ನವದೆಹಲಿ: ಸಂಯುಕ್ತ ಕಿಸಾನ್ ಮೋರ್ಚಾವು ಮುಂದಿಟ್ಟಿರುವ ಬಹುತೇಕ ಬೇಡಿಕೆಗಳು ಪರಿಹರದ ಹಂತದಲ್ಲಿರುವುದರಿಂದ ರೈತರ ಪ್ರತಿಭಟನೆಯನ್ನು ಹಿಂಪಡೆಯುವ ಬಗ್ಗೆ ಇಂದು ಅಂತಿಮ ನಿರ್ಧಾರಗೊಳ್ಳುವ ಸಾಧ್ಯತೆಗಳಿವೆ. ಇಂದು ಮಧ್ಯಾಹ್ನ ೨ ಗಂಟೆಗೆ ರೈತ ಸಂಘಗಳ ಸಮಾವೇಶ ನಡೆಯಲಿದ್ದ ನಂತರ ನಿರ್ಧಾರಗಳನ್ನು ಪ್ರಕಟಗೊಳ್ಳಲಿದೆ.
ನೆನ್ನೆ ಬೆಳಗ್ಗೆ ಗೃಹ ಸಚಿವಾಲಯದ ಪ್ರಸ್ತಾವನೆಗೆ ಸಂಯುಕ್ತ ಕಿಸಾನ್ ಮೋರ್ಚಾ ಪ್ರತಿಕ್ರಿಯೆ ನೀಡಿದೆ. ಇತರ ವಿಷಯಗಳ ಜೊತೆಗೆ ಎಂಎಸ್‌ಪಿಯನ್ನು ಚರ್ಚಿಸಲು ಕೇಂದ್ರದ ಪ್ರಸ್ತಾವಿತ ಸಮಿತಿಯಲ್ಲಿ ಎಸ್‌ಕೆಎಂ ನಾಯಕರನ್ನು ಸೇರಿಸಲಾಗುವುದು ಎಂದು ತಿಳಿಸಿದೆ. ಇದರ ಬಗ್ಗೆ ಸ್ಪಷ್ಟವಾದ ಆದೇಶ ಹಾಗೂ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ‘ನಕಲಿ’ ಪ್ರಕರಣಗಳನ್ನು ಹಿಂಪಡೆಯುವುದು ಸೇರಿದಂತೆ ಹಲವು ಅಂಶಗಳ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ಎಸ್‌ಕೆಎಂ ಪ್ರಸ್ತಾಪಿಸಿದೆ.
ಸಿಂಘು ಗಡಿಯಲ್ಲಿ ನಡೆದ ಚರ್ಚೆಯ ನಂತರ ರೈತ ಸಂಘಗಳು ಇಂದು ಮತ್ತೆ ನಡೆಯಲಿದೆ ಎಂದು ಹೇಳಿರುವ ರೈತ ನಾಯಕರು ಇಂದು ಚರ್ಚೆ ಬಳಿಕ ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸುವ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ.
ವಿಶೇಷವಾಗಿ ಪ್ರತಿಭಟನಾಕಾರರ ವಿರುದ್ಧ ನಕಲಿ ಪ್ರಕರಣಗಳು ಮತ್ತು ಕನಿಷ್ಠ ಬೆಂಬಲ ಬೆಲೆಗಳನ್ನು (ಎಂಎಸ್‌ಪಿ) ಚರ್ಚಿಸಲು ಸಮಿತಿಯ ರಚನೆ ಮತ್ತು ಆದೇಶಕ್ಕೆ ಸಂಬಂಧಿಸಿದಂತೆ ರೈತ ಒಕ್ಕೂಟಗಳು ಸರ್ಕಾರವು ಸ್ಪಷ್ಟೀಕರಣ ನೀಡಬೇಕು. ತಮ್ಮ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸಮ್ಮತಿ ನೀಡಿದರೆ ಮನೆಗೆ ಹೋಗಲು ಸಿದ್ಧ ಎಂದು ರೈತ ಹೋರಾಟಗಾರರು ತಿಳಿಸಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಅಧ್ಯಕ್ಷ ರಾಕೇಶ್ ಟಿಕಾಯತ್ ಸರ್ಕಾರ ರೈತ ಮುಖಂಡರೊಂದಿಗೆ ಕುಳಿತು ಮಾತುಕತೆ ನಡೆಸಬೇಕು. ಎಂಎಸ್‌ಪಿಗಾಗಿ ಕಾನೂನಾತ್ಮಕ ಖಾತರಿಯ ಬಾಕಿ ಉಳಿದಿದೆ. ಈ ಬೇಡಿಕೆ ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣ ಸೇರಿದಂತೆ ದೇಶದ ಇತರ ಭಾಗಗಳಲ್ಲಿ ಟಿಕಾಯತ್ ಅವರ ಬೆಂಬಲಿಗರಿಗೆ ಪ್ರಮುಖ ಸಮಸ್ಯೆಯಾಗಿ ಉಳಿದಿದೆ ಎಂದಿದ್ದಾರೆ.
ಅಖಿಲ ಭಾರತ ಕಿಸಾನ್ ಸಭಾದ ನಾಯಕ ಅಶೋಕ್ ಧವಳೆ “ಇದು ಎಂಎಸ್‌ಪಿ ವಿರುದ್ಧದ ಕೃಷಿ ಕಾನೂನುಗಳು ಮತ್ತು ವಿಶ್ವ ವ್ಯಾಪಾರ ಸಂಸ್ಥೆ(ಡಬ್ಲ್ಯೂಟಿಓ) ಆಡಳಿತವನ್ನು ಬೆಂಬಲಿಸಿದ ಇತರ ರೈತ ಗುಂಪುಗಳು ಸಹ ಸಮಿತಿಯ ಭಾಗವಾಗುವ ಸಾಧ್ಯತೆಯನ್ನು ತೋರಿಸುತ್ತದೆ” ಎಂದು ಎಚ್ಚರಿಸಿದ್ದಾರೆ. ಹೀಗಾಗಿ ಎಂಎಸ್‌ಪಿ ಕಾನೂನನ್ನು ಚರ್ಚಿಸಲು ಸಮಿತಿಯು ನಿರ್ದಿಷ್ಟ ಆದೇಶವನ್ನು ಹೊಂದಿರಬೇಕು ಎಂದಿದ್ದಾರೆ.
ದೇಶದ ರಾಜಧಾನಿ ದೆಹಲಿಯಲ್ಲಿ ಜನವರಿ 26ರ ಗಣರಾಜ್ಯೋತ್ಸವದಂದು ಟ್ರಾಕ್ಟರ್ ರ‍್ಯಾಲಿ ಸೇರಿದಂತೆ ಕಳೆದ ವರ್ಷ ಪ್ರತಿಭಟನಾಕಾರರ ವಿರುದ್ಧ ದಾಖಲಿಸಲಾದ ಪ್ರಕರಣಗಳನ್ನು ಹಿಂಪಡೆಯಲು ಒತ್ತಾಯಿಸಲಾಗಿದೆ. ಒಮ್ಮೆ ಆಂದೋಲನವನ್ನು ಹಿಂತೆಗೆದುಕೊಂಡರೆ, ಉತ್ತರ ಪ್ರದೇಶ ಮತ್ತು ಹರಿಯಾಣ ಸರ್ಕಾರಗಳು ಮತ್ತು ದೇಶದ ರಾಜಧಾನಿಯಲ್ಲಿ ಪ್ರತಿಭಟನಾಕಾರರ ಮೇಲೆ ದಾಖಲಾದ ಪ್ರಕರಣಗಳನ್ನು ಕೇಂದ್ರದಿಂದ ಹಿಂಪಡೆಯಲಾಗುವುದು ಎಂದು ಗೃಹ ಸಚಿವಾಲಯದ ಪ್ರಸ್ತಾವನೆಯಾಗಿದೆ.
ಪಂಜಾಬ್‌ನ ಭಾರತೀಯ ಕಿಸಾನ್ ಯೂನಿಯನ್‌ನ ಮುಖ್ಯಸ್ಥ ಬಲ್ಬೀರ್ ಸಿಂಗ್ ರಾಜೇವಾಲ್ “ರಾಜಸ್ಥಾನ ಮತ್ತು ಮಧ್ಯಪ್ರದೇಶ ಸೇರಿದಂತೆ ದೇಶದ ಇತರ ಭಾಗಗಳಲ್ಲಿಯೂ ಪ್ರಕರಣಗಳನ್ನು ದಾಖಲಿಸಲಾಗಿದೆ. ಪ್ರಕರಣಗಳನ್ನು ಹಿಂಪಡೆದ ನಂತರವೇ ಪ್ರತಿಭಟನೆ ಕೊನೆಗೊಳ್ಳಲು ಸಾಧ್ಯ. ನಾವು ಯಾವುದೇ ಭರವಸೆಗಳನ್ನು ನಂಬುವುದಿಲ್ಲ” ಎಂದು ಹೇಳಿದರು.
ಬಿಕೆಯುನ ಮತ್ತೊಬ್ಬ ನಾಯಕ ಹರಿಯಾಣದ ಗುರ್ನಾಮ್ ಸಿಂಗ್ ಚದುನಿ, ಪ್ರಕರಣಗಳನ್ನು ಹಿಂಪಡೆಯಲು ಸಮಯ ಮಿತಿಯ ಅಗತ್ಯವಿದೆ. ಪ್ರತಿಭಟನೆಯ ಸಮಯದಲ್ಲಿ ಸಾವನ್ನಪ್ಪಿದವರ ಸಂಬಂಧಿಕರಿಗೆ ಪರಿಹಾರಕ್ಕೆ ಸಂಬಂಧಿಸಿದಂತೆ, ಎಲ್ಲಾ ರಾಜ್ಯಗಳು ಪಂಜಾಬ್ ಮಾದರಿಯನ್ನು ಅನುಸರಿಸಲು ಒಪ್ಪಿಕೊಳ್ಳಬೇಕು. ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಆದರೆ, ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ತನ್ನ ಪ್ರಸ್ತಾವನೆಯಲ್ಲಿ ಈ ಕುರಿತು ಹರಿಯಾಣ ಮತ್ತು ಯುಪಿಯಲ್ಲಿ ಪರಿಹಾರಕ್ಕಾಗಿ ಸರ್ಕಾರಗಳು ತಾತ್ವಿಕ ಒಪ್ಪಿಗೆ ನೀಡಿವೆ ಎಂದು ವಿವರಿಸಿದೆ.
ಕೇಂದ್ರ ಗೃಹ ಸಚಿವಾಲಯದ ಪ್ರಸ್ತಾವನೆಯಲ್ಲಿ ವಿದ್ಯುಚ್ಛಕ್ತಿ ಮಸೂದೆಗೆ ಸಂಬಂಧಿಸಿದಂತೆ, ಕೇಂದ್ರದ ಪ್ರಸ್ತಾವನೆಯು ಸಂಸತ್ತಿನಲ್ಲಿ ಮಂಡಿಸುವ ಮೊದಲು ಎಲ್ಲಾ ಮಧ್ಯಸ್ಥಗಾರರ ಅಭಿಪ್ರಾಯಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ. ಎಸ್‌ಕೆಎಂ ನಾಯಕರಿಗೆ ಕೇಂದ್ರ ಸಚಿವರು ಈಗಾಗಲೇ ಮಾತುಕತೆಯ ಸಮಯದಲ್ಲಿ ಕರಡು ಮಸೂದೆಯನ್ನು ಹಿಂಪಡೆಯಲಾಗುವುದು ಎಂದು ಭರವಸೆ ನೀಡಿದ್ದಾರೆ. ಹುಲ್ಲು ಸುಡುವ ಕುರಿತು ಪ್ರಸ್ತಾವನೆಯಲ್ಲಿ ರೈತರಿಗೆ ಈಗಾಗಲೇ ಕ್ರಿಮಿನಲ್ ಹೊಣೆಗಾರಿಕೆಯಿಂದ ವಿನಾಯಿತಿ ನೀಡಲಾಗಿದೆ. ಈ ರೀತಿಯಲ್ಲಿ ಎಲ್ಲಾ ಐದು ಬೇಡಿಕೆಗಳನ್ನು ಸರಿಯಾಗಿ ಪರಿಹರಿಸಲಾಗಿದೆ ಪ್ರಸ್ತಾವನೆ ಹೇಳಿದೆ.
ಗೃಹ ಖಾತೆಯ ರಾಜ್ಯ ಸಚಿವ ಅಮಿತ್ ಮಿಶ್ರಾ ಟೆನಿ ಅವರನ್ನು ವಜಾಗೊಳಿಸಬೇಕೆಂಬ ರೈತರ ಆರನೇ ಬೇಡಿಕೆಯನ್ನು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿಲ್ಲ. ಇದರ ಬಗ್ಗೆ ಮಧ್ಯಾಹ್ನ ನಡೆಯಲಿರುವ ಸಭೆಯ ನಂತರ ರೈತ ಹೋರಾಟಗಾರರಿಂದ ನಿರ್ಧಾರ ತಿಳಿಯುವ ಸಾಧ್ಯತೆಗಳಿವೆ.