ನವದೆಹಲಿ: ಸುಮಾರು 50 ವರ್ಷಗಳಿಂದ ಸೇವೆ ನೀಡುತ್ತಿರುವ ದೇಶದ ಪ್ರಮುಖ ನೀತಿ ಸಂಶೋಧನಾ ಸಂಸ್ಥೆಯಾದ ‘ಸೆಂಟರ್ ಫಾರ್ ಪಾಲಿಸಿ ರಿಸರ್ಚ್'(ಸಿಪಿಆರ್) ನಿಯಮ ‘ಉಲ್ಲಂಘನೆ’ ಮಾಡಿದೆ ಎಂದು ಆರೋಪಿಸಿ ಅದರ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್ಸಿಆರ್ಎ) ಪರವಾನಗಿಯನ್ನು ಗೃಹ ವ್ಯವಹಾರಗಳ ಸಚಿವಾಲಯ ರದ್ದು ಮಾಡಿದೆ. ಗೃಹ ಸಚಿವಾಲಯದ ಈ ಅಮಾನತು ಸಂಸ್ಥೆಯ 22 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಿದೇಶಿ ನಿಧಿಗಳನ್ನು ‘ಫ್ರೀಜ್’ ಮಾಡಲಾಗಿದೆ.
ಗೃಹ ಸಚಿವಾಲಯದ ಅನುಮತಿಯಿಲ್ಲದೆ ಅವರು ಈಗಾಗಲೇ ಸ್ವೀಕರಿಸಿದ ವಿದೇಶಿ ದೇಣಿಗೆಗಳನ್ನು ಬಳಸಿದ್ದಾರೆ ಎಂದು ಆರೋಪಿಸಿ 2022ರ ಫೆಬ್ರವರಿ 27 ರಂದು, 180 ದಿನಗಳವರೆಗೆ ಸಿಪಿಆರ್ನ ನೋಂದಣಿಯನ್ನು ಅಮಾನತುಗೊಳಿಸಿತ್ತು ಹಾಗೂ ಸಂಸ್ಥೆಯು ವಿದೇಶಿ ದೇಣಿಗೆಗಳನ್ನು ಪಡೆಯುವುದನ್ನು ತಡೆದಿತ್ತು. ಅದರ ನಂತರ ಅಮಾನತು ಅವಧಿಯನ್ನು ಇನ್ನೂ 180 ದಿನಗಳವರೆಗೆ ವಿಸ್ತರಿಸಿತ್ತು. ಸಂಶೋಧನಾ ಸಂಸ್ಥೆ
ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ ಬಿಜೆಪಿಯ ರಾಜಕೀಯ ಕಾರ್ಯಕ್ರಮ; ಕಾಂಗ್ರೆಸ್ ಭಾಗವಹಿಸುವುದಿಲ್ಲ – ರಾಹುಲ್ ಗಾಂಧಿ
ಪರವಾನಗಿ ರದ್ದುಗೊಳಿಸುವ ನಿರ್ಧಾರವನ್ನು ಕಳೆದ ವಾರ ತೆಗೆದುಕೊಳ್ಳಲಾಗಿದ್ದು, ಜನವರಿ 10 ರಂದು ಸಿಪಿಆರ್ಗೆ ತಿಳಿಸಲಾಯಿತು ಎಂದು ವರದಿಗಳು ಉಲ್ಲೇಖಿಸಿವೆ. ಮಾಧ್ಯಮಗಳೊಂದಿಗೆ ಮಾತನಾಡಿದ ಸಿಪಿಆರ್ ಅಧ್ಯಕ್ಷ ಯಾಮಿನಿ ಅಯ್ಯರ್, “ಗೃಹ ಸಚಿವಾಲಯದ ಈ ಆದೇಶದ ವಿರುದ್ಧ ಸಂಸ್ಥೆಯು ಎಲ್ಲಾ ಆಯ್ಕೆಗಳನ್ನು ನೋಡುತ್ತದೆ. ಸಂಸ್ಥೆಯು ಕಾನೂನಿನ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುತ್ತಿತ್ತು. ನಮ್ಮ ಎಫ್ಸಿಆರ್ಎ ರದ್ದತಿಯು ದುಃಖಕರವಾಗಿದ್ದು, ಅಸಮಂಜಸವಾಗಿದೆ” ಎಂದು ಹೇಳಿದ್ದಾರೆ. ಸಂಶೋಧನಾ ಸಂಸ್ಥೆ
“ಯಾವುದೆ ಸೂಚನೆ ನೀಡದೆ ಸಚಿವಾಲಯ ಈ ನಿರ್ಧಾರೆ ತಗೆದುಕೊಂಡಿದೆ. ನಾವು ನಮ್ಮ ಪ್ರಮುಖ ಗುರಿಗಳಿಗೆ ಬದ್ಧರಾಗಿರುತ್ತೇವೆ ಮತ್ತು ಈ ಪ್ರಕರಣವನ್ನು ಸಾಂವಿಧಾನಿಕ ಮೌಲ್ಯಗಳು ಮತ್ತು ಖಾತರಿಗಳಿಗೆ ಅನುಗುಣವಾಗಿ ಪರಿಹರಿಸಲಾಗುವುದು ಎಂಬ ನಮ್ಮ ನಂಬಿಕೆಯಲ್ಲಿ ದೃಢವಾಗಿರುತ್ತೇವೆ” ಎಂದು ಅವರು ಹೇಳಿದ್ದಾರೆ.
