ಚಂಡೀಗಢ: ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿಯನ್ನು ಐದು ವರ್ಷಗಳವರೆಗೆ ಸರ್ಕಾರಿ ಸಂಸ್ಥೆಗಳಿಂದ ಎಂಎಸ್‌ಪಿ ದರದಲ್ಲಿ ಖರೀದಿಸುವ ಕೇಂದ್ರದ ಪ್ರಸ್ತಾವನೆಯನ್ನು ಸೋಮವಾರ ರೈತರು ತಿರಸ್ಕರಿಸಿದ್ದಾರೆ. ‘ದೆಹಲಿ ಚಲೋ’ ಆಂದೋಲನವನ್ನು ಮುನ್ನಡೆಸುತ್ತಿರುವ ರೈತ ಮುಖಂಡರು ಇದು ರೈತರ ಹಿತಾಸಕ್ತಿಯಲ್ಲ ಎಂದು ಹೇಳಿದ್ದು, “ನಾವು ಬುಧವಾರ ದೆಹಲಿಗೆ ಪಾದಯಾತ್ರೆ ಮುಂದುವರೆಸುತ್ತೇವೆ” ಎಂದು ಘೋಷಿಸಿದ್ದಾರೆ.
“ನಮ್ಮ ಸಮಸ್ಯೆಗಳನ್ನು ಪರಿಹರಿಸಿ ಅಥವಾ ಬ್ಯಾರಿಕೇಡ್‌ಗಳನ್ನು ತೆಗೆದುಹಾಕಿ. ಶಾಂತಿಯುತವಾಗಿ ಪ್ರತಿಭಟಿಸಲು ದೆಹಲಿಗೆ ಹೋಗಲು ನಮಗೆ ಅವಕಾಶ ಮಾಡಿಕೊಡಿ ಎಂದು ನಾವು ಸರ್ಕಾರಕ್ಕೆ ಮನವಿ ಮಾಡುತ್ತೇವೆ” ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಹೇಳಿದ್ದಾರೆ.
ಇದನ್ನೂ ಓದಿ:ಕೇಂದ್ರ ಸರ್ಕಾರದ ಪ್ರಸ್ತಾವನೆ ಕುರಿತು ಚರ್ಚೆ ನಡೆಸಿ ತೀರ್ಮಾನ | ರೈತ ಮುಖಂಡ ಸರ್ವಾನ್ ಸಿಂಗ್
ಮೂರು ಕೇಂದ್ರ ಸಚಿವರ ಸಮಿತಿಯು ರೈತ ಮುಖಂಡರೊಂದಿಗೆ ಭಾನುವಾರ ನಡೆಸಿದ ನಾಲ್ಕನೇ ಸುತ್ತಿನ ಮಾತುಕತೆಯಲ್ಲಿ, ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಸರ್ಕಾರಿ ಸಂಸ್ಥೆಗಳಿಂದ ಖರೀದಿಸುವುದಾಗಿ ಪ್ರಸ್ತಾಪಿಸಿತ್ತು. ಆದರೆ ಕೇಂದ್ರದ ಈ ಪ್ರಸ್ತಾಪವನ್ನು 2020-21 ರ ಮಹಾ ಹೋರಾಟದ ನೇತೃತ್ವ ವಹಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ ತಿರಸ್ಕರಿಸಿತ್ತು.
“ಕೇಂದ್ರದ ಈ ಪಸ್ತಾಪವು ಎಂಎಸ್‌ಪಿಗಾಗಿ ಹೋರಾಟ ನಡೆಸುತ್ತಿರುವ ರೈತರನ್ನು ದಿಕ್ಕು ತಪ್ಪಿಸುವ ಮತ್ತು ಅವರನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವ ನಡೆಸಯಾಗಿದೆ” ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ. ಸ್ವಾಮಿನಾಥನ್ ಆಯೋಗದ ವರದಿಯಲ್ಲಿ ಶಿಫಾರಸು ಮಾಡಲಾದ ಎಂಎಸ್‌ಪಿಗಾಗಿ ‘C-2+50%ಕ್ಕಿ ಕಡಿಮೆ ಏನನ್ನೂ ಸ್ವೀಕರಿಸುವುದಿಲ್ಲ ಎಂದು ಅದು ಹಳಿದೆ.
ನಂತರ, ‘ದೆಹಲಿ ಚಲೋ’ ಪಾದಯಾತ್ರೆಯ ನೇತೃತ್ವ ವಹಿಸಿರುವ ಎಸ್‌ಕೆಎಂ (ರಾಜಕೀಯೇತರ) ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್, “ನಮ್ಮ ಎರಡು ವೇದಿಕೆಗಳಲ್ಲಿ ನಾವು ಚರ್ಚೆ ನಡೆಸಿದ್ದು, ಕೇಂದ್ರದ ಪ್ರಸ್ತಾವನೆಯು ರೈತರ ಹಿತದೃಷ್ಟಿಯಿಂದ ಮಾಡಲಾಗಿಲ್ಲ ಎಂದು ನಿರ್ಧರಿಸಲಾಗಿದೆ. ರೈತರು ಮತ್ತು ನಾವು ಈ ಪ್ರಸ್ತಾಪವನ್ನು ತಿರಸ್ಕರಿಸುತ್ತೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮಧ್ಯಪ್ರದೇಶ | ಬಿಜೆಪಿ ಸೇರುವ ಬಗ್ಗೆ ಸಂದಿಗ್ಧ ಸ್ಥಿತಿಯಲ್ಲಿರುವ ಕಾಂಗ್ರೆಸ್ ನಾಯಕ ಕಮಲ್ ನಾಥ್
ದೆಹಲಿಗೆ ಪಾದಯಾತ್ರೆ ಇನ್ನೂ ಚಾಲ್ತಿಯಲ್ಲಿ ಇದೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಅವರು, “ನಾವು ಫೆಬ್ರವರಿ 21 ರಂದು ಬೆಳಿಗ್ಗೆ 11 ಗಂಟೆಗೆ ಶಾಂತಿಯುತವಾಗಿ ದೆಹಲಿಗೆ ಹೋಗುತ್ತೇವೆ” ಎಂದು ಹೇಳಿದ್ದಾರೆ.
