ಬೆಂಗಳೂರು: ಪರಿಹಾರ ನೀಡದೇ ಭೂಮಿ ಕಿತ್ತುಕೊಂಡಿದ್ದರಿಂದಾಗಿ ಮನ ನೊಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಲಕಟ್ಟೆ ಗ್ರಾಮದ ರೈತ ರಂಗಣ್ಣ ರವರ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಇದು ಹೆದ್ದಾರಿ ಕಾಮಗಾರಿ ವೇಗಕ್ಕೆ ಪಡೆದಿರುವ ಬಲಿ ಎಂದು ಟೀಕಿಸಿದೆ.
‘ಕೆ.ಬಿ.ಕ್ರಾಸ್ ನಿಂದ ಹುಳಿಯಾರಿನರವರೆಗೂ ರಸ್ತೆ ಕಾಮಗಾರಿ ನಡೆಸುವ ಉದ್ದೇಶಕ್ಕೆ ರಂಗಣ್ಣ ರವರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ಪರಿಹಾರ ನೀಡಿರಲಿಲ್ಲ. ಪರಿಹಾರ ನೀಡದೇ ಭೂಮಿ ಬಿಡುವುದಿಲ್ಲ ಎಂದು ರಂಗಣ್ಣ ನ್ಯಾಯಯುತವಾಗಿ ಒತ್ತಾಯಿಸುತ್ತಿದ್ದರು. ಆದರೆ ರೈತನ ನ್ಯಾಯಬದ್ದವಾದ ಹಕ್ಕನ್ನು ಉಲ್ಲಂಘಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬಲವಂತವಾಗಿ ಭೂಮಿ ಕಿತ್ತುಕೊಂಡಿದ್ದರು. ಇದರಿಂದ ಮನನೊಂದು ರೈತ ರಂಗಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಈ ಸಾವಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರವೇ ಹೊಣೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಅಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರವು ರೈತ ಚಳವಳಿಯ ಒತ್ತಡದಿಂದ ತಂದಿದ್ದ 2013 ರ ಭೂ ಸ್ವಾಧೀನ ಕಾಯ್ದೆಗೆ ವಿರುದ್ಧವಾಗಿ ಕರ್ನಾಟಕ ರಾಜ್ಯ ಸರ್ಕಾರವು 2019 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ತಂದಿರುವ ಕರ್ನಾಟಕ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ 2019 ರಲ್ಲಿ 10(ಎ) ಎನ್ನುವ ಹೊಸ ಪರಿಚ್ಛೇದವನ್ನು ಸೇರಿಸುವ ಮೂಲಕ ಭೂ ಸ್ವಾಧೀನಕ್ಕೆ ಭಾದಿತ ರೈತ ಸಮುದಾಯದ ಒಪ್ಪಿಗೆ ಕಡ್ಡಾಯ ಎನ್ನುವ 2013 ರ ಕಾಯ್ದೆಯ ಷರತ್ತನ್ನು ತೆಗೆದು ಹಾಕಿದೆ. ಪರಿಹಾರ ನೀಡದೇ ವಶಕ್ಕೆ ತೆಗೆದುಕೊಂಡ ಸಂದರ್ಭದಲ್ಲಿ ಕೋರ್ಟ್ ನ ತಡೆಯಾಜ್ಞೆಯೂ ಯಾವುದೇ ಪರಿಣಾಮ ಬೀರದಂತೆ ಪರಿಚ್ಛೇದ 24(ಎ) ಗೆ ತಿದ್ದುಪಡಿ ತರಲಾಗಿದೆ. ಹೀಗೆ ಯಾವುದೇ ಸಾಮಾಜಿಕ ಪರಿಶೋಧನೆ ಇಲ್ಲದೇ, ರೈತ ಸಮುದಾಯದ ಒಪ್ಪಿಗೆ ಇಲ್ಲದೇ ಯಾವುದೇ ಪರಿಹಾರ ನೀಡದೇ ರೈತರ ಭೂಮಿಯನ್ನು ಕಿತ್ತುಕೊಳ್ಳಲು ಸರ್ಕಾರಿ ಹಾಗೂ ಖಾಸಗಿ ಎಜೆನ್ಸಿಗಳಿಗೆ ಪರಮಾಧಿಕಾರ ನೀಡಿರುವ ಕರ್ನಾಟಕ ರಾಜ್ಯ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ 2019 ಅನ್ನು ರದ್ದುಪಡಿಸಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಆಗ್ರಹಿಸಿದೆ.
‘ಯಾವುದೇ ಕಾರಣಕ್ಕೂ ರೈತರ ಗಮನಕ್ಕೆ ತರದೇ, ರೈತರ ಒಪ್ಪಿಗೆ ಪಡೆಯದೇ, ರೈತರಿಗೆ ಪರಿಹಾರ ನೀಡದೇ ಭೂಮಿ ವಶಕ್ಕೆ ಪಡೆಯಬಾರದು. ಈಗಾಗಲೇ ಬೇಸಾಯ ನಷ್ಟ, ಸಾಲ ಭಾದೆ ಕಾರಣಗಳಿಂದ ನಡೆಯುತ್ತಿರುವ ರೈತರ ಆತ್ಮಹತ್ಯೆ ಪಟ್ಟಿಗೆ ಸ್ವಾಧೀನದ ವಂಚನೆಯೂ ಸೇರ್ಪಡೆ ಆಗಿರುವುದು ಸರ್ಕಾರದ ಕ್ರೂರ ಮುಖವನ್ನು ಬಯಲುಗೊಳಿಸುತ್ತದೆ’ ಎಂದು ಟೀಕಿಸಿದೆ. ‘ಬಲವಂತವಾಗಿ, ಯಾವುದೇ ಪರಿಹಾರ ನೀಡದೇ ಭೂ ಸ್ವಾಧೀನಕ್ಕೆ ಅವಕಾಶ ನೀಡಿರುವ ಕರ್ನಾಟಕ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ 2019 ರದ್ದಾಗಬೇಕು. ಈ ಕೂಡಲೇ ಹೆದ್ದಾರಿ ಕಾಮಗಾರಿಗೆ ಭೂಮಿ ಕಳೆದುಕೊಂಡಿರುವ ರೈತ ರಂಗಣ್ಣ ಕುಟುಂಬಕ್ಕೆ ಭೂ ಸ್ವಾಧೀನ ಪರಿಹಾರ ಹಣವನ್ನು ಮಾರುಕಟ್ಟೆ ದರದ ನಾಲ್ಕು ಪಟ್ಟು ಪಾವತಿಸಬೇಕು. ರಂಗಣ್ಣ ಅವರ ಕುಟುಂಬಕ್ಕೆ ಕನಿಷ್ಠ 25 ಲಕ್ಷ ರೂ ಪರಿಹಾರ ಹಾಗೂ ಕುಟುಂಬದ ಸದಸ್ಯರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಖಾಯಂ ಉದ್ಯೋಗ ಕೊಡಬೇಕು’ ಎಂದು ಆಗ್ರಹಿಸಿದೆ.