ತಮಿಳುನಾಡು: ತಿರುನೆಲ್ವೇಲಿ ಜಿಲ್ಲೆಯ ಪಾಳಯಂಕೋಟೈ ತಾಲ್ಲೂಕಿನ ವಿ.ಎಂ. ಚತ್ರಂ ಗ್ರಾಮದ ಅಡಿಯಲ್ಲಿ ಬರುವ ಆರೋಕ್ಯನಾಥಪುರಂ ಎಂಬ ಪುಟ್ಟ ಹಳ್ಳಿಯಲ್ಲಿ, ಸುಮಾರು 300ಕ್ಕೂ ಹೆಚ್ಚು ಸಣ್ಣ ಮತ್ತು ಅತಿಸಣ್ಣ ರೈತ ಕುಟುಂಬಗಳು ಹಲವು ತಲೆಮಾರುಗಳಿಂದ ತಮ್ಮ ಪಾರಂಪರಿಕ ಭೂಮಿಯನ್ನು ಕೃಷಿ ಮಾಡುತ್ತ ಬದುಕು ಕಟ್ಟಿಕೊಂಡಿವೆ. ಒಮ್ಮೆ ಸ್ವಾವಲಂಬಿ ಕೃಷಿ ಹಳ್ಳಿಯಾಗಿದ್ದ ಈ ಪ್ರದೇಶವು, ತೀವ್ರ ನಗರೀಕರಣ, ಭೂಮಿಯ ಬೆಲೆಗಳ ಏರಿಕೆ ಹಾಗೂ ರಿಯಲ್ ಎಸ್ಟೇಟ್ ಕಂಪನಿಗಳ ಭೂ ಕಬಳಿಕೆ ತಂತ್ರಗಳ ಪರಿಣಾಮ ಭಾರೀ ಸಂಕಷ್ಟಕ್ಕೆ ಸಿಲುಕಿದೆ ಎಂದು ಕೆ ಜಿ ಬಾಸ್ಕರನ್ ಅರೋಪಿಸಿದ್ದಾರೆ. ತಿರುನೆಲ್ವೇಲಿ
2007ರಲ್ಲಿ ಚೆನ್ನೈ ಮೂಲದ ನಿಭಿ ರಿಯಲ್ಟರ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ಕೆಲ ರೈತರಿಂದ 29 ಎಕರೆ ಭೂಮಿಯನ್ನು ಖರೀದಿಸಿತು. ಆದರೆ ಅಕ್ರಮ ಮಾರ್ಗಗಳ ಮೂಲಕ 66 ಎಕರೆ ಭೂಮಿಗೆ ಪತ್ತಾ ಪಡೆಯಲಾಗಿದೆ ಎಂಬ ಆರೋಪ ಹೊರಬಿದ್ದಿದೆ. ತಿರುನೆಲ್ವೇಲಿ
ಈ ಪೈಕಿ ಉಳಿದ 37 ಎಕರೆ ಭೂಮಿಗೆ ಸಂಬಂಧಿಸಿದಂತೆ 2015ರಲ್ಲಿ ತಿರುನೆಲ್ವೇಲಿ ಆದಾಯ ವಿಭಾಗಾಧಿಕಾರಿ (ಆರ್ಡಿಓ) ಅವರು ಪತ್ತಾ ಅಕ್ರಮವೆಂದು ಘೋಷಿಸಿ ರದ್ದುಪಡಿಸುವಂತೆ ಆದೇಶ ನೀಡಿದ್ದರು. ಆದರೆ ಆ ಆದೇಶ ಇಂದಿಗೂ ಕಾಗದದಲ್ಲೇ ಉಳಿದಿದೆ ಎಂದರು. ತಿರುನೆಲ್ವೇಲಿ
ಇದನ್ನೂ ಓದಿ: ಬಾಲ್ಯ ವಿವಾಹ: 6 ಜನರ ವಿರುದ್ಧ ಪ್ರಕರಣ ದಾಖಲು
ಭೂ ವಿವಾದದ ಮೂಲ
ಆರೋಕ್ಯನಾಥಪುರಂ, ತಿರುಚೆಂದೂರು ರಸ್ತೆಯ ಬಳಿ ತಿರುನೆಲ್ವೇಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದ್ದು, ನೀಯೋಲಿಬರಲ್ ನೀತಿಗಳ ಜಾರಿಯ ಬಳಿಕ ಭೂಮಿ ರಿಯಲ್ ಎಸ್ಟೇಟ್ ಕಂಪನಿಗಳಿಗೆ ಅಮೂಲ್ಯ ವಸ್ತುವಾಗಿ ಪರಿಣಮಿಸಿದೆ. ಇದರ ಪರಿಣಾಮವಾಗಿ ಸಣ್ಣ ಭೂಸ್ವಾಮ್ಯ ಹೊಂದಿದ್ದ ರೈತರು ಭೂಮಿ ಮಾರಾಟಕ್ಕೆ ಒತ್ತಾಯಿತರಾಗಿ ನಗರಗಳಿಗೆ ಕೂಲಿ ಕಾರ್ಮಿಕರಾಗಿ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಯಿತು. ಇದೇ ವೇಳೆ ವಲಸೆ ಕಾರ್ಮಿಕರ ಸಂಖ್ಯೆಯೂ ಹೆಚ್ಚಾಯಿತು.
ಇಂತಹ ಪರಿಸ್ಥಿತಿಯಲ್ಲೇ ನಿಭಿ ರಿಯಲ್ಟರ್ಸ್ ಹಳ್ಳಿಗೆ ಪ್ರವೇಶಿಸಿತು. “ವಂಚನೆಯ ಮೂಲಕ ಕಟ್ಟಿದ ಮನೆ ನಿಲ್ಲುವುದಿಲ್ಲ” ಎಂಬ ಮಾತಿನಂತೆ, ಕಂಪನಿಯ ಪ್ರವೇಶದ ನಂತರ ಹಳ್ಳಿಯ ಭೂಮಿ ಹಾಗೂ ಬದುಕು ಸಂಪೂರ್ಣ ಅಸ್ತವ್ಯಸ್ತವಾಯಿತು ಎಂದು ಹೇಳಿದರು.
29 ಎಕರೆ ಖರೀದಿ, 66 ಎಕರೆ ಪತ್ತಾ
ನಿಭಿ ಸಂಸ್ಥೆಯ ನಿರ್ದೇಶಕ ಭೀಮರಾಜ ಅವರು 2007ರಲ್ಲಿ ಕೆಲ ಗ್ರಾಮಸ್ಥರಿಂದ 29 ಎಕರೆ ಖರೀದಿಸಿದ್ದರೂ, ಸುಮಾರು 66 ಎಕರೆ ಭೂಮಿಗೆ ಪತ್ತಾ ಪಡೆದುಕೊಂಡಿದ್ದಾರೆ. ಸರ್ಕಾರಿ ಅಧಿಕಾರಿಗಳು ಸರಿಯಾದ ಪರಿಶೀಲನೆ ನಡೆಸದೇ ಪತ್ತಾ ನೀಡಿದ್ದು, ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಉಳಿದ 37 ಎಕರೆ ಭೂಮಿಯ ನೈಜ ಮಾಲೀಕರು ದೂರು ಸಲ್ಲಿಸಿದ ಬಳಿಕ, 2015ರಲ್ಲಿ ಆರ್ಡಿಓ ತನಿಖೆ ನಡೆಸಿ ಪತ್ತಾ ಅಕ್ರಮವೆಂದು ಘೋಷಿಸಿದರು ಹಾಗೂ ಭೂಮಿಯನ್ನು ಮೂಲ ಮಾಲೀಕರಿಗೆ ಹಿಂತಿರುಗಿಸುವಂತೆ ಆದೇಶಿಸಿದರು. ಆದರೆ ಪಾಳಯಂಕೋಟೈ ತಹಶೀಲ್ದಾರ್ ಈ ಆದೇಶ ಜಾರಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
2022ರಲ್ಲಿ ಮತ್ತೆ ಭುಗಿಲೆದ್ದ ವಿವಾದ
2022ರಲ್ಲಿ ಭೀಮರಾಜ ಅವರು ಸಂಪೂರ್ಣ 66 ಎಕರೆ ಭೂಮಿಯನ್ನು ಜೋನ್ಸ್ ಕನ್ಸ್ಟ್ರಕ್ಷನ್ ಕಂಪನಿಗೆ ಮಾರಾಟ ಮಾಡಿದರು. ಈ ಕಂಪನಿ, ಗ್ರಾಮ ಸ್ಮಶಾನ, ಅದರ ದಾರಿ, ಕೆರೆಯ ಭಾಗ ಹಾಗೂ ನೀರಾವರಿ ಕಾಲುವೆಯ ನೀರು ಹರಿವಿನ ಮಾರ್ಗವನ್ನೂ ಕಬಳಿಸಿದೆ ಎಂಬ ಆರೋಪ ಕೇಳಿಬಂದಿದೆ. ಭೂ ಸಮತಟ್ಟು ಮಾಡುವುದು, ಕಾಂಪೌಂಡ್ ಗೋಡೆ ನಿರ್ಮಿಸುವುದು ಆರಂಭವಾದಾಗ ಮಾತ್ರ ರೈತರಿಗೆ ನೈಜ ಸ್ಥಿತಿ ತಿಳಿದುಬಂದಿತು.
2015ರ ಆರ್ಡಿಓ ಆದೇಶ ಜಾರಿಯಾಗದೆ ಇದ್ದರೂ, ಪತ್ತಾವನ್ನು ಜೋನ್ಸ್ ಕನ್ಸ್ಟ್ರಕ್ಷನ್ಗೆ ವರ್ಗಾಯಿಸಲಾಗಿದೆ ಎಂಬುದು ಬಹಿರಂಗವಾಯಿತು. ರೈತರು ಪೊಲೀಸ್ ಇಲಾಖೆ, ನಗರ ಪೊಲೀಸ್ ಆಯುಕ್ತರು, ತಹಶೀಲ್ದಾರ್, ಆರ್ಡಿಓ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದರು. ಈ ಹೋರಾಟಕ್ಕೆ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸಿಸ್ಟ್) – ಸಿಪಿಐ(ಎಂ) ಬೆಂಬಲ ನೀಡಿತು. ಆದರೆ ಅಧಿಕಾರಿಗಳಿಂದ “ಪರಿಶೀಲಿಸಲಾಗುತ್ತಿದೆ” ಎಂಬ ಸಾಂಪ್ರದಾಯಿಕ ಉತ್ತರಗಳಷ್ಟೇ ಲಭಿಸಿದವು.
ಭೂ ವಿವಾದ ಹಿಂಸಾಚಾರಕ್ಕೆ ತಿರುಗಿ, 2024ರಲ್ಲಿ ಕೊಲೆ ಘಟನೆಯೂ ನಡೆದಿದೆ. ಆದರೂ ಆದಾಯ ಹಾಗೂ ಪೊಲೀಸ್ ಇಲಾಖೆಗಳು ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಮುಂದುವರಿದಿದೆ ಎಂದರು.
ಅಧಿಕಾರಿಗಳ ಮೌನ, ರೈತರ ಸಂಕಷ್ಟ
ಕಂಪನಿ ನಿರ್ಮಿಸಿದ ಕಾಂಪೌಂಡ್ ಗೋಡೆ ರೈತರಿಗೆ ತಮ್ಮದೇ ಭೂಮಿಗೆ ಪ್ರವೇಶವನ್ನೇ ತಡೆದು ನಿಲ್ಲಿಸಿದೆ. ನೀರಾವರಿ ಕಾಲುವೆ ಮುಚ್ಚಲ್ಪಟ್ಟಿರುವುದರಿಂದ ಹಳ್ಳಿಗೆ ನೆರೆ ಅಪಾಯವೂ ಎದುರಾಗಿದೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ತಿಳಿದಿದ್ದರೂ ಅಧಿಕಾರಿಗಳು ಮೌನ ವಹಿಸಿರುವುದು, ರಿಯಲ್ ಎಸ್ಟೇಟ್ ಹಿತಾಸಕ್ತಿಗಳ ಪರ ನಿಲ್ಲುತ್ತಿರುವಂತೆ ಕಾಣುತ್ತಿದೆ ಎಂಬ ಆರೋಪ ರೈತರಿಂದ ಕೇಳಿಬಂದಿದೆ.
2025ರ ಸೆಪ್ಟೆಂಬರ್ 1ರಂದು ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದಾಗ ದಾಖಲೆ ಪರಿಶೀಲನೆ ಮಾಡುವ ಭರವಸೆ ನೀಡಲಾಯಿತು. ಆದರೆ ಯಾವುದೇ ಮುಂದಿನ ಕ್ರಮ ಕೈಗೊಳ್ಳಲಾಗಿಲ್ಲ. ಅಕ್ಟೋಬರ್ 27, 2025ರಂದು ನಡೆದ ಧರಣಿಯ ನಂತರ ಜಿಲ್ಲಾಧಿಕಾರಿ ಜಿಲ್ಲೆ ಆದಾಯ ಅಧಿಕಾರಿ (ಡಿಆರ್ಒ) ಮೂಲಕ ತನಿಖೆ ನಡೆಸುವಂತೆ ಆದೇಶಿಸಿದರು. ರೈತರು ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದರೂ, ಜೋನ್ಸ್ ಕನ್ಸ್ಟ್ರಕ್ಷನ್ ಯಾವುದೇ ದಾಖಲೆ ನೀಡಿಲ್ಲ. ಜನವರಿ 27, 2026ಕ್ಕೆ ಮೂರನೇ ವಿಚಾರಣೆ ನಿಗದಿಯಾಗಿದೆ ಎಂದು ತಿಳಿಸಿದರು.
ಈ ಮಧ್ಯೆ ವಿವಾದಿತ 37 ಎಕರೆ ಭೂಮಿಯನ್ನು 440 ವಸತಿ ಪ್ಲಾಟ್ಗಳಾಗಿ ವಿಭಜಿಸಿ, 440 ಪತ್ತಾಗಳನ್ನು ಕಂಪನಿಗೆ ನೀಡಲಾಗಿದೆ. ನಡೆಯುತ್ತಿರುವ ತನಿಖೆಯ ನಡುವೆಯೇ ಪತ್ತಾ ನೀಡಿರುವುದು ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಐಸ್ಬರ್ಗ್ನ ತುದಿ ಮಾತ್ರ
ಇದಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ, ತಂಗಚಾಮಿ ಹಾಗೂ ಅವರ ಐದು ಸಹೋದರಿಯರಿಗೆ ಸೇರಿದ 2.5 ಎಕರೆ ಭೂಮಿಯ ವಿವಾದವೂ ಇದೆ. 2020ರಲ್ಲಿ ನ್ಯಾಯಾಲಯ ಸಹೋದರಿಯರಿಗೆ ಪಾಲು ನೀಡಿದರೂ, ಪ್ರಕರಣ ಹೈಕೋರ್ಟ್ನಲ್ಲಿ ಬಾಕಿ ಇರುವಾಗಲೇ ಆ ಭೂಮಿಗೂ ಪತ್ತಾ ಪಡೆಯಲಾಗಿದೆ ಎಂಬ ಆರೋಪವಿದೆ. ಇದು ರಿಯಲ್ ಎಸ್ಟೇಟ್ ಕಂಪನಿಗಳ ಕಾರ್ಯಪದ್ದತಿಯ ಮಾದರಿಯನ್ನೇ ಬಹಿರಂಗಪಡಿಸುತ್ತದೆ ಎಂದು ರೈತರು ಆರೋಪಿಸುತ್ತಿದ್ದಾರೆ.
ಹೋರಾಟವೇ ಏಕೈಕ ಮಾರ್ಗ
2026ರ ಜನವರಿ 26ರಂದು (ಗಣರಾಜ್ಯೋತ್ಸವ) ಸುಮಾರು 100 ರೈತರು ತಮ್ಮ ಮನೆಗಳ ಮೇಲೆ ಕಪ್ಪು ಧ್ವಜ ಹಾರಿಸಿ ಭೂ ಕಬಳಿಕೆಯ ವಿರುದ್ಧ ಪ್ರತಿಭಟನೆ ನಡೆಸಿದರು. ನೈಜ ಮಾಲೀಕರಿಗೆ ಭೂಮಿಯನ್ನು ಹಿಂತಿರುಗಿಸುವಂತೆ ಹಾಗೂ ಸಮಗ್ರ ಜಿಲ್ಲಾಡಳಿತ ತನಿಖೆ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ. ಸಿಪಿಐ(ಎಂ) ಪಕ್ಷ ರೈತರ ನ್ಯಾಯಸಮ್ಮತ ಹೋರಾಟದೊಂದಿಗೆ ನಿಂತಿದೆ.
ಸಣ್ಣ ಮತ್ತು ಅತಿಸಣ್ಣ ರೈತರು ಹಾಗೂ ಕೃಷಿ ಕಾರ್ಮಿಕರ ಭೂ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಹೊಣೆಗಾರಿಕೆ ಎಂಬ ಧ್ವನಿ ಈಗ ಆರೋಕ್ಯನಾಥಪುರಂನಿಂದ ರಾಜ್ಯವ್ಯಾಪಿಯಾಗಿ ಕೇಳಿಬರುತ್ತಿದೆ ಎಂದು ತಿಳಿಸಿದರು.
ಇದನ್ನೂ ನೋಡಿ: ಗಾಂಧೀಜಿಯವರ ವಿಚಾರಗಳೊಂದಿಗೆ ಮುಖಾಮುಖಿ ಆಗಬೇಕಿದೆ – ಬರಗೂರು ರಾಮಚಂದ್ರಪ್ಪ Janashakthi Media
