ಶಿಡ್ಲಘಟ್ಟ: ಅಕ್ಟೋಬರ್ 6ರಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಪದಾಧಿಕಾರಿಗಳು “ಕೆರೆಗಳಲ್ಲಿ ತ್ಯಾಜ್ಯವನ್ನು ಸುರಿದು ಮಲಿನ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ರಿಗೆ ಮನವಿ ಮಾಡಿದರು.
ರೈತರಿಂದ ಬಲವಂತವಾಗಿ ಸಾಲ ವಸೂಲಾತಿ ಮಾಡಬಾರದು ಎಂದು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ್ದರೂ, ಜಿಲ್ಲೆಯ ಕೆಲವು ಖಾಸಗಿ ಫೈನಾನ್ಸ್ ಸಂಸ್ಥೆಗಳು, ಸಾಲ ವಸೂಲಾತಿ ನೆಪದಲ್ಲಿ ಮಹಿಳೆಯರಿಗೆ ಕಿರುಕುಳು ನೀಡುತ್ತಿವೆ. ಆರ್‌ಬಿಐನ ಸುತ್ತೋಲೆಗಳನ್ನು ಗಾಳಿಗೆ ತೂರಿ ಬಡವರ ರಕ್ತ ಹೀರುತ್ತಿವೆ. ಅಂಥ ಖಾಸಗಿ ಬ್ಯಾಂಕ್ ಮತ್ತು ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದರು.
ಇದನ್ನೂ ಓದಿ: ರಾಜ್ಯಾದ್ಯಂತ ಗುಡುಗು ಸಹಿತ ಭಾರೀ ಮಳೆ ನಿರೀಕ್ಷೆ: ಕೆಎಸ್‌ಎನ್‌ಡಿಎಂಸಿ
ರೈತರು ಮತ್ತು ಮಹಿಳೆಯರ ಪರವಾಗಿ ಕೆಲಸ ಮಾಡಬೇಕಿರುವ ಕೆಲವು ಪೊಲೀಸರು ಸಹ, ಖಾಸಗಿ ಫೈನಾನ್ಸ್‌ಗಳ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸಾಲಗಾರರು ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ದೂರುದಾರರಿಗೆ ಸೂಕ್ತ ರಕ್ಷಣೆ ಒದಗಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಸಚಿವರಿಗೆ ಕೋರಿಕೊಂಡರು.
ಹಲವು ವರ್ಷಗಳಿಂದ ರೈತರ ಸ್ವಾಧೀನದಲ್ಲಿದ್ದು, ಕೃಷಿ ಮಾಡಿಕೊಂಡು ಮಂಜೂರಾತಿಗಾಗಿ ನಮೂನೆ 50, 51, 53ರ ಅಡಿ ರೈತರು ಅರ್ಜಿ ಸಲ್ಲಿಸಿದ್ದರೂ, ಈವರೆಗೆ ಮಂಜೂರಾತಿ ಮಾಡಿಲ್ಲ. ಹೀಗಾಗಿ, ಕೂಡಲೇ ಅರ್ಹ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡಬೇಕು. ತಾಲ್ಲೂಕಿನಲ್ಲಿ ಬಗರ್ ಹುಕ್ಕುಂ ಸಾಗುವಳಿ ಸಮಿತಿ ರಚನೆಯಾಗದ ಕಾರಣ, ಅಲ್ಲಿನ ತಹಶೀಲ್ದಾರ್ ಅವರಿಗೆ ಮಂಜೂರು ಮಾಡಲು ಅವಕಾಶ ನೀಡಬೇಕು ಎಂದರು.
ಎಚ್.ಎನ್. ವ್ಯಾಲಿ ಯೋಜನೆಯ ನೀರು ಶಿಡ್ಲಘಟ್ಟದ ಕೆರೆಗಳಿಗೆ ಹರಿಸುತ್ತಿಲ್ಲ. ಕೆರೆಗಳು ಒಣಗುತ್ತಿವೆ. ಆದ್ದರಿಂದ ಸರ್ಕಾರದ ಎಚ್.ಎನ್.ವ್ಯಾಲಿ ಯೋಜನೆಯಂತೆ ತಾಲ್ಲೂಕಿನ ಬೆಳ್ಳೂಟಿ, ರಾಳ್ಳುಕುಂಟೆ, ಕೆರೆಗಳಿಗೆ ನೀರು ಬಿಡಬೇಕು. ಕೆರೆಗಳಲ್ಲಿನ ಜಾಲಿ ಗಿಡಗಳ ತೆರವಿಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಜಿಲ್ಲಾ ಕಾರ್ಯಾಧ್ಯಕ್ಷ ಎಚ್.ಎನ್.ಕದಿರೇಗೌಡ, ಶಿಡ್ಲಘಟ್ಟ ತಾಲ್ಲೂಕು ಅದ್ಯಕ್ಷ ಮುನೇಗೌಡ, ಕಾರ್ಯದರ್ಶಿ ನವೀನ್ ಕುಮಾರ್, ಆಂಜಿನಪ್ಪ, ಡಿ.ವಿ.ನಾರಾಯಣಸ್ವಾಮಿ ಕನ್ನಪನಹಳ್ಳಿ ಮಂಜುನಾಥ್, ಚೌಡಪ್ಪ, ಪ್ರದೀಪ್, ಚೆನ್ನಪ್ಪ, ಹಾಜರಿದ್ದರು.
ಇದನ್ನೂ ನೋಡಿ: RSS ದೇಶದ್ರೋಹಿ ಸಂಘಟನೆ – ಬಿ.ಕೆ. ಹರಿಪ್ರಸಾದ್ Janashakthi Media
