ನವದೆಹಲಿ: 11 ಹಾಗೂ 12ನೇ ತರಗತಿಗಳ ಇತಿಹಾಸ ಹಾಗೂ ರಾಜಕೀಯವಿಜ್ಞಾನ ಪಠ್ಯಕ್ರಮದಲ್ಲಿ ಬದಲಾವಣೆಗಳು ಮಾಡಲಾಗಿದ್ದು, ಇತಿಹಾಸಕ್ಕೆ ಸಂಬಂಧಿಸಿದ ಹಲವು ಮಹತ್ವದ ಪ್ರಮುಖ ಪಾಠಗಳನ್ನು ತೆಗೆದು ಹಾಕಲಾಗಿದೆ. ಮತ್ತು ಈ ಬಗ್ಗೆ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯು ಸಮರ್ಥನೆ ನೀಡುತ್ತಿದೆ.
ಅಲಿಪ್ತ ಆಂದೋಲನ, ಶೀತಲ ಸಮರ, ಆಫ್ರೋ-ಏಷ್ಯನ್ ಪ್ರಾಂತ್ಯಗಳಲ್ಲಿ ಇಸ್ಲಾಮಿಕ್ ಸಾಮ್ರಾಜ್ಯಗಳ ಉದಯ, ಮುಘಲ್ ದರ್ಬಾರ್ ವಿವರಗಳು ಹಾಗೂ ಕೈಗಾರಿಕಾ ಕ್ರಾಂತಿಯ ವಿವರಗಳು ಒಳಗೊಂಡಿರುವ ಇತಿಹಾಸ ಮತ್ತು ರಾಜ್ಯಶಾಸ್ತ್ರ ಪಠ್ಯಗಳನ್ನು ತೆಗೆದು ಹಾಕಲಾಗಿದೆ.
ಮೊಘಲರ ಆಳ್ವಿಕೆಯಲ್ಲಿದ್ದ ನ್ಯಾಯಾಲಯಗಳು, ಕೈಗಾರಿಕಾ ಕ್ರಾಂತಿಗೆ ಸಂಬಂಧಿಸಿದ ಪಾಠಗಳನ್ನು ತೆಗೆದು ಹಾಕಿದೆ. 10ನೇ ತರಗತಿಯ ಪಠ್ಯಕ್ರಮದಲ್ಲಿ ‘ಆಹಾರ ಭದ್ರತೆ’ ಪಾಠದಿಂದ ‘ಕೃಷಿ ಮೇಲೆ ಜಾಗತೀಕರಣದ ಪರಿಣಾಮ’ ಎಂಬ ವಿಷಯಗಳು ಹಾಗೂ ಹನ್ನೊಂದನೇ ತರಗತಿಯ ಇತಿಹಾಸ ಪಠ್ಯದಿಂದ ಇಸ್ಲಾಮಿಕ್ ಸಾಮ್ರಾಜ್ಯಗಳ ವಿವರವಿರುವ ‘ಸೆಂಟ್ರಲ್ ಇಸ್ಲಾಮಿಕ್ ಲ್ಯಾಂಡ್ಸ್’ ಅಧ್ಯಾಯವನ್ನು ಕೈಬಿಡಲಾಗಿದೆ.
‘ಧರ್ಮ, ಕೋಮುವಾದ ಮತ್ತು ರಾಜಕೀಯ–ಕೋಮುವಾದ, ಜಾತ್ಯತೀತ ರಾಷ್ಟ್ರ’ ಎಂಬ ವಿಭಾಗದಲ್ಲಿ ಉರ್ದು ಕವಿ ಫೈಜ್ ಅಹ್ಮದ್ ಫೈಜ್ ಅವರ ಎರಡು ಕವಿತೆಗಳ ಆಯ್ದ ಭಾಗಗಳ ಅನುವಾದ ಇದ್ದವು. ಇವುಗಳನ್ನು ಸಹ ಕೈಬಿಡಲಾಗಿದೆ. ‘ಪ್ರಜಾಪ್ರಭುತ್ವ ಮತ್ತು ವೈವಿಧ್ಯ’ ಎಂಬ ವಿಷಯ ಕುರಿತ ಪಾಠಗಳನ್ನು ಸಹ ಪಠ್ಯಕ್ರಮದಿಂದ ತೆಗೆದುಹಾಕಲಾಗಿದೆ.
ಈ ವಿಷಯಗಳನ್ನು ಏಕೆ ಕೈಬಿಡಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಪಠ್ಯಕ್ರಮವನ್ನು ತರ್ಕಬದ್ಧಗೊಳಿಸಲು ಹಾಗೂ ಎನ್‌ಸಿಇಆರ್‌ಟಿಯ ಶಿಫಾರಸುಗಳ ಅನ್ವಯವೇ ಈ ಬದಲಾವಣೆಗಳನ್ನು ಮಾಡಲಾಗುತ್ತದೆ ಎಂದಿದ್ದಾರೆ. ಪಠ್ಯಕ್ರಮದಿಂದ ಕೆಲ ಭಾಗಗಳನ್ನು, ಪಾಠಗಳನ್ನು ಮಂಡಳಿಯು ಕೈಬಿಟ್ಟಿರುವುದು ಇದೇ ಮೊದಲ ಬಾರಿಯೇನಲ್ಲ. ಕಳೆದ ಕೆಲ ದಶಕಗಳಿಂದಲೂ ಇಂಥ ಕ್ರಮ ಕೈಗೊಳ್ಳಲಾಗಿದೆ ಎಂದೂ ಅವರು ಹೇಳಿದ್ದಾರೆ.