ನವದೆಹಲಿ: ರೈತರಿಗೆ ಪ್ರತಿಭಟನೆ ಮಾಡುವ ಹಕ್ಕು ಇದ್ದರೂ, ಅವರು ರಸ್ತೆಗಳನ್ನು ಅನಿರ್ದಿಷ್ಟ ಕಾಲ ನಿರ್ಬಂಧಿಸುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಸಿ.ಟಿ.ರವಿಕುಮಾರ್ ಅವರ ನೇತೃತ್ವದ ನ್ಯಾಯಪೀಠ ಹೇಳಿದೆ. ಇದೇ ವೇಳೆ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ಕೋರ್ಟ್ ಸೂಚನೆ ನೀಡಿದೆ.
ಕಾನೂನಿನ ಸವಾಲು ಇದ್ದಾಗಲೂ ರೈತರ ಪ್ರತಿಭಟಿಸುವ ಹಕ್ಕಿಗೆ ನ್ಯಾಯಾಲಯ ವಿರುದ್ಧವಾಗಿಲ್ಲ. ಆದರೆ, ಅಂತಿಮವಾಗಿ ಕೆಲವು ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ ಎಂದು ನ್ಯಾಯಮೂರ್ತಿ ನ್ಯಾಯ ಪೀಠವು ಅಭಿಪ್ರಾಯಪಟ್ಟಿದೆ.
ಇದನ್ನು ಓದಿ: ಕೃಷಿ ಕಾಯಿದೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿರುವಾಗ ಧರಣಿ ಮುಂದುವರಿಕೆ ಏಕೆ? ಸುಪ್ರೀಂ ಪ್ರಶ್ನೆ
ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತರಲು ಹೊರಟಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ರೈತ ಸಂಘಟನೆ ನೇತೃತ್ವದಲ್ಲಿ ಕಳೆದೊಂದು ವರ್ಷದಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ರೈಲು ಮಾರ್ಗ, ರಸ್ತೆ ಮಾರ್ಗಗಳನ್ನು ನಿರ್ಬಂಧಿಸಿ ಹಲವು ಬಾರಿ ಧರಣಿ ನಡೆಸಿದ್ದಾರೆ.
ಉತ್ತರ ಪ್ರದೇಶದ ನೋಯ್ಡಾ ನಿವಾಸಿ ಮೊನಿಕ್ಕಾ ಅಗರ್‌ವಾಲ್ ಪ್ರತಿಭಟನಾ ನಿರತ ರೈತರ ರಸ್ತೆ ತಡೆಗೆ ಸಂಬಂಧಿಸಿದಂತೆ ಪರಿಹಾರ ಕೋರಿ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ಆಲಿಸಿತು. ಪ್ರಕರಣದಲ್ಲಿ ಕಕ್ಷಿದಾರರಾಗಿರುವ ರೈತ ಸಂಘಗಳಿಗೆ ಈ ಕುರಿತು ಮೂರು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಹೇಳಿದ್ದು ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 7ಕ್ಕೆ ಮುಂದೂಡಿದೆ.
ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಈ ಬಗ್ಗೆ ಪ್ರತಿಕ್ರಿಯಿಸಿದ್ದು, ರಸ್ತೆ ನಿರ್ವಹಣೆಯನ್ನು ಪೊಲೀಸರು ಉತ್ತಮವಾಗಿ ಮಾಡಬಹುದು. ಅವರಿಗೆ ನಿರ್ವಹಿಸಲು ಸಾಧ್ಯವಾಗದಿದ್ದರೆ ರೈತರಿಗೆ ದೆಹಲಿಯ ರಾಮ್ ಲೀಲಾ ಮೈದಾನ ಅಥವಾ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಮಾಡಲು ಅವಕಾಶ ನೀಡಬೇಕು ಎಂದು ತಿಳಿಸಿತು.
ಇದನ್ನು ಓದಿ: ಕೃಷಿ ನೀತಿ ವಿರುದ್ಧ ಸಂಸತ್ತಿನ ಮುಂದೆ ಪ್ರತಿಭಟನೆಗೆ ರೈತರ ನಿರ್ಧಾರ
ಕೃಷಿ ಕಾಯ್ದೆಗಳ ರದ್ದತಿ ಬಗ್ಗೆ ಪ್ರತಿಭಟನಾ ನಿರತ ರೈತರು ಕೇಂದ್ರವು ಜಾರಿಗೊಳಿಸಲು ಹೊರಟಿರುವ ಮೂರು ಕೃಷಿ ಕಾಯ್ದೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿಲ್ಲ, ಬದಲಾಗಿ ಕಾಯ್ದೆ ಜಾರಿಗಳ ಬಗ್ಗೆ ಸಮಯವನ್ನು ಮಾತ್ರ ಮುಂದೂಡಿದೆ, ಅಲ್ಲದೆ ಇದುವರೆಗೆ ಸರ್ಕಾರದೊಂದಿಗೆ ನಡೆದ ಮಾತುಕತೆಗಳಲ್ಲಿ ಸರ್ಕಾರವು ಕಾಯ್ದೆಯಲ್ಲಿನ ಅಂಶಗಳ ಬಗ್ಗೆ ಮಾತ್ರ ತಿದ್ದುಪಡಿ ಬಗ್ಗೆ ಮಾತ್ರ ಚರ್ಚಿಸುತ್ತದೆ. ಆದರೆ ನಮ್ಮ ಒತ್ತಾಯವಿರುವುದು ರೈತ ವಿರೋಧಿಯಾದ ಕಾಯ್ದೆಗಳನ್ನು ರದ್ದು ಮಾಡಬೇಕೆಂದುದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮೂರು ಕೃಷಿ ಕಾಯ್ದೆಗಳ ಜಾರಿಯಿಂದ ಹೆಚ್ಚಿನ ದುಷ್ಪರಿಣಾಮ ಉಂಟಾಗುವುದು ರೈತರಿಗೆ, ಇದರೊಂದಿಗೆ ದೇಶದ ಸಮಸ್ತ ಜನತೆಯ ಬದುಕಿಗೆ ಇದು ಮಾರಕವಾಗಿದೆ ಎಂದು ಎಚ್ಚರಿಸಿದ್ದಾರೆ. ಹಾಗಾಗಿಯೇ ನಾವು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಸಮರಶೀಲವಾದ ಹೋರಾಟವನ್ನು ಹಮ್ಮಿಕೊಂಡಿದ್ದೇವೆ ಎಂದು ಪುನರುಚ್ಚರಿಸಿದ್ದಾರೆ.
ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ(ಬಡ್ತಿ ಮತ್ತು ಸೌಲಭ್ಯ) ಕಾಯ್ದೆ 2020, ಅಗತ್ಯ ಸರಕುಗಳ(ತಿದ್ದುಪಡಿ) ಕಾಯ್ದೆ 2020 ಮತ್ತು ರೈತರ(ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಒಪ್ಪಂದ ಸೇವಾ ಕಾಯ್ದೆ 2020ಗಳನ್ನು ವಿರೋಧಿ ದೆಹಲಿಯ ಗಡಿಯಲ್ಲಿ ಹಲವಾರು ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ.