ದೇಶನಗಳು ಇಲ್ಲದಿರುವಾಗ ಮೂರು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಗೆ ಹೇಳುತ್ತದೆ ಎಂಬುದೇ ಪ್ರಶ್ನೆಗಳ ಸಾರಾಂಶ. ಒಕ್ಕೂಟ

ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದರ ಕುರಿತು ಆದೇಶವಲ್ಲ

ವಾಸ್ತವವಾಗಿ, ಅನೇಕರು ವಾದಿಸುತ್ತಿರುವಂತೆ ಇಲ್ಲಿ ಸುಪ್ರೀಂ ಕೋರ್ಟ್, ರಾಷ್ಟ್ರಪತಿ ಅಥವಾ ರಾಜ್ಯಪಾಲರಿಗೆ ಏನು ಮಾಡಬೇಕು, ಯಾವ ರೀತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಆದೇಶ ನೀಡಿರುವುದಲ್ಲ. ತಮ್ಮ ಆಯ್ಕೆಯ ನಿರ್ಧಾರ ತೆಗೆದುಕೊಳ್ಳಲು ಮೂರು ತಿಂಗಳುಗಳ ಕಾಲಾವಕಾಶ ಇರಬೇಕು ಎಂದು ಮಾತ್ರವೇ ಹೇಳುತ್ತಿದೆ. ಈ ರೀತಿ ಮಾಡುವುದರಿಂದ ಸಂವಿಧಾನದ ಆಶಯಕ್ಕೆ ಮಹತ್ವ ಬರುತ್ತದೆಯೇ ಹೊರತು, ಅದಕ್ಕೆ ವಿರುದ್ಧವಾಗಿ ಹೇಳಿದ್ದಲ್ಲ. ಈ ಗಡುವು ಕೂಡಾ ಹಿಂದೆ ಇಂದಿರಾ ಗಾಂಧಿ ಆಡಳಿತಾವಧಿಯಲ್ಲಿ ಸರ್ಕಾರಿಯಾ ಆಯೋಗದ ಮತ್ತು ವಾಜಪೇಯಿ ಆಡಳಿತಾವಧಿಯಲ್ಲಿ ಪೂಂಚ್ ಆಯೋಗದ ನೇತೃತ್ವ ವಹಿಸಿದ್ದ ಮಾಜಿ ನ್ಯಾಯಾಧೀಶರು ಹೇಳಿರುವುದೇ ಆಗಿದೆ. ಇನ್ನೂ ಹೇಳುವುದಾದರೆ, ಈ ಹಿಂದೆ ಎರಡು ಮೂರು ಸಂದರ್ಭಗಳಲ್ಲಿ ಇದ್ದ ಅತ್ಯುನ್ನತ ನ್ಯಾಯಾಲಯವು ರಾಷ್ತ್ರಪತಿಯವರ ಕಾರ್ಯವಿಧಾನಗಳ ಕುರಿತು ನಿರ್ದೇಶನಗಳನ್ನು ನೀಡಿದೆ. ಒಕ್ಕೂಟ

1994 ರಲ್ಲಿ, ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ, ರಾಜ್ಯ ಸರ್ಕಾರಗಳ ವಿಸರ್ಜನೆ ಮತ್ತು ರಾಷ್ಟ್ರಪತಿ ಆಳ್ವಿಕೆ ಹೇರಿಕೆಗೆ ಸಂಬಂಧಿಸಿದಂತೆ ಅಲ್ಲಿಯವರೆಗೆ ನಡೆಯುತ್ತಿದ್ದ ಏಕಪಕ್ಷೀಯ ಪ್ರವೃತ್ತಿಗಳಿಗೆ ಸುಪ್ರೀಂ ಕೋರ್ಟ್ ಅಂತ್ಯ ಹಾಡಿತು. ಮರಣದಂಡನೆ ಶಿಕ್ಷೆಗೊಳಗಾದ ಕೈದಿಗಳ ಕ್ಷಮಾದಾನ ಅರ್ಜಿಗಳ ಕುರಿತು ನಿರ್ದಾರ ತೆಗೆದುಕೊಳ್ಳಲು ಕೂಡಾ ನಿಗದಿತ ಗಡುವನ್ನು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಆ ತೀರ್ಪಿನ ನಂತರ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಶೀಘ್ರವೇ ನಿರ್ಧಾರಗಳನ್ನು ತೆಗೆದುಕೊಂಡಿದ್ದನ್ನು ನಾವು ನೋಡಿದ್ದೇವೆ. ಹಿಂದೆಂದೂ ಇಲ್ಲದ ಆಕ್ಷೇಪಣೆ ಈಗಲೇ ಏಕೆ ಬಂತು? ಒಕ್ಕೂಟ

ಈ ಪತ್ರವನ್ನು ಕಳುಹಿಸುವ ಮೊದಲು, ಉಪಾಧ್ಯಕ್ಷ ಜಗದೀಪ್ ಧನಕರ್ ಅವರು ನ್ಯಾಯಾಲಯದ ಮೇಲೆ ವಾಗ್ದಾಳಿ ನಡೆಸಿದರು. ಅವರ ಮಾತುಗಳನ್ನೇ ಈಗ  ಕೇಂದ್ರ ಸರ್ಕಾರ ಪ್ರತಿಧ್ವನಿಸಿದೆ ಎಂಬುದು ಈಗ ಸ್ಪಷ್ಟವಾಗುತ್ತಿದೆ. ಮೋದಿ ಆಡಳಿತದ ಅವಧಿಯಲ್ಲಿ, ಹಲವು ರಾಜ್ಯಗಳಲ್ಲಿ ನೇಮಕಗೊಂಡ ರಾಜ್ಯಪಾಲರು ಉತ್ಸಾಹದಿಂದ ನೇರ ರಾಜಕೀಯ ಪಾತ್ರವನ್ನು ವಹಿಸುತ್ತ, ಬಿಜೆಪಿಯೇತರ ಸರ್ಕಾರಗಳಿಗೆ ಬೆದರಿಕೆ ಹಾಕುತ್ತ ಬಂದಿದ್ದಾರೆ. ಕೇರಳದಲ್ಲಿ ಆರಿಫ್ ಮೊಹಮ್ಮದ್ ಖಾನ್, ತಮಿಳುನಾಡಿನಲ್ಲಿ ಆರ್.ಎನ್.ರವಿ, ತೆಲಂಗಾಣದಲ್ಲಿ ತಮಿಳಿಸೈ ಸೌಂದರರಾಜನ್, ಬಂಗಾಳದಲ್ಲಿ ಇದೇ ಜಗದೀಪ್ ಧನಕರ್ ಅವರಂತಹ ರಾಜ್ಯಪಾಲರು ಕೇಂದ್ರದ ಏಜೆಂಟ್‌ ಗಳಾಗಿ ಕಾರ್ಯನಿರ್ವಹಿಸಿದರು. ಎಲ್ಲೆಡೆ ಲೆಕ್ಕವಿಲ್ಲದಷ್ಟು ಮಸೂದೆಗಳು ಚಲನೆ ಕಾಣದೆ ಬಿದ್ದಿವೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ರಾಜ್ಯಪಾಲರ ದುರುಪಯೋಗ ಮತ್ತು ಸರ್ಕಾರಗಳನ್ನು ವಜಾಗೊಳಿಸುವುದು ನಡೆದಿದ್ದರೂ, ಮೋದಿ ಆಡಳಿತದಲ್ಲಿ ಅದು ಒಂದು ರೀತಿಯಲ್ಲಿ ಪರಾಕಾಷ್ಠೆಯನ್ನು ತಲುಪಿದೆ.

ಕೇಂದ್ರೀಕೃತ ವ್ಯವಸ್ಥೆಯನ್ನು ಜಾರಿಗೆ ತರುವ ಪ್ರಯತ್ನ

ಈ ಅಂತ್ಯವಿಲ್ಲದ ಸಂಘರ್ಷಕ್ಕೆ ಸುಪ್ರೀಂ ಕೋರ್ಟ್ ನ ನಿರ್ದೇಶನ ಅಂತ್ಯ ಹಾಡುತ್ತದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು, ಆದರೆ ಕೇಂದ್ರವು ಅದನ್ನು ತಡೆಯಲು ರಾಷ್ಟ್ರಪತಿ ಸ್ಥಾನವನ್ನು ಬಳಸಿಕೊಳ್ಳುತ್ತಿದೆ. ಈ ಮೂಲಕ, ತನ್ನ ಸರ್ವಾಧಿಕಾರಿ, ಏಕಪಕ್ಷೀಯ ಆಡಳಿತವನ್ನು ಮುಂದುವರಿಸುವುದು ಬಿಜೆಪಿಯ ಉದ್ದೇಶವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಒಕ್ಕೂಟ ತತ್ವವು ಭಾರತದ ಸಂವಿಧಾನದ ಮೂಲಭೂತ ಲಕ್ಷಣಗಳಲ್ಲಿ ಒಂದಾಗಿದ್ದರೂ, ಪ್ರಜೆಗಳು ಆಯ್ಕೆಮಾಡಿದ ಸರ್ಕಾರಗಳನ್ನು ಶಾಸಕಾಂಗ ಸಭೆಗಳ ನಿರ್ಧಾರಗಳನ್ನು ಗೌರವಿಸುವ ಸಾಂವಿಧಾನಿಕ ಪ್ರಜಾಪ್ರಭುತ್ವಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿ ಕೇಂದ್ರೀಕೃತ ವ್ಯವಸ್ಥೆಯನ್ನು ಜಾರಿಗೆ ತರಲು ಒಂದು ರಾಷ್ಟ್ರ, ಒಂದು ಚುನಾವಣೆ, ಒಂದು ಪಕ್ಷ, ಒಬ್ಬ ನಾಯಕ, ಒಂದು ಧರ್ಮ ಎನ್ನುವ ವಿಪರೀತ ಪರಿಸ್ಥಿತಿಗೆ ಇದು ಇತ್ತೀಚಿನ ಉದಾಹರಣೆಯಾಗಿದೆ. ಒಕ್ಕೂಟ

ರಾಜಕೀಯವನ್ನು ಮೀರಿ, ಸಂವಿಧಾನದ ಅತ್ಯುನ್ನತ ಸ್ಥಾನವೆಂದು ಹೇಳಿಕೊಳ್ಳುವ ರಾಷ್ಟ್ರಪತಿ ಸ್ಥಾನವನ್ನು ಸಂವಿಧಾನದ ಮೇಲೆ ದಾಳಿ ನಡೆಸಲು ಬಳಸುವುದು ಮೋದಿಯವರ ತಂತ್ರವಾಗಿದೆ. ಉದ್ದೇಶಪೂರ್ವಕವಾಗಿ ಇದನ್ನು ಸುಪ್ರೀಂ ಕೋರ್ಟ್‌ನ ‘ಗಡಿ ಉಲ್ಲಂಘನೆ’ ಎಂದು ಬಿಂಬಿಸುವುದು ಸತ್ಯಗಳನ್ನು ತಿರುಚಿದಂತಾಗುತ್ತದೆ. ಹಲವಾರು ಅಧ್ಯಯನಗಳು, ವರದಿಗಳು ಮತ್ತು ನಿಯಮಗಳನ್ನು ಉಲ್ಲೇಖಿಸಿಯೇ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆ ತೀರ್ಪಿನಲ್ಲಿಯೇ ಅದರ ಅಭಿಪ್ರಾಯವೂ ಇದೆ. ಒಕ್ಕೂಟ

“ಸಂವಿಧಾನವೇ ಎಲ್ಲರಿಗೂ ಸರ್ವೋಚ್ಚ”       

ಈ ವಿಷಯದಲ್ಲಿ ಅಂತಿಮ ನಿರ್ಧಾರ ಹೇಗಿರುತ್ತದೆ ಎಂಬ ಅಂಶವನ್ನು ಬದಿಗಿಟ್ಟು, ಪ್ರಸ್ತುತ ಸಂದರ್ಭವನ್ನು ಗಣನೆಗೆ ತೆಗೆದುಕೊಂಡರೆ, ಹೆಚ್ಚು ಗಂಭೀರವಾದ ರಾಜಕೀಯ ಸಂಕೇತಗಳು ಹೊರಹೊಮ್ಮುತ್ತಿವೆ. ಮೇ 14 ರಂದು ಹೊಸ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿ ನ್ಯಾಯಮೂರ್ತಿ ಬಿ.ಆರ್. ಗವಾಯಿ (ಭೂಷಣ್ ರಾಮಕೃಷ್ಣ ಗವಾಯಿ) ಅವರು ಪ್ರಮಾಣ ವಚನ ಸ್ವೀಕರಿಸಿದರು. ನವೆಂಬರ್ 23 ರವರೆಗೆ ಕೇವಲ ಆರು ತಿಂಗಳು ಕಾಲ ಅವರು ಅಧಿಕಾರದಲ್ಲಿ ಇರುತ್ತಾರೆ. ಹಿಂದೆ, ಅವರು ‘ನ್ಯೂಸ್ ಕ್ಲಿಕ್’ ಪ್ರಕರಣಗಳು, ದೆಹಲಿಯ ಮಾಜಿ ಸಚಿವೆ ಸಿಸೋಡಿಯಾ, ತೀಸ್ತಾ ಸೆಟಲ್ವಾಡ್ ಮತ್ತು ಇತರ ಪ್ರಕರಣಗಳಲ್ಲಿ ಮೂಲಭೂತ ಹಕ್ಕುಗಳ ಕುರಿತು ಅನುಕೂಲಕರ ತೀರ್ಪುಗಳನ್ನು ನೀಡಿದ್ದಾರೆ. ಚುನಾವಣಾ ಬಾಂಡ್‌ ಗಳ ರದ್ದತಿಯ ತೀರ್ಪಿನಲ್ಲಿಯೂ ಭಾಗಿಯಾಗಿದ್ದರು. ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರಿಗೆ ರಿಲೀಫ್ ನೀಡಿದ್ದಾರೆ. ಒಕ್ಕೂಟ

ಒಟ್ಟಾರೆಯಾಗಿ,ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು ಸಾಮಾಜಿಕ ನ್ಯಾಯ ಮತ್ತು ಮೂಲಭೂತ ಹಕ್ಕುಗಳ ಪರವಾಗಿ ಅನೇಕ ತೀರ್ಪುಗಳನ್ನು ನೀಡಿದ್ದಾರೆ ಮತ್ತು ಅಂತಹ ಪೀಠಗಳಲ್ಲಿದ್ದರು. ವೈಯಕ್ತಿಕವಾಗಿ ನೋಡುವುದಾದರೆ, ಅವರು ರಿಪಬ್ಲಿಕನ್ ಪಕ್ಷದ ಸಂಸ್ಥಾಪಕ ಆರ್.ಕೆ. ಗವಾಯಿ ಅವರ ಮಗ. ಯುಪಿಎ ಆಡಳಿತಾವಧಿಯಲ್ಲಿ ಎಂಎಲ್‌ಸಿ, ಸಂಸದ ಮತ್ತು ರಾಜ್ಯಪಾಲರಾಗಿ ಹಲವು ಹುದ್ದೆಗಳನ್ನು ಅಲಂಕರಿಸಿದ್ದ ಆರ್‌.ಕೆ. ಗವಾಯಿ ದಲಿತ ಚಳವಳಿಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. ತಾನು ದೇಶದ ಬೌದ್ದ ಹಿನ್ನಲೆಯ ಮೊದಲ ನ್ಯಾಯಾದೀಶ ಎಂದು ಸಿಜೆಐ ಗವಾಯಿ ಘೋಷಿಸಿದರು. ದಲಿತರಾಗಿ ಈ ಹುದ್ದೆಗೆ ಬಂದಿರುವ ಎರಡನೇ ವ್ಯಕ್ತಿ ಅವರು. ಭಾರತವು ಬಹು ಧರ್ಮಗಳು, ಸಂಸ್ಕೃತಿಗಳು, ರಾಜಕೀಯಗಳು ಮತ್ತು ಪ್ರದೇಶಗಳನ್ನು ಹೊಂದಿರುವ ವೈವಿಧ್ಯತೆಯಿಂದ ಕೂಡಿದ ದೇಶವೆಂದು ಹೇಳುತ್ತ, ಇದು ಕಾನೂನು ವ್ಯವಸ್ಥೆಯಲ್ಲಿ ಪ್ರತಿಬಿಂಬಿಸಬೇಕು ಎಂದು ನೇಮಕದ ನಂತರ ಅವರು ತಕ್ಷಣವೇ ಉದ್ಗರಿಸಿದರು.

ಸುಪ್ರೀಂ ಕೋರ್ಟ್ ಸೂಪರ್ ಪಾರ್ಲಿಮೆಂಟ್ ಆಗಬಾರದು, ಎಂಬ ಉಪರಾಷ್ಟ್ರಪತಿಯವರ ಹೇಳಿಕೆಯನ್ನು ಅವರು ಅಧಿಕಾರ ವಹಿಸಿಕೊಳ್ಳುವ ಮೊದಲೇ ತಳ್ಳಿ ಹಾಕಿದರು. ಸಂವಿಧಾನವೇ ಎಲ್ಲರಿಗೂ ಸರ್ವೋಚ್ಚ ಎಂದು ಅವರು ಒತ್ತಿ ಹೇಳಿದರು. ಮೊದಲಿನಿಂದಲೂ ಅಂಬೇಡ್ಕರ್ ವಾದದ ಕಟ್ಟಾ ಬೆಂಬಲಿಗರಾಗಿರುವ ಗವಾಯಿ, ಅಂಬೇಡ್ಕರ್ ನೀಡಿದ ಸಂವಿಧಾನದಿಂದಾಗಿಯೇ ಮೋದಿ ಪ್ರಧಾನಿಯಾಗಲು ಸಾಧ್ಯವಾಯಿತು ಮತ್ತು ತಾನು ಮುಖ್ಯ ನ್ಯಾಯಮೂರ್ತಿಯೂ ಆದೆ ಎಂದು ಹೇಳಿದರು. ಒಕ್ಕೂಟ

ಪ್ರಮುಖ ಪ್ರಕರಣಗಳಿರುವ ಸಂದರ್ಭದಲ್ಲಿ

ಈಗ ಅವರ ಮುಂದೆ ಹೊಸ ವಕ್ಫ್ ಕಾಯ್ದೆ ಪ್ರಕರಣ, ಪ್ರಾರ್ಥನಾ ಸ್ಥಳಗಳ ಕಾಯ್ದೆ ಪ್ರಕರಣ ಮತ್ತು ಇನ್ನೂ ಹಲವು ಪ್ರಮುಖ ಪ್ರಕರಣಗಳಿವೆ. ಇವು ದೇಶದ ರಾಜಕೀಯವನ್ನು ಮಾತ್ರವಲ್ಲದೆ ಸಾಮಾಜಿಕ-ಧಾರ್ಮಿಕ ಸಂಬಂಧಗಳನ್ನು ಸಹ ನಿರ್ದೇಶಿಸಬಹುದು. ವಾಸ್ತವವಾಗಿ ವಕ್ಫ್ ಕಾಯ್ದೆಯ ವಿರುದ್ಧದ ಪ್ರಕರಣ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಮುಂದೆ ಇತ್ತು. ಆರಂಭದಲ್ಲಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕೇಂದ್ರದಿಂದ ಯಾವುದೇ ಕ್ರಮ ಕೈಗೊಳ್ಳದಂತೆ ತಡೆದ ನ್ಯಾಯಮೂರ್ತಿ ಖನ್ನಾ ಅವರು, ತಮ್ಮ ಅಧಿಕಾರಾವಧಿ ಮುಗಿಯುತ್ತಿರುವುದರಿಂದ ಪ್ರಕರಣವನ್ನು ಮುಂದಿನ ನ್ಯಾಯಾಧೀಶರಿಗೆ ಹಸ್ತಾಂತರಿಸುವುದಾಗಿ ಘೋಷಿಸಿದರು.ಹೊಸ ಮುಖ್ಯ ನ್ಯಾಯಾಧೀಶರು ಅದನ್ನು ಆರು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆಯೇ ಎಂದು ಕಾದು ನೋಡಬೇಕಾಗಿದೆ.

ಇಷ್ಟೆಲ್ಲಾ ಹಲವು ನಿರ್ಣಾಯಕ ಪ್ರಕರಣಗಳನ್ನು ಬಗೆಹರಿಸಬೇಕಾದ ಸಮಯದಲ್ಲಿ ರಾಷ್ಟ್ರಪತಿಗಳ ಮೂಲಕ ಪ್ರಶ್ನೆಗಳ ರೂಪದಲ್ಲಿ ಕೇಂದ್ರವು ತನ್ನ ವಿರೋಧವನ್ನು ಪ್ರಕಟಿಸುವುದು ಮುಂಗಾಲುಗಳನ್ನು ಕಟ್ಟುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸಂವಿಧಾನದ ಮೇಲೆ ದಾಳಿ ಎಂಬುದು ಮೋದಿ ಸರ್ಕಾರಕ್ಕೆ ಒಂದು ಪರಿಪಾಠವಾಗಿದೆ. ಆದರೆ ಈಗ ಈ ವಿಷಯದಲ್ಲಿಯೂ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನೇ ಆಕ್ಷೇಪಿಸಿದೆ ಎಂದರೆ ರಾಜ್ಯಗಳ ಹಕ್ಕುಗಳನ್ನು ಮಾನ್ಯ ಮಾಡಲು ಕೇಂದ್ರ ಸರ್ಕಾರ ಸಿದ್ಧವಿಲ್ಲ ಎಂದರ್ಥ. ರಾಷ್ಟ್ರಪತಿಗಳ ಪ್ರಶ್ನೆಗಳ ಹೆಸರಿನಲ್ಲಿ ರಾಜ್ಯಗಳ ಹಕ್ಕುಗಳನ್ನು ರಾಜ್ಯಪಾಲರ ಕೈಯಲ್ಲಿ ಇಡುವುದು ಮಾತ್ರ ಸರಿಯಾದುದಲ್ಲ. ಈ ವಿಷಯಗಳ ಕುರಿತು ಭವಿಷ್ಯದ ಸವಾಲುಗಳಿಗೆ ಸಿಜೆಐ ಗವಾಯಿ ಹೇಗೆ ಸ್ಪಂದಿಸುತ್ತಾರೆ ಮತ್ತು ಕಾನೂನು ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಇದನ್ನೂ ನೋಡಿ: ದೇಶದ ಜನರಿಗೆ ತಣ್ಣೀರು ಎರಚುತ್ತಿರುವ ಮೋದಿ Janashakthi Media

ಇಷ್ಟೆಲ್ಲಾ ಹಲವು ನಿರ್ಣಾಯಕ ಪ್ರಕರಣಗಳನ್ನು ಬಗೆಹರಿಸಬೇಕಾದ ಸಮಯದಲ್ಲಿ ರಾಷ್ಟ್ರಪತಿಗಳ ಮೂಲಕ ಪ್ರಶ್ನೆಗಳ ರೂಪದಲ್ಲಿ ಕೇಂದ್ರವು ತನ್ನ ವಿರೋಧವನ್ನು ಪ್ರಕಟಿಸುವುದು ಮುಂಗಾಲುಗಳನ್ನು ಕಟ್ಟುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸಂವಿಧಾನದ ಮೇಲೆ ದಾಳಿ ಎಂಬುದು ಮೋದಿ ಸರ್ಕಾರಕ್ಕೆ ಒಂದು ಪರಿಪಾಠವಾಗಿದೆ. ಆದರೆ ಈಗ ಈ ವಿಷಯದಲ್ಲಿಯೂ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನೇ ಆಕ್ಷೇಪಿಸಿದೆ ಎಂದರೆ ರಾಜ್ಯಗಳ ಹಕ್ಕುಗಳನ್ನು ಅನುಮತಿಸಲು ಕೇಂದ್ರ ಸರ್ಕಾರ ಸಿದ್ಧವಿಲ್ಲ ಎಂದರ್ಥ. ರಾಷ್ಟ್ರಪತಿಗಳ ಪ್ರಶ್ನೆಗಳ ಹೆಸರಿನಲ್ಲಿ ರಾಜ್ಯಗಳ ಹಕ್ಕುಗಳನ್ನು ರಾಜ್ಯಪಾಲರ ಕೈಯಲ್ಲಿ ಇಡುವುದು ಮಾತ್ರ ಸರಿಯಾದುದಲ್ಲ. ಈ ವಿಷಯಗಳ ಕುರಿತು ಭವಿಷ್ಯದ ಸವಾಲುಗಳಿಗೆ ಸಿಜೆಐ ಗವಾಯಿ ಹೇಗೆ ಸ್ಪಂದಿಸುತ್ತಾರೆ ಮತ್ತು ಕಾನೂನು ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡೋಣ.

Donate Janashakthi Media

Leave a Reply

Your email address will not be published. Required fields are marked *