ಉತ್ತರ ಕರ್ನಾಟಕದ ಮುಸ್ಲಿಂ ಧಾರ್ಮಿಕ ನಾಯಕರೊಬ್ಬರ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಬಿಜೆಪಿ ಶಾಸಕ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಅವರನ್ನು ಐಸಿಸ್ ಭಯೋತ್ಪಾದಕರ ಬೆಂಬಲಿಗ ಎಂದು ಬುಧವಾರ ಪ್ರತಿಪಾದಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಾ ಈ ಐಸಿಸ್ ಭಯೋತ್ಪಾದಕರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಆರೋಪಿಸಿದ್ದು, ಇದೀಗ ಅದನ್ನು ಹಲವಾರು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಫ್ಯಾಕ್ಟ್‌ಚೆಕ್
ಈ ಬಗ್ಗೆ ಯತ್ನಾಲ್ ಅವರು ಬೆಳಗಾವಿಯಲ್ಲಿ ಮಾಧ್ಯಮದ ಮುಂದೆ ಕೂಡಾ ಹೇಳಿದ್ದರು. ಟ್ವಿಟರ್‌ನಲ್ಲಿ ಅವರು, “ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಐಸಿಸ್ ಭಯೋತ್ಪಾದಕರ ಬೆಂಬಲಿಗನೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ತನ್ವಿರ್ ಪೀರಾ ಎಂಬ ಮುಸ್ಲಿಂ ಮೌಲ್ವಿ ಯೆಮೆನ್, ಸೌದಿ ಹಾಗು ಮಧ್ಯ ಪ್ರಾಚ್ಯ ದೇಶಗಳ ಪ್ರವಾಸಗಳ ವೇಳೆ ಭಯೋತ್ಪಾದಕ ಸಂಘಟನೆಗಳ ಪ್ರಮುಖರನ್ನು ಭೇಟಿಯಾಗಿರುವ ಚಿತ್ರಗಳು ಇಲ್ಲಿವೆ” ಎಂದು ಬರೆದು ನಾಲ್ಕು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಕ್ಲಿಪ್ ಮಾಡಿದ ವಿಡಿಯೊ ಬಳಸಿ, ‘ರಾಹುಲ್ ಗಾಂಧಿ ಭಾರತ ಮಾತೆಗೆ ಅವಮಾನಿಸಿದ್ದಾರೆ’ ಎಂದು ಸುಳ್ಳು ಹೇಳಿದ ಬಿಜೆಪಿ
ಈ ಭಯೋತ್ಪಾದಕ ಬೆಂಬಲಿಗೆ ಹಿಂದೆಯೂ ಹಲವಾರು ಬಾರಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದ.
ಕೆಲವೇ ದಿನಗಳಲ್ಲಿ ತನ್ವಿರ್ ಪೀರಾ ಎಂಬ ಭಯೋತ್ಪಾದಕ ಬೆಂಬಲಿಗನ ಇನ್ನಷ್ಟು ವಿವರಗಳನ್ನು ಬಹಿರಂಗಗೊಳಿಸುತ್ತೇನೆ.
ಈತನು ಮಧ್ಯಪ್ರಾಚ್ಯ ದೇಶಗಳಿಂದ ಹಣವನ್ನು ಭಾರತಕ್ಕೆ ತರುವ ಹಾಗು ಭಾರತದ ಚಟುವಟಿಕಗಳ ಮಾಹಿತಿಯನ್ನು ಅರಬ್ ದೇಶಗಳಿಗೆ… pic.twitter.com/XKFkvhkPXk
— Basanagouda R Patil (Yatnal) (@BasanagoudaBJP) December 6, 2023
“ಈ ಭಯೋತ್ಪಾದಕ ಬೆಂಬಲಿಗೆ ಹಿಂದೆಯೂ ಹಲವಾರು ಬಾರಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದ. ಕೆಲವೇ ದಿನಗಳಲ್ಲಿ ತನ್ವಿರ್ ಪೀರಾ ಎಂಬ ಭಯೋತ್ಪಾದಕ ಬೆಂಬಲಿಗನ ಇನ್ನಷ್ಟು ವಿವರಗಳನ್ನು ಬಹಿರಂಗಗೊಳಿಸುತ್ತೇನೆ. ಈತನು ಮಧ್ಯಪ್ರಾಚ್ಯ ದೇಶಗಳಿಂದ ಹಣವನ್ನು ಭಾರತಕ್ಕೆ ತರುವ ಹಾಗು ಭಾರತದ ಚಟುವಟಿಕಗಳ ಮಾಹಿತಿಯನ್ನು ಅರಬ್ ದೇಶಗಳಿಗೆ ರವಾನಿಸುವ ಕೆಲಸ ಮಾಡುತ್ತಿದ್ದಾನೆ. ರಾಜ್ಯ ಪೊಲೀಸ್, ಕೇಂದ್ರೀಯ ತನಿಖಾ ಸಂಸ್ಥೆಗಳು ಈ ಕುರಿತು ವಿಚಾರಣೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದೇನೆ” ಎಂದು ಅವರು ಸರಣಿ ಟ್ವೀಟ್ ಮಾಡಿದ್ದು, ಹಲವಾರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಪೊಲೀಸರಿಗೆ ಥಳಿಸುತ್ತಿರುವ ಈ ವಿಡಿಯೊ ರಾಜಸ್ಥಾನದಲ್ಲ; ಥಳಿಸುತ್ತಿರುವವರು ಮುಸ್ಲಿಂ ಗುಂಪಲ್ಲ
ಅವರ ಈ ಚಿತ್ರವನ್ನು ಹಲವಾರು ಮಾಧ್ಯಮಗಳು ಸುದ್ದಿ ಮಾಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿ ಬೆಂಬಲಿಗರು ಇದನ್ನು ವೈರಲ್ ಮಾಡುತ್ತಿದ್ದಾರೆ.
ಫ್ಯಾಕ್ಟ್ ಚೆಕ್
ಯತ್ನಾಳ್ ಅವರ ಆರೋಪದ ಕುರಿತು ನಾವು ಹುಡುಕಾಡಿದಾಗ ಅವರು ಆರೋಪ ಮಾಡಿರುವ ವ್ಯಕ್ತಿಯು ಬಿಜಾಪುರದ ಸೈಯದ್ ಮೊಹಮ್ಮದ್ ತನ್ವೀರ್ ಹಶ್ಮಿ ಎಂಬುವವರಾಗಿದ್ದಾರೆ. ಅವರು ಜಮಾತೆ ಅಹ್ಲೆ ಸುನ್ನತ್ ಕರ್ನಾಟಕ ಎಂಬ ಸಂಘಟನೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಫೇಸ್‌ಬುಕ್ ಪೇಜ್ ಅನ್ನು ಇಲ್ಲಿ ನೋಡಬಹುದು.
ಮೊಹಮ್ಮದ್ ತನ್ವೀರ್ ಹಶ್ಮಿ ಅವರು ಹಲವು ಜನರನ್ನು ಭೇಟಿಯಾಗುವ ಚಿತ್ರವನ್ನು ಯತ್ನಾಳ್ ಹಂಚಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ಇರುವ ವ್ಯಕ್ತಿಗಳ ಬಗ್ಗೆ ನಾವು ಮತ್ತಷ್ಟು ಹುಡುಕಾಡಿದಾಗ ಅವರು ಯತ್ನಾಲ್ ಪ್ರತಿಪಾದಿಸಿದಂತೆ ಐಸಿಸ್ ಭಯೋತ್ಪಾದಕರಲ್ಲ. ಬದಲಾಗಿ ಬಾಗ್ದಾದಿನ ಪ್ರಿನ್ಸ್ ಶೇಖ್ ಖಾಲಿದ್ ಅವರಾಗಿದ್ದು, ಈ ಚಿತ್ರಗಳನ್ನು 2013ರಲ್ಲಿಯೇ Qadri Al Hashmi Healing ಎಂಬ ಫೇಸ್‌ಬುಕ್ ಪುಟದಲ್ಲಿ ತನ್ವೀರ್ ಹಶ್ಮಿ ಬೆಂಬಲಿಗರು ಹಂಚಿಕೊಂಡಿದ್ದಾರೆ. ಅದನ್ನು ನೀವು ಇಲ್ಲಿ ನೋಡಬಹುದು.
ಸುನ್ನಿ ಜಮಾತ್‌ನ ಮುಖಂಡರಾಗಿರುವ ತನ್ವೀರ್ ಹಶ್ಮಿ ಅವರು ಸೂಫಿ ಪಂಗಡಕ್ಕೆ ಸೇರಿದವರು. ಈ ಚಿತ್ರದಲ್ಲಿರುವ ಬಾಗ್ದಾದಿನ ಯುವರಾಜ ಸಹ ಅದೇ ಪಂಗಡಕ್ಕೆ ಸೇರಿದವರಾಗಿದ್ದಾರೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಹಿಂದೂಗಳ ವ್ಯಾಪಾರ ಬಹಿಷ್ಕರಿಸುವಂತೆ ಬೆಂಗಳೂರಿನಲ್ಲಿ ಮುಸ್ಲಿಮರು ಕರೆ ನೀಡಿಲ್ಲ
ಯತ್ನಾಳ್ ಹಂಚಿಕೊಂಡ ಮತ್ತೊಂದು ಫೋಟೊದಲ್ಲಿರುವ ವ್ಯಕ್ತಿ ಇರಾಕ್ ಸರ್ಕಾರದ ಭದ್ರತಾ ಅಧಿಕಾರಿಯಾಗಿದ್ದು, ಸೂಫಿ ಸಂತ ಗೌಸ್ ಆಲಂ ದರ್ಗಾದ ಭದ್ರತಾ ಸಿಬ್ಬಂದಿಯಾಗಿದ್ದಾರೆ. ತನ್ವೀರ್ ಹಶ್ಮಿ ಅವರು ದರ್ಗಾದ ಒಳಗಡೆ ಇದ್ದಾಗ ಕ್ಲಿಕ್ ಮಾಡಿದ ಚಿತ್ರ ಇದಾಗಿದೆ. ಈ ಚಿತ್ರವನ್ನು ತನ್ವೀರ್ ಹಶ್ಮಿ ಅವರು www.alhashmi.org ವೆಬ್‌ಸೈಟ್‌ನಲ್ಲಿ ದಾಖಲಿಸಿದ್ದಾರೆ. ಯತ್ನಾಳ್
ಅವರು ಅಲ್ಲಿಂದಲೇ ಈ ಚಿತ್ರವನ್ನು ತೆಗೆದಿರಬಹುದು ಎಂದು ನಂಬಬಹುದಾಗಿದೆ.
ಈ ಫೋಟೊ ಕೂಡಾ 2013ರಲ್ಲಿ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ ಎಂದು ಕನ್ನಡ ಫ್ಯಾಕ್ಟ್‌ಚೆಕ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ತನ್ವೀರ್ ಹಶ್ಮಿಯವರು ವಿದೇಶಕ್ಕೆ ಪ್ರಯಾಣ ಮಾಡಿದ ಎಲ್ಲಾ ವಿವರ ಮತ್ತು ಫೋಟೊಗಳನ್ನು ತಮ್ಮ www.alhashmi.org ಎಂಬ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದಾರೆ.
ಯಾರು ಸೈಯದ್ ಮೊಹಮ್ಮದ್ ತನ್ವೀರ್ ಹಶ್ಮಿ?
ಸೈಯದ್ ಮೊಹಮ್ಮದ್ ತನ್ವೀರ್ ಹಶ್ಮಿ ಅವರು ಬಿಜಾಪುರದವರಾಗಿದ್ದು, ಪ್ರವಾದಿ ಮುಹಮ್ಮದ್ ಅವರ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಅಲ್ಲದೆ ಜಮಾತೆ ಅಹ್ಲೆ ಸುನ್ನತ್ ಕರ್ನಾಟಕ ಎಂಬ ಸಂಘಟನೆಯ ಅಧ್ಯಕ್ಷರೂ ಆಗಿರುವ ಅವರು, ಬಿಜಾಪುರ ಷರೀಫ್‌ನ ಆಧ್ಯಾತ್ಮಿಕ ಗುರುವಾಗಿದ್ದಾರೆ. ಈ ಬಗ್ಗೆ ವಿಕಿಪೀಡಿಯಾದಲ್ಲಿ ಅವರ ಬಗ್ಗೆ ಇನ್ನಷ್ಟು ಮಾಹಿತಿ ನೀಡಲಾಗಿದೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಕೇರಳದಲ್ಲಿ ಬುರ್ಖಾ ಧರಿಸದ ಕಾರಣಕ್ಕೆ ಹಿಂದೂ ಮಹಿಳೆಯನ್ನು ಮುಸ್ಲಿಂ ಮಹಿಳೆಯರು ಬಸ್ ಏರದಂತೆ ತಡೆದರು ಎಂಬುದು ಸುಳ್ಳು
ಹಲವು ಶಾಲಾ ಕಾಲೇಜುಗಳನ್ನು ನಡೆಸುವ ತನ್ವೀರ್ ಹಶ್ಮಿ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರು ಎಂದು ಬಿಜಾಪುರದ ಪತ್ರಕರ್ತರು ಮಾಹಿತಿ ನೀಡಿದ್ದಾರೆ ಎಂದು ಕನ್ನಡ ಫ್ಯಾಕ್ಟ್‌ಚೆಕ್ ವರದಿ ಉಲ್ಲೇಖಿಸಿದೆ. ಬಿಜೆಪಿ ಶಾಸಕ ಆರೋಪಿಸಿದಂತೆ ಅವರಿಗು ಐಸಿಸ್‌ಗೂ ಯಾವುದೆ ಸಂಬಂಧವಿಲ್ಲ. ಈ ರೀತಿ ಅವರ ಮೇಲೆ ಯಾವುದೆ ಪ್ರಕರಣವೂ ನಮಗೆ ಸಿಕ್ಕಿಲ್ಲ.
ಇಷ್ಟೆ ಅಲ್ಲದೆ, 2022ರ ಸೆಪ್ಟಂಬರ್‌ನಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿಯವರನ್ನು ತನ್ವೀರ್ ಹಶ್ಮಿ ಅವರು ಭೇಟಿಯಾಗಿದ್ದರು. ಈ ಭೇಟಿಯ ಬಗ್ಗೆ ಹಲವಾರು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರ ಸಮೇತ ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ, ಬಿಜೆಪಿ ಶಾಸಕ ಯತ್ನಾಲ್ ಹಂಚಿರುವ ಚಿತ್ರದಲ್ಲಿರುವ ಸೈಯದ್ ಮೊಹಮ್ಮದ್ ತನ್ವೀರ್ ಹಶ್ಮಿ ಅವರಿಗೂ ಐಸಿಸ್ ಭಯೋತ್ಪಾದಕರಿಗೂ ಸಂಬಂಧವಿಲ್ಲ. ಅವರ ಹೇಳಿಕೆ ಸುಳ್ಳಾಗಿದ್ದು, ತನ್ವೀರ್ ಹಶ್ಮಿ ಅವರ ಫೇಸ್‌ಬುಕ್‌ನಲ್ಲಿ ಇರುವ ಚಿತ್ರವನ್ನೆ ತೆಗೆದು ಅವರ ಮೇಲೆ ದುರುದ್ಧೇಶಪೂರಿತ ಆರೋಪ ಮಾಡಿದ್ದಾರೆ. ಈ ಬಗ್ಗೆ ತನ್ವೀರ್ ಹಶ್ಮಿ ಅವರೇ ಸ್ಪಷ್ಟನೆ ನೀಡಿದ್ದಾರೆ. ಸೈಯದ್ ಮೊಹಮ್ಮದ್ ತನ್ವೀರ್ ಹಶ್ಮಿ ಅವರು ಮುಸ್ಲಿಮರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸೂಫಿ ನಾಯಕರಾಗಿದ್ದಾರೆ.
ಯಾವುದೆ ವಿಡಿಯೊ, ಚಿತ್ರ ಅಥವಾ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವ ಮುಂಚೆ ಅದು ಸತ್ಯವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಅವುಗಳ ಬಗ್ಗೆ ನಿಮಗೆ ಸಂಶಯವಿದ್ದರೆ ಜನಶಕ್ತಿ ಮೀಡಿಯಾದ +916361984022 ಈ ನಂಬರ್‌ಗೆ ಕಳುಹಿಸಿ. ನಾವು ಅದನ್ನು ಫ್ಯಾಕ್ಟ್‌ಚೆಕ್ ಮಾಡುತ್ತೇವೆ.
ವಿಡಿಯೊ ನೋಡಿ: ಮಹಾಧರಣಿ| ಸರ್ವಾಧಿಕಾರಿ ಮನೋಭಾವದ ಸರಕಾರಗಳಿಗೆ ದೇಶದ ಜನ ಪಾಠ ಕಲಿಸಿದ್ದಾರೆ – ಪ್ರೊ. ರವಿವರ್ಮಕುಮಾರ್