ಆಲಮಟ್ಟಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ಯಾದಗಿರಿ ಭಾಗದ ರೈತರು, ಆಲಮಟ್ಟಿ ಜಲಾಶಯದ ಮಟ್ಟವನ್ನು 519.60 ಮೀಟರ್ ದಿಂದ 524.256 ಮೀಟರ್‌ಗೆ ಎತ್ತರಿಸಿ, ನೀರಾವರಿ ಕ್ಷೇತ್ರ ವಿಸ್ತರಿಸಲು ಆಗ್ರಹಿಸಿ ಜಲಾಶಯದ ಪ್ರವೇಶದ್ವಾರದ ಬಳಿ ಫೆಬ್ರವರಿ 9ರಂದು ಬೃಹತ್ ಪ್ರತಿಭಟನೆ ನಡೆಸಿದರು. ನೀರಾವರಿ
ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಲಕ್ಷ್ಮಿಕಾಂತ ಪಾಟೀಲ ಅವರು, ‘ಜಲಾಶಯದ ಮಟ್ಟ ಎತ್ತರಿಸಿದರೇ, ಹೆಚ್ಚುವರಿಯಾಗಿ 5.94 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಸಿಗಲಿದೆ. ಜೊತೆಗೆ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಮೂರನೇ ಹಂತದ ಯೋಜನೆಗೆ ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.
‘ಬಜೆಟ್‌ನಲ್ಲಿ ಯುಕೆಪಿಗೆ ₹ 10 ಸಾವಿರ ಕೋಟಿ ಮೀಸಲಿಡಬೇಕು, ಯೋಜನೆ ಹಂತ-3 ರ ಭೂಸ್ವಾಧೀನಕ್ಕೆ ನೀಡುವ ಪರಿಹಾರದಷ್ಟೇ ಹಣ ಹಂತ-1, ಹಂತ-2 ರ ಯೋಜನೆಯಡಿ ಭೂಸ್ವಾಧೀನ ಆಗುವ ಜಮೀನಿಗೂ ನೀಡಬೇಕು. ಆಲಮಟ್ಟಿ, ನಾರಾಯಣಪುರ ಜಲಾಶಯದಲ್ಲಿನ ಹೂಳು ತೆರವುಗೊಳಿಸಬೇಕು’ ಎಂದರು.
ಇದನ್ನೂ ಓದಿ: ಜಾಗ್ವಾರ್–ಲ್ಯಾಂಡ್ ರೋವರ್ ಘಟಕ ಆರಂಭ; 5,000 ಉದ್ಯೋಗದ ಭರವಸೆ
ಕೆಬಿಜೆಎನ್ಎಲ್ ಬೆಂಗಳೂರು ಕಚೇರಿಯ ಅಧಿಕಾರಿ ವಿ.ಆರ್. ಹಿರೇಗೌಡರ, ಮುಖ್ಯ ಎಂಜಿನಿಯರ್ ಡಿ.ಬಸವರಾಜ, ಅಭಿಮನ್ಯು, ಬಿ.ಎಸ್. ಪಾಟೀಲ, ತಾರಾಸಿಂಗ್ ದೊಡಮನಿ, ರವಿ ಚಂದ್ರಗಿರಿ ಅವರು ಮನವೊಲಿಸಲು ಯತ್ನಿಸಿದರೂ, ಪ್ರತಿಭಟನಕಾರರು ಮಣಿಯಲಿಲ್ಲ.
ಆಗ ವಿಡಿಯೊ ಕರೆ ಮಾಡಿ ಮಾತನಾಡಿದ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಮೂರ್ತಿ ಕುಲಕರ್ಣಿ, ‘ಜಲಾಶಯ ಮಟ್ಟ ಏರಿಕೆ ಪ್ರಶ್ನಿಸಿ ವಿವಿಧ ರಾಜ್ಯಗಳು ಹಾಕಿರುವ ಪ್ರಕರಣಗಳು ಸುಪ್ರಿಂಕೋರ್ಟ್‌ನಲ್ಲಿ ಬಾಕಿ ಉಳಿದಿವೆ. ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಮಾಡಿಲ್ಲ’ ಎಂಬುದನ್ನು ಗಮನಕ್ಕೆ ತಂದರು.
ನಂತರ ರೈತರು ಪ್ರತಿಭಟನೆ ಹಿಂಪಡೆದರು. ರೈತ ಹೋರಾಟಗಾರರಾದ ಭೂತಾಳಿ ಕಾರಗುಂಡ, ಬಸವರಾಜ ರಂಜಣಗಿ, ಮಹಾವೀರ ಲಿಂಗೇರಿ, ಇಂದ್ರಜಿತ್ ಯಾದವ, ಮಲ್ಲಿಕಾರ್ಜುನ ಪಾಟೀಲ, ಸಿದ್ಧಲಿಂಗ ಪೂಜಾರಿ, ಮಾಳಿಂಗರಾಯ ಕಾರಣಗುಂಡ, ಶಂಕರಲಿಂಗ ಹುರಸಗುಂಡಗಿ ಇದ್ದರು.
ಇದನ್ನೂ ನೋಡಿ: 60 ವರ್ಷದ ಉಳುಮೆಗೆ ಹಕ್ಕಿಲ್ಲವೇ? ಕಾರೆಕೆರೆ ಕಾವಲು ದಲಿತರ ನ್ಯಾಯದ ಕೂಗು Janashakthi Media