ಈ ಹಿಂದೆ ತನ್ನ ಎಫ್ಸಿಆರ್ಎ ಪರವಾನಗಿಯನ್ನು ಅಮಾನತುಗೊಳಿಸಿರುವುದನ್ನು ದೆಹಲಿ ನ್ಯಾಯಾಲಯದಲ್ಲಿ ಸಿಪಿಆರ್ ಪ್ರಶ್ನಿಸಿತ್ತು. ಈ ವೇಳೆ ಪ್ರತಿಕ್ರಿಯಿಸಿದ್ದ ಕೇಂದ್ರ ಸರ್ಕಾರ, ಸಂಸ್ಥೆಯು “ಅನಪೇಕ್ಷಿತ ಉದ್ದೇಶಗಳಿಗಾಗಿ” ಅದನ್ನು ಬಳಸುತ್ತಿರುವುದರಿಂದ ಮತ್ತು ಅದು ದೇಶದ ಹಿತಾಸಕ್ತಿಯ ಮೇಲೆ ಪರಿಣಾಮ ಬೀರುವುದರಿಂದ ಹಣವನ್ನು ನಿಲ್ಲಿಸುವ ಅಗತ್ಯವಿದೆ ಎಂದು ವಾದಿಸಿತ್ತು.
ಇದನ್ನೂ ಓದಿ: ಗೂಗಲ್ ಜಾಹೀರಾತು ಮಾರಾಟ ವಿಭಾಗದ ನೂರಾರು ಉದ್ಯೋಗಿಗಳು ವಜಾ
ಸಿಪಿಆರ್ ಹಣವನ್ನು ವಿವಿಧ ಘಟಕಗಳಿಗೆ ವರ್ಗಾಯಿಸಿದ್ದು, ಗೊತ್ತುಪಡಿಸದ ಖಾತೆಯಲ್ಲಿ ಠೇವಣಿ ಮಾಡಿದೆ. ಇದು ಎಫ್ಸಿಆರ್ಎ ಉಲ್ಲಂಘನೆಯಾಗಿದೆ ಎಂದು ಕೇಂದ್ರವು ಆರೋಪಿಸಿದೆ. ಸಿಪಿಆರ್ನ ಎಫ್ಸಿಆರ್ಎ ಪರವಾನಗಿಯನ್ನು ಕೊನೆಯದಾಗಿ 2016 ರಲ್ಲಿ ನವೀಕರಿಸಲಾಗಿತ್ತು ಮತ್ತು 2021 ರಲ್ಲಿ ನವೀಕರಣಕ್ಕೆ ಬಾಕಿ ಇತ್ತು ಎಂದು ವರದಿಯಾಗಿದೆ.
ಸಿಪಿಆರ್ ವೆಬ್ಸೈಟ್ ತಾನು 1973 ರಿಂದ ಭಾರತದ ಪ್ರಮುಖ ಸಾರ್ವಜನಿಕ ನೀತಿ ಸಂಶೋಧನಾ ಸಂಸ್ಥೆಯೆಂದು ಹೇಳುತ್ತದೆ. ಸಿಪಿಆರ್ಗೆ ದಾನ ಮಾಡುವವರಲ್ಲಿ, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಾದ ಬಿಲ್ ಗೇಟ್ಸ್ ಅವರ ಬಿಲ್ ಆಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ, ವಿಶ್ವ ಸಂಪನ್ಮೂಲ ಸಂಸ್ಥೆ ಮತ್ತು ಡ್ಯೂಕ್ ವಿಶ್ವವಿದ್ಯಾಲಯ ಸೇರಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇಷ್ಟೆ ಅಲ್ಲದೆ, ಸಂಸ್ಥೆಯು ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿಯಿಂದ (ICSSR) ಅನುದಾನವನ್ನು ಪಡೆದಿದೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮಾನ್ಯತೆ ಪಡೆದ ಸಂಸ್ಥೆಯಾಗಿದೆ.
2022ರ ಸೆಪ್ಟೆಂಬರ್ನಲ್ಲಿ ಸಂಸ್ಥೆಯ ಮೇಲೆ ಆದಾಯ ತೆರಿಗೆ ಇಲಾಖೆಯು ದಾಳಿ ಮಾಡಿತ್ತು. ಇದೇ ವೇಳೆ ಆಕ್ಸ್ಫ್ಯಾಮ್ ಇಂಡಿಯಾ ಮತ್ತು ಬೆಂಗಳೂರು ಮೂಲದ ಇಂಡಿಪೆಂಡೆಂಟ್ ಮತ್ತು ಪಬ್ಲಿಕ್-ಸ್ಪಿರಿಟೆಡ್ ಮೀಡಿಯಾ ಫೌಂಡೇಶನ್ (ಐಪಿಎಸ್ಎಂಎಫ್) ಮೇಲೆ ಕೂಡಾ ದಾಳಿ ಮಾಡಲಾಗಿತ್ತು.
ವಿಡಿಯೊ ನೋಡಿ: ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಆಧಾರ್ ಆಧಾರಿತ ವೇತನ : ಮೋದಿ ಸರ್ಕಾರದ ಕ್ರೂರ ಉಡುಗೊರೆ Janashakthi Media