ಕಣ್ಮನ ತೆರೆಸುವ ಹೃದಯಸ್ಪರ್ಶಿ ಯಶೋಗಾಥೆ  “ಮೂರನೇ ಕಿವಿ” ಮನುಷ್ಯ ಸಂಬಂಧಗಳಿಗೆ ಸೇತುವೆಯಾಗುವ ಸಂವಹನ ಕ್ರಿಯೆಗೊಂದು ಸವಾಲೆಸೆದ ಬದುಕು

-ನಾ ದಿವಾಕರ

“ಜೀವನ ಎಂದರೇನು” ಎಂಬ ಪ್ರಶ್ನೆಗೆ ನಾನಾ ಉತ್ತರಗಳು ಲಭ್ಯ. ತತ್ವಶಾಸ್ತ್ರೀಯ ನೆಲೆಯಲ್ಲಿ ಸಿಗುವ ಉತ್ತರಗಳು ಎಷ್ಟೋ ಸಂದರ್ಭಗಳಲ್ಲಿ ಸಾಮಾನ್ಯ ವ್ಯಕ್ತಿಯ ಗ್ರಹಿಕೆಗೇ ನಿಲುಕದ ಹಾಗಿರುತ್ತದೆ. ಅಧ್ಯಾತ್ಮದ ನೆಲೆಯಲ್ಲಿ ಈ ಪ್ರಶ್ನೆಗೆ ನಿತ್ಯ ಬದುಕಿನಿಂದಾಚೆ ಕಾಣಬಹುದಾದ ಉತ್ತರಗಳನ್ನು ಕೊಡಲಾಗುತ್ತದೆ. ಆದರೆ ನಮ್ಮ ಸುತ್ತಲಿನ ಸಮಾಜದ ನಡುವೆ ನಿಂತು ಈ ಪ್ರಶ್ನೆಯನ್ನು ಹಾಕಿಕೊಂಡಾಗ ಸಮಕಾಲೀನ ದಾರ್ಶನಿಕ ಚಿಂತಕರ ಕೆಲವು ಅಭಿಪ್ರಾಯಗಳು ಆಪ್ತ ಎನಿಸುತ್ತವೆ. “ ಮಾನವರು ಸ್ವಾಭಾವಿಕವಾಗಿ ಉತ್ಪಾದಕ ಸಾಮಾಜಿಕ ಜೀವಿಗಳು, ತಮ್ಮ ನೈಸರ್ಗಿಕ ಶಕ್ತಿಯನ್ನು ಸ್ವತಂತ್ರವಾಗಿ ಬಳಸುವ ಮೂಲಕ ಜೀವನದಲ್ಲಿ ಸಂತೃಪ್ತಿ ಕಂಡುಕೊಳ್ಳುತ್ತಾರೆ. ತಮ್ಮದೇ ಆದ ಸೃಷ್ಟಿಗಳ ಮೂಲಕ ಪರಿಪೂರ್ಣತೆಯನ್ನು ಪಡೆದುಕೊಳ್ಳುತ್ತಾರೆ ” ಎಂದು ಕಾರ್ಲ್ಸ್‌ ಮಾರ್ಕ್ಸ್‌ ಹೇಳುತ್ತಾರೆ. ಮೂರನೇ

ಅಂದರೆ ಸಾಮಾಜಿಕ ಜೀವಿಯಾಗಿ ನಿಸರ್ಗ ತನಗೆ ಕೊಡಮಾಡುವ ಶಕ್ತಿಯನ್ನು ಸಂಚಯಿಸಿಕೊಳ್ಳುವುದರ ಮೂಲಕ ಮನುಷ್ಯರು ತಮ್ಮ ನಿತ್ಯ ಬದುಕಿನ ಆಗುಹೋಗುಗಳನ್ನು ನಿರ್ಧರಿಸಿಕೊಳ್ಳುತ್ತಾರೆ. ಈ ಶಕ್ತಿ ಯಾವುದು ಎಂದರೆ ನಮಗೆ ಥಟ್ಟನೆ ಹೊಳೆಯುವುದು ನಮ್ಮ ಅವಯವಗಳು. ಪಂಚೇಂದ್ರಿಯಗಳು ಎಂದು ಕರೆಯಲಾಗುವ ಕಣ್ಣು, ಕಿವಿ, ಮೂಗು, ಬಾಯಿ ಮತ್ತು ಚರ್ಮ. ಇವುಗಳು ಮನುಷ್ಯನ ಬದುಕಿಗೆ ಅತ್ಯವಶ್ಯವಾದ  ದೃಷ್ಟಿ, ಶ್ರವಣ, ವಾಸನೆ, ರುಚಿ ಮತ್ತು ಸ್ಪರ್ಶದ ಅನುಭವವನ್ನು ಒದಗಿಸುತ್ತದೆ. ಇದರಲ್ಲಿ ಯಾವುದೋ ಒಂದು ಅಂಗ ನಿಷ್ಕ್ರಿಯವಾದರೂ ಮನುಷ್ಯರು ಅಸ್ಥಿರನಾಗುತ್ತಾರೆ ಅಥವಾ ವಿಚಲಿತನಾಗುತ್ತಾರೆ. ಈ ವೈಕಲ್ಯಗಳ ಕಾರಣಗಳೇನೇ ಇದ್ದರೂ ಇದನ್ನು ಅನುಭವಿಸುವ ಒಂದು ಜೀವ ತಾನು ಈ ಲೋಕಕ್ಕೆ ಬೇಕಾದ ಒಂದು ಸಂವಹನ ಸಾಧನವನ್ನು ಕಳೆದುಕೊಂಡಿದ್ದೇನೆ ಎಂಬ ಸಂಕಟದೊಂದಿಗೇ ಬಾಳು ಸವೆಸಬೇಕಾಗುತ್ತದೆ. ಮೂರನೇ

ಹಾಗಾಗಿಯೇ ಮಕ್ಕಳು ಹುಟ್ಟುವ ಮುನ್ನ ಯಾವುದೇ ತಂದೆ ತಾಯಿಯರ ಪ್ರಾರ್ಥನೆ “ ಮಗು ಆರೋಗ್ಯಕರವಾಗಿ ಹುಟ್ಟಲಿ ” ಎಂದೇ ಇರುತ್ತದೆ. ಹೆತ್ತ ಮಕ್ಕಳಲ್ಲಿ ಒಂದು ಸಣ್ಣ ಊನ ಕಂಡುಬಂದರೂ ಸಹಿಸಲಾಗದೆ ಕಂಡ ಕಂಡ ದೇವರಿಗೆ ಮೊರೆ ಹೋಗುವ, ಎಲ್ಲ ರೀತಿಯ ವೈದ್ಯಕೀಯ ಸೇವೆಗೂ ಒಡ್ಡಿಕೊಳ್ಳುವ ಪೋಷಕರಿಗೆ ತಮ್ಮ ಮಗು ಮುಂದೆ ಸರ್ವ ಸ್ವತಂತ್ರವಾಗಿ ನಿಂತು ನಡೆಯುವಂತಾದರೆ ಸಾಕು ಎಂಬ ಭಾವನೆ ಸಹಜವಾಗಿ ಇರುತ್ತದೆ. ಆದರೂ ಸುತ್ತಲ ಸಮಾಜವನ್ನು ಗಮನಿಸಿದರೆ ನಮಗೆ ಪೋಲಿಯೋ ಬಾಧಿತ ಮಕ್ಕಳು, ಬುದ್ಧಿಮಾಂದ್ಯ ಮಕ್ಕಳು, ಸ್ಪಾಸ್ಟಿಕ್‌ ಮಕ್ಕಳು, ಕುಂಠಿತ ಬೆಳವಣಿಗೆಯ ಮಕ್ಕಳು, ಮಾನಸಿಕ ಅಸ್ವಸ್ಥತೆಯುಳ್ಳ ಮಕ್ಕಳು ನಮ್ಮ ಸೂಕ್ಷ್ಮ ಸಂವೇದನೆಯನ್ನು ಕದಡುತ್ತಲೇ ಇರುವುದು ಕಾಣುತ್ತದೆ.

ಇದನ್ನೂ ಓದಿ: ನಿರುದ್ಯೋಗಕ್ಕೆ ಶಾಶ್ವತ ಪರಿಹಾರವಿಲ್ಲ, ಎನ್‌ಡಿಎಯೇತರ ರಾಜ್ಯಗಳ ಕಡೆಗೆ ನಿರ್ಲಕ್ಷ್ಯ. ವಾರ್ಷಿಕ ಬಜೆಟ್ ದೇಶದ ನೈಜ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾಗಿದೆ: ಡಿವೈಎಫ್ಐ

ಇದರೊಟ್ಟಿಗೇ ನಮ್ಮ ನಡುವೆ ದೃಷ್ಟಿಮಾಂದ್ಯತೆ, ಶ್ರವಣ ದೋಷ ಅಥವಾ ಮಾತು ಬಾರದ ಮಕ್ಕಳು ಸಹ ಇದ್ದಾರೆ. ಇವರನ್ನು ವಿಕಲಾಂಗರೆಂದೋ, ಅಂಗವೈಕಲ್ಯರೆಂದೋ ಅನುಕಂಪ, ಸಹಾನುಭೂತಿಯಿಂದ ಕಾಣುವ ಸಮಾಜವೂ ನಮ್ಮ ನಡುವೆ ಇದೆ. ಮತ್ತೊಂದೆಡೆ ಇಂತಹ ವೈಕಲ್ಯಗಳನ್ನು ದೇವರಿತ್ತ ವರ ಎಂದು ಭಾವಿಸಿ, ಆಧುನಿಕ ಚಿಕಿತ್ಸೆಗೆ ಅನುಕೂಲಗಳಿಲ್ಲದೆ ಇಡೀ ಜೀವನವನ್ನು ಕಳೆಯುವ ತಾಯಂದಿರೂ ಇದ್ದಾರೆ. ನಮ್ಮ ಸಿನೆಮಾಗಳಿಗೆ ಈ ಅಂಗವೈಕಲ್ಯಗಳೇ ಪ್ರದಾನ ಕಥಾವಸ್ತುವಾಗಿ ಪ್ರೇಕ್ಷಕರಲ್ಲಿ ಮೂಡುವ ಅನುಕಂಪವನ್ನು ತಮ್ಮ ಲಾಭಗಳಿಕೆಯ ಸಾಧನವಾಗಿ ಬಳಸುವುದನ್ನೂ ನೋಡಿದ್ದೇವೆ. ಕೆಲವೇ ಚಲನಚಿತ್ರಗಳು ಮಕ್ಕಳು ಅನುಭವಿಸುವ ಈ ಯಾತನೆ ಮತ್ತು ಪೋಷಕರ ಸಂಕಟಗಳನ್ನು ವಸ್ತುನಿಷ್ಟವಾಗಿ ಬಿಂಬಿಸುತ್ತವೆ. ಮೂರನೇ

1967ರ ಕನ್ನಡ ಸಿನೆಮಾ ʼ ನಾಂದಿ ʼ( ರಾಜ್‌ಕುಮಾರ್‌, ಹರಿಣಿ ), 1972ರ ಹಿಂದಿ ಚಿತ್ರ   ʼ ಕೋಶಿಶ್‌ ʼ ( ಗುಲ್ಜಾರ್‌ ನಿರ್ದೇಶನ ಸಂಜೀವ್‌ ಕುಮಾರ್‌ ಜಯಾಬಾಧುರಿ), 1972ರಲ್ಲೇ ತೆರೆಕಂಡ ಮನೋಜ್‌ ಕುಮಾರ್‌ ನಟನೆಯ ʼ ಶೋರ್‌ ʼ ಈ ಮೂರೂ ಚಿತ್ರಗಳು ಮಾತು ಬಾರದ, ಕಿವಿ ಕೇಳದ ಮಕ್ಕಳ ಮತ್ತು ಅವರ ಪೋಷಕರ ಬದುಕಿನ ಒಂದೊಂದು ಆಯಾಮಗಳನ್ನು ವಿಭಿನ್ನ ನೆಲೆಗಳಲ್ಲಿ ಹಿಡಿದಿಡುವಂತಿವೆ.

ಕಣ್ತೆರೆದು ನೋಡಬೇಕಾದ ಕಥನ

ಇಂತಹ ಒಂದು ಕಥಾ ಹಂದರ ನಮ್ಮ ನಡುವೆಯೇ ಚಾಚಿಕೊಂಡಿರುವುದನ್ನು “ ಮೂರನೇ ಕಿವಿ ” ಎಂಬ ಕೃತಿ ನಮಗೆ ಪರಿಚಯಿಸುತ್ತದೆ. (ನವಕರ್ನಾಟಕ ಪ್ರಕಾಶನ-ಮೂರನೆಯ ಮುದ್ರಣ 2019) ಪ್ರಜಾವಾಣಿ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರ ಈ ಪುಸ್ತಕ ನಮ್ಮ ಸುಪ್ತ ಭಾವನೆಗಳನ್ನಷ್ಟೇ ಅಲ್ಲದೆ, ನಿಷ್ಕ್ರಿಯವಾಗಿರಬಹುದಾದ ಸೂಕ್ಷ್ಮ ಸಂವೇದನೆಗಳನ್ನೂ ಬಡಿದೆಬ್ಬಿಸುವ ರೀತಿಯಲ್ಲಿ ʼ ನಿರಂಜನ ʼ ಎಂಬ ಮಗುವಿನ ಹಾಗೂ ʼ ದೀಪಾ ʼ ಎಂಬ ತಾಯಿಯ ಜೀವನ ಸಂಘರ್ಷವನ್ನು ತೆರೆದಿಡುತ್ತಾ ಹೋಗುತ್ತದೆ. ಪುಸ್ತಕದ ಮುಖಪುಟದಲ್ಲೇ ರವೀಂದ್ರ ಭಟ್‌ ಅವರು ʼ ಇದು ಕಟ್ಟು ಕಥೆಯಲ್ಲ ! ʼ ಎಂಬ ಸಂದೇಶವನ್ನೂ ನೀಡುವುದು ಸೂಕ್ತವಾಗಿಯೇ ಇದೆ. ಏಕೆಂದರೆ ಇಡೀ ಪುಸ್ತಕವನ್ನು ಹಾಗೆಯೇ ಓದಿದರೆ ಇದು ಯಾವುದೋ ಒಂದು ಸಿನೆಮಾಗಾಗಿ ಬರೆದಿರುವ ಕಥಾವಸ್ತು ಎನಿಸಲೂಬಹುದು. ಅಷ್ಟೊಂದು ನೋವು, ಸಂಕಟ, ಬೇಗುದಿ, ತಳಮಳ ಮತ್ತು ಮನುಜ ಸಂಬಂಧದ ಸೂಕ್ಷ್ಮ ಎಳೆಗಳನ್ನು    ʼ ಮೂರನೇ ಕಿವಿ ʼ ಓದುಗರ ಮುಂದಿಡುತ್ತದೆ.

ಈ ಪುಸ್ತಕದ ಹಿರಿಮೆ ಎಂದರೆ ಇದು ಕೇವಲ ಕಿವಿ ಕೇಳದ, ಮಾತು ಬಾರದ ಮಗುವನ್ನು ಸಾಕಿ ಸಲಹುವ ತಾಯಿಯೊಬ್ಬಳ ಯಶೋಗಾಥೆಯನ್ನು ಮಾತ್ರ ದಾಖಲಿಸುವುದಿಲ್ಲ. ಈ ಭಾವನಾತ್ಮಕ ವಿಚಾರಗಳ ನಡುವೆಯೇ ಹುಟ್ಟಿನಿಂದಲೇ ಶ್ರವಣ-ವಾಕ್‌ ದೋಷ ಇರುವ ಮಗುವಿಗೆ ಮಾತು ಕಲಿಸುವ, ಪ್ರಪಂಚ ಜ್ಞಾನವನ್ನು ಕಲಿಸುವ ಹಾಗೂ ಆ ಮಗುವಿಗೆ ಶಬ್ದ ಮತ್ತು ಭಾಷೆ ಎರಡನ್ನೂ ಕಲಿಸಬೇಕಾದ ಅವಶ್ಯಕತೆಗಳನ್ನು ಹಂತಹಂತವಾಗಿ ಬಿಡಿಸಿಡುತ್ತದೆ. ನಿರಂಜನ ಎಂಬ ಮಗುವಿನ ತಾಯಿ ದೀಪಾ ತನ್ನ ಕೌಟುಂಬಿಕ ಜವಾಬ್ದಾರಿಗಳನ್ನು ತೂಗಿಸಿಕೊಂಡೇ, ತನ್ನ ವೈಯುಕ್ತಿಕ ಸಮಸ್ಯೆ-ಸವಾಲುಗಳನ್ನು ನಿವಾರಿಸಿಕೊಳ್ಳುತ್ತಲೇ ವರ್ಷಗಟ್ಟಳೆ ತನ್ನ ಹೆತ್ತ ಕುಡಿಯ ಕೊರತೆಯನ್ನು ತನ್ನದೇ ಎಂಬಂತೆ ಎದುರಿಸುವ ಪರಿ ನಿಜಕ್ಕೂ ಆದರ್ಶಪ್ರಾಯವಾದುದು. ತಾಯಿ ಎನಿಸಿಕೊಂಡ ಒಂದು ಶಕ್ತಿ ಹೇಗೆ ತನ್ನ ಹೆತ್ತೊಡಲಿನಲ್ಲಿರುವ ಕಂದನಿಗೆ ಜೀವನವಿಡೀ ಸಾಂತ್ವನ ನೀಡುತ್ತಾ, ಆ ಮಗು ದೊಡ್ಡದಾಗುವ ತನಕ, ತದನಂತರವೂ , ಅದರ ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಮೆಟ್ಟಿನಿಲ್ಲುವ ಆತ್ಮಸ್ಥೈರ್ಯವವನ್ನು ಕಲ್ಪಿಸಲು ಸಾಧ್ಯ ಎನ್ನುವುದಕ್ಕೆ ʼ ಮೂರನೇ ಕಿವಿ ʼಯ ಕಥಾನಾಯಕಿ ದೀಪಾ ಪ್ರಾತ್ಯಕ್ಷಿಕೆಯನ್ನು ಒದಗಿಸುತ್ತಾರೆ.

ಮಾತು ಕಲಿತ ಒಂದು ಮಗು ‘ಅಪ್ಪ –ಅಮ್ಮ’ ಎಂದು ಕರೆಯಲು ಶ್ರಮಪಡಬೇಕಾದ ಒಂದು ಸನ್ನಿವೇಶವೇ ಎದೆ ಕಲಕುವಂತಹುದು. ಕಿವಿ ಕೇಳದ ತನ್ನ ಕಂದನಿಗೆ ಅಪ್ಪನನ್ನು ತೋರಿಸಿ ಅಪ್ಪ ಎಂದು ಕರೆಯುವಂತೆ ಮಾಡಲು ದೀಪಾ ಅವರು ಪಟ್ಟಿರುವ ಕಡುಕಷ್ಟವನ್ನು ನೋಡಿದರೆ ಎಂಥವರ ಹೃದಯವಾದರೂ ತಲ್ಲಣಿಸದಿರದು. ಕಿವಿ ಕೇಳದ ಮಗುವಿಗೆ ಕೈ ಸನ್ನೆಯ ಮೂಲಕ ಅಥವಾ ತುಟಿ ಚಲನೆಯ ಮೂಲಕ ಎಲ್ಲವನ್ನೂ ಅರ್ಥಮಾಡಿಸಬಹುದು ಎಂಬ ಸಾಮಾನ್ಯ ಗ್ರಹಿಕೆ ಎಷ್ಟು ಬಾಲಿಶವಾದುದು ಎನ್ನುವುದು ದೀಪಾ ಅವರ ಯಶೋಗಾಥೆಯಿಂದ ತಿಳಿದುಬರುವ ಸತ್ಯ. ಆ ಮಗುವಿಗೆ ಪ್ರತಿಯೊಂದು ಅಕ್ಷರ ಕಲಿಸುವಾಗಲೂ ಈ ತಾಯಿ ಬಳಸಿರುವ ಕೌಶಲ ಮತ್ತು ಅವರಲ್ಲಿದ್ದ ಸಹನಶೀಲ ಗುಣಗಳು ಹೃದಯಸ್ಪರ್ಶಿಯಾದುದು. ಈ ಮೆಚ್ಚುಗೆಯ ನುಡಿಗಳು ಕ್ಲೀಷೆ ಎನಿಸಬಹುದಾದರೂ, ದೀಪಾ ಅವರು ಹೆತ್ತ ಕಂದನಿಗಾಗಿ ತಮ್ಮ ವೈಯುಕ್ತಿಕ ಬೇಕು ಬೇಡಗಳನ್ನು, ಸಾಂಸಾರಿಕ ಆಕಾಂಕ್ಷೆಗಳನ್ನು ಬದಿಗಿಟ್ಟು ಶ್ರಮಿಸುವುದು ಊಹಿಸುವಷ್ಟು ಸುಲಭವಂತೂ ಅಲ್ಲ.

ಯಾಂತ್ರಿಕ ಬದುಕಿನ ಸವಾಲುಗಳು

ತನ್ನನ್ನು ಸ್ವತಃ ಮಗುವಿಗೆ ಮಾತು  ಕಲಿಸುವ ಯಂತ್ರ ಮಾತ್ರ ಎಂದೇ ಭಾವಿಸಿಕೊಂಡು ಮಗು ನಿರಂಜನನ ಬೆನ್ನಿಗೆ ನಿಂತು ಅವನಿಗೆ ಲೌಕಿಕ ಪ್ರಪಂಚವನ್ನು ಅರ್ಥಮಾಡಿಸಿರುವ ದೀಪಾ “ ಗಂಡನಿಗೆ ಹೆಂಡತಿಯಲ್ಲ, ತಾಯಿಗೆ ಮಗಳಲ್ಲ, ಇನ್ನೊಬ್ಬ ಮಗನಿಗೆ ತಾಯಿಯಲ್ಲ, ಕೇವಲ ಕಿವುಡು ಮಗನಿಗೆ ತಾಯಿ ಮಾತ್ರ ” ಆಗಿದ್ದಳು ಎಂಬ ರವೀಂದ್ರ ಭಟ್ಟರ ಮಾತುಗಳು (ಪುಟ 70) ಎದೆನಾಟುವಂತಹುದು. “ ಹುಟ್ಟು ಕಿವುಡಾದವರಿಗೆ ಪ್ರಪಂಚದಲ್ಲಿ ಶಬ್ದ ಇದೆ ಎನ್ನುವುದನ್ನು ತಿಳಿಸಿಕೊಡುವುದಕ್ಕೇ ಕನಿಷ್ಠ ಆರು ತಿಂಗಳು ಬೇಕು ” (ಪುಟ 23) ಎಂಬ ಸಾಲುಗಳು, ನಿರಂಜನ ಎದುರಿಸಿದ ಆಂತರ್ಯದ ನೋವು ಮತ್ತು ತಾಯಿ ದೀಪಾ ಅನುಭವಿಸಿದ ಸಂಕಟದ ಹಾದಿಯನ್ನು ಓದುಗರ ಮುಂದೆ ತೆರೆದಿಡುತ್ತದೆ. ಹಾಗೆಯೇ ಮತ್ತೊಂದು ಬದಿಯಲ್ಲಿ ಮಗುವಿಗೆ ಮಾತು ಕಲಿಸುವುದೆಂದರೆ ಕೇವಲ ಅಕ್ಷರ ಕಲಿಕೆ ಅಥವಾ ಅಕ್ಷರ ಜೋಡಣೆಯ ಪದಕಲಿಕೆ ಅಲ್ಲ ಎನ್ನುವ ವಾಸ್ತವವನ್ನೂ ʼ ಮೂರನೇ ಕಿವಿ ʼ ತೆರೆದಿಡುತ್ತದೆ.

ತಂದೆ-ತಾಯಿ, ಸೋದರ-ಸೋದರಿ ಮತ್ತು ಕುಟುಂಬದ ಸದಸ್ಯರು ತಮ್ಮ ಮನೆಯಲ್ಲಾಡುವ ಆಡುಭಾಷೆಯ ಮೂಲಕವೇ ಇಂತಹ ಮಕ್ಕಳಿಗೆ ಮಾತು ಕಲಿಸಬೇಕಾಗುತ್ತದೆ. ನಿತ್ಯ ಬದುಕಿನಲ್ಲಿ ನಾವಾಡುವ ಮಾತುಗಳು, ಬೈಗುಳ ಮತ್ತು ಸಾಮಾನ್ಯವಾಗಿ ನಿಷಿದ್ಧ ಎನ್ನಲಾಗುವ ಕೆಲವು ನುಡಿಗಳ ಪರಿಚಯವನ್ನೂ ಮಗುವಿಗೆ ಮಾಡಿಸಬೇಕಾದ ಸನ್ನಿವೇಶಗಳೇ ಜಟಿಲವಾದದ್ದು. ಆದರೆ ದೀಪಾ-ರವೀಂದ್ರ ಭಟ್‌ ದಂಪತಿಗಳಿಗೆ ಇದು ಬದುಕಿನ ಅನಿವಾರ್ಯವಾಗಿತ್ತು.

ಸಂಬಂಧಗಳು ಎಷ್ಟೇ ಗಾಢವಾಗಿದ್ದರೂ ತನಗೆ ಸಂಬಂಧಿಸಿದವರನ್ನು ಹೇಗೆ ಸಂಬೋಧಿಸಬೇಕು ಎಂಬ ಮಕ್ಕಳ ಜಿಜ್ಞಾಸೆಗೆ ಬಹಳ ಬೇಗನೆ ನಾವಾಡುವ ಮಾತುಗಳಲ್ಲೇ ಉತ್ತರ ಸಿಕ್ಕಿಬಿಡುತ್ತದೆ. ಆದರೆ ನಿರಂಜನನಂತಹ ಮಕ್ಕಳಿಗೆ ಇದೂ ಸಹ ಒಂದು ಸವಾಲು. ಈ ಸವಾಲನ್ನು ಪರಿಹರಿಸಲು ತಾಯಿ ದೀಪಾ ಪಟ್ಟ ಕಷ್ಟವನ್ನು ಗಮನಿಸಿದರೆ, ಸಹನಾ ಧರಿತ್ರಿ ಎಂಬ ಪದಕ್ಕೆ ಸಂವಾದಿಯಾಗಿ ಇವರ ಹೆಸರೇ ನೆನಪಾಗುತ್ತದೆ. ಇವರ ಸವಾಲಿನ ಮೆಟ್ಟಿಲುಗಳಿಗೆ ಎಲ್ಲಿಯೂ ಚ್ಯುತಿ ಬಾರದಂತೆ, ಧಕ್ಕೆ ಉಂಟಾಗದಂತೆ ಸಹಭಾಗಿಯಾಗಿ ಹೆಜ್ಜೆ ಹಾಕಿದ ತಂದೆ ರವೀಂದ್ರ ಭಟ್ಟರ ಧಾರಣಾ ಶಕ್ತಿಯನ್ನೂ ಮೆಚ್ಚಲೇಬೇಕು.

ಮಗು ಬಳಸುವ ವಸ್ತುಗಳು, ತಿನ್ನುವ ತಿನಿಸುಗಳು, ನೋಡುವ ದೃಶ್ಯಗಳು, ಕೇಳುವ ಸಂಗೀತ ಎಲ್ಲವನ್ನೂ ಒಂದೊಂದಾಗಿ, ಹಂತಹಂತವಾಗಿ ಪರಿಚಯಿಸುತ್ತಾ, ಶಬ್ದ ಮತ್ತು ಭಾಷೆಯನ್ನು ಕಲಿಸುತ್ತಾ ಮಗನನ್ನು ಬೆಳೆಸುವ ಪರಿಶ್ರಮ ಪದಗಳಿಗೆ ನಿಲುಕುವಂತಹುದಲ್ಲ. ‘ಮೂರನೇ ಕಿವಿ’ ಓದುತ್ತಾ ಹೋದಂತೆ ನಾವು ಯಾವುದೋ ಮೂರನೇ ಲೋಕದಲ್ಲಿ ಕಳೆದುಹೋಗುತ್ತೇವೇನೋ ಎನಿಸಿದರೆ ಅಚ್ಚರಿಯೇನಿಲ್ಲ. ಏಕೆಂದರೆ ದೀಪಾ ಎಂಬ ತಾಯಿಜೀವ ತನ್ನ ಮಗುವನ್ನು ‘ಎಲ್ಲರಂತೆ’ ಮಾಡಲು ಹೆಜ್ಜೆ ಹೆಜ್ಜೆಗೂ ಪಡುವ ಕಡುಕಷ್ಟಗಳು ಸಾಮಾನ್ಯ ಬದುಕಿನ ಗ್ರಹಿಕೆಗೆ ನಿಲುಕುವಂತಹುದಲ್ಲ.

ಸಿಟ್ಟು, ಸೆಡವು, ಆಕ್ರೋಶ, ಹರುಷ ಎಲ್ಲವೂ ಮನುಷ್ಯ ಸಹಜವಾಗಿ ವ್ಯಕ್ತಿಗತ ನೆಲೆಯಲ್ಲೇ ಅರ್ಥವಾಗುವಂತಹ ವರ್ತನೆಗಳು. ಅದರೆ ಕಿವುಡು ಮಕ್ಕಳಿಗೆ ಅದೂ ಏನು-ಎತ್ತ-ಯಾಕೆ ಎನ್ನುವುದನ್ನು ವಿವರಿಸಿ ಕಲಿಸಬೇಕು. ಮಕ್ಕಳಲ್ಲಿ ಉಂಟಾಗುವ ದುಃಖ, ಬೇಸರ ಇತ್ಯಾದಿ ಭಾವನೆಗಳನ್ನು ಅವರೇ ವ್ಯಕ್ತಪಡಿಸಲು ಪದಚ್ಛೇದ ಮಾಡಿ ಅವರಿಗೆ ಕಲಿಸಬೇಕೆನ್ನುವುದೇ ಒಂದು ವಿಸ್ಮಯ ಎನಿಸುತ್ತದೆ. ಆದರೆ ಇದು ವಾಸ್ತವ. ದೀಪಾ ಅವರು ಇಂತಹ ಹಲವು ಪ್ರಸಂಗಗಳನ್ನು ಎದುರಿಸಿ ಗೆಲ್ಲುತ್ತಾರೆ. (8ನೇ ಅಧ್ಯಾಯ ಭಾವನೆಗಳ ಬೆನ್ನೇರಿ ಗಮನಿಸಿ).

ಅಂತಃಕರಣ ಮತ್ತು ಬೇಗುದಿಯ ಸಮತೋಲನ

ಬಹುಮುಖ್ಯವಾಗಿ ಒಬ್ಬ ತಾಯಿ ತನ್ನ ಅಂತಃಕರಣವನ್ನು ಸಮತೋಲನ ಮಾಡಿಕೊಂಡು, ತನ್ನೊಳಗೆ ಉಂಟಾಗುವ ಸಂಕಟ-ತಳಮಳ ಮತ್ತು ಆತಂಕಗಳನ್ನು ಸಹಿಸಿಕೊಂಡು, ತನ್ನ ಮಗುವಿಗೆ ಪ್ರತಿಯೊಂದು ಹೆಜ್ಜೆಯಲ್ಲೂ ಪ್ರತಿಯೊಂದು ಅಭಿವ್ಯಕ್ತಿಯನ್ನೂ ಕಲಿಸುತ್ತಾ ಹೋಗುವುದೇ ಒಂದು ವಿಸ್ಮಯ ಎನಿಸುವುದಿಲ್ಲವೇ ? ಇಂತಹ ತಾಯಂದಿರು ನಮ್ಮ ನಡುವೆ ಎಷ್ಟಿದ್ದಾರೋ ? ವೈದ್ಯಕೀಯ-ವೈಜ್ಞಾನಿಕ ಅವಿಷ್ಕಾರಗಳ ಅದ್ಭುತ ಪ್ರಯೋಗ ಮತ್ತು ಬಳಕೆಯ ಹೊರತಾಗಿಯೂ ನಿರಂಜನರಂತಹ ಸಾವಿರಾರು ಮಕ್ಕಳಿಗೆ ಬೇಕಿರುವುದು ದೀಪಾ ಅವರಂತಹ ʼಮಹಾತಾಯಿʼ. ರವೀಂದ್ರ ಭಟ್ಟ ಅವರಂತಹ ಸಹನಶೀಲ ತಂದೆಯೂ. ಹಿತವಲಯದ ಎಲ್ಲ ಸೌಕರ್ಯಗಳನ್ನೂ ಕೊಟ್ಟು ವಯಸ್ಸಿಗೆ ಬಂದ ಮಕ್ಕಳನ್ನು ಸಮಾಜದೊಳಗೆ ಬೆರೆಯಲು ಬಿಡುವ ಕೋಟ್ಯಂತರ ಪೋಷಕರ ನಡುವೆ, ಇಂತಹ ಎಲ್ಲ ಸೌಕರ್ಯಗಳನ್ನೂ ತೊರೆದು ತನ್ನ ಹಾಗೂ ತನ್ನ ಮಗುವಿನ ಬದುಕು ಕಟ್ಟಲೋಸುಗ ಜೀವನವಿಡೀ ಶ್ರಮಿಸುವ ನಿಸ್ವಾರ್ಥಿ, ತ್ಯಾಗಮಯಿ ತಾಯಿ ನಿಜಕ್ಕೂ ಅಪರೂಪ ಎಂದೇ ಹೇಳಬಹುದು. ದೀಪಾ ಅಂಥವರಲ್ಲೊಬ್ಬರು.

ಕೌಟುಂಬಿಕ ಮೌಲ್ಯಗಳ ನೆಲೆಯಲ್ಲಿ, ವೈಜ್ಞಾನಿಕ ಅರಿವಿನ ನೆಲೆಯಲ್ಲಿ, ಮಾನವ ಸಂಬಂಧಗಳ ನೆಲೆಯಲ್ಲಿ, ಕರುಳು ಬಳ್ಳಿಯ ನಂಟಿನ ನೆಲೆಯಲ್ಲಿ ಹಾಗೂ ಜೀವನವನ್ನು ಬಂದಂತೆಯೇ ಸ್ವೀಕರಿಸುವ ಆಧ್ಯಾತ್ಮಿಕ ದೃಷ್ಟಿಕೋನದ ನೆಲೆಯಲ್ಲಿ ʼ ಮೂರನೇ ಕಿವಿ ʼ ಒಂದು ಬೆರಗು ಸೃಷ್ಟಿಸುವ ಕೃತಿ. “ಮೂರನೇ ಕಿವಿ ” ಪುಸ್ತಕ ಓದಿ ಮುಗಿಸಿದಾಗ ಧ್ವನಿ ಮತ್ತು ಬೆಳಕಿನ ನಿಜವಾದ ಅರ್ಥ ನನಗಾಯಿತು “ ಎಂಬ  ಲೇಖಕಿ ವೈದೇಹಿ ಅವರ ಮಾತುಗಳು (ಪುಟ 152) ಇಡೀ ಸಮಾಜದ ಧ್ವನಿಯನ್ನು ಅಭಿವ್ಯಕ್ತಿಸುತ್ತದೆ. ಹಾಗೆಯೇ ನಿಸ್ಸಂಕೋಚವಾಗಿ ಹೇಳುವುದಾದರೆ – “ನನ್ನ ಮಟ್ಟಿಗೆ ಶಬ್ದ ಮತ್ತು ಭಾಷೆ ಇವರೆಡರ ನಡುವಿನ ಸೂಕ್ಷ್ಮ ಸಂಬಂಧ ಮತ್ತು ಅಂತರಗಳ ಬಗ್ಗೆ ಜ್ಞಾನೋದಯವಾಗಿದ್ದೂ ಸತ್ಯ ”. ರವೀಂದ್ರ ಭಟ್ಟ ಮತ್ತು ದೀಪಾ ಅವರ ದಾಂಪತ್ಯ ಜೀವನದಲ್ಲಿ ಮಾಡಿದ ತ್ಯಾಗದ ಫಲ ಇಂದು ಬಿ.ಟೆಕ್.‌ ಪದವೀಧರನಾಗಿ ಸಮಾಜದ ನಡುವೆ ಎದ್ದು ನಿಂತಿರುವ ನಿರಂಜನ ಎಂಬ ಕೂಸು. ನಿರಂಜನ ನಮ್ಮ ಸಾಮಾಜಿಕ ಅಸೂಕ್ಷ್ಮತೆಗಳನ್ನು ಬಡಿದೆಬ್ಬಿಸುವ ಒಂದು ವ್ಯಕ್ತಿತ್ವವಾಗಿ ಕಂಡರೆ ಅವನ ತಾಯಿ ದೀಪಾ ನಮ್ಮ ಸಂವೇದನೆಗಳನ್ನು ಉದ್ಧೀಪನಗೊಳಿಸುವ ʼ ಮಹಾತಾಯಿ ʼ ಯಾಗಿ ಕಾಣುತ್ತಾರೆ.

‘ಮೂರನೇ ಕಿವಿ’ ಪುಸ್ತಕದ ಸಾರ್ಥಕತೆ ಇದೇ ಎನ್ನಬಹುದು. ಇದನ್ನು ತಾಳ್ಮೆಯಿಂದ ದಾಖಲಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿರುವ ರವೀಂದ್ರ ಭಟ್ಟ ಅಭಿನಂದನಾರ್ಹರು. ದೀಪಾ ಎಂಬ ತಾಯಿ ನಿಜಕ್ಕೂ ವಂದನಾರ್ಹರು.

ಇದನ್ನೂ ನೋಡಿ: ಮಧ್ಯಪ್ರದೇಶ: ಪ್ರತಿಭಟನೆ ನಡೆಸುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಮಣ್ಣು ಸುರಿದು Janashakthi Media

Donate Janashakthi Media

Leave a Reply

Your email address will not be published. Required fields are marked *