ಫಾಸ್ಟ್ ಟ್ಯಾಗ್ ಗೆ ವ್ಯಾಪಕ ವಿರೋಧ , ಟೋಲ್ ನಿಂದ ” ಮುಕ್ತಿ” ಸಿಗೋದು ಯಾವಾಗ?

ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಎಂಬ ಕೇಂದ್ರ ಸರಕಾರದ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹಲವು ಟೋಲ್ ಗಳಲ್ಲಿ ವಾಹನ ಸವಾರರು ಪ್ರಶ್ನೆಯನ್ನು ಮಾಡ್ತಾ ಇದ್ದು ಮಾತಿನ ಚಕಮಕಿ ಕೂಡಾ ನಡೀತಾ ಇದೆ. ರಸ್ತೆಗೆ ಟೋಲ್  ತೆಗೆದುಕೊಳ್ಳುತ್ತಿರುವ ಸರಕಾರದ ಕ್ರಮ  ಎಷ್ಟು ಸರಿ?, ಅವಧಿ ಮುಗಿದ ಟೋಲ್ ಟೆಂಡರ್ ನ್ನು ಮತ್ತೆ ಮುಂದುವರೆಸುತ್ತಿರುವುದು ಯಾಕೆ? ಈ ಟೋಲ್ ಸುಲುಗೆ ನಿಲ್ಲೋದು ಯಾವಾಗ? ಎಂದು ವಾಹನ ಸವಾರರು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.

ಹೆದ್ದಾರಿಗಳ ಟೋಲ್‌ ಮೂಲಕ ಸಾಗುವ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಕಡ್ಡಾಯವೆಂಬ ನಿಯಮ ಸೋಮವಾರ ರಾತ್ರಿಯಿಂದ ಜಾರಿಗೆ ಬಂದಿದೆ.  ಫಾಸ್ಟ್ ಟ್ಯಾಗ್ ಕುರಿತು ಸರಕಾರದ ನಿಲುವನ್ನು ವಿರೋಧಿಸಿ ಹಲವು ಟೋಲ್ ಗೇಟ್ ನಲ್ಲಿ ವಾಹನ ಸವಾರರು ಪ್ರತಿಭಟನೆ ನಡೆಸಿದ್ದಾರೆ. ಪೆಟ್ರೋಲ್, ಡಿಸೈಲ್ ಬೆಲೆ ಏರಿಕೆಯ ನಡುವೆ ಫಾಸ್ಟ್ ಟ್ಯಾಗ್ ನಿಯಮ ವಾಹನ ಸವಾರರ ತಲೆ ಬಿಸಿ ಮಾಡಿದೆ. ‘ಫಾಸ್ಟ್‌ ಟ್ಯಾಗ್‌ ಇಲ್ಲದಿದ್ದರೆ ದುಪ್ಪಟ್ಟು ಶುಲ್ಕ ಕಟ್ಟಿ’ ಎನ್ನುವ ನಿಯಮದ ವಿರುದ್ಧ ಕೆಲವು ಚಾಲಕರು ಸಿಡಿಮಿಡಿಗೊಳುತ್ತಿದ್ದಾರೆ. ಟೋಲ್‌ ಸಿಬ್ಬಂದಿ ಜತೆ ಬಿರುಸಿನ ವಾಗ್ವಾದ ನಡಸ್ತಾ ಇದ್ದಾರೆ, ನಾಗಮಂಗಲದ ಟೋಲ್‌ನಲ್ಲಿ ‘ಬೌನ್ಸರ್‌’ಗಳು ವಾಹನ ಸವಾರರನ್ನು ಬೆದರಿಸಿದ ಘಟನೆಗಳು ನಡೆದಿವೆ. ಟೋಲ್ ರಸ್ತೆಗಳಲ್ಲಿ  ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ಸರಕಾರಗಳು ಹಗಲು ದರೋಡೆ ಮಾಡುತ್ತಿವೆ ಎಂದು ಆಮ್ ಆದ್ಮಿ ಪಾರ್ಟಿ  ಆರೋಪವನ್ನು  ಮಾಡಿದೆ.

ವಾಹನ ಪಡೆಯುವಾಗಲೂ ನಾವು ರಸ್ತೆಗೆ ಟ್ಯಾಕ್ಸ್ ಕಟ್ಟಿರುತ್ತೇವೆ, ಬೇರೆ ಬೇರೆ ಸಂದರ್ಭದಲ್ಲೂ ಟ್ಯಾಕ್ಸ್ ಕಟ್ಟಿರುತ್ತೇವೆ. ಒಂದೆಡೆ ಪೆಟ್ರೋಲ್, ಡಿಸೈಲ್ ಏರಿಕೆಯ ಬಿಸಿ, ಇನ್ನೊಂದೆಡೆ ಟೋಲ್, ಫಾಸ್ಟ್ ಟ್ಯಾಗ್ ಬಿಸಿ ನಾವು ಯಾವುದನ್ನು ಸಹಿಸಿಕೊಳ್ಳಬೇಕು? ಆಳುವ ಸರಕಾರಗಳು ಜನರ ಹಿತ ಕಾಪಾಡುವ ಬದಲು ಅವರು ಯಾರ ಪರ ಕೆಲಸ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಯವರು ಪ್ರಧಾನಿ ಆಗುವ ಮೊದಲು, ಕೇಂದ್ರ ಭೂ ಸಾರಿಗೆ, ಹೆದ್ದಾರಿ ಖಾತೆ ಅಷ್ಟೋನು ಮಹತ್ವವನ್ನು ಪಡೆದಿರಲಿಲ್ಲ. ಸುವರ್ಣ ಚತುಷ್ಪತ ಯೋಜನೆ ಜಾರಿಯಾಗಿ ಸುಂಕ ವಸೂಲಿ ಆರಂಭವಾಗುತ್ತಿದ್ದಂತೆ ಕೇಳುವವರಿಲ್ಲದ ಖಾತೆಗೆ ರಾಜಯೋಗ ಬಂತು. ಬಿ.ಸಿ.ಖಂಡೂರಿಯವರು ನಿರ್ವಹಿಸಿದ ಖಾತೆ, ಇಂದು ನಿತೀನ್ ಗಡ್ಕರಿಯಂತಹ ಪ್ರಭಾವಿಗಳ ಪಾಲಾಗಿದೆ. ರಾಷ್ಟ್ರೀಯ ಹೆದ್ಧಾರಿ ಪ್ರಾಧಿಕಾರ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದೆ. ಸುವರ್ಣ ಚತುಷ್ಪತ ಯೋಜನೆ ಜಾರಿಯಾಗುವ ವೇಳೆ ಬಹಳಷ್ಟು ಮಂದಿ ಆಕ್ಷೇಪ ವ್ಯಕ್ತ ಪಡಿಸಿದ್ದರು‌. ನಮ್ಮದೇ ಜಮೀನು, ನಮ್ಮದೇ ರಸ್ತೆ. ದುಡ್ಡು ಕೊಟ್ಟು ಯಾಕೆ ಓಡಾಡಬೇಕು ಎಂಬ ಪ್ರಶ್ನೆ ಕೇಳಿಬಂದಿದ್ದವು.

ರಸ್ತೆಯನ್ನು ನಿರ್ಮಾಣ ಮಾಡುವಂತದ್ದು ಸಾರ್ವಜನಿಕರ ಅನುಕೂಲಕ್ಕಾಗಿ ಅದಕ್ಕಾಗಿ ಸರಕಾರ ಸರಕಾರಿ ಭೂಮಿಯನ್ನು ಬಳಸಬಹುದು ಇಲ್ಲವೆ ಬೇರೆಯವರಿಂದ ಖರೀದಿಸಿ ರಸ್ತೆಯನ್ನು ನಿರ್ಮಿಸುತ್ತದೆ. ಸಾರ್ವಜನಿಕರಿಗಾಗಿ ನಿರ್ಮಿಸಿದ ರಸ್ತೆಯನ್ನು ನಿರ್ವವಣೆ ಮಾಡಲಿಕ್ಕಾಗಿ ಖಾಸಗಿ ಕಂಪನಿಗಳಿಗೆ ನೀಡುವ ಮೂಲಕ ಈ ಟೋಲ್ ಸಂಸ್ಕೃತಿಯನ್ನು ಹುಟ್ಟಿಹಾಕಲಾಯಿತು. ಈ ಟೋಲ್ ಗಳು ನಿಜಕ್ಕೂ ಸಾರ್ವಜನಿಕರ ರಕ್ತವನ್ನು ಹೀರುತ್ತಿವೆ. ಈಗ ಫಾಸ್ಟ್ ಟ್ಯಾಗ್ ಕಡ್ಡಾಯದ ಹೆಸರಿನಲ್ಲಿ ದುಪ್ಪಟ್ಟು ಹಣ ಪಡೆಯುವುದರಿಂದ ಸಾರ್ವಜನಿಕರು ಎಷ್ಟು ಹಣವನ್ನು ಕಟ್ಟಬೇಕಾಗುತ್ತದೆ ಎಂಬುದನ್ನು ನಾವು ತಿಳಿಯಬೇಕಿದೆ.

ನಿಮಗೆ ಇಲ್ಲೊಂದು ನಕ್ಷೆ ಕಾಣುತ್ತಿದೆ. ಅದರ ಒಂದೊಂದು ವಿವರಣೆಯನ್ನು ನಾವು ನೋಡ್ತಾ ಹೋಗೋಣ ಬೆಂಗಳೂರಿನಿಂದ ಬೆಳಗಾವಿಗೆ ನಾವು ಕಾರ್ ಮೂಲಕ ಪ್ರಯಾಣವನ್ನು ಮಾಡಿದರೆ ಬೆಳಗಾವಿಯನ್ನು ತಲುಪುವಷ್ಟರಲ್ಲಿ ನಮಗೆ  10 ಟೋಲ್ ಗಳು ಸಿಗುತ್ತವೆ. ಈ 10 ಟೋಲ್ ನಲ್ಲಿ 575 ರೂ ಹಣವನ್ನು ಸಂದಾಯ ಮಾಡಬೇಕಾಗುತ್ತದೆ. ಇದು ಕೇವಲ ಒಂದು ಕಡೆಯ ಪ್ರಯಾಣ ಮಾತ್ರ.  ಪಾಸ್ಟ್ ಟ್ಯಾಗ್ ಇಲ್ಲಾ ಅಂದ್ರೆ  1150 ರೂ ಹಣವನ್ನು ಸಂದಾಯ ಮಾಡಬೇಕಾಗುತ್ತದೆ. ಬೆಂಗಳೂರಿನಿಂದ ಶಿವಮೊಗ್ಗ ತಲುಪುವಷ್ಟರಲ್ಲಿ ನಾಲ್ಕು ಟೋಲ್ ಬರುತ್ತವೆ, 200 ರೂ ಹಣವನ್ನು ಕೊಡಬೇಕಾಗುತ್ತೆ.  ಬೆಂಗಳೂರಿನಿಂದ ಹಾಸನಕ್ಕೆ ಕಾರ್ ಮೂಲಕ ಹೋಗುವಾಗ ನಮಗೆ 5 ಟೋಲ್ ಗಳು ಎದರುಗಾತ್ತವೆ. 200 ರೂ ಟೋಲ್ ಶುಲ್ಕವನ್ನು ಅಲ್ಲಿ ಕಟ್ಟಬೇಕಾಗುತ್ತೆ. ಇದು ಕೇವಲ ಒಂದು ಕಡೆಯ ಪ್ರಯಾಣದ ಶುಲ್ಕ ಮಾತ್ರ, ಫಾಸ್ಟ್ ಟ್ಯಾಗ್ ಇಲ್ಲಾ ಅಂದ್ರೆ  ದುಪಟ್ಟು ಹಣ ಕೊಡಬೇಕು ಅಂದ್ರೆ 400 ರೂ ಕೊಡಬೇಕಾಗುತ್ತದೆ. ಬೆಂಗಳೂರಿನಿಂದ ತಿರುಪತಿಗೆ ಹೋಗುವಾಗ 3 ಟೋಲ್ ಗಳಲ್ಲಿ ನಾವು ಶುಲ್ಕ ಕಟ್ಟಬೇಕು. ಒಂದು ಬಾರಿ ಕಾರಿನ ಪ್ರಯಾಣಕ್ಕೆ 115  ರೂ ಕಟ್ಟಬೇಕಾಗುತ್ತದೆ.

ಬೆಂಗಳೂರಿನಿಂದ ಹೈದ್ರಾಬಾದ್ ಗೆ ಹೋಗುವಾಗ ಎಂಟು ಟೋಲ್ ಗಳು ಎದುರಾಗುತ್ತವೆ. ಒಂದು ಬಾರಿಯ ಪ್ರಯಾಣಕ್ಕೆ 760 ರೂ ಗಳನ್ನು ಟೋಲ್ ಶುಲ್ಕವಾಗಿ ನೀಡಬೇಕಾಗುತ್ತೆ. ಬೆಂಗಳೂರಿನಿಂದ ಚೆನ್ನೈ ಗೆ ಹೋಗುವಾಗ 6 ಟೋಲ್ ಗಳು ಎದುರಾಗುತ್ತವೆ ಅಲ್ಲಿ 370 ರೂ ಹಣವನ್ನು ಕಟ್ಟಬೇಕಾಗುತ್ತೆ. ಬೆಂಗಳೂರಿನಿಂದ ಕಲುಬುರಗಿಗೆ ಹೋಗುವಾಗ 04 ಟೋಲ್ ಗಳು ಬರುತ್ತವೆ. 410 ರೂ ಟೋಲ್ ಶುಲ್ಕವನ್ನು ಕಟ್ಟಬೇಕಾಗುತ್ತೆ. ಬೆಂಗಳೂರು ಹೊಸಪೇಟೆಗೆ ಹೋಗುವಾಗ 4 ಟೋಲ್ ಗಳು ಎದುರಾಗುತ್ತವೆ, ಅಲ್ಲಿ 200 ರೂ ಹಣವನ್ನು ಕೊಡಬೇಕು. ಫಾಸ್ಟ್ ಟ್ಯಾಗ್ ಹೊಂದಿಲ್ಲ ಅಂದ್ರೆ 400 ರೂ ಹಣವನ್ನು ಕೊಡಬೇಕಾಗುತ್ತೆ. ಅದೇ ರೀತಿ ಬೆಂಗಳೂರಿನಿಂದ ಕೊಡಗಿಗೆ ಹೋಗುವಾಗ 04 ಟೋಲ್ ಗಳು ಎದುರಾಗುತ್ತವೆ. 115 ರೂ ಗಳನ್ನು ಅಲ್ಲಿ ಟೋಲ್ ಶುಲ್ಕವಾಗಿ ಕಟ್ಟಬೇಕು, ಫಾಸ್ಟ್ ಟ್ಯಾಗ್ ಇಲ್ಲಾ ಎಂದಾದರೆ 230 ರೂ ಹಣವನ್ನು ಕಟ್ಟಬೇಕಾಗುತ್ತದೆ.

ಈಗಾಗಲೆ ಪೆಟ್ರೋಲ್, ಡಿಸೈಲ್  ಬೆಲೆ ಏರಿಕೆಯಿಂದ ತತ್ತರಿಸಿರುವ ಸಾರ್ವಜನಿಕರು ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿಸದ ಕಾರಣ ದುಪ್ಪಟ್ಟ ಹಣವನ್ನು ನೀಡಿ ಎನ್ನುವ ಕೇಂದ್ರ ಸರಕಾರದ ಆದೇಶಕ್ಕೆ ವ್ಯಾಪಕ ವಿರೊಧ ವ್ಯಕ್ತಪಡಿಸ್ತಾ ಇದ್ದಾರೆ, ರಸ್ತೆಯ ನಿರ್ವಹಣೆಯ ಹೆಸರಲ್ಲಿ ಖಾಸಗಿ ಕಂಪನಿಗಳ ಲೂಟಿಗೆ ಅವಕಾಶವನ್ನು ನೀಡಲಾಗುತ್ತಿದೆ. ಇದೊಂದು ದೊಡ್ಡ ಪ್ರಮಾಣದ ಕೇಂದ್ರ ಸರಕಾರದ ಭ್ರಷ್ಟಾಚಾರ ಎಂದೆಲ್ಲ ಆರೋಪವನ್ನು ಮಾಡುತ್ತಿದ್ದಾರೆ, ಅವರ ಆರೋಪ ನಿಜ ಎನ್ನುವಂತೆ ಕೆಲವೊಂದಿಷ್ಟು ದಾಖಲೆಗಳು ಸಾಕ್ಷಿಯನ್ನು ನೀಡ್ತಾ ಇವೆ.

ಆರಂಭದಲ್ಲಿ ಕೆಲವು ರಸ್ತೆಗಳನ್ನು 18 ವರ್ಷಗಳ ಅವಧಿವರೆಗೂ ಗುತ್ತಿಗೆ ನೀಡಲಾಗಿತ್ತು. ಟೋಲ್ ಶುಲ್ಕ ವಸೂಲಿ ಆರಂಭಿಸಿದ 12 ವರ್ಷಕ್ಕೆ ರಸ್ತೆ ನಿರ್ಮಾಣ ವೆಚ್ಚ ವಸೂಲಿಯಾಗಲಿದೆ, ಬಾಕಿ ಆರು ವರ್ಷ ನಿರ್ವಹಣೆಯ ಒಟ್ಟಾರೆ ವೆಚ್ಚವನ್ನು ವಸೂಲಿ ಮಾಡಿಕೊಳ್ಳಬಹುದು‌ ಎಂಬ ಅಂದಾಜಿತ್ತು. ಅನೇಕ ಟೋಲ್ ನಿರ್ವಹಣೆಯ ಗುತ್ತಿಗೆ ಅವಧಿ ಕಳೆದ ವರ್ಷ ಮುಗಿದಿದೆ. ಆದರೆ  ಸರ್ಕಾರಗಳು‌ ಈ ಅವಧಿಯನ್ನು ಸದ್ದಿಲ್ಲದೆ ಈಗ ಮತ್ತೆ 30 ವರ್ಷಗಳಿಗೆ ನವೀಕರಿಸಿಕೊಟ್ಟಿವೆ ಎಂಬ ಆಘಾತಕಾರಿ ಅಂಶಗಳು ಹೊರಬಿದ್ದಿವೆ.

ಹದಿನೆಂಟು ವರ್ಷಗಳವರಗೆ ಗುತ್ತಿಗೆ ಕೊಟ್ಟಾಗ ಹೊಸ ರಸ್ತೆ ನಿರ್ಮಿಸುವ ಜವಾಬ್ದಾರಿ ಇತ್ತು. ಹಾಲಿ ಇದ್ದ ರಸ್ತೆಯ ಅಕ್ಕ ಪಕ್ಕ ಮರ ಕಡಿದು, ಅಗಲೀಕರಣ ಮಾಡಿ, ಅಗತ್ಯ ಇರುವ ಕಡೆ ಸೇತುವೆಗಳನ್ನು ನಿರ್ಮಿಸಿ, ಟಾರ್ ಹಾಕಿದ್ದು ಬಿಟ್ಟರೆ ಖಾಸಗಿ ಕಂಪೆನಿಗಳು ಬೇರೆನು ಮಾಡಿಲ್ಲ. ನಿಯಮದ ಪ್ರಕಾರ ಸುಸಜ್ಜಿತ ಪರ್ಯಾಯ ರಸ್ತೆ ನಿರ್ಮಿಸಿಲ್ಲ. ರಸ್ತೆಗೆ ಅಗತ್ಯವಾದ ಭೂಮಿಯನ್ನು ಸರ್ಕಾರವೇ ಸ್ವಾಧೀನ‌ ಮಾಡಿಕೊಟ್ಟಿದೆ. ಈಗ ಮೂವತ್ತು ವರ್ಷ ಗುತ್ತಿಗೆ ನವೀಕರಿಸುವಾಗ ರಸ್ತೆ ಅಗಲೀಕರಣ ಸೇರಿದಂತೆ ಯಾವ ಹೆಚ್ಚುವರಿ ವೆಚ್ಚಗಳು ಇರಲಿಲ್ಲ. ಕಿತ್ತು ಹೋದ ರಸ್ತೆಗೆ ಒಂದಿಷ್ಟು ತೇಪೆ ಹಾಕಲಾಗಿದೆ. ಬಹಳಷ್ಟು ಕಡೆ ಅದನ್ನು ಸರಿಯಾಗಿ‌ ಮಾಡುತ್ತಿಲ್ಲ. ಪ್ರಶ್ನಿಸಿದವರ ಮೇಲೆ ಬೌನ್ಸರ್ ಗಳನ್ನು ಬಿಟ್ಟು  ಹಲ್ಲೆಗಳನ್ನು ಮಾಡಲಾಗುತ್ತಿದೆ. ಕೇಂದ್ರ ಸರಕಾರದ ಅಂಕಿ ಸಂಖ್ಯೆಯ ಪ್ರಕಾರ  ದಿನವೊಂದಕ್ಕೆ 80 ಕೋಟಿ‌ ರೂಪಾಯಿಗೂ ಹೆಚ್ಚು ಟೋಲ್ ವಸೂಲಿಯಾಗುತ್ತಿದೆ.

ರಾಜ್ಯದಲ್ಲಿ ಒಟ್ಟು 7335 ಕಿ.ಮೀ ರಾಷ್ಟ್ರೀ ಹೆದ್ದಾರಿ ಕಾಮಗಾರಿಯಲ್ಲಿ ಪ್ರಾಧಿಕಾರ, ಸ್ವತಃ ಟೋಲ್ ಸಂಗ್ರಹ ಮಾಡುತ್ತಿರುವುದು 521 ಕಿಲೋ ಮೀಟರ್ ಗೆ ಮಾತ್ರ. ಉಳಿದ 6814 ಕಿ.ಮೀಗೆ ಗುತ್ತಿಗೆದಾರರೇ ಸಂಗ್ರಹ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಹಣಸಂಗ್ರಹವಾಗುತ್ತಿದ್ದುರು ಇನ್ನೂ ಜನರು ಟೋಲ್ ಕಟ್ಟುವುದನ್ನ ನಿಲ್ಲಿಸಲಾಗುತ್ತಿಲ್ಲ. ಸಾರ್ವಜನಿಕರು ಉಚಿತವಾಗಿ, ಮುಕ್ತವಾಗಿ ಓಡಾಡುವುದು ಯಾವಾಗ? ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ. ಜೀವನ ಪರ್ಯಂತ ಬರೀ ಟೋಲ್ ಗಳಿಗೆ ಶುಲ್ಕವನ್ನು ಕೊಟ್ಟು ಪ್ರಯಾಣ ಮಾಡುವುದು ಅಸಾಧ್ಯ. ಸರ್ಕಾರ ಎಚ್ಚೆತ್ತುಕೊಂಡು ಟೋಲ್ ಗೆ ಬ್ರೆಕ್ ಹಾಕಬೇಕಿದೆ. ಅವೈಜ್ಞಾನಿಕ ಫಾಸ್ಟ್ ಟ್ಯಾಗ್ ನ್ನು ಕೈ ಬಿಡಬೇಕಿದೆ. ಇಲ್ಲವಾದರೆ ಶತಮಾನ ಕಳೆದರೂ ಸಾರ್ವಜನಿಕರು ಟೋಲ್ ಶುಲ್ಕವನ್ನು ಕಟ್ಟುತ್ತಲೇ ಇರಬೇಕಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *