ಲೋಕಸಭೆಯಲ್ಲಿ ರೈತರ ಎರಡು ಗಟ್ಟಿ ದನಿಗಳು

ಬುಡಮಟ್ಟದ ಹೋರಾಟಗಳಿಂದ ಲೋಕಸಭೆಯವರೆಗೆ
ನಿರ್ದಿಷ್ಟವಾಗಿ ರೈತರ ಪ್ರತಿಭಟನೆಗಳ ಪರಿಣಾಮವಾಗಿ ಕನಿಷ್ಟ 5 ರಾಜ್ಯಗಳಲ್ಲಿ ಬಿಜೆಪಿ 38 ಸ್ಥಾನಗಳನ್ನು ಕಳೆದುಕೊಳ್ಳುವಂತಾಗಿದೆ. ಅಂದರೆ ಬಿಜೆಪಿ ಬಹುಮತ ಪಡೆಯದಂತೆ ಮಾಡುವಲ್ಲಿ ರೈತರ ಹೋರಾಟಗಳು ಪ್ರಮುಖ ಪಾತ್ರವಹಿಸಿವೆ. ಲೋಕಸಭೆ

ಅಷ್ಟು ಮಾತ್ರವೇ ಅಲ್ಲ, ಹಲವು ವರ್ಷಗಳಿಂದ ಬೀದಿಗಿಳಿದು ಹೋರಾಟ ನಡೆಸಿದ, ಹಲವು ರೈತ ಹೋರಾಟಗಳಿಗೆ ನೇತೃತ್ವ ನೀಡಿದ ಮುಖಂಡರು ಮೊದಲ ಬಾರಿಗೆ ಲೋಕಸಭೆಯನ್ನು ಪ್ರವೇಶಿಸಿದ್ದಾರೆ. ಇವರಲ್ಲಿ ಎರಡು ಮುಖ್ಯ ಮುಖಗಳೆಂದರೆ ರಾಜಸ್ತಾನದ ಸಿಕಾರ್‍ ಕ್ಷೇತ್ರದಿಂದ ಗೆದ್ದಿರುವ ಆಮ್ರಾ ರಾಮ್ ಮತ್ತು ಬಿಹಾರದ ಕಾರಾಕಟ್‍ ಕ್ಷೇತ್ರದಿಂದ ಗೆದ್ದಿರುವ ರಾಜಾರಾಮ್ .

ಆಮ್ರಾರಾಮ್ ಇತ್ತಿಚೆಗೆ ಸಂಯುಕ್ತ ಕಿಸಾನ್‍ ಮೋರ್ಚಾದ ನೇತೃತ್ವದಲ್ಲಿ ದಿಲ್ಲಿಯನ್ನು ಸುತ್ತುವರೆದ ಐತಿಹಾಸಿಕ ಹೋರಾಟದಲ್ಲಿ ರಾಜಸ್ಥಾನ್- ಹರ್ಯಾಣ ಗಡಿಯಲ್ಲಿ ಸತ್ಯಾಗ್ರಹಕ್ಕೆ ನೇತೃತ್ವ ನೀಡಿರುವವರು. ಈ ಯಶಸ್ವಿ ಹೋರಾಟ ಮಾತ್ರವಲ್ಲ , ರಾಜಸ್ಥಾನದ ಈರುಳ್ಳಿ ರೈತರ ಹೋರಾಟ, ವಿದ್ಯುತ್ತಿಗಾಗಿ ಹೋರಾಟ, ವಿಮಾಕಂಪನಿಗಳ ಮೋಸದ ವಿರುದ್ಧ ಹೋರಾಟ ಇಂತಹ ಹತ್ತು-ಹಲವು ಯಶಸ್ವಿ ಹೋರಾಟಗಳಿಗೆ ನೇತೃತ್ವ ನೀಡಿದವರು. ವಿದ್ಯಾರ್ಥಿ ದೆಸೆಯಿಂದಲೇ ಹೋರಾಟದ ಜೀವನ ಆರಂಭಿಸಿದ ಆಮ್ರಾರಾಮ್ ತಮ್ಮ ಹೋರಾಟಗಳ ಬಲದಲ್ಲಿ ಸಿಪಿಐ(ಎಂ) ಅಭ್ಯರ್ಥಿಯಾಗಿ ವಿಧಾನ ಸಭೆಗೆ ನಡೆದ ಚುನಾವಣೆಗಳಲ್ಲಿ ಹಲವು ಬಾರಿ ಗೆದ್ದು ರಾಜಸ್ಥಾನದ ವಿಧಾನಸಭೆಯಲ್ಲಿ ರೈತರ ಪರವಾಗಿ ದನಿ ಮೊಳಗಿಸಿದವರು. ಈ ಬಾರಿ ಮೊದಲ ಬಾರಿಗೆ ಲೋಕಸಭೆಗೆ ಆರಿಸಿ ಹೋಗುತ್ತಿದ್ದಾರೆ. ಇವರು ಅಖಿಲ ಭಾರತ ಕಿಸಾನ್‍ ಸಭಾದ ಉಪಾಧ್ಯಕ್ಷರೂ ಆಗಿದ್ದಾರೆ.

ಇದನ್ನು ಓದಿ : 400-ಪಾರ್‌ ಮಾಯವಾಗಿ 300-ಪಾರ್‌ ಹೇಗೆ ಬಂದಿತು? ವ್ಯಂಗ್ಯವಾಗಿ ಪ್ರಶ್ನಿಸಿದ ರಾಹುಲ್‌ ಗಾಂಧಿ

ಬಿಹಾರದ ಕಾರಾಕಟ್ ಕ್ಷೇತ್ರದಿಂದ ಸಿಪಿಐ(ಎಂಎಲ್‍)-ಲಿಬರೇಷನ್‍ ಪಕ್ಷದ ಅಭ್ಯರ್ಥಿಯಾಗಿ ಚುನಾಯಿತರಾಗಿರುವ ರಾಜಾರಾಂ ರೈತರ, ವಿಶೇಷವಾಗಿ ಬಿಹಾರ ಮತ್ತು ಝಾರ್ಖಂಡಿನ ರೈತರ ಒಂದು ಗಟ್ಟಿ ದನಿ. ಕಿಸಾನ್ ‍ಸಂಘರ್ಷ ಸಮನ್ವಯ ಸಮಿತಿಯ ಬಿಹಾರ ಮತ್ತು ಝಾರ್ಖಂಡ್‍ ಘಟಕಕ್ಕೆ ನೇತೃತ್ವದ ನೀಡಿರುವ ಇವರು ಕೂಡ ಈ ಮೊದಲು ಅವಿಭಜಿತ ಬಿಹಾರದ ರೈತರ ಹಲವು ಯಶಸ್ವಿ ಹೋರಾಟಗಳ ಮೂಲಕ ಬಿಹಾರದ ವಿಧಾನಸಭೆಯಲ್ಲಿ ರೈತರ ಪರವಾಗಿ ಸತತವಾಗಿ ದನಿಯತ್ತಿಕೊಂಡು ಬಂದವರು, ಈ ಬಾರಿ ಮೊದಲ ಬಾರಿಗೆ ಲೋಕಸಭೆಯನ್ನು ಪ್ರವೇಶಿಸುತ್ತಿದ್ದಾರೆ. ಬಿಜೆಪಿಯ ಟಿಕೆಟ್‍ ಪಡೆಯಲಾಗದ್ದರಿಂದ ಸ್ವತಂತ್ರವಾಗಿ ಸ್ಪರ್ಧಿಸಿದ ಪ್ರಖ್ಯಾತ ಬೋಜ್ಪುರಿ ಸಂಗೀತಗಾರ ಪವನ್‍ ಕುಮಾರ್‍ ಮತ್ತು ಬಿಜೆಪಿಯ ಅಭ್ಯರ್ಥಿ ಉಪೇಂದ್ರ ಖುಶ್ವಾಹ , ಈ ಇಬ್ಬರು ಪ್ರಬಲ ಪ್ರತಿಸ್ಪರ್ಧಿಗಳನ್ನು ಎದುರಿಸಿ ಗೆದ್ದಿದ್ದಾರೆ. ಇವರು ಅಖೀಲ ಭಾರತ ಕಿಸಾನ್‍ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದಾರೆ.

ಸಂಯುಕ್ತ ಕಿಸಾನ್‍ ಮೋರ್ಚಾದ ನೇತೃತ್ವ ಪ್ರಬಲ ಹೋರಾಟದ ಎದುರು ಕೊನೆಗೂ ಸೋತು ಮೂರು ರೈತ-ವಿರೋಧಿ ಕರಾಳ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕಾಗಿ ಬಂದರೂ, ಆಗ ವಚನವಿತ್ತಂತೆ ಮೋದಿ ಸರಕಾರ ಇನ್ನೂ ಕನಿಷ್ಟ ಬೆಂಬಲ ಬೆಲೆ ಕುರಿತಂತೆ ಕಾನೂನು ತರುವುದು ಮತ್ತಿತರ ಬೇಡಿಕೆಗಳನ್ನು ಈಡೇರಿಸದೆ ಸುಮ್ಮನೆ ಕೂತಿದೆ. ಸಾಲದ್ದಕ್ಕೆ ಈ ಬಾರಿಯ ಎನ್‍ಡಿಎ-3 ಸಚಿವ ಸಂಪುಟದಲ್ಲಿ ಶಿವರಾಜ್‍ ಸಿಂಗ್ ಚೌಹಾಣ್‍ ರವರನ್ನು ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಿಯಾಗಿ ನೇಮಿಸುವ ಮೂಲಕ ತಾನಾಗಿ ರೈತರಿಗೆ ನೀಡಿದ ವಚನಗಳನ್ನು ಪಾಲಿಸುವುದಿಲ್ಲ ಎಂಬ ಸಂಕೇತವನ್ನೂ ನೀಡಿದೆ. ಈತ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಅಲ್ಲಿನ ಮಂದಸೌರಿನಲ್ಲಿ ಜೂನ್‍ 6, 2017ರಂದು ರೈತರ ಮೇಲೆ ಗೋಲೀಬಾರ್‍ ನಡೆಸಿ ಆರು ರೈತರನ್ನು ಹತ್ಯೆಯಾಯಿತು ಎಂಬುದನ್ನು ಈ ಸಂದರ್ಭದಲ್ಲಿ ನೆನಪಿಸಿ ಕೊಳ್ಳಬಹುದು. ಇಂತಹ ಸನ್ನಿವೇಶದಲ್ಲಿ ಹೊರಗೆ ರೈತರ ಹೋರಾಟದೊಂದಿಗೆ ಸಂಸತ್ತಿನೊಳಗೂ ಈ ಬಾರಿ ರೈತರ ದನಿ ಮೊಳಗಲಿದೆ ಎಂದು ನಿರೀಕ್ಷಿಸಬಹುದು.

ಇದನ್ನು ನೋಡಿ : ‘ಮೋದಿಸರ್ಕಾರ’ ಬೇಡ, ಎನ್‌ಡಿಎ ಸರ್ಕಾರ ಬೇಕಾದರೆ ಇರಲಿ- ಭಾರತದ ಮತದಾರರ ತೀರ್ಪು Janashakthi Media

 

Donate Janashakthi Media

Leave a Reply

Your email address will not be published. Required fields are marked *