ರೈತರ ಘೇರಾವ್ ಗೆ ಮಣಿದ ಸಚಿವರು – ಸೆಪ್ಟೆಂಬರ್ 23 ರಂದು ಡೆಡ್‌ ಲೈನ್

ಬೆಂಗಳೂರು : ಫಲವತ್ತಾದ ಕೃಷಿ ಭೂಮಿಯನ್ನು ಬಲವಂತದ ಭೂಸ್ವಾಧೀನದಿಂದ ಕೈ ಬಿಡುವಂತೆ ಒತ್ತಾಯಿಸಿ ಕಳೆದ 900 ದಿನಗಳಿಂದ ಧರಣಿ ಕುಳಿತಿರುವ ದೇವನಹಳ್ಳಿ ತಾಲ್ಲೂಕು, ಚನ್ನರಾಯಪಟ್ಟಣ ಹೊಬಳಿಯ 13 ಹಳ್ಳಿಗಳ ರೈತರು ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾದ ಕೆಎಚ್ ಮುನಿಯಪ್ಪ ಅವರ ಮನೆಯ ಮುಂದೆ ಠಿಕಾಣಿ ಹೂಡಿ ಧರಣಿ ನಡೆಸಿದರು.

ರೈತರ ಘೇರಾವ್ ಗೆ ಮಣಿದ ಸಚಿವ ಮುನಿಯಪ್ಪನವರು ಇದೆ ಸೆ 23 ರಂದು ಮುಖ್ಯಮಂತ್ರಿಗಳ ಜೊತೆ ಸಭೆ ನಿಗದಿ ಮಾಡಿದ ಕಾರಣ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಯಿತು. ಸೆ23ರು ಡೆಡ್ ಲೈನ್ ಆಗಿದ್ದು, ಸಮಸ್ಯೆ ಬಗೆ ಹರಿಯದಿದ್ದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ರೈತರು ಎಚ್ಚರಿಸಿದ್ದಾರೆ.

ದೇವನಹಳ್ಳಿ ತಾಲ್ಲೂಕು, ಚನ್ನರಾಯಪಟ್ಟಣ ಹೋಬಳಿಗೆ ಸೇರಿದ 13 ಗ್ರಾಮಗಳ, 1777-02 ಎಕರೆ ಕೃಷಿಭೂಮಿಯನ್ನು ಕೆ.ಐ.ಎ.ಡಿ.ಬಿ ಕೈಗಾರಿಕೆಗಳ ಅಭಿವೃದ್ಧಿಯ ಹೆಸರಲ್ಲಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದು, ಸ್ಥಳೀಯ ಬಹುಪಾಲು ರೈತರು ಇದನ್ನು ವಿರೋಧಿಸಿ ಕಳೆದ 901 ದಿನಗಳಿಂದ ರೈತರು ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಸರ್ಕಾರಗಳು ಬದಲಾದರೂ ಇದುವರೆಗೂ ರೈತರ ಸಮಸ್ಯೆ ಬಗೆಹರಿದಿಲ್ಲದ ಕಾರಣ ಇಂದು ರೈತರು ಸಂಯಮದ ಕಟ್ಟೆ ಹೊಡೆದು ತಮ್ಮ ಶಾಸಕರು ಮತ್ತು ಜಿಲ್ಲೆಯ ಉಸ್ತುವಾರಿ ಸಚಿವರ ಮನೆಯ ಮುಂದೆ ಬಂದು ಕುಳಿತು ನ್ಯಾಯ ಸಿಗುವ ವರೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದ್ದಿದ್ದರು.

ಹಿಂದಿನ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇಂದಿನ ಮುಖ್ಯಮಂತ್ರಿಗಳು, ಉಸ್ತುವಾರಿ ಸಚಿವರಾದ ಕೆ ಎಚ್ ಮುನಿಯಪ್ಪನವರು ಸೇರಿದಂತೆ ಇಂದಿನ ಹಲವು ಮಂತ್ರಿಗಳು ವಿರೋಧ ಪಕ್ಷದಲ್ಲಿದ್ದಾಗ ಧರಣಿ ನಿರತ ರೈತರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದರು. ಆದರೆ ಸರ್ಕಾರ ಬದಲಾಗಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದ ಒಂದೂವರೆ ವರ್ಷದ ನಂತರವೂ ಕೂಡ ಸಮಸ್ಯೆ ಬಗೆಹರಿಸದಿರುವುದು ರೈತರ ಕೋಪಕ್ಕೆ ಕಾರಣವಾಗಿತ್ತು.

ಈ‌ ವಿಚಾರವಾಗಿ ಅನೇಕ ಬಾರಿ ಮಂತ್ರಿಗಳನ್ನು ರೈತರು ಬೇಟಿ ಮಾಡಿದ್ದಾರೆ, ಒಮ್ಮೆ ಕೈಗಾರಿಕಾ ಸಚಿವರೊಂದಿಗೆ ಸಭೆ ಕರೆದಾಗ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಕರೆದು ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದ್ದರು. ಲೋಕಸಭಾ ಚುನಾವಣೆ ಸಮಯದಲ್ಲಿ ಧರಣಿ ಸ್ಥಳಕ್ಕೆ ಆಗಮಿಸಿದ್ದ ಸಚಿವರು “ಸಮಸ್ಯೆ ಬಗೆಹರಿಸಲು ತಡವಾಗಿದೆ, ಆದರೆ ಇನ್ನು ತಡ ಮಾಡುವುದಿಲ್ಲ, ಚುನಾವಣೆ ಮುಗಿದ ತಕ್ಷಣ ಸಮಸ್ಯೆ ಬಗೆಹರಿಸುತ್ತೇವೆ” ಎಂದು ಮಾತು ಕೊಟ್ಟಿದ್ದರು. ಇಷ್ಟಾದಮೇಲು ರೈತರು ಪ್ರತಿ ಬಾರಿ ಬೇಟಿಯಾದಾಗಲೂ ಒಂದಲ್ಲ ಒಂದು ಕಾರಣ ನೀಡಿ ಮುಂದೂಡುತ್ತಲೇ ಇರುವುದು, ಸಬೂಬು ಹೇಳುತ್ತಿರುವುದು ರೈತರನ್ನು ಕೆರಳಿಸಿತ್ತು. ಇಂದು ಬೆಳಿಗ್ಗೆ ಎಂಟು ಗಂಟೆಯಿಂದಲೇ 200ಕ್ಕೂ ಹೆಚ್ಚು ರೈತರು ಸಂಜಯನಗರದ ಸಚಿವರ ಮನೆಯ ಮುಂದೆ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು. ಬೆಳಿಗ್ಗೆಯೆ ಮನೆಯಿಂದ ಹೊರಟಿದ್ದ ಸಚಿವರು, ಮಾತಿಗೆ ಸಿಗದಿದ್ದಾಗ ಮತ್ತಷ್ಟು ಸಿಟ್ಟಿಗೆದ್ದ ರೈತರು, ” ಸಚಿವರ ಮೇಲೆ ನಂಬಿಕೆ ಇಟ್ಟು ವರ್ಷಾನುಗಟ್ಟಲೆ ಕಾಯುತ್ತಿರುವ ಸಾವಿರಾರು ರೈತರಿಗೆ ಅವಮಾನ ಮಾಡುತ್ತಿದ್ದಾರೆ” ಎಂದು ಆರೋಪಿಸಿ, “ಇಂದೂ ಕೂಡ ನಿಮ್ಮನ್ನು ನಂಬುತ್ತೇವೆ, ಈಗಲಾದರೂ ತಮ್ಮ ನೇತೃತ್ವದಲ್ಲಿ, ಬೃಹತ್ ಕೈಗಾರಿಕಾ ಸಚಿವರು ಮತ್ತು ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು‌ ಮಾತುಕತೆ ನಡೆಸಿ, ತಮ್ಮ ಮಾತಿನಂತೆ ಚನ್ನರಾಯಪಟ್ಟಣ ಹೋಬಳಿಯ ಉದ್ದೇಶಿತ ಭೂಸ್ವಾಧೀನವನ್ನು ರದ್ದುಗೊಳಿಸುವ ಘೋಷಣೆ ಮಾಡಿ” ಅಲ್ಲಿಯವರೆಗೂ ನಾವು ಊರಿಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು.

ಇದರ‌ ಮದ್ಯೆ ಹತ್ತಾರು ಬಾರಿ ಪೋನ್ ಕರೆಯ ಮೂಲಕ ರೈತ ನಾಯಕರುಗಳನ್ನ ಸಂಪರ್ಕಿಸಿ‌ ಮನವೊಲಿಸಲು ‌ಪ್ರಯತ್ನಿಸಿದರಾದರೂ ರೈತರು ಯಾರ ಮಾತು ಕೇಳಲು ಸಿದ್ದರಿರಲಿಲ್ಲ. ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜೆಸಿ ಬಯ್ಯಾರೆಡ್ಡಿಯವರಿಗೆ ಕರೆಮಾಡಿ, ಇದೇ ತಿಂಗಳ 23ಕ್ಕೆ ಮುಖ್ಯಮಂತ್ರಿಗಳೊಂದಿಗೆ ಸಭೇ ನಡೆಸಿ ತೀರ್ಮಾನ ಮಾಡುವುದಾಗಿ ಮಾತುಕೊಟ್ಟ ನಂತರ ತಾತ್ಕಾಲಿಕವಾಗಿ ಹಿಂಪಡೆಯಲಾಯಿತು ಎಂದು ರೈತರು ತಿಳಿಸಿದ್ದಾರೆ.

ಹೋರಾಟದಲ್ಲಿ, ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ, ಚಂದ್ರ ತೇಜಸ್ವಿ, ಪ್ರಭಾ ಬೆಳವಂಗಲ, ಜನವಾದಿ ಮಹಿಳಾ ಸಂಘಟನೆಯ ದೇವಿ, ನೀರಾವರಿ ಹೋರಾಟ ಸಮಿತಿಯ ಆಂಜನೇಯ ರೆಡ್ಡಿ, ರೈತಮುಖಂಡರಾದ ಕಾರಳ್ಳಿ ಶ್ರೀನಿವಾಸ್, ಮಾರೇಗೌಡ, ನಂಜಪ್ಪ ಸೇರಿದಂತೆ 13 ಹಳ್ಳಿಗಳ ರೈತರು, ರೈತ ಮಹಿಳೆಯರು, ಯುಜನರು ಭಾಗಿಯಾಗಿದ್ದರು.

Donate Janashakthi Media

One thought on “ರೈತರ ಘೇರಾವ್ ಗೆ ಮಣಿದ ಸಚಿವರು – ಸೆಪ್ಟೆಂಬರ್ 23 ರಂದು ಡೆಡ್‌ ಲೈನ್

  1. ಸರಕಾರದ ನಡೆ ರೈತರಿಗೆ ಮಾಡಿದ ಅವಮಾನ. ರೈತ ನಾಯಕರು ಇದನ್ನ ಮೊದಲ ದಿನವೇ ಮಾಡಬೇಕಿತ್ತು. ೯೦೧ ದಿನ ಧರಣಿ ಕುಳಿತರೂ ತಿರುಗಿ ನೋಡಲಿಲ್ಲ ಅಂದರೆ ಹೋರಾಟದ ಮಾದರಿಗಳಲ್ಲಿ ಒಂದಾದ ‘ಧರಣಿ’ಗೆ ಮೂರು ಕಾಸಿನ ಬೆಲೆ ಇಲ್ಲ ಎಂದಾಯಿತು. ಗಾಂಧೀಜಿ ಕಾಂಗ್ರೆಸ್ ನವರ ಮಹಾ ನಾಯಕ. ‘ಧರಣಿ’ ಅವರೇ ಕೊಟ್ಟ ಅಸ್ತ್ರ. ಹಾಗಿದ್ದಾಗ್ಯೂ ಅವರು ೯೦೧ ದಿನಗಳ ವರೆಗೆ ಧರಣಿ ನಡೆಸಿದರೂ ಇಷ್ಟೊಂದು ನಿರ್ಲಕ್ಷ್ಯ ತೋರಿದ್ದಾರೆಂದರೆ ಅವರ ನಾಯಕನಿಗೆ ಅವರೇ ಮಾಡಿದ ಅವಮಾನ. ಇದು ಇಡೀ ಭಾರತದಲ್ಲಿಯೇ ನಡೆದ ದೀರ್ಘಕಾಲದ ‘ಧರಣಿ’ ಇರಬೇಕು. ಗಾಂಧೀಜಿ ಯನ್ನ ಇಷ್ಟೊಂದು ಅವಮಾನಕರವಾಗಿ ನಡೆಕೊಂಡ ಉದಾಹರಣೆ ಮತ್ತೊಂದು ಇರಲಾರದು. ಗಾಂಧಿಯನ್ನು ದೈಹಿಕವಾಗಿ ಕೊಂದವರಿಗೂ ಇವರಿಗೂ ಏನು ವ್ಯತ್ಯಾಸ? ಅವರು ದೈಹಿಕವಾಗಿ ಕೊಂದರು. ಇವರು ಅವರ ಆದರ್ಶಗಳನ್ನೇ ಕೊಲ್ಲುತ್ತಿದ್ದಾರೆ. ಇವೆರಡಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಸೂಕ್ಷ್ಮತೆ ಕಳೆದುಕೊಳ್ಳುತ್ತಿದ್ದಾರೆ.

    ಕಳೆದ ರಾಜ್ಯ ಮತ್ತು ಕೇಂದ್ರ ಚುನಾವಣೆಗಳ ಸಂದರ್ಭಗಳಲ್ಲಿ ನಾವು ಅಧಿಕಾರಕ್ಕೆ ಬಂದರೆ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದ ಗಾಂಧೀವಾದಿ ಸಿದ್ದರಾಮಯ್ಯ ಸಹ ಅಧಿಕಾರಕ್ಕೆ ಬಂದು ಹತ್ತಿರತ್ತಿರ ಒಂದೂವರೆ ವರ್ಷ ಕಳೆಯುತ್ತಿದ್ದರೂ ಅತ್ತ ಗಮನ ಹರಿಸಿಲ್ಲವೆಂದರೆ ಅವರ ಭರವಸೆಗಳನ್ನ ನಂಬುವುದಾದರೂ ಹೇಗೆ.

    ಇಂತಹ ನೈಜ ಹೋರಾಟಗಳಿಗೆ
    ರಾಜಕಾರಣಿಗಳು ಸುಳ್ಳು ಭರವಸೆಗಳನ್ನು ಕೊಡುತ್ತಾ ಹೋಗುತ್ತಿದ್ದಾರೆ ಎಂದರೆ ಹೋರಾಟವನ್ನು ಹತ್ತಿಕ್ಕುತ್ತಿದ್ದಾರೆ ಎಂದೇ ಅರ್ಥ ಎಂದುದನ್ನ ಮುಂಗಾಣಲು ರೈತ ನಾಯಕರು ಇಷ್ಟು ದಿನ ತೆಗೆದುಕೊಂಡಿದ್ದನ್ನೂ ಸಹ ಒಪ್ಪಲಾಗದು. ಹೋರಾಟಕ್ಕೆ ನಿಜವಾದ ತಿರುವು ಸಿಕ್ಕಿರುವುದು ಈಗ. ರೈತರ ಹೋರಾಟಕ್ಕೆ ಸರಕಾರ ತೋರಿದ ಅನಾದರಕ್ಕೆ ಈಗಲಾದರೂ ರಾಜ್ಯ ರೈತನಾಯಕರು ಬಣಗಳ ಬದಿಗಿಟ್ಟು ರೈತ ಹೋರಾಟಕ್ಕೆ ದಿಕ್ಕಾಗುವರೆಂದು ಆಶಿಸುತ್ತೇನೆ.

Leave a Reply

Your email address will not be published. Required fields are marked *