ಚಂಸು ಪಾಟೀಲ್
ಈಗೀಗ ಭೂಮಿಯ ಬೆಲೆ ರೈತನ ಕೈಗೆ ಎಟುಕದಷ್ಟು ಎತ್ತರಕ್ಕೇರಿದೆ. ಯಾವ ಹೊಲ ಎಷ್ಟು ಬೆಳೆಯುತ್ತದೆ ಎಂಬುದೂ ಗೌಣವಾಗಿದೆ. ಬೆಳೆದುಣ್ಣುವುದಕ್ಕಿಂತ, ಬೆಳೆದು ಬದುಕುವುದಕ್ಕಿಂತ ಯಾವ ಹೊಲ ಮಾರಾಟಕ್ಕೆ ಸೂಕ್ತವಾಗಿದೆ. ಯಾವುದು ಹೆಚ್ಚು ಬೆಲೆ ಬಾಳುತ್ತದೆ ಎಂಬುದೇ ಈಗ ಹಂಚಿಕೆಗೆ ಆಧಾರವಾಗಿದೆ. ರಸ್ತೆಯ ಸಮೀಪ, ಊರಿನ ಸಮೀಪ ಇರುವ ಹೊಲ, ಈಗಾಗಲೇ ಮತ್ತೆ ಮತ್ತೆ ಹಿಸ್ಸೆಗಳಾಗಿ ಒಂದೇ ಎಕರೆಗೆ ತಲುಪಿರುತ್ತದೆ. ಕೃಷಿಯ
ಜಮೀನು ಅಖಂಡವಾಗಿ ಇದ್ದಾಗ ಮಾತ್ರ ಅದು ಆಧುನಿಕ ಕೃಷಿಗೆ ಅನುಕೂಲಕರ. ಏಕೆಂದರೆ, ಆಧುನಿಕ ಕೃಷಿ ಹೆಚ್ಚಾಗಿ ಯಾಂತ್ರಿಕ ಕೃಷಿಯೆ ಆಗಿರುತ್ತದೆ. ಟ್ರ್ಯಾಕ್ಟರ್‌ಗಳ ಮೂಲಕವೆ ಅಲ್ಲಿ ಹೊಲವನ್ನು ಉತ್ತಿ ಬಿತ್ತಲಾಗುತ್ತದೆ. ಆಧುನಿಕ ಕೃಷಿಯೇನೋ ಇಲ್ಲಿ ಜಾರಿಗೆ ಬಂತು. ಅದರ ಜೊತೆಗೆ ಅದಕ್ಕೆ ಪ್ರತಿಕೂಲವೆನಿಸಬಹುದಾದ ಜಮೀನು ಹಂಚಿಕೆಯ ಪ್ರಕ್ರಿಯೆಯ ಬಗ್ಗೆ ನಾವು ಆಲೋಚಿಸಲೇ ಇಲ್ಲ. ಜಮೀನು ಹಂಚಿಕೆಯ ನಂತರ ಚಿಕ್ಕ ಹಿಡುವಳಿದಾರರಾಗುವ ರೈತರಿಗೆ ಎಲ್ಲ ರೀತಿಯಿಂದಲೂ ನಮ್ಮ ಪಾರಂಪರಿಕ ಇಲ್ಲವೇ ಸಾವಯವ ಕೃಷಿಯೇ ಅನುಕರಣೆಗೆ ಉತ್ತಮ ಮಾರ್ಗ. ಆದರೆ, ಆಧುನಿಕ ಕೃಷಿಯ ಭರಾಟೆಯಲ್ಲಿ ಚಿಕ್ಕಪುಟ್ಟ ರೈತರೆಲ್ಲರೂ ಆಧುನಿಕ ಕೃಷಿಗೇ ಜೋತು ಬಿದ್ದಿದ್ದು ಕೂಡ ಅವರ ವೈಫಲ್ಯಕ್ಕೆ ಮುಖ್ಯವಾದ ಕಾರಣಗಳಲ್ಲೊಂದು. ಕೃಷಿಯ
ನಮ್ಮೂರಿನಲ್ಲೆ ಇದಕ್ಕೆ ಸಾಕಷ್ಟು ದೃಷ್ಟಾಂತಗಳು ಸಿಗುತ್ತವೆ. ಅಣ್ಣ ತಮ್ಮಂದಿರು ಬೇರೆಯಾಗಿ ಹೊಲ ಪಾಲು ಮಾಡಿಕೊಂಡ ನಂತರ ಸಾಗುವಳಿ ಭೂಮಿ ಕಡಿಮೆ ಆಯಿತು ಎಂದು ಎತ್ತು, ದನಕರಗಳನ್ನು ಮಾರಿಬಿಡುತ್ತಾರೆ. ಉದಾಹರಣೆಗೆ ಎಂಟು ಎಕರೆ ಜಮೀನು ಹೊಂದಿ ಕಮ್ತ ಮಾಡುತಿದ್ದ ಕುಟುಂಬವೊಂದು ಬೇರೆಯಾದಾಗ ಆ ಕುಟುಂಬದಲ್ಲಿ ಮೂರು ಪಾಲುಗಳಾದವು ಎಂದಿಟ್ಟುಕೊಳ್ಳೋಣ. ಆಗ ಅಲ್ಲಿ ಮೂವರಿಗೂ ತಲಾ ಸರಿಸುಮಾರು ಎರಡುಮುಕ್ಕಾಲು ಎಕರೆ ಜಮೀನು ಬರುತ್ತದೆ, ಇದಿಷ್ಟಕ್ಕೆಲ್ಲ ಎತ್ತು ಕಟ್ಟುವುದು, ವೆಚ್ಚದ ಮತ್ತು ಕಷ್ಟದ ಕೆಲಸ ಎಂದು ಅವರು ಲೆಕ್ಕ ಹಾಕುತ್ತಾರೆ. ಕೊನೆಗೆ ತಮ್ಮ ಹೊಲಗಳನ್ನು ಟ್ರ್ಯಾಕ್ಟರ್‌ಗಳಿಗೆ ಬಾಡಿಗೆ ತೆತ್ತು ಉತ್ತಿ ಬಿತ್ತಿ ಬೆಳೆ ತೆಗೆಯುತ್ತಾರೆ.
ಅದರೊಲ್ಲೊಬ್ಬನಿಗೆ ಕಮ್ತದಲ್ಲಿ ಆಸಕ್ತಿ ಹಾಗೂ ಧೈರ್ಯವಿದ್ದಲ್ಲಿ ಮಾತ್ರ ಎತ್ತುಗಳನ್ನು ಉಳಿಸಿಕೊಂಡು ಬೇರೆ ಯಾರದೋ ಮೂರ್ನಾಲ್ಕು ಎಕರೆ ಹೊಲವನ್ನು ಲಾವಣಿಗೋ, ಕೋರಿಗೋ ಹಾಕಿಸಿಕೊಂಡು ಕಮ್ತ ಮಾಡುತ್ತಾನೆ. ಉಳಿದಿಬ್ಬರು ತಮ್ಮ ಪಾಲಿನ ಜಮೀನನ್ನು ಬೇರೆಯವರಿಗೆ ಲಾವಣಿಗೆ ಇಲ್ಲವೇ, ಕೋರಿಗೆ ಕೊಡುವ ಸಂಭಾವ್ಯತೆಯೇ ಹೆಚ್ಚು. ಅವರು ಹೀಗೆ ಮಾಡಿದರೆ ರೈತರಾಗಿ ಉಳಿದಿರುವುದಿಲ್ಲ. ಆದರೂ ಅವರು ಸರ್ಕಾರದ ದೃಷ್ಟಿಯಲ್ಲಿ ಅತಿ ಚಿಕ್ಕ ರೈತರೆನಿಸಿಕೊಂಡು ಅತಿ ಹೆಚ್ಚು ಸಹಾಯ, ಸೌಲಭ್ಯ ಪಡೆಯುತ್ತಾರೆ. ಅಥವಾ ಅವರೇ ಆ ಹೊಲವನ್ನು ಸಾಗುವಳಿ ಮಾಡಿದರೂ ಅವರು ಎಲ್ಲದಕ್ಕೂ ತಮ್ಮದಲ್ಲದ ಯಂತ್ರಗಳನ್ನೇ ಅವಲಂಬಿಸಿರುತ್ತಾರೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮಹಿಳಾ ಮೀಸಲಾತಿ ಮಸೂದೆ ತಂದಿರುವುದು ಸ್ಪಷ್ಟವಾಗಿದೆ-ಸಿಪಿಐ(ಎಂ) ಸಂಸದ ಆರಿಫ್
ನೂರಿನ್ನೂರು ಹೆಕ್ಟೇರ್ ಹೊಂದಿರುವ ಅಮೇರಿಕೆ ಹಿಡುವಳಿದಾರರಿಗೆ ಆಧುನಿಕ ಕೃಷಿ ಎಲ್ಲ ರೀತಿಯಿಂದಲೂ ಪ್ರಯೋಜನಕಾರಿ. ಅದನ್ನೆ ಇಲ್ಲಿ ಅನುಸರಿಸಿದಾಗ ನಮ್ಮಲ್ಲಿನ ಚಿಕ್ಕ ಹಿಡುವಳಿದಾರರು ಅನಿವಾರ್ಯವಾಗಿ ಯಾಂತ್ರೀಕರಣದ ಸುಳಿಗೆ ಸಿಕ್ಕರು. ಯಂತ್ರೋದ್ಯಮದ ಲಾಬಿಗೆ ಬಲಿಯಾದ ಸರ್ಕಾರಗಳೂ ಸಾಲ, ಸಹಾಯಧನಗಳನ್ನು ನೀಡಿದ್ದರಿಂದ ರೈತರೂ ಟ್ರ್ಯಾಕ್ಟರ್‌ಗಳಿತ್ಯಾದಿ ಬೇಸಾಯದ ಯಂತ್ರಗಳನ್ನು ಹೊಂದುವ ಪ್ರಲೋಭನೆಗೆ ಬಿದ್ದರು.
ಎರಡು ಎತ್ತುಗಳನ್ನು ಕಟ್ಟಿದರೆ ಕನಿಷ್ಠವೆಂದರೂ ಹದಿನೈದು ಎಕರೆ ಹೊಲವನ್ನು ಸಾಗುವಳಿ ಮಾಡಬಹುದು. ಆದರೆ, ನಮ್ಮಲ್ಲಿ ಈಗ ನೋಡಿದರೆ ಐದಾರು ಎಕರೆ ಇರುವವರು ಕೂಡ ಟ್ರ್ಯಾಕ್ಟರ್ ಹೊಂದಿರುವುದು ಕಂಡುಬರುತ್ತದೆ. ಇಲ್ಲಿ ಸಣ್ಣ ಹಿಡುವಳಿದಾರನೊಬ್ಬ ಟ್ರ್ಯಾಕ್ಟರ್ ಹೊಂದುವುದು ಅವನ ಹೊಲವನ್ನಷ್ಟೇ ಉಳಲು ಅಲ್ಲ. ಬದಲಾಗಿ ಬೇರೆಯವರ ಜಮೀನನ್ನು ಉಳಲು. ಆ ಮೂಲಕ ಟ್ರ್ಯಾಕ್ಟರ್‌ನ ಸಾಲ ತೀರಿಸಿ ನಂತರ ಲಾಭ ಪಡೆಯಬಹುದೆಂಬುದೇ ಇದರ ಹಿಂದಿನ ಉದ್ದೇಶವಾಗಿರುತ್ತದೆ. ಹೀಗೆ, ಲಾಭದ ದೃಷ್ಟಿಯನ್ನಿಟ್ಟುಕೊಂಡೇ ಟ್ರ್ಯಾಕ್ಟರ್ ಕೊಳ್ಳುವ ರೈತ ಇತರ ರೈತರನ್ನು ಶೋಷಿಸದೇ ಇರಲಾರ. ಕೊನೆಗೆ ಸೀಮಿತ ಅವಧಿಯಲ್ಲಿ ಸಾಲ ತೀರದಿದ್ದರೂ ಅವನು ಹತಾಶನಾಗದೇ ಇರಲಾರ. ಇನ್ನು ಟ್ರ್ಯಾಕ್ಟರ್ ಮೂಲಕವೇ ಹೊಲ ಉತ್ತಿ ಬಿತ್ತಿ ಬೆಳೆವ ರೈತರಿಗೆ ಬಂದ ಆದಾಯದಲ್ಲಿ ಗರಿಷ್ಟ ಪಾಲು ಟ್ರ್ಯಾಕ್ಟರ್ ಮಾಲಿಕರಿಗೆ ಹೋಗುವುದರಿಂದ ಅವನೂ ತ್ರಿಶಂಕು!
ಅಪ್ಪನ ಕಾಲದಲ್ಲಿ ಜಮೀನನ್ನು ಅದರ ಫಲವತ್ತತೆಯ ಆಧಾರದ ಮೇಲೆ ಹಂಚಿಕೊಳ್ಳುತಿದ್ದರು. ಅಂದರೆ, ಫಲವತ್ತಾದ ಎರಡೆಕರೆ ಒಬ್ಬನಿಗೆ ಬಂದರೆ, ಸಾಧಾರಣ ಫಲವತ್ತತೆ ಇರುವ ನಾಲ್ಕೈದು ಎಕರೆ ಮತ್ತೊಬ್ಬನಿಗೆ ಬರುತಿತ್ತು. ಯಾವ ಹೊಲ ಚೆನ್ನಾಗಿ ಬೆಳೆಯುತ್ತದೆ. ಯಾವ ಹೊಲದಲ್ಲಿ ಸಾಧಾರಣ ಬೆಳೆ ಬರುತ್ತದೆ ಎಂಬುದೇ ಹಂಚಿಕೆಯಲ್ಲಿ ಪ್ರಮುಖ ಪಾತ್ರವಹಿಸುತಿತ್ತು. ಏಕೆಂದರೆ,ಆಗ ಹೊಲಗಳಲ್ಲಿ ಬಿತ್ತಿ ಬೆಳೆಯುವುದು, ಮತ್ತು ಅದರ ಮೇಲೆಯೆ ಬದುಕನ್ನು ಕಟ್ಟಿಕೊಳ್ಳುವುದೆ ಕೃಷಿಕರ ಆದರ್ಶವಾಗಿತ್ತು.
ಈಗೀಗ ಭೂಮಿಯ ಬೆಲೆ ರೈತನ ಕೈಗೆ ಎಟುಕದಷ್ಟು ಎತ್ತರಕ್ಕೇರಿದೆ. ಯಾವ ಹೊಲ ಎಷ್ಟು ಬೆಳೆಯುತ್ತದೆ ಎಂಬುದೂ ಗೌಣವಾಗಿದೆ. ಬೆಳೆದುಣ್ಣುವುದಕ್ಕಿಂತ, ಬೆಳೆದು ಬದುಕುವುದಕ್ಕಿಂತ ಯಾವ ಹೊಲ ಮಾರಾಟಕ್ಕೆ ಸೂಕ್ತವಾಗಿದೆ. ಯಾವುದು ಹೆಚ್ಚು ಬೆಲೆ ಬಾಳುತ್ತದೆ ಎಂಬುದೇ ಈಗ ಹಂಚಿಕೆಗೆ ಆಧಾರವಾಗಿದೆ. ರಸ್ತೆಯ ಸಮೀಪ, ಊರಿನ ಸಮೀಪ ಇರುವ ಹೊಲ, ಈಗಾಗಲೇ ಮತ್ತೆ ಮತ್ತೆ ಹಿಸ್ಸೆಗಳಾಗಿ ಒಂದೇ ಎಕರೆಗೆ ತಲುಪಿರುತ್ತದೆ. ಅದನ್ನು ಸಾಗುವಳಿಗೆ ಅನುಕೂಲವಾಗುತ್ತದೆ ಎಂದು ಒಬ್ಬರೆ ತೆಗೆದುಕೊಳ್ಳುವುದಿಲ್ಲ.ಎಲ್ಲರೂ ಹಂಚಿಕೊಳ್ಳುತ್ತಾರೆ. ನಾಳೆ ಅಲ್ಲಿ ನಿವೇಶನಗಳಾದರೆ ಅದು ಕೋಟಿ ಕೋಟಿ ಬೆಲೆ ಬಾಳುತ್ತದೆ ಎಂಬುದೇ ಇಲ್ಲಿ ಮುಖ್ಯವಾಗಿರುತ್ತದೆ. ನಾನಿದನ್ನೆಲ್ಲ ಏಕೆ ವಿವರಿಸಬೇಕಾಯಿತೆಂದರೆ, ಇವತ್ತು ರೈತರ ದೃಷ್ಟಿಕೋನದಲ್ಲಿ ಆಗಿರುವ ಈ ಬದಲಾವಣೆ ಏನೆಲ್ಲವನ್ನೂ ಹೇಳುತ್ತದೆ. ಕೃಷಿಯ ಬದುಕು ಅಸ್ಥಿರವೂ ಅತಂತ್ರವೂ ಆಗಿದ್ದು ಅದರಲ್ಲೇ, ಮುಂದುವರೆಯುವ ಬದಲು ಸಾಧ್ಯವಾದರೆ ಅಲ್ಲಿಂದ ಕಾಲ್ತೆಗೆಯುವ ಮನೋಭಾವ ಇಲ್ಲಿ ಕಂಡುಬರುತ್ತದೆ.
ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ನಾವಿಂದು ಹಿಡುವಳಿಗಳು ಪದೇ ಪದೇ ವಿಭಜಿತಗೊಂಡು ಚಿಕ್ಕ ಚಿಕ್ಕ ಘಟಕಗಳಾಗಿ ರೂಪುಗೊಳ್ಳುವುದನ್ನು ನಿಯಂತ್ರಿಸುವತ್ತ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಲೇಬೇಕಾದ ಸಂಧಿಗ್ದತೆಯಲ್ಲಿದ್ದೇವೆ. ನೀರಾವರಿಯಾದರೆ ಐದು, ಮಳೆಯಾಶ್ರಿತವಾದರೆ ಹತ್ತು ಎಕರೆ ಜಮೀನು ಒಂದು ಕುಟುಂಬಕ್ಕೆ ಅನಿವಾರ್ಯ ಎನ್ನುವುದಾದರೆ ಅದರ ನಂತರ ಭೂಮಿ ಮತ್ತೆ ವಿಭಜಿತಗೊಳ್ಳದಂತೆ ಪರಿಹಾರೋಪಾಯಗಳನ್ನು ಹುಡುಕಿಕೊಳ್ಳಬೇಕಿದೆ.
ಇಲ್ಲವಾದರೆ, ಎಲ್ಲರೂ ರೈತರೆ ಎಂದುಕೊಂಡು ಎಲ್ಲರಿಗೂ ಸಾಲಸೌಲಭ್ಯ ನೀಡುವುದು, ಸಾಲ ತೀರಿಸಲಾಗದೇ ರೈತರು ವಿವಶರಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಮತ್ತು ಕೃಷಿ ಕ್ಷೇತ್ರದ ಇಂಥ ಬಿಕ್ಕಟ್ಟುಗಳ ಪರಿವೆಯೆ ಇಲ್ಲದ ರಾಜಕೀಯ ಪಕ್ಷಗಳು ತಮ್ಮ ಸ್ವಹಿತಾಸಕ್ತಿಗಾಗಿಯೆ ‘ಸಾಲಮನ್ನಾ’ ಡ್ರಾಮಾ ಮಾಡುವ ದುಸ್ವಪ್ನಗಳು ಘಟಿಸುತ್ತಲೇ ಇರುತ್ತವೆ.
ವಿಡಿಯೋ ನೋಡಿ:“ಹೈದರಾಬಾದ್ ವಿಮೋಚನಾ ದಿನ” ಮರೆಮಾಚಿದ ಸತ್ಯಗಳೇನು? ಜಿ.ಎನ್. ನಾಗರಾಜ್ ವಿಶ್ಲೇಷಣೆಯಲ್ಲಿ | Janashakthi Media