ಫೈಯರ್ ಬ್ರಾಂಡ್: ಮಲ್ಲು ಸ್ವರಾಜ್ಯಂ

ಡಾ.ಕೆ.ಷರೀಫಾ

ಕೆ.ಷರೀಫಾ, ಲೇಖಕರು

ಹೈದರಾಬಾದಿನ ತೆಲಂಗಾಣದ ಹಿರಿಯ ಹೋರಾಗಾರ್ತಿ, ರಾಜಕಾರಣಿಯಾದ ಮಲ್ಲು ಸ್ವರಾಜ್ಯಂರವರು ಅವರು ಹುಟ್ಟಿದ್ದು 1931ರಲ್ಲಿ ಹೈದರಾಬಾದ್‌ನ ನಲ್ಗೊಂಡ ಜಿಲ್ಲೆಯ ಕೂರ್ವಿರಾಲ ಕೊತಗುಡೆಂನಲ್ಲಿ. ಅವರು ದಿನಾಂಕ 19-03-2022ರಂದು ಬಹು ಅಂಗಾಂಗಗಳ ವೈಫಲ್ಯದಿಂದ ನರಳುತ್ತಿದ್ದ ಅವರು ಹೈದರಾಬಾದಿನಲ್ಲಿ ನಿಧನರಾದರು. ನಿಧನರಾದಾಗ ಅವರಿಗೆ 91 ವರ್ಷ ವಯಸ್ಸಾಗಿತ್ತು. ಮಲ್ಲು ಸ್ವರಾಜ್ಯಂರವರು ಮಲ್ಲು ಗೌತಮ್ ರೆಡ್ಡಿ ಮತ್ತು ಮಲ್ಲು ನಾಗಾರ್ಜುನ್ ರೆಡ್ಡಿ ಎಂಬ ಇಬ್ಬರು ಗಂಡುಮಕ್ಕಳು ಮತ್ತು ಪಾದೂರೀ ಕರುಣಾ ಎಂಬ ಮಗಳನ್ನು ಅಗಲಿದ್ದಾರೆ. ಅವರು ಹೋರಾಟವನ್ನೇ ಉಸಿರಾಗಿಸಿಕೊಂಡಿದ್ದರು.  ಅವರು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್‌ ಪಕ್ಷದ ಕೇಂದ್ರ ಸಮಿತಿ ಸದಸ್ಯರಾಗಿದ್ದರು. ಇವರ ಪತಿ ಮಲ್ಲು ವೆಂಕಟ ನರಸಿಂಹರೆಡ್ಡಿಯವರನ್ನು ಮದುವೆಯಾಗಿದ್ದರು. ಅವರು ಕಮ್ಯೂನಿಸ್ಟ್‌ ಪಕ್ಷದ ನಾಯಕರಾಗಿದ್ದರು. ನಿಜಾಮನ ಅಡಳಿದ ವಿರೋಧಿಸಿ ಹೋರಾಟ ಮಾಡಿದ್ದ ಅವರು 4-12-2004ರಲ್ಲಿ ನಿಧನರಾಗುತ್ತಾರೆ.

1978ರಲ್ಲಿ ಆಗಿನ ಮದ್ರಾಸಿನಲ್ಲಿ ನಡೆದ ಅಖಿಲ ಭಾರತ ಪ್ರಜಾಸತ್ತಾತ್ಮಕ ದುಡಿಯುವ ಮಹಿಳೆಯರ ಸಮನ್ವಯ ಸಮಿತಿಯ ಅಖಿಲ ಭಾರತ ಮಟ್ಟದ ಸಮಾವೇಶ ಆಯೋಜಿಸಲಾಗಿತ್ತು. ಆ ಸಮ್ಮೇಳನದಲ್ಲಿ ನಾನು ಗುಲಬರ್ಗಾದಿಂದ ಪ್ರತಿನಿಧಿಯಾಗಿ ಭಾಗವಹಿಸಿದ್ದೆ. ಆಗ ಬಿ.ಎ. ಎರಡನೆಯ ವರ್ಷದಲ್ಲಿ ಓದುತ್ತಿದ್ದೆ. ನಾನು ಶೀಲಾ ತಿವಾರಿ, ಶ್ಯಾಮಲಾ ಪೂಜಾರ ಇಂದು ಚೆನ್ನೈ ಎಂದು ಕರೆಯಲ್ಪಡುವ ಅಂದಿನ ಮದ್ರಾಸಿನಲ್ಲಿ ಅಖಿಲ ಭಾರತ ಪ್ರಜಾಸತ್ತಾತ್ಮಕ ದುಡಿಯುವ ಮಹಿಳೆಯರ 3 ದಿನಗಳ ಸಮಾವೇಶದಲ್ಲಿ ಪಾಲ್ಗೊಂಡಿದ್ದೆವು. ಆ ಮದ್ರಸಿನ ಸಮ್ಮೆಳನದಲ್ಲಿ ಮೊದಲ ಬಾರಿಗೆ ನಾನು ಮಲ್ಲು ಸ್ವರಾಜ್ಯಂರವರನ್ನು ನೋಡಿ ಪುಳಕಿತಳಾಗಿದ್ದೆ.

ಇದನ್ನು ಓದಿ: ಚಳುವಳಿ ನಾಯಕಿ ಮಲ್ಲು ಸ್ವರಾಜ್ಯಂ ನಿಧನಕ್ಕೆ ಜನವಾದಿ ಮಹಿಳಾ ಸಂಘಟನೆ ಸಂತಾಪ

ಆ ವೇದಿಕೆಯಿಂದ ಮಾತನಾಡಿದ ಮಲ್ಲು ಸ್ವರಾಜ್ಯಂ ತಮ್ಮ ಗೆರಿಲ್ಲಾ ಹೋರಾಟದ ವಿವರವನ್ನು ನೀಡಿದಾಗ ನನಗೆ ಮೈ ಜುಂ ಎನ್ನುವ ಅನುಭವ. ಆಗಿನ ಜಮಿನ್ದಾರರ ಮತ್ತು ನಿಜಾಮ ಸರ್ಕಾರದ ದೌರ್ಜನ್ಯಗಳನ್ನು ವಿರೋಧಿಸಿ ಮತ್ತು ಭಾರತದ ಸ್ವಾತಂತ್ರಕ್ಕಾಗಿ ಹೋರಾಟ ಮಾಡುತ್ತಾ, ಗೆರಿಲ್ಲಾ ಹೋರಾಟದಲ್ಲಿ ಕಾಡು ಮೇಡುಗಳನ್ನು ಲೆಕ್ಕಿಸದೇ ಹೆಗಲ ಮೇಲೆ ಹೆಣಭಾರದ ಬಂದೂಕನ್ನು ಹೊತ್ತು ನೀಡಿದಾದ ಮತ್ತು ದಟ್ಟ ಕಾಡಿನಲ್ಲಿ ಅಲೆಯುತ್ತಾ, ಊಟ, ವಸತಿ ಸೌಕರ್ಯವಿಲ್ಲದೆ ಅವರು ಕಾಡಿನಲ್ಲಿ ಕಳೆದ ದಿನಗಳ ಕುರಿತು ಹೇಳಿದರು. ಅವರು ಕಾಡಿನಲ್ಲಿ ಮೂರು ಬಾರಿ ಹುಲಿಯನ್ನು ಕಂಡಿದ್ದರು. ಹಾವುಗಳು, ಹುಲಿ, ಕರಡಿ, ಸಿಂಹಗಳ ನಡುವೆ ಜೀವ ಉಳಿಸಿಕೊಳ್ಳುವುದು ಬಹಳ ಸಮಸ್ಯೆಯಾಗುತ್ತಿತ್ತು. ಅವರು ಸುಮಾರು ಮೂರು ವರ್ಷಗಳ ಕಾಲ ಯಾರಿಗೂ ಸಿಗದೇ ಕಾಡುಗಳಲ್ಲಿ ಅಲೆದಾಡಿದರು. ಅವರ ಸ್ವಾತಂತ್ರ ಹೋರಾಟದ ಕೆಚ್ಚುಗಳು ನಮಗೆಲ್ಲ ಭಿನ್ನವಾದ ಹೊಸ ಅನುಭವ ಲೋಕವನ್ನೇ ತೆರೆದು ತೊರಿದವು. ಅವರ ತೆಲಂಗಾಣದ ಭೂಮಿಗಾಗಿ ಬಂದೂಕು ಹಿಡಿದು ಸಂಘರ್ಷಮಯ ಬದುಕು ನಡೆಸಿದ ಈ ಕ್ರಾಂತಿಕಾರಿ ನಾಯಕಿಯನ್ನು ಹಿಡಿದು ಕೊಟ್ಟವರಿಗೆ ನಿಜಾಮನ ಸರ್ಕಾರ ವಾರಂಟ್ ಹೊರಡಿಸಿ, ಅವರ ತಲೆಗೆ ರೂ.10,000=00 ಬಹುಮಾನ ಘೋಷಿಸಲಾಗಿತ್ತು. ಆದರೂ, ಅವರು ಯಾರಿಗೂ, ಎಂದಿಗೂ ಸಿಕ್ಕಿಬೀಳಲಿಲ್ಲವಂತೆ. ಆಗಿನ್ನೂ ಕಾಲೇಜು ಓದುತ್ತಿದ್ದ ನಮಗೆ ಮಲ್ಲು ಸ್ವರಾಜ್ಯಂರವರ  ಮಾತುಗಳು ಮನಸಿಗೆ ನಾಟಿದವು. ಅದೆಂತಹ ದಿಟ್ಟ ಹೋರಾಟದ ನಿಲುವು ಸಂಗಾತಿಯದು. ಅಂದಿನಿಂದಲೂ ನಾನು ಅವರ ಆದರ್ಶ, ಗುರಿ ಮುಟ್ಟುವ ಸಹಾಸ, ಹೋರಾಟದ ಕೆಚ್ಚು, ಕಾರ್ಯಗಳನ್ನು ಗಮನಿಸುತ್ತಲೇ ಬೆಳೆದಿರುವೆ. ಅವರನ್ನು ಟೈಮ್ಸ್‌ ಆಫ್ ಇಂಡಿಯಾ ಪತ್ರಿಕೆಯು “ದಿ ಬುಲೆಟ್ ಲೇಡಿ ಆಫ್ ತೆಲಂಗಾಣ” ಎಂದು ಕರೆದಿದೆ. ತೆಲಂಗಾಣದ ವೀರ ಹೋರಾಟದ ಕ್ರಾಂತಿ ಕಿರಣ ಮಲ್ಲು ಸ್ವರಾಜ್ಯಂ ಈಗೊಂದು ದಂತಕಥೆ ಮಾತ್ರ.  ಹೈದ್ರಾಬಾದ್ ನಿಜಾಮನ ಆಡಳಿತದ ವಿರುದ್ಧ ಹಾಗೂ ಭೂಮಾಲಿಕರ ವಿರುದ್ಧ ನಡೆದ ಸಶಸ್ತ್ರ ಹೋರಾಟದ ನಾಯಕಿಯಾಗಿ, ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ. ಅವರು ಮಾಜಿ ಶಾಸಕಿಯಾಗಿ ನಲಗೊಂಡ ಜಿಲ್ಲೆಯ ತುಂಗತುರ್ತಿ ಕ್ಷೇತ್ರದಿಂದ ಸಿಪಿಐ(ಎಂ) ನಿಂದ 1978ರಿಂದ 1983ರವರೆಗೆ ಮತ್ತು 1983ರಿಂದ 1984ರವರೆಗೆ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಹಿರಿಯ ಹೋರಾಟಗಾರ್ತಿ ಹಾಗೂ ತೆಲಂಗಾಣಾ ಸಶಸ್ತ್ರ  ಹೋರಾಟದ ವೀರ ನಾರಿ ಕಾಮ್ರೇಡ್ ಮಲ್ಲು ಸ್ವರಾಜ್ಯಂ ಅಸ್ತಂಗತರಾಗಿದ್ದಾರೆ. 1945-46ರ ತೆಲಂಗಾಣ ಸಶಸ್ತ್ರ ಹೋರಾಟದ ಫಲವಾಗಿ 1947-48ರಲ್ಲಿ ನಿಜಾಮನನ್ನು ಪದಚ್ಯುತಗೊಳಿಸಲಾಯಿತು. ಇದರಿಂದ ಕುಪಿತನಾದ ನಿಜಾಮ್ ನ ಗುಂಡಾಗಳು ಸ್ವರಾಜ್ಯಂರವರ ಮನೆಯನ್ನು ಸುಟ್ಟು ಹಾಕಿದರು.

ಭೀಮಿರೆಡ್ಡಿ ರಾಮಿರೆಡ್ಡಿ ಮತ್ತು ಸೊಕ್ಕಮ್ಮನವರ ಮಗಳಾಗಿ ಜನಿಸಿದ, ಇವರ ತಂದೆ ಸರ‍್ಯಾಪೇಟೆ ತಾಲ್ಲೂಕಿನಲ್ಲಿ ಜಮಿನ್ದಾರರಾಗಿದ್ದರು. ಅವರ ತಂದೆಯವರು ಕೇವಲ 40 ವರ್ಷಗಳ ವಯಸ್ಸಿನಲ್ಲಿಯೇ ನಿಧನರಾದರು. ಕಟ್ಟಾ ಜಮೀನ್ದಾರರ ನಡಾವಳಿಯನ್ನು ರೂಢಿಸಿಕೊಂಡಿದ್ದ ಭೀಮಿರೆಡ್ಡಿಯವರು ತಮ್ಮ ಮಗಳನ್ನು ಹೊರಗೆ ಓದಲು ಕಳಿಸದೇ, ಶಿಕ್ಷಕರನ್ನೇ ಮನೆಗೆ ಕರೆಸಿ ಓದಿಸುತ್ತಿದ್ದರು. ಹೆಣ್ಣು ಮಕ್ಕಳಿಗೂ ಕುದುರೆ ಸವಾರಿ, ಈಜುಗಾರಿಕೆ, ದೈಹಿಕ ವ್ಯಾಯಾಮದ ತರಬೇತಿಯನ್ನು ಕೊಡಿಸಿದರು. ತಂದೆಯವರ ನಿಧನದಿಂದಾಗಿ ಮಲ್ಲು ಸ್ವರಾಜ್ಯಂರವರ ಶಿಕ್ಷಣ ಕೇವಲ ಮೂರನೇ ತರಗತಿಗೆ ಬಂದು ನಿಲ್ಲುತ್ತದೆ. ಅವರ ತಾಯಿ ಸೊಕ್ಕಮ್ಮನವರೂ ಕೂಡ ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹದಿಂದ ಪ್ರೇರಿತರಾಗಿ ತಮ್ಮ ಐದು ಜನ ಮಕ್ಕಳಲ್ಲಿ ಮೂರನೆಯವಳಿಗೆ ‘ಸ್ವರಾಜ್ಯಂ’ ಎಂದು ಹೆಸರಿಟ್ಟರು.

ಇದನ್ನು ಓದಿ: ವೀರ ತೆಲಂಗಾಣ ಹೋರಾಟದ ಕ್ರಾಂತಿ ಕಿರಣ ಮಲ್ಲು ಸ್ವರಾಜ್ಯಂ ಇನ್ನಿಲ್ಲ

ಅವರು ತಮ್ಮ ಕೇವಲ 10 ವರ್ಷ ವಯಸ್ಸಿನಲ್ಲಿಯೇ ಮ್ಯಾಕ್ಸಿಂ ಗಾರ್ಕಿಯ “ಮದರ್(ತಾಯಿ)” ಕೃತಿಯ ತೆಲಗು ಅವತರಿಣಿಕೆಯನ್ನು ಓದಿ ಅದರಿಂದ ಪ್ರಭಾವಿತರಾದವರು. 2009ರ ಚುನಾವಣೆಯಲ್ಲಿ ಚಿರಂಜೀವಿ ಅವರ “ಪ್ರಜಾ ರಾಜ್ಯಂ” ಪಕ್ಷದಿಂದ ನಲ್ಗೊಂಡದಿಂದ ಸ್ಪರ್ಧಿಸಿದರು. ಸಿಪಿಐ(ಎಂ)-ಕಮ್ಯೂನಿಸ್ಟ್‌ ಪಕ್ಷದ ನಾಯಕಿಯಾಗಿ ಮತ್ತು ಹೈದರಾಬಾದಿನ ತುಂಗತುರ್ಥಿ ಕ್ಷೇತ್ರದ ಅಭ್ಯರ್ಥಿಯಾಗಿ 9 ವರ್ಷಗಳ ಕಾಲ ಶಾಸಕರಾದವರು. ಇತಿಹಾಸದಲ್ಲಿ ಅಳಿಸಲಾಗದ ಐತಿಹಾಸಿಕ ಹೆಗ್ಗುರುತುಗಳನ್ನು ಉಳಿಸಿ ಹೋದವರು ಮಲ್ಲು ಸ್ವರಾಜ್ಯಂ ಅಮ್ಮ. ಅವರು ಆಧುನಿಕ ತೆಲಂಗಾಣದ ರೂವಾರಿಯಾಗಿದ್ದಾರೆ. ಅವು ಒಬ್ಬ ಅಸಾಧಾರಣ ಮಾನಸಿಕ ಸ್ಥೈರ್ಯವುಳ್ಳ ಮಹಿಳೆಯಾಗಿದ್ದರು. ತುಂಬಾ ಚಿಕ್ಕ ವಯಸ್ಸಿನಲ್ಲಿ ಅವರು ಸಾಮಾಜಿಕ ಅನ್ಯಾಯದ ವಿರುದ್ದ ಧ್ವನಿ ಎತ್ತಿದವರು. ಮಹಾ ಧೈರ್ಯವಂತೆ ಮಲ್ಲು ಸ್ವರಾಜ್ಯಂರವರು ಕಮ್ಯೂನಿಸ್ಟ್‌ ಪಕ್ಷ ಸೇರಿ, ಗೆರಿಲ್ಲಾ ಪಡೆಗಳನ್ನು ಸಂಘಟಿಸಿ, ಅದರ ಬಹುಮುಖ್ಯ ರಾಜಕೀಯ ನಾಯಕಿಯಾದರು.

ಸ್ವರಾಜ್ಯಂ ಅಮ್ಮ ನಿರ್ಬಂಧಗಳನ್ನು ಲಂಘಿಸುವುದರಲ್ಲಿ ನಿಸ್ಸೀಮರು. ಆಗಿನ ನಿಜಾಮನ ಆಳ್ವಿಕೆಯಲ್ಲಿದ್ದ ಹೈದ್ರಾಬಾದನ ಭಾಗವಾಗಿದ್ದ ತೆಲಂಗಾಣದಲ್ಲಿ ನಡೆಯುತ್ತಿದ್ದ ಸ್ವಾತಂತ್ರ ಹೋರಾಟವು ಮುಖ್ಯವಾಗಿ ನಿಜಾಮನ ಜನ ವಿರೋಧಿ ನೀತಿ ಮತ್ತು ನಿರಂಕುಶ ಪ್ರವೃತ್ತಿಯನ್ನು ಪ್ರತಿಭಟಿಸುವುದಾಗಿತ್ತು. ಸ್ವರಾಜ್ಯಂ ಅಮ್ಮ ಸ್ವತ: ಒಬ್ಬ ಜಮೀನ್ದಾರೀ ಕುಟುಂಬದ ಮಗಳಾಗಿ ಜಮೀನ್ದಾರಿ ಪದ್ದತಿಯನ್ನು ವಿರೋಧಿಸಿ ಹೋರಾಡಿದರು. ಹಳ್ಳಿಯ ಹೆಂಗಸರ ನಡುವಿನ ಜೋಗುಳ ಹಾಡುಗಳನ್ನು ಹೆಕ್ಕಿಕೊಂಡು ಜೋಗುಳ ಪದ “ತೋಟ್ಟಿಲ ಹಾಡು”ಗಳನ್ನು ವೈಚಾರಿಕಗೊಳಿಸಿದರು. ಮುಂದೆ ಅವು ಹೊರಾಟಕ್ಕೆ ಪ್ರಬಲ ಅಸ್ತ್ರಗಳಾದವು. 1944ರಲ್ಲಿ ಐಲಮ್ಮನ ಆಸ್ತಿ ಕಿತ್ತುಕೊಳ್ಳಲು ಪ್ರಯತ್ನಿಸಿದ ವಿಷ್ಣು ದೇಶಮುಖ್‌ನ ದೌರ್ಜನ್ಯದ ವಿರುದ್ಧ ಹೋರಾಡಿದರು. ತೆಲಂಗಾಣಾ ಸಶಸ್ತ್ರ ಹೋರಾಟದ ನಾಯಕಿಯಾದ ಇವರು “ನಾ ಮಾತೆ ತುಪಾಕೀ ಟೂಟಾ” ಎಂಬ ಆತ್ಮಚರಿತ್ರೆಯನ್ನು(ನನ್ನ ಮಾತು ಬುಲೆಟ್) ಹೈದ್ರಾಬಾದಿನ ಬುಕ್ ಟ್ರಸ್ಟ್ 2019ರಲ್ಲಿ ಪ್ರಕಟಿಸಿತು.

1964ರಲ್ಲಿ ಕಮ್ಯೂನಿಸ್ಟ್‌ ಪಕ್ಷವು ವಿಭಜನೆಯಾದಾಗ ಅವರು ಸಿಪಿಐ(ಎಂ) ಪಕ್ಷ ಸೇರಿದರು. ಅವರು ತಮ್ಮ 16ನೇ ವಯಸ್ಸಿಗೇ ಪಕ್ಷದ ಸದಸ್ಯತ್ವ ಪಡೆದಿದ್ದರು. ಉಕ್ಕಿನ ಮಹಿಳೆಯಾಗಿದ್ದ ಇವರು ಗೆರಿಲ್ಲಾ ಸಶಸ್ತ್ರ ಹೋರಾಟದ ಮೊಟ್ಟ ಮೊದಲ ಕಮಾಂಡರ್ ಆಗಿದ್ದರು. ಅವರದೇ ಸಮಕಾಲೀನರಾದ ಲಕ್ಷ್ಮೀ ಸೆಹೆಗಲ್‌ರವರು ಸುಭಾಷ್‌ ಚಂದ್ರ ಭೋಸ್‌ರವರ ಝಾನ್ಸಿ ರಾಣಿ ಬ್ರಿಗೇಡ್‌ಗೆ ಕ್ಯಾಪ್ಟನ್ ಆಗಿದ್ದರು. ಸ್ವರಾಜ್ಯಂ ತಮ್ಮ 12ನೇ ವಯಸ್ಸಿನಲ್ಲಿಯೇ ಮಹಿಳಾ ಸಭಾದ ಸದಸ್ಯತ್ವ ಪಡೆದರು. 1946ರಲ್ಲಿ ಸೂಯಾಪೇಟೆಯ ಹೋರಾಟ ಸಮಿತಿಗಳ ಸಂಚಾಲಕರಾಗಿ ನೇಮಕವಾದರು. ಪಾನ ನಿಷೇಧಕ್ಕಾಗಿ, ಕೌಟುಂಬಿಕ ಹಿಂಸೆಗಳ ವಿರುದ್ಧ, ಅತ್ಯಾಚಾರಗಳ ವಿರುದ್ದ, ಮಹಿಳೆಯರನ್ನು ಸಂಘಟಿಸಿದರು. ಆಗ ನಿಜಾಮನ ವಿರುದ್ಧ ನಡೆಯಬೇಕಿದ್ದ ಸಮರವನ್ನು ಸರ್ದಾರ್ ವಲ್ಲಭ್ ಭಾಯಿ ಪಟೇಲರು, ಕಮ್ಯೂನಿಷ್ಟರನ್ನು ಬಗ್ಗು ಬಡಿಯಲು ಪ್ರಯತ್ನಿಸಿದ ಕಾರಣ ಹಲವಾರು ಸಂಗಾತಿಗಳು ಅಸುನೀಗಿದರು. ತೆಲಂಗಾಣ ಹೋರಾಟದ ವೀರ ರಮಣಿಯರು ಹಲವಾರು ಜನರಿದ್ದಾರೆ. ಮಲ್ಲು ಸ್ವರಾಜ್ಯಂ ಒಬ್ಬರೇ ಅಲ್ಲ, ಅವರೊಂದಿಗಿದ್ದ ಹಲವಾರು ಮಹಿಳಾ ಹೋರಾಟಗಾರ್ತಿಯರ ಚರಿತ್ರೆಯಿನ್ನೂ ದಾಖಲಾಗಬೇಕಿದೆ. ಈ ಹೋರಾಟದ ಸಿಂಹಿಣಿಯರ ಬದುಕು, ಹೋರಾಟಗಳು ಚರಿತ್ರೆಯ ಪುಟಗಳಲ್ಲಿ ದಾಖಲಾಗಬೇಕಾದುದು ತುರ್ತಿನ ಕೆಲಸವಾಗಿದೆ. ಇದೇ ನಾವು ಮಲ್ಲು ಸ್ವರಾಜ್ಯಂ ರವರಿಗೆ ಸಲ್ಲಿಸುವ ಶ್ರದ್ಧಾಂಜಲಿಯಾಗಿದೆ.

Donate Janashakthi Media

Leave a Reply

Your email address will not be published. Required fields are marked *