ನವದೆಹಲಿ: ಕೇಂದ್ರದ ಎನ್ಡಿಎ ಸರಕಾರವು ಸಂಸತ್ತಿನ ಸದನದಲ್ಲಿ ರೈತರ ಬೇಡಿಕೆಗಳನ್ನು ಈಡೇರಿಸುವವರೆಗೆ ಕಲಾಪದಲ್ಲಿ ಬೇರೆ ಯಾವ ವಿಷಯಗಳ ಕುರಿತು ಚರ್ಚೆ ನಡೆಯದಂತೆ ಮತ್ತು ಕಲಾಪ ಮುಂದುವರಿಯದಂತೆ ಸಂಸತ್ತಿನ ಮುಂಗಾರು ಅಧಿವೇಶನದ ಎಲ್ಲಾ ದಿನ ಸಂಸತ್ತಿನಲ್ಲಿ ಹಾಜರಿದ್ದು ರೈತರ ಪ್ರಮುಖ ಸಮಸ್ಯೆಗಳ ಪರಿಹಾರದ ಬಗ್ಗೆ ಸಹಾಯ ಮಾಡಬೇಕೆಂದು ಪ್ರತಿಭಟನಾ ನಿರತ ರೈತರು ವಿರೋಧ ಪಕ್ಷದ ಸಂಸದರಿಗೆ ಮತದಾರರ ವಿಪ್ ಜಾರಿ ಮಾಡಿದೆ.
ಅಧಿವೇಶನದ ಸಂದರ್ಭದಲ್ಲಿ ಸಂಸದರು ಸದನದಿಂದ ಕಲಾಪ ಬಹಿಷ್ಕರಿಸಿ ಹೊರನಡೆಯದಂತೆ ಮತ್ತು ಒಂದು ವೇಳೆ ಸದನದಿಂದ ಅಮಾನತುಗೊಳಿಸಿದರೆ ಮತ್ತೆ ಹಿಂತಿರುಗಿ ಕಲಾಪದ ಬೇರೆ ಚರ್ಚೆಗಳನ್ನು ಮುಂದುವರಿಸದಂತೆ ಸರಕಾರದ ಮೇಲೆ ಒತ್ತಡ ತರಬೇಕೆಂದು ವಿಪ್ ಮೂಲಕ ದೆಹಲಿ ಗಡಿಭಾಗದಲ್ಲಿ ಪ್ರತಿಭಟನಾ ನಿರತ ರೈತರು ಸೂಚನೆ ನೀಡಿದ್ದಾರೆ.
ಇದನ್ನು ಓದಿ: ದಿಲ್ಲಿ ಗಡಿಗಳಲ್ಲಿ ನೂರು ದಿನಗಳು – ನಡೆದಿದೆ ಒಂದು ಅನನ್ಯ ಹೋರಾಟ
ಕೇಂದ್ರ ಸರಕಾರವು ಕೃಷಿಗೆ ಸಂಬಂಧಿಸಿದಂತೆ ಮೂರು ತಿದ್ದುಪಡಿಗಳನ್ನು ಮಾಡುತ್ತಿದ್ದು ಇದನ್ನು ವಿರೋಧಿಸಿ ದೇಶದಲ್ಲಿ ಹಲವು ಕಡೆಗಳಲ್ಲಿ ತೀವ್ರ ರೀತಿಯಲ್ಲಿ ಪ್ರತಿಭಟನೆ ಸತತವಾಗಿ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಪಕ್ಷಗಳು ನೀಡುವ ವಿಪ್ ಗಿಂತಲೂ ಮತದಾರರ ವಿಪ್ ಹೆಚ್ಚು ಪರಿಣಾಮಕಾರಿ ಎಂದು ಹೇಳಿದ್ದಾರೆ.
ಈ ಮತದಾರರ ವಿಪ್ ಅನ್ನು ಉಲ್ಲಂಘಿಸಿದರೆ ದೇಶದ ರೈತರು ಹೇಗೆ ನೀವು ಆಡಳಿತಾರೂಢ ಪಕ್ಷದವರನ್ನು ಸಾರ್ವಜನಿಕ ವೇದಿಕೆಗಳಲ್ಲಿ ಟೀಕಿಸುತ್ತೀರಿ ಅದೇ ರೀತಿ ನಾವು ಕೂಡ ಪ್ರತಿಯೊಂದು ಸಾರ್ವಜನಿಕ ವೇದಿಕೆಗಳಲ್ಲಿ ನಿಮ್ಮನ್ನು ಟೀಕಿಸಲಾಗುವುದು ಮತ್ತು ವಿರೋಧಿಸಬೇಕಾಗಿ ಬರುತ್ತದೆ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.
ಜುಲೈ 22 ರಿಂದ ಸಂಸತ್ತಿನ ಹೊರಗೆ ರೈತರ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ಈ ಪತ್ರವನ್ನು ಇಂದು ಸಂಸದರಿಗೆ ಹಸ್ತಾಂತರಿಸುವ ಬಗ್ಗೆ ಪೂರ್ವ ಸಿದ್ಧತೆಗಳನ್ನು ಸಂಯುಕ್ತ ಕಿಸಾನ್ ಮೋರ್ಚಾ ಕೈಗೊಂಡಿದೆ.
ಪ್ರತಿಭಟನಾ ನಿರತ ರೈತರು ಸಂಸದರಿಗೆ ತಮ್ಮ ಸಮಸ್ಯೆಗಳನ್ನು ಎತ್ತಿಹಿಡಿಯಲು ಒತ್ತಾಯಿಸುತ್ತಿದ್ದು, ಸೋಮವಾರದಿಂದ ಪ್ರಾರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದ ಎಲ್ಲಾ ದಿನಗಳವರೆಗೆ ನೀವು ಸಂಸತ್ತಿನಲ್ಲಿ ಹಾಜರಾಗಬೇಕು; ನೀವು ಮತ್ತು ನಿಮ್ಮ ಪಕ್ಷವು ಕಡ್ಡಾಯವಾಗಿ, ವಿರಾಮವಿಲ್ಲದೆ, ರೈತರ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಎತ್ತಿಹಿಡಿದು ರೈತರ ಪ್ರತಿಭಟನೆಯನ್ನು ಬೆಂಬಲಿಸಬೇಕು ಎಂದು ವಿಪ್ ನಲ್ಲಿ ಸೂಚಿಸಿದೆ.
ಇದನ್ನು ಓದಿ: ಯಾಮಾರಿಸುವ ರಾಜಕಾರಣ ಮತ್ತು ಕಾರ್ಪೋರೇಟ್ ಕೃಷಿ ಕಾಯ್ದೆಗಳು
ಆಗಸ್ಟ್ 13ರವರೆಗೆ ಸಂಸತ್ತಿನ ಮುಂಗಾರು ಅಧಿವೇಶನ ಸಾಗಲಿದ್ದು ಅಲ್ಲಿಯವರೆಗೆ ಪ್ರತಿದಿನ ಸುಮಾರು 200 ಮಂದಿ ರೈತರು ಸಂಸತ್ತಿನ ಹೊರಗೆ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಅಲ್ಲದೆ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸುವವರಿಗೆ ಐ-ಕಾರ್ಡನ್ನು ನೀಡಲು ಸಹ ಸಂಘಟನೆ ಮುಂದಾಗಿದೆ.
ಪಂಜಾಬ್ ಮತ್ತು ಹರಿಯಾಣಗಳಲ್ಲದೆ, ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ, ಪಶ್ಚಿಮ ಬಂಗಾಳ, ಅಸ್ಸಾಂ, ತ್ರಿಪುರ, ಮಣಿಪುರ, ಛತ್ತೀಸ್ ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಬಿಹಾರ, ಜಾರ್ಖಂಡ್ ಪ್ರತಿಭಟನೆಯಲ್ಲಿ ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ರೈತರು ಸಹ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.