ಭಾನುವಾರ ರಾತ್ರಿ ರೈತ ಮುಖಂಡರೊಂದಿಗೆ ನಡೆಸಿದ ಮಾತುಕತೆಯ ನಂತರ ಕೇಂದ್ರ ಸಚಿವ ಪಿಯೂಷ್ ಗೋಯಲ್, “ಉದ್ದಿನಬೇಳೆ, ದಾಲ್, ಮಸೂರ್ ದಾಲ್ ಅಥವಾ ಮೆಕ್ಕೆಜೋಳವನ್ನು ಬೆಳೆಯುವ ರೈತರೊಂದಿಗೆ ಮುಂದಿನ ಐದು ವರ್ಷಗಳವರೆಗೆ MSP ನಲ್ಲಿ ಖರೀದಿಸಲು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ಮತ್ತು ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರಾಟ ಒಕ್ಕೂಟದಂತಹ ಸಹಕಾರ ಸಂಘಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲಿವೆ” ಎಂದು ಹೇಳಿದ್ದಾರೆ.
ಖರೀದಿ ಪ್ರಮಾಣಕ್ಕೆ ಯಾವುದೇ ಮಿತಿ ಇರುವುದಿಲ್ಲ ಮತ್ತು ಇದಕ್ಕಾಗಿ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದ್ದರು. ಅಲ್ಲದೆ, ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ರೈತರೊಂದಿಗೆ ಕಾನೂನು ಒಪ್ಪಂದ ಮಾಡಿಕೊಂಡು ಐದು ವರ್ಷಗಳವರೆಗೆ ಎಂಎಸ್‌ಪಿ ದರದಲ್ಲಿ ರೈತರಿಂದ ಹತ್ತಿ ಖರೀದಿಸಲಿದೆ ಎಂದು ಗೋಯಲ್ ಪ್ರಸ್ತಾಪಿಸಿದ್ದರು.
ಇದನ್ನೂ ಓದಿ:ಶಾಸಕರು ಪಕ್ಷ ತೊರೆಯಲು ಮುಂದಾಗಿದ್ದಕ್ಕೆ ಬಿಜೆಪಿ ಜತೆ ಮೈತ್ರಿ ಮಾಡಿದ ದೇವೇಗೌಡ – ಸಿದ್ದರಾಮಯ್ಯ ಆರೋಪ
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನಾತ್ಮಕ ಖಾತರಿ ಸೇರಿದಂತೆ ವಿವಿಧ ಬೇಡಿಕೆಯನ್ನು ಮುಂದಿಟ್ಟು ಕೇಂದ್ರವನ್ನು ಒತ್ತಾಯಿಸಿ ನಡೆಸುತ್ತಿರುವ ‘ದೆಹಲಿ ಚಲೋ’ ಮೆರವಣಿಗೆಯನ್ನು ಭದ್ರತಾ ಪಡೆಗಳು ತಡೆದ ನಂತರ ಪ್ರತಿಭಟನಾ ನಿರತ ರೈತರು ಹರಿಯಾಣದ ಪಂಜಾಬ್‌ನ ಗಡಿಯಲ್ಲಿರುವ ಶಂಭು ಮತ್ತು ಖಾನೌರಿ ಪಾಯಿಂಟ್‌ಗಳಲ್ಲಿ ತಂಗಿದ್ದಾರೆ. ಕಳೆದ ವಾರ ರೈತರ ವಿರುದ್ಧ ದಾಳಿ ಕೂಡಾ ಮಾಡಲಾಗಿತ್ತು.
ಎಂಎಸ್‌ಪಿಯ ಕಾನೂನು ಖಾತರಿಯ ಜೊತೆಗೆ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ, ಕೃಷಿ ಸಾಲ ಮನ್ನಾ, ವಿದ್ಯುತ್ ದರ ಹೆಚ್ಚಳದ ವಿರುದ್ಧ, ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು 2021 ರ ಸಂತ್ರಸ್ತರಿಗೆ “ನ್ಯಾಯ”ಕ್ಕಾಗಿ ರೈತರು ಒತ್ತಾಯಿಸುತ್ತಿದ್ದಾರೆ. ಲಖಿಂಪುರ ಖೇರಿ ಹಿಂಸಾಚಾರ, ಭೂಸ್ವಾಧೀನ ಕಾಯಿದೆ 2013ರ ಮರುಸ್ಥಾಪನೆ ಮತ್ತು 2020-21ರಲ್ಲಿ ಹಿಂದಿನ ಆಂದೋಲನದ ವೇಳೆ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಕೂಡಾ ಕೇಳಿದ್ದಾರೆ.
ವಿಡಿಯೊ ನೋಡಿ: ಬ್ರಿಟಿಷರಿಗೆ ಸಹಾಯ ಮಾಡಿದ್ದ ವ್ಯಕ್ತಿ ಸ್ವಾತಂತ್ರ್ಯ ಹೋರಾಟಗಾರ ಆಗಲು ಹೇಗೆ ಸಾಧ್ಯ?