ನವದೆಹಲಿ: ಅಧಿಕಾರದಲ್ಲಿ ಇರುವವರು ದೇಶದ ಸಮಸ್ತ ಜನರ ಪರಿವಾಗಿ ಇದ್ದರೆ, ಅದರಲ್ಲೂ ದುಡಿಯುವ ಕೈಯಲ್ಲಿ ಅಧಿಕಾರವಿದ್ದರೆ ಸಮೃದ್ಧಿಯನ್ನು ಸಾಧಿಸಬಹುದು. ಅದೇ ಆಳುವ ವರ್ಗ ಕೆಲವು ಶ್ರೀಮಂತರ ವರ್ಗದ ಪರವಾಗಿ ಅಧಿಕಾರವನ್ನು ನಡೆಸುತ್ತಿದ್ದರೆ, ಆಳುವವರು ಭಾರೀ ಪ್ರತಿರೋಧವನ್ನು ಎದುರಿಸುತ್ತಾರೆ. ಅದಕ್ಕೆ ಸಾಕ್ಷಿ ಎಂಬಂತೆ ನವೆಂಬರ್ 26 ರಿಂದ ಪ್ರತಿದಿನ ಪ್ರತಿಭಟನೆಯನ್ನು ನಡೆಸುತ್ತಿರುವ ರೈತ ಹೋರಾಟವೇ ಸಾಕ್ಷಿ.
ಕೇಂದ್ರ ಬಿಜೆಪಿ ಸರಕಾರ ಜಾರಿಗೊಳಿಸಲು ಹೊರಟಿರುವ ರೈತ ವಿರೋಧಿಯಾದ, ಇಡೀ ದೇಶದ ಕೃಷಿ ಪದ್ದತಿಯೆ ಮಾರಕವಾಗಿರುವ ಮೂರು ಕೃಷಿ ಕಾನೂನುಗಳನ್ನು ಕೂಡಲೇ ರದ್ದುಪಡಿಸಬೇಕೆಂದು ಆಗ್ರಹಿಸಿ ಆರಂಭವಾಗಿರುವ ರೈತರ ಹೋರಾಟಕ ಜೂನ್ 26ಕ್ಕೆ ಏಳು ತಿಂಗಳು.
ಇದನ್ನು ಓದಿ: ಮತ್ತೊಮ್ಮೆ ರೈತರಿಗೆ ವಿಶ್ವಾಸಘಾತ-ಏರಿದ ವೆಚ್ಚಗಳನ್ನೂ ಭರಿಸದ ಎಂ.ಎಸ್.ಪಿ.: ಎ.ಐ.ಕೆ.ಎಸ್. ಖಂಡನೆ
ಅದೇ ದಿನ, ಅಂದರೆ, 46 ವರ್ಷಗಳ ಹಿಂದೆ 1975ರ ಜೂನ್ 26ರ ಬೆಳಿಗ್ಗೆ 7 ಗಂಟೆ ಸರಿಯಾಗಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಸರಕಾರ ದೇಶಕ್ಕೆ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದ ದಿನವಾಗಿದೆ.
ದೇಶದ ವಿವಿದೆಡೆಯಲ್ಲಿ ಕಳೆದ ಹಲವು ತಿಂಗಳುಗಳಿಂದ ಹಲವು ಮಾದರಿಯಲ್ಲಿ ನಿರಂತರವಾಗಿ ಹೋರಾಟವನ್ನು ಕೈಗೊಳ್ಳುತ್ತಿರುವ ರೈತ ಸಂಘಟನೆಗಳು ಮತ್ತೆ ಚಳುವಳಿಯನ್ನು ಮುಂದುವರೆಸಿದೆ. ದೆಹಲಿಯ ಹೋರಾಟದಲ್ಲಿ ಭಾಗವಹಿಸಿರುವ ರೈತರ ಹೋರಾಟದ ಸ್ಥಳಗಳಂತೂ ಖಾಲಿಯಾಗಿಲ್ಲ. ಕೇಂದ್ರ ಸರಕಾರ ರೈತರ ಬೇಡಿಕೆಯನ್ನು ಈಡೇರಿಸಬೇಕೆಂಬುದೇ ಅವರ ಪ್ರಮುಖ ಅಸ್ತ್ರವಾಗಿದೆ.
ದೇಶದ ವಿವಿಧ ರಾಜ್ಯಗಳು, ಅಖಿಲ ಭಾರತ ಮಟ್ಟದಲ್ಲಿ ಜಂಟಿಯಾಗಿ ಸಂಯುಕ್ತ ಕಿಸಾನ್ ಮೋರ್ಚಾ ವೇದಿಕೆ ಅಡಿ ಹೋರಾಟ ಮುಂದುವರೆದಿದೆ. ಈಗಲೂ ಸಹ ದೆಹಲಿ ಹೋರಾಟದಲ್ಲಿ ಸರಿಸುಮಾರು 10,000-15,000 ರೈತರು ಉಳಿದುಕೊಂಡಿದ್ದಾರೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ರೈತರ ಹೋರಾಟದ ದೃಢತೆ ಎಷ್ಟೆಂದರೆ ಎಂತಹ ಸಂದರ್ಭ ಎದುರಾದರೂ ಅದನ್ನು ಎದುರಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಕೋವಿಡ್ ಸಾಂಕ್ರಾಮಿಕ ಸಂಕಷ್ಟವನ್ನು ಎದುರಿಸಿಕೊಂಡು, ಲಾಕ್‌ಡೌನ್ ಸವಾಲು, ಮೈಕೊರೆಯುವ ಚಳಿ, ಬಿರು ಬಿಸಿಲು, ಪೊಲೀಸರ ಒತ್ತಡ ಯಾವುದಕ್ಕು ಜಗ್ಗದ ರೈತರು ಹೋರಾಟ ಮುಂದುವರೆಸಿದ್ದಾರೆ.
ಇದನ್ನು ಓದಿ: ಬಿಜೆಪಿ ನಾಯಕರ ನಿವಾಸದ ಬಳಿ ಕೃಷಿ ಕಾಯ್ದೆ ಪ್ರತಿಗಳನ್ನು ಸುಟ್ಟು ದೇಶವ್ಯಾಪಿ ಹೋರಾಟ ನಡೆಸಿದ ರೈತರು
ಈ ಹೋರಾಟಕ್ಕೆ ಇಂದು 199 ದಿನ (ಜೂನ್ 13, 2021). ಹೋರಾಟವನ್ನು ಮತ್ತಷ್ಟು ಬಲಿಷ್ಠಗೊಳಿಸಲು, ಬೇಡಿಕೆ ಈಡೇರಿಸಲೇ ಬೇಕೆಂದು ಪಣ ತೊಟ್ಟಿರುವ ರೈತರು ನಾಳೆ ಗುರು ಅರ್ಜುನ್ ದೇವ್ ಹುತಾಮತ್ಮ ದಿನದಂದು ವಿಶಿಷ್ಠವಾಗಿ ಆಚರಿಸಲು ನಿರ್ಧರಿಸಿದೆ. ಅದೇ ರೀತಿಯಲ್ಲಿ ಜೂನ್ 24ರಂದು ಕಬೀರ್ ಜಯಂತಿ, ಜೂನ್ 26 ರೈತ ಚಳುವಳಿಗೆ ಏಳು ತಿಂಗಳು ಆಗಲಿವೆ. ಅದೇ ದಿನ ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದ ದಿನವಾದ್ದರಿಂದ ಅಂದು ಇಡೀ ದೇಶದಲ್ಲಿ ವಿನೂತವಾಗಿ ಚಳುವಳಿಯನ್ನು ರೂಪಿಸಲು ಸಂಯುಕ್ತ ಕಿಸಾನ್ ಮೋರ್ಚಾ ಜಂಟಿ ವೇದಿಕೆಯು ನಿರ್ಧರಿಸಿದೆ.
“ಕೃಷಿ ಉಳಿಸಿ- ಪ್ರಜಾಪ್ರಭುತ್ವ ಉಳಿಸಿ” ಎಂಬ ಘೋಷಣೆಯೊಂದಿಗೆ ಎಲ್ಲಾ ರಾಜ್ಯಗಳ ರಾಜಭವನ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಂಡು ಮನವಿ ಸಲ್ಲಿಸಬೇಕೆಂದು ವೇದಿಕೆಯು ಮನವಿ ಮಾಡಿದೆ. ಜೂನ್ 26ರಂದು ರೈತರು ಕಪ್ಪು ಧ್ವಜಗಳನ್ನು ಹಿಡಿದು ಪ್ರತಿಭಟನೆ ನಡೆಸಲಿದ್ದಾರೆ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮನವಿ ಪತ್ರಗಳನ್ನು ಸಲ್ಲಿಸಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ರೈತ ಹೋರಾಟವನ್ನು ಹತ್ತಿಕ್ಕಲು ಹಲವು ತಿಂಗಳುಗಳಿಂದ ಸತತ ಪ್ರಯತ್ನಗಳು ನಡೆಯುತ್ತಿದೆ. ಒಂದು ಸರಕಾರದ ಪ್ರಯತ್ನಗಳು ನಡೆಯುತ್ತಿದ್ದರೆ, ಮತ್ತೊಂದು ಕಡೆಗಳಲ್ಲಿ ರೈತ ಹೋರಾಟದ ಬಗ್ಗೆ ಅಪಪ್ರಚಾರದಲ್ಲಿ ತೊಡಗಿರುವ ಕೆಲವು ಮಂದಿ ಸುಳ್ಳಿ ಪ್ರಚಾರದಲ್ಲಿ ತೊಡಗಿವೆ. ಅವರೊಂದಿಗೆ ದೇಶದ ಪ್ರಿತಿಷ್ಠಿತ ಕೆಲ ಮಾಧ್ಯಮಗಳು ಭಾಗಿಯಾಗಿವೆ. ಈ ಪ್ರಯತ್ನಕ್ಕೆ ಬಿಜೆಪಿ ನಾಯಕರೇ ಸಾಥ್ ನೀಡುತ್ತಿದ್ದಾರೆ.
ಇದನ್ನು ಓದಿ: ಹೊಲದಲ್ಲಿ ಹೂತಿಟ್ಟಿದ್ದ 600 ಕ್ವಿಂಟಲ್ ಅನ್ನಭಾಗ್ಯ ಅಕ್ಕಿ ವಶ
ಟಿಕ್ರಿ ಗಡಿಯಲ್ಲಿ ಸ್ವಯಂಸೇವೆಯಲ್ಲಿ ತೊಡಗಿದ್ದ ಯುವತಿಯನ್ನು ಮಾಧ್ಯಮಗಳು ಅತ್ಯಂತ ಕೆಟ್ಟ ರೀತಿಯಲ್ಲಿ ಬಣ್ಣಿಸಿದ ಘಟನೆಯೂ ಇತ್ತೀಚಿಗೆ ನಡೆದಿತ್ತು. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮ ಸಂಸ್ಥೆಯೊಂದಕ್ಕೆ ನೋಟಿಸ್ ನೀಡಿರುವುದಾಗಿ ತಿಳಿದು ಬಂದಿದೆ. ಮಾಧ್ಯಮಗಳು ಆಕೆಯ ಬಗ್ಗೆ ದೈಹಿಕ ದೌರ್ಜನ್ಯ ಹಾಗೂ ಅತ್ಯಾಚಾರದ ಸಂತ್ರಸ್ಥೆಯೆಂದು ಬೇಕೆಂದಲೇ ಬಣ್ಣಿಸಿದ್ದವು.
ಸಂಯುಕ್ತಾ ಕಿಸಾನ್ ಮೋರ್ಚಾ(ಎಸ್‌ಕೆಎಂ) ಮಹಿಳಾ ಹೋರಾಟಗಾರರ ಹಕ್ಕುಗಳನ್ನು ರಕ್ಷಿಸಲು ಬದ್ಧವಾಗಿದೆ. ಎಲ್ಲಾ ರೀತಿಯಲ್ಲೂ ಮಹಿಳೆಯರ ಹಕ್ಕುಗಳನ್ನು ಮತ್ತು ಅವರ ಸುರಕ್ಷತೆಯನ್ನು ಕಾಪಾಡಲು ಬದ್ಧವೆಂದು ಎಸ್‌ಕೆಎಂ ಒತ್ತಿ ಹೇಳಿದೆ. ಈಗಾಗಲೇ ಹೇಳಿರುವಂತೆ ಸುರಕ್ಷತೆಯ ವಿಚಾರವಾಗಿ ಯಾವ ಉಲ್ಲಂಘನೆಯನ್ನೂ ಎಸ್‌ಕೆಎಂ ಸಹಿಸುವುದಿಲ್ಲ. ಯಾವುದೇ ರೀತಿಯ ತೊಂದರೆಗಳಾದಲ್ಲಿ ಅವುಗಳನ್ನು ಪರಿಹರಿಸಲು ಎಲ್ಲಾ ಗಡಿಗಳಲ್ಲೂ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಚಳವಳಿ ಹತ್ತಿಕ್ಕುವ ನಾಯಕರು ಮತ್ತು ಮಾಧ್ಯಮಗಳಿಗೆ ಹೆದರುವ ಮಾತೇ ಇಲ್ಲ ಎಂದು ರೈತ ಮುಖಂಡರು ಹೇಳಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ “ಟ್ರಾಕ್ಟರ್ ನಿಂದ ಟ್ವಿಟ್ಟರ್”ವರೆಗೆ ಎಲ್ಲಾ ರೀತಿಯ ಕಾನೂನಾತ್ಮಕ ಸಹಕಾರ ಮತ್ತು ಬೆಂಬಲವನ್ನು ಚಳುವಳಿಗಾರರಿಗೆ ಕೊಡುತ್ತದೆ ಎಂದು ಮತ್ತೊಮ್ಮೆ ಹೇಳಿದೆ.
ಲೋಹ ಮತ್ತು ಬಿದಿರಿನ ಸಹಾಯದಿಂದ ತಾತ್ಕಾಲಿಕ ವಾಸದ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅಗತ್ಯವಾದಂತಹ ವಸ್ತುಗಳನ್ನು ಪಂಚಾಬ್‌ನಿಂದಲೇ ತರಿಸಿಕೊಳ್ಳುತ್ತಿದ್ದಾರೆ. ಟ್ರಾಕ್ಟರ್‌ಗಳ ಟ್ರ್ಯಾಲಿಗಳಿಗೂ ಏರ್ ಕೂಲರ್ ಅಥವಾ ಏಸಿಗಳನ್ನು ಹಾಕಿಸಿಕೊಂಡಿದ್ದಾರೆ. ನೀರು ಶುದ್ಧೀಕರಣ ಯಂತ್ರಗಳು, ವಾಟರ್ ಕೂಲರ್, ರೆಫ್ರಿಜರೇಟರ್ ಮುಂತಾದ ಯಂತ್ರಗಳನ್ನು ಅಳವಡಿಸಿಕೊಂಡು ಹೋರಾಟವನ್ನು ಮುಂದುವರೆಸಿದ್ದಾರೆ.