ರೈತರ ಮಾತು ಸರ್ಕಾರ ಕೇಳಿಲ್ಲವೆಂದರೆ ವಿಧಾನಸೌಧಕ್ಕೆ ನುಗ್ಗಲಿದ್ದೇವೆ: ತೆಂಗು ಬೆಳೆಗಾರರ ಎಚ್ಚರಿಕೆ

ರೈತರಿಗೆ ಸರ್ಕಾರ ಟೋಪಿ ಹಾಕುತ್ತಿದೆ ಎಂದು ಕೆಪಿಆರ್‌ಎಸ್ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಹೇಳಿದ್ದಾರೆ

ಬೆಂಗಳೂರು: ಮಾರುಕಟ್ಟೆಯಲ್ಲಿ ಕೊಬ್ಬರಿಯನ್ನು ಕ್ವಿಂಟಾಲ್‌ಗೆ 6 ಸಾವಿರ ರೂ.ಗಳಿಗೆ ಮಾರಾಟ ಮಾಡುವ ದುಸ್ಥಿತಿ ಇದ್ದು, ಒಂದು ಕ್ವಿಂಟಾಲ್‌ಗೆ 16 ಸಾವಿರ ರೂ.ಗಳಿಗೂ ಹೆಚ್ಚು ಖರ್ಚು ಬರುತ್ತದೆ ಆದರೆ ಒಕ್ಕೂಟ ಸರ್ಕಾರ 11 ಸಾವಿರ ಬೆಲೆ ನಿಗದಿಪಡಿಸಿ ರೈತರಿಗೆ ಟೋಪಿ ಹಾಕುತ್ತಿದೆ. ಸರ್ಕಾರ ರೈತರ ಮಾತು ಕೇಳಿಲ್ಲವೆಂದರೆ ವಿಧಾನ ಸೌಧಕ್ಕೆ ನುಗ್ಗಲಿದ್ದೇವೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌)ದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಅವರು ಆಕ್ರೋಶ ವ್ಯಕ್ತಪಡಿಸಿದರು.

ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ 16,730 ರೂ. ಬೆಂಬಲ ಬೆಲೆ ನಿಗದಿ ಪಡಿಸುವಂತೆ ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ‘ತೆಂಗು ಬೆಳೆಗಾರರ ಹೋರಾಟ ಸಮಿತಿ’  ಬುಧವಾರ ವಿಧಾನ ಸೌಧ ಚಲೋ ಪ್ರತಿಭಟನೆ ನಡೆಸಿತು.

ಕೆಪಿಆರ್‌ಎಸ್‌ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ತೆರೆಯುವಂತೆ ರೈತರು ಒತ್ತಾಯಿಸಿದ್ದು, ಕೇಂದ್ರ ಸರ್ಕಾರದ ತಪ್ಪು ಆಮದು ನೀತಿ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ದಾವಣಗೆರೆ: ಕೆಎಸ್‌ಆರ್‌ಟಿಸಿ ಬಸ್ ಅಡ್ಡಗಟ್ಟಿ ದೌರ್ಜನ್ಯ ಎಸಗಿದ ಖಾಸಗಿ ಬಸ್‌ ಸಿಬ್ಬಂದಿ!

ಪ್ರತಿಭಟನೆಯಲ್ಲಿ ಮಾತನಾಡಿದ ಯಶವಂತ ಅವರು, “ಮಾರುಕಟ್ಟೆಯಲ್ಲಿ ಕೊಬ್ಬರಿ ಒಂದು ಕ್ವಿಂಟಾಲ್‌ಗೆ 6 ಸಾವಿರ ಮಾರಾಟ ಮಾಡುವ ದುಸ್ಥಿತಿ ಇದೆ. ಆದರೆ ಒಂದು ಕ್ವಿಂಟಾಲ್‌ಗೆ 16,730 ಖರ್ಚು ಬರುತ್ತದೆ ಎಂದು ರಾಜ್ಯ ತೋಟಗಾರಿಕೆ ಇಲಾಖೆಯ ವರದಿ ಹೇಳಿದೆ. ಆದರೆ ಕೇಂದ್ರ ಸರ್ಕಾರ 11 ಸಾವಿರ ಬೆಲೆ ನಿಗದಿಪಡಿಸಿ ರೈತರಿಗೆ ಟೋಪಿ ಹಾಕುತ್ತಿದೆ”

“ಇಷ್ಟೆ ಅಲ್ಲದೆ ಕೇಂದ್ರ ಸರ್ಕಾರ ನಫೇಡ್ ಮೂಲಕ ಖರೀದಿಗೆ ಹಣವೆ ನೀಡಿಲ್ಲ. ತೋಟಗಾರಿಕೆ ಇಲಾಖೆ ಶಿಫಾರಸು ಮಾಡಿರುವ 16,730 ರೂ.ಗೆ ಖರೀದಿ ಮಾಡಬೇಕು. ಸರ್ಕಾರ ರೈತರ ಮಾತು ಕೇಳಿಲ್ಲವೆಂದರೆ ವಿಧಾನ ಸೌಧಕ್ಕೆ ನುಗ್ಗಲಿದ್ದೇವೆ” ಎಂದು ಎಚ್ಚರಿಸಿದರು.

“ರಾಜ್ಯದಲ್ಲಿ ಒಟ್ಟು 6.46 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಬೆಳೆಯಲಾಗುತ್ತಿದ್ದು, ವಾರ್ಷಿಕ ಕೊಬ್ಬರಿ ಉತ್ಪಾದನೆ 2.18 ಲಕ್ಷ ಮೆಟ್ರಿಕ್ ಟನ್‌ನಷ್ಟಿದೆ. ಇಂತಹ ಪ್ರಮುಖ ತೋಟಗಾರಿಕಾ ಬೆಳೆಯಾದ ಕೊಬ್ಬರಿ ಬೆಲೆಯು ಹಿಂದೆಂದೂ ಕೇಳಿರದ ಪ್ರಮಾಣದಲ್ಲಿ, ಕ್ವಿಂಟಾಲ್‌ಗೆ 6-7 ಸಾವಿರಕ್ಕೆ ಕುಸಿದಿದೆ. ಕೊಬ್ಬರಿಯ ಬೆಲೆ ಪಾತಾಳಕ್ಕೆ ಇಳಿದಿರುವುದು ತೆಂಗು ಬೆಳೆಯುವ ಪ್ರದೇಶದ ರೈತರಲ್ಲಿ ಆತಂಕವನ್ನು ಉಂಟುಮಾಡಿದೆ” ಎಂದು ಹೇಳಿದರು.

ಕೆಪಿಆರ್‌ಎಸ್ ರಾಜ್ಯ ಹಣಕಾಸು ಕಾರ್ಯದರ್ಶಿ ಎಚ್.ಆರ್‌. ನವೀನ್ ಕುಮಾರ್ ಮಾತನಾಡಿ, “ಕೇಂದ್ರ ಸರ್ಕಾರದ ತಪ್ಪು ಆಮದು ನೀತಿ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷದಿಂದಾಗಿ ರಾಜ್ಯದ ತೆಂಗು ಬೆಳೆಯುವ ರೈತರು ಅತ್ಯಂತ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಹೊರ ದೇಶಗಳಿಂದ ತೆಂಗು, ಕೊಬ್ಬರಿ, ತೆಂಗಿನ ಉಪ ಉತ್ಪನ್ನಗಳು ಮತ್ತು ಪಾಮಾಯಿಲ್ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇದರ ಪರಿಣಾಮವಾಗಿ ಸ್ಥಳೀಯವಾಗಿ ತೆಂಗು ಬೆಳೆಯುವ ರೈತರಿಗೆ ಸರಿಯಾದ ಮಾರುಕಟ್ಟೆ ಸಿಗುತ್ತಿಲ್ಲ” ಎಂದು ಆರೋಪಿಸಿದರು.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹಿಂಸಾಚಾರ ದಾಳಿ: ಮೆಟ್ಟಿನಿಂತ ಸಿಪಿಐ(ಎಂ), ಎಡ ಶಕ್ತಿಗಳು

“ಕೇಂದ್ರ ಸರ್ಕಾರದ ತಪ್ಪು ಆಮದು ನೀತಿಗಳೇ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿವೆ. ಕೂಡಲೇ ರೈತ ವಿರೋಧಿ ನೀತಿಗಳನ್ನು ಕೈಬಿಟ್ಟು ಸಂಕಷ್ಟದಲ್ಲಿರುವ ರೈತರ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಬೇಕು” ಎಂದು ನವೀನ್ ಆಗ್ರಹಿಸಿದರು.

ಕೆಪಿಆರ್‌ಎಸ್ ರಾಜ್ಯ ಉಪಾಧ್ಯಕ್ಷರಾದ ಎನ್‌. ವೆಂಕಟಾಚಲಯ್ಯ ಮಾತನಾಡಿ, “ರಾಜ್ಯ ತೋಟಗಾರಿಕಾ ಇಲಾಖೆಯು, ಕೇಂದ್ರ ಸರ್ಕಾರದ ಕೃಷಿ ವೆಚ್ಚ ಮತ್ತು ದರ ಆಯೋಗ (CACP) ಕ್ಕೆ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 16730 ರೂಗಳನ್ನು ನೀಡಬೇಕು ಎಂದು ಉತ್ಪಾದನಾ ವೆಚ್ಚದ ಆಧಾರದಲ್ಲಿ ಶಿಫಾರಸ್ಸು ಮಾಡಿದೆ. ಆದರೂ ಕೇಂದ್ರ ಸರ್ಕಾರ ಬೆಂಬಲ ಬೆಲೆಯಾಗಿ ಕೇವಲ 11750 ರೂ. ಮಾತ್ರ ನಿಗದಿಪಡಿಸಿದೆ. ರೈತರ ಆಗ್ರಹಕ್ಕೆ ಮಣಿದು ರಾಜ್ಯ ಸರ್ಕಾರವು ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 1250 ರೂ. ನಿಗದಿ ಮಾಡಿದೆ. ಆದರೆ ಮಾರುಕಟ್ಟೆಯಲ್ಲಿ ಕೇವಲ 6500 ಮಾತ್ರ ಇದೆ” ಎಂದು ಹೇಳಿದರು.

“ಸರ್ಕಾರಗಳು ಘೋಷಿಸಿರುವ ಬೆಂಬಲ ಬೆಲೆ ಜಾರಿಗೆ ಬರಬೇಕಾದರೆ ಖರೀದಿ ಕೇಂದ್ರಗಳನ್ನು ವ್ಯಾಪಕವಾಗಿ ತೆರೆಯಬೇಕು. ಸಮರ್ಪಕ ಖರೀದಿ ಕೇಂದ್ರಗಳು ಇಲ್ಲದೇ ಇದ್ದರೆ ಬೆಂಬಲ ಬೆಲೆ ಕೇವಲ ಕಾಗದದಲ್ಲಿ ಮಾತ್ರ ಉಳಿಯುತ್ತದೆ. ಅದ್ದರಿಂದ ವ್ಯಾಪಕವಾಗಿ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಬೇಕು” ಎಂದು ಅವರು ವೆಂಕಟಾಚಲಯ್ಯ ಒತ್ತಾಯಿಸಿದರು.

ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ವಿರೋಧಿ ರಾಷ್ಟ್ರೀಯ ವಿಚಾರ ಸಂಕಿರಣ | 12 ಸಾವಿರ ಜನರ ಭಾಗಿ!

ಕೆಪಿಆರ್‌ಎಸ್‌ ನೇತೃತ್ವದ ತೆಂಗು ಬೆಳೆಗಾರರ ಹೋರಾಟ ಸಮಿತಿಯ ಹಕ್ಕೊತ್ತಾಯಗಳು

1. ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ಶಿಫಾರಸ್ಸಿನಂತೆ ಕೂಡಲೇ ಒಂದು ಕ್ವಿಂಟಾಲ್ ಉಂಡೆ ಕೊಬ್ಬರಿಯ ಬೆಲೆ 16,730 ರೂ ನಿಗದಿಯಾಗಬೇಕು. ರಾಜ್ಯ ಸರ್ಕಾರ ಕನಿಷ್ಟ 5000 ರೂ ಸಹಾಯಧನ ಘೋಷಣೆ ಮಾಡಬೇಕು.

2. ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿ ಮಾಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು.

3. ತೆಂಗಿನ ಬೆಲೆಯೂ ಮಾರುಕಟ್ಟೆಯಲ್ಲಿ ವಿಪರೀತ ಕುಸಿತವನ್ನು ಕಂಡಿರುವುದರಿಂದ ಕೃಷಿ ತಜ್ಞ ಡಾ.ಎಂ. ಎಸ್. ಸ್ವಾಮಿನಾಥನ್‌ ಅವರ ಆಯೋಗದ ಶಿಫಾರಸ್ಸಿನಂತೆ ಉತ್ಪಾದನಾ ವೆಚ್ಚಕ್ಕೆ 50% ರಷ್ಟು ಲಾಭಾಂಶವನ್ನು ಸೇರಿಸಿ ಬೆಲೆ ನಿಗದಿ ಮಾಡಬೇಕು.

4. ತೆಂಗು ಮತ್ತು ಕೊಬ್ಬರಿಯನ್ನು ಎಪಿಎಂಸಿ ಮಾರುಕಟ್ಟೆ ಖರೀದಿ ಕೇಂದ್ರಗಳ ಮೂಲಕ ವರ್ಷಪೂರ್ತಿ ಸರ್ಕಾರವೇ ಖರೀದಿಸಬೇಕು.

5. ನಫೆಡ್ (NAFED) ಮೂಲಕ ನಡೆಯುವ ಕೊಬ್ಬರಿ ಖರೀದಿಯನ್ನು ಬಲಪಡಿಸಬೇಕು ಹಾಗೂ ವಿಸ್ತರಿಸಬೇಕು, ವರ್ಷಪೂರ್ತಿ ಖರೀದಿಸಬೇಕು.

6. ನೀರಾವರಿ ಪಂಪ್‌ಸೆಟ್‌ಗಳಿಗೆ ಡಿಜಿಟಲ್ ಮೀಟರ್ ಅಳವಡಿಕೆಯನ್ನು ಕೈಬಿಡಬೇಕು, ಹಾಗೂ ಪಂಪ್‌ಸೆಟ್‌ಗಳ ಆರ್‌ಆರ್ ನಂಬರ್ ಮತ್ತು ಆಧಾರ್ ಕಾರ್ಡ್ ಜೋಡಣೆಯನ್ನು ಕೈಬಿಡಬೇಕು.

7. ರೈತರಿಗೆ ಅನುಕೂಲವಾಗುವಂತೆ ಎಪಿಎಂಸಿ ಮಾರುಕಟ್ಟೆ ಬಲಪಡಿಸಿ, ಭ್ರಷ್ಟಾಚಾರ ತಡೆಗಟ್ಟಬೇಕು, ಮಾರುಕಟ್ಟೆಯ ಪ್ರಾಂಗಣದಲ್ಲಿ ರೈತರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು.

8. ತೆಂಗಿನ ಉತ್ಪನ್ನ ಮತ್ತು ಉಪ ಉತ್ಪನ್ನಗಳ ಮೌಲ್ಯವರ್ಧನೆಗೆ ಅಗತ್ಯವಾದ ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಬೇಕು.

9. ತೆಂಗು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು.

10. ತೆಂಗು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕಾಗಿ ಬೆಳೆ ಪ್ರದೇಶದ ರೈತ ಮುಖಂಡರು, ಶಾಸಕರು, ಸಂಸದರ ನಿಯೋಗವನ್ನು ಪ್ರಧಾನಿಗಳ ಬಳಿಗೆ ಕರೆದೊಯ್ಯಬೇಕು, ತೆಂಗು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಾಣಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ತೆಂಗು ಬೆಳೆಗಾರರ ಸಭೆ ನಡೆಸಬೇಕು.

ಇದನ್ನೂ ಓದಿ: ಉತ್ತರ ಪ್ರದೇಶ:ದಲಿತ ಬಾಲಕನನ್ನು ಥಳಿಸಿ, ಕೈಯಲ್ಲಿ ಮಲ ತೆಗೆಸಿದ ಧುರುಳರು

ವಿಡಿಯೊ ನೋಡಿ: ಸದನದಲ್ಲಿ ಉಪ ಸ್ಪೀಕರ್ ರುದ್ರಪ್ಪ ಲಮಾಣಿ ಮೇಲೆ ಕಾಗದ ಹರಿದು ಬಿಸಾಕಿ ಬೀದಿ ಪುಂಡರಂತೆ ವರ್ತಿಸಿದ ಬಿಜೆಪಿ ಶಾಸಕರು!

Donate Janashakthi Media

Leave a Reply

Your email address will not be published. Required fields are marked *