2,760 ಎಕರೆ ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ರೈತರು ಪ್ರತಿಭಟನೆ

ದೊಡ್ಡಬಳ್ಳಾಪುರ: ಅಕ್ಟೋಬರ್‌ 28ರಂದು ಕರ್ನಾಟಕ ರಾಜ್ಯ ಗೃಹ ನಿರ್ಮಾಣ ಮಂಡಳಿಯಿಂದ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯಲ್ಲಿ 2,760 ಎಕರೆ ಫಲವತ್ತಾದ ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ರೈತರು ತಾಲ್ಲೂಕು ಕಚೇರಿ ಮುಂದೆ ಬೃಹತ್‌ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಕೃಷಿ

ಭೂಸ್ವಾಧೀನಕ್ಕೆ ಒಳಪಡುತ್ತಿರುವ ಕಸಾಘಟ್ಟ, ಐನಹಳ್ಳಿ, ದೊಡ್ಡಹೆಜ್ಜಾಜಿ, ವೆಂಕಟೇಶಪುರ, ಕಾರೇಪುರ ಗ್ರಾಮಗಳ ರೈತರು ಸೇರಿದಂತೆ ಹತ್ತಾರು ಹಳ್ಳಿಗಳಿಂದ ರೈತರು ಟ್ರ್ಯಾಕ್ಟರ್‌ಗಳಲ್ಲಿ ನಗರದ ಬಸ್‌ ನಿಲ್ದಾಣದಿಂದ ತಾಲ್ಲೂಕು ಕಚೇರಿವರೆಗೆ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು. ಕೃಷಿ

ಸಭೆಯಲ್ಲಿ ಮಾತನಾಡಿದ ಶಾಸಕ ಧೀರಜ್ ಮುನಿರಾಜು, ತಾಲ್ಲೂಕಿನ ರೈತರ ಹಿತಕ್ಕಾಗಿ ಯಾವುದೇ ಹೋರಾಟಕ್ಕಾದರೂ ನಿಲ್ಲುತ್ತೇನೆ. ದೊಡ್ಡಬೆಳವಂಗಲ ಭಾಗದ ರೈತರು ಭೂಸ್ವಾಧೀನದ ನೋಟಿಸ್ ಬರುವ ಮುನ್ನ ಎಚ್ಚೆತ್ತುಕೊಂಡು ಪ್ರತಿಭಟನೆ ಮಾಡಲು ಮುಂದಾಗಿರುವುದು ಸಮರ್ಪಕವಾಗಿದೆ. ಈಗಾಗಲೇ ಭೂಸ್ವಾಧೀನ ಮಾಡದಂತೆ ವಸತಿ ಸಚಿವರಿಗೆ ಮನವಿ ಮಾಡಲಾಗಿದೆ. ಈ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಆದರೂ ಭೂಸ್ವಾಧೀನದ ವಿರುದ್ಧ ಪ್ರಾರಂಭವಾಗಿರುವ ಹೋರಾಟ ನಿಲ್ಲಬಾರದು ಎಂದರು.

ಇದನ್ನೂ ಓದಿ: ಕಾನೂನು ಧಿಕ್ಕರಿಸಿದ ಸ್ಕೂಲ್ ವಿರುದ್ಧ ಕ್ರಮಕ್ಕೆ “ಲಂಚ ಬೇಕೆ ಲಂಚ?” ಎಂಬ ವಿನೂತನ ಪ್ರತಿಭಟನೆ

ತಾಲ್ಲೂಕಿನಲ್ಲಿ ರಿಂಗ್ ರೈಲು ಯೋಜನೆಯನ್ನು ಆರಂಭಿಸಲು ಭೂಮಿ ಗುರುತಿಸಲಾಗಿದೆ. ಇದರ ವಿರುದ್ಧವು ಪ್ರತಿಭಟನೆಗೂ ರೈತರ ಪರವಾಗಿ ನಿಲ್ಲುತ್ತೇನೆ. ಈಗಾಗಲೇ ಸಬರ್‌ಬನ್ ರೈಲು ರಾಜನುಕುಂಟೆವರೆಗೂ ಬಂದಿದೆ. ಇದನ್ನೇ ದೊಡ್ಡಬಳ್ಳಾಪುರ ನಗರದವರೆಗೂ ವಿಸ್ತರಿಸಬೇಕು. ರೈತರ ಒಪ್ಪಿಗೆ ಇಲ್ಲದೆ ಭೂಮಿ ವಶಪಡಿಸಿಕೊಳ್ಳುವ ಕೆಟ್ಟ ನೀತಿ ರದ್ದಾಗಬೇಕು ಎಂದರು.

ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ತಾಲ್ಲೂಕಿನಲ್ಲಿ ಹತ್ತಾರು ವಿವಿಧ ಕಾರಣಗಳಿಗಾಗಿ ಭೂಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಚನ್ನರಾಯಪಟ್ಟಣ ಹೋರಾಟದಂತೆ ತಾಲ್ಲೂಕಿನಲ್ಲೂ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.

ಬೆಂಗಳೂರು ಸಮೀಪ ಭೂಮಿ ಫಲವತ್ತಾಗಿದ್ದು ನಗರಕ್ಕೆ ಹಣ್ಣು, ತರಕಾರಿಗಳನ್ನು ರೈತರು ಪೂರೈಕೆ ಮಾಡುತ್ತಿದ್ದಾರೆ. ಇಂತಹ ಭೂಮಿಯನ್ನು ವಶಪಡಿಸಿಕೊಳ್ಳಬೇಡಿ ಎಂದು ವಿಧಾನಸಭೆಯಲ್ಲೂ ಈ ಹಿಂದೆ ಮನವಿ ಮಾಡಿದ್ದೆ. ರೈತರ ಜತೆಗೆ ಹಗಲು ರಾತ್ರಿ ಎನ್ನದೇ ಹೋರಾಟಕ್ಕೆ ನಿಲ್ಲುತ್ತೇನೆ ಎಂದರು.

ಪ್ರತಿಭಟನೆಯಲ್ಲಿ ಮಹಿಳಾ ಮುಖಂಡರಾದ ಪ್ರಭಾಬೆಳವಂಗಲ, ಕೆ.ಸುಲೋಚನಮ್ಮ, ನಳಿನಾಕ್ಷಿ, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಗೌರವ ಅಧ್ಯಕ್ಷ ಸಿ.ರಾಮಕೃಷ್ಣಯ್ಯ, ಅಧ್ಯಕ್ಷ ಉಗ್ರಯ್ಯ, ಕಾರ್ಯಾಧ್ಯಕ್ಷ ಸಿ.ಎಚ್.ರಾಮಕೃಷ್ಣಯ್ಯ, ಕೆ.ವಿ.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಸತೀಶ್, ಖಜಾಂಚಿ ರಾಮೇಗೌಡ, ಉಪಾಧ್ಯಕ್ಷ ವಾಸದೇವಮೂರ್ತಿ, ಗಂಗಚನ್ನಯ್ಯ, ಬಸವರಾಜು, ರಮೇಶ್, ಕಾರ್ಯದರ್ಶಿ ಅಂಜನಮೂರ್ತಿ, ಚಿಕ್ಕೆಗೌಡ, ಧರ್ಮೇಂದ್ರ, ಕಾರ್ಮಿಕ ಮುಖಂಡ ವೆಂಕಟೇಶ್, ನರಸಿಂಹಮೂರ್ತಿ ಇದ್ದರು.

ಇದನ್ನೂ ನೋಡಿ: ದ್ವೇಷ ಭಾಷಣ| ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದೂರು ದಾಖಲು Janashakthi Media

Donate Janashakthi Media

Leave a Reply

Your email address will not be published. Required fields are marked *