ನಗರವಾಸಿಗಳ ಪ್ರಶ್ನೆಗಳಿಗೆ ಕೃಷಿ ತಜ್ಞರೊಬ್ಬರ ಉತ್ತರಗಳು
ಮೂರು ಹೊಸ ಕೃಷಿ ಕಾನೂನುಗಳು ರೈತರಿಗೆ ಲಾಭದಾಯಕವಾಗಿವೆ ಎಂದು ಕೇಂದ್ರ ಸರ್ಕಾರ ಮತ್ತು ಮಾಧ್ಯಮಗಳು ಟಾಂ ಟಾಂ ಮಾಡುತ್ತಿರುವಾಗ, ಈ ಕಾನೂನುಗಳನ್ನು ರದ್ದು ಮಾಡುವವರೆಗೂ ತಾವು ಹಿಂದೆ ಸರಿಯುವುದಿಲ್ಲ ಎಂದು ದೆಹಲಿಯ ಗಡಿ ಭಾಗಗಳಲ್ಲಿ ಕ್ಯಾಂಪ್ ಮಾಡಿ ಪ್ರತಿಭಟನೆ ನಡೆಸುತ್ತಿರುವ ರೈತರು ಘೋಷಿಸಿದ್ದಾರೆ. ಈ ಪ್ರತಿಭಟನೆಯ ಸಾಧಕ-ಬಾಧಕಗಳ ಬಗ್ಗೆ, ತಪ್ಪು ಮಾಹಿತಿ ಮತ್ತು ವಾಸ್ತವಾಂಶಗಳ ನಡುವೆ ಸ್ವಲ್ಪ ಗೊಂದಲವಿದ್ದರೆ ಅದನ್ನು ಅರ್ಥಮಾಡಿಕೊಳ್ಳಬಹುದು. ಆದರೆ, ತಮ್ಮದೇ ಲೋಕದಲ್ಲಿ ವಿಹರಿಸುತ್ತಿರುವ ಭಾರತದ ಸುಮಾರು ಮಂದಿ ನಗರವಾಸಿಗಳು ರೈತರ ಬಗ್ಗೆ ಒಂದು ರೀತಿಯ ತಿರಸ್ಕಾರ ಭಾವನೆ ಬೆಳೆಸಿಕೊಂಡಿದ್ದಾರೆ. ಇದಕ್ಕೆ ಒಂದು ಕಾರಣವೆಂದರೆ, ಪ್ರತಿಭಟನೆಯ ಹಿಂದಿರುವ ಕತೆ-ವ್ಯಥೆಗಳು ಅವರಿಗೆ ಬಹುಶಃ ಗೊತ್ತಿರಲಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ, ರೈತರ ಆದಾಯ ಸಮಾನತೆಗಾಗಿ ಕಳೆದ ಎರಡು ದಶಕಗಳಿಂದ ಹೋರಾಟ ನಡೆಸುತ್ತಿರುವ ಪತ್ರಕರ್ತ, ಲೇಖಕ ಮತ್ತು ಆಹಾರ ಮತ್ತು ವ್ಯಾಪಾರ ನೀತಿ ತಜ್ಞ ದೇವಿಂದರ್ ಶರ್ಮಾ ಅವರೊಂದಿಗೆ ಪತ್ರಕರ್ತರೊಬ್ಬರು ನಡೆಸಿದ ಸಂದರ್ಶನದ ಪ್ರಶ್ನೆ-ಉತ್ತರಗಳ ಪೈಕಿ ಐದನ್ನು ಇಲ್ಲಿ ಸಂಕ್ಷಿಪ್ತವಾಗಿ ಕೊಡಲಾಗಿದೆ.
(ಕೃಪೆ: ರೋಹಿತ್‌ಕುಮಾರ್- ದಿ ವೈರ್.ಇನ್) ಸಂಗ್ರಹ-ಅನುವಾದ: ಕೆ.ಎಂ.ನಾಗರಾಜ್
ರೈತರು ದುಃಖಿತರಾಗಿದ್ದಾರೆ, ಏಕೆ?
ಈ ಮೂರು ಹೊಸ ಕೃಷಿ ಕಾನೂನುಗಳು ರೈತ ಸಮುದಾಯವನ್ನು ಕೆರಳಿಸಿವೆ. ಆದ್ದರಿಂದ, ಅವರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬುದು ಅನೇಕರ ಭಾವನೆ. ವಾಸ್ತವಿಕವಾಗಿ ಹೇಳುವುದಾದರೆ, ಕಳೆದ 40 ವರ್ಷಗಳಲ್ಲಿ ಕೃಷಿಗೆ ಮಾಡಿದ ಭಾರಿ ಅನ್ಯಾಯ ಮತ್ತು ಅಸಮಾನತೆಗಳನ್ನು ಮೂರು ಅಧ್ಯಯನಗಳು ಬಹಿರಂಗಪಡಿಸಿವೆ. ರೈತರಲ್ಲಿ ಮಡುಗಟ್ಟಿದ್ದ ಆಕ್ರೋಶವು ಕೊನೆಗೂ ಕಟ್ಟೆಯೊಡೆದು ಹರಿದಿದೆ.
ವಿಶ್ವ ಸಂಸ್ಥೆಯ ಅಂಗ ಸಂಸ್ಥೆಯೊಂದು (UNCTAD) ನಡೆಸಿದ ಅಧ್ಯಯನದ ಪ್ರಕಾರ, 1980ರ ಮತ್ತು 2000ರ ದಶಕದ ನಡುವೆ, ಪ್ರಪಂಚದಾದ್ಯಂತ ಕೃಷಿ ಉತ್ಪನ್ನಗಳ ಮನೆ ಬಾಗಿಲ ಬೆಲೆಯು ನಿಶ್ಚಲವಾಗಿತ್ತು. ಅಂದರೆ, 2000ನೇ ಇಸವಿಯಲ್ಲಿ ರೈತರ ಆದಾಯವು (ಹಣದುಬ್ಬರಕ್ಕೆ ಹೊಂದಿಸಿ ಲೆಕ್ಕಹಾಕಿದ ನಂತರ) 1980ರ ದಶಕದಲ್ಲಿ ಇದ್ದಷ್ಟೇ ಇತ್ತು. ಈ ಸಮಸ್ಯೆಯನ್ನು ಶ್ರೀಮಂತ ದೇಶಗಳು ತಮ್ಮ ರೈತರಿಗೆ ನೇರ ಆದಾಯ ವರ್ಗಾವಣೆ ಮತ್ತು ಇತರ ಸವಲತ್ತುಗಳನ್ನು ಒದಗಿಸುವ ಮೂಲಕ ಬಗೆಹರಿಸಿದವು. ಆದರೆ, ಅಭಿವೃದ್ಧಿಶೀಲ ದೇಶಗಳಿಗೆ ಈ ರೀತಿ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ, ಕಳೆದ 20 ವರ್ಷಗಳಿಂದ ಈ ದೇಶಗಳ ರೈತರು ಮೌನವಾಗಿ ನರಳಿದರು.
ನವದೆಹಲಿಯ ಒಂದು ಚಿಂತಕರ ಚಾವಡಿ (think tank) ಮತ್ತು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD) ಮತ್ತೊಂದು ಅಧ್ಯಯನವನ್ನು 2008ರಲ್ಲಿ ನಡೆಸಿದವು. ಈ ಅಧ್ಯಯನದ ಪ್ರಕಾರ 2010 ರಿಂದ 2017ರ ಅವಧಿಯಲ್ಲಿ ಭಾರತದ ರೈತರು ತಮ್ಮ ಕೃಷಿ ಆದಾಯದಲ್ಲಿ 45 ಲಕ್ಷ ಕೋಟಿ ರೂ.ಗಳ ನಷ್ಟ ಅನುಭವಿಸಿದರು. ಈ ನಷ್ಟವನ್ನು ಕೆಲವೇ ಕೆಲವು ಬೆಳೆಗಳಿಗೆ ಮಾತ್ರ ಲೆಕ್ಕಹಾಕಲಾಗಿತ್ತು. ಹಾಗಾಗಿ, ಎಲ್ಲ ಬೆಳೆಗಳನ್ನೂ ಸೇರಿಸಿ ಲೆಕ್ಕ ಹಾಕಿದರೆ, ರೈತರು ಅನುಭವಿಸಿದ ನಷ್ಟವು ಇನ್ನೂ ಹೆಚ್ಚಿನದ್ದೇ. ಅಂದರೆ, ರೈತರಿಗೆ ನ್ಯಾಯಯುತವಾದ ಆದಾಯ ದೊರಕದ ಕಾರಣದಿಂದಾಗಿ ಅವರು ಪ್ರತಿ ವರ್ಷವೂ ಸುಮಾರು 2.64 ಲಕ್ಷ ಕೋಟಿ ರೂ.ಗಳನ್ನು ಕಳೆದುಕೊಳ್ಳುತ್ತಾರೆ.
ನಂತರ ಬಂದದ್ದು 2016ರ ಸರ್ಕಾರದ ಆರ್ಥಿಕ ಸಮೀಕ್ಷಾ ವರದಿ. ಈ ವರದಿಯ ಪ್ರಕಾರ ಭಾರತದ 17 ರಾಜ್ಯಗಳಲ್ಲಿ, (ದೇಶದ ಸುಮಾರು ಅರ್ಧಭಾಗದಷ್ಟು) ಒಂದು ರೈತ ಕುಟುಂಬದ ಸರಾಸರಿ ವಾರ್ಷಿಕ ಆದಾಯವು ಕೇವಲ 20,000 ರೂಗಳು ಅಥವಾ ತಿಂಗಳಿಗೆ 1,700 ರೂಪಾಯಿಗಳಿಗಿಂತ ಕಡಿಮೆ ಇದೆ. ಈ ಹಣದಲ್ಲಿ ಒಂದು ಹಸುವನ್ನೂ ಸಾಕಲು ಸಾಧ್ಯವಿಲ್ಲ! ಈ ಅಲ್ಪ ಆದಾಯದಿಂದ ರೈತ ಸಮುದಾಯವು ಬದುಕುಳಿದಿದೆ ಎಂಬುದೇ ಒಂದು ಆಶ್ಚರ್ಯ.
ಈ ಕೆಲವು ಅಂಶಗಳನ್ನು ಪ್ರಸ್ತಾಪಿಸಿದ ಉದ್ದೇಶವೆಂದರೆ, ಕಳೆದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಕೃಷಿಯು ಒಂದು ಭೀಕರ ಬಿಕ್ಕಟ್ಟಿಗೆ ಒಳಗಾಗಿದೆ. ಮೈ ಕೊರೆಯುವ ಚಳಿಯಲ್ಲಿ ದೆಹಲಿಯ ಗಡಿ ಭಾಗದಲ್ಲಿ ರೈತರು ಜಮಾಯಿಸಿರುವುದು, ಅವರು ಸಾಕಷ್ಟು ನೊಂದಿದ್ದಾರೆ ಎಂಬುದನ್ನು ಸೂಚಿಸುತ್ತದೆ. ವಿದ್ವಜ್ಜನರು, ಗಣ್ಯರು, ಅರ್ಥಶಾಸ್ತ್ರಜ್ಞರು ಈ ಎಲ್ಲರೂ ರೈತರಿಗೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ, ರೈತರು ತಮ್ಮ ಉಳಿವಿನ ಹೋರಾಟ ನಡೆಸುತ್ತಿದ್ದಾರೆ. ಇದ್ದದ್ದನ್ನು ಇಲಿ ಕಚ್ಚಿಕೊಂಡು ಹೋಯಿತು ಎನ್ನುವ ಹಾಗೆ ಈ ಕೃಷಿ ಕಾಯ್ದೆಗಳು ಜಾರಿಯಾದಾಗ ತಮ್ಮಲ್ಲಿರುವ ಸರ್ವಸ್ವವನ್ನೂ ಕಳೆದುಕೊಳ್ಳುವ ಭೀತಿಯು ರೈತರನ್ನು ಈ ರೀತಿಯ ಪ್ರತಿಭಟನೆಗೆ ತಳ್ಳಿದೆ. ಇದು, ಜಗತ್ತಿನ ಯಾವ ಭಾಗದಲ್ಲಿಯೂ ಕಂಡಿರದಂತಹ ಒಂದು ಅಭೂತಪೂರ್ವ ಪ್ರತಿಭಟನೆ.
ಇದು ಶ್ರೀಮಂತ ಪಂಜಾಬಿ ರೈತರ ಪ್ರತಿಭಟನೆಯಲ್ಲವೆ?
ಪಂಜಾಬ್ ಕೃಷಿ ವಿಶ್ವವಿದ್ಯಾಲಯ, ಪಂಜಾಬ್ ವಿಶ್ವವಿದ್ಯಾಲಯ ಮತ್ತು ಗುರು ನಾನಕ್ ದೇವ್ ವಿಶ್ವವಿದ್ಯಾಲಯಗಳು ಜಂಟಿಯಾಗಿ ನಡೆಸಿದ ಒಂದು ಅಧ್ಯಯನದ ಪ್ರಕಾರ, 2000-2015ರ ಅವಧಿಯಲ್ಲಿ, ಪಂಜಾಬಿನಲ್ಲಿ 16,600 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಂಜಾಬಿನ ಕೃಷಿಕರ ಒಟ್ಟು ಸಾಲದ ಹೊರೆ ಸುಮಾರು 1 ಲಕ್ಷ ಕೋಟಿ ರೂಪಾಯಿಗಳು! ರೈತರು ನಿಜವಾಗಿಯೂ ಶ್ರೀಮಂತರಾಗಿದ್ದರೆ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೇ? ರೈತರ ಹೋರಾಟದ ವಿಷಯದಲ್ಲಿ ಮಾತನಾಡುವಾಗ, ರೈತರು ಹೊಂದಿರುವ ಭೂ ಹಿಡುವಳಿಯ ಅಂದಾಜು ನಮ್ಮ ಗಮನದಲ್ಲಿರಬೇಕಾಗುತ್ತದೆ. ಭಾರತದ 86% ರೈತರು ಐದು ಎಕರೆಗಿಂತ ಕಡಿಮೆ (ಸಣ್ಣ ರೈತರು) ಭೂ ಹಿಡುವಳಿ ಹೊಂದಿದ್ದಾರೆ. 10% ರೈತರು 6 ರಿಂದ 8 ಎಕರೆ (ಮಧ್ಯಮ ರೈತರು) ಭೂ ಹಿಡುವಳಿ ಹೊಂದಿದ್ದಾರೆ. ಕೇವಲ 4% ರೈತರು 10 ಎಕರೆಗೂ ಹೆಚ್ಚು ಜಮೀನು ಹೊಂದಿದ್ದಾರೆ. ಅಂದರೆ, ಕೇವಲ 4% ರೈತರಿಗೆ 10 ಎಕರೆಗಿಂತ ಹೆಚ್ಚು ಜಮೀನು ಇರುವಾಗ, ನಾವು ಯಾವ ರೀತಿಯ ಶ್ರೀಮಂತ ರೈತರ ಬಗ್ಗೆ ಮಾತನಾಡುತ್ತಿದ್ದೇವೆ? ಪಂಜಾಬ್‌ನಲ್ಲಿ, ಸುಮಾರು 70% ಸಣ್ಣ ರೈತರು ಕನಿಷ್ಠ ಬೆಂಬಲ ಬೆಲೆಯ ಪ್ರಯೋಜನ ಪಡೆಯುತ್ತಾರೆ, ನಿಜ. ಕನಿಷ್ಠ ಬೆಂಬಲ ಬೆಲೆಯ ಪ್ರಯೋಜನ ಪಡೆಯುವವರಲ್ಲಿ ಅವರೇ ಹೆಚ್ಚು. ಆದ್ದರಿಂದ ಕನಿಷ್ಠ ಬೆಂಬಲ ಬೆಲೆ ಪಡೆಯುವ ಶ್ರೀಮಂತ ರೈತರೇ ಈ ಹೋರಾಟ ನಡೆಸುತ್ತಿದ್ದಾರೆ ಎಂಬುದು ಹಾಸ್ಯಾಸ್ಪದ.
ಈ ಪ್ರತಿಭಟನೆಯು ವಿರೋಧ ಪಕ್ಷಗಳ ಪ್ರಚೋದನೆಯಿಂದ ನಡೆಯುತ್ತಿದೆ ಎಂದು ಆರೋಪಿಸುವವರಿಗೆ ಹೀಗೆ ಹೇಳಬಹುದು: “ಮೈ ಕೊರೆಯುವ ಈ ಚಳಿಯಲ್ಲಿ ಒಂದೇ ಒಂದು ರಾತ್ರಿ ನಿಮ್ಮ ಮನೆಯ ಹೊರಗೆ ಮಲಗಿ, ಅದು ಹೇಗಿರುತ್ತದೆ ಎಂಬುದನ್ನು ಅನುಭವಿಸಿ ನೋಡಿ. ಹಣ ಕೊಟ್ಟರೂ ಸಹ ಯಾರೂ ಚಳಿಯಲ್ಲಿ ಮನೆಯಿಂದ ಹೊರಗೆ ಮಲಗುವುದಿಲ್ಲ. ದೆಹಲಿಯ ಹೊರವಲಯದ ರಸ್ತೆಯ ಮೇಲೆ ಒಂದು ಟ್ರಾಲಿಯಲ್ಲಿ ಅಥವಾ ಒಂದು ಟೆಂಟ್‌ನಲ್ಲಿ ಒಂದೇ ಒಂದು ರಾತ್ರಿ ಕಳೆಯಿರಿ ನೋಡೋಣ. ಹಣಕ್ಕಾಗಿಯೇ ಆದರೂ ಒಂದು ತಿಂಗಳಿಗಿಂತ ಹೆಚ್ಚು ಕಾಲ ನೀವು ರಸ್ತೆಯ ಮೇಲೆ ವಾಸ ಮಾಡಬಲ್ಲಿರಾ ಎಂದು ಯೋಚಿಸಿ”. ಮನ ಕಲಕುವ ಪ್ರತಿಭಟನೆಯ ದೃಶ್ಯಗಳು ರೈತರ ಬಗ್ಗೆ ಹೊಂದಿರುವ ತಾತ್ಸಾರ ಮನೋಭಾವವನ್ನು ತೊರೆಯಲು ಕಾರಣವಾದರೆ, ಅಷ್ಟು ಮಟ್ಟಿಗೆ ಒಳ್ಳೆಯದೇ. ಪ್ರತಿಭಟನಾ ನಿರತ ರೈತರನ್ನು ಗೌರವಿಸೋಣ, ಅವರಿಗೆ ಏನು ಬೇಕು ಮತ್ತು ಅದನ್ನು ಅವರಿಗೆ ದೊರಕಿಸಲು ನಾವು ಏನು ಮಾಡಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಮೊದಲು ಪ್ರಯತ್ನಿಸೋಣ.
ಎಷ್ಟು ರೈತ ಸಂಘಟನೆಗಳು ಈ ಕಾನೂನುಗಳನ್ನು ಬೆಂಬಲಿಸುತ್ತವೆ?
ಬಹುಸಂಖ್ಯಾತ ರೈತರು ಈ ಕಾನೂನುಗಳ ಪರವಾಗಿದ್ದರೆ, ಪ್ರತಿಭಟನೆಯು ಇಷ್ಟು ದೊಡ್ಡದಿರುತ್ತಿತ್ತೇ? ಅನೇಕ ರೈತ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಸೇರಿರುವುದೇ ಒಂದು ವಿಶೇಷ. ಎರಡು ದಶಕಗಳಿಂದಲೂ ರೈತರೊಂದಿಗೆ ಕೆಲಸ ಮಾಡಿರುವ ಅನುಭವವಿರುವ ನನಗೆ, ವಿವಿಧ ರೈತ ಸಂಘಟನೆಗಳು ಏಕಾಭಿಪ್ರಾಯಕ್ಕೆ ಬರುವುದನ್ನು ಕಾಣುವುದೇ ಕಷ್ಟ. ಇಲ್ಲಿ ನೀವು ಪಂಜಾಬ್, ಹರಿಯಾಣ, ರಾಜಸ್ಥಾನ, ಪಶ್ಚಿಮ ಉತ್ತರ ಪ್ರದೇಶ ಮತ್ತು ದೇಶದ ಇತರ ಭಾಗಗಳ ರೈತ ಒಕ್ಕೂಟಗಳ ನಾಯಕರನ್ನು ಕಾಣುತ್ತೀರಿ. ಇದು ಏನನ್ನು ತೋರಿಸುತ್ತದೆ ಎಂದರೆ, ವಿಕೋಪಕ್ಕೆ ಹೋಗಿರುವ ಪರಿಸ್ಥಿತಿಯಲ್ಲಿ, ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ರೈತರು ತಮ್ಮ ಉಳಿವಿಗಾಗಿ ಈಗ ಒಂದಾಗಿ ಹೋರಾಟ ಮಾಡುತ್ತಿದ್ದಾರೆ. ಈ ಕಾನೂನುಗಳು ರೈತರಿಗೆ ಅನುಕೂಲಕರವಾಗಿವೆ ಎಂದು ಹೇಳುವ ಸಂಘಟನೆಗಳ ಬಗ್ಗೆ ಇಷ್ಟನ್ನು ಮಾತ್ರ ಹೇಳಬಹುದು: ಒಂದು ವಿಸಿಟಿಂಗ್ ಕಾರ್ಡ್ ಮುದ್ರಿಸಿಕೊಂಡು ನೀವೂ ಒಂದು ರೈತ ಸಂಘಟನೆಯನ್ನು ಪ್ರತಿನಿಧಿಸುತ್ತೀರಿ ಎಂದು ಹೇಳುವುದು ಕಷ್ಟವೇನಲ್ಲ. ಮುಖ್ಯವಾದ ಅಂಶವೆಂದರೆ ಇಷ್ಟೊಂದು ಬೃಹತ್ ಸಂಖ್ಯೆಯ ರೈತರು ಸಂಘಟಿತರಾಗಿ ಪ್ರತಿಭಟನೆ ನಡೆಸಿದ್ದಾರೆ. ರೈತರ ಒಂದೇ ಒಂದು ದೊಡ್ಡ ಗುಂಪು ದುಃಖಿತರಾಗಿದ್ದರೂ ಸಹ, ಅವರು ಏಕೆ ದುಃಖಿತರಾಗಿದ್ದಾರೆ ಮತ್ತು ಅವರಿಗೆ ಹೇಗೆ ಸಹಾಯ ಮಾಡಬಹುದು ಎಂಬುದು ಮುಖ್ಯ, ಅಲ್ಲವೆ? ಅವರನ್ನು ಹೀಯಾಳಿಸುವುದರ ಬದಲು.
ಕಾರ್ಪೊರೇಟ್ ಕೃಷಿ ಅಷ್ಟೊಂದು ಕೆಟ್ಟದ್ದೇ?
ಮೊನ್ನೆ ನನ್ನನ್ನು ಸಂದರ್ಶನ ಮಾಡುತ್ತಿದ್ದ ಒಂದು ಟಿ.ವಿ ಚಾನೆಲ್‌ನವರು, “ಈ ಕೃಷಿ ಕಾನೂನುಗಳ ಬಗ್ಗೆ ಮಾರುಕಟ್ಟೆಗಳು ಸಡಗರ-ಉತ್ಸಾಹದಲ್ಲಿರುವಾಗ, ರೈತರು ಏಕೆ ಅಸಂತುಷ್ಟರಾಗಿದ್ದಾರೆ?” ಎಂದು ಕೇಳಿದರು. “ನಿಮ್ಮ ಪ್ರಶ್ನೆಯನ್ನು ನೀವೇ ಉತ್ತರಿಸಿದ್ದೀರಿ. ಈ ಕಾನೂನುಗಳು ಷೇರು ಮಾರುಕಟ್ಟೆಗೆ ಅನುಕೂಲಕರವಾಗಿವೆ. ಹಾಗಾಗಿ ಮಾರುಕಟ್ಟೆಯು ಸಡಗರ-ಉತ್ಸಾಹದಲ್ಲಿದೆ. ಈ ಕಾನೂನುಗಳು ರೈತರಿಗೆ ಮಾರಕವಾಗಿವೆ. ಹಾಗಾಗಿ ಅವರು ಬೀದಿಗಿಳಿದಿದ್ದಾರೆ” ಎಂದು ಹೇಳಿದೆ.
ಜಗತ್ತು ಕಾರ್ಪೊರೇಟ್ ಕೃಷಿಯತ್ತ ಸಾಗುತ್ತಿದೆ, ನಿಜ. ಆದರೆ, ಅದರಿಂದ ರೈತರ ಆದಾಯ ವೃದ್ಧಿಸಿಲ್ಲ. ಉದಾಹರಣೆಗೆ, ಈ ಕೃಷಿ ಕಾನೂನುಗಳನ್ನು ನಾವು ಎರವಲು ಪಡೆದ ಅಮೇರಿಕಾ ದೇಶವನ್ನು ತೆಗೆದುಕೊಳ್ಳಿ. ಸುಮಾರು ಏಳು ದಶಕಗಳಿಂದಲೂ ಅಮೆರಿಕದಲ್ಲಿ, ಮಾರುಕಟ್ಟೆಗಳು ಮತ್ತು ಕೃಷಿ ವ್ಯಾಪಾರಗಳು ಮುಕ್ತವಾಗಿಯೇ ಇವೆ. ಆದರೂ, ಅಲ್ಲಿನ ಕೃಷಿ ಆದಾಯವು ಇಳಿಮುಖವಾಗುತ್ತಿದೆ. 2020ರಲ್ಲಿ, ಅಮೆರಿಕದಲ್ಲಿ ರೈತರು ದಿವಾಳಿಗೆ ಒಳಗಾಗಿದ್ದ ಮೊತ್ತವು 425 ಶತಕೋಟಿ ಡಾಲರ್‌ಗೂ ಹೆಚ್ಚಿನದು. ಕೃಷಿ ಸುಧಾರಣೆಗಳು ನಿಜಕ್ಕೂ ಅನುಕೂಲಕರವಾಗಿದ್ದರೆ ರೈತರು ದಿವಾಳಿಯಾಗುತ್ತಾರೆಯೇ? ಅಮೆರಿಕ ಕೂಡ ಕೃಷಿ ಬಿಕ್ಕಟ್ಟಿಗೆ ಒಳಗಾಗಿದೆ. ಗ್ರಾಮೀಣ ಅಮೇರಿಕಾದಲ್ಲಿ ಆತ್ಮಹತ್ಯೆಗಳು ಅಲ್ಲಿನ ನಗರಗಳಿಗೆ ಹೋಲಿಸಿದರೆ 45% ಹೆಚ್ಚು ಇವೆ. ಕಳೆದ ಕೆಲವು ವರ್ಷಗಳಲ್ಲಿ, ಅಮೇರಿಕಾದಲ್ಲಿ ಸಣ್ಣ ಕೃಷಿ ಹಿಡುವಳಿಗಳು ಕಣ್ಮರೆಯಾಗಿವೆ. ಅಮೆರಿಕದ ಜನಸಂಖ್ಯೆಯ ಶೇ.1.5ರಷ್ಟು ಮಂದಿ ಮಾತ್ರ ಈಗ ಕೃಷಿಯಲ್ಲಿ ತೊಡಗಿದ್ದಾರೆ. ಆದರೂ, ಅಮೆರಿಕವು ಜಗತ್ತಿನಲ್ಲೇ ಅತಿ ದೊಡ್ಡ ಕೃಷಿ ಉತ್ಪಾದಕ ದೇಶವಾಗಿ ಮುಂದುವರಿದಿದೆ. ಅಮೆರಿಕದ ಕೃಷಿಯ ಬಗ್ಗೆ ಮಾತನಾಡುವಾಗ, ದೊಡ್ಡ ದೊಡ್ಡ ಯಂತ್ರಗಳು, ದೊಡ್ಡ ದೊಡ್ಡ ಕೃಷಿ ಕಾರ್ಪೊರೇಟ್‌ಗಳು ಮತ್ತು ದೈತ್ಯ ಕೃಷಿಯ ಬಗ್ಗೆ ಮಾತನಾಡುತ್ತೇವೆ ಎಂದು ಅರ್ಥ. ಆದರೆ, ನಾವು ಭಾರತದ ಕೃಷಿಯ ಬಗ್ಗೆ ಮಾತನಾಡುವಾಗ, ಅದು ಲಕ್ಷ ಲಕ್ಷ ಸಣ್ಣ ರೈತರ ಬಗ್ಗೆ ಎಂದು ಅರ್ಥ.
ಅಮೆರಿಕದಲ್ಲಿ ಎಪಿಎಂಸಿಯೂ ಇಲ್ಲ, ಕನಿಷ್ಠ ಬೆಂಬಲ ಬೆಲೆಯೂ ಇಲ್ಲ. ವಾಲ್‌ಮಾರ್ಟ್ ನಂತಹ ದೈತ್ಯ ಚಿಲ್ಲರೆ ವ್ಯಾಪಾರಿ ಸಂಸ್ಥೆಗಳು ಹೊಂದಿರುವ ವಸ್ತುಗಳ ದಾಸ್ತಾನಿಗೆ ಮಿತಿಯೂ ಇಲ್ಲ. ಅಮೇರಿಕಾದಲ್ಲಿ ಗುತ್ತಿಗೆ ಬೇಸಾಯವೂ ಇದೆ ಮತ್ತು ಸರಕು ವ್ಯಾಪಾರವೂ ಇದೆ. ಆದರೂ, ಅಮೆರಿಕದ ರೈತರಿಗೆ ಸರ್ಕಾರವು ಪ್ರತಿ ವರ್ಷ ಸರಾಸರಿ 62,000 ಡಾಲರ್ ಸಬ್ಸಿಡಿ ನೀಡುತ್ತದೆ. ಈಗ ಪ್ರಶ್ನೆಯೆಂದರೆ, ಮುಕ್ತ ಮಾರುಕಟ್ಟೆಗಳು ನಿಜಕ್ಕೂ ದಕ್ಷವಾಗಿದ್ದರೆ, ಸರ್ಕಾರವು ಕೃಷಿ ವಲಯಕ್ಕೆ ಅಷ್ಟೊಂದು ಹಣವನ್ನು ಸುರಿಯುವುದಾದರೂ ಏಕೆ? ಪ್ರಪಂಚದ ಅತ್ಯಂತ ಶ್ರೀಮಂತ ವ್ಯಾಪಾರ ಒಕ್ಕೂಟದ (OECD) ದೇಶಗಳು, ನೇರ ಆದಾಯ ವರ್ಗಾವಣೆ ಅಥವಾ ಸಬ್ಸಿಡಿಗಳ ಮೂಲಕ ಪ್ರತಿ ವರ್ಷವೂ ನೂರಾರು ಕೋಟಿ ಡಾಲರ್‌ಗಳನ್ನು ಕೃಷಿ ಕ್ಷೇತ್ರಕ್ಕೆ ಸುರಿಯುತ್ತವೆ. ಕೃಷಿಗೆ ಯುರೋಪ್ ವಾರ್ಷಿಕ 100 ಶತಕೋಟಿ ಡಾಲರ್‌ಗಳ ಸಬ್ಸಿಡಿ ನೀಡುತ್ತಿದೆ. ಅದರಲ್ಲಿ ಅರ್ಧದಷ್ಟು ರೈತರಿಗೆ ನೇರ ಆದಾಯ ಬೆಂಬಲವಾಗಿ ವರ್ಗಾವಣೆಯಾಗುತ್ತದೆ. ಆದ್ದರಿಂದ, ಕೃಷಿ ವಲಯದಲ್ಲಿ ನಾವು ಕಾಣುವ ‘ಮಾರುಕಟ್ಟೆ ದಕ್ಷತೆ’ಯು, ವಾಸ್ತವವಾಗಿ, ಕೃಷಿ ವಲಯಕ್ಕೆ ಸರ್ಕಾರದ ಆರ್ಥಿಕ ಬೆಂಬಲವೇ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸುಸ್ಥಿರ ಮತ್ತು ಕಾರ್ಯಸಾಧ್ಯ ಕೃಷಿ ಇದೆ ಎಂದರೆ ಅದು ಮಾರುಕಟ್ಟೆಗಳ ದಕ್ಷತೆಯ ಕಾರಣದಿಂದಲ್ಲ; ಅಲ್ಲಿನ ಸರ್ಕಾರಗಳು ಒದಗಿಸಿದ ಸಬ್ಸಿಡಿಯ ಕಾರಣದಿಂದ ಎಂಬ ಅಂಶದ ಬಗ್ಗೆ ನಾವು ಸ್ಪಷ್ಟತೆಯನ್ನು ಹೊಂದಿರಬೇಕಾಗುತ್ತದೆ. ಪ್ರಾಸಂಗಿಕವಾಗಿ ಹೇಳುವುದಾದರೆ, ಅಮೆರಿಕ ಮತ್ತು ಐರೋಪ್ಯ ಒಕ್ಕೂಟವನ್ನೂ ಕೂಡ ಹಿಂದಿಕ್ಕಿ, ಜಗತ್ತಿನಲ್ಲೇ ಈಗ ಅತಿ ಹೆಚ್ಚು ಕೃಷಿ ಸಬ್ಸಿಡಿಯನ್ನು ಒದಗಿಸುವ ದೇಶವಾಗಿ ಚೀನಾ ಹೊರಹೊಮ್ಮಿದೆ. 2016ರಲ್ಲಿ ಚೀನಾ ಸರ್ಕಾರವು ತನ್ನ ಕೃಷಿ ವಲಯಕ್ಕೆ 212 ಶತಕೋಟಿ ಡಾಲರ್ ಮೊತ್ತದ ಸಬ್ಸಿಡಿಯನ್ನು ನೀಡಿದೆ. ಗೋಧಿ ಬೆಳೆಯುವ ರೈತರ ಆದಾಯದಲ್ಲಿ ಶೇ.38ರಷ್ಟು ಸಬ್ಸಿಡಿಗಳ ಮೂಲಕ ಬರುತ್ತದೆ, ಅಕ್ಕಿ ಬೆಳೆಯುವ ರೈತರ ಶೇ.32ರಷ್ಟು ಆದಾಯವು ಸಬ್ಸಿಡಿಗಳ ಮೂಲಕ ಬರುತ್ತದೆ. ಅಧಿಕ ಇಳುವರಿಯ ಬೆಳೆಗಳಲ್ಲ, ಸಬ್ಸಿಡಿಗಳು ರೈತರಿಗೆ ಹೆಚ್ಚಿನ ಆದಾಯ ನೀಡುತ್ತವೆ.
ತಂತ್ರಜ್ಞಾನವನ್ನು ಅಳವಡಿಸಿಕೊಂಡಾಗ ಉತ್ಪಾದಕತೆ ಹೆಚ್ಚುತ್ತದೆ ಮತ್ತು ಆದಾಯವೂ ಹೆಚ್ಚುತ್ತದೆ, ನಿಜ. 1970ರ ದಶಕದಲ್ಲಿ, ಅಮೇರಿಕಾ ದೇಶವು ಉನ್ನತ ತಂತ್ರಜ್ಞಾನ ಅಳವಡಿಸಿಕೊಂಡ ಮತ್ತು ಹೆಚ್ಚು ಇಳುವರಿ ನೀಡುವ ಜಾನುವಾರುಗಳಿಂದ ಕೂಡಿದ ಅನೇಕ ಸಣ್ಣ ಸಣ್ಣ ಹೈನು ಕೃಷಿ ಉದ್ದಿಮೆ ಸಂಸ್ಥೆಗಳನ್ನು ಹೊಂದಿತ್ತು. ಅವು ಒಂದು ಮಾದರಿಯೂ ಆಗಿದ್ದವು. ಆದರೆ, ಸುಮಾರು ಹತ್ತು ವರ್ಷಗಳ ಹಿಂದೆ, ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಒಬ್ಬ ಡೈರಿ ರೈತನ ಆತ್ಮಹತ್ಯೆಯ ಆಘಾತಕಾರಿ ವರದಿಯನ್ನು ಓದಿದ್ದೆ. ಹಾಲಿನ ದರ ಕುಸಿತದಿಂದ ಆತ ಎಷ್ಟು ನೊಂದಿದ್ದನೆಂದರೆ, ತನ್ನ 51 ಹಸುಗಳ ಮೇಲೆ ಮೊದಲು ಗುಂಡು ಹಾರಿಸಿ, ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ನಾನು ಹೇಳ ಹೊರಟಿದ್ದ ವಿಷಯವೇನೆಂದರೆ, ಅಮೆರಿಕದಲ್ಲೂ ಕಷ್ಟ ಕಾರ್ಪಣ್ಯಗಳಿವೆ. 1970ರ ದಶಕದಲ್ಲಿ ಅಮೇರಿಕಾದಲ್ಲಿದ್ದ ಡೈರಿ ಫಾರ್ಮ್‌ಗಳ ಪೈಕಿ 93% ಈಗ ಮುಚ್ಚಿವೆ. ಆದರೆ, ಹಾಲಿನ ಉತ್ಪಾದನೆ ಏರಿಕೆಯಾಗಿದೆ. ದೊಡ್ಡ ದೊಡ್ಡ ಕಾರ್ಪೊರೇಟ್‌ಗಳು ದೈತ್ಯ ಡೈರಿಗಳನ್ನು ಸ್ಥಾಪಿಸಿರುವ ಕಾರಣದಿಂದಾಗಿ ಹಾಲಿನ ದರ ಕುಸಿತಗೊಂಡು ಶೇ.93ರಷ್ಟು ಹೈನು ಕೃಷಿ ಸಂಸ್ಥೆಗಳು ಮುಚ್ಚಿವೆ. ತಂತ್ರಜ್ಞಾನ ಮತ್ತು ಉತ್ಪಾದಕತೆಗಳು ಹೈನುಗಾರರ ಸಹಾಯಕ್ಕೆ ಬಾರದೆ ಹೋದವು. ಹಾಲಿನ ದರ ಕುಸಿತವು ಉತ್ಪಾದನಾ ವೆಚ್ಚಗಳನ್ನೂ ಸಹ ಭರಿಸಲಾಗದ ಹಂತವನ್ನು ತಲುಪಿದಾಗ ಹೈನುಗಾರರು ತಮ್ಮ ಡೈರಿಗಳನ್ನು ಮುಚ್ಚಿದರು. ಹೈನುಗಾರಿಕೆಯನ್ನು ತೊರೆದರು. ಈ ಒಂದು ಉದಾಹರಣೆಯೇ ರೈತರ ಆದಾಯವನ್ನು ಹೆಚ್ಚಿಸಲು ನೆರವಾಗಬೇಕಾದ ಅಂಶಗಳು ವಾಸ್ತವವಾಗಿ ನೆರವಾಗಲಿಲ್ಲ ಎಂಬುದನ್ನು ತೋರಿಸುತ್ತದೆ. ಇದು ನಮಗೆ ಒಂದು ಎಚ್ಚರಿಕೆಯ ಗಂಟೆಯಾಗಬೇಕು. ರೈತರಿಗೆ ನಿಜಕ್ಕೂ ಬೇಕಾಗಿರುವುದು ನೇರ ಆದಾಯ ಬೆಂಬಲ. ಯುರೋಪ್ ಒದಗಿಸುವ ಸಬ್ಸಿಡಿಯಲ್ಲಿ ಶೇ.50ರಷ್ಟನ್ನು ನೇರ ಆದಾಯ ಬೆಂಬಲ ರೂಪದಲ್ಲಿ ನೀಡಲಾಗುತ್ತದೆ. ತನ್ನ ರೈತರಿಗೆ ವಾರ್ಷಿಕ 62,000 ಡಾಲರ್ ಸಬ್ಸಿಡಿಯನ್ನು ಅಮೆರಿಕ ನೀಡುತ್ತದೆ. ಆದ್ದರಿಂದ ಕೃಷಿಯನ್ನು ಸುಸ್ಥಿರವಾಗಿರಿಸುವ ಅಂಶವೆಂದರೆ, ಸಬ್ಸಿಡಿಯೇ.
ಕೃಷಿಯನ್ನು ಉಳಿಸುವ ದಾರಿ ಯಾವುದು?
ನಮ್ಮ ಇತಿಹಾಸದಲ್ಲಿ ಇದೊಂದು ನಿರ್ಣಾಯಕ ಘಟ್ಟ. ಈ ರೈತ ಚಳುವಳಿಯು ನಮ್ಮೆಲ್ಲರನ್ನೂ ಪರಿಸ್ಥಿತಿಯ ಬಗ್ಗೆ ಎಚ್ಚರ ಮೂಡಿಸಿ ಅದನ್ನು ಸರಿಪಡಿಸುವ ಬಗ್ಗೆ ಆಲೋಚಿಸುವಂತೆ ಮಾಡಬೇಕು. ಎಲ್ಲಕ್ಕಿಂತ ಮೊದಲು ಪ್ರತಿಯೊಬ್ಬ ರೈತನಿಗೂ ತನ್ನ ಉತ್ಪನ್ನಗಳಿಗೆ ಒಂದು ಖಾತ್ರಿಯಾದ ಬೆಲೆ ದೊರೆಯಬೇಕು. ಕಾರ್ಮಿಕರಿಗೆ ಕನಿಷ್ಠ ವೇತನ ಕೊಡಲು ಸಾಧ್ಯವಿದ್ದರೆ, ರೈತರಿಗೆ ಕನಿಷ್ಠ ಬೆಂಬಲ ಬೆಲೆ ಕೊಡಲು ಏಕೆ ಸಾಧ್ಯವಿಲ್ಲ? ಹಸಿರು ಕ್ರಾಂತಿಯ ಸಂದರ್ಭದಲ್ಲಿ ನಮ್ಮ ನೀತಿ ನಿರೂಪಕರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವ ಒಂದು ಗಮನಾರ್ಹ ಕೆಲಸ ಮಾಡಿದ್ದರು. ಕಾಲದ ಪರೀಕ್ಷೆಯಲ್ಲಿ ಜಯಶಾಲಿಯಾಗಿರುವ ಕನಿಷ್ಠ ಬೆಂಬಲ ಬೆಲೆ ಪದ್ಧತಿಯನ್ನು ಕಾನೂನುಬದ್ಧಗೊಳಿಸಬೇಕು.
‘ದಿ ವೈರ್’ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿರುವ ಒಂದು ವಿಶ್ಲೇಷಣೆಯ ಪ್ರಕಾರ, 2020ರ ಅಕ್ಟೋಬರ್ ಮತ್ತು ನವೆಂಬರ್ ಈ ಎರಡು ತಿಂಗಳುಗಳಲ್ಲಿ, ಕೇವಲ ಗೋಧಿ ಮತ್ತು ಭತ್ತಕ್ಕೆ ಮಾತ್ರ ಅಲ್ಲ, ರೈತರು ತಮ್ಮ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಪಡೆದಿದ್ದರೆ, ಕೇವಲ ಈ ಎರಡು ತಿಂಗಳಲ್ಲಿ ತಮ್ಮ ಫಸಲಿನ ಮಾರಾಟದ ಬಾಬ್ತು 1900 ಕೋಟಿ ರೂ. ಲಾಭ ಪಡೆಯುತ್ತಿದ್ದರು. ದೇಶದ ಅರ್ಧ ಭಾಗದಷ್ಟು ರೈತರ ಸರಾಸರಿ ವಾರ್ಷಿಕ ಆದಾಯವು ಕೇವಲ 20 ಸಾವಿರ ರೂ ಎಂಬುದನ್ನು ಪರಿಗಣಿಸಿದಾಗ, ಇದೆಷ್ಟು ದೊಡ್ಡ ಮೊತ್ತದ ಹಣ ಮತ್ತು ರೈತರಿಗೆ ಅದರಿಂದ ಸಿಗುವ ಲಾಭವೆಷ್ಟು ಎಂಬುದನ್ನು ಊಹಿಸಿಕೊಳ್ಳಬಹುದು.
ರೈತರು ಬೆಳೆದ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಕೊಡುತ್ತೇವೆ ಎಂದು ಕಾರ್ಪೊರೇಟ್‌ಗಳು ಹೇಳುತ್ತವೆ. ಆದರೆ, ಅದು ಯಾವ ಬೆಲೆಗಿಂತ ಎಷ್ಟು ಹೆಚ್ಚು? ಯಾರಿಗೂ ಗೊತ್ತಿಲ್ಲ. ಬೆಲೆಗಳ ಬಗ್ಗೆ ನಮ್ಮ ಬಳಿ ಇರುವ ಏಕೈಕ ಮಾನದಂಡವೆಂದರೆ ಎಂಎಸ್‌ಪಿ ಮಾತ್ರ. ಕಾರ್ಪೊರೇಟ್‌ಗಳು, ನೀತಿ-ನಿರೂಪಕರು ಮತ್ತು ಅರ್ಥಶಾಸ್ತ್ರಜ್ಞರು “ಹೆಚ್ಚಿನ ಬೆಲೆ” ಬಗ್ಗೆ ಒಮ್ಮತಾಭಿಪ್ರಾಯವನ್ನು ಹೊಂದಿದ್ದರೆ, ಎಂಎಸ್‌ಪಿಯನ್ನು ನಿಗದಿಪಡಿಸುವಲ್ಲಿ ಮತ್ತು ಅದನ್ನು ಒಂದು ಕಾನೂನು ಬದ್ಧ ಹಕ್ಕಾಗಿಸುವಲ್ಲಿರುವ ಸಮಸ್ಯೆ ಏನು? ಕೇಂದ್ರವು ಎಂಎಸ್‌ಪಿಯನ್ನು ಒಂದು ಕಾನೂನಾಗಿ ಮಾಡಿದರೆ, ಸುಧಾರಣೆಗಳು ಕುಸಿದು ಬೀಳುತ್ತವೆ ಎಂದೂ ಹೇಳುತ್ತವೆ ಇದೇ ಕಾರ್ಪೊರೇಟ್‌ಗಳು! ನಮ್ಮಲ್ಲಿ ಸುಮಾರು 7000 ಎ.ಪಿ.ಎಂ.ಸಿ.ಗಳಿವೆ. ಎಂಎಸ್‌ಪಿ ವಿತರಣೆಯಲ್ಲಿರುವ ಕೆಲವು ಸಮಸ್ಯೆಗಳನ್ನು ನಿಭಾಯಿಸಲು ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಒಂದು ಮಂಡಿ ಇರಬೇಕಾಗುತ್ತದೆ. ಈ ಲೆಕ್ಕಾಚಾರದಂತೆ ನಮಗೆ 42,000 ಮಂಡಿಗಳು ಬೇಕಾಗುತ್ತವೆ. ಪ್ರತಿ ಆಹಾರ ಡಾಲರ್ ನಲ್ಲಿ ರೈತನ ಆದಾಯದ ಪಾಲು ಕೇವಲ 8 ಸೆಂಟ್ ಎಂದು ಅಮೇರಿಕಾದ ಕೃಷಿ ಇಲಾಖೆ ಹೇಳುತ್ತದೆ. ಅಂದರೆ, ಗ್ರಾಹಕರು ಆಹಾರ ಖರೀದಿಸುವ ಪ್ರತಿ ಡಾಲರ್ ಖರ್ಚಿನಲ್ಲಿ ರೈತನ ಆದಾಯದ ಪಾಲು ಕೇವಲ 8% ಮಾತ್ರ. ಈ ಅಂಶವು, ಅಮೆರಿಕದ ರೈತರು ಏಕೆ ಬಿಕ್ಕಟ್ಟಿನಲ್ಲಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಅಮೇರಿಕಾದ ಕೃಷಿಗೆ ಸಂಬಂಧಿಸಿದ ಈ ಅಂಶವನ್ನು ಭಾರತದ ಅಮುಲ್ ಸಹಕಾರಿ ಡೈರಿಯೊಂದಿಗೆ ಹೋಲಿಸಿ ನೋಡಿ. ನೀವು 100 ರೂ.ಗಳ ಮೌಲ್ಯದ ಅಮುಲ್ ಹಾಲು ಖರೀದಿಸಿದರೆ, ಅದರಲ್ಲಿ 70 ರೂ.ಗಳು ರೈತರಿಗೆ ಹೋಗುತ್ತದೆ ಎಂದು ಅಮುಲ್‌ನ ವ್ಯವಸ್ಥಾಪಕ ನಿರ್ದೇಶಕರು ಹೇಳಿರುವುದು ದಾಖಲೆಯಲ್ಲಿದೆ. ರೈತರ ಪಾಲು ಶೇ.70! ಅಂದರೆ, ಲಾಭದಲ್ಲಿ ಹೆಚ್ಚಿನ ಪಾಲನ್ನು ರೈತರು ಪಡೆಯುತ್ತಾರೆ.
ಅಮುಲ್‌ನಿಂದ ಕಲಿತ ಈ ಪಾಠದ ಮಾದರಿಯನ್ನು ತರಕಾರಿ, ಬೇಳೆಕಾಳುಗಳು, ಹಣ್ಣುಗಳು ಇತ್ಯಾದಿಗಳಿಗೆ ಅಳವಡಿಸಿಕೊಳ್ಳಲು ನಾವೇಕೆ ನಾಚಿಕೆಪಟ್ಟುಕೊಳ್ಳಬೇಕು? ಹಿತ್ತಲ ಗಿಡ ಮದ್ದಲ್ಲ ಎನ್ನುವ ರೀತಿಯಲ್ಲಿ, ಕೃಷಿಯನ್ನು ಕಾರ್ಪೊರೇಟ್‌ಗಳ ಶೋಷಣೆಗೆ ತೆರೆದಿಡುವ ಬದಲು, ದೇಶದಲ್ಲಿ ಸಹಕಾರ ಜಾಲವನ್ನು ವಿಸ್ತರಿಸಲಿ. ಕೊನೆಯದಾಗಿ ಹೇಳಬೇಕಾದ ಒಂದು ವಿಷಯವೆಂದರೆ, ನಮ್ಮ ಆರ್ಥಿಕ ನೀತಿಯು ಕೃಷಿಯನ್ನು ಸಮಾಜದ ಮೇಲೆ ಹೇರಿದ ಒಂದು ಹೊರೆಯಾಗಿ ನೋಡುತ್ತದೆ. ಕೃಷಿಯಿಂದ ಜನರನ್ನು ನಗರಗಳಿಗೆ ಸ್ಥಳಾಂತರಿಸದ ಹೊರತು ಆರ್ಥಿಕ ಪ್ರಗತಿ ಸಾಧ್ಯವಿಲ್ಲ ಎಂಬ ನೀತಿ ಬದಲಾಗಬೇಕು. ಕೇವಲ ಎರಡು ದಿನಗಳಲ್ಲಿ 80 ದಶಲಕ್ಷ ಜನರು ಅಂತರ ರಾಜ್ಯ ಮತ್ತು ಅಂತರ್-ರಾಜ್ಯಗಳೆರಡರಲ್ಲೂ ವಾಪಾಸು-ವಲಸೆ ಹೋದುದನ್ನು ನಾವು ಕಂಡೆವು. ಈ ವಿದ್ಯಮಾನವು ನಗರ ಪ್ರದೇಶದಿಂದ ಜನರನ್ನು ಹೊರದೂಡಿದ ಆರ್ಥಿಕ ಮಾದರಿಯು ದೋಷಪೂರಿತವಾಗಿದೆ ಎಂಬುದನ್ನು ನಮಗೆ ತಿಳಿಸುತ್ತದೆ. ಈ ಮಾದರಿಯನ್ನು ಬದಲಾಯಿಸುವ ಮತ್ತು ಕೃಷಿಯನ್ನು ಆರ್ಥಿಕ ಬೆಳವಣಿಗೆಯ ಒಂದು ಶಕ್ತಿ ಕೇಂದ್ರವನ್ನಾಗಿ ಮಾಡುವ ಸಾಧ್ಯತೆಯನ್ನು ಅನ್ವೇಷಿಸಬೇಕಾಗಿದೆ.