ನವದೆಹಲಿ : ಇತ್ತೀಚೆಗೆ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅಕ್ಕಿ ನೀಡಲು ನಿರಾಕರಿಸಿತ್ತು. ಇದೀಗ ಎಫ್‌ಸಿಐನ ಇ-ಹರಾಜಿನಲ್ಲಿ ಅಕ್ಕಿ ಕೊಳ್ಳುಲು ಯಾರು ಮುಂದೆ ಬಂದಿಲ್ಲ ಎಂದು ತಿಳಿದು ಬಂದಿದೆ.
ರಾಜ್ಯಗಳಿಗೆ ಅಕ್ಕಿ ಮಾರಾಟ ಮಾಡ್ಬಾರ್ದು ಅಂತ ಕೇಂದ್ರ ಸರ್ಕಾರ FCI ಆದೇಶ ನೀಡಿತ್ತು. ಜೊತೆಗೆ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗ್ತಿರೋದನ್ನ ನಿಯಂತ್ರಿಸಲು ಅಕ್ಕಿ ಮತ್ತು ಗೋಧಿ ಧಾನ್ಯಗಳನ್ನು ಇ-ಹರಾಜು ಮಾಡಲು FCI ಗೆ ಕೇಂದ್ರ ಸೂಚಿಸಿತ್ತು. ಆದರೆ ಕಳೆದ ವಾರ FCI, 3.86 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಹರಾಜಿಗಿಟ್ಟರೂ ಸಹ ಕೇವಲ 170 ಮೆಟ್ರಿಕ್ ಟನ್ ಅಕ್ಕಿ ಮಾತ್ರ ಹರಾಜಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜ್ಯ ಸರ್ಕಾರಗಳು ಈ ಬಿಡ್‌ನಲ್ಲಿ ಭಾಗವಹಿಸುವಂತಿಲ್ಲ. ಆದ್ರೆ ಖಾಸಗಿ ಉದ್ಯಮಗಳು ಮಾತ್ರ ಈ ಹರಾಜಿನಲ್ಲಿ ಭಾಗವಹಿಸೋಕೆ ಅವಕಾಶ ನೀಡಲಾಗಿದೆ ಈ ಕಾರಣದಿಂದ FCIಗೆ ಈಗ ಸಂಕಷ್ಟ ಎದುರಾಗಿದೆ ಎಂದು ತಿಳಿದು ಬಂದಿದೆ. ಜುಲೈ 5ರಂದು ನಡೆದ ಎಫ್‌ಸಿಐನ ಇ-ಹರಾಜಿನಲ್ಲಿ 19 ರಾಜ್ಯಗಳು ಹಾಗೂ ಈಶಾನ್ಯ ರಾಜ್ಯಗಳ ಒಕ್ಕೂಟ ಪ್ರದೇಶಕ್ಕೆ ಒಟ್ಟು 3.86 ಲಕ್ಷ ಟನ್ ಅಕ್ಕಿ ಮಾರಲು ಯೋಜನೆ ಮಾಡಲಾಗಿತ್ತು. 16 ರಾಜ್ಯಗಳಿಂದ ಬಿಡ್ಡಿಂಗ್ ಬಂದಿಲ್ಲ ಎಂದು ಇಲಾಖೆಯ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ.
ಇದನ್ನೂ ಓದಿ : ಅನ್ನಭಾಗ್ಯ ಅಕ್ಕಿಗೆ ಕೇಂದ್ರ ಸರ್ಕಾರ ಕೊಕ್ಕೆ – ಸಿದ್ದರಾಮಯ್ಯ
ಒಂದು ತಿಂಗಳ ಹಿಂದೆಯಷ್ಟೆ ಕರ್ನಾಟಕ ಸರ್ಕಾರವು ಅನ್ನ ಭಾಗ್ಯ ಯೋಜನೆಯಡಿ ಎಲ್ಲಾ ಬಿಪಿಎಲ್ ಕುಟುಂಬಗಳಿಗೆ ತಿಂಗಳಿಗೆ ಪ್ರತಿ ವ್ಯಕ್ತಿಗೆ 10 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲು ಎಫ್‌ಸಿಐನಿಂದ 2.28 ಲಕ್ಷ ಮೆಟ್ರಿಕ್ ಟನ್‌ಗಳನ್ನು ಕೋರಿತ್ತು. ಜೂನ್ 12 ರಂದು ಎರಡು ಪತ್ರಗಳಲ್ಲಿ ಎಫ್‌ಸಿಐ ಸುಮಾರು 2.22 ಲಕ್ಷ ಮೆಟ್ರಿಕ್ ಟನ್ ಪೂರೈಸಲು ಒಪ್ಪಿಕೊಂಡಿತ್ತು. ನಂತರ ಮರುದಿನವೇ ಸಾಧ್ಯವಿಲ್ಲ ಎಂದು ನಿರಾಕರಿಸಿದ್ದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಅಕ್ಕಿ ಪೂರೈಕೆ ಮಾಡುವಂತೆ ಮನವಿ ಮಾಡಿದ್ದರು. ಇತ್ತ ರಾಜ್ಯ ಆಹಾರ ಸಚಿವ ಕೆಎಚ್ ಮುನಿಯಪ್ಪ ಅವರು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪಿಯೂಷ್ ಗೋಯಲ್ ಅವರನ್ನು ಎರಡು ಸಲ ಭೇಟಿಯಾಗಿ ಮನವಿ ಮಾಡಿದ್ದರೂ ಕೇಂದ್ರ ಸರ್ಕಾರ ಬಿಲ್‌ಕುಲ್ ಒಪ್ಪಿರಲಿಲ್ಲ.
ರಾಜ್ಯದ ಜನರಿಗೆ ಅಗತ್ಯವಿದ್ದ ಅಕ್ಕಿ ಕೊಡುವುದಕ್ಕೆ ನಿರಾಕರಿಸಿದ ಕೇಂದ್ರದ ಬಿಜೆಪಿ ಸರ್ಕಾರವು, ಇ-ಹರಾಜು ಮೂಲಕ ಅಕ್ಕಿಯನ್ನು ಹರಾಜು ಮಾಡಲು ಮುಂದಾದರೆ ಅದನ್ನು ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕನ್ನಡಿಗರಿಗೆ ಅಕ್ಕಿ ಕೊಡದೆ ಡರ್ಟಿ ಪಾಲಿಟಿಕ್ಸ್ ಮಾಡಿದ್ದ ಕೇಂದ್ರದ ಅಕ್ಕಿಯನ್ನು ಖರೀದಿಸಲು ಈಗ ಯಾರೂ ಮುಂದಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